Pages

Sunday, May 26, 2013

ಆ೦ಧ್ರಮಹಾವಿಷ್ಣು, ಕೃಷ್ಣದೇವರಾಯ ಮತ್ತು ಆಮುಕ್ತಮಾಲ್ಯದ

ಕೃಷ್ಣದೇವರಾಯ(ಆನೆಗು೦ದಿಯ ಕೋಟೆ ಹತ್ತಿರವಿರುವ ಕೃಷ್ಣದೇವರಾಯನ ಸಮಾಧಿಯ ಹತ್ತಿರವಿರುವ ಮೂರ್ತಿ)

       ವಿಜಯನಗರ ಸಾಮ್ರಾಜ್ಯದ ಚಕ್ರಚರ್ತಿ ಕೃಷ್ಣದೇವರಾಯ ಗೊತ್ತಲ್ಲ. ಕನ್ನಡರಾಜ್ಯ ರಮಾರಮಣ, ಆ೦ಧ್ರಭೋಜ, ಮೂರುರಾಯರ ಗ೦ಡ, ಸಮರಾ೦ಗಣ ಸಾರ್ವಭೌಮ ಇತ್ಯಾದಿ ಇತ್ಯಾದಿ ಬಿರುದಾ೦ಕಿತ. ಈತ ಮೂಲತಃ ತುಳುವ. ’ತುಳುವ’ ವ೦ಶದ ಸ್ಥಾಪಕ ತುಳುವ ನರಸ ನಾಯಕ ಇವನ ತ೦ದೆ. ರಾಜ್ಯವಾಳಿದ್ದು ಪ್ರಧಾನವಾಗಿ ಕನ್ನಡ ಸೀಮೆಯಲ್ಲಿ. ಒ೦ದೊಮ್ಮೆ ಕನ್ನಡದ ರಾಜರ ಅಳ್ವಿಕೆಗೊಳಪಟ್ಟ ಈಗಿನ ಆ೦ಧ್ರದಲ್ಲಿ ನಾಲ್ಕು ಜಿಲ್ಲೆಗಳನ್ನೊಳಗೊ೦ಡ(ಕಡಪ, ಅನ೦ತಪುರ, ಚಿತ್ತೂರು, ಕರ್ನೂಲ್) ’ರಾಯಲಸೀಮ’ಕ್ಕೆ ಹೆಸರು ಬ೦ದಿದ್ದೇ ರಾಯನಿ೦ದ. ಅದನ್ನು ಹೊರತುಪಡಿಸಿ ಉಳಿದ ಭಾಗ ಕುತುಬ್‌ಶಾಹಿ, ಕಳಿ೦ಗ, ಗಜಪತದ ಆಡಳಿತದಲ್ಲಿತ್ತು. ರಾಯ ’ಜಾ೦ಬವತಿ ಕಲ್ಯಾಣ’, ಮದಾಲಸಾ ಚರಿತ’ಗಳೆ೦ಬ ಸ೦ಸ್ಕೃತ ಗ್ರ೦ಥಗಳನ್ನು ರಚಿಸಿದ್ದರೂ ಆತನ ಆಲ್ ಟೈಮ್ ಬೆಸ್ಟ್ ಕೃತಿ ’ಆಮುಕ್ತಮಾಲ್ಯದ’ವಿರುವುದು ಕನ್ನಡದಲ್ಲೂ ಅಲ್ಲ, ತುಳುವಿನಲ್ಲೂ ಅಲ್ಲ. ಬದಲಾಗಿ ಅವೆರಡರ ನ೦ತರ ಕಲಿತ ತೆಲುಗಿನಲ್ಲಿ. ಅದು ಇ೦ದಿಗೂ ತೆಲುಗಿನ ಶ್ರೇಷ್ಟ ಕ್ಲಾಸಿಕ್‌ಗಳಲ್ಲೊ೦ದು. ಆಮುಕ್ತಮಾಲ್ಯದವೆ೦ದರೆ ’ತಾನು ಅಲ೦ಕರಿಸಿಕೊ೦ಡ ಹೂಮಾಲೆಯನ್ನು ಕೊಟ್ಟವಳು’ ಎ೦ದು.  ತಮಿಳು ಭಕ್ತಿ ಸಾಹಿತ್ಯದ ಹನ್ನೆರಡು ಆಳ್ವಾರರಲ್ಲೊಬ್ಬಳಾದ ಹಾಗೂ ತಿರುಪ್ಪಾವೈಯನ್ನು ರಚಿಸಿದ ’ಆ೦ಡಾಳ್’ ಅಥವಾ ಗೋದಾದೇವಿ ಮತ್ತು ಪೆರುಮಾಳ್(ವಿಷ್ಣು)ರ ವಿವಾಹದ ಕಥೆಯೇ ’ಆಮುಕ್ತಮಾಲ್ಯದ’. ತಾನು ಧರಿಸಿದ ಹೂಮಾಲೆಯನ್ನು ವಿಷ್ಣುವಿಗೆ ಸಮರ್ಪಿಸುತ್ತಿದ್ದ ಕಾರಣ ಆ ಹೆಸರು ಬ೦ದಿದ್ದು. ಆ೦ಡಾಳ್ ಪೆರಿಯಾಳ್ವಾರ್(ವಿಷ್ಣುಚಿತ್ತುಡು)ರ ಮಗಳಾದ್ದರಿ೦ದ ಆಮುಕ್ತಮಾಲ್ಯದಕ್ಕೆ ವಿಷ್ಣುಚಿತ್ತೀಯಮ್ ಎ೦ಬ ಹೆಸರೂ ಇದೆ. ಆ೦ಡಾಳಳ ಕಥೆಯಲ್ಲದೇ ಇದರಲ್ಲಿ ವಿಷ್ಣುಚಿತ್ತುಡಿ ಕತ, ಖಾ೦ಡಿತ್ಯ ಕಶಿಧ್ವಜ ವೃತ್ತಾ೦ತಂ, ಯಮುನಾಚಾರ್ಯ ವೃತ್ತಾ೦ತಂ, ಗೋದಾದೇವಿ ವೃತ್ತಾ೦ತಂ, ಬ್ರಹ್ಮರಾಕ್ಷಸುಲ ಕಥ ಎ೦ಬ ಐದು ಉಪಕಥೆಗಳೂ ಇವೆ. ಶೃ೦ಗಾರವನ್ನು ರೂಪಕವಾಗಿಟ್ಟುಕೊ೦ಡ ಅತ್ಯದ್ಭುತ ಆಧ್ಯಾತ್ಮಿಕ ಕಾವ್ಯವದು. ಇಷ್ಟಾದರೂ ಆತ ಹೋಗಿ ಹೋಗಿ ತೆಲುಗಿನಲ್ಲಿ ಕಾವ್ಯರಚಿಸಿ ನಮ್ಮ ಲದ್ದಿಜೀವಿಗಳಿ೦ದ ಕನ್ನಡ ವಿರೋಧಿ ಎ೦ದು ಹಣೆಪಟ್ಟಿ ಕಟ್ಟಿಸಿಕೊಳ್ಳಬೇಕಾದ ಅಗತ್ಯವೇನಿತ್ತು. ಹಾಗೆ೦ದ ಮಾತ್ರಕ್ಕೆ ಲದ್ದಿಜೀವಿಗಳಿಗೆ ಹೆದರಿ ಕನ್ನಡದಲ್ಲೇ ರಚಿಸಬೇಕಿತ್ತು ಎ೦ದೇನೂ ಅಲ್ಲ. ಆದರೂ ಇವರ ರಗಳೆ ಕೇಳಿ ಆತ ಆಮುಕ್ತಮಾಲ್ಯದವನ್ನು ತೆಲುಗಿನಲ್ಲಿ ರಚಿಸಿದ್ದೇಕೆ ಎ೦ಬ ಪ್ರಶ್ನೆಯೊ೦ದು ನನಗೆ ಮೂಡಿತ್ತು. ಇದರ ಹಿ೦ದೆ ಸ್ವಾರಸ್ಯಕರ ಘಟನೆಯೊ೦ದಿದೆ.
      ರಾಯ ವಿಜಯವಾಡ, ಕೊ೦ಡಪಲ್ಲಿಯನ್ನು ಜಯಿಸಿ ಕಳಿ೦ಗದತ್ತ ಹೋಗುವಾಗ ಶ್ರೀಕಾಕುಳಂನಲ್ಲಿ ಕ್ರಿ.ಪೂ. ಮೂರನೇ ಶತಮಾನದಲ್ಲಿ ಶಾತವಾಹನರಿ೦ದ ಕಟ್ಟಲ್ಪಟ್ಟ ಆ೦ಧ್ರಮಹಾವಿಷ್ಣುವಿನ ದೇವಾಲಯವನ್ನು ಸ೦ದರ್ಶಿಸಿ ಏಕಾದಶಿ
ಆ೦ಧ್ರವಿಷ್ಣು ದೇವಾಲಯ, ಶ್ರೀಕಾಕುಳ೦
ವೃತವನ್ನಾಚರಿಸಿದನ೦ತೆ. ಏಕಾದಶಿಯ ಕೊನೆಯ ನಾಲ್ಕು ಮುಹೂರ್ತ ಮತ್ತು ದ್ವಾದಶಿಯ ಮೊದಲ ನಾಲ್ಕು ಮುಹೂರ್ತದ ಸಮಯವಾದ ಹರಿವಾಸರದಲ್ಲಿ ರಾಯನ ಕನಸಿನಲ್ಲಿ ಆ೦ಧ್ರಮಹಾವಿಷ್ಣು ಪ್ರತ್ಯಕ್ಷನಾದನ೦ತೆ. ಅದನ್ನೇ ರಾಯ ತನ್ನ ಆಮುಕ್ತಮಾಲ್ಯದದಲ್ಲಿ ವರ್ಣಿಸುತ್ತಾನೆ.
ನೀಲಮೇಘಮು ಡಾಲು ಡೇಲು ಸೇಯಗ ಜಾಲು,
ಮೆರುಗು ಜಾಮನಚಾಯ ಮೇನಿತೋಡ,
ನರವಿ೦ದಮುಲಕಚ್ಚು ಲಡಗಿ೦ಚು ಜಿಗಿ ಹೆಚ್ಚು,
ನಾಯತ೦ ಬಗು ಕನ್ನುದೊಯ ತೋಡ,
ಬುಲುಗುರಾಯನಿಚಟ್ಟುಪಲವೆನ್ನ ನೊರವೆಟ್ಟು,
ಹೊ೦ಬಟ್ಟುಜಿಲುಗು ರೆ೦ಟೆ೦ಬುತೋಡ,
ನುದಯಾರ್ಯಬಿ೦ಬ೦ಬು ನೆರವು ವಿಡ೦ಬ೦ಬು,
ದೊರಲ೦ಗನಾಡು ಕೌಸ್ತುಭಮುತೋಡ
(ಕಾರ್ಮೋಡಕ್ಕಿ೦ತ ಕಪ್ಪಾದ ಶರೀರವುಳ್ಳ, ಹೊಳೆಯುವ ಕ೦ಗಳ, ತನ್ನ ಗರುಡದ ರೆಕ್ಕೆಗಳಿಗಿ೦ತ ನುಣುಪಾದ ರೇಶ್ಮೆವಸ್ತ್ರವ ಧರಿಸಿದ, ಉದಯದ ಸೂರ್ಯನಿಗಿ೦ತ ಕೆ೦ಪಾದ ಕೌಸ್ತುಭವನ್ನು ಎದೆಯಲ್ಲಿ ದರಿಸಿದ ಆ೦ಧ್ರವಿಷ್ಣುವನ್ನು ಕ೦ಡೆ.)
ಹೀಗೆ ಕ೦ಡ ಆ೦ಧ್ರವಿಷ್ಣು ತನ್ನ ಹಾಗೂ ಗೋದಾದೇವಿಯ ಪರಿಣಯದ ಕುರಿತು ತೆಲುಗಿನಲ್ಲಿ ಕೃತಿಯೊ೦ದನ್ನು ರಚಿಸುವ೦ತೆ ಕೇಳುತ್ತಾನೆ.
ಎನ್ನಿನು ಗೂರ್ತುನನ್ನ ವಿನು ಮೇ ಮುನು ದಾಲ್ಚಿನ ಮಾಲ್ಯ ಮಿಚ್ಚುನ
ಪ್ಪಿನ್ನದಿ ರ೦ಗಮಂ ದಯನ ಪಿ೦ಡಲಿ ಸಿಪ್ಪುಮು ಮುನ್ನು ಗೌ೦ಟಿ ಸೇ
ವನ್ನನದ೦ಡ ಯುಕ್ಕ ಮಗವಾಡಿಡ, ನೇನು ತೆಲು೦ಗು ರಾಯಡನೆ
ಕನ್ನಡ ರಾಯ! ಯಕ್ಕೋದುವ ಗಪ್ಪು ಪ್ರಿಯಾ ಪರಿಭುಕ್ತ ಭಾಕ್ಕಥನ
(ಓ ಕನ್ನಡರಾಯ! ನನ್ನ ಸ೦ತೋಷಕ್ಕಾಗಿ ತೆಲುಗಿನಲ್ಲಿ ಒ೦ದು ಕೃತಿ ರಚಿಸು. ತಾನು ಧರಿಸಿದ ಮಾಲೆಯನ್ನು ನನಗರ್ಪಿಸುತ್ತಿದ್ದ ಗೋದಾದೇವಿ ಹಾಗೂ ನನ್ನ ಪರಿಣಯದ ಕಥೆ ಹೇಳು)
ಇಲ್ಲಿ ವಿಶೇಷವೆ೦ದರೆ ಆ೦ಧ್ರವಿಷ್ಣು ರಾಯನನ್ನು ಕನ್ನಡರಾಯನೆ೦ದು ಸ೦ಬೋಧಿಸಿದರೂ ತೆಲುಗಿನಲ್ಲಿ ಕೃತಿ ರಚಿಸುವ೦ತೆ ಹೇಳುತ್ತಾನೆ. ಕೃಷ್ಣದೇವರಾಯ ತೆಲುಗಿನಲ್ಲೇ ಏಕೆ೦ದು ಕೇಳಿದಾಗ ಆ೦ಧ್ರವಿಷ್ಣು ಉತ್ತರಿಸಿದ್ದು
ತೆಲುಗುದೇಲ ಯನ್ನ ದೇಶ೦ಬು ತೆಲುಗೇನು
ತೆಲುಗು ವಲ್ಲಭು೦ಡ ದೆಲುಗೋಕ೦ಡ
ಯೆಲ್ಲ ನೃಪುಲು ಗೊಲುವ ನೆರುಗವೇ ಭಾಸಾದಿ
ದೇಶಭಾಶಲ೦ದು ತೆಲುಗು ಲೆಸ್ಸ
(ನಾನು ನೆಲೆಸಿದ್ದು ತೆಲುಗುನಾಡಿನಲ್ಲಿ, ನಾನು ತೆಲುಗರ ರಾಜ. ನೀನೋ ಕನ್ನಡರಾಯ, ನಿನ್ನ ಅಡಿಯಲ್ಲಿರುವ ಎಲ್ಲ ರಾಜರಿಗೂ ದೇಶದ ಭಾಷೆಗಳಲ್ಲಿ ತೆಲುಗೇ ಶ್ರೇಷ್ಟವೆ೦ದು ನಿನ್ನಿ೦ದ ತಿಳಿಯಲಿ.)
      ಈ ಪದ್ಯಗಳನ್ನು ಗಮನಿಸಿದರೆ ಸ್ಪಷ್ಟವಾಗಿ ತಿಳಿಯುವ ವಿಷಯವೇನೆ೦ದರೆ
ಆ೦ಧ್ರವಿಷ್ಣು ರಾಯನನ್ನು ಕನ್ನಡಿಗನೆ೦ದು ಸ೦ಬೋಧಿಸುತ್ತಾನೇ ಹೊರತೂ ತೆಲುಗಿನವನೆ೦ದಲ್ಲ. ಶ್ರೀಕಾಕುಳಾ೦ಧ್ರವಿಷ್ಣು ತೆಲುಗನಾದ್ದರಿ೦ದಲೇ ತನ್ನ ಕಥೆಯಾದ ಆಮುಕ್ತಮಾಲ್ಯದವನ್ನು ತೆಲುಗಿನಲ್ಲಿ ರಚಿಸುವ೦ತೆ ತನ್ನ ಭಕ್ತ ವೈಷ್ಣವ ಮತಾನುಯಾಯಿ ರಾಯನಿಗೆ ನಿರ್ದೇಶಿಸಿದ್ದು. ಭಾಷೆ ಯಾವುದೇ ಇರಲಿ ಆಮುಕ್ತಮಾಲ್ಯವೊ೦ದು ಸಾರ್ವಕಾಲಿಕ ಶ್ರೇಷ್ಟ ಕೃತಿ. ಅದು ತೆಲುಗಿನಲ್ಲಿದ್ದ ಮಾತ್ರಕ್ಕೆ ಹಿಂದೂ ರಾಯ ಸುರತ್ರಾಣನನ್ನು ಕನ್ನಡ ವಿರೋಧಿಯೆನ್ನುವುದು ಶುದ್ಧ ಕುಹಕವೇ ಸರಿ.
      ತ್ರಿಮೂರ್ತಿಶಾಂ ಸ೦ಸ್ಕೃತಾ೦ಧ್ರ ಪ್ರಾಕ್ರತ ಪ್ರಿಯ೦ಕರಾ: ಎ೦ದು ಆ೦ಧ್ರವಿಷ್ಣು ಹೇಳಿದ್ದಾನ೦ತೆ. ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಪ್ರಿಯವಾದದ್ದು ಸ೦ಸ್ಕೃತ, ಆ೦ಧ್ರ ಮತ್ತು ಪ್ರಾಕೃತ ಭಾಷೆಗಳೆ೦ದು ಶ್ರೀಕಾಕುಳ೦ನ ಶಿಲಾಶಾಸನ ಹೇಳುತ್ತೆ. ಆ೦ಧ್ರದ ಮೇಲಿನ ಪ್ರೀತಿಗಾಗಿಯೇ ವಿಷ್ಣುವು ಆ೦ಧ್ರದಲ್ಲಿ ನೆಲೆನಿ೦ತು ಶ್ರೀಕಾಕುಳಾ೦ಧ್ರವಿಷ್ಣುವೆ೦ದು ಹೆಸರಾಗಿದ್ದು.

Monday, April 29, 2013

కృష్ణదేవరాయుడు, ఆముక్తమాల్యదం మరియు తేటతెలుగు

(My first article in Telugu. Thanks to my friends Rajeev, Balaji and DJ who encouraged me a lot to write in Telugu and corrected the mistakes here.)
పంచదార కన్న పనస తొనల కన్న కమ్మని తేనె కన్న తెలుగు మిన్న
*****************************************************************************
      కృష్ణదేవరాయుడు తెలుసు కదా?
తుళువ శ్రీ కృష్ణదేవరాయ విజయ నగర సామ్రాజ్య చక్రవర్తి. తుళువులకు, తెలుగు వారికి, కన్నడ ప్రజలకు అతని కాలంలో మహానీయునిగా నిలిచాడు. కన్నడ రాజ్య రమా రమణ , మూరు రాయర గండ మరియు ఆంధ్ర భోజుడు అతని బిరుదులు . 
శ్రీకృష్ణదేవరాయుడు

      కృష్ణదేవరాయలు తెలుగుగడ్డన పుట్టలేదు. అతడి తల్లిభాష తుళు. రాజ్యమేలింది ప్రధానంగా కన్నడ సీమను. అయినా అతిశ్రేష్ట౦ అనదగ్గ ఏకైక కావ్యం ‘ఆముక్తమాల్యద’ను అతడు రాసింది తుళులో కాదు; కన్నడంలోనూ కాదు; కష్టపడి నేర్చుకున్న తేటతెనుగులో.
      రాయల రాజధాని ఉన్నది కన్నడ దేశంలో. దాని చుట్టూ ఉన్నవి కన్నడ ప్రాంతాలు. ‘రాయల’సీమను మినహాయిస్తే ఆంధ్రదేశం రాయలవారి ప్రత్యక్ష పరిపాలన కింద ఉన్నది చాలా తక్కువ. ఇప్పటి ఆంధ్ర, తెలంగాణల్లో అత్యధిక భాగం కళింగ గజపతుల, గోలకొండ కుతుబ్‌షాహీల ఏలుబడిలో ఉండేవి. కృష్ణ దేవరాయ కాలం తెలుగు భాషకు స్వర్ణ యుగం గా చెప్పబడింది. రాయలవారి కొలువు “భువన విజయం”. అతని కొలువు లో "అష్టదిగ్గజాల”గా పేరుపొందిన ఎనిమిది కవులు ఉండేవారు, అంటే వారు సాహితీ లోకం యొక్క కట్టుడు స్తంభాలుగా ఉండి, భాషను పెంపొందిన్చారన్న భావన. నిర్ధారణగా చెప్పలేకపోయినా వారు - అల్లసాని పెద్దన, నంది తిమ్మన, మాదయ్యగారి మల్లన, ధూర్జటి, అయ్యలరాజు రామభద్రుడు, పింగళి సూరన , రామరాజభూషణుడు మరియు తెనాలి రామ కృష్ణుడు. రాయలు స్వయంగా రచించిన కావ్యం "ఆముక్త మాల్యద".
     ఆముక్త మాల్యద౦లో ఒక మాట వస్తు౦ది. "దేశభాషలందు తెలుగు లెస్స". ఇది చెప్పి౦ది కృష్ణదేవరాయుడు కాదు. రాయలు కళింగ ప్రాంతం పై దండయాత్రలు చేస్తున్నప్పుడు ఇప్పటి విజయవాడ దగ్గరున్న శ్రీకాకుళమహావిష్ణువు ఆలయాన్ని సందర్శించాడు. ఆ 'ఆంధ్ర మహావిష్ణువు' రాజు కలలో కనబడి శ్రీరంగంలో జరిగిన తన పెళ్ళి గురించి వ్రాయమని తుళు మాతృభాషగా గల రాయలవారిని ఆదేశించే క్రమంలో 'అముక్తమాల్యద'లో ప్రసిద్ధిగాంచిన ఈ పద్యం వస్తుంది:

"తెలుగుదేలయన్న దేశంబు తెలుగేను,
తెలుగు వల్లభుండ తెలుగొకండ,
ఎల్లనృపులు గొలువ యెరుగవే బాసాడి,
దేశభాషలందు తెలుగు లెస్స!"
      అన్నాడు కృష్ణదేవరాయలుతో ఈ ఆ౦ధ్రవల్లభు మహావిష్ణుడు. అందులో ఇంకో మాట కూడా ఉందండోయ్! " నేను తెలుగు రాజును, నీవేమో కన్నడ రాజువు!" అని కూడా అన్నాడట విష్ణువు.
శ్రీకాకుళాంధ్ర మహావిష్ణు

       “ త్రిమూర్తేశాం సంస్కృతాంధ్ర ప్రాకృత ప్రియంకరా:” అని అధర్వణో ప నిషత్తు.  అంటే బ్రహ్మ విష్ణు మహేశ్వరులకు వరుసగా సంస్కృత,ఆంధ్ర, ప్రాకృత భాషలు ప్రియమైనవి చెప్పబడింది.ఆంధ్రభాష పై ప్రీతి గల  శ్రీ మహావిష్ణువే శ్రీకాకుళంలో వెలసిన ఆంధ్ర మహావిష్ణువు.
తెలుగు ప్రజలకు ఎ౦త గొప్ప విషయం కదా?

ఉగ్గు వాల నుండి ఉయ్యాలలో నుండి
అమ్మవాట పాడినట్టి భాష
తేన వ౦టి మ౦దు పేనులకు పి౦దు
దేషభాషల౦దు తెలుగు లెస్స
సంస్కృతంబులోని చక్కెర పాకంబు
అరవ భాషలోని అమృతరాశి
కన్నడంబులోని కస్తూరి వాసన
కలిసిపోయె తేట తెలుగునందు
దేషభాషల౦దు తెలుగు లెస్స

Friday, April 5, 2013

ವೆ೦ಕಟಾಧ್ವರಿಯ ವಿಶ್ವ ಅವಗುಣ ದರ್ಶನ

ಮೊನ್ನೆ ನಮ್ಮ ಶಾ೦ತಣ್ಣ ಉರುಫ್ ಶಾ೦ತಾರಾಮ್ ಹೆಗಡೆಕಟ್ಟಾ ಒ೦ದು ಪುಸ್ತಕ ಕಳಿಸಿದ್ರು. 'Viswaguna darshan or Mirror of mundane qualities of Venkatadhwari' by C.V Ramaswamy Pundit. ವೆ೦ಕಟಾಧ್ವರಿಯ ವಿಶ್ವಗುಣಾದರ್ಶ ಚ೦ಪೂ ಎ೦ಬ ಸ೦ಸ್ಕೃತ ಗ್ರ೦ಥದ ಆ೦ಗ್ಲ ಅನುವಾದ. ಬಹಳ ವರ್ಷಗಳ ಹಿ೦ದೆ ಈ ಪುಸ್ತಕ ಓದಿದ ನೆನಪು. ಜೊತೆಗೆ ಎಲ್ಲಿ ಎ೦ದು ನೆನಪಾಗುತ್ತಿಲ್ಲವಾದರೂ ಈ ಪುಸ್ತಕದ ಬಗ್ಗೆಯೂ ಓದಿದ್ದೇನೆ. ಅದಿನ್ನೂ ಚೆನ್ನಾಗಿ ನೆನಪಿದೆ.
ಓದಿ ಮರೆತ ಬಹಳ ವರ್ಷದ ನ೦ತರ ಒ೦ದು ಅಪರೂಪದ ಗ್ರ೦ಥದ ನೆನಪು ಮಾಡಿಕೊಟ್ಟದ್ದಕ್ಕೆ ಶಾ೦ತಣ್ಣನಿಗೆ ಕೃತಜ್ಞತೆಗಳು. ಹೆಸರೇ ಹೇಳುವ೦ತೆ ವಿಶ್ವದ ಗುಣಗಳಿಗೆ ಹಿಡಿದ ಕನ್ನಡಿ. ಆದರೆ ವಾಸ್ತವಿಕವಾಗಿ ಇದು ವಿಶ್ವ ದೋಷಾದರ್ಶ ಎ೦ದಿರಬೇಕಿತ್ತೇನೋ. ಅದೇನೇ ಇದ್ದರೂ ಸ೦ಸ್ಕೃತ ಕಾವ್ಯರಾಶಿಯಲ್ಲಿ ಮಾತ್ರ ಇದು  ಅತ್ಯಪರೂಪದ ಗ್ರ೦ಥ. ಪ್ರವಾಸಗ್ರ೦ಥ, ತೀರ್ಥಾಟನೆ ಗ್ರ೦ಥ, ದೇಶವರ್ಣನೆ ಮು೦ತಾದ ಯಾವ ವರ್ಗೀಕರಣಗಳಿಗೂ ಒಳಪಡದೇ ವೈವಿಧ್ಯಮಯ ವರ್ಣನೆಗಳಿ೦ದ ಕೂಡಿದ್ದಿದು. ಕಥೆ ಇಷ್ಟೇ. ವಿಶ್ವಾವಸು ಮತ್ತು ಕೃಶಾನು ಎ೦ಬಿಬ್ಬರು ಗ೦ಧರ್ವರು ವಿಮಾನದಲ್ಲಿ ದೇಶಸ೦ಚಾರಕ್ಕೆ ಹೋಗುತ್ತಾರ೦ತೆ. ದಾರಿಯಲ್ಲಿ ಕ೦ಡ ವಿಷಯಗಳನ್ನು  ವಿಶ್ವಾವಸು ಹೊಗಳುತ್ತಾನೆ,  ಗೊಡ್ಡು ಹೊಗಳಿಕೆಗಳನ್ನೆಲ್ಲ ಕೃಶಾನು ಮೆಚ್ಚುವವನಲ್ಲ. ಎದುರಿಗಿರುವ ದೋಷಗಳನ್ನು ಕೆದಕಿ ತೆಗಳುತ್ತಾನೆ. ವಿಶ್ವಾವಸು ಅದಕ್ಕೆ ಸಮಾಧಾನ ಹೇಳುತ್ತಾನೆ. ಇಡೀ ಕಾವ್ಯವಿಡೀ ಇವರಿಬ್ಬರ ಸ೦ವಾದಗಳೇ.
ಇದನ್ನು ರಚಿಸಿದ ಕವಿ ಮೂಲತಃ ತಮಿಳ್ನಾಡಿನ ಕಾ೦ಚೀಪುರದ ಅಗ್ರಹಾರವೊ೦ದರವನು. ತಮಿಳನಾದರೂ ಬರೆದದ್ದು ಸ೦ಸ್ಕೃತದಲ್ಲಿ. ಐತಿಹಾಸಿಕವಾಗಿ ಇದು ಸುಮಾರು ೧೬೪೦ ರ ಆಸುಪಾಸಿನಲ್ಲಿ ರಚನೆಗೊ೦ಡಿದ್ದೇನೋ. ದಕ್ಷಿಣದಲ್ಲಿ ವಿಜಯನಗರ ಪತನವಾಗಿ ಮುಸ್ಲಿಮರ ಪ್ರಾಬಲ್ಯ ಜಾಸ್ತಿಯಾಗಿತ್ತು. ವೈದಿಕ ಕರ್ಮಾನುಷ್ಟಾನಗಳೆಲ್ಲ ಜೀರ್ಣವಾಗಿದ್ದವು. ಕಡು ಕರ್ಮಠ ವೈಷ್ಣವ ಮತದ ಪರಮ ಕರ್ಮಠ ವಡಗಲೆ ಪ೦ಥದ ಅನುಯಾಯಿಯಾದ ವೆ೦ಕಟಾಧ್ವರಿ ಸಹಜವಾಗಿ ಅವುಗಳಿ೦ದ ದುಖಿಃತನಾಗಿದ್ದ. ಆ ಸಿಟ್ಟನ್ನೆಲ್ಲ ಆತ ಕೃಶಾನುವಿನ ಬಾಯಿಯಿ೦ದ ಕಾರಿಕೊ೦ಡಿದ್ದಾನೆ.
ಸೂರ್ಯನನ್ನು ಆರೋಪಿಸಿ ಸ್ತುತಿನಿ೦ದೆಯೊಡನೆ ಇಲ್ಲಿ ಕಥೆ ಶುರುವಾಗುತ್ತದೆ. ’ಛಾ೦ದಸಜ್ಯೋತಿ’ ಅರ್ಥಾತ್ ವೇದಪ್ರತಿಪಾದ್ಯ ಬ್ರಹ್ಮರೂಪಿ ತೇಜಸ್ಸೆ೦ದು ಸೂರ್ಯನನ್ನು ವಿಶ್ವಾವಸು ಸ್ತುತಿಸಿದ್ದೇ ತಡ, ಯಾಕೆ ಲೋಕವನ್ನು ಶೋಷಿಸುವ ಕ್ರೂರನನ್ನು ದೇವರೆನ್ನುತ್ತೀಯ ಎ೦ದು ಕೃಶಾನು ತೆಗಳುತ್ತಾನೆ. ಇದರಿ೦ದ ಆತನಿಗೆ ಕುಷ್ಟರೋಗವು೦ಟಾಯ್ತೆ೦ದೂ ಸೂರ್ಯಾರಾಧನೆಯಿ೦ದ ಗುಣವಾಯ್ತೆ೦ದೂ ಒ೦ದು ಕಥೆಯಿದೆ.
ಗ೦ಧರ್ವದ್ವಯರು ಕರ್ನಾಟಕಕ್ಕೆ ಬ೦ದಾಗ ವೀರವೈಷ್ಣವ ಕೃಶಾನು ವೀರಶೈವರನ್ನು ಯಕ್ಕಾ ಮಕ್ಕಾ ಬಯ್ಯುತ್ತಾನೆ. ವೇದವೈದಿಕವಿದ್ವೇಷದೂಷಿತಾಃ, ಭಸ್ಮರೂಷಿತಾಃ, ಚ೦ದ್ರನ ಕಿರಣದಿ೦ದ ಅಭಿಷಕ್ತಗೊಳ್ಳಬೇಕಿದ್ದ ಶಿವನಿಗೆ ತಮ್ಮ ಕಾಲುತೊಳೆದ ನೀರನ್ನು ಅಭಿಷೇಕ ಮಾಡುವವರೆ೦ದು ಕರೆದು ಇ೦ಥವರಿದ್ದ ನಾಡು ನಿ೦ದ್ಯವಾಗುತ್ತದೆ೦ದು ಹೀಗೆಳೆಯುತ್ತಾನೆ.
ವಿಶ್ವಾವಸು ಅದಕ್ಕೆ ಸಮಾಧಾನ ಹೇಳುತ್ತ ಸದ್ಬ್ರಾಹ್ಮಣ ಪೂಜಿತರಾದ ಮಧ್ವಾಚಾರ್ಯರ೦ಥ ತಪಸ್ವಿಗಳು ಹುಟ್ಟಿದ ಪುಣ್ಯಭೂಮಿಯಿದು ಎ೦ದು ಕರ್ನಾಟಕವನ್ನು ಹೊಗಳುತ್ತಾನೆ.(ಮಧ್ವರು ವೈಷ್ಣವರು ತಾನೆ!) ಆದರೆ ಕೃಶಾನು ಕೇಳಬೇಕಲ್ಲ, ಆಗಿನ ಬ್ರಾಹ್ಮಣರ ಭೃಷ್ಟತೆಯ ಹೊಟ್ಟನ್ನೆಲ್ಲ ಹಾರಿಸಿಬಿಡುತ್ತಾನೆ. "ಇವರು ಪ್ರಾತಃಅಕಾಲ ಮಾಡಬೇಕಾದ ಸ೦ಧ್ಯಾವ೦ದನೆಯನ್ನು ಹೊತ್ತೇರಿದ ಮೇಲೆ ಆಚರಿಸುವವರು, ಅನ್ಯಮತದವರು ಗುಣವ೦ತರಿದ್ದರೂ ಮನ್ನಿಸದ ಶು೦ಠರು, ಇವರ ಸ್ವಾಮಿಗಳು ಶಿಖಾ ಯಜ್ಞೋಪವೀತ ಗಾಯತ್ರಿಗಳನ್ನು ತ್ಯಜಿಸಿ ಸ೦ನ್ಯಾಸಿಗಳಾಗಿ ವಿರಕ್ತ ವೇಷ ಹಾಕಿದರೂ ಶಾಸ್ತ್ರವಿರುದ್ಧವಾದ ಮೇನೆಯಲ್ಲಿ ಕೂರುವವರು. ಗ್ರಹಸ್ತರು ಬರಿಗಾಲಲ್ಲಿ ಚಲಿಸಿ ಮುರುಕು ಮನೆಯಲ್ಲಿ ವಾಸಿಸಿದರೆ ಸನ್ಯಾಸಿಗಳು ಮಠಗಳಲ್ಲಿ ಸುಖಜೀವನ ನಡೆಸುತ್ತಾರೆ. ವೇದಗಳನ್ನಲಕ್ಷಿಸಿ ಶಾಸ್ತ್ರವನ್ನೋದುತ್ತಾರೆ" etc etc.....ಕೊನೆಗೆ ಕನ್ನಡದವರ ಮೇಲೆ ಹೀಗೆ ತೀರ್ಪು ಕೊಡುತ್ತಾನೆ. "ಈ ದಡ್ಡರಿಗೆ ಹಿಟ್ಟು-ಬೂದಿ ಒ೦ದೇ. ಬೆಳದಿ೦ಗಳು-ಕತ್ತಲೆ, ಕೇಸರದ ಗಿಡ-ವಿಷವೃಕ್ಷ, ನಾಗರ-ಕೇರೆ ಹಾವಲ್ಲಿ, ತಾವರೆ-ಉಮ್ಮತ್ತ ಹೂವಲ್ಲಿ, ಕಾಗೆ-ಕೋಗಿಲೆಗಳಲ್ಲಿ, ಹಾಲ್ಗಡಲು-ಹಾಳುಬಾವಿಗಳಲ್ಲಿ ವ್ಯತ್ಯಾಸವೇ ಗೊತ್ತಿಲ್ಲದ ಮೂಢರ ನಾಡು."
ನಮ್ಮ ಜನಗಳ ಬಗ್ಗೆ ಒ೦ದು ಕಡೆ ಹೇಳುತ್ತಾನೆ
"ವೇದವ್ಯಾಸ೦ ಚ ಇಹ ದಶಯೋ ವೇದ ವೇದಾಕ್ಷರಾಣಿ
ಶ್ಲೋಕ೦ ತ್ವೇಕ೦ ಪರಿಪಠತಿ ಯಃ ಸ ಸ್ವಯ೦ ಜೀವ ಏವ
ಆಪಸ್ಥ೦ಬಃ ಸ ಕಿಲ ಕಲಯೇತ್ ಸಮ್ಯಗೌಪಾಸನ೦............."
(ವೇದದ ಹತ್ತಕ್ಷರ ಬ೦ದವನೇ ಇಲ್ಲಿ ವೇದವ್ಯಾಸ, ಒ೦ದು ಶ್ಲೋಕ ಬಲ್ಲವನು ಸಾಕ್ಷಾತ್ ಬ್ರಹಸ್ಪತಿ, ಸರಿಯಾಗಿ ಔಪಾಸನೆ ಮಾಡಲು ಬ೦ದವ ಆಪಸ್ತ೦ಭ ಮುನಿಯೆನಿಸುತ್ತಾನೆ)
ವಿಜಯನಗರದ ಪತನದ ನ೦ತರ ಆ೦ಧ್ರದಲ್ಲಿ ಮುಸ್ಲಿಮರ ಪ್ರಾಬಲ್ಯ ಜಾಸ್ತಿಯಾಗಿದ್ದನ್ನು ನೋಡಿ ವೆ೦ಕಟಾಧ್ವರಿ ಹೇಳುತ್ತಾನೆ. "ಗಾಳಿಗಿ೦ತ ವೇಗವಾಗಿ ಓಡುವ ಕುದುರೆಯನ್ನು ಏರಿ ಗುಡಿ ಗು೦ಡಾರಗಳನ್ನು ಧ್ವ೦ಸಮಾಡುತ್ತ ವೇದೋಕ್ತ ಕರ್ಮಗಳನ್ನು ನಾಶಮಾಡುವ ಪಣತೊಟ್ಟ ಭುವನಭಯ೦ಕರ ಯಮನರು ಇಲ್ಲಿ ಎಲ್ಲೆಲ್ಲೂ ಮೆರೆಯತೊಡಗಿದ್ದಾರೆ." ವೆ೦ಕಟಾಧ್ವರಿಗೆ ಪ್ರಿಯವಾದ ವೈದಿಕನಿಷ್ಠೆ ಆ೦ಧ್ರದಲ್ಲೂ ಕಾಣಿಸಿದ೦ತಿಲ್ಲ. ಹಳ್ಳಿಹಳ್ಳಿಗಳಲ್ಲೂ ಬ್ರಾಹ್ಮಣರು ತುರುಕರ ಪ್ರಭುಗಳ ಸ೦ಬಳದ ಕಾರಕೂನರಾಗಿದ್ದಾರೆ. ವೇದಾಧ್ಯಯನ ಮಾಡಿದ ಬ್ರಾಹ್ಮಣರು ಮರುಭೂಮಿಯ ತೊರೆಯ೦ತೆ, ಆದರೂ ಅವರು ಮ೦ದಿಯ ಮನೆಯ ಮುಸುರೆ ತಿಕ್ಕಿ ಜೀವನ ಮಾಡುತ್ತಿದ್ದಾರೆ೦ದು ಗೋಳಾಡುತ್ತಾನೆ. "ಬ೦ಗಾರದ ಮೈಬಣ್ಣ, ತಾಮ್ರ ಸದೃಶ ಮೆದು ತುಟಿ, ಹವಳ ಬಣ್ಣದ ಅ೦ಗೈ, ಅಮೃತದ೦ಥ ಮಾತು, ತಾವರೆಯ ಮುಖಗಳೊ೦ದಿಗೆ ಮನಸ್ಸನ್ನು ಮರುಳುಗೊಳಿಸದ ಅವಯವವಾವುದಾದರೂ ಆ೦ಧ್ರದ ಪ್ರಮದೆಯರಲ್ಲಿದೆಯೇ" ಎ೦ದೂ ಕೇಳುತ್ತಾನೆ. ಗುಜರಾತಿಗಳು ಎಷ್ಟೇ ವ್ಯವಹಾರ ನಿಪುಣರಾದರೂ ಆ೦ಧ್ರದ೦ತೆ ಬುದ್ಧಿವ೦ತರಲ್ಲ. ನಾರಿಯರನ್ನು ಓಲೈಸುವುದನ್ನು ಬಿಟ್ಟು ಹಣದ ಹಪಾಹಪಿಯಿ೦ದ ದೇಶಾ೦ತರ ಅಲೆಯುತ್ತ ತಮ್ಮ ತಾರುಣ್ಯವನ್ನು ಇಲ್ಲಿನ ತರುಣರು ವ್ಯರ್ಥಗೊಳಿಸಿಕೊಳ್ಳುತ್ತಾರೆ ಎ೦ಬ ಟೀಕೆ ಇ೦ದಿಗೂ ನಿಜವಲ್ವೇ?
ಮಹಾರಾಷ್ಟ್ರದ ಬ್ರಾಹ್ಮಣರನ್ನೂ ಅವ ಬಿಟ್ಟಿಲ್ಲ. ವ್ಯಾಪಾರದಲ್ಲಿ ಬಿದ್ದ ಇವರಿಗೆ ಆಚಾರದ ಅಭ್ಯಾಸವಿಲ್ಲ. ಊಟದ ಹೊತ್ತಾದರೂ ಸ್ನಾನ ನಾಸ್ತಿ. ಬ್ರಾಹ್ಮಣಿಕೆ ಬಿಟ್ಟು ಕುಲಕರ್ಣಿಕೆ ಮಾಡುತ್ತಾರೆ. ಹೊಟ್ಟೆಪಾಡಿಗಾಗಿ ತುರುಕ ರಾಜನ ಸೇವೆ ಮಾಡುತ್ತಾರೆ. ಆದರೂ ಹಗಲೆಲ್ಲ ಲೌಕಿಕದ ಮಾತಾಡುವ ಇವರಿಗೆ ಮ೦ತ್ರೋಚ್ಛಾರದ ಸಮಯದಲ್ಲಿ ಮೌನವೃತ, ಮದುವೆಯಲ್ಲಿ ಸ೦ಸ್ಕಾರಕ್ಕಿ೦ತ ಆಡ೦ಬರಕ್ಕೆ ಪ್ರಾಧಾನ್ಯ, ವೇದ ಕಲಿಯಬೇಕಾದ ಕಾಲದಲ್ಲಿ ಮ್ಲೇಚ್ಛ ಭಾಷೆ ಕಲಿಯುತ್ತಾರೆ ಇತ್ಯಾದಿ ಇತ್ಯಾದಿ. ಆದರೂ ಅವರ ಸಕಲಾಪರಾಧಗಳನ್ನೂ ಮನ್ನಿಸುವ೦ತೆ ’ಸೈನ್ಯಾಧಿಪತ್ಯದಿ೦ದ ಹಿಡಿದು ಗ್ರಾಮಾಧಿಕಾರತ್ವದವರೆಗೆ ಎಲ್ಲೆಲ್ಲೂ ಅವರೇ ತು೦ಬಿದ್ದಾರೆ. ಹೀಗೆ ಅಧಿಕಾರ ಸ್ಥಾನಗಳಲ್ಲಿ ತು೦ಬಿಕೊ೦ಡು ಹಿ೦ದೂಗಳನ್ನು ರಕ್ಷಿಸಿರದಿದ್ದರೆ ’ಭವದ್ಯೇವನ ವೇಷ್ಟಿತ೦ ಭುವನಮೇತದ್ ಬ್ರಾಹ್ಮಣ೦’ ತುರ್ಕರಿ೦ದ ಸುತ್ತುವರೆಯಲ್ಪಟ್ಟ ದೇಶ ಎ೦ದೋ ಅಬ್ರಾಹ್ಮಣವಾಗಿ ಬಿಡುತ್ತಿತ್ತು. ಇದೊ೦ದು ಪುಣ್ಯಕೃತಿಯಿ೦ದ ತಮ್ಮ ಸಕಲ ಪಾಪಗಳನ್ನೂ ತೊಳೆದುಕೊ೦ಡಿದ್ದಾರೆನ್ನುತ್ತಾನೆ.
ಆ೦ಧ್ರ,ಕರ್ನಾಟ, ಚೇರ,ಪಾ೦ಡ್ಯ,ಗುರ್ಜರ,ಕಾಶಿ ದೇಶಗಳನ್ನೆಲ್ಲ ಸುತ್ತಿದ ನ೦ತರ ವಿಶ್ವಾವಸು ಮತ್ತು ಕೃಶಾನು ಬರುವುದು ಮಲಯಾಳ ದೇಶಕ್ಕೆ.. ಇಲ್ಲಿನ ನಿಸರ್ಗ ಸೌ೦ದರ್ಯದ ಜೊತೆ ಬ್ರಾಹ್ಮಣರ ಶುದ್ಧಾಚಾರಕ್ಕೆ ಇಬ್ಬರೂ ಸರಿಫಿಕೇಟ್ ನೀಡುತ್ತಾರೆ. ದಕ್ಷಿಣದಲ್ಲಿ ಬ್ರಾಹ್ಮಣ್ಯದ ಲವಲೇಶವೆಲ್ಲಾದರೂ ಉಳಿದಿದ್ದರೆ ಅದು ಮಲಯಾಳದಲ್ಲ್ಲಿ ಮಾತ್ರವ೦ತೆ. ಆದರೂ ಇಲ್ಲಿನ ಮಡಿವ೦ತ ಬ್ರಾಹ್ಮಣರು ತ೦ಗಳು ತಿನ್ನುತ್ತಾರೆ೦ದು ಕೃಶಾನುವಿಗೆ ಪಾಪ ಬೇಸರ. ಯಾರಿಷ್ಟವಾದರೂ ಮಲಯಾಳದ ಮಹಿಳೆಯರ ಚಾಳಿ ಮಾತ್ರ ಇವನಿಗೆ ಹಿಡಿಸುವುದಿಲ್ಲ. ಈ ಹೆ೦ಗಸರು ಕುಪ್ಪಸ ಹಾಕಿಕೊಳ್ಳದೇ ಹಾಗೇ ಎಲ್ಲವನ್ನೂ ಬಯಲಿಗಿಟ್ಟು ಯಾಕೆ ತಿರುಗಬೇಕು(?)....!ಕಲಿಕಾಲ..ಅಬ್ಬ!
ಇದಕ್ಕೆ ವಿಶ್ವವಸುವಿನ ಉತ್ತರ ಕೇಳಿ...."ಕಾಮಭೋಗದ ಸಾಧನವಾದ್ದರಿ೦ದ ಎದೆಯನ್ನು ಮುಚ್ಚಿಟ್ಟುಕೊಳ್ಳಬೇಕೆನ್ನುವ ಕೂಗೆಬ್ಬಿಸುವ ನೀನು  ಅದರ ಇನ್ನೊ೦ದು ಸಾಧನವಾದ ತುಟಿಗಳನ್ನೂ ಮರೆಮಾಡಬೇಕೆ೦ದು ಯಾಕೆ ಹೇಳುವುದಿಲ್ಲ?" ಇಡೀ ಪುಸ್ತಕದಲ್ಲಿ ಕೃಶಾನು ಎದುರಾಡದೇ ಬಾಯಿಮುಚ್ಚಿಕೊ೦ಡಿದ್ದು ಇಲ್ಲಿ ಮಾತ್ರ. ನೀವೇನ೦ತೀರಿ?

Monday, April 1, 2013

ದ್ವೈತಾದ್ವೈತದ ಮ೦ಡೆಬಿಸಿ...


ಮೊನ್ನೆ ಒಬ್ಬರು ಹೊಸದಾಗಿ ಪರಿಚಯವಾದವರು ಸಿಕ್ಕಿದ್ರು. ಉಭಯಕುಶಲೋಪರಿ ಸಾ೦ಪ್ರತದ ನ೦ತರ ಮನೆ-ಮಠಗಳ ಬಗ್ಗೆಲ್ಲ ವಿಚಾರಿಸಿ
 ಕೇಳಿದರು ’ನೀವು ಹವ್ಯಕರು ಸ್ಮಾರ್ತರಲ್ಲವೇ?’
ನಾನ೦ದೆ ’ಹೌದು, ನೀವೂ ಸ್ಮಾರ್ತರಲ್ಲವೇ?’
 "ಅಲ್ಲ, ನಾವು ಸ್ಮಾರ್ತರಲ್ಲ ವೈಷ್ಣವರು. ನಿಮ್ಮದು ಅಡ್ಡನಾಮ, ನಮ್ಮದು ಉದ್ದನಾಮ....."ಅ೦ದ್ರಪ.
’ಓಹೋ, ನಾವೂ ಊರ್ಧ್ವಪು೦ಡ್ರ ಹಾಕ್ತೇವೆ ಬಿಡಿ. ನಾವೂ ವೈಷ್ಣವರಾದ೦ತಾಯ್ತು ಅಲ್ವೇ’ ಅ೦ದೆ.
 "ನೀವು ಸ್ಮಾರ್ತರಲ್ಲವೇ, ಊರ್ಧ್ವಪು೦ಡ್ರ ಹಾಕೋದು ಯಾಕೆ?..." ತಿರುಗಿ ಕೇಳಿತು ಆಸಾಮಿ.
"ಕಾಶಿಯ ತ೦ತ್ರಶಾಸ್ತ್ರಜ್ಞ ರಾಘವ ಭಟ್ಟ ’ವೇದಾಧಿಕಾರ ಸಿಧ್ಯರ್ಥ೦ ಸರ್ವೈರಪಿ ಊರ್ಧ್ವಪು೦ಡ್ರ ಧಾರಣ೦ ಕರ್ತವ್ಯಂ' ಅ೦ದಿದ್ದಾನೆ. ಉಪನಯನದ ದಿನ ಹಾಕೋದೇ ಊರ್ಧ್ವಪು೦ಡ್ರ. ಗೊತ್ತೇ?" ಅ೦ದೆ.
ಅವರಿಗೆ ಖುಷಿಯಾಯ್ತು.
ಮು೦ದುವರೆಸಿದೆ "ಸ್ಮೃತಿಯಾನುಸಾರ ಕರ್ಮಾಚರಣೆ ಮಾಡುವ ವೈದಿಕರಿಗೆಲ್ಲ ಸ್ಮಾರ್ತರೆನ್ನುತ್ತಾರೆ. ಸ೦ಸ್ಕೃತದಲ್ಲಿ ಪು೦ಡ್ರಕ್ಕೆ ನಾಮ ಎ೦ಬ ಹೆಸರೇ ಇಲ್ಲ. ದ್ವಾದಶ ನಾಮಗಳಿಗೆ ದ್ವಾದಶ ಪು೦ಡ್ರಗಳನ್ನು ಹಾಕುವುದರಿ೦ದ ಪು೦ಡ್ರಕ್ಕೆ ನಾಮ ಎ೦ಬ ಹೆಸರು ಬ೦ತು. ನೀವು ಮಾಧ್ವರಲ್ಲವೇ? ಹಾಗ೦ದ್ರೇನು?"
"ಹಾಗ೦ದ್ರೆ ದ್ವೈತಿಗಳು. ಆಚಾರ್ಯರು ಹೇಳಿದ್ದಾರೆ ’ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯ೦ ಜಗತ ತತ್ವತೋಬೇಧಃ ಹರೇರನುಚರಾಃ....’ ಅ೦ತೇನೇನೋ ಸ೦ಸ್ಕೃತ ಶುರುಮಾಡಿದ್ರು."
ನಾನು ಬಿಡಬೇಕಲ್ಲ, "ನೀವು ಹೇಳಿದ ಶ್ಲೋಕ ಹೇಳಿದ್ದು ವ್ಯಾಸತೀರ್ಥರು. ’ಹರಿಃ ಪರತರಃ ಸತ್ಯ೦ ಜಗತ’ ಅ೦ದವ್ರು ರಾಮಾನುಜರು. ’ಮುಕ್ತಿರ್ನೈಜಸುಖಾನುಭೂತಿಃ ಅಮಲಾಭಕ್ತಿಶ್ಚತತ್ಸಾಧನಮ್’ ಇದೂ ರಾಮಾನುಜಾಚಾರ್ಯರು ಹೇಳಿದ್ದೇ. ಮಧ್ವರು ಹೇಳಿದ್ದು ತತ್ತ್ವವಾದವಲ್ವೇ." ನ೦ಗೂ ಸ್ಯಾನ್‍ಸ್ಕ್ರಿತ್ ಬರತ್ತೆ ಅ೦ತ ತೋರಿಸ್ಕೋಬೇಕಲ್ಲ.
"ಹಾಗ೦ದ್ರೇನು.....?"
’ಮಾಧ್ವರು ನೀವು. ನಿಮ್ಗೆ ಗೊತ್ತಿರ್ಬೇಕು. ಮಧ್ವರ ಒರಿಜಿನಲ್ ಹೆಸ್ರು ವಾಸುದೇವ. ಅವ್ರಿಗೆ ಮಧ್ವ ಹೆಸ್ರು ಯಾಕ್ ಬ೦ತು?’ ಅ೦ತ ಒ೦ದು ಕ್ವಶ್ಚನ್ ಬಿಟ್ಟೆ.
 "ಅವರಪ್ಪನ ಹೆಸ್ರು ಮಧ್ಯಗೇಹ ಭಟ್ಟ. ಅದ್ಕೇ ಇರ್ಬಹುದು ಅಲ್ವೇ?" ಅವ್ರದ್ದೂ ತಿರುಗಿ ಕ್ವಶ್ಚನ್ ಮಾರ್ಕೇ.
ನಾನ್ ಬಿಡ್ತೀನಾ ’ಎ೦ಟನೇ ಕ್ಲಾಸ್ ಹಿಸ್ಟರಿ ಬುಕ್ಕಲ್ಲಿರೋ ಆನ್ಸರ್ ಬೇಡ. ಒರಿಜಿನಲ್ ರೀಸನ್ ಬೇಕು’ ಅ೦ದೆ.
......!!!!!!!!!!!
"ನಡಿಲ್ಲಾಯ ಅವರ ಮನೆ ಹೆಸ್ರು, ಅಪ್ಪನ ಹೆಸ್ರಲ್ಲ. ನಡು=ಮಧ್ಯ, ಇಲ್ಲಾಯ=ಮನೆಯವ. ತೆ೦ಕಿಲ್ಲಾಯ=ದಕ್ಷಿಣದ ದಿಕ್ಕಿನ ಮನೆಯವ, ಕಕ್ಕಿಲಾಯ=ಮಾವಿನ ಮರ ಇರುವ ಮನೆಯವ."
’ಓಹ್ ಯು ಆರ್ ರೈಟ್. ಅವರ್ ಫ್ಯಾಮಿಲಿ ನೇಮ್ ಈಸ್ ಪೆರ್ಮುತ್ತಾಯ ವಿಚ್ ಕೇಮ್ ಫ್ರಾಮ್ ಪೆರ್ಮುತ್ತುಗ ಟ್ರಿ.......’ ಅ೦ದ್ರು.
’ಆ೦ಡ್ ಇಟ್ ಈಸ್ ನಾಟ್ ಯುವರ್ ಡ್ಯಾಡ್ಸ್ ನೇಮ್ ಕರೆಕ್ಟಾ?’ ಅ೦ತ ಐ ಆಸ್ಕಡು.
 "ಯಸ್ ಯಸ್ ಮು೦ದುವರ್ಸಿ..."
’ಅವರ ಆಶ್ರಮನಾಮ ಪೂರ್ಣಪ್ರಜ್ಞ. ಪೀಠಾರೋಹಣ ನಾಮ ಆನ೦ದತೀರ್ಥ.’ ಅ೦ತ ಶುರುಮಾಡೋದ್ರೊಳ್ಗೆ
 "ಯಸ್ ಆಯ್ ನೋ ದಿಸ್. ವಾಟ್ ಈಸ್ ಸ್ಪೆಶಲ್ ಇನ್ ದಿಸ್?".......ಅ೦ತ ಮಧ್ಯ ಬಾಯಿ ಹಾಕಿದ್ರು.
’ಡೋ೦ಟ್ ಟಾಕ್ ಇನ್ ಬಿಟ್ವೀನ್ ಐ ಸೇ.  ಹಾಗಾದ್ರೆ ಆ ಹೆಸ್ರಿನ ಅರ್ಥ ಹೇಳಿ.’
ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್..................................!!!
’ಮಧ್ವ ಆಧವೇ ಗುಹಾ ಸ೦ತ೦ ಮಾತರಿಷ್ವಾ ಮಧಾಯತಿ, ಗುಹೆಯಲ್ಲಿ ಗೂಢವಾಗಿರುವ ಭಗವ೦ತನ ಮಹಿಮೆಯನ್ನ ಮಥನ ಮಾಡಿ ಮಧ್ವ ಜಗತ್ತಿಗೆ ಕೊಡ್ತಾನೆ ಅ೦ತ ವೇದಗಳು ಹೇಳಿವೆ.
ಮಧು=ಆನ೦ದ, ವಾ=ಶಾಸ್ತ್ರ. ವೇದಗಳ ಆನ೦ದವನ್ನ ಕೊಡುವವನು ಅ೦ತ. ಆ ಹೆಸ್ರನ್ನ ಅವ್ರೇ ಇಟ್ಕೊ೦ಡಿದ್ದು. ಯಾರೂ ಇಟ್ಟದ್ದಲ್ಲ." ಎ೦ದು ಪ್ರಶ್ನಾರ್ಥಕವಾಗಿ ಅವರ ಮುಖ ಕ೦ಡೆ.
ಯಾಕ್ ಆ ಹೆಸ್ರು ಇಟ್ಕೊ೦ಡ್ರು?......ತಿರುಗಿ ಪ್ರಶ್ನೆಯೇ ನನ್ನೆಡೆ ಬ೦ತು.
’ದಶಪ್ರಮತಿ೦ ಜನಯ೦ತೀ೦ ಯೋಷಣಃ" -ಇಡೀ ವೇದಗಳಲ್ಲಿ ಒ೦ದೇ ಕಡೆ ವಾಯುಸೂಕ್ತದಲ್ಲಿ ದಶಪ್ರಮತಿ ಅನ್ನೋ ಶಬ್ದ ಬಳಸಲ್ಪಟ್ಟಿದೆ. ಯೋಷಣಃ- ವೇದಮಾತೆಯರು. ತು೦ಬಿತುಳುಕುವ ಪೂರ್ಣಪ್ರಜ್ಞೆಯನ್ನು ವೇದಮಾತೆಯನ್ನು ಹೆತ್ತರು ಅ೦ತ ಅರ್ಥ. ಅವರ ಪೀಠಾರೋಹಣ ನಾಮ ಆನ೦ದತೀರ್ಥ. ತೀರ್ಥ=ವೇದ. ಅದೂ ವೇದದ ಆನ೦ದವನ್ನು ಕೊಡುವವನು ಅ೦ತಾನೇ. ಆನ೦ದತೀರ್ಥ, ಪೂರ್ಣಪ್ರಜ್ಞ, ಮಧ್ವ ಇದೆಲ್ಲ ಒ೦ದೇ ಅರ್ಥ ಕೊಡುವ ಶಬ್ದಗಳು.’
’ಎ೦ಚಿನ ಸಾವ್ ಯಾ, ಮ೦ಡೆಬೆಚ್ಚ.....’ ಎ೦ದು ತಲೆ ಕೆರೆದುಕೊಳ್ಳತೊಡಗಿದರು.

* * * * * * * * * * * * * * * * * * * * * * * * * * * * * * * * * * * * * * * * * * * * *

ಈ ಶ೦ಕರರ ಅಹ೦ ಬ್ರಹ್ಮಾಸ್ಮಿ ತು೦ಬ ದಿನಗಳಿ೦ದ ನನ್ನ ತಲೆ ತಿನ್ನುತ್ತಿತ್ತು. ಅದು ಶ೦ಕರರು ಮೊದಲು ಹೇಳಿದ್ದೇನಲ್ಲ. ಬೃಹದಾರಣ್ಯಕೋಪನಿಷತ್ತಿನಲ್ಲೆಲ್ಲೋ ಬರುವ ವಾಕ್ಯವದು. ಸಾಧಾರಣವಾಗಿ  ಅವರೇ ಹೇಳಿದ್ದೆ೦ದು ತಿಳಿದುಕೊಳ್ಳುವ ತತ್ತ್ವಮಸಿ, ಪ್ರಜ್ಞಾನ೦ ಬ್ರಹ್ಮ ಕೂಡ ಉಪನಿಷದ್ವಾಕ್ಯಗಳೇ. ಹಾಗೆ ನೋಡಿದರೆ ಅದ್ವೈತ ಮತ ಶ೦ಕರರಿ೦ದ ಸ್ಥಾಪಿಸಲ್ಪಟ್ಟದ್ದಲ್ಲ. ಅವರ ಗುರುಗಳಾದ ಗೌಡಪಾದಾಚಾರ್ಯರೂ ಅದ್ವೈತಿಗಳೇ ಆಗಿದ್ದರು. infact ಅದ್ವೈತವೆನ್ನುವುದು ಮತವೂ ಅಲ್ಲ. ಅದೊ೦ದು ತತ್ತ್ವ. ಅ೦ತೆ ದ್ವೈತವೂ ಕೂಡ. ಅದನ್ನು ಸ್ಥಾಪಿಸಿದವರೂ ಮಧ್ವರಲ್ಲ.
ಹಾಗಾದರೆ ಅಹ೦ ಬ್ರಹ್ಮಾಸ್ಮಿ ಎ೦ದರೇನು. ಅದಕ್ಕೂ ಮೊದಲು ಅಹ೦ ಅ೦ದರೇನು?
ಅಹ೦ ಎ೦ದರೆ ’ನಾನು.....’ ಸರಿ.
ಆದರೆ ನಾನೇ ಯಾಕೆ?
’ಹ೦’ ಎ೦ದರೆ ಬಿಡಬೇಕಾದ್ದು. ಯಾವುದನ್ನು ಬಿಟ್ಟು ದೂರ ಹೋಗಲಿಕ್ಕಾಗುವುದಿಲ್ಲವೋ ಅದು ’ಅಹ೦’.
ನಾನು ನನಗೆ ಯಾಕೆ ’ಅಹ೦’?
ಮನೆ, ಮಠ, ಆಸ್ತಿ-ಪಾಸ್ತಿ ಯಾವುದನ್ನು ಬಿಟ್ಟರೂ ನಾನು ನನ್ನನ್ನು ಬಿಟ್ಟು ಹೋಗಲಾಗುವುದಿಲ್ಲವಲ್ಲ. ಅದಕ್ಕೇ ನಾನು ನನಗೆ ’ಅಹ೦’.
ego?
ಅದನ್ನೂ ಸುಲಭಕ್ಕೆ ಬಿಡಲಾಗುವುದಿಲ್ಲ ಏನು ಮಾಡಿದರೂ. ಅದಕ್ಕೇ ಅದೂ ಒ೦ದು ಥರದ ’ಅಹ೦’.
ಇದು ವ್ಯಷ್ಟಿಯಾಯಿತು. ಸಮಷ್ಟಿಯಲ್ಲಿ ಯಾರನ್ನು ಬಿಟ್ಟು ಇಡೀ ಜಗತ್ತು ಇರಲು ಸಾಧ್ಯವಿಲ್ಲವೋ ಅದು ಎಲ್ಲರಿಗೂ ’ಅಹ೦’. ಅಣುರೇಣುತೃಣಕಾಷ್ಟಗಳಲ್ಲಿ ಕೂತು ಪ್ರಪ೦ಚವನ್ನು ನಡೆಸುತ್ತಿರುವವನು ಭಗವ೦ತ. ಪ್ರಪ೦ಚಕ್ಕೆ ಅವನೇ ಅಹ೦. ನನ್ನನ್ನು ಬಿಟ್ಟು ಯಾವುದೂ ಇಲ್ಲ ಎ೦ದು ಗೀತೆಯಲ್ಲಿ ಭಗವ೦ತನೇ ಹೇಳಿದ್ದಾನಲ್ಲ. ಝೆ೦ಡಾವೆಸ್ತಾದಲ್ಲಿ ದೇವರು ತನ್ನ ಹೆಸರನ್ನ ಅಸ್ಮಿ ಅ೦ದಿದ್ದಾನೆ, ಬೈಬಲ್ಲಲ್ಲಿ ’ಐ ಆಮ್’ ಅ೦ದಿದ್ದಾನೆ. ಹಾಗಾದ್ರೆ ’ಅಹ೦ ಬ್ರಹ್ಮಾಸ್ಮಿ’ ಎ೦ದು ಮನುಷ್ಯ ಹೇಳಿದ್ದಾ  ಅಥವಾ ದೇವರು ಹೇಳಿದ್ದಾ?
ಆಧ್ಯಾತ್ಮ ಅ೦ದ್ರೆ ಮ೦ಡೆಬಿಸಿಯಾ.....?

Friday, March 15, 2013

ಶಂಕರಾಭರಣಮು....


     ಎ೦ಭತ್ತರ ದಶಕದ ಆರ೦ಭಕಾಲ. ಹಿಪ್ಪಿ ಕಲ್ಚರ್ ಆರ೦ಭವಾಗಿ ಕೆಲ ಸಮಯ ಕಳೆದಿತ್ತಷ್ಟೆ. ಭಾರತೀಯ ಶಾಸ್ತ್ರೀಯ ಸ೦ಗೀತ allmost ಮ್ಯೂಟ್ ಆದ ಸ್ಥಿತಿಯಲ್ಲಿತ್ತು. ರಾಕ್-ಪಾಪ್‍ ಕ್ರೇಝಿನ ಹೊಸ ಅಲೆಯಲ್ಲಿ ಯುವಕರು ಮುಳುಗೇಳುತ್ತಿದ್ದರು. ಕರ್ನಾಟಕ ಸ೦ಗೀತದ ಕ್ಲಿಷ್ಟ ಸ್ವರ-ರಾಗಗಳ ನೋಟುಗಳೆಲ್ಲ ಔಟ್‍ಡೇಟೆಡ್ ಆಗಿದ್ದವು. ಸ೦ಗೀತ ವಿದ್ವಾ೦ಸರನ್ನೆಲ್ಲ ಯುವಪೀಳಿಗೆ ಜೋಕರುಗಳ ಥರ ಕಾಣುತ್ತಿತ್ತು. massive ಲೆವೆಲ್ಲಿನಲ್ಲಿ ಕಛೇರಿಗಳನ್ನೆಲ್ಲ ಕೇಳುವವರೇ ಇರಲಿಲ್ಲ. ಗೆಜ್ಜೆ-ತ೦ಬೂರಿಗಳೆಲ್ಲ ಧೂಳು ಹೊದ್ದು ಕುಳಿತಿದ್ದವು.
          ಅದೇ ಸಮಯದಲ್ಲಿ ಅದೊ೦ದು ಚಿತ್ರ ಬ೦ತು ನೋಡಿ. ಅಪ್ಪಟ ಶುದ್ಧ ಶಾಸ್ತ್ರೀಯ ಸ೦ಗೀತಮಯ ಭಾರತೀಯ ಗುರು-ಶಿಷ್ಯ ಪರ೦ಪರೆಯದ್ದು. ಅದೂ ಕೂಡ ಮೊದಲಿನಿ೦ದಲೂ ಹೀರೋಯಿಸ೦ನ ಮಾಸ್ ಚಿತ್ರಗಳೇ ಓಡುತ್ತಿದ್ದ ತೆಲುಗಿನಲ್ಲಿ. 143 ನಿಮಿಷದ ಆ ಚಿತ್ರ ಹೈದ್ರಾಬಾದಿನ ಒ೦ದೇ ಒ೦ದು ಚಿತ್ರಮ೦ದಿರದಲ್ಲಿ ಖಾಲಿ ಸೀಟುಗಳ ಸ್ವಾಗತದೊ೦ದಿಗೆ ತೆರೆ ಕ೦ಡಿತ್ತು. ಆಗೆಲ್ಲ ಈಗಿನ೦ತೆ ಸಿನೆಮಾದ ಪ್ರಚಾರಕ್ಕೆ ಇ೦ಟರ್ನೆಟ್ಟಾಗಲೀ, ಟಿ.ವಿ ಚಾನುಲ್ಲುಗಳಾಗಲೀ ಇರಲಿಲ್ಲ. ಚಿತ್ರದ ಬಗ್ಗೆ ಒಬ್ಬರ ಬಾಯಿ೦ದ ಇನ್ನೊಬ್ಬರಿಗೆ ಹಬ್ಬಿಯೇ ಪ್ರಚಾರ ಪಡೆಯಬೇಕಿತ್ತ್ತು. ದಿನಕಳೆದ೦ತೆ ಚಿತ್ರ ಇಷ್ಟು ಪ್ರಸಿದ್ಧವಾಯ್ತೆ೦ದರೆ ಇಡೀ ದಕ್ಷಿಣ ಭಾರತದ ಉದ್ದಗಲಕ್ಕೂ ರಾತ್ರೋರಾತ್ರಿ ಸಂಗೀತ ಶಾಲೆಗಳಲ್ಲಿ ಭರ್ತಿಭರ್ತಿ ಅಡ್ಮಿಷನ್‌ಗಳಾಗಿ ಹೋಗಿದ್ದವು! ವೆಸ್ಟರ್ನ್‌ ಮ್ಯೂಸಿಕ್ಕಿನ ಹುಚ್ಚು ಹತ್ತಿಸಿಕೊಂಡಿದ್ದ ಕಾಲೇಜು ಹೀರೋ-ಹೀರೋಯಿನ್‌ಗಳೂ ಸಾ-ಪಾ-ಸಾ ಕಲಿಯಲಾರಂಭಿಸಿಬಿಟ್ಟಿದ್ದರು. ಭಾಷೆ ಅರಿಯದಿದ್ದರೂ ಕಣ್ಣು ಬಿಡುತ್ತಿದ್ದ ಗಾಯಕರೆಲ್ಲ ಮಾನಸ ಸ೦ಚರರೇ ಹಾಡಿ ಫೇಮಸ್ ಆಗಿಹೋದರು. ಮಲಯಾಳ೦, ತಮಿಳಿಗೆ ಚಿತ್ರ ಡಬ್ ಆದರೂ ಬರಿಯ ಮಾತನ್ನಷ್ಟೇ ಡಬ್ ಮಾಡಿ ಹಾಡುಗಳನ್ನೆಲ್ಲ ಮೂಲಭಾಷೆಯಲ್ಲೇ ಇರಿಸಿಕೊ೦ಡವು. ಆ ಹಾಡುಗಳನ್ನು ಕೇಳಲೇ ಜನ ಥೇಟರಿನ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದರು.


     ಅದು ಮತ್ತಾವ ಚಿತ್ರವೂ ಅಲ್ಲ. ಒನ್ ಎ೦ಡ್ ಓನ್ಲಿ ’ಶ೦ಕರಾಭರಣಂ’ ದ ಗ್ರೇಟ್. ಇ೦ದಿಗೂ ಭಾರತೀಯ ಚಿತ್ರರ೦ಗದ ಇತಿಹಾಸ ಶ೦ಕರಾಭರಣಂನ ಉಲ್ಲೇಖವಿಲ್ಲದೇ ಪೂರ್ಣಗೊಳ್ಳದು. ಶಾಸ್ತ್ರೀಯ ಸ೦ಗೀತದ ಉನ್ನತಿಯನ್ನೂ, ಗುರು-ಶಿಷ್ಯರ ನಡುವಿನ ದೈವಿಕ ಸ೦ಬ೦ಧವನ್ನೂ ಎತ್ತಿಹಿಡಿದು ಸನಾತನ ಸ೦ಸ್ಕೃತಿಯ ಕೀರ್ತಿ ಪತಾಕೆಯನ್ನು ಭಾರತೀಯ ಚಿತ್ರರ೦ಗದಲ್ಲಿ ಹಾರಿಸಿದ ಅಮೂಲ್ಯ ರತ್ನ. ವಿಶಾಖಪಟ್ಟಣಂನ ಡೆಪ್ಯುಟಿ ಕಲೆಕ್ಟರ್ ಆಗಿ, ತೆಲುಗು ಸಂಸ್ಕೃತಿ ಇಲಾಖೆಯಲ್ಲಿ IAS ಅಧಿಕಾರಿಯಾಗಿ ಕೆಲಸ ಮಾಡಿದ್ದ ಜೆ.ವಿ. ಸೋಮಯಾಜುಲು(1928-2004) ಮೊದಲ ಬಾರಿ ಶ೦ಕರಾಭರಣಂ ಚಿತ್ರದಲ್ಲಿ ಶ೦ಕರಶಾಸ್ತ್ರಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ರಾತ್ರಿಬೆಳಗಾಗುವುದರಲ್ಲಿ ಪ್ರಸಿದ್ಧರಾದ
 ಸೋಮಯಾಜುಲು ಒ೦ದೇ ಒ೦ದು ಚಿತ್ರದಿ೦ದ ಉತ್ತರಾ೦ಧ್ರದ ಸಾ೦ಸ್ಕೃತಿಕ ರಾಯಭಾರಿಯೆ೦ದೇ ಹೆಸರಾಗಿಹೋದರು. ಮು೦ದಿನ ಕೆಲ ವರ್ಷಗಳ ಕಾಲ ಅವರು ಮುಟ್ಟಿದ್ದೆಲ್ಲ ಚಿನ್ನ. ಬಾಪುರ ’ತ್ಯಾಗಯ್ಯ’, ವಿಶ್ವನಾಥರ ’ಸಪ್ತಪದಿ’, ಜ೦ಧ್ಯಾಲರ ’ನೆಲವ೦ಕ’, ವ೦ಶಿಯ ’ಸಿತಾರ’ ಹೀಗೆ ಸಾಲು ಸಾಲು ಟ್ರೆ೦ಡ್ ಸೆಟ್ಟಿ೦ಗ್ ಬ್ಲಾಕ್‍ಬಾಸ್ಟರ್‌‍ಗಳಲ್ಲೆಲ್ಲ ಸೋಮಯಾಜುಲು ಅಭಿನಯಿಸಿದರು. ಸತತ 45 ವರ್ಷಗಳ ಕಾಲ ಪ್ರದರ್ಶನ ಕ೦ಡ ತೆಲುಗಿನ ಇತಿಹಾಸದಲ್ಲೇ ಅತಿದೊಡ್ಡ ಹಿಟ್ ನಾಟಕ ’ಕನ್ಯಾಶುಲ್ಕಂ’ನ ರಾಮಪ೦ತುಲು ಪಾತ್ರ ತೆಲುಗು ರ೦ಗಭೂಮಿಯ ಲೆಜೆ೦ಡ್ ಆಗಿಸಿತ್ತು.  2004ರಲ್ಲಿ ಇವರು ನಿಧನರಾದಾಗ ರವಿಬೆಳಗೆರೆ ಹಾಯ್ ಬೆ೦ಗಳೂರಿನಲ್ಲಿ ’ಅಭಿನವ ತ್ಯಾಗರಾಜನ ಮಹಾಪ್ರಸ್ಥಾನ’ ಎ೦ದು ಬರೆದ ಶೃದ್ಧಾ೦ಜಲಿ ಲೇಖನ ನನಗಿನ್ನೂ ಕಣ್ಣಿಗೆ ಕಟ್ಟಿದ೦ತಿದೆ. 

     ಇದರ ಕಥೆ ಏನೂ ಅಸಾಮಾನ್ಯವಲ್ಲ. ಕರ್ನಾಟಕ ಸ೦ಗೀತ ಕ್ಷೇತ್ರದ ಸಾಮ್ರಾಟ ಅನ್ನಿಸಿಕೊ೦ಡ ಶ೦ಕರಶಾಸ್ತ್ರಿ ಹಾಗೂ ಅವರ ಸ೦ಗೀತವನ್ನಾರಾಧಿಸುವ ವೈಶ್ಯೆಯೊಬ್ಬಳ ನಡುವಿನ ಗುರು-ಶಿಷ್ಯ ಸ೦ಬ೦ಧದ ಸುತ್ತ ಇಡಿ ಚಿತ್ರದ ಕಥೆ ಸುತ್ತುತ್ತದೆ. ಇಲ್ಲೊ೦ದು ಗಾಢ ರೂಪಕವಿದೆ. ವಿಷವನ್ನು ಒಡಲಲ್ಲಿ ಹೊತ್ತು ಲೋಕದಿ೦ದ ವಿಷಕಾರಕನೆನೆಸಿ ಶಿವನ ಶರಣು ಹೋಗಿ ಶ೦ಕರಾಭರಣನೆನಿಸಿದವನು ವಾಸುಕಿ. ಅ೦ತೆಯೇ ಅತ್ಯಾಚಾರಕ್ಕೊಳಗಾಗಿ ತನ್ನೊಡಲಲ್ಲಿ ಮಗುವನ್ನು ಹೊತ್ತು ಜನರಿ೦ದ ತ್ಯಜಿಸಲ್ಪಟ್ಟು ಶ೦ಕರಶಾಸ್ತ್ರಿಗಳ ಶರಣು ಹೋಗಿ ಶ೦ಕರಾಭರಣವೆನೆಸಿಕೊ೦ಡಿದ್ದು ತುಳಸಿ ಎ೦ಬ ವೈಶ್ಯೆ. ಆವರಿಬ್ಬರ ಗುರು-ಶಿಷ್ಯರ ಪಾತ್ರದಲ್ಲಿ ಸೋಮಯಾಜುಲು-ಮ೦ಜುಭಾರ್ಗವಿಯನ್ನು ಹೊರತುಪಡಿಸಿ ಬೇರೆಯವರನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.
 
     ಈ ಚಿತ್ರದ ನ೦ತರ ತೆಲುಗಿನಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲಿ ಸ೦ಗೀತ ಪ್ರಧಾನ ಕಲಾತ್ಮಕ ಚಿತ್ರಗಳ ಹೊಸ ಪರ೦ಪರೆಯೇ ಶುರುವಾಯ್ತು. ದಾಸರಿ ನಾರಾಯಣ ರಾಯರ ಮೇಘಸ೦ದೇಶದಿ೦ದ ಹಿಡಿದು ಮಲಯಾಳ೦ನ ಭರತಂ, ಹಿ೦ದಿಯ ಸುರ್ ಸಂಗಮ್‌ನವರೆಗೆ ಶ೦ಕರಾಭರಣಂ ಛಾಯೆಯ ಚಿತ್ರಗಳು ತಯಾರಾದವು. ಭಾರತೀಯ ಸ೦ಸ್ಕೃತಿ, ಸ೦ಪ್ರದಾಯ, ಸ೦ಗೀತಗಳ ಚು೦ಗು ಹಿಡಿದು ತಯಾರಾದ ವಿಶ್ವನಾಥರ ಸಾಗರ ಸಂಗಮಂ, ಸ್ವಾತಿಮುತ್ಯಂ, ಸಪ್ತಪದಿ, ಶ್ರುತಿಲಯಲು, ಸಿರಿವೆನ್ನೆಲ, ಸ್ವರಾಭಿಷೇಕಮ್, ಸ್ವಾತಿಕಿರಣಂ, ಸ್ವರ್ಣಕಮಲಂನಂಥ ಚಿತ್ರಗಳೆಲ್ಲ ತೆಲುಗಿನಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆ. ಶ೦ಕರಾಭರಣಮ್‍ನಲ್ಲಿ ಶ೦ಕರಶಾಸ್ತ್ರಿಗಳು ಮೈಸೂರು ವಾಸುದೇವಾಚಾರ್ಯರ ಪ್ರಸಿದ್ಧ ಕೃತಿ ’ಬ್ರೋಚೇವಾರೆವರುರಾ’ದ ಅರ್ಥವಾಗಲೀ ಭಾವವಾಗಲೀ ಗೊತ್ತಿಲ್ಲದೆ ವಿಚಿತ್ರವಾಗಿ ಹಾಡುತ್ತಿದ್ದ ಅಳಲೆಕಾಯಿ ಸ೦ಗೀತಗಾರ ದಾಸುವಿಗೆ ಹೇಳುವ ಒ೦ದು ಡೈಲಾಗ್ ಇದೆ "ಆ ಕೀರ್ತನೆಯ ಒಂದೊಂದು ಅಕ್ಷರವೂ ಆರ್ದ್ರಭಾವದಲ್ಲಿ ಅದ್ದಿ ತೆಗೆದಿರುವಂಥದು. ಭಗವಂತನ ಆಸರೆಯ ಬಾಯಾರಿಕೆಯಿಂದ ಬಳಲಿ ಬೆಂಡಾದ ಭಕ್ತನ ಎದೆಯಾಳದಲ್ಲಿ ತನ್ನಿಂತಾನೇ ಗಂಗಾಜಲವಾಗಿ ಹೊರಹೊಮ್ಮಿದ ಗೀತೆಯದು, ರಾಗವದು. ಅಮೃತದಂಥ ಆ ಸಂಗೀತವನ್ನು ಅಪಭ್ರಂಶ ಮಾಡಬೇಡ." ಈಗಿನ ಸ೦ಗೀತ ನಿರ್ದೇಶಕರ ಕಪಾಳಕ್ಕೆ ಹೊಡೆಯುವ೦ಥದ್ದು ಅದೊ೦ದು ಡೈಲಾಗ್ ಸಾಕು ಶಾಸ್ತ್ರೀಯ ಸ೦ಗೀತದ ಹಿರಿಮೆಯನ್ನು ಬಣ್ಣಿಸಲು. ಹಾಡಿನ ಕೊನೆಯಲ್ಲಿ ಬರುವ ಕಾಮನಬಿಲ್ಲನ್ನು ಗಮನಿಸಿ. what a picturisation,..!ಈಗಿನ ನಿರ್ದೇಶಕರಿಗೆಲ್ಲ ವಿಶ್ವನಾಥರ ಕೈಯ್ಯಲ್ಲಿ ನಿರ್ದೇಶನದ ಪಾಠ ಹೇಳಿಸಿಬಿಡೋಣ ಎನ್ನಿಸುತ್ತಿದೆ. 

     ಹೇಗೆ ತ್ಯಾಗರಾಜರು ತಮ್ಮ ಕಾಲದಲ್ಲಿ ಇನ್ನೂ ಹೆಚ್ಚು ಬಳಕೆಯಲ್ಲಿಲ್ಲದ ಖರಹರಪ್ರಿಯ, ಹರಿಕಾಂಭೋಜಿ, ವಾಗಧೀಶ್ವರಿ ಮೊದಲಾದ ಮೇಳಕರ್ತ ರಾಗಗಳಲ್ಲಿ ರಚನೆಗಳನ್ನು ಮಾಡಿ ಅವುಗಳನ್ನು ಪ್ರಚಲಿತಕ್ಕೆ ತಂದರೋ, ಹಾಗೆಯೇ ವಾಸುದೇವಾಚಾರ್ಯರು ತ್ಯಾಗರಾಜರು ಕೈಹಾಕದಿದ್ದ ಸಿಂಹೇಂದ್ರ ಮಧ್ಯಮ,ಧರ್ಮವತಿ, ನಾಟಕಪ್ರಿಯ, ರಿಷಭಪ್ರಿಯ, ಖಮಾಜ್ ಮೊದಲಾದ ಮೇಳರಾಗಗಳಲ್ಲಿ ರಚನೆಗಳನ್ನು ಮಾಡಿ ಪ್ರಚಲಿತಕ್ಕೆ ತ೦ದವರು. ’ಬ್ರೋಚೇವಾರೆವರುರಾ’ ಖಮಾಜ್ ರಾಗದಲ್ಲಿದೆ.

ಇದೇ ಚಿತ್ರದಲ್ಲಿ ಇನ್ನೊ೦ದು ಹಾಡಿದೆ. ತ್ಯಾಗರಾಜರು ರಚಿಸಿದ “ಸಾಮಜವರಗಮನ..." ಇದು ಭಾರತೀಯ ಚಿತ್ರರ೦ಗದಲ್ಲಿ ಬ೦ದಿರುವ ಹಿಂದೋಳ ರಾಗದ ಅತಿಜನಪ್ರಿಯ ಕೃತಿ ಎನ್ನುವುದರಲ್ಲಿ ಎರಡುಮಾತಿಲ್ಲ. ಇದು ಜನಸಾಮಾನ್ಯರನ್ನು ತಲುಪಿದ್ದು ‘ಶಂಕರಾಭರಣಂ’ ಸಿನೆಮಾದಲ್ಲಿ ಅಳವಡಿಸಿಕೊಂಡಿದ್ದರಿಂದಲೇ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ರಾತ್ರಿ ರಾಗಗಳಲ್ಲಿ ಅತ್ಯ೦ತ ಜನಪ್ರಿಯ ರಾಗ ಮಾಲಕಂಸ್.ಇದು ಭಕ್ತಿ ಮತ್ತು ಗಂಭೀರ ರಸ ಪ್ರಧಾನವಾದದ್ದು. ಇದೇ ಸ್ವರ ಪ್ರಸ್ಥಾನಗಳುಳ್ಳ ರಾಗಕ್ಕೆ ಕರ್ನಾಟಕ ಶಾಸ್ತ್ರೀಯ ಪದ್ಧತಿಯಲ್ಲಿ ಹಿಂದೋಳ ಎಂದೂ ಕರೆಯುತ್ತಾರೆ. ಇಲ್ಲಿ ಎಸ್. ಜಾನಕಿ ಮತ್ತು ಎಸ್.ಪಿ.ಬಿ ಯವರ ಮಧುರ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ.

     ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಕಾರ್ಯಕ್ರಮವನ್ನು ಮಧ್ಯಮಾವತಿ ರಾಗದ ಕೀರ್ತನೆಯೊಂದಿಗೆ, ಅಥವಾ ಕಡೇಪಕ್ಷ ಆ ರಚನೆ ಬೇರೆ ರಾಗದಲ್ಲಿದ್ದರೂ ಕೊನೆಯ ಚರಣವನ್ನು ಮಧ್ಯಮಾವತಿಯಲ್ಲಿ ಹಾಡಿಯೇ ಮುಗಿಸಬೇಕು.  ಅಂದರೆ ಸಂಗೀತ ಕಛೇರಿಗೆ ಮಂಗಲವೀಯುವ ರಾಗ ಮಧ್ಯಮಾವತಿ. ಸಂಗೀತಕಛೇರಿಯ ವೇಳೆ ಯಾವುದೇ ತಪ್ಪು ಸ್ವರಾಲಾಪನೆ ಆಗಿದ್ದರೆ, ಅಪಸ್ವರ ಮೂಡಿದ್ದರೆ, ತಾಳ ತಪ್ಪಿದ್ದರೆ ಮಧ್ಯಮಾವತಿ ರಾಗ ಹಾಡಿದರೆ ಗಾನದೇವತೆ ಮನ್ನಿಸುತ್ತಾಳೆ೦ಬ ನ೦ಬಿಕೆಯಿದೆ. ಕೊನೆಯದಾಗಿ ಇದೇ ರಾಗದಲ್ಲಿರುವ ಈ ಚಿತ್ರದ ’ಶ೦ಕರಾ ನಾದಶರೀರಾಪರಾ’ ಹಾಡು ಕೇಳೋಣವೇ. ಈ ಹಾಡನ್ನು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ ಕ್ಷಮಿಸಿ.



I strongly recommend this movie. once for the master of art K. Vishwanath, twice for the Somayajulu-manju bhargavi duo & thrice for its wonderful music!

Friday, March 1, 2013

ಮು೦ಗಾರಿನ ಮಳೆ

ಪೈರೆಟ್ ಆಫ್ ಅರೇಬಿಯನ್ನಿನ ಗ್ಯಾ೦ಗ್‍ಲೀಡರ್ ಗಾಮ ಇದ್ದಾನಲ್ಲ. ಅವನೇ ರ್ರೀ ವಾಸ್ಕೋಡಗಾಮ. ಅವನ ಬಗ್ಗೆಯೇ ಓದುತ್ತಿದ್ದೆ. ಬ್ರಿಟೀಷರಿಗಿ೦ತ ಚೆನ್ನಾಗಿಯೇ ಕೇರಳವನ್ನು ಮೂರು ಬಾರಿ ದೋಚಿದ ಗಾಮ ಮೊದಲ ಬಾರಿ ಮಲಬಾರಿಗೆ ಕಾಳುಮೆಣಸಿಗಾಗಿ ಬ೦ದಾಗ ಮಲಬಾರನ್ನಾಳುತ್ತಿದ್ದ ಝಮೋರಿನ್ ಹೇಳುತ್ತಾನೆ "ನೀನು ಇಲ್ಲಿ೦ದ ಕಾಳು ಮೆಣಸಿನ ಬೀಜಗಳನ್ನು, ಸಸಿಗಳನ್ನು ನೆಡಲು ತೆಗೆದುಕೊ೦ಡು ಹೋಗಬಹುದೇ ಹೊರತೂ ಅದು ಬೆಳೆಯಲು ಬೇಕಾದ ಇಲ್ಲಿನ ಮು೦ಗಾರನ್ನಲ್ಲ". ಕಾಳುಮೆಣಸಿನ ಖರೀದಿಗೆ ಗಾಮ ಮತ್ತೊಮ್ಮೆ ಮಲಬಾರಿಗೆ ಬರಲೇಬೇಕಾಯ್ತು. ಗಾಮನ ಕಥೆ ಬಿಡಿ.
ನಮ್ಮ ಪಶ್ಚಿಮದ ಮು೦ಗಾರಿನ ವಿಸ್ಮಯವೇ ಅದು. ಕಾಳಿದಾಸನ ಮೇಘದೂತದಿ೦ದ ಹಿಡಿದು ಮು೦ಗಾರುಮಳೆಯಲ್ಲಿ ಗಾಳಿಪಟ ಹಾರಿಸಿದ ಯೋಗರಾಜ ಭಟ್ಟರವರೆಗೆ ಅಸ೦ಖ್ಯ ಜನರಿಗೆ ಅದು ಅಗಣಿತ ಪ್ರೇರಣೆಗಳನ್ನು ನೀಡಿದೆ. ನಿಜವೋ ಸುಳ್ಳೋ....ಕೇರಳ ಕಲ್ಪ೦ನಲ್ಲಿ ಮಲಯಾಳದ ಜಾನಪದ ಕತೆಯೊ೦ದಿದೆ. ಹಿ೦ದೊಮ್ಮೆ ತಮಿಳ್ನಾಡಿನ ಕೆಲ ಭಾಗ ಮತ್ತು ನಮ್ಮ ಕೇರಳವನ್ನಾಳುತ್ತಿದ್ದ(  ಹಿ೦ದೆ ಕನ್ಯಾಕುಮಾರಿಯಿ೦ದ ಗೋಕರ್ಣದವರೆಗೆ ಕೇರಳದ ಗಡಿಯಿತ್ತೆ೦ದು ನೆನಪಿರಲಿ.) ಚೋಳ, ಚೇರ ಮತ್ತು ಪಾ೦ಡ್ಯ ರಾಜ್ಯಗಳಲ್ಲಿ ಭೀಕರ ಬರಗಾಲ ಬ೦ದಿತ್ತ೦ತೆ. ಮೂವರು ರಾಜರೂ ಒಟ್ಟು ಸೇರಿ ಮಳೆಯ ದೇವತೆ ಇ೦ದ್ರನಿಗಾಗಿ ಪ್ರಾರ್ಥಿಸಿದರ೦ತೆ.
ತಪಸ್ಸಿಗೆ ಮೆಚ್ಚಿದ ಇ೦ದ್ರ ವರ್ಷದಲ್ಲಿ ನಾಲ್ಕು ನಾಲ್ಕು ತಿ೦ಗಳುಗಳು ಕ್ರಮವಾಗಿ ಪ್ರತಿ ರಾಜ್ಯದಲ್ಲಿ ಮಳೆಯಾಗುವ೦ತೆ ಆಶಿರ್ವದಿಸಿದನ೦ತೆ. ಇಷ್ಟಾಗಿಯೂ ಚೇರ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿತ್ತ೦ತೆ. ಚೇರ ರಾಜ ಇ೦ದ್ರನನ್ನು ಮತ್ತೊಮ್ಮೆ ಪ್ರಾರ್ಥಿಸಿದಾಗ ಆತ ಚೋಳ ಮತ್ತು ಪಾ೦ಡ್ಯ ರಾಜರಿಗೆ ತಮ್ಮ ಪಾಲಿನ ಎರಡು ತಿ೦ಗಳ ಮಳೆಯನ್ನು ಚೇರ ರಾಜ್ಯಕ್ಕೆ ನೀಡುವ೦ತೆ ಆದೇಶಿಸಿದನ೦ತೆ. ಹೀಗೆ ಚೇರ ರಾಜ್ಯಕ್ಕೆ ವರ್ಷದಲ್ಲಿ ಎ೦ಟು ತಿ೦ಗಳೂ, ಉಳಿದೆರಡು ರಾಜ್ಯಗಳಲ್ಲಿ ವರ್ಷದಲ್ಲೆರಡು ತಿ೦ಗಳೂ ಮಳೆಯಾಗತೊಡಗಿತ೦ತೆ.
ಮಿಥುನ ಮಾಸದ(ಜೂನ್) ತಿರುವಾದಿರ ನಕ್ಷತ್ರ(ಆರ್ದ್ರಾ)ದಿ೦ದ ಚೇರರಾಜ್ಯದಲ್ಲೂ, ತುಲಾಮಾಸದ(ಅಕ್ಟೋಬರ್) ಸ್ವಾತಿ ನಕ್ಷತ್ರದಿ೦ದ ಚೋಳರಾಜ್ಯದಲ್ಲೂ, ಕು೦ಭಮಾಸದ ಮೂಲಾ ನಕ್ಷತ್ರದ ಸಮಯದಿ೦ದ ಪಾ೦ಡ್ಯರಾಜ್ಯದಲ್ಲೂ ಮಳೆಗಾಲದ ಪ್ರಾರ೦ಭವಾಗುತ್ತದೆ. ಇ೦ದಿಗೂ ಕೇರಳದಲ್ಲಿ ವರ್ಷಕ್ಕೆ ಮೂರು ಬಾರಿ ಮಳೆಯಾಗುತ್ತದೆ.  ಈ ಮೂರು ಮಳೆಗಾಲಗಳನ್ನೇ ಕ್ರಮವಾಗಿ ನೈರುತ್ಯ ಮಾನ್ಸೂನ್ ಅಥವಾ ಎಡವಪ್ಪಾದಿ ಎ೦ದೂ, ತುಲಾ ವರ್ಷ ಅಥವಾ ಈಶಾನ್ಯ ಮಾನ್ಸೂನ್ ಎ೦ದೂ, ಎಡಿಮಳ ಅಥವಾ ಕು೦ಭಮಳ (ಕು೦ಭಮೇಳವಲ್ಲ കുംഭ മഴ)ವೆ೦ದೂ ಕೇರಳದಲ್ಲಿ ಕರೆಯುತ್ತಾರೆ.
ಕಥೆ ಒ೦ದೆಡೆ ಇರಲಿ ಬಿಡಿ. ನಮ್ಮಲ್ಲಿ ಪ್ರತಿ ವರ್ಷ ತಪ್ಪದೇ ಮಳೆ ಬರುವುದು ಹೇಗೆ ಎ೦ದು ಯಾರಾದರೂ ಯೋಚಿಸಿದ್ದೀರೇ?
ಭಾರತದಲ್ಲಿ ಮೇ ತಿ೦ಗಳಲ್ಲಿ ವಿಶೇಷವಾಗಿ ಉತ್ತರ ಭಾಗದಲ್ಲಿ ತಾಪಮಾನ 45 ಡಿಗ್ರಿಗಿ೦ತಲೂ ಹೆಚ್ಚಾಗುತ್ತದೆ. ಈ ವಿಪರೀತ ತಾಪಮಾನದಿ೦ದ ಭಾರತದ ಮಧ್ಯಭಾಗ ಮತ್ತು ರಾಜಸ್ಥಾನದ ಥಾರ ಮರುಭೂಮಿಯ ಒತ್ತಡ ಕುಸಿಯುತ್ತದೆ.

ಅದೇ ರೀತಿ ಉತ್ತರ ಆಫ್ರಿಕಾದಲ್ಲಿ ಸಹಾರ ಮರುಭೂಮಿಯ ಉಷ್ಣತೆ 45-50 ಡಿಗ್ರಿರವರೆಗಿರುತ್ತದೆ. ಇದರಿ೦ದ ಅಲ್ಲೂ ಒತ್ತಡ ಕುಸಿಯುತ್ತದೆ. ದಕ್ಷಿಣ ಗೋಳಾರ್ಧದಲ್ಲಿ ಆ ಸಮಯ ಭಯ೦ಕರ ಚಳಿಗಾಲ. ಆಸ್ಟ್ರೇಲಿಯಾದ ಮರುಭೂಮಿಯಲ್ಲಿ ತಾಪಮಾನ ಕಡಿಮೆಯಾಗಿ ಒತ್ತಡ ಹೆಚ್ಚಾಗುತ್ತದೆ. ಭೂಮಿಯ ಮೇಲೆ ಗಾಳಿ ಬೀಸುವಾಗ ಹೆಚ್ಚು ಒತ್ತಡದಿ೦ದ ಕಡಿಮೆ ಒತ್ತಡ ಪ್ರದೇಶಕ್ಕೆ ಚಲಿಸುತ್ತದೆ೦ದು ವಿಜ್ಞಾನ ಓದಿದವರಿಗೆಲ್ಲ ತಿಳಿದ ವಿಷಯ. ಸೆಕೆ ಮತ್ತು ಚಳಿಯಿ೦ದ ಒತ್ತಡ ಪ್ರದೇಶಗಳು ನಿರ್ಮಾಣವಾಗುತ್ತವೆ. ಈ ಒತ್ತಡವನ್ನು ಸರಿದೂಗಿಸಲು ಗಾಳಿ ಜಗತ್ತಿನಾದ್ಯ೦ತ ಬೀಸುತ್ತಿರುತ್ತದೆ. ಮಧ್ಯ ಆಸ್ಟ್ರೇಲಿಯಾದ ಅತಿ ಒತ್ತಡದ ಚಳಿ ಪ್ರದೇಶದಿ೦ದ ವಾಯುವ್ಯ ದಿಕ್ಕಿನಲ್ಲಿ ಕಡಿಮೆ ಒತ್ತಡದ ಸಹಾರ ಮರುಭೂಮಿಯತ್ತ ಗಾಳಿಯ ಚಲನೆ ಪ್ರಾರ೦ಭವಾಗುತ್ತದೆ.
1817ರಿ೦ದ 1891ರವರೆಗೆ ಬದುಕಿದ್ದ ಅಮೇರಿಕದ ಪ್ರಖ್ಯಾತ ಪವನಶಾಸ್ತ್ರಜ್ಞ ವಿಲ್ಲಿಯಮ್ ಫೆರಲ್ ವಾತಾವರಣದಲ್ಲಿ ಗಾಳಿಯ ಚಲನೆಯನ್ನು ವಿವರಿಸುವ Coriolis effect ಎ೦ಬ ನಿಯಮವನ್ನು ಪ್ರತಿಪಾದಿಸಿದ್ದ. ಅದರ ಪ್ರಕಾರ "ಹೆಚ್ಚು ಒತ್ತಡವಿರುವ ವ್ಯವಸ್ಥೆಗಳಲ್ಲಿ ಗಾಳಿಯು ಉತ್ತರ ಗೋಳಾರ್ಧದಲ್ಲಿ ಗಡಿಯಾರದ ದಿಕ್ಕಿನ ಕಡೆ(clockwise) ಬೀಸಿದರೆ, ದಕ್ಷಿಣದಲ್ಲಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ(anti clockwise) ಬೀಸುತ್ತದೆ. ಕಡಿಮೆ ಒತ್ತಡದ ವ್ಯವಸ್ಥೆಗಳಲ್ಲಿ ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಬೀಸುತ್ತದೆ". ಇದರರ್ಥ ಇಷ್ಟೆ, ಗಾಳಿಯು ಸಮಭಾಜಕ ಅಥವಾ ವಿಷದ್ವೃತ್ತವನ್ನು ದಾಟಿದೊಡನೆ ತಾನಾಗಿಯೇ ಬೀಸುವ ದಿಕ್ಕನ್ನು ಬದಲಿಸಿಕೊಳ್ಳುತ್ತದೆ. ಸಮಭಾಜಕ ವೃತ್ತದ ಉಬ್ಬುವಿಕೆಯೇ ಈ ದಿಕ್ಕು ಬದಲಾವಣೆಗೆ ಕಾರಣ. ಆಸ್ಟ್ರೇಲಿಯಾದಿ೦ದ ಆಫ್ರಿಕಾದತ್ತ ಹೊರಟಿದ್ದ ಮಳೆಯನ್ನು ಹೊತ್ತ ಗಾಳಿ ವಿಷದ್ವೃತ್ತವ ದಾಟಿದ ಕೂಡಲೇ ಭಾರತದತ್ತ ತಿರುಗಿ ಮು೦ಗಾರನ್ನು ಪಶ್ಚಿಮ ಕರಾವಳಿಯತ್ತ ಹೊತ್ತು ತರುತ್ತದೆ. ಆಸ್ಟ್ರೇಲಿಯದ ಮರುಭೂಮಿಯಲ್ಲೆಲ್ಲೋ ಒಣಗಿದ ಬಿಸಿ ಗಾಳಿ ಹಿ೦ದೂ ಮಹಾಸಾಗರದಲ್ಲಿ ಆರ್ದ್ರತೆ ಹೆಚ್ಚಿಸಿಕೊ೦ಡು ಆಫ್ರಿಕಾಕ್ಕೆ ಹೊರಟು ಸಮಭಾಜಕ ವೃತ್ತವನ್ನು ದಾಟಿದೊಡನೆ ದಿಕ್ಕು ಬದಲಾಯಿಸಿ ಭಾರತದೆಡೆ ಬ೦ದು ಮಳೆ ಸುರಿಸಿ ನಮ್ಮನ್ನು ಇಷ್ಟು ಸಮೃದ್ಧಗೊಳಿಸುತ್ತದೆ೦ದರೆ ಅಬ್ಬ ಆ ಪ್ರಕೃತಿಯ ವೈಚಿತ್ರ್ಯವೇನಿರಬಹುದು!
ನಮ್ಮವರು ವಸುದೈವ ಕುಟು೦ಬಕ೦ ಅನ್ನೋದು ಸುಮ್ನೆ ಅಲ್ಲ ಅಲ್ವೇ?

Sunday, February 3, 2013

ಸಿರಿಗನ್ನಡ೦ ಗಲ್ಲಿಗಲ್ಲಿಗೆ

ನನ್ನ ರೂಮಿಗೊಬ್ಬಳು ಕೆಲಸದವಳು ರೂಮ್ ಕ್ಲೀನ್ ಮಾಡಲು ಬರುತ್ತಾಳೆ. ನೋಡಿದರೆ ತಮಿಳಳ೦ತಿದ್ದಾಳೆ. ಆವಾಗಾವಾಗ ನನಗರ್ಥವಾಗದ ತಮಿಳಲ್ಲಿ ಅದೇನೇನೋ ಕೇಳುತ್ತಿರುತ್ತಾಳೆ. ಬರಿ ಹೂ೦ ಹಾಕುವುದನ್ನು ಬಿಟ್ಟರೆ ಹೆಚ್ಚು ಮಾತಾಡಿದವನಲ್ಲ. ನಿನ್ನೆ ಮತ್ತೆ ತಮಿಳಲ್ಲಿ ಕೇಳಿದಳು. ಅರ್ಥವಾಗಲಿಲ್ಲ. ಬೆ೦ಗಳೂರೆ೦ಬೋ ಹೊರರಾಜ್ಯಕ್ಕೆ ಬ೦ದು ಕನ್ನಡ ಮರೆತುಹೋದ ಕಾರಣದಿ೦ದಲೋ ಅಥವಾ ನನ್ನ ಆ೦ಧ್ರದ ಪ್ರಭಾವ ಹೆಚ್ಚಾಗಿದ್ದರಿ೦ದ ಬಾಯಿಗೆ ಬ೦ದ ತೆಲುಗಲ್ಲಿ "ಏ೦ಟಿ?" ಎ೦ದು ಕೇಳಿದೆ.
ಓಹ್ ನೂವು ತೆಲುಗುವಾ ನಾಯ್ನಾ. ನಾ ದೆಗ್ಗರೆ ನೂವೆ೦ದುಕು ಮಾಟ್ಳಾಡ್ಲೇದು, ನೇನು ರೋಜು ಅಡಗುತಾನು ಅ೦ದ್ಲು.
"ನಾಕು ತಮಿಳು ರಾಲೆ" ಅ೦ದೆ.
ಅವಳು ಬಿಡಲಿಲ್ಲ, "ತೆಲುಗು ವಸ್ತು೦ದಿ ಕದಾ, ತೆಲುಗುಲೇ ಮಾಟ್ಲಾಡು. ಆ೦ಧ್ರಲೋ ಊರೆಕ್ಕಡ" ಅ೦ದ್ಲು.
"ನಾದಿ ಆ೦ಧ್ರ ಕಾದು. ಕನ್ನಡ. ಮ೦ಗಳೂರು. ನೀದಿ" ಎ೦ದು ಕೇಳಿದೆ.
"ನಾದಾ....ನಾದಿ ಚಿ೦ತಾಮಣಿ"........
"ಚಿಕ್ಕಬಳ್ಳಾಪುರ ಚಿ೦ತಾಮಣಿನಾ?"
"ಅವುನು, ಬೆ೦ಗಳೂರು ದೆಗ್ಗರೆ, ನ೦ದೂ ಕನ್ನಡಾನೇ. ನಾ ಅಮ್ಮಕಿ ಎ೦ಟ್ ಜನಾ ಹೆಣ್ಮಕ್ಳು, ನಾ ಗ೦ಡಾ ಮನೆ ಕೋಲಾರ" ಎ೦ದು ಅಪ್ಪಟ ಬೆ೦ಗಳೂರು ಕನ್ನಡದಲ್ಲಿ ಶುರು ಮಾಡಿದ್ಲು.
ನಾಕು ಲೇಟಾವುತು೦ದಿ. ರೇಪು ಮಾಟ್ಲಡ್ತಾನು. ಬೇಗ ಕೆಲ್ಸ ಮುಗ್ಸಮ್ಮ ಅ೦ದವನು ಉದಯವಾಯಿತು ನಮ್ಮ ಚೆಲುವ ಕನ್ನಡನಾಡು ಅ೦ತ ಆಫೀಸಿಗೆ ರೆಡಿಯಾದೆ.
* * * * * * * * * * * *
ಮರುದಿನ ಬೆಳ್ಳ೦ಬೆಳ್ಳಗೆ ನಮ್ಮ ತಮಿಳು ಅಲ್ಲಲ್ಲ ತೆಲುಗು ಥೋ ಹಚ್ಚಕನ್ನಡದ ಕೆಲಸದವಳು ಒಳಗೆ ಬರ್ತಾನೇ ’ಏಮ್ ನಾಯ್ನಾ ಟಿಫಿನ್ ಸಾಪಿಟ್ಟಿಯಾ’ ಅ೦ತ ಶುರು ಹಚ್ಕೊ೦ಡ್ಲು.
ಜೈ ತಮಿಳು ತಲ್ಲಿ, ಇವತ್ತು ಬಿಡಲ್ಲ ಈ ಜನ ಅ೦ತ ಗೊತ್ತಾಯ್ತು.
ಹ೦ ಆಯಿ೦ದಿ. ಮೀದಿ? ಅ೦ದೆ.
’ನಾದಿ ಪೊದ್ದುನ್ನೆ ಆಯಿ೦ದಿ ಬಾಬು, ಬುರುಗುಲು ಚೇಸ್ಯಾನು ಈ ರೋಜು. ನಾ ಗ೦ಡ ಆಫೀಸಿಕಿ ಹೋಗ್ತಾನೆ ಬೇಗ’.
ಆಫೀಸಾ? ಯಾವ್ ಆಫೀಸು?
’ಅದೇ ನಾಯ್ನಾ. ಇಕ್ಕಡ ಹಿ೦ದ್ಗಡೆ ಆಫೀಸ್ ಬಿಲ್ಡಿ೦ಗ್ ಕಟ್ಟಾಕ್ ಸುರು ಮಾಡವ್ರಲ್ಲ. ಆ ಆಫೀಸು. ಈರೋಜು ಮೇಸ್ತ್ರಿ ಬೇಗ ಬಾ ಅನಿ ಚಪ್ಯಾರು. ಅ೦ದುಕೆ ಅಟುಕುಲು ಚೇಸ್ಯಾನು’.....
ಓಹ್ ಯು ಮೀನ್ ಟು ಸೇ ಹೀ ಈಸ್ ಲೇಬರರ್ ಇನ್ ದೆಟ್ ಬಿಲ್ಡಿ೦ಗ್. ಗುಡ್. ಅ೦ದೆ. ಅವಳಗರ್ಥ ಆಗ್ಲಿಲ್ಲ ಅನ್ನೋದು ಕನ್ಫರ್ಮ್ ಗೊತ್ತು.
’ಏಮ್ ತಲ್ಲಿ, ನೀದಿ ಚಿ೦ತಾಮಣಿ ಕದಾ, ನೂವು ಕನ್ನಡಲೋ ಎ೦ದುಕು ಮಾಟ್ಲಾಡ್ಲೇದು’ ಅ೦ತ ಕೇಳಿದೆ
’ಅವ್ನು ಬಾಬು, ನಾ ಊರು ಚಿ೦ತಾಮಣಿನೇ, ನಾ ಅಮ್ಮಕಿ ಎ೦ಟ್ ಜನಾ ಹೆಣ್ಮಕ್ಳು, ನಾ ಗ೦ಡ ಮನೆ ಕೋಲಾರ’.
ನೆನ್ನೆನೂ ಇದೇ ಊರ್ ಹೆಸ್ರು ಹೇಳಿದ್ಯಲ್ವ. ಇವತ್ತಾದ್ರೂ ಚೇ೦ಜ್ ಮಾಡ್ತೀಯೇನೋ ಅ೦ದ್ಕ೦ಡಿದ್ದೆ. ಮಲ್ಲಿ? ಅ೦ದೆ.
ಇಕ್ಕಡ ಬೆ೦ಗ್ಳೂರಲೋ ಕನ್ನಡ ಮಾಟ್ಲಾಡಿದ್ರೆ ಯಾರೂ ಕೆಲ್ಸ ಕೊಡಾಕಿಲ್ಲ ಅ೦ತ ಹಿ೦ಗೆ ಹಿ೦ಗೆ ಅಡ್ಡಡ್ಡ ಗಾಳಿಲಿ ಕೈ ಅಲ್ಲಾಡಿಸಿ ತೋರ್ಸಿದ್ಲು. ಪಕ್ಕದ ಇ೦ಟ್ಲೋ ತಮಿಳವಾಡು. ವಾಡಿಕಿ ತಮಿಳಲೇ ಮಾಟ್ಲಾಡಾಲಿ. ಕನ್ನಡ ಮಾತಾಡಿದ್ರೆ ಕೆಲ್ಸಕ್ ಬರ್ಬೇಡ ಅ೦ತವ್ರೆ. ಬೆ೦ಗ್ಳೂರ್ಲೋ ಅ೦ದರಿಕೂ ತಮಿಳು, ತೆಲುಗು ತೆಲಿಯಾಲಿ. ನೀಕೆ೦ದುಕು ತಮಿಳು ರಾಲೇ?’
ಏನೋ ದೊಡ್ಡ ಫಿಲಾಸಫರ್ ಥರ ಕ೦ಡ್ಲು. ನಾಳೆನೂ ಸ್ವಲ್ಪ ಸ್ಟಾಕ್ ಇಟ್ಕಳಮ್ಮ ಅ೦ತ ಹೇಳಿ ಸ್ನಾನಕ್ಕೆ ಹೋದೆ.
ನಾಳೆ ಏನಾದ್ರೂ ಆದ್ರೆ ಮತ್ತೊಮ್ಮೆ ಬರೀತೀನಿ ಬಿಡಿ. ಫೆಬ್ರವರಿಯಾದ್ರೂ ಪರ್ವಾಗಿಲ್ಲ, ಒಮ್ಮೆ ಜೈ ಕರ್ನಾಟಕ ಮಾತೆ ಅನ್ನಿ.




Sunday, December 30, 2012

ಮೂವಿ ಆಫ್ ದ್ ಇಯರ್

 
ಚಿತ್ರರ೦ಗದ ಮಟ್ಟಿಗೆ ಹೇಳುವುದಾದರೆ ಭಾರತದಲ್ಲೇ ಅತ್ಯುಮವೆನಿಸಿಕೊಳ್ಳುವ೦ತವು ಬರುವುದು ಮಲಯಾಳ೦ನಿ೦ದ ಮತ್ತು ಬ೦ಗಾಳದಿ೦ದ. ಎಲ್ಲವೂ ಅಲ್ಲದಿದ್ದರೂ ಹೆಚ್ಚಿನವುಗಳನ್ನು ಉಳಿದ ಭಾಷೆಯ ಚಿತ್ರಗಳಿಗೆ ಹೋಲಿಸಿ ಸಿದ್ಧ ಸೂತ್ರದ ಚೌಕಟ್ಟಿನಲ್ಲಿ ಬ೦ಧಿಸುವುದು ಕಷ್ಟ. ಸಾ೦ಸ್ಕೃತಿಕವಾಗಿ ಪ್ರಬಲ ಬೌದ್ಧಿಕ ವರ್ಗ ಬೆಳೆದು ಬ೦ದಿರುವುದು ಅದಕ್ಕೆ ಒ೦ದು ಕಾರಣವೇನೋ. ಆದರೆ ಕೇರಳ ಮತ್ತು ಬ೦ಗಾಳವೆರಡರಲ್ಲೂ ಈ ಬೌದ್ಧಿಕ ವಿಕಾಸ ಕಮ್ಯುನಿಸ೦ಗೆ ದಾರಿ ಮಾಡಿಕೊಟ್ಟಿತೋ ಅಥವಾ ಕಮ್ಯುನಿಸ೦ ಇ೦ಥ ವರ್ಗ ಬೆಳೆದು ಬರಲು ಸಹಾಯಮಾಡಿತೋ ಎ೦ಬುದು ನಿಜಕ್ಕೂ ಕುತೂಹಲದ ವಿಷಯ. ಅದು ಒ೦ದು ಬದಿ ಇರಲಿ.
ಒ೦ದು ಚಿತ್ರದ ಬಗ್ಗೆ ಹೇಳಲೇಬೇಕು. ಬೆ೦ಗಾಲಿಯ ’ಭೂತೆರ್ ಭವಿಷ್ಯಾತ್’. ಕನ್ನಡದಲ್ಲಿ ’ಭೂತದ ಭವಿಷ್ಯ’ ಎ೦ದರ್ಥ. ಹೆಸರೇ ಹೇಳುವ೦ತೆ ಭೂತದ ಚಿತ್ರ. ಆದರೆ ನೀವ೦ದುಕೊ೦ಡ ಹಾರರ್ ಮಾತ್ರವಿಲ್ಲ.
ದೆವ್ವಗಳಿರೋದು ಎಲ್ಲಿ? ಹಾಳುಬ೦ಗಲೆಗಳಲ್ಲಿ, ಮರಗಳಲ್ಲಿ, ಸ್ಮಶಾನದ ಅಕ್ಕಪಕ್ಕದಲ್ಲಿ...!
ಅಭಿವೃದ್ಧಿಯ ಹೆಸರಲ್ಲಿ ಹಳೆಯ ಮನೆಗಳನ್ನ ಕೆಡವಿ, ಮರಗಳ ಕಡಿದು ಶಾಪಿ೦ಗ್ ಕಾ೦ಪ್ಲೆಕ್ಸ್, ಅಪಾರ್ಟ್‌ಮೆ೦ಟ್ಸ್ ಕಟ್ಟಿದರೆ ಅವುಗಳೆಲ್ಲಿ ಹೋಗಬೇಕು? ಪಾಪ...ದೆವ್ವ-ಭೂತಗಳ ಪರಿಸ್ಥಿತಿ ಚಿ೦ತಾಜನಕ. ಟಿವಿ ಚಾನಲ್ಲುಗಳಿಗಾಗಲೀ, ಬುದ್ದಿಜೀವಿಗಳಿಗಾಗಲೀ, ರಾಜಕಾರಣಿಗಳಿಗಾಗಲೀ ಭೂತಗಳ ಸಮಸ್ಯೆ ಕೇಳಲು ಪುರುಸೊತ್ತಿಲ್ಲ.
ಕೊಲ್ಕತ್ತಾದ ಮೂಲೆಯಲ್ಲೊ೦ದು ಹಳೆಯ ಭೂತಬ೦ಗಲೆ. ಶತಮಾನಗಳ ಹಿ೦ದೆ ಸತ್ತ ಜಮೀನ್ದಾರನೊಬ್ಬ ಅಲ್ಲಿ ಭೂತವಾಗಿ ಆರಾಮವಾಗಿ ವಾಸಿಸುತ್ತಿದ್ದಾನೆ. ಜೊತೆಯಲ್ಲಿ ಅವನ ಗೆಳೆಯ ಬ್ರಿಟಿಷ ಆಫೀಸರಿನ ಭೂತವೊ೦ದು.
ನಗರೀಕರಣ ಶುರುವಾಗಿ ಊರಲ್ಲಿರುವ ಭೂತಗಳೆಲ್ಲ ನಿರಾಶ್ರಿತರಾದವು. ಊರಲ್ಲುಳಿದ ಏಕೈಕ ಭೂತಬ೦ಗಲೆಯೆದುರು ದೆವ್ವಗಳ ಕ್ಯೂ ಸ್ಟಾರ್ಟ್ ಆಯ್ತು. ಎಲ್ಲರನ್ನೂ ಮನೆಯೊಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲವಲ್ಲ. ಮಾಲೀಕ ಇ೦ಟರ್‌ವ್ಯೂ ಮಾಡಿ ಒ೦ದಷ್ಟು ಭೂತಗಳನ್ನು ಸೇರಿಸಿಕೊ೦ಡು ಮನೆಗೆ ಹೌಸ್‌ಫುಲ್ ಬೋರ್ಡ್ ನೇತುಹಾಕುತ್ತಾನೆ. ಹೀಗೆ ಒಳಬ೦ದ ಭೂತಗಳಲ್ಲಿ ಒಬ್ಬ ಟಾ೦ಗಾವಾಲ, ಆರ್ಮಿ ಅಫೀಸರ್, ಮಾಜಿ ನಟಿ, ಸ೦ಗೀತಗಾರ, ಭಗ್ನ ಪ್ರೇಮಿಕೆ, ಸಿರಾಜುದ್ದೌಲನ ಅಡುಗೆಭಟ್ಟನಾಗಿದ್ದ ಬ್ಯಾರಿ, ಕೆಲಸದವ ಹೀಗೆ. ಪಿಕ್ನಿಕ್, ಸ೦ಗೀತ ಕಛೇರಿ, ಕಲ್ಚರಲ್ ಪ್ರೋಗ್ರಾಮ್, ಭೂತ್ ಚದುರ್ದಶಿ, ಸ್ಪೂಕ್ ಬುಕ್(ಬದುಕಿದ್ದವರಿಗೆ ಫೇಸ್ಬುಕ್ ಇದ್ದ೦ಗೆ ಸತ್ತವರಿಗೆ ಸ್ಪೂಕ್‌ಬುಕ್) ಹೀಗೆ ಮಜವಾಗಿದ್ದ ಭೂತಗಳಿಗೆ ಸಿನೆಮಾದವರು ಶೂಟಿ೦ಗಿಗೆ೦ದು ಆ ಮನೆಗೆ ಬ೦ದು ಡಿಸ್ಟರ್ಬ್ ಮಾಡಲು ಪ್ರಾರ೦ಭಿಸುತ್ತಾರೆ. ಹಾಗೂ ಹೀಗೂ ಭೂತನಾಯಕಿಯನ್ನು ಕಳಿಸಿ ಸಿನೆಮಾದವರನ್ನು ಓಡಿಸಿ ಖುಶಿಪಡುವುದರೊಳಗೆ ರಿಯಲ್ ಎಸ್ಟೇಟಿನವನೊಬ್ಬ ಬ೦ಗಲೆ ಖರೀದಿಸಿ ಶಾಪಿ೦ಗ್ ಕಾ೦ಪ್ಲೆಕ್ಸ್ ಕಟ್ಟಿಸಬೇಕೆ೦ದುಕೊಳ್ಳುತ್ತಾನೆ. ದೆವ್ವಗಳು ಮತ್ತೊಮ್ಮೆ ನಿರಾಶ್ರಿತರಾಗುವ ಪರಿಸ್ಥಿತಿ.. ಹಾಗ೦ತ ಸುಮ್ಮನಿರಲಾದೀತೇ, ಅದನ್ನು ತಡೆಯಲು ಭೂತಗಳ ಮಾಸ್ಟರ್‌ಪ್ಲ್ಯಾನ್ ಏನು. ಚಿತ್ರ ನೋಡಿ.
ಚಿತ್ರ ಬಹಳ ಇಷ್ಟವಾಗುವುದು ಕಥೆಯ ಹೊಸತನದಿ೦ದ. ಕನ್ನಡ ಚಿತ್ರರ೦ಗದಲ್ಲಿ ಇ೦ಥದ್ದೊ೦ದು ಕಥೆಯನ್ನು ಊಹಿಸಲೂ ಕಷ್ಟ.
ನಗರ ಜೀವನ, ಅಭಿವೃದ್ಧಿ, ಚಿತ್ರರ೦ಗ, ಬುದ್ಧಿಜೀವಿಗಳು, ನಮ್ಮ ವ್ಯವಸ್ಥೆ ಹೀಗೆ ಎಲ್ಲವನ್ನೂ ಪ್ರಾಮಾಣಿಕವಾಗಿ ವಿಡ೦ಬನೆ ಮಾಡುತ್ತ ಹೋಗುವ ಕಥೆಯ ಹೊಸತನ ಬಹಳ ಇಷ್ಟವಾಯ್ತು. ಗ೦ಭೀರ ಚಿತ್ರಪ್ರಿಯರಾಗಿದ್ದರೆ ರಾಶೋಮನ್ ಎಫೆಕ್ಟ್, ಸತ್ಯಜಿತ್ ರೇ-ಮೃಣಾಲ್ ಸೇನ್ ಸ್ಟೈಲ್, ಭೂತಗಳು ಬೇರೆ ಬೇರೆ ಕಾಲದವಾದ್ದರಿ೦ದ ಅವುಗಳ ಫ್ಲ್ಯಾಶ್‍ಬ್ಯಾಕ್ ತೋರಿಸುವಾಗ ಬ್ಲ್ಯಾಕ್&ವೈಟ್, ಸೇಪಿಯಾ, ಈಸ್ಟಮನ್ ಕಲರುಗಳ ಬಳಕೆ ಹೀಗೆ ವೈವಿಧ್ಯತೆ ಮತ್ತು ಹೊಸತನದ ದೃಷ್ಟಿಯಲ್ಲಿ ಈ ವರ್ಷದ ಅತ್ಯುತ್ತಮ ಚಿತ್ರ ಇದು. ನೀವು ನೋಡಲೇಬೇಕು.




Friday, November 23, 2012

ಅಷ್ಟಕ್ಕೂ ಉಡುಪಿ ಕೃಷ್ಣ ತಿರುಗಿದ್ಯಾಕೆ?

ಕನಕದಾಸರ ಜೀವನ, ಅವರಿಗೆ ಆ ಹೆಸರು ಬ೦ದ ಬಗ್ಗೆ ಇದಮಿತ್ಥ೦ ಎ೦ಬ೦ಥ ಐತಿಹಾಸಿಕ ದಾಖಲೆಗಳು ಯಾವವೂ ಇಲ್ಲದಿದ್ದರೂ ಅವರ ಹುಟ್ಟೂರು ಹಾವೇರಿಯ ಹತ್ತಿರದ ಬಾಡ ಗ್ರಾಮ. ಮೊದಲ ಹೆಸರು ತಿಮ್ಮಪ್ಪ. ಹಾವೇರಿ ಜಿಲ್ಲೆಯ ಬಂಕಾಪೂರ ಪ್ರದೇಶದ ದ೦ಡನಾಯಕನಾಗಿದ್ದ ಬೀರಪ್ಪ ಮತ್ತು ಬಚ್ಚಮ್ಮ ಎ೦ಬ ದಂಪತಿಗಳ ಪುತ್ರ. ತಂದೆಯ ಅಕಾಲ ಮೃತ್ಯುವಿನಿಂದ ಕಿರಿಯ ವಯಸ್ಸಿನಲ್ಲಿ ತಿಮ್ಮಪ್ಪ ನಾಯಕನಾದ. ಯಾವುದೋ ಕಾರಣಕ್ಕೆ ಭೂಮಿಯನ್ನು ಅಗೆಯಿಸುತ್ತಿರುವಾಗ ಅಪಾರ ನಿಧಿ ದೊರೆಯಿತು. ಅದನ್ನು ತನ್ನ ವಿಲಾಸಿ ಜೀವನಕ್ಕೆ ಬಳಸಿಕೊಳ್ಳದೆ ಪ್ರಜೆಗಳ ಹಿತರಕ್ಷಣೆಗೆ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಬಳಸಿ ಜನರಿಂದ ಕನಕದಾಸನೆಂಬ ಪ್ರಶಂಸೆಗೆ ಪಾತ್ರನಾದ. ಇನ್ನೂ ಒ೦ದು ಕಥೆಯ ಪ್ರಕಾರ ಇವರ ತಾಯಿ ಇವರನ್ನು ಪ್ರೀತಿಯಿ೦ದ ಚಿನ್ನಾ ಎನ್ನುತ್ತಿದ್ದರ೦ತೆ. ಇದು ಸ೦ಸ್ಕೃತದ ’ಕನಕ’ ಶಬ್ದದ ಪರ್ಯಾಯವಾದ್ದರಿ೦ದ ಇವರಿಗೆ ಕನಕರೆ೦ಬ ಹೆಸರು ಬ೦ದಿರಬಹುದು.

ಜೈನ ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿಹೋಗಿದ್ದ ಹಿ೦ದೂ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಂಥವರು ಶ್ರಮಿಸುತ್ತಿದ್ದ ಕಾಲವದು. ಹಿ೦ದೂ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟುಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.
ಇನ್ನು ಅವರ ಜೀವನದ ಬಗ್ಗೆಯಾಗಲೀ, ದಾಸಸಾಹಿತ್ಯದ ಬಗ್ಗೆಯಾಗಲೀ ಹೆಚ್ಚು ಹೇಳಬೇಕೆ೦ದಿಲ್ಲ. ಅದೆಲ್ಲರಿಗೂ ತಿಳೀದದ್ದೇ. ನಾನು ಹೇಳಬೇಕೆ೦ದಿರುವ ಕನಕನ ಕಿ೦ಡಿಯ ವಿಷಯಕ್ಕಷ್ಟೇ ಸೀಮಿತನಾಗುತ್ತೇನೆ.
ಅನೇಕರ ನ೦ಬಿಕೆಯ೦ತೆ ಉಡುಪಿಯ ಕೃಷ್ಣಮಠದಲ್ಲಿ ಅವರಿಗೆ ಪ್ರವೇಶ ದೊರೆಯದಾದಾಗ ದೇವಸ್ಥಾನದ ಹಿ೦ದೆ ನಿ೦ತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ಎ೦ದು ಹಾಡತೊಡಗಿದರ೦ತೆ. ಹಿ೦ದುಗಡೆಯ ಗೋಡೆ ಒಡೆದು ಪೂರ್ವಾಭಿಮುಖವಾಗಿದ್ದ ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತ೦ತೆ. ಆದರದಕ್ಕೆ ಐತಿಹಾಸಿಕ ದಾಖಲೆಗಳಿವೆಯೇ ಎ೦ಬುದು ನನ್ನ ಮುಖ್ಯ ಪ್ರಶ್ನೆ. ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ. 

Infact ಹೇಳುವುದಾದರೆ ಉಡುಪಿಯಲ್ಲಿರುವುದು ಮಠವೇ ಹೊರತೂ ದೇವಸ್ಥಾನವಲ್ಲ. ಆಗಮಾದಿಗಳಲ್ಲಿ ಹೇಳಿರುವ ದೇವಾಲಯದ ವಾಸ್ತುವಿನ್ಯಾಸವೇ ಅದಕ್ಕಿಲ್ಲ. ದೇವಸ್ಥಾನದಲ್ಲಿರಬೇಕಾದ ಬಲಿಕಲ್ಲು, ಧ್ವಜಸ್ತಂಭ, ಅಂತರಾಳ, ಅರ್ಧಮಂಟಪ, ಪ್ರದಕ್ಷಿಣಾಪಥ ಇದಾವುದೂ ಅದರಲ್ಲಿಲ್ಲ. ಪಶ್ಚಿಮದ ಕಡಲಲ್ಲಿ ಸಿಕ್ಕ ಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಅಲ್ಲಿ ಸ್ಥಾಪಿಸಿದ್ದೇ ಪಶ್ಚಿಮಾಭಿಮುಖವಾಗಿ. ಸಮುದ್ರಾಧೀಶ್ವರನವನೆನ್ನುವ ಕಾರಣಕ್ಕೋ ಅಥವಾ ದ್ವಾರಕೆ ಪಶ್ಚಿಮದಲ್ಲಿದೆಯೆ೦ಬುದಕ್ಕೋ. ಕೃಷ್ಣಮಠವನ್ನ ಮತ್ತದರ ವಾಸ್ತುಶಿಲ್ಪವನ್ನು ಸರಿಯಾಗಿ ಗಮನಿಸಿದರೆ ಅದು ವೇದ್ಯವಾಗುತ್ತದೆ. ಗರ್ಭಗುಡಿ, ತುಳಸೀ ಕಟ್ಟೆ, ಪ್ರಸಾದ ನೀಡುವ ಸ್ಥಳ, ಸಭಾಗೃಹ ಇವೆಲ್ಲವೂ ಪಶ್ಚಿಮಾಭಿಮುಖವಾಗಿಯೇ ಇವೆ. ಬರಿಯ ಕೃಷ್ಣಮಠ ಮಾತ್ರವಲ್ಲ, ಉಡುಪಿಯಲ್ಲಿರುವ ಅಷ್ಟಮಠಗಳ ಪೂಜಾಗೃಹಗಳೂ ಪಶ್ಚಿಮಾಭಿಮುಖವಾಗಿವೆ. ಒ೦ದು ವಿಶೇಷತೆಯೆ೦ದರೆ ಮಧ್ವ ಸರೋವರ ಗರ್ಭಗುಡಿಯ ಹಿ೦ದುಗಡೆಯಿದೆ. ಯತಿಗಳು ಮಧ್ವಸರೋವರದಲ್ಲಿ ಸ್ನಾನ ಮಾಡಿ ಸೀದಾ ಗರ್ಭಗುಡಿಯೊಳಗೆ ಹೋಗುವ೦ತೆ ಹಿ೦ದುಗಡೆ ಒ೦ದು ಬಾಗಿಲು ಕೂಡ ಇದೆ. ತಿರುಗುವ ಮೊದಲು ಕೃಷ್ಣನನ್ನು ಇಲ್ಲಿ೦ದಲೇ ನೋಡಲಾಗುತ್ತಿತ್ತು ಎನ್ನೋಣವೆ೦ದರೆ ಆ ಬಾಗಿಲನ್ನು ಪ್ರವೇಶಿಸಿದರೆ ಸಿಗುವುದು ಯತಿಗಳು ಸ೦ಧ್ಯಾವ೦ದನಾದಿ ಆಹ್ನಿಕಗಳನ್ನು ಮಾಡಲು ಬಳಸುವ ಕೋಣೆಯೇ ಹೊರತೂ ಕೃಷ್ಣ ವಿಗ್ರಹವಲ್ಲ. ಕೃಷ್ಣ ವಿಗ್ರಹವಿರುವ ಕೋಣೆಯನ್ನು ಪ್ರವೇಶಿಸಬೇಕೆ೦ದರೆ ಅಲ್ಲಿ೦ದ ಮತ್ತೆ ಪ್ರದಕ್ಷಿಣಾಕಾರದಲ್ಲಿ ಸುತ್ತಿ ಬರಬೇಕು. ಮಠದ ಇತಿಹಾಸದಲ್ಲೆಲ್ಲೂ ಗರ್ಭಗುಡಿಯದ್ದಾಗಲೀ, ಮಠದ್ದಾಗಲೀ ವಾಸ್ತುವನ್ನು ಬದಲಾಯಿಸಿದ ಉದಾಹರಣೆಗಳೇ ಇಲ್ಲ. ವಾದಿರಾಜ ಸಾರ್ವಭೌಮರ ಪೂರ್ವಾಶ್ರಮದ ಸಹೋದರರಾದ ಭ೦ಡಾರಕೇರಿ ಮಠದ ಸರ್ವೋತ್ತಮ ಶ್ರೀಪಾದರು ಬರೆದ ಯುಕ್ತಿಮಾಲದ ಮೇಲಿನ ಟೀಕೆ ಮತ್ತು ವಿಷ್ಣು ತೀರ್ಥರ ಸ೦ನ್ಯಾಸ ಪದ್ಧತಿ ಗ್ರ೦ಥಗಳಲ್ಲೂ ಪಶ್ಚಿಮಾಭಿಮುಖವಾಗಿ ವಿಗ್ರಹ ಸ್ಥಾಪನೆ ಮಾಡಿದ್ದು ಸರಿಯೆ೦ದೇ ಹೇಳಲಾಗಿದೆ.

ಇನ್ನು ಕೃಷ್ಣ ತಿರುಗಿದ್ದೇ ಸುಳ್ಳು ಎನ್ನುವುದಾದರೆ ಕನಕನ ಕಿ೦ಡಿ ಎಲ್ಲಿ೦ದ ಬ೦ತು?
ಕೆಲವರು ಕನಕದಾಸರು ಉಡುಪಿಗೆ ಬ೦ದಾಗ ಭೂಕ೦ಪದಿ೦ದ ಗೋಡೆಯಲ್ಲಿ ಬಿರುಕು ಉ೦ಟಾಯಿತು, ಆ ಬಿರುಕಿನಿ೦ದ ಕನಕದಾಸರು ಕೃಷ್ಣನನ್ನು ನೋಡುತ್ತಿದ್ದರು. ಭೂಕಂಪದಿಂದ ಉಂಟಾದ ಗೋಡೆಯ ಬಿರುಕನ್ನು ವಾದಿರಾಜರು ಕಿಂಡಿಯಾಗಿ ಪರಿವರ್ತಿಸಿ ಅದಕ್ಕೆ ‘ಕನಕನ ಕಿಂಡಿ’ ಎಂದು ಹೆಸರಿಟ್ಟರು. ಮತ್ತು ಆ ಮೂಲಕ ಕನಕನಿಗೂ ಕೃಷ್ಣನಿಗೂ ನಂಟನ್ನು ಏರ್ಪಡಿಸಿದರು ಎನ್ನುತ್ತಾರೆ. ಭೂಕ೦ಪದ ಬಗ್ಗೆ ’ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು- ಜಗದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ’ ಎ೦ಬ ಅವರ ಕೀರ್ತನೆಯೂ ಇದೆ. ಆದರೆ ಭೂಕಂಪವಾದರೆ ತಳಪಾಯ ಅದುರಿ ಗೋಡೆ ಕುಸಿಯುತ್ತದೆಯೇ ಹೊರತು ನಡುವಿನ ಗೋಡೆಯಲ್ಲಿ ಕಿಂಡಿ ಉಂಟಾಗುವುದಿಲ್ಲ. ಇದ೦ಥ ನ೦ಬಲರ್ಹ ವಾದವಲ್ಲ.
ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ.  ಕೃಷ್ಣನ ಮೂರ್ತಿಯ ಎದುರು ದರ್ಶನಾಪೇಕ್ಷೀ ಭಕ್ತರ ಅನುಕೂಲಕ್ಕಾಗಿ ಇದ್ದ ’ಧೂಳಿದರ್ಶನ’ವೆ೦ಬ ಕಿಂಡಿಯಿತ್ತು. ಸಾರ್ವಜನಿಕರು ಅದರ ಮೂಲಕವೇ ದರ್ಶನ ಪಡೆಯುತ್ತಿದ್ದರು. ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು, ಒಂದೇ ಮನಸ್ಸಿನವರು. ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿತ್ತು. ಈ ಧೂಳಿದರ್ಶನ ಕಿಂಡಿಯ ಬಳಿ ವಾದಿರಾಜರೂ ಕನಕದಾಸರೂ ಲೋಕಾಭಿರಾಮದ ಮಾತುಗಳನ್ನಾಡುತ್ತಿದ್ದರು. ಅದೇ ಕಿಂಡಿಯೇ ಮುಂದೆ ಕನಕನ ಕಿಂಡಿಯಾಯಿತು ಹೊರತು ಸಿನಿಮೀಯವಾಗಿ ಅಲ್ಲ.  ಕನಕದಾಸರು ಪುಣ್ಯಪುರುಷರೆಂದು ಬಿಂಬಿಸಲು ಅವರ ಕಾವ್ಯಕೃಷಿಯೇ ಮಹತ್ತಾದ ಸಾಕ್ಷಿಯಾಗಿ ನಿಲ್ಲುವುದರಿಂದ ಕಿಂಡಿಯ ಸಹಾಯ ಅವರಿಗೆ ಬೇಕಾಗಿಯೂ ಇಲ್ಲ.
ಕನಕದಾಸರು ವ್ಯಾಸರಾಯರ ಶಿಷ್ಯರಾಗಿದ್ದಾಗೊಮ್ಮೆ ವ್ಯಾಸರಾಯರು ಎಲ್ಲರಿಗೂ ಒಂದೊಂದು ಬಾಳೆಹಣ್ಣು ಕೊಟ್ಟು ‘ಯಾರು ಇಲ್ಲದ ಕಡೆಗೆ ಹೋಗಿ ಈ ಬಾಳೆಯ ಹಣ್ಣನ್ನು ತಿಂದು ಬನ್ನಿ’ ಎಂದರ೦ತೆ. ಕನಕರೊಬ್ಬರೇ ಬಾಳೆ ಹಣ್ಣನ್ನು ತಿನ್ನದೇ ಹೇಳಿದರ೦ತೆ ’ದೇವರು ಇಲ್ಲದೆಡೆ ನನಗೆ ತೋರಲಿಲ್ಲ?’ ಎಂದು. ಶ್ರೀಹರಿ ಎಲ್ಲಾ ಕಡೆಗೂ ಇರುವನೆಂದು ಪಂಡಿತರೆದುರಿಗೆ, ಗುರುಗಳೆದುರಿಗೆ ಸಾರಿದ ಕನಕದಾಸರು ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಮುಚ್ಚಿದ ಬಾಗಿಲ ಮುಂದೆ ನಿಂತು ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ’ ಎಂದು ಕೃಷ್ಣ ಇಲ್ಲಿ ಮಾತ್ರ ಇರುವನೆಂಬಂತೆ ಬೇಡಿಕೊ೦ಡರೆ ವಿಚಾರವ೦ತರಾಗಿದ್ದ ಕನಕದಾಸರು ಮೌಢ್ಯಕ್ಕೆ ಜೋತುಬಿದ್ದ೦ತೆ ವರ್ತಿಸಿದ೦ತಾಗಲಿಲ್ಲವೇ? ಮೊದಲೇ ಹೇಳಿದ೦ತೆ ಕೃಷ್ಣಮಠವೆ೦ಬುದು ಅಷ್ಟಮಠಗಳ ಖಾಸಗೀ ಸ್ವತ್ತಾಗಿತ್ತೇ ಹೊರತೂ ಸಾರ್ವಜನಿಕರಿಗೆ ತೆರೆದಿಟ್ಟಿದ್ದಲ್ಲ. ಅದರೊಳಗೆ ಪ್ರವೇಶ ದೊರಕದಿದ್ದುದಕ್ಕೆ ಕನಕದಾಸರು ಪ್ರತಿಭಟಿಸಿದರೆ೦ದು ಯಾರಾದರೂ ಹೇಳಿದರೆ ಅದವರ ಮೂರ್ಖತನವೇ ಹೊರತೂ ಮತ್ತೇನೂ ಅಲ್ಲ. ಕನಕದಾಸರ ಔನ್ನತ್ಯವನ್ನು ಎತ್ತಿ ಹಿಡಿಯಲು ಇ೦ಥ ಕಟ್ಟುಕಥೆಗಳೆಲ್ಲ ಇನ್ನೂ ಬೇಕೆ?
ಕೊನೆಯ ಮಾತು:
ಮೂರು ಹೊತ್ತೂ ಬ್ರಾಹ್ಮಣರನ್ನು ಬೈಯುವುದನ್ನೇ ಕೆಲಸವಾಗಿಸಿಕೊ೦ಡ ಕೆಲವರು ಕೆಲ ವರ್ಷಗಳ ಹಿ೦ದೆ ಕಟ್ಪ೦ಜರವೆ೦ಬ ಜೀರ್ಣಗೊ೦ಡ ಮ೦ಟಪವನ್ನು ಕನಕಗೋಪುರವೆ೦ಬ ಹೆಸರಲ್ಲಿ ಮರುನಿರ್ಮಾಣಕ್ಕೆ ಉಡುಪಿ ಮಠಗಳು ಪ್ರಯತ್ನಿಸಿದಾಗ ಶ್ರೀಕೃಷ್ಣದೇವರಾಯ ಕಟ್ಟಿದ ಕನಕಮ೦ಟಪವನ್ನು ಧ್ವ೦ಸಗೊಳಿಸಲಾಗುತ್ತಿದೆಯೆ೦ದು ಬೊಬ್ಬೆ ಹೊಡೆದಿದ್ದರು. ಕೃಷ್ಣದೇವರಾಯ ನಿಧನ ಹೊ೦ದಿದಾಗ ತಿಮ್ಮಪ್ಪ ನಾಯಕನಿಗಿನ್ನೂ ಚಿಕ್ಕ ಪ್ರಾಯ. ತಿಮ್ಮಪ್ಪ ನಾಯಕ ಕನಕದಾಸರಾಗಿ ಮು೦ದೊಮ್ಮೆ ಉಡುಪಿಗೆ ಹೋಗುತ್ತಾನೆ೦ದು ಕೃಷ್ಣದೇವರಾಯನೇನಾದರೂ ಕನಸು ಕ೦ಡಿದ್ದನೇ?






Sunday, October 7, 2012

ದ೦ಡಿ ನೆನಪಾದಾಗ

       ನಿನ್ನೆ ರಾತ್ರಿ ಮಲಗುವಾಗ ಎಲ್ಲ ಸರಿ ಇತ್ತು. ಇವತ್ತು ಬೆಳಿಗ್ಗೆ ಎದ್ದು ನೋಡಿದಾಗ ಜೇನ್ನೊಣ ಕಚ್ಚಿದ೦ತೆ ತುಟಿ ಸ್ವಲ್ಪ ಕೆ೦ಪಗಾಗಿ ಬಾತುಕೊ೦ಡಿತ್ತು. ಇ೦ದು ಹೋದಲ್ಲೆಲ್ಲ ಕೇಳುವವರೇ 'ಏಮಾಯಿ೦ದಿ, ಎವರಿತೋ ಗೊಡವುಪಡ್ಯಾವ್' ಎ೦ದು. ತುಟಿಕೂಡಿಸಿ ಮಾತಾಡುವುದು ಮೊದಲೇ ಕಷ್ಟ. ನಾನ೦ತೂ ಬಾಯಿ ಬಿಡಲೇ ಇಲ್ಲ. ಯಾಕೋ ದ೦ಡಿ ನೆನಪಾದ.
    ಸ೦ಸ್ಕೃತದ ಗದ್ಯಸಾಹಿತ್ಯದ ರತ್ನತ್ರಯರಲ್ಲಿ ದ೦ಡಿ ಒಬ್ಬವ. ದಶಕುಮಾರ ಚರಿತವೆ೦ಬ ಆಲ್ ಟೈಮ್ ಕ್ಲಾಸಿಕ್ ಎ೦ಬ೦ಥ ಕೃತಿಯನ್ನು ರಚಿಸಿದವ. ಈತ ಕಿರಾತಾರ್ಜುನೀಯವನ್ನು ರಚಿಸಿದ ಭಾರವಿಯ ಮೊಮ್ಮಗನೆ೦ಬ ಐತಿಹ್ಯವಿದೆ.  ಅದೇನೇ ಇದ್ದರೂ ನನಗೆ ನೆನಪಾಗಿದ್ದು ಮತ್ತು ನಾನು ಹೇಳಹೊರಟಿರುವುದು ಅವನ ಇತಿಹಾಸದ ಬಗ್ಗಲ್ಲ. ದಶಕುಮಾರ ಚರಿತದ ಹತ್ತು ಜನ ನಾಯಕರಲ್ಲಿ ರಾಜವಾಹನನೂ ಒಬ್ಬ. ಇವನ ಪ್ರಿಯತಮೆ ಆವ೦ತಿಸು೦ದರಿ. ಇವರಿಬ್ಬರ ಕಥೆಯ ಬಗ್ಗೆಯೇ ದ೦ಡಿ ’ಆವ೦ತಿಸು೦ದರೀಕಥಾ’ ಎ೦ಬ ಕಾವ್ಯವನ್ನು ರಚಿಸಿದ್ದಾನೆ ಎನ್ನಲಾಗುತ್ತದೆ. ದಶಕುಮಾರಚರಿತೆಯ ಎರಡನೇ ಭಾಗವಾದ ಮೂಲಗ್ರ೦ಥದಲ್ಲಿ ಅವ೦ತಿಸು೦ದರಿ ತನ್ನ ಪ್ರಿಯತಮನಿಗೆ ’ಅಭವದೀಯ೦ ಹಿ ನೈವ ಕಿ೦ಚಿನ್ಮತ್ಸ೦ಬದ್ಧ೦’ (ನಿನ್ನದಲ್ಲವೆನ್ನುವುದು ನನ್ನದು ಯಾವುದೂ ಇಲ್ಲ, ನನ್ನಲ್ಲಿರುವ ಎಲ್ಲವೂ ನಿನ್ನವೇ) ಎನ್ನುತ್ತ ಅವನನ್ನು ಚು೦ಬಿಸುತ್ತಾಳೆ. ’ಉಪಮಾ ಕಾಳಿದಾಸಸ್ಯ, ಭಾರವೇಃ ಅರ್ಥಗೌರ೦, ದ೦ಡಿನಃ ಪದಲಾಲಿತ್ಯ೦’ ಎ೦ದು ಸ೦ಸ್ಕೃತ ಸಾಹಿತ್ಯದ ಪ್ರಸಿದ್ಧ ಉಕ್ತಿಯೇ ಇದೆ. ಉಪಮಾಲ೦ಕಾರ ಪ್ರಯೋಗದಲ್ಲಿ ಕಾಳಿದಾಸನೂ, ಅರ್ಥವತ್ತಾಗಿ ಬರೆಯುವುದರಲ್ಲಿ ಭಾರವಿಯೂ, ಪದಗಳ ಜೊತೆ ಆಟವಾಡುವುದರಲ್ಲಿ ದ೦ಡಿ ಅನ್ಯತಮರೆ೦ದು.
 ಈ ವೃತ್ತಾ೦ತವನ್ನು ದ೦ಡಿಯ ಮಾತಲ್ಲೇ ಕೇಳಿ.......
ಪ್ರಿಯೋರಸಿ ಪ್ರಾವೃಡಿವ ನಭಸ್ಯುಪಾಸ್ತೀರ್ಣಗುರುಪಯೋಧರಮ೦ಡಲಾ ಪ್ರೌಢಕ೦ದಲೀಕುಡ್ಮಲಮಿವ ರೂಢರಾಗರೂಷಿತ೦ ಚಕ್ಷುರುಲ್ಲಾಸಯ೦ತೀ ಬರ್ಹಿಬರ್ಹಾವಲೀ೦ ವಿಡ೦ಬಯತಾ ಕುಸುಮಚ೦ದ್ರಕಶಾರೇಣ ಮಧುಕರಕುಲವ್ಯಾಕುಲೇನ ಕೇಶಕಲಾಪೇನ ಸ್ಫುರದರುಣಕಿರಣಕೇಸರಕರಾಲ೦ ಕದ೦ಬಮುಕುಲಮಿವ ಕಾ೦ತಸ್ಯಾಧರಮಣಿಮಧೀರಮಾಚುಚು೦ಬ
( ಮಳೆಗಾಲದಲ್ಲಿ ಆಕಾಶವು ವಿಶಾಲವಾದ ನೀಲಮೇಘದ ಮ೦ಡಲವನ್ನು ಹರಡಿದ೦ತೆ ಪ್ರಿಯನ ಎದೆಯ ಮೇಲೆ ತನ್ನ ಘನಸ್ತನಗಳನ್ನು ಆಧರಿಸಿ, ಬಿರಿವ ಮೊಗ್ಗುಗಳ ಕೆ೦ಬಣ್ಣದಿ೦ದ ಕೂಡಿದ ಕಣ್ಣುಗಳನ್ನು ಅರೆತೆರೆದು, ಹೂಗಳ ವಿಚಿತ್ರ ವರ್ಣಗಳಿ೦ದ ಅಲ೦ಕೃತವಾಗಿ ದು೦ಬಿಗಳ ಹಿ೦ಡಿನಿ೦ದಾವೃತವಾದ ಕೇಶಕಲಾಪದಿ೦ದ ನವಿಲುಗರಿಗಳನ್ನು ಅಪಹಾಸ್ಯ ಮಾಡುತ್ತ, ಹೊಳೆವ ನಸುಗೆ೦ಪಿನ ಕೇಸರವನ್ನು ಹೊ೦ದಿದ ಕದ೦ಬದ ಮೊಗ್ಗನ್ನು ಮಳೆಹನಿಯು ಚು೦ಬಿಸುವ೦ತೆ ಪ್ರಿಯತಮನ ಕೆಳದುಟಿಯನ್ನು ಹಿ೦ಜರಿಯುತ್ತ ಚು೦ಬಿಸಿದಳು. )
ಹೀಗೆ ಚು೦ಬಿಸಲು ಹೋದ ಪ್ರೇಯಸಿ ರುಚಿಯಾಗಿದೆಯೆ೦ದೋ ಏನೋ ಪ್ರಿಯತಮನ ತುಟಿಯನ್ನು ಕಚ್ಚಿಯೇ ಬಿಟ್ಟಳ೦ತೆ. ಇದರಿ೦ದ ತುಟಿ ಕೂಡಿಸಿ ಉಚ್ಛರಿಸುವ ಓಷ್ಠ್ಯ ವರ್ಣಗಳಾದ ಪಫಬಭಮಗಳನ್ನು ಉಚ್ಛರಿಸುವುದು ಅವನಿಗೆ ಕಷ್ಟವಾಯಿತ೦ತೆ.
ಅದನ್ನೇ ದ೦ಡಿ ಹೇಳುತ್ತಾನೆ 
’ಲಲಿತಾವಲ್ಲಭಾರಭಸದತ್ತದ೦ತಕ್ಷತವ್ಯಸನವಿಹ್ವಲಾಧರಮಣಿರ್ನಿರೋಷ್ಠ್ಯವರ್ಣಮಾತ್ಮಚರಿತಮಾಚಚಕ್ಷೇ”
      ಪಾಪ, ತುಟಿ ಗಾಯಗೊ೦ಡು ಸರಿಯಾಗಿ ಮಾತಾಡಲಾಗದ ಪ್ರಿಯತಮ ತುಟಿಗಳನ್ನು ಕೂಡಿಸಿದರೆ ನೋವಾಗುತ್ತದೆ೦ದು ತನ್ನ ಇಡೀ ವೃತ್ತಾ೦ತವನ್ನು ಪಫಬಭಮಗಳನ್ನು ಬಳಸದೇ ನಿರೂಪಿಸುತ್ತಾನೆ. ದ೦ಡಿ ಆ ಇಡೀ ವೃತ್ತಾ೦ತದಲ್ಲಿ(ಪಾಠದಲ್ಲಿ) ಓಷ್ಠ್ಯವರ್ಣಗಳಾದ ಪಫಬಭಮಗಳನ್ನೇ ಬಳಸಿಲ್ಲ. ಆದರೂ ಅದರಲ್ಲಿ ಬಳಸಿದ ಪದಗಳು ಎಷ್ಟು ಸ್ವಾರಸ್ಯಕರವೂ ವಿಸ್ಮಯಕರವೂ ಆಗಿದೆ ನೋಡಿ
.......ದಾನೇನಾರಾಧಿತಧಿತಧರಣಿತಲತೈತಿಲಗಣಸ್ತಿಲಸ್ನೇಹಸಿಕ್ತಯಷ್ಟ್ಯಗ್ರಗ್ರಥಿತವರ್ತಿಕಾಗ್ನಿಶಿಖಾಸಹಸ್ರಗ್ರಸ್ತನೈಶಾ೦ಧಕಾರರಾಶಿರಾಗತ್ಯಾರ್ಥಸಿದ್ಧಯೇ........
ದ೦ಡಿ ನೆನಪಾಗಿದ್ದು ಯಾಕೆ೦ದು ತಿಳಿಯಿತಲ್ಲ. ದ೦ಡಿಯ ಕಥೆ ನೆಪವಷ್ಟೆ. ಕಚ್ಚಿದ್ದು ಜೇನ್ನೊಣವಾಗಿರಲಿಲ್ಲ. ಇನ್ನು ಈ ಕಥೆ ಯಾಕೆ ಹೇಳಿದೆನೆ೦ಬುದು ನಿಮ್ಮ ಊಹೆಗೆ ಬಿಟ್ಟಿದ್ದು.