Pages

Friday, March 21, 2014

ರಾಮಾಯಣದ ಪ್ರಕ್ಷೇಪಗಳು

     
     ವಿದ್ವನ್ಮಿತ್ರರಾದ ಶ್ರೀನಿವಾಸರ ರಾಮಾಯಣದ ಪ್ರಕ್ಷೇಪಭಾಗಗಳ ಬಗೆಗಿನ ಜಿಜ್ಞಾಸೆಗೆ ಬಗ್ಗೆ ನನಗೆ ತಿಳಿದ ಕೆಲ ಮಾಹಿತಿಗಳನ್ನು ನೀಡುತ್ತಿದ್ದೇನೆ. ಲಂಕೆಯ ಕುರಿತು ಬರೆದ ಲೇಖನದಲ್ಲಿ ಅದರ ಸ್ಥಳವಿರಬಹುದಾದ ಒಂದು ಸಾಧ್ಯತೆಯನ್ನಷ್ಟೇ ನಾನು ಹೇಳಿದ್ದು. ಒಪ್ಪಲೇ ಬೇಕೆಂಬ ಆಗ್ರಹದಿಂದಲ್ಲ. ಇತಿಹಾಸವನ್ನು ವಿಜ್ಞಾನದಂತೆ output  ತೋರಿಸಿ ಸಮರ್ಥಿಸಲಾಗದು. ಕಾವ್ಯ ಅಥವಾ ಇತಿಹಾಸ ರಚನೆಗೊಂಡ ಕಾಲದ ಭೌಗೋಳಿಕ, ಸಾಂಸ್ಕೃತಿಕ ವಲಯಗಳನ್ನು ವಿಶ್ಲೇಷಿಸಿಯೇ ಸರಿ ತಪ್ಪುಗಳ ವಿವೇಚನೆಗೆ ಬರಬೇಕಷ್ಟೆ. ಆ ವಿಧಾನ ಇತಿಹಾಸಕಾರರಿಂದ ಇತಿಹಾಸಕಾರರಿಗೆ, ವಿದ್ವಾಂಸರಿಂದ ವಿದ್ವಾಂಸರಿಗೆ ಬದಲಾಗಬಹುದು. ರಸಗ್ರಾಹಿಯಾಗಿದ್ದರೆ ರಾಮಾಯಣವನ್ನು ಕಾವ್ಯವಾಗಿ ಆಸ್ವಾದಿಸಿ. ಆಸ್ತಿಕರಾಗಿದ್ದಲ್ಲಿ ಪುರಾಣವಾಗಿ ಪೂಜಿಸಿ. ರಾಮಾಯಣ ನಡೆದ ಘಟನೆ ಎಂಬ ಇತಿಹಾಸದ ದೃಷ್ಟಿಯಿಂದ ನೋಡುವುದಾದರೆ ಅದರಲ್ಲಿರುವ ಘಟನೆಗಳನ್ನು ವೈಚಾರಿಕ(ಎಡಪಂಥೀಯ ಬುದ್ಧಿಜೀವಿಗಳ ವೈಚಾರಿಕತೆಯಲ್ಲ) ನೆಲೆಗಟ್ಟಿನಲ್ಲಿ ವಿಶ್ಲೇಷಿಸಬೇಕಾಗಿದೆ.
    ಸಂಧ್ಯಾವಂದನೆಗೆ ಸಾವಿರ ಪಾಠವಂತೆ. ನಾನಾಗಲೇ ಹೇಳಿದಂತೆ ರಾಮಾಯಣದಲ್ಲಿ ಮೂರು ಪಾಠಕ್ರಮಗಳಿವೆ. ನಮ್ಮ ಕಡೆ ಹೆಚ್ಚು ಪ್ರಚಲಿತದಲ್ಲಿರುವುದು ದಾಕ್ಷಿಣಾತ್ಯ ಪಾಠಕ್ರಮ. ಮೂಲ ದಾಕ್ಷಿಣಾತ್ಯ ಪಾಠಕ್ಕಾಗಿ ’ಮದ್ರಾಸಿನ ನಿರ್ಣಯಸಾಗರ ಮುದ್ರಣ, ದ್ವಿತೀಯ ಸಂಸ್ಕರಣ, ೧೯೦೨’ ನೋಡಿ. ಪಾಶ್ಚಿಮೋತ್ತರೀಯವನ್ನು ಲಾಹೋರಿನ ದಯಾನಂದ ಮಹಾವಿದ್ಯಾಲಯದವರು ಪ್ರಕಟಿಸಿದ್ದಾರೆ. ಗೌಡೀಯ ಮೂಲಪಾಠ ಕಲ್ಕತ್ತಾದ ಸಂಸ್ಕೃತ ಗ್ರಂಥಮಾಲೆಯಲ್ಲಿ ಪ್ರಕಟವಾಗಿದೆ. ಗೌಡೀಯ ಮತ್ತು ಪಶ್ಚಿಮೋತ್ತರೀಯಗಳು ಹೆಚ್ಚು ನಿಕಟ. ದಾಕ್ಷಿಣಾತ್ಯದಲ್ಲಿ ಉಳಿದವುಗಳಿಗಿಂತ ಹೆಚ್ಚು ಪ್ರಕ್ಷೇಪಿತ ಭಾಗಗಳು ಸೇರಿಕೊಂಡಿವೆ. (ಮೂರೂ ಪಾಠಕ್ರಮಗಳಿಗಾಗಿ ನೋಡಿ: Bulcke: The Three Recensions of the Ramayana, Journal of Oriental Research, madras, vol XVII) ಇನ್ನು ಮೂಲರಾಮಾಯಣದ ಪ್ರಕ್ಷೇಪಭಾಗಗಳ ಬಗ್ಗೆ ಹೇಳುವುದಾದರೆ ಮೂರೂ ಪಾಠಾಂತರಗಳ ತುಲನೆಯಿಂದ, ಕಾಂಡಗಳ ಶೈಲಿಗಿರುವ ಮಹದಂತರದಿಂದ ಉತ್ತರಕಾಂಡವು ನಂತರ ಸೇರಿಸಲ್ಪಟ್ಟದ್ದೆಂದು ನಿಸ್ಸಂಶಯವಾಗಿ ಹೇಳಬಹುದು. ಉತ್ತರ ರಾಮಚರಿತದಿಂದ ತಿಲಕ ವ್ಯಾಖ್ಯಾನದವರೆಗೆ ಎಲ್ಲವೂ ಇದನ್ನು ಪ್ರಕ್ಷೇಪಭೂಯಿಷ್ಟವೆಂದೇ ಹೇಳಿವೆ. ಸೀತೆಯು ವೇದವತಿಯಾಗಿದ್ದಳೆಂಬ ಅಂಶ, ರಾಮನು ಅವತಾರ ಪುರುಷನೆಂಬ ಕಲ್ಪನೆ ಇಲ್ಲಿ ಮಾತ್ರ ಬರುವಂಥದ್ದು. ಯುದ್ಧಕಾಂಡದ ಕೊನೆಗೆ ’ಇತಿ ರಾಮಾಯಣಮಿದಂ ಕೃತ್ಸ್ನಂ’ ಎಂಬ ಫಲಶ್ರುತಿಯಿರುವುದು ಕಾವ್ಯ ಮುಗಿಯುವುದನ್ನು ಸೂಚಿಸುತ್ತದೆ. ಇನ್ನು ಬಾಲಕಾಂಡದ ಹೆಚ್ಚಿನಂಶ ಪ್ರಕ್ಷೇಪವೆಂಬ ವಾದಕ್ಕೆ ಮೂಲಕಾರಣವೆಂದರೆ ರಾಮಾಯಣದ ಮೊದಲ ಅನುಕ್ರಮಣಿಕೆಯಲ್ಲಿ ಬಾಲಕಾಂಡದ ಕಥೆಯೇ ಇಲ್ಲ. ಬಾಲಕಾಂಡದ ಶೈಲಿಯೂ ಉತ್ತರಕಾಂಡದ ಶೈಲಿಯೂ ಪರಸ್ಪರ ಹೋಲಿಕೆಯಾಗುವುದರಿಂದ, ಸಗರ, ವಿಶ್ವಾಮಿತ್ರ, ಸಮುದ್ರಮಥನದಂಥ ಮುಖ್ಯ ಕಥೆಗೆ ಸಂಬಂಧವಿಲ್ಲದ ಪೌರಾಣಿಕ ಶೈಲಿಯಲ್ಲಿ ರಚಿತವಾದ ಉಪಕಥೆಗಳಿರುವುದರಿಂದ ಇವು ಮುಂದೆಲ್ಲೋ ಸೇರಿದವೆನ್ನಬಹುದು(ನೋಡಿ: Lesny V: Gepraege des Balakanada ZDMG, Vol XXVII pp 497). ಅಯೋಧ್ಯಾವರ್ಣನೆ(೫-೭), ರಾಮನ ಜನ್ಮ ಮತ್ತು ಬಾಲ್ಯ(೧೮-೩೧), ವಿವಾಹ(೬೬-೭೩) ಇಷ್ಟು ಸರ್ಗಗಳು ಪೂರ್ವರೂಪವೆಂದೂ ಉಳಿದ ಕಥಾನಕಗಳೆಲ್ಲ ಅನಂತರ ಕಾಲದವೆಂದೂ ತಿಳಿಯುತ್ತಾರೆ.  ಲಕ್ಷ್ಮಣನ ಮದುವೆಯ ವಿಷಯದಲ್ಲಿ ಪರಸ್ಪರ ವಿರುದ್ಧ ವಿಷಯಗಳು ಬೇರೆ ಬೇರೆ ಕಾಂಡದಲ್ಲಿ ಕಂಡುಬರುವುದರ ಬಗ್ಗೆ ತಿಳಿಸಿದ್ದೆ. ಜೊತೆಗೆ ಅಯೋಧ್ಯಕಾಂಡದಲ್ಲಿ ಭರತ ಬಾಲ್ಯದಲ್ಲೇ ಸೋದರಮಾವನ ಮನೆಗೆ ಹೋಗಿ ದಶರಥನ ಮರಣದವರೆಗೂ ಅಲ್ಲೇ ಇದ್ದನೆಂದರೆ(II 8-28) ಬಾಲಕಾಂಡದಲ್ಲಿ ಭರತ ಅಯೋಧ್ಯೆಯಲ್ಲಿದ್ದಂತೆಯೂ, ಮಿಥಿಲೆಯಲ್ಲಿ ಮದುವೆಯಾಗುವ ವರ್ಣನೆಗಳಿವೆ. ಜೊತೆಗೆ ರಾಮಾಯಣದ ೨ನೇ ಸರ್ಗದ ಕೊನೆಯಲ್ಲಿ "ರಘುವರಚರಿತಂ ಮುನಿಪ್ರಣೀತಂ ದಶಶಿರಸಶ್ಚ ವಧಂ ನಿಶಾಮಯಧ್ವಂ " ಎಂದಿರುವುದರಿಮ್ದ ವಾಲ್ಮೀಕಿಯು ಕಥೆಯನ್ನು ಅಯೋಧ್ಯಾವರ್ಣನೆಯಿಂದ ಪ್ರಾರಂಭಿಸಿರಬೇಕೆಂದೂ, ವಾಲ್ಮೀಕಿಯಿಂದ ರಚಿಸಲ್ಪಟ್ಟ ಕಾವ್ಯವನ್ನು ನೀವೆಲ್ಲರೂ ಕೇಳಿ ಎಂಬ ಸಂಬೋಧನಾರ್ಥವು ತೋರುವುದರಿಂದ ವಾಲ್ಮೀಕಿಯ ಶಿಷ್ಯರಲ್ಲಿ ಯಾವನೋ ಒಬ್ಬ ರಾಮಾಯಣವನ್ನು ಗುರುಮುಖವಾಗಿ ಕೇಳಿ ಅದನ್ನು ಜನರಿಗೆ ತಿಳಿಸಲು ಕೆಲ ಸರ್ಗಗಳನ್ನು ಬರೆದು ಸೇರಿಸಿರಬೇಕೆಂದೂ ಗ್ರಹಿಕೆ. ಹಾಗಲ್ಲದೇ ವಾಲ್ಮೀಕಿಯೇ ಬರೆದುದಾಗಿದ್ದರೆ ’ಮುನಿಪ್ರಣೀತಂ’ ಎನ್ನಬೇಕಾದ ಅವಶ್ಯಕತೆಯಿರಲಿಲ್ಲ. ಅದರೊಟ್ಟಿಗೆ ವಾಲ್ಮೀಕಿಯ ಕಾಲದಲ್ಲಿ ರಾಮಾಯಣದ ಕಥೆ ಪ್ರಸಿದ್ಧವಾಗಿತ್ತು
ಕೃತ್ಸ್ನಂ ರಾಮಾಯಣಂ ಕಾವ್ಯಂ ಗಾಯತಾಂ ಪರಮಾ ಮುದಾ |
ಋಷಿಬಾಟೇಷು ಪುಣ್ಯೇಷು ಬ್ರಾಹ್ಮಣಾವಸಥೇಷು ಚ |
ರಥ್ಯಾಸು ರಾಜಮಾರ್ಗೇಷು ಪಾರ್ಥಿವಾನಾಂ ಗೃಹೇಷು ಚ||

ರಾಮಾಯಣ ಕಾಲದಲ್ಲೇ ಋಷಿವಾಟ, ಬ್ರಾಹ್ಮಣಗೃಹ, ರಸ್ತೆ ರಾಜಮಾರ್ಗಗಳಲ್ಲಿ ಇದನ್ನು ಹಾಡುತ್ತಿದ್ದರಂತೆ. ರಾಮಾಯಣದ ಪ್ರಚಾರ ದೇಶಾದ್ಯಂತ ಇದ್ದುದರಿಂದ ಬಾಯಿಂದ ಬಾಯಿಗೆ ಹೋಗುವಾಗ ಮೂಲಪಾಠದಲ್ಲಿ ಎಷ್ಟೆಷ್ಟೋ ವ್ಯತ್ಯಾಸಗಳು ಕಳೆದ ಎರಡುಮೂರು ಸಾವಿರ ವರ್ಷಗಳಲ್ಲುಂಟಾಗಿರುವುದು ಸಹಜ. ಆರ್.ಸಿ.ಮಜುಮ್ದಾರ್, ಎಚ್,ಡಿ,ಸಂಕಾಲಿಯಾ, ಪಿ.ವಿ.ಕಾಣೆ, ಆನಂದ ಗುರುಗೆ, ಪಿ.ಸಿ.ಸೇನ್ ಗುಪ್ತಾ ಮುಂತಾದ ಸುಪ್ರಸಿದ್ಧ ಇತಿಹಾಸಕಾರರ ಪ್ರಕಾರ(ವೆಬರ್ ಮತ್ತು ಜಾಕೋಬಿಯಂಥ ಎಡಪಂಥೀಯ ಇತಿಹಾಸಕಾರರ ವಾದಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದೇನೆ) ಮೊದಲು ಅಯೋಧ್ಯೆ, ಕಿಷ್ಕಿಂಧೆ, ಲಂಕೆಯ ಸುತ್ತ ಹೆಣೆದ ಹಾಡುಗಬ್ಬಗಳಿದ್ದವು. ಎರಡನೇಯದಾಗಿ ವಾಲ್ಮೀಕಿ ಅವುಗಳನ್ನೊಟ್ಟುಗೂಡಿಸಿ ಕಾವ್ಯರಚನೆ ಮಾಡಿದ. ಮೂರನೇಯದಾಗಿ ಅದು ಕಾಂಡಗಳಾಗಿ ವಿಂಗಡಿಸಲ್ಪಟ್ಟಿತು. ನಾಲ್ಕನೇಯದಾಗಿ ಭೌಗೋಳಿಕ ಮತ್ತು ಅತಿಮಾನುಷ ಪ್ರಕ್ಷೇಪಗಳು ಕಾಣಿಸಿಕೊಂಡವು.ಅಂತಿಮವಾಗಿ ಬಾಲಕಾಂಡದ ಐತಿಹ್ಯ ಮತ್ತು ಉತ್ತರಕಾಂಡವನ್ನು ಸೇರಿಸಲಾಯಿತು.
     ವಿದ್ವಾಂಸರ ಪ್ರಕಾರ ರಾಮಾಯಣದ ಹೆಚ್ಚಿನ ಪ್ರಕ್ಷೇಪಗಳಿಗೆ ಕಾರಣ ರಾಮನು ಅವತಾರವೆಂಬ ಕಲ್ಪನೆ ಬೆಳೆದುಬಂದಿದ್ದು(ನೋಡಿ: ಪಿ.ವಿ.ಕಾಣೆ, History of Dharmashastra, Vol II) ಶಥಪಥಬ್ರಾಹ್ಮಣ(I .VIII . 1. 1, VII . v.I.5, XIV I. 2. 11), ತೈತ್ತರೀಯ ಬ್ರಾಹ್ಮಣ(I.I.3.5), ಕಾಠಕಸಂಹಿತಾ ಮಾತ್ರವಲ್ಲ ಸ್ವತಃ ರಾಮಾಯಣದ ಅಯೋಧ್ಯಾಕಾಂಡದ ೧೧೦ನೇ ಶ್ಲೋಕದಲ್ಲೂ ಬ್ರಹ್ಮನ ಅವತಾರಗಳ ಕಲ್ಪನೆಯಿದೆಯೇ ಹೊರತೂ ವಿಷ್ಣುವಿನದ್ದಲ್ಲ. ಬ್ರಹ್ಮನೇ ಮತ್ಸ್ಯ, ಕೂರ್ಮ, ವರಾಹಾವತಾರಗಳನ್ನು ತಳೆದನೆಂಬ ಶ್ಲೋಕವನ್ನು ಗಮನಿಸಿ
ತತಃ ಸಮಭವದ್ ಬ್ರಹ್ಮಾ ಸ್ವಯಂಭೂರ್ದೈವತೈಃ ಸಹ |
ಸ ವರಾಹಸ್ತೋ ಭೂತ್ವಾ ಪ್ರೋಜ್ಜಹಾರ ವಸುಂಧರಾ ||

ಪ್ರಾಯಶಃ ಮಹಾಭಾರತೋತ್ತರ ಕಾಲದಲ್ಲಿ ಕೃಷ್ಣನನ್ನು ವಿಷ್ಣುವಿನ ಜೊತೆ ಕಲ್ಪಿಸಿಕೊಂಡು ಕೃಷ್ಣಾವತಾರವೆಂದಂತೆ ರಾಮಾವತಾರದ ಕಲ್ಪನೆಯೂ ಹರಡಿರಬೇಕು. ಅದರ ಪರಿಣಾಮವೇ ರಾಮಾಯಣದುದ್ದಕ್ಕೂ ಪ್ರಕ್ಷೇಪಗಳುಂಟಾದುದು. ಅದೇ ರೀತಿ ಬುದ್ಧನ ಅವತಾರ ಕಲ್ಪನೆ ಬರುವುದು ಸಾವಿರದೈನೂರು ವರ್ಷದ ಹಿಂದೆ ರಚಿತವಾದ ಭಾಗವತದಲ್ಲಿ ಮಾತ್ರ. ಅವತಾರ ವರ್ಣನೆ ಬರುವ ಬಾಲಕಾಂಡದ ಪುತ್ರಕಾಮೇಷ್ಟಿ(ಸರ್ಗ ೧೫,೧೮) ಮತ್ತು ಪರಶುರಾಮನು ರಾಮನನ್ನು ವಿಷ್ಣುವೆನ್ನುವುದು(೭೬, ೧೭-೧೯) ಪ್ರಕ್ಷಿಪ್ತ ಭಾಗಗಳು. ಉಳಿದೆಡೆ ರಾಮನನ್ನು ’ವಿಷ್ಣುನಾ ಸದೃಶೋ ವೀರ್ಯೇ’ ಎಂದಿದೆಯೇ ಹೊರತೂ ಅವತಾರವೆಂದಲ್ಲ. ಕೊನೆಯ ಭಾಗದಲ್ಲಿ ’ರಾಮೋ ರಾಜ್ಯಮುಪಾಸಿತ್ವಾ ಬ್ರಹ್ಮಲೋಕಂ ಪ್ರಯಾಸ್ಯತಿ’ ಎಂದಿದಿಯೇ ಹೊರತೂ ವೈಕುಂಠಕ್ಕೆ ತೆರಳಿದನಂತಲ್ಲ. ಅಯೋಧ್ಯಾಕಾಂಡದ ಮೊದಲ ೩೫ ಶ್ಲೋಕಗಳು ಪ್ರಕ್ಷಿಪ್ತವೆಂದು ವಿದ್ವಾಂಸರ ಅಭಿಪ್ರಾಯ. ದಕ್ಷಿಣಾತ್ಯದ ಅರಣ್ಯಕಾಂಡದಲ್ಲಿ ರಾಮನನ್ನು ’ದೇವವರ’ ಎಂದರೆ, ಕಿಷ್ಕಿಂಧಾಕಾಂಡದಲ್ಲಿ ಅವತಾರದ ಮಾತಿಲ್ಲ. ಮತ್ತದೇ ದಾಕ್ಷಿಣಾತ್ಯದಲ್ಲಿ ಹನುಮಂತನು ರಾಮನನ್ನು ’ವಿಷ್ಣುತುಲ್ಯ ಪರಾಕ್ರಮ, ಸರ್ವಲೋಕೇಶ್ವರ, ಲೋಕನಾಥ’ ಎನ್ನುತ್ತಾನೆ. ಇಂಥ ಅವತಾರಗಳ ವರ್ಣನೆಯೂ ಒಂದು ಪಾಠದಲ್ಲಿ ಕಂಡುಬಂದರೆ ಮತ್ತೊಂದರಲ್ಲಿರುವುದಿಲ್ಲ. ಇದೇ ರೀತಿ ಯುದ್ಧಕಾಂಡದಲ್ಲಿ ಬರುವ ೫೯ನೇ ಸರ್ಗ, ಮಂಡೋದರೀವಿಲಾಪ, ದೇವತಾಪ್ರಶಂಸೆ, ಆದಿತ್ಯ ಹೃದಯದ ಉಪದೇಶಗಳು ಒಂದರಲ್ಲಿದ್ದರೆ ಇನ್ನೊಂದರಲ್ಲಿಲ್ಲ. ರಾವಣನು ಮಾರೀಚನಲ್ಲಿ ಬರುವ ವರ್ನನೆ (III-31-35) ಮೂರೂ ಪಾಠಕ್ರಮಗಳಲ್ಲುಲ್ಲೇಖವಾಗಿಲ್ಲ. ಕೆಲ ಪ್ರಕ್ಷೇಪರೂಪಗಳು ಕಾಳಿದಾಸ, ಮಹಾಭಾರತದ ಕೆಲ ಸರ್ಗಗಳ ವೇಳೆಗಾಗಲೇ ಪ್ರಸಿದ್ಧವಾಗಿದ್ದರಿಂದ ಅವುಗಳ ಪ್ರಾಚೀನತೆಯನ್ನು ಊಹಿಸಬಹುದು. ಇಷ್ಟೆಲ್ಲ ಪ್ರಕ್ಷೇಪಗಳು ಸೇರಬೇಕಾದರೆ ನಾಲ್ಕೈದು ನೂರು ವರ್ಷಗಳಾದರೂ ಕಳೆದಿರಬಹುದು. ಆದರೂ ಇದು ಕ್ರಿ.ಪೂ ಒಂದನೇ ಶತಮಾನಕ್ಕೀಚೆಗಿನದ್ದಲ್ಲ.(ರಾಮಾಯಣ ಕಾಲನಿರ್ಣಯಕ್ಕಾಗಿ ನೋಡಿ: (i)H.Jakobi: ದಶ ರಾಮಾಯಣp 100; (ii). M Winternitz: History of Indian Literature Vol I p 500,517; (iv). C Vaidya: The Riddle of Ramayana, (v).The age of Ramayana , J.R.A.S 1915) ರಾಮಾಯಣದ ಕಥಾವೃತ್ತಾಂತ ವೈದಿಕ ಸಾಹಿತ್ಯ, ಪಾಣಿನಿ ಸೂತ್ರಗಳಲ್ಲಿ ಬರುವುದಿಲ್ಲ. ಹಾಗೆಂದು ಭಾರತದ ಮೂಲಕಥೆ ಬರುತ್ತದೆ. ರಾಮಾಯಣ ಕಥಾನಾಯಕರ ಸ್ವಭಾವ ಭಾರತದ ಮುಖ್ಯವೀರರ ಸ್ವಭಾವಕ್ಕಿಂತ ಹೆಚ್ಚು ಸುಸಂಸ್ಕೃತವೆಂದು ಪಾಶ್ಚಾತ್ಯ ಇತಿಹಾಸಕಾರರ ಅಭಿಪ್ರಾಯ. ಮಾನವರೊಡನೆ ವಾನರರೂ ರಾಕ್ಷಸರೂ ಭಾರತದಲ್ಲಿ ವಾಸಿಸುತ್ತಿದ್ದ ಕಾಲದ ರಾಮಾಯಣವು ತ್ರೇತಾಯುಗದ ಕಥೆ. ಮಹಾಭಾರತವು ದ್ವಾಪರದ ಕೊನೆಯ ಕಥೆ. ಸಂಸ್ಕೃತಿಯು ಯುಗದಿಂದ ಯುಗಕ್ಕೆ ವಿಕಸಿತಗೊಳ್ಳುವುದೆಂದು ಪಾಶ್ಚಾತ್ಯರು ಭಾವಿಸಿದ್ದರೆ ಹ್ರಾಸಗೊಳ್ಳುವುದೆಂದು ನಮ್ಮ ಪುರಾಣಗಳು ಹೇಳುತ್ತವೆ. ಪ್ರಕ್ಷೇಪಗಳನ್ನು ಬಿಟ್ಟುಬಿಟ್ಟರೆ ರಾಮಾಯಣದ ಮೂಲಕಥೆ ದಿವ್ಯಕಥೆಯಲ್ಲ. ಅದು ಒಂದು ರಾಜಪರಿವಾರದ ಸಾಂಸಾರಿಕ ಚಿತ್ರಣ. ಪೂರ್ವದಿಂದ ನಡೆದು ಬಂದ ಧರ್ಮಕ್ಕೂ ಸನ್ನಿವೇಶದ ವೈಪರೀತ್ಯಕ್ಕೂ ನಡೆವ ಘರ್ಷಣೆ. ರಾಜನ ಧರ್ಮದ ವ್ಯಾಪ್ತಿ ವೈಯಕ್ತಿಕತೆಯನ್ನು ದಾಟಿ ಸಾರ್ವತ್ರಿಕತೆಯನ್ನು ಪಡೆವ ಬಗೆ. ಮಾನವೀಯ ಸ್ವಾರಸ್ಯದ ಜೊತೆ ವಿಶಾಲವಾದ ಧ್ಯೇಯಗಳ ಸಮಾಗಮ. ಅದು ದೇವರಲ್ಲದ ಒಬ್ಬ ಆದರ್ಶ ಮಾನವನ ಕಥೆ. ಅಲ್ಲಿ ರಾಮನೇ ಕೇಂದ್ರ ಅವನ ಕಷ್ಟ-ಸುಖಗಳು, ಅವನ ಆದರ್ಶಗಳು, ಅವನ ಕೃತಿಗಳು, ಧರ್ಮನಿರತ ರಾಮನ ವಿಜಯ, ಅಧರ್ಮದ ಪರಾಭವ. ಅಲ್ಲಿ ಒಂದು ಅನಾದೃಶ್ಯ ಏಕಸೂತ್ರತೆಯಿದೆ, ಕವಿಪ್ರತಿಭೆಯ ಕೈವಾಡವಿದೆ, ಸಾಮಾನ್ಯ ಘಟನೆಗಳನ್ನೇ ತೆಗೆದುಕೊಂಡು ಹೃದಯಂಗಮವಾಗಿ, ರಸಮಯವಾಗಿ ವರ್ಣಿಸಿದ ವಾಲ್ಮೀಕಿಯ ಕಾವ್ಯಕಲೆ ಅಬ್ಬ ಅದೊಂದು ಅದ್ಭುತ. ರಾಮ, ಲಕ್ಷ್ಮಣ, ಸೀತೆ, ಹನುಮಂತ ಮುಂತಾದ ಪಾತ್ರಗಳನ್ನು ಪವಾಡಪುರುಷರನ್ನಾಗಿಸಿ, ದೇವಾಂಶಸಂಭೂತರನ್ನಾಗಿಸಿ ಮಾಡಿ ಧರ್ಮದ ಶೃದ್ಧೆಯನ್ನು ಹೆಚ್ಚಿಸುವಂತೆ ಹಲವಾರು ಅತಿಮಾನುಷ ಕಥೆಗಳನ್ನು ಸೇರಿಸಿದ್ದು ಮುಂದಿನ ಕವಿಗಳೇ ಹೊರತೂ ಆದಿಕವಿಯಲ್ಲ. ಆದಿಕಾವ್ಯವನ್ನು ಅಲೌಕಿಕವೆಂದು ತಿಳಿದರೆ ಅದನ್ನು ವಿಮರ್ಶೆಗೊಳಪಡಿಸಬೇಕಾದ ಅಗತ್ಯವಿಲ್ಲ. ಲೌಕಿಕವೆಂದೂ ಇತಿಹಾಸವೆಂದೂ ತಿಳಿದರೆ ಅದರ ಕಾವ್ಯವಿಮರ್ಶೆಗೊಳಪಡಿಸಿದರೆ ಅದರ ಕಳೆ ಹೆಚ್ಚುವುದೇ ಹೊರತೂ ಕಡಿಮೆಯಾಗುವುದಿಲ್ಲ. ಪುರಾಣಗಳ ನೀರಸತೆಗೂ ಕಾವ್ಯಗಳ ಸ್ವಾರಸ್ಯಕ್ಕೂ ಇರುವ ವ್ಯತ್ಯಾಸವೇ ಅದು. ಅಗ್ನಿಪರೀಕ್ಷೆಗೆ ಸೀತೆಯನ್ನು ಒಡ್ಡುವುದು, ಸಾಕಾಗದೇ ಎರಡನೇ ಸಲ, ಮೂರನೇ ಸಲ ಮಾಡಿಸುವುದು ಇವೆಲ್ಲ ಪ್ರಕ್ಷೇಪ ವೈಚಿತ್ರ್ಯಗಳಷ್ಟೇ ಹೊರತೂ ಇನ್ನೇನೂ ಅಲ್ಲ. ಪೂರ್ವಾಪರ ವಿರೋಧವಿದ್ದರೂ ಅದ್ಭುತಗಳು ಯಾವುದಕ್ಕೂ ವಿರುದ್ದವಲ್ಲವೆಂಬ ಸಮಾಧಾನವನ್ನು ನಮಗೆ ನಾವೇ ಕೊಟ್ಟುಕೊಳ್ಳಬೇಕಷ್ಟೆ. ಯುದ್ಧಕಾಂಡದಲ್ಲಿ ಇಂಥ ಅದ್ಭುತ ಚರಿತ್ರೆಗಳನ್ನು ವರ್ಣಿಸಲು ಭಾರೀ ಅವಕಾಶಗಳಿರುವುದರಿಂದ ಮಾಯಾಸೀತೆ, ಸಂಜೀವಿನಿ, ದೇವೇಂದ್ರನ ರಥ, ಅಗ್ನಿಪರೀಕ್ಷೆ ಇವೆಲ್ಲ ಮತ್ತೆ ಸೇರಿಸಿದಂತಿವೆ ಎನ್ನುವುದು. ಸೀತೆಯ ಸ್ವಭಾವ ಗೊತ್ತಿದ್ದರೂ ಅವಳ ಪಾತಿವ್ರತ್ಯವನ್ನು ಶಂಕಿಸುವುದೇ ವಿಚಿತ್ರ. ಒಂದು ವೇಳೆ ರಾಮಾಯಣದ ಪಾತ್ರಗಳೆಲ್ಲ ದೇವೋಪಮ ಧ್ಯೇಯವುಳ್ಳ ಮಾನವರು ಅಥವಾ ದೇವತೆಗಳು ಎಂದಿಟ್ಟುಕೊಂಡರೂ ದೇವತೆಗಳು ದೋಷಾತೀತರು, ಅವರು ಎಲ್ಲದಕ್ಕೂ ಸಮರ್ಥರು ಎಂದು ಸಾಧಿಸಲು ಹೊರಟಾಗಲೆಲ್ಲ ಮೂಲಾಂಶ ಮರೆಯಾಗುತ್ತದೆ. ವೈದಿಕ ವಾಙ್ಮಾಯದಲ್ಲಿ ಋಗ್ವೇದದಲ್ಲಿ ಒಮ್ಮೆ ರಾಮನ ಹೆಸರಿದೆ(ಋಗ್ವೇದ X.93.14),ಸೀತೆಯು ಕೃಷಿಯ ಅಧಿಷ್ಟಾತ್ರಿದೇವತೆ(ಅಥರ್ವವೇದ III.17.8)(ರಾಮಾಯಣದಲ್ಲಿ ಭೂಮಿಯನ್ನೂಳುವಾಗ ನೆಗಿಲ ತುದಿಗೆ ಸೀತೆ ಸಿಕ್ಕುವ ಸನ್ನಿವೇಶವನ್ನು ನೆನಪಿಸಿಕೊಳ್ಳಿ) ರಾಮಾಯಣದಲ್ಲಿ ಇತಿಹಾಸಕ್ಕಿಂತ ಕಲ್ಪನೆ ಹೆಚ್ಚೆಂಬುದನ್ನೇ ಇವು ತೋರಿಸುತ್ತವೆ,
      ಇನ್ನು ಇಕ್ಷ್ವಾಕು ಕುಲದವರು ಇಡೀ ಭೂಮಿಯನ್ನು ಆಳುತ್ತಿದ್ದರೆಂಬುದೆಲ್ಲ ಕವಿಕಲ್ಪನೆ. ಈಗಿನ ಅಯೋಧ್ಯೆಯ ಪ್ರದೇಶದಲ್ಲಿ ಕೋಸಲರೂ, ಬಿಹಾರದ ಉತ್ತರದಲ್ಲಿ ವಿದೇಹರೂ, ಕಾಶಿಯ ಸುತ್ತಮುತ್ತ ಕಾಶೀಯರೂ ಸ್ವತಂತ್ರರಾಗಿ ಆಳುತ್ತಿದ್ದರೆಂಬುದಕ್ಕೆ ಗ್ರಂಥಾಧಾರಗಳಿವೆ. ಗಂಡಕಿ ನದಿಯ(’ಸದಾನೀರ’ವೆಂಬ ಹೆಸರಿನಿಂದ ಪ್ರಸ್ತಾಪಿಸಲ್ಪಟ್ಟಿದೆ) ಪಶ್ಚಿಮದಲ್ಲಿ ಕೋಸಲರೂ ಪೂರ್ವದಲ್ಲಿ ವಿದೇಹರೂ ಆಳುತ್ತಿದ್ದರಿಂದ ಅದು ಅವೆರಡು ರಾಜ್ಯಗಳ ಗಡಿಯಾಗಿರುವುದರಿಂದ ರಾಮನು ಅರಣ್ಯವಾಸದಲ್ಲಿ ಗಂಡಕಿಯನ್ನು ದಾಟಿರಲು ಸಾಧ್ಯವಿಲ್ಲ. ರಾಮಾಯಣದಲ್ಲುಲ್ಲೇಖವಾಗಿರುವ ಪಂಚವಟಿಯಿರುವುದು ನಾಸಿಕದಲ್ಲಲ್ಲ. ಚಿತ್ರಕೂಟದಿಂದ ಗೋದಾವರಿಯ ಪಯಣದಲ್ಲಿ ಎಲ್ಲಿಯೂ ವಿಂಧ್ಯ ಮತ್ತು ನರ್ಮದೆಯ ಪ್ರಸ್ತಾವವಿಲ್ಲ. ವಿಂಧ್ಯದ ಬೆಳವಣಿಗೆಯನ್ನು ತಡೆದಿದ್ದ ಅಗಸ್ತ್ಯರ ಉಲ್ಲೇಖ ಒಂದು ಬಾರಿ ಕಂಡುಬರುತ್ತದೆ. ವಿಂಧ್ಯ ಪರ್ವತಾವಳಿ ಮತ್ತು ನರ್ಮದೆ ಮಧ್ಯಭಾರತದ ಎದ್ದುಕಾಣುವ ಭೌಗೋಳಿಕ ಕುರುಹುಗಳು. ಇವನ್ನು ದಾಟದೇ ನಾಸಿಕಕ್ಕೆ ಹೋಗಲು ಕನಸಿನಲ್ಲಿಯೂ ಸಾಧ್ಯವಿಲ್ಲ. ತ್ರಿವೇಣಿ ಸಂಗಮದ ಸ್ಥಳದ ಉಲ್ಲೇಖವಿರುವುದರಿಂದ ರಾಮನು ಅಲಹಾಬಾದಿನಿಂದ ದಕ್ಷಿಣಾಭಿಮುಖವಾಗಿ ರೇವ, ಗೋವಿಂದಘರ್, ಷಹದೂರ್, ಬಿಲಾಸಪುರ್, ಶೋರಿ ನಾರಾಯಣ್, ರಾಯಪುರ ಮಾರ್ಗವಾಗಿ ಬಂದು ಸದ್ಯ ಛತ್ತೀಸಘಡದ ದಕ್ಷಿಣ ತುದಿಯಲ್ಲಿರುವ ದಂಡಕ ಎನ್ನಲಾಗುತ್ತಿದ್ದ ’ಗೋಂಡ್’ ಅಡವಿಯನ್ನು ಪ್ರವೇಶಿಸಿರಬೇಕು. ಈ ಹಾದಿಯ ಶಬರಿನಾರಾಯನ ಅಥವಾ ಶೋರಿನಾರಾಯಣದಲ್ಲೇ ರಾಮನು ಆದಿವಾಸಿ ಶಬರಿಯನ್ನು ಭೇಟಿಯಾಗಿದ್ದು. ಈ ಸ್ಥಳ ಇಂದಿಗೂ ಶಬರರು ಗೊಂಡರು ಸೇರಿದಂತೆ ಆದಿವಾಸಿಗಳ ಕೇಂದ್ರಸ್ಥಳ. ಇನ್ನು ಪಂಚವಟಿಯಿರುವುದು ಆಂಧ್ರದ ಖಮ್ಮಂ ಜಿಲ್ಲೆಯ ದಕ್ಷಿಣದ ಅಯೋಧ್ಯೆಯೆಂದೇ ಕರೆಯಲ್ಪಡುವ ಭದ್ರಾಚಲಂನ ಹತ್ತಿರದ ಪರ್ಣಶಾಲೆಯಲ್ಲಿ. ರಾಮ ಮರದ ಎಲೆಗಳಿಂದ ನಿರ್ಮಿಸಿದ ಕುಟೀರದಿಂದ ಈ ಹೆಸರು ಬಂದುದು. ಆಸ್ತಿಕರಿಗೆ ತಮ್ಮನ್ನು ರಾಮನೊಡನೆ, ರಾಮಾಯಣದೊಡನೆ ’connect' ಮಾಡಿಕೊಳ್ಳಲು ಈ ಪರ್ಣಶಾಲೆಗಿಂತ ಅದ್ಭುತ ಜಾಗ ಇನ್ನೊಂದಿರಲಾರದು. ರಾಮಾಯಣದ ಪಂಚವಟಿ, ಅದಿರುವ ದಂಡಕಾರಣ್ಯದ ಸ್ಥಳ, ಸೀತಾಪಹರಣ ನಡೆದಿದ್ದು ಇಲ್ಲಿಂದಲೇ.
     ಪ್ರಕ್ಷೇಪಗಳು ಹೇಗೆ ಕಾಲಮಾನಕ್ಕನುಗುಣವಾಗಿ ಪರಿಚಯಿತವಾಗುತ್ತವೆ ಎಂಬುದರ ಬಗ್ಗೆ ಒಂದು ಉದಾಹರಣೆ ನೋಡೋಣ. ಅರಣ್ಯವಾಸದಲ್ಲಿದ್ದ ರಾಮನನ್ನು ನೋಡಲು ಬಂದ ಭರತ ರಾಮನನ್ನು ಪುನಃ ಕರೆತರಲಾರದೇ ಅವನ ಪಾದುಕೆಗಳನ್ನು ತಂದನೆಂಬ ಕಥೆ ನಮಗೆ ತಿಳಿದಿದೆ. ಅವಾದರೂ ಎಂಥ ಪಾದುಕೆಗಳು? ಎಲ್ಲ ಆವೃತ್ತಿಗಳೂ ತಿಳಿಸುವಂತೆ ಸುವರ್ಣಾಲಂಕೃತವಾದವು. ಕೇವಲ ದಶರಥಜಾತಕದಲ್ಲಿ ಮಾತ್ರ ಹುಲ್ಲಿನ ಪಾದುಕೆಯ ಪ್ರಸ್ತಾಪವಿದೆ. ಎಲ್ಲವನ್ನೂ ತ್ಯಜಿಸಿ ಋಷಿಯಂತೆ ನಾರುಮಡಿಯುಟ್ಟು ಕಾಡಿಗೆ ತೆರಳಿದ ರಾಮ ಸುವರ್ಣ ಪಾದುಕೆಗಳನ್ನು ಹೇಗೆ ಹೊಂದಲು ಸಾಧ್ಯವೆಂಬುದು ಗಮನಾರ್ಹ ವಿಚಾರ. ಇಂಥ ಸಂದರ್ಭದಲ್ಲಿ ಪಾದುಕಾ ಪೂಜೆಯ ಕಲ್ಪನೆಯ ಬೆಳವಣಿಗೆಯನ್ನು ಪರಿಶೀಲಿಸುವುದು ಅಗತ್ಯ. ವೈದಿಕ ಸಾಹಿತ್ಯದಲ್ಲಿ ವಿಷ್ಣುವಿನ ಮೂರು ಹೆಜ್ಜೆಗಳ ಪ್ರಸ್ತಾಪ ಬಿಟ್ಟರೆ ಪಾದುಕೆ ಅಥವಾ ಹೆಜ್ಜೆಗುರುತುಗಳ ಆರಾಧನೆಯ ವರ್ಣನೆಯಿಲ್ಲ. ಅಲ್ಲದೇ ದೈವೀ ವ್ಯಕ್ತಿಯೋರ್ವನ ಅಥವಾ ಋಷಿಯ ಹೆಜ್ಜೆಗುರುತುಗಳನ್ನಾಗಲೀ ಅವರ ಪಾದುಕೆಗಳನ್ನಾಗಲೀ ಪೂಜಿಸಿದ ಕ್ರಮ ಎಲ್ಲಿಯೂ ಉಲ್ಲೇಖಗೊಂಡಿಲ್ಲ. ನಮಗೆ ತಿಳಿದ ಮಟ್ಟಿಗೆ ಈ ಕಲ್ಪನೆ ಮೊಟ್ಟಮೊದಲು ಬೌದ್ಧರದ್ದು. ಬುದ್ಧನು ತನ್ನನ್ನು ಮನುಷ್ಯರೂಪದಲ್ಲಿ ಪೂಜಿಸುವುದನ್ನು ನಿಷೇಧಿಸಿದಾಗ ಭಕ್ತರು ಅವನ ಕುರುಹುಗಳನ್ನು ಆರಾಧಿಸತೊಡಗಿದರು. ಹೀಗಾಗಿಯೇ ನಮ್ಮ ಪ್ರಾಚೀನ ಬೌದ್ಧ ಸ್ಮಾರಕಗಳಾದ ಸಾಂಚಿ, ಕಾರ್ಲೇ, ಅಮರಾವತಿ ಮತ್ತು ನಾಗಾರ್ಜುನಕೊಂಡಗಳಲ್ಲಿ ಬುದ್ಧನ ಜೀವನಚರಿತ್ರೆಯ ಜೊತೆಗೆ ಅವನ ಹೆಜ್ಜೆಗುರುತುಗಳೂ ಇವೆ. ಆದ್ದರಿಂದ ಭರತನು ರಾಮನ ಪಾದುಕೆಗಳನ್ನು ಪೂಜಿಸುವ ಪ್ರಕ್ಷೇಪ ಕ್ರಿ.ಶಕಕ್ಕಿಂತ ಮೊದಲು ಸೇರಿರಲಾರದು. ಮುಂದೆ ಅಯೋಧ್ಯಾಕಾಂಡವನ್ನು ಪುನರ್ರೂಪಿಸುವಾಗ ಪಾದುಕೆಗಳು ಸುವರ್ಣಭೂಷಿತವಾದವು. ಚಕ್ರವರ್ತಿ ಭರತ ಮರದ ಪಾದುಕೆಗಳನ್ನು ಪೂಜಿಸಲಾರನಷ್ಟೆ!
      ಬರೋಡಾ ವಿಶ್ವವಿದ್ಯಾಲಯದವರು ಎಷ್ಟೋ ವರ್ಷಗಳ ಸಂಶೋಧನೆಯ ನಂತರ ಮೂಲಪಾಠ ಮತ್ತು ಪಾಠಾಂತರಗಳನ್ನು ಪರಿಷ್ಕರಿಸಿ ಸಂಸ್ಕರಣವನ್ನು ಸಿದ್ಧಗೊಳಿಸಿದ್ದಾರೆ. ಆದ್ದರಿಂದ ಮೂಲರಾಮಾಯಣ ಮತ್ತು ಪ್ರಕ್ಷಿಪ್ತ ಭಾಗಗಳನ್ನು ಗುರುತಿಸುವುದು ಸದ್ಯಕ್ಕೆ ಕಷ್ಟದ ಕೆಲಸವಲ್ಲ.
     ಅಶ್ವಘೋಷ, ಭಾಸ, ಕಾಳಿದಾಸ, ಭವಭೂತಿ, ಮುರಾರಿ, ರಾಜಶೇಖರ, ಬಾಣರಂಥವರು ವಾಲ್ಮೀಕಿಗೆ ನಮಸ್ಕರಿಸಿಯೇ ತಮ್ಮ ಕಾವ್ಯರಚನೆಯನ್ನು ಮಾಡಿದ್ದು. ವಿಷ್ಣು, ವಾಯು, ಭಾಗವತ, ಕೂರ್ಮ, ಅಗ್ನಿ, ನಾರದೀಯ, ಸ್ಕಂದ, ಪದ್ಮಾದಿ ಪುರಾಣ ಉಪಪುರಾಣಗಳಲ್ಲೆಲ್ಲ ವಾಲ್ಮೀಕಿಯ ರಾಮಾಯಣ ಬೇರೆ ಬೇರೆ ರೂಪದಿಂದ ಬೆಳೆದು ಬೃಹತ್ ವಟವೃಕ್ಷವಾಗಿ ಬೆಳೆದಿದೆ. ಯೋಗವಾಸಿಷ್ಟ, ಆಧ್ಯಾತ್ಮ ರಾಮಾಯಣ, ಅದ್ಭುತರಾಮಾಯಣ, ಆನಂದರಾಮಾಯಣದಂತೆ ಸಹಸ್ರ ಸಹಸ್ರ ಉದ್ಗೃಂಥಗಳು ಮಾತ್ರವಲ್ಲ ದೇಶಭಾಷೆಗಳ ಲೆಕ್ಕವಿಲ್ಲದಂತೆ ಜೈನ, ಬೌದ್ಧ ಸಾಹಿತ್ಯವೂ ರಾಮಾಯಣ ಸಂಸ್ಕೃತಿ ಪ್ರಚಾರವನ್ನು ಬೇರೆ ಬೇರೆ ರೀತಿಗಳಿಂದ ಮಾಡುತ್ತಲೇ ಬಂದಿವೆ. ರಾಮಕಥೆಯ ಬೆಳವಣಿಗೆ ಸಾವಿರಾರು ವರ್ಷಗಳಲ್ಲಿ ಸಾವಿರಾರು ರೀತಿಗಳಲ್ಲಿ ನಡೆದಿರುವುದರಿಂದ ಅದರ ನಿರೀಕ್ಷಣೆಯನ್ನು ಯಾವ ಗ್ರಂಥದ ಮಿತಿಯಲ್ಲೂ ಕೂಡಿಸಲು ಅಸಾಧ್ಯ. ವಿಮರ್ಶಿಸುವುದಂತೂ ಮನುಷ್ಯಮಾತ್ರರಿಗೆ ದೂರದ ಮಾತು.
      ಹಾಂ ಅಂದಹಾಗೆ, ಲಂಕೆ ಮಧ್ಯಭಾರತದಲ್ಲೆಲ್ಲೋ ಇದ್ದರೆ ಗೋಕರ್ಣದಲ್ಲಿ ರಾವಣ ಸ್ಥಾಪಿಸಿದ ಆತ್ಮಲಿಂಗವಿದೆಯಲ್ಲ ಎಂಬ ಚಿಂತೆ ತಲೆಕೊರೆಯುತ್ತಿತ್ತು. ಅಷ್ಟಕ್ಕೂ ಕೈಲಾಸದಿಂದ ಶ್ರೀಲಂಕಾಕ್ಕೆ ಹೋಗುವಾಗ ರಾವಣ ಪಶ್ಚಿಮ ಕರಾವಳಿಗೆ ಬಂದುದು ಆಶ್ಚರ್ಯವೇ. ಪುಷ್ಪಕ ವಿಮಾನದಲ್ಲಿ ಮನೋವೇಗದಲ್ಲಿ ಲಂಕೆಗೆ ಹೋಗುವವನು ಅಲ್ಲಿಗೆ ಹೋಗಿಯೇ ಸಂಧ್ಯಾವಂದನೆ ಮಾಡಬಹುದಿತ್ತಲ್ಲ ಎಂಬ ಪ್ರಶ್ನೆ ಶುದ್ಧ ಕುಹಕವೇ. ಇರಲಿ. ಗೋಕರ್ಣದ ಕಥೆ ನಿಮಗೆ ಗೊತ್ತಲ್ಲ. ಶಿವನಿಂದ ಆತ್ಮಲಿಂಗವನ್ನು ಪಡೆದ ರಾವಣ ಲಂಕೆಯ ಮಾರ್ಗದಲ್ಲಿ ತೆರಳುತ್ತಿರಲು ಸಾಯಂಸಂಧ್ಯೆ ಸಮೀಪಿಸಿತು. ಸಂಧ್ಯಾಕಾಲದಲ್ಲಿ ಸೂರ್ಯನಿಗೆ ಅರ್ಘ್ಯ ನೀಡುವ ಸಮಯ. ಆತ್ಮಲಿಂಗವನ್ನು ನೆಲದ ಮೇಲಿಡುವಂತಿರಲಿಲ್ಲ. ಕೈಯಲ್ಲಿ ಲಿಂಗ ಹಿಡಿದು ಸಂಧ್ಯಾವಂದನೆ ಮಾಡುವಂತಿಲ್ಲವೆಂದು ಚಿಂತಾಕ್ರಾಂತನಾದ ರಾವಣನಿಗೆ ಅಲ್ಲೇ ಸುಳಿದಾಡುತ್ತಿದ್ದ ವಟುವೇಷದ ಗಣೇಶ ಕಾಣುತ್ತಾನೆ. ಆತ್ಮಲಿಂಗವನ್ನು ಸಂಧ್ಯಾವಂದನೆ ಪೂರ್ಣಗೊಳ್ಳುವ ತನಕ ಹಿಡಿದುಕೊಳ್ಳುವಂತೆ ವಿನಂತಿಸಿ ನೆಲದಲ್ಲಿರಿಸದಂತೆ ಕೇಳಿಕೊಂಡ. ಇದಕ್ಕೆ ಪ್ರತಿಯಾಗಿ ಗಣಪತಿ, ಲಿಂಗವೇನಾದರೂ ಭಾರವಾದರೆ ಮೂರು ಬಾರಿ ರಾವಣನನ್ನು ಕೂಗಿ ಲಿಂಗವನ್ನು ನೆಲದಲ್ಲಿರಿಸುವುದಾಗಿ ಹೇಳಿದ. ರಾವಣ ಸಂಧ್ಯಾವಂದನೆ ಮುಗಿಸಿ ಬರುವುದರೊಳಗೆ ಗಣೇಶ ಆತ್ಮಲಿಂಗವನ್ನು ನೆಲದಲ್ಲಿರಿಸಿದ. ದೇವತೆಗಳ ಸಂಚನ್ನು ಅರಿತುಕೊಂಡ ರಾವಣ ಕೋಪೋದ್ರಿಕ್ತನಾಗಿ ಲಿಂಗವನ್ನು ಬುಡಮೇಲು ಮಾಡಲು ಯತ್ನಿಸಿದನಾದರೂ ಸಫಲವಾಗಲಿಲ್ಲ. ಕೈಗೆ ಸಿಕ್ಕ ತುದಿಯ ಚೂರುಗಳು ಬೇರೆ ಬೇರೆ ಸ್ಥಳದಲ್ಲಿ ಬಿದ್ದು ಧಾರೇಶ್ವರ, ಗುಣವಂತೇಶ್ವರ, ಸಿದ್ಧೇಶ್ವರ, ಮುರ್ಡೇಶ್ವರಗಳೆಂದು ಖ್ಯಾತವಾದವು. ರಾವಣ ರಭಸಕ್ಕೆ ಲಿಂಗವು ಗೋವಿನ ಕಿವಿಯ ಆಕಾರವನ್ನು ತಳೆದಿದ್ದರಿಂದ ಈ ಸ್ಥಳ ಗೋಕರ್ಣವೆಂದು ಪ್ರಸಿದ್ಧವಾಯಿತು.
ಕಥೆ ಕೇಳಿದಿರಲ್ಲ. ಥೇಟ್ ಇಂಥದ್ದೇ ಕಥೆ ಉತ್ತರ ಪ್ರದೇಶದ ಲಖಿಮಪುರ ಖೇರಿಯ ಗೋಲಾ ಗೋಕರ್ಣನಾಥದಲ್ಲೂ ನಡೆದಿದೆ. ಅಲ್ಲಿಯೂ ಇದೇ ರಾವಣನ ಆತ್ಮಲಿಂಗವನ್ನು ಇದೇ ಗಣಪತಿ ಹೀಗೆಯೇ ನೆಲದಲ್ಲಿಟ್ಟ ಕಥೆಯಿದೆ. ಈ ಲಿಂಗವೂ ಗೋವಿನ ಕಿವಿಯ ಆಕಾರದಲ್ಲೇ ಇದೆ. ಹಾಗಾದರೆ ಇವೆರಡರಲ್ಲಿ ಅಸಲಿ ಗೋಕರ್ಣ ಯಾವುದು? ಅಥವಾ ರಾವಣ ಎರಡೆರಡು ಬಾರಿ ಮೋಸಹೋದನೇ?
ಶಿವನಲ್ಲಿ ಎಷ್ಟು ಆತ್ಮಲಿಂಗಗಳಿದ್ದವು? ಬಹಳಷ್ಟಿದ್ದರೆ ಮತ್ತೊಮ್ಮೆ ತಪಸ್ಸು ಮಾಡಿ ಇನ್ನೊಂದು ಆತ್ಮಲಿಂಗವನ್ನು ತಂದುಕೊಳ್ಳುವುದು ರಾವಣನಿಗೇನೂ ಕಷ್ಟವಾಗಿರಲಿಲ್ಲ. ಹೇಗಿದ್ದರೂ ಶಿವ ಬೇಡಿದ್ದೆಲ್ಲ ನೀಡುವ ಭೋಲಾಶಂಕರನಲ್ಲವೇ. ಏಕೆ ಈ ಪ್ರಶ್ನೆ ಎಂದರೆ ಆಂಧ್ರದಲ್ಲಿ ಪಂಚಾರಾಮ ಕ್ಷೇತ್ರಗಳೆಂಬ ಐದು ಖ್ಯಾತ ಶಿವ ಕ್ಷೇತ್ರಗಳಿವೆ. ಶಿವನಿಂದ ಆತ್ಮಲಿಂಗ ಪಡೆದ ತಾರಕಾಸುರ ಲೋಕಕಂಟಕನಾಗಿ ಮೆರೆಯುತ್ತಿದ್ದಾಗ ಕುಮಾರಸ್ವಾಮಿಯು ಲಿಂಗವನ್ನು ಐದು ಚೂರುಗಳನ್ನಾಗಿಸಿ ಭೂಸ್ಪರ್ಶ ಮಾಡಿಸಿದನಂತೆ. ಹೀಗೆ ಆತ್ಮಲಿಂಗ ಬಿದ್ದ ಐದು ಜಾಗಗಳೇ ಅಮರರಾಮ, ದ್ರಾಕ್ಷಾರಾಮ, ಸೋಮರಾಮ, ಕ್ಷೀರರಾಮ ಮತ್ತು ಕುಮಾರರಾಮವೆಂಬ ಐದು ಪಂಚಾರಾಮ ಕ್ಷೇತ್ರಗಳಾಗಿ ಪ್ರಸಿದ್ದವಾದವು.
ತಮಿಳ್ನಾಡಿನ ತಿರುಚಿನಾಪಳ್ಳಿಯ ರಂಗನಾಥನದ್ದೂ ಇದೇ ಕಥೆ. ಆದರೆ ರಂಗನಾಥನ ವಿಗ್ರಹವನ್ನು ಹಿಡಿದುಕೊಂಡು ಹೋಗುತ್ತಿದ್ದವ ರಾವಣನಲ್ಲ, ಅವನ ತಮ್ಮ ವಿಭೀಷಣ. ಮತ್ತದೇ ಗಣಪತಿ ದಾರಿಯಲ್ಲಿ ಸಿಕ್ಕು ಸಂಧ್ಯಾವಂದನೆಯ ಸಮಯದಲ್ಲಿ ವಿಭೀಷಣ ತಂದ ವಿಗ್ರಹವನ್ನು ನೆಲಕ್ಕಿಟ್ಟು.............. ಛೇ, ರಾಕ್ಷಸರ ದಡ್ಡತನವೇ. ಅದಕ್ಕೇ ಎಲ್ಲ ಕಥಗಳಲ್ಲೂ ಕೊನೆಗೆ ರಾಕ್ಷಸರೇ ಸಾಯುವುದು.

14 comments:

 1. SEEKING GOD?

  Is it possible to seek God? Calvinists teach that none seek God. They believe God selects all who will be saved, making it an impossibility to seek HIM. Man-made doctrines are always contrary to Scripture. God's word is always, the last word.

  Acts 15:15-17 With this the words of the Prophets agree, just as it is written, 16 After theses things I will return, And I will rebuild the tabernacle of David which has fallen, And I will restore it, 17 So that the rest of mankind may seek the Lord, And all the Gentiles who are called by My name,

  Prophets of God agree that all mankind may seek the Lord; a sharp contrast to Calvinistic teaching.

  Psalm 10:4 The wicked, in the haughtiness of his countenance, does not seek Him. All his thoughts are, "There is no God."

  The wicked can seek God, however, they choose not to. Pride destroys the desire to seek God.

  Acts 17:26-27 and He made from one man every nation of mankind to live on the face of the earth, having determined their appointed times and boundaries of their habitation, 27 that they seek God, if perhaps they might grope for Him and find Him, though He is not far from each one of us;

  Mankind is to seek God. He is there for whoever is willing to find Him.

  Psalm 53:1-2 The fool has said in his heart, "There is no God.".....2 God has looked down from heaven upon the sons of men to see if there is anyone who understands, Who seeks God,

  If God selects men to be saved against their will, He would not have to look down to see who seeks Him.

  Proverbs 8:17 "I love those who love me; And those who diligently seek me will find me.

  God says diligently seek Him. Calvinists proclaim that no man can seek God. Who do you believe?

  2 Chronicles 19:3 But there is some good in you, for you have removed the Asheroth from the land and you have set your heart to seek God."

  Men need to prepare their hearts to seek God.

  Psalm 9:10 And those who know Your name will put their trust in You, For You, O Lord, have not forsaken those who seek You.

  The writer of the Psalms says God will not forsake those who seek God. Those who preach, the John Calvin view of predestination, strongly disagree.

  Matthew 6:33 But seek first His kingdom......

  Jesus says seek God's kingdom. John Calvin says men cannot seek God.

  Hebrews 11:6 ....for he who comes to God must believe that He is and that He is a rewarder of those who seek Him.

  God rewards those who seek Him.

  GOD DOES NOT ARBITRARILY FORCE MEN INTO HIS KINGDOM. MEN NEED TO SEEK GOD!

  (All Scripture quotes from:NEW AMERICAN STANDARD BIBLE)

  YOU ARE INVITED TO FOLLOW MY BLOG. http://steve-finnell.blogspot.com

  ReplyDelete
 2. ನವಿರಾದ ಹಾಸ್ಯದ ಲೇಪನ ಓದಲು ಖುಷಿ ಕೊಟ್ಟರೂ ವಿಚಾರಪ್ರಚೋದಕವಾದ ಲೇಖನ ಕೊನೆಕೊನೆಗೆ ಹಾಸ್ಯಮನೋವೃತ್ತಿಗೆ ಸಿಕ್ಕು ತನ್ನ ಬಿಗುವು ಕಳೆದುಕೊಂಡಿತೆನಿಸುತ್ತದೆ. ಲೇಖನದಲ್ಲಿ ಎತ್ತಿದ ಗಂಭೀರ ಸಮಸ್ಯೆಗಳನ್ನು ಮತ್ತಷ್ಟು ವಿಶ್ಲೇಷಿಸಬಹುದಿತ್ತೇನೊ.

  ReplyDelete
  Replies
  1. ಖಂಡಿತ. ಪ್ರಶ್ನೆಗಳಿಗುತ್ತರಿಸುವ ಭರದಲ್ಲಿ ಅವಸರದ ಲೇಖನವಾಯ್ತೆಂದು ಗೊತ್ತು. ಧನ್ಯವಾದಗಳು

   Delete
 3. ಆಸಕ್ತಿಪೂರ್ಣ ಲೇಖನ. ದಾಕ್ಷಿಣಾತ್ಯ ರಾಮಾಯಣ, ಪಶ್ಚಿಮೋತ್ತರ ರಾಮಾಯಣ ಮತ್ತು ಗೌಡ ರಾಮಾಯಣಗಳ ಪಠ್ಯಗಳ ಜೊತೆಗೆ, ಕೆಲವು ಮೌಖಿಕ ಸಂಪ್ರದಾಯದ ರಾಮಾಯಣಗಳೂ ಇವೆ. ಇದರಂತೆಯೇ ಮಹಾಭಾರತದ ಕಥೆ! ಈ ರೀತಿಯಾಗಿ ರಾಮಾಯಣ ಹಾಗು ಮಹಾಭಾರತಗಳನ್ನು ತಮ್ಮ ಮನಸ್ಸಿಗೆ ಸಮಾಧಾನ ತರುವಂತೆ ಪುನರ್ರಚಿಸಲು ಸಾಧ್ಯವಾಗುವುದು, ಆ ಮಹಾಕಾವ್ಯಗಳ ಶ್ರೇಷ್ಠತೆಯನ್ನೇ ತೋರಿಸುತ್ತದೆ. ಇದು ಪಾಶ್ಚಿಮಾತ್ಯ ಮಹಾಕಾವ್ಯಗಳಲ್ಲಿ ಸಾಧ್ಯವಾಗಿಲ್ಲ ಎನ್ನುವುದನ್ನು ಗಮನಿಸಿ.

  ReplyDelete
  Replies
  1. ಹೌದು ಸುನಾಥರೇ. ಧನ್ಯವಾದ

   Delete
 4. ಇಲ್ಲಿರುವ ಅನೇಕ ಐತಿಹಾಸಿಕ ವಿಷಯಗಳ ಅರಿವು ನನಗೆ ಸಂಪೂರ್ಣ ಇಲ್ಲ ಎಂದು ಈ ಹಿಂದೆಯೇ ಒಪ್ಪಿಕೊಂಡಿದ್ದೇನೆ.
  ಆದರೆ, ಕೆಲವು ವಿಷಯಗಳಲ್ಲಿ ಅರ್ಥಾಂತರ ಮಾಡುವ ಅವಕಾಶವಿರುದರಿಂದ, ಅದನ್ನು ತಪ್ಪು ಅಂತ ಹೇಳಲು ಬರೋದಿಲ್ಲ.
  ಉದಾಹರಣೆಗೆ,
  ನೀವು "ಬ್ರಹ್ಮ"ನೆ ಮತ್ಸ್ಯಾದಿ ಅವತಾರಗಳನ್ನು ಎತ್ತಿದ ಶ್ಲೋಕವನ್ನು ಕೊಟ್ಟಿದ್ದೀರಿ. ಅಲ್ಲಿ ಹೇಳಿರುವ "ಬ್ರಹ್ಮ" ಪದಕ್ಕೆ, ನಾವು ವ್ಯವಹರಿಸುವ "ಚತುರ್ಮುಖ ಬ್ರಹ್ಮ"ನೆ ಎಂಬ ಅರ್ಥ ತೆಗೆದುಕೊಳ್ಳಲು ಅವಕಾಶವಿಲ್ಲ.
  ಯಾಕೆಂದರೆ "ಸ ವಿಷ್ಣುರಾಹ ಹಿ" ಎಂಬ ಜೈಮಿನಿಋಷಿಗಳ ಮೀಮಾಂಸಾ ಸೂತ್ರದಲ್ಲಿ, 'ಬ್ರಹ್ಮ' ಶಬ್ದವು, ವಿಷ್ಣುವನ್ನೂ ಹೇಳುತ್ತದೆ ಎಂದು ನಿರ್ಣಯ ಮಾಡಿರುವುದರಿಂದ, ಅಲ್ಲದೆ ಉಳಿದ ಯಾವ ಸ್ಮೃತಿಕಾರರೂ ಬ್ರಹ್ಮನಿಗೆ ಅವತಾರವಿರುವುದನ್ನು ಒಪ್ಪಿಲ್ಲದ ಕಾರಣ, ಅಲ್ಲಿ ಬ್ರಹ್ಮ ಪದಕ್ಕೆ, ವಿಷ್ಣು ಅಂತಲೇ ಅರ್ಥವಾಗುವುದರಿಂದ, ಅಲ್ಲಿ ಯಾವ ದೋಷವೂ ಇಲ್ಲ.

  ಇದು, ನೀವು ಎತ್ತಿರುವ ಆ ಆಕ್ಷೇಪಕ್ಕೆ ನನ್ನ ಮಟ್ಟಿನ ಸಮಜಾಯಿಷಿ.

  ಉಳಿದಂತೆ, ಅನೇಕ ವಿಚಾರಗಳು ನಿಜಕ್ಕೂ ನಾವು ಚಿಂತಸಬೇಕಾದ್ದೆ ಆಗಿವೆ.
  ನಮಸ್ತೆ.:)

  ReplyDelete
  Replies
  1. ಮಾನ್ಯರೇ,
   ನಿಮ್ಮ ಮಾತು ಸತ್ಯ. ವೇದಗಳು ಬ್ರಹ್ಮನನ್ನು ಪರಮಾತ್ಮ, ಸೃಷ್ಟಿ, ಸ್ಥಿತಿ,ಲಯಗಳ ಅಧಿಪತಿ, ಸಮಸ್ತವನ್ನೂ ಒಳಗೊಂಡ ವಿಶ್ವವೆಂಬ ಅರ್ಥ ನೀಡಿದ್ದಾರೆ(’ಬ್ರಹ್ಮೈ ವೇದಂ ವಿಶ್ವಮಿದಂ’- ಮುಂಡಕ, ೨ -೨ – ೧೨). ವಿಷ್ಣು ಶಬ್ದಕ್ಕೂ ಸರಿಸುಮಾರು ಅದೇ ಅರ್ಥವಿದೆ( ’ಯದ್ವಿಷಿತೋ ಭವತಿ ತದ್ ವಿಷ್ಣುರಿತಿ | ವಿಷಿನೋತಿ ವಿಷಿನಾತಿ ವಾ ಸ ವಿಷ್ಣು:’ ). ವಿಷ್ಣು ಮತ್ತು ಬ್ರಹ್ಮ ಎರಡನ್ನೂ ಭಗವಂತ ಎಂದೇ ಗ್ರಹಿಸಲಾಗಿದೆಯೇ ಹೊರತೂ ಪ್ರತ್ಯೇಕ ದೇವತೆಗಳೆಂದಲ್ಲ. ಕಾಲಕ್ರಮೇಣ ಅವರಿಬ್ಬರೂ ಬೇರಾದರು, ಬೇರಾದ ನಂತರ ಅವರ ಅವತಾರಗಳ ಕಲ್ಪನೆ ಹುಟ್ಟಿತು. ವೇದಕಾಲದ ಕೆಲ ದೇವರುಗಳು ಬದಿಗೆ ಸರಿಸಲ್ಪಟ್ಟರು(ಉದಾ: ಮಿತ್ರ), ಇನ್ನು ಕೆಲವರು ಹೊಸದಾಗಿ ಸೇರಿಸಲ್ಪಟ್ಟರು(ನವಗ್ರಹಗಳು, ಸತ್ಯನಾರಾಯಣ, ಸ್ಕಂದ). ಋಗ್ವೇದದಲ್ಲಿ ವಿಷ್ಣು ಶಬ್ದವು ಭಗವಂತನ ನಾಮ – ರೂಪವೆಂದೇ ಹೇಳಲಾಗಿದೆಯೇ ಹೊರತು ಅಂಕಿತನಾಮವೆಂದು ಹೇಳಿಲ್ಲ. ಆಧುನಿಕ ಕಾಲದಲ್ಲಿ ನಡೆಯುತ್ತಿರುವ ವಿಷ್ಣುವಿನ ಉಪಾಸನೆಯು ಆಗಮೋಕ್ತವೇ ಹೊರತು ವೇದೋಕ್ತವಲ್ಲ. ಇಂದ್ರನೆನ್ನುವುದೂ ವಿಷ್ಣುವಿನ ಅಥವಾ ಬ್ರಹ್ಮನ ಹೆಸರೇ(’ಇಂದ್ರ ಮೇಕೇ ಪರೇ ಪ್ರಾಣಾಮ ಪರೇಬ್ರಹ್ಮ ಶಾಶ್ವತಂ’). ’ಇಂದ್ರೋ ವೈಕುಂಟೋ ಅಪರಾಜಿತಾ ಸೇನೇತಿವಾ ಅಹಮೇ ತಮುಪಾಸ ಇತ”(ಬ್ರಹದಾರಣ್ಯಕ, ೨ – ೧ – ೬) ಇಂದ್ರಲೋಕವೇ ವೈಕುಂಟವೆಂದರ್ಥ. ಆದ್ದರಿಂದ 'ಬ್ರಹ್ಮ' ಶಬ್ದವು, ವಿಷ್ಣುವನ್ನೂ ಹೇಳುತ್ತದೆ ಎಂಬ ಮಾತನ್ನು ನಾನು ಒಪ್ಪುತ್ತೇನೆ.

   Delete
 5. Please see for answers..

  http://tnsrajan.wordpress.com/

  -Srinivasa

  ReplyDelete
  Replies
  1. ವಿದ್ವನ್ಮಿತ್ರರೆಂದು ಕರೆದದ್ದು ಸುಮ್ಮನೆ ಅಲ್ಲವೇ ಅಲ್ಲ. ಅಭಿಪ್ರಾಯಭೇದಗಳನ್ನು ಸದಾ ಗೌರವಿಸುವವನು ನಾನು. ನಿಮ್ಮ ಅಭಿಪ್ರಾಯಗಳೆಲ್ಲವನ್ನೂ ಒಪ್ಪಿದ್ದೇನೆ. ಬುಲ್ಕೆಯವರ ರಾಮಕಥಾ ಆಂಡ್ ಅದರ್ ಎಸ್ಸೇಸ್ ಓದಿಲ್ಲ. ಓದಬೇಕಾಯಿತು. ಇಲ್ಲಿ ಸಣ್ಣ ಸಮಸ್ಯೆಯೆಂದರೆ ನನ್ನ ಪ್ರಕಾರ ರಾಮಾಯಣ ಜರುಗಿದ್ದು ಇಂದಿಗೆ ಏಳು ಸಾವಿರ ವರ್ಷಗಳ ಹಿಂದೆ(ನೋಡಿ: ಸೈಂಟಿಫಿಕ್ ಡೇಟಿಂಗ್ ಆಫ್ ರಾಮಾಯಣ, ಡಾ:ಪಿ.ವಿ.ವರ್ತಕ್). ನಿಮ್ಮ ಪ್ರಕಾರ ರಾಮಾಯಣ ನಡೆದು ಐದೂವರೆ ಲಕ್ಷ ವರ್ಷಗಳಾದವು. ನನ್ನ ಪ್ರಕಾರ ರಾಮನೊಬ್ಬ ದೇವರಲ್ಲದ ಒಬ್ಬ ಆದರ್ಶ ಮಾನವ. ನಿಮ್ಮ ಪ್ರಕಾರ ಆತ ದೇವರೇ. ನನ್ನ ಪ್ರಕಾರ(ಜೊತೆಗೆ ನಾಸಾ, ಭಾರತೀಯ ಪುರಾತತ್ವ ವಿಭಾಗಗಳ) ಪ್ರಕಾರ ರಾಮಸೇತು ನೈಸರ್ಗಿಕ. ನಿಮ್ಮ ಪ್ರಕಾರ ಅದು ಮಾನವ(ವಾನರ) ನಿರ್ಮಿತ. ನನ್ನ ಪ್ರಕಾರ ರಾಮಾಯಣವು ಕಾಲಾನಂತರ ಬಹಳಷ್ಟು ಪ್ರಕ್ಷೇಪಗಳಿಗೆ ಒಳಗಾಗಿದೆ. ನಿಮ್ಮ ಪ್ರಕಾರ ಅಂಥದ್ದು ನಡೆದಿಲ್ಲ. ಹೀಗೆ ರಾಮಾಯಣದ ಬಗೆಗಿನ ಮೂಲಕಲ್ಪನೆಯಲ್ಲಿಯೇ ವ್ಯತ್ಯಾಸವಿರುವಾಗ ಕೇವಲ ತರ್ಕಗಳ ಆಧಾರದ ಮೇಲೆ ವಾದವನ್ನು ಮುಂದುವರೆಸುವುದರಿಂದ ಪ್ರಯೋಜನವಿದೆಯೆಂದೆನಿಸುತ್ತಿಲ್ಲ. ನಾನು ಇತಿಹಾಸಕಾರನೂ ಅಲ್ಲ, ಪಂಡಿತನಂತೂ ಮೊದಲೇ ಅಲ್ಲ. ವಾಲೀವಧೆಯನ್ನು ಲವಕುಶರೇ ರಾಮನಲ್ಲಿ ವಿರೋಧಿಸಿ ಪ್ರಶ್ನಿಸುವುದನ್ನು ಭವಭೂತಿಯ ಉತ್ತರರಾಮ ಚರಿತದಲ್ಲೇ ಕಾಣಬಹುದು. ಇನ್ನು ಮೊದಲು ಉತ್ತರಕಾಂಡವನ್ನು ಪ್ರಕ್ಷೇಪಭೂಯಿಷ್ಟವೆಂದವನೂ ಅವನೇ ಹೊರತೂ ನಾನಲ್ಲ. ಬರೋಡ ವಿಶ್ವವಿದ್ಯಾಲಯ ಮತ್ತು ಕಲ್ಕತ್ತಾದ ಸಂಸ್ಕೃತ ಗ್ರಂಥಮಾಲೆಯವರ ರಾಮಯಣ ಪ್ರಕಾಶನದ ಗ್ರಂಥಗಳ ಆಧಾರದ ಮೇಲೆ ಪ್ರಕ್ಷೇಪಿತ ಶ್ಲೋಕಗಳನ್ನು ಗುರುತಿಸಲು ಸಾಧ್ಯವಾಗಿದೆ( ಇದರ ಆಧಾರದ ಮೇಲೆ ವಿದ್ವಾನ್ ಕೆ.ಕೃಷ್ಣಮೂರ್ತಿಯವರು ರಾಮಾಯಣದ ಮೂರೂ ಪಾಠಕ್ರಮಗಳ ಸ್ವರೂಪ ಮತ್ತು ಪ್ರಕ್ಷೇಪಗಳ ಬಗ್ಗೆ ಕನ್ನಡದಲ್ಲಿ ಬರೆದ ಗ್ರಂಥವೊಂದನ್ನು ಬಹು ಹಿಂದೆ ಉಸ್ಮಾನಿಯಾ ವಿಶ್ವವಿದ್ಯಾಲಯ ಗ್ರಂಥಾಲಯದಲ್ಲಿ ಓದಿದ ನೆನಪು). ಅವುಗಳಲ್ಲಿ ನಾರದನು ವಾಲ್ಮೀಕಿಗೆ ಹೇಳುವ ’ಯಾವತ್ ಸ್ಥಾಸ್ಯನಿ ಗಿರಿಯಃ ಸರಿತಸ್ಯ ಮಹೀತಲೇ | ತಾವದ್ರಾಮಾಯಣಕಥಾ ಲೋಕೇಷು ಪ್ರಚರಿಷ್ಯತೇ ||’ ಶ್ಲೋಕವನ್ನೂ ಕೂಡ ಪ್ರಕ್ಷೇಪವೆಂದೇ ಪರಿಗಣಿಸಲಾಗಿದೆ. ಭರತನು ತನ್ನ ಜೊತೆ ಸುವರ್ಣಪಾದುಕೆಗಳನ್ನು ಕೊಂಡೊಯ್ದಿದ್ದನೆಂದರೆ ಅವನಿಗೆ ರಾಮನು ಹಿಂದಿರುಗಿ ಬರುವುದಿಲ್ಲವೆಂಬ ಅರಿವು ಮೊದಲೇ ಇತ್ತೇ?(ಎ೦.ಎನ್ ದತ್ತರ ರಾಮಾಯಣದ ಆಂಗ್ಲಾನುವಾದವನ್ನು ಗಮನಿಸಿ. ಈ ಕುರಿತು ಆ ಕೃತಿಯಲ್ಲಿ ವಿವರವಾಗಿ ವಿಮರ್ಶಿಸಲಾಗಿದೆ).
   ರಾಮಾಯಣ ಮಹಾಭಾರತಾದಿಗಳು ಸರ್ವಕಾಲಿಕ ಸತ್ಯ. ನಾವದನ್ನ ಯಾವ ದೃಷ್ಟಿಕೋನದಲ್ಲೂ ಅರ್ಥೈಸಿ ವಿಶ್ಲೇಷಿಸಬಹುದು. ಶೇಣಿಯವರು ರಾಮನಾಗಿ ರಾಮನೇ ಸರ್ವಶ್ರೇಷ್ಠ ಅಂದರು. ಅದೇ ಶೇಣಿ ರಾವಣನಾಗಿ ರಾವಣನೇ ಶ್ರೇಷ್ಠ ಅಂತ ವಾದಿಸಲಿಲ್ಲವೇ. ಕುರುಕ್ಷೇತ್ರ ಪುಣ್ಯಕ್ಷೇತ್ರವೂ ಅಹುದು. ನಮ್ಮ ಶರೀರವೇ ಕುರುಕ್ಷೇತ್ರ ಅಂತ ದೃಷ್ಟಿಕೋನದಲ್ಲೂ ವ್ಯಾಖ್ಯಾನಿಸಬಹುದು ಎಂಬುದು 'ಇದಂ ಶರೀರ ಕೌಂತೇಯ..' ಎಂಬುದರಿಂದ ತಿಳಿಯಬಹುದು. ಹಾಗಾಗಿ ಅವರ ಚಿಂತನಮಟ್ಟಕ್ಕೆ ಆಯಾ ದೃಷ್ಟಿಕೋನದಲ್ಲಿ ಚರ್ಚಿಸಿದಾಗ ಹಲವು ವಿಷಯಗಳನ್ನ ಹುಡುಕಬಹುದು ಎಂಬುದೀಗ ನಿಮ್ಮ ಬರಹವನ್ನೋದಿ ಶ್ಲಾಘಿಸೋಣವಾಗ್ತದೆ. ರಾಮನನ್ನು ನಂಬುವುದಾದರೆ ರಾಮಾಯಣವನ್ನೂ ನಂಬಲೇ ಬೇಕು. ನಂಬಿಕೆಯ ದೃಷ್ಟಿಕೋನ ಮಾತ್ರ ವೈಯಕ್ತಿಕ.

   Delete
 6. ಕೆ ಕೃಷ್ಣಮೂರ್ತಿಯವರ ಪುಸ್ತಕ ಯಾವುದೆಂದು ನೆನಪಾದರೆ ದಯವಿಟ್ಟು ಬರೆಯಿರಿ.

  ReplyDelete
  Replies
  1. ಖಂಡಿತ. ಮುಂದಿನ ಬಾರಿ ಹೋದಾಗ ಸಿಕ್ಕಲ್ಲಿ ನೋಡಿ ಹೇಳುತ್ತೇನೆ. ಧನ್ಯವಾದಗಳು

   Delete
 7. ನೀವು ಇವೆಲ್ಲಾ ಗ್ರಂಥಗಳನ್ನು ಓದುವ ಬದಲು ಮೂಲ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿಯವರ ಸಂಸ್ಕೃತ ರಾಮಾಯಣವನ್ನು ಓದಿದ್ದರೆ ನಿಮ್ಮ ಸಂಶಯಗಳಿಗೆ ಸರಿಯಾದ ಉತ್ತರ ಸಿಗುತ್ತಿತ್ತು. ಉದಾ: ರಾಮನು ಅವತಾರ ಪುರುಷನಲ್ಲವೆಂಬುದು ಪ್ರತಿಯೊಂದು ಸರ್ಗದಲ್ಲೂ ಅಲ್ಲಲ್ಲಿ ಪ್ರತಿಪಾದಿಸಲಾಗಿದೆ.

  "ವಿಷ್ಣುನಾ ಸದೃಶೋ ವೀರ್ಯೇ ಸೋಮವತ್ಪ್ರಿಯದರ್ಶನಃ |
  ಕ್ರೋಧ ಕ್ಷಮಯಾ ಪೃಥ್ವೀ ಸಮಃ |
  ಧೃತಿಮಾನ್ ಧೃತಿಮಾನ್ ವಶೀ |"

  ಇವೆಲ್ಲಾ ಅವತಾರ ಪುರುಷನಲ್ಲದೆ ಇನ್ನೇನು ಹೇಳುತ್ತದೆ?
  ನೀವು ಸಂಸ್ಕೃತ ಅರಿತಿರುವುದರಿಂದ ಮೋಲ ಗ್ರಂಥಗಳನ್ನು ದಯವಿಟ್ಟು ಓದಿ ಜನರಿಗೆ ಅದರ ಶ್ರೇಷ್ಠತೆಯನ್ನು ತಿಳಿಸಿಕೊಡಿ. ನಿಮಗೆ ತಿಳಿದಂತೆ ಅಥವಾ ಬೇರೆಯವರು ಆಧಾರವಿಲ್ಲದೆ ಹೇಳುವಂತೆ ವಿಚಾರಗಳನ್ನು ಮಂಡಿಸುವ ಪ್ರಯತ್ನ ಸಲ್ಲದು. ನಿಮ್ಮ ವಿದ್ವತ್ತಿಗೆ ಜ್ಞಾನಾರ್ಜನೆಯಾಗ ಬೇಕಾದರೆ ಮೋಲ ಗ್ರಂಥಗಳನ್ನು ಓದಿ, ಅಲ್ಲಿ ನಿಮಗೆ ಪರಮ್ ಸತ್ಯ ಅರಿಯುತ್ತದೆ. ರಾಮಾಯಣದ ಮೂಲ ತತ್ವ ಏನು,ಮತ್ತದು ಎಲ್ಲಾ ಸರ್ಗಗಳಲ್ಲಿಯೂ ಹೇಗೆ ಪಸರಿಸಿದೆ ಹಾಗು ಅದರ ಗಂಧ ಹೇಗೆ ಸವಿಯುವುದು ಎಂದು ಅರಿತರೆ ಅದು ನಮಗೆ ಸಾರ್ಥಕತೆಯ ಕಡೆಗೆ ದಾರಿ ತೋರುತ್ತದೆ.

  ಮತ್ಯಾರೋ ಏನೋ ಹೇಳುತ್ತಾರೆಂದರೆ ಸಂಸ್ಕೃತ ತಿಳಿದಿರುವ ನಾವು ಮೂಲದ ಒಳಹೊಕ್ಕು ವಿಚಾರ ತಿಳಿಯುವ, ಅದನ್ನು ಜಗತ್ತಿಗೆ ಪ್ರಕಾಶಿಸುವ, ಇನ್ಯರದ್ದೋ ಇನ್ಯೆನೋ ಪ್ರತಿಪಾದಿಸುವುದಕ್ಕಿಂತ.

  ReplyDelete
  Replies

  1. ಕಮೆಂಟಿಸಿದ್ದಕ್ಕೆ ಧನ್ಯವಾದಗಳು.
   ರಾಮಾಯಣ ಕಾಲದಲ್ಲಿ ಲಿಪಿ ಇತ್ತೋ ಅಥವಾ ಮನುಷ್ಯನಿಗೆ ಬರವಣಿಗೆ ಗೊತ್ತಿತ್ತೋ? ಸಮಸ್ಯೆಯೆಂದರೆ ರಾಮಾಯಣ ಮೂಲತಃ ಒಂದು ಹಾಡುಗಬ್ಬ. ಅದನ್ನು ಪದ್ಯರೂಪದಲ್ಲಿ ಹಾಡಲಾಗ್ತಾ ಇತ್ತು(ಲವಕುಶರ ಥರ). ಕ್ರಮೇಣ ಬರಹ ರೂಢಿಯಾದ ಮೇಲೆ ಅದನ್ನ ಕೃತಿರೂಪಕ್ಕಿಳಿಸಲಾಯ್ತು. ಆದ್ದರಿಂದ ಈಗ ಸಿಗುವ ರಾಮಾಯಣ ವಾಲ್ಮೀಕಿ ಬರೆದ ರಾಮಾಯಣದ ಯಥಾವತ್ ರೂಪವೆಂದು ಒಪ್ಪಿಕೊಳ್ಳುವುದು ಇತಿಹಾಸದ ವಿದ್ಯಾರ್ಥಿಯಾಗಿ ನನಗೆ ಕಷ್ಟ.

   Delete
 8. Please read this at your convenience.

  http://brahmavijigyasa.blogspot.in/2012/10/naarada-elucidates-on-greatest-human.html

  ReplyDelete