Pages

Wednesday, January 20, 2016

ಶ್ರೀಮಚ್ಛಂಕರಭಗವತ್ಪಾದ ಚರಿತ್ರ: ಶಂಕರವಿಜಯ ಪ್ರಕರಣ


श्रुति स्मृति पुराणानामालयं करुणालयं|
      नमामि भगवत्पादशंकरं लॊकशंकरं ||
ಶ್ರೀಮಚ್ಛಂಕರ ಭಗವತ್ಪಾದರ ಬಗ್ಗೆ ಯಾರಾದರೂ ಏನಾದರೂ ಬರೆದರೆ ಅದು ಹೊಸತೇನೂ ಆಗಿರುವುದಿಲ್ಲ. ಶಂಕರರ ಸಮಕಾಲೀನರಿಂದ ಹಿಡಿದು ಇಂದಿನವರೆಗೂ ಸಹಸ್ರ ಸಹಸ್ರ ಲೇಖಕರು ಶಂಕರಾಚಾರ್ಯರ ಬಗ್ಗೆ ಲೆಕ್ಕಕ್ಕಿಡಲಾಗದಷ್ಟು ಬಾರಿ ಬರೆದಿದ್ದಾರೆ. ಅವರ ವೇದಾಂತ ತತ್ತ್ವಗಳಿಂದ ಮೊದಲು ಮಾಡಿ ಜೀವನದ ಘಟನಾವಳಿಗಳವರೆಗೆ. ಹಾಗೆಂದು ಶಂಕರರ ಅದ್ವೈತ ವೇದಾಂತವನ್ನು ವಿಮರ್ಶಿಸುವುದು ಈ ಲೇಖನದ ಉದ್ದೇಶವಲ್ಲ. ಹುಲುಮಾನವರಿಂದ ಅದು ಸಾಧ್ಯವೂ ಇಲ್ಲ. ಶಂಕರರ ಇತಿಹಾಸದ ಬಗ್ಗೆ ಒಂದು ವಿಮರ್ಶಕ ನೋಟ ಬೀರುವುದಷ್ಟೇ ಈ ಲೇಖನದ ಗುರಿ.
ವೇದಾಂತವಿಚಾರದ ಇತಿಹಾಸ ತಿಳಿಯಬೇಕೆನ್ನುವವರಿಗೆ ಆಚಾರ್ಯರ ಗ್ರಂಥಗಳಂತೆ ಅವರ ಶಿಷ್ಯ ಅಥವಾ ಶಿಷ್ಯಪರಂಪರೆಯ ಗ್ರಂಥಗಳೂ ಅವಶ್ಯವಾಗಿ ಪರೀಕ್ಷಣೀಯ. ಆದರೆ ಆಚಾರ್ಯರ ಚರಿತ್ರೆ ಮತ್ತು ಉಪದೇಶವನ್ನು ಗೊತ್ತುಪಡಿಸಹೊರಟಾಗ ಅವರ ಮೂಲಗ್ರಂಥಗಳ ಅಭಿಪ್ರಾಯಕ್ಕೆ ಅಗ್ರಸ್ಥಾನ ಕೊಡುವುದು ಅತ್ಯಗತ್ಯ. ಹಾಗಾಗಿ ಆ ಚರಿತ್ರಾದಿಗಳ ಸತ್ಯಾಸತ್ಯತೆಯ ಪರಿಶೀಲನೆಯೂ ಅಷ್ಟೇ ಮುಖ್ಯ. ಶಂಕರಾಚಾರ್ಯರ ಬಗೆಗೆ ನಮಗೆ ಈಗ ತಿಳಿದುಕೊಳ್ಳಲು ಇರುವ ಮೂಲಾಧಾರವೆಂದರೆ ಬೇರೆ ಬೇರೆ ಕಾಲಗಳಲ್ಲಿ ರಚಿತಗೊಂಡಿರುವ ’ಶಂಕರವಿಜಯ’ ಗ್ರಂಥಗಳು. ಈ ಹೆಸರಿನ ಒಟ್ಟೂ ೨೨ ಗ್ರಂಥಗಳಿವೆಯಂತೆ. ಆದರೆ ಈಗ ಲಭ್ಯವಿರುವ ಅಥವಾ ಪ್ರಚಲಿತದಲ್ಲಿರುವ ಪ್ರಮುಖ ಶಂಕರವಿಜಯಗಳೆಂದರೆ ಮಾಧವೀಯ ಶಂಕರವಿಜಯ, ವ್ಯಾಸಾಚಲೀಯ ಶಂಕರವಿಜಯ, ಚಿದ್ವಿಲಾಸೀಯ ಶಂಕರವಿಜಯವಿಲಾಸ, ಅನಂತಾನಂದಗಿರೀಯ ಶಂಕರವಿಜಯ, ಸದಾನಂದವ್ಯಾಸಕೃತ ಶಂಕರಮಂದಾರಸೌರಭ, ಸುಷುಮಾಸಹಿತ ಗುರುರತ್ನಮಾಲಾ, ನೀಲಕಂಠಕೃತ ಶಂಕರಮಂದಾರ, ರಾಮಶರ್ಮವಿರಚಿತ ಶಂಕರಕಥಾಸುಧಾನಿಧಿ, ಶಂಕರಚರಿತ್ರಮ್, ಗುರುನಾಥಕೃತ ಶಂಕರವಿಜಯಚೂರ್ಣಿಕಾ, ನೀಲಕಂಠಶಾಸ್ತ್ರಿಕೃತ ಶ್ರೀಶಂಕರಾಭ್ಯುದಯ, ಭಗವತ್ಪಾದಾಭ್ಯುದಯ ಹಾಗೂ ಇತ್ತೀಚಿನ ಶಂಕರದಿಗ್ವಿಜಯಸಾರ. ಇವುಗಳಲ್ಲಿ ಮೊದಲ ನಾಲ್ಕಾದ ಮಾಧವೀಯ, ವ್ಯಾಸಾಚಲೀಯ, ಚಿದ್ವಿಲಾಸೀಯ ಮತ್ತು ಅನಂತಾನಂದಗಿರೀಯಗಳು ಬಹು ಪ್ರಸಿದ್ಧಿ ಮಾತ್ರವಲ್ಲ ಬಹು ಪ್ರಾಚೀನವೆಂದೂ ಪ್ರತೀತಿ. ಉಳಿದವುಗಳೆಲ್ಲ ಈ ಶಂಕರವಿಜಯಗಳ ವ್ಯಾಖ್ಯಾನಕ್ಕಾಗಿಯೋ, ವಿಮರ್ಶೆಗಾಗಿಯೋ, ಸಂಗ್ರಹಕ್ಕಾಗಿಯೋ ಅಥವಾ ಲೆಕ್ಕದ ಭರ್ತಿಗೆ ತಮ್ಮದೂ ಒಂದಿರಲಿ ಎಂಬುದಕ್ಕಾಗಿಯೋ ರಚಿತವಾದವು. ಶಂಕರರ ಕಾಲಮಾನದ ಬಗ್ಗೆ ಭಿನ್ನಾಭಿಪ್ರಾಯಗಳಿರುವ ವಿಷಯವಾಗಿ ಹಿಂದೊಮ್ಮೆ ಬರೆದಿದ್ದೆ. ಮೊನ್ನೆ ಶಂಕರಜಯಂತಿಯನ್ನು ಕೇಂದ್ರಸರ್ಕಾರ ತತ್ತ್ವಜ್ಞಾನಿಗಳ ದಿನವೆಂದು ಘೋಷಿಸಿದಾಗಲೂ ಶೃಂಗೇರಿ ಮಠದ ಕಾಲಮಾನವನ್ನಾಧರಿಸಿ ಕೇಂದ್ರ ಸರ್ಕಾರ ನೀಡಿದ ಶಂಕರರ ಜನ್ಮವರ್ಷದ ಬಗ್ಗೆ ಕಂಚಿಮಠದಿಂದ ತಕರಾರು ಶುರುವಾಗಿತ್ತು. ಶಂಕರಾಚಾರ್ಯರಿಂದ ಸ್ಥಾಪಿತವಾದ ಮಠಗಳ ಬಗ್ಗೆಯೇ ಅಭಿಪ್ರಾಯಭೇದಗಳಿವೆ. ಇಂಥ ತಕರಾರುಗಳು ಹೊಸದಲ್ಲ. ಅಂಥವುಗಳನ್ನು ಮುಂದೆ ನೋಡೋಣ. ಆದರೆ ಶಂಕರರ ಕಾಲಮಾನವನ್ನು, ಚರಿತ್ರೆಯನ್ನು ನಿಷ್ಕರ್ಷಿಸಲು ಸಹಾಯಕವಾಗುವುದೆಂದು ಶಂಕರವಿಜಯಗಳನ್ನು ಆಧಾರವಾಗಿಟ್ಟುಕೊಂಡರೆ ಅವುಗಳ ಕಾಲವನ್ನು ನಿರ್ಣಯಿಸುವುದು ಇನ್ನೂ ಕಷ್ಟದ ವಿಚಾರವಾಗಿದೆ.
ಮೊದಲನೇಯದಾಗಿ, ಮಾಧವೀಯ ಶಂಕರವಿಜಯವನ್ನು ವಿಜಯನಗರದ ಸಂಸ್ಥಾಪಕರಾದ ವಿದ್ಯಾರಣ್ಯ ಸ್ವಾಮಿಗಳು ಪೂರ್ವಾಶ್ರಮದಲ್ಲಿ ಮಾಧವಾಚಾರ್ಯನೆಂಬ ಹೆಸರಿನಿಂದ ಬರೆದದ್ದೆಂದು ಬಹುಜನರ ನಂಬಿಕೆಯಿದೆ. ಇದು ಪ್ರಾಯಶಃ ಸದ್ಯ ಲಭ್ಯವಿರುವ ಹತ್ತಕ್ಕೂ ಹೆಚ್ಚು ಶಂಕರವಿಜಯಗಳಲ್ಲಿ ಅತಿಪ್ರಸಿದ್ಧವಾದುದು. ಮಾಧವೀಯವೆಂದೇ ಹೆಸರಾಗಿರುವ ಈ ಗ್ರಂಥಕ್ಕೆ ಸಂಕ್ಷೇಪ ಶಂಕರವಿಜಯವೆಂದು ಕವಿ ಪ್ರತಿ ಸರ್ಗಾಂತ್ಯದಲ್ಲಿ ಹೆಸರು ಕೊಟ್ಟಿದ್ದಾನೆ. ಇದು ವಿದ್ಯಾರಣ್ಯಕೃತವೆಂಬುದಕ್ಕೆ ಮಂಗಲಶ್ಲೋಕದಲ್ಲಿರುವ ವಿದ್ಯಾತೀರ್ಥರ ಸ್ಮರಣೆಯನ್ನೂ, ’ಇತಿ ಶ್ರೀಮಾಧವೀಯೇ’ ಎಂಬ ಸರ್ಗಸಮಾಪ್ತಿವಾಕ್ಯವನ್ನೂ ಬಿಟ್ಟರೆ ಬೇರೆ ಆಧಾರಗಳಿಲ್ಲ. ಇದು ವಿದ್ಯಾರಣ್ಯಕೃತವಲ್ಲ ಎಂಬುದಕ್ಕೆ ಕಾರಣವೂ ಇದೆ. ಶೃಂಗೇರಿ ಜಗದ್ಗುರುಗಳಾಗಿದ್ದ ಶ್ರೀಸಚ್ಚಿದಾನಂದಭಾರತೀಸ್ವಾಮಿಗಳ ಅಪ್ಪಣೆಯಂತೆ ಕಾಶೀ ಲಕ್ಷ್ಮಣ ಶಾಸ್ತ್ರಿಗಳು ಗುರುವಂಶಕಾವ್ಯ ಅಥವಾ ಶಂಕರವಿಜಯವೆಂಬ ಗ್ರಂಥರಚನೆ ಮಾಡಿದ್ದರು. ಈ ಗ್ರಂಥದ ಶಂಕರಚರಿತ್ರೆಗೂ ಮಾಧವೀಯದಲ್ಲಿರುವ ಶಂಕರಚರಿತ್ರೆಯ ವಿವರಗಳಿಗೂ ತುಂಬ ವ್ಯತ್ಯಾಸವಿದೆ. ಗುರುವಂಶಕಾವ್ಯವು ಶೃಂಗೇರಿಯ ಪುಸ್ತಕಭಂಡಾರದಲ್ಲೇ ದೊರೆತು ಅಚ್ಚಾದ ಕೃತಿ. ಶೃಂಗೇರಿ ಪೀಠಾಧಿಪತಿಗಳಾಗಿದ್ದ ವಿದ್ಯಾರಣ್ಯ ಸ್ವಾಮಿಗಳು ಬರೆದ ವಿವರಗಳಿಗೆ ವಿರುದ್ಧವಾದ ವಿಷಯಗಳನ್ನು ಶೃಂಗೇರಿ ಪೀಠದವರೇ ಬರೆಸಿದರೆಂಬುದು ವಿಶ್ವಸನೀಯವಲ್ಲ. ಜೊತೆಗೆ ಮಾಧವೀಯದಲ್ಲಿ ಕವಿ ತನ್ನನ್ನು ತಾನು ’ಪ್ರೌಢೋಯಂ ನವಕಾಲಿದಾಸಕವಿತಾಸಂತಾನಸಂತಾನಕಃ’ ಮತ್ತು ’ವಾಗೇಷು ನವಕಾಲಿದಾಸವಿದುಷಃ’ ನವಕಾಲಿದಾಸನೆಂದು ಕರೆದುಕೊಂಡಿದ್ದಾನೆ. ಮಾಧವ ಅಥವಾ ವಿದ್ಯಾರಣ್ಯರಿಗೆ ಆ ಬಿರುದಿತ್ತೆಂಬುದಕ್ಕೆ ಆಧಾರವಿಲ್ಲ. ಭಾಗವತಚಂಪೂವನ್ನು ಬರೆದ ಮಾಧವನೆಂಬ ಕವಿಗೆ ಆ ಬಿರುದಿತ್ತು. ಭಾಗವತಚಂಪೂವಿನಲ್ಲಿಯೂ ’ಅಭಿನವಪದಪೂರ್ವಃಕಾಲಿದಾಸಃ’, ’ನವಕಾಲಿದಾಸವಿದುಷಶ್ವ’ ಎಂದು ತನ್ನ ನವಕಾಲಿದಾಸ ಬಿರುದನ್ನು ಹೇಳಿಕೊಂಡಿದ್ದಾನೆ. ಯಮಕಾದಿಗಳಲ್ಲಿ ಆತನ ಶೈಲಿಯೂ ಶಂಕರವಿಜಯದ ಶೈಲಿಯನ್ನೇ ಹೋಲುತ್ತದೆ. ನಾಯಕರಾಜನ ಆಸ್ಥಾನಕವಿಯಾದ ಶ್ರೀರಾಜಚೂಡಾಮಣಿದೀಕ್ಷಿತನ ಶಂಕರಾಭ್ಯುದಯದ ನಾಲ್ಕನೇ ಸರ್ಗದ ಇಪ್ಪತ್ನಾಲ್ಕು ಶ್ಲೋಕಗಳು ಯಥಾವತ್ ಮಾಧವೀಯದ ಹನ್ನೆರಡನೇ ಸರ್ಗದಲ್ಲಿ ಸೇರಿಕೊಂಡಿವೆ. ರಾಜಚೂಡಾಮಣಿ ದೀಕ್ಷಿತ ಹದಿನೇಳನೇ ಶತಮಾನದವನಾದ್ದರಿಂದ ಅವನ ಶ್ಲೋಕಗಳನ್ನು ತೆಗೆದುಕೊಂಡ ಮಾಧವ ಅವನಿಗಿಂತ ಈಚಿನವನಿರಬೇಕು. ಪೂರ್ವಾಶ್ರಮದಲ್ಲಿ ಮಾಧವನೆಂದು ಹೆಸರಾಗಿದ್ದ ವಿಜಯನಗರ ಸ್ಥಾಪಕ ವಿದ್ಯಾರಣ್ಯರು ಹದಿನಾಲ್ಕನೇ ಶತಮಾನಕ್ಕೂ ಚೂರು ಹಿಂದಿನವರು. ಅಥವಾ ಶಂಕರಾಭ್ಯುದಯದ ಶ್ಲೋಕಗಳನ್ನು ಬೇರಾರೋ ಮಾಧವನ ಹೆಸರಿನಲ್ಲಿ ಶಂಕರವಿಜಯದಲ್ಲಿ ಸೇರಿಸಿರಲೂಬಹುದು!. ಅಷ್ಟಾಗಿದ್ದು ಮಾತ್ರವಲ್ಲ. ಮಾಧವೀಯದ ಗ್ರಂಥಕಾರನು ಯಾವ್ಯಾವುದೋ ಕಾಲಕ್ಕೆ ಸೇರಿದ ಬಾಣ, ದಂಡಿ, ಮಯೂರ, ಶ್ರೀಹರ್ಷ, ಭಟ್ಟಭಾಸ್ಕರ, ಉದಯನನ ಜೊತೆ ಆಚಾರ್ಯರು ವಾದಮಾಡಿದಂತೆ ವರ್ಣಿಸಿದ್ದಾನೆ. ಅಂಥ ಕಲ್ಪಿತ ಕತೆಗಳನ್ನೆಲ್ಲ ವಿದ್ಯಾರಣ್ಯ ಸ್ವಾಮಿಗಳು ಬರೆದರೆಂದರೆ ನಂಬಲು ಕಷ್ಟ. ಮಾಧವೀಯವು ವಿದ್ಯಾರಣ್ಯಕೃತವೆಂಬುದಕ್ಕಿರುವ ಏಕೈಕ ಊಹೆ ಅದರ ಮಂಗಲ ಶ್ಲೋಕದಲ್ಲಿ ಬರುವ ’ಪ್ರಣಮ್ಯ ಪರಮಾತ್ಮಾನಾಂ ಶ್ರೀವಿದ್ಯಾತೀರ್ಥರೂಪಿಣಮ್’ ಎಂಬುದು. ವಿದ್ಯಾತೀರ್ಥರೆಂಬುದು ಶೃಂಗೇರಿ ಪರಂಪರೆಯಲ್ಲಿ ವಿದ್ಯಾರಣ್ಯರ ಗುರುಗಳಾದ ವಿದ್ಯಾಶಂಕರರೇ ಎಂಬುದು ಹೌದಾದರೂ ವಿದ್ಯಾರಣ್ಯರು ಶಂಕರವಿಜಯದ ಮಾಧವಾಚಾರ್ಯರಲ್ಲವೇ ಅಲ್ಲ. ಯಾಕೆಂದು ಮುಂದೆ ಶೃಂಗೇರಿ ಮಠದ ವಿಚಾರ ಬಂದಾಗ ನೋಡೋಣ.
ಶಂಕರವಿಜಯ ಮಾಲಿಕೆಯಲ್ಲಿ ಎರಡನೇ ಅತಿಪ್ರಸಿದ್ಧ ಗ್ರಂಥವೆಂದರೆ ವ್ಯಾಸಾಚಲೀಯ. ಇದನ್ನು ’ಪ್ರಾಚೀನ ಶಂಕರವಿಜಯ’ವೆಂದೂ ಕೆಲವೆಡೆ ಕರೆಯಲಾಗಿದೆ. ಕಂಚಿಮಠದ ಆತ್ಮಬೋಧೇಂದ್ರರು ’ಪ್ರಾಚೀನ ಶಂಕರವಿಜಯ’ದ ಕೆಲಭಾಗಗಳನ್ನು ತಮ್ಮ ’ಸುಷುಮಾ’ ಗುರುರತ್ನಮಾಲಿಕಾ ವ್ಯಾಖ್ಯಾನದಲ್ಲಿ ಅಲ್ಲಲ್ಲಿ ಉದಾಹರಿಸಿದ್ದಾರೆ. ಶಂಕರಾಚಾರ್ಯರ ಜನ್ಮಕಾಲದ ಸ್ಪಷ್ಟವಾದ ವಿವರಗಳುಳ್ಳ ಕ್ಚಚಿತ್ ಗ್ರಂಥಗಳಲ್ಲಿ ಇದೂ ಒಂದು. ಮಾಧವನು ತನ್ನ ಮಾಧವೀಯದಲ್ಲಿ ಪ್ರಾಚೀನ ಶಂಕರವಿಜಯವನ್ನು ಹೆಸರಿಸಿದ್ದಾನಾದರೂ ಆತ ಹೇಳುವ ಪ್ರಾಚೀನಶಂಕರವಿಜಯ ಇದಾಗಿರುವ ಸಾಧ್ಯತೆಯಿಲ್ಲ. ಮಾಧವೀಯದ ವಿವರಗಳಿಗೂ ಪ್ರಾಚೀನಶಂಕರವಿಜಯದ ವಿವರಗಳಿಗೂ ಹೆಚ್ಚುಕಡಿಮೆಯಿದೆ. ಈ ಪ್ರಾಚೀನಶಂಕರವಿಜಯವನ್ನು ಕಂಚಿಮಠದ ಹದಿನೆಂಟನೇ ಯತಿಗಳಾದ ಮೂಕಶಂಕರರು ಬರೆದರೆಂದು ಶಂಕರವಿಜಯಗಳ ಕುರಿತು ವಿಸ್ತೃತ ಅಧ್ಯಯನ ನಡೆಸಿದ್ದ ವೆಂಕಟರಾಮನ್ ಎಂಬ ಇತಿಹಾಸಕಾರರ ಹೇಳಿಕೆ. ಜೊತೆಗೆ ಮಾಧವೀಯದಲ್ಲಿ ಉಲ್ಲೇಖಿತ ವ್ಯಾಸಾಚಲೀಯ ಶಂಕರವಿಜಯವೆಂಬ ಗ್ರಂಥವು ಬೇರೆಯೇ ಇದೆಯೆಂಬುದು ಕೃತಿಕಾರನ ಅಂಬೋಣ.
ನೇತಾ ಯತ್ರೋಲ್ಲಸತಿ ಭಗವತ್ಪಾದಸಂಜ್ಞೋ ಮಹೇಶಃ
ಶಾಂತಿರ್ಯತ್ರ ಪ್ರಕಟತಿ ರಸಃ ಶೇಷವಾನುಜ್ವಲಾದ್ಯೈಃ |
ಯತ್ರಾವಿದ್ಯಾಕ್ಷತಿರಪಿ ಫಲಂ ತಸ್ಯ ಕಾವ್ಯಸ್ಯ ಕರ್ತಾ
ಧನ್ಯೋ ವ್ಯಾಸಾಚಲಕವಿವರಸತ್ಕೃತಿಜ್ಞಾಶ್ಚ ಧನ್ಯಾಃ ||

-ಭಗವತ್ಪಾದರೆಂಬ ಹೆಸರಿನ ಮಹೇಶ್ವರನೇ ಯಾವುದಕ್ಕೆ ನಾಯಕನೋ, ಯಾವುದರಲ್ಲಿ ಶೃಂಗಾರಾದಿ ಅಪ್ರಧಾನರಸಗಳಿಂದೊಡಗೂಡಿದ ಶಾಂತಿರಸವೇ ಪ್ರಧಾನವಾಗಿರುವುದೋ, ಯಾವುದರಲ್ಲಿ ಅವಿದ್ಯಾನಾಶವೇ ಫಲವೋ, ಆ ಕಾವ್ಯದ ಕರ್ತೃವಾದ ವ್ಯಾಸಾಚಲಕವಿಯೇ ಧನ್ಯ.
ವ್ಯಾಸಾಚಲವೆಂಬುದು ಹೆಸರೋ ಅಥವಾ ಬಿರುದೋ ಎಂಬುದು ಪ್ರಕೃತ ಕಾವ್ಯದಲ್ಲಿ ಅಸ್ಪಷ್ಟ. ಆದರೆ ಈ ಶ್ಲೋಕದಲ್ಲಿ ಹೇಳಿದ ’ವ್ಯಾಸಾಚಲಕವಿಃ’ ಎಂಬುದಕ್ಕೆ ’ವ್ಯಾಸ ಇವ ಅಚಲಃ ಸ್ಥಿರಶ್ಚಾಸೌ ಕವಿಶ್ರೇಷ್ಟಶ್ಚ ಇತಿ ವ್ಯಾಸಾಚಲಕವಿವರೋ ಮಾಧವೋ’ ವ್ಯಾಸನಂತೆ ಅಚಲನಾಗಿರುವ ಮಾಧವನೇ ವ್ಯಾಸಾಚಲನೆಂದು ಡಿಂಡಿಮವ್ಯಾಖ್ಯಾನಕಾರ ರಾಜಶೇಖರ ಹೇಳುತ್ತಾನೆ. ಅದೆಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ. ಮಾಧವೀಯಕ್ಕೂ ವ್ಯಾಸಾಚಲೀಯಕ್ಕೂ ಸುಮಾರು ೫೨೦ ಶ್ಲೋಕಗಳಲ್ಲಿ ಸಮಾನತೆಯಿರುವುದರಿಂದ ಡಿಂಡಿಮವ್ಯಾಖ್ಯಾನಕಾರ ಆ ನಿಷ್ಕರ್ಷೆಗೆ ಬಂದಿರಬಹುದು. ತನ್ನನ್ನು ನವಕಾಳಿದಾಸನೆಂದು ಹೇಳಿಕೊಂಡ ಮಾಧವ ತಾನು ವ್ಯಾಸನೆಂದೂ ಹೇಳಿಕೊಂಡಿರಬಹುದೆಂದು ಕಲ್ಪಿಸಬಹುದು. ಆದರೆ ಮಾಧವೀಯದಲ್ಲೊಂದುಕಡೆ
ಅತ್ಯುನ್ನತಸ್ಯ ಕಾವ್ಯರ್ದ್ರೋರ್ವ್ಯಾಸಾದ್ರಿಮುಖಜನ್ಮನಃ
ಸಮಗ್ರಾಣ್ಯರ್ಥಪುಷ್ಪಾಣಿ ಗೃಹೀತುಮಹಕ್ಷಮಃ ||
ಹ್ರಸ್ವಧೀಸೃಣಿನಾ ಯಾವದಾಯಾತ್ತಾವದದಾದದತ್ |
ಸಂಕ್ಷೇಪಶಂಕರಜಯಸ್ರಜಂ ಸಂದರ್ಭಯಾಮ್ಯಹಮ್ ||

-ವ್ಯಾಸಾದ್ರಿಯ ಮುಖದಲ್ಲಿ ಹುಟ್ಟಿದ ಕಾವ್ಯವೃಕ್ಷದ ಎಲ್ಲಾ ಅರ್ಥರೂಪವಾದ ಹೂಗಳನ್ನೂ ಎತ್ತಿಕೊಳ್ಳುವುದಕ್ಕೆ ನಾನು ಅಶಕ್ತನು. ಮೋಟಾಗಿರುವ ಬುದ್ಧಿಯೆಂಬ ದೋಣಿಯಿಂದ ಎಷ್ಟು ಸಿಕ್ಕಿತೋ ಅಷ್ಟನ್ನು ತೆಗೆದುಕೊಂಡು ಸಂಕ್ಷೇಪ ಶಂಕರವಿಜಯವೆಂಬ ಮಾಲಿಕೆಯನ್ನು ಕಟ್ಟುವೆನು.
ಆದ್ದರಿಂದ ವ್ಯಾಸಾಚಲ ಕವಿಯನ್ನು ಮಾಧವನು ಸ್ತುತಿಸಿರುವುದು ಸ್ಪಷ್ಟ. ಹಾಗಾಗಿ ಅವರಿಬ್ಬರೂ ಬೇರೆಬೇರೆಯೇ ಇರಬೇಕು. ಆತ್ಮಬೋಧರು ಗುರುರತ್ನಮಾಲಿಕೆಯಲ್ಲಿ ವ್ಯಾಸಾಚಲೀಯದ ಕೆಲ ಶ್ಲೋಕಗಳನ್ನು ಉಲ್ಲೇಖಿಸಿದ್ದರೂ ಅದು ಮದ್ರಾಸ್ ಗೌರ್ಮೆಂಟ್ ಓರಿಯಂಟಲ್ ಲೈಬ್ರರಿಯಲ್ಲಿ ಅಚ್ಚಾದ ವ್ಯಾಸಾಚಲೀಯದ ಹಸ್ತಪ್ರತಿಯಲ್ಲಿಲ್ಲ. ಹಾಗಾದರೆ ಒಂದಕ್ಕಿಂತ ಹೆಚ್ಚು ವ್ಯಾಸಾಚಲೀಯಗಳು ಚಾಲ್ತಿಯಲ್ಲಿದ್ದವೇ? ಗೋವಿಂದನಾಥನು ಬರೆದಿರುವ ಕೇರಳೀಯ ಶಂಕರವಿಜಯದಲ್ಲೂ ವ್ಯಾಸಾಚಲೀಯದ ಪರಾಮರ್ಶವಿರುವುದರಿಂದ ಅದು ಉಳಿದವುಗಳಿಗಿಂತ ಪ್ರಾಚೀನವಾಗಿರಲೇ ಬೇಕು. ಮಾತ್ರವಲ್ಲ, ವ್ಯಾಸಾಚಲೀಯದಲ್ಲೇ ವ್ಯಾಸಾಚಲ, ವ್ಯಾಸಶೈಲ, ವ್ಯಾಸಾದ್ರಿ, ವ್ಯಾಸಗಿರಿಪ್ರೋಕ್ತವಾದ ಗ್ರಂಥವಿದೆಂದು ಸುಮಾರು ಹನ್ನೆರಡು ಸರ್ಗಗಳ ಕೊನೆಯಲ್ಲಿರುವುದರಿಂದ ಇದು ಹಳೆಯ ವ್ಯಾಸಾಚಲೀಯದಿಂದ ಅದೇ ಹೆಸರಲ್ಲಿ ಇನ್ಯಾರೋ ಸಂಗ್ರಹಿಸಿದ ಗ್ರಂಥವಾಗಿರಬೇಕು. ವೆಂಕಟರಾಮನ್ನರು ಕಂಚಿಮಠದ ಆಚಾರ್ಯರೊಬ್ಬರು ವ್ಯಾಸಾಚಲದಲ್ಲಿ ವಾಸಿಸುತ್ತಿದ್ದುದರಿಂದ ಅವರಿಗೆ ಆ ಹೆಸರಿತ್ತೆಂದು ಬರೆದಿದ್ದಾರೆ. ಆದರೂ ಈ ಗ್ರಂಥದ ಕರ್ತೃವಿನ ಪರಿಚಯವಿರುವುದು ಅಷ್ಟಕ್ಕಷ್ಟೆ.
ಶಂಕರವಿಜಯಗಳ ಪರಂಪರೆಯಲ್ಲಿ ಮೂರನೇಯದು ಚಿದ್ವಿಲಾಸೀಯ ಶಂಕರವಿಜಯ(ಇದು ಮದ್ರಾಸು ವಾವಿಳ್ಳ ರಾಮಶಾಸ್ತ್ರಿಯವರಿಂದ ೧೮೭೫ರಲ್ಲಿ ಪ್ರಕಟಿತಗೊಂಡಿತ್ತು). ಇದರಲ್ಲಿ ಚಿದ್ವಿಲಾಸನೆಂಬ ಗುರು ವಿಜ್ಞಾನಕಂದನೆಂಬ ಶಿಷ್ಯನಿಗೆ ಹೇಳುವ ಕಥೆಯಿದೆ. ೨೫ನೇ ಕಂಚಿ ಪೀಠಾಧಿಪತಿಗಳೊಬ್ಬರು ಇದೇ ಹೆಸರನವರಿರುವರಾದರೂ ಈ ಶಂಕರವಿಜಯದಲ್ಲಿ ಆಚಾರ್ಯರು ಕಂಚಿಯಲ್ಲಿ ಮಠಸ್ಥಾಪಿಸಿದ ವಿವರಗಳಿಲ್ಲ. ಮೂರು ಪಾಠಗಳು ಸಂಪೂರ್ಣವಾಗಿ ಶೃಂಗೇರಿ ಮಠವನ್ನು ಹೊಗಳಲು ಮೀಸಲಾಗಿವೆ. ಒಂದು ಕಡೆ ಕಂಚಿಯಲ್ಲಿ ಸರ್ವಜ್ಞಪೀಠವಿದೆಯೆನ್ನುವ ರಚನಕಾರ ಶಂಕರರ ಕೊನೆಯ ದಿನಗಳನ್ನು ಬದರಿನಾಥದಲ್ಲಿ ಕಳೆಸಿದ್ದಾನೆ. ಕಂಚಿ ಮಠದ ವಿವರಗಳು ಇಲ್ಲವೇ ಇಲ್ಲ. ಹಾಗಾಗಿ ಇದರ ರಚಯಿತನೂ ಅಪರಿಚಿತನೇ.
ನಾಲ್ಕನೇಯದು ಕೃತಕವೆಂದು ಹೆಚ್ಚಿನ ಇತಿಹಾಸಕಾರರಿಂದ ತಿರಸ್ಕೃತವಾಗಿರುವ ಅನಂತಾನಂದಗಿರಿಯ ಪ್ರಾಚೀನ ಶಂಕರವಿಜಯ. ಇದನ್ನು ಬರೆದ ಅನಂತಾನಂದಗಿರಿ ತನ್ನನ್ನು ತಾನು ಆಚಾರ್ಯರ ಶಿಷ್ಯನೆಂದು ಹೇಳಿಕೊಂಡಿದ್ದಾನೆ. ಜೊತೆಗೆ ಮಾಧವನೂ ತನ್ನ ಗ್ರಂಥದಲ್ಲಿ ’ಶಾಙ್ಕರಸ್ಯ ಭಗವತೋ ಭಾಷ್ಯಕಾರಸ್ಯಾಯಂ ಶಾಙ್ಕರಃ ಆನಂದಗಿರ್ಯಭಿದಃ | ತಸ್ಯ ತತ್ಪ್ರಿಯ ಶಿಷ್ಯಸ್ಯ ವಾಕ್ಯಸಾರಃ’ - ಶಾಂಕರನೆಂದರೆ ಭಗವದ್ಭಾಷ್ಯಕಾರರ ಪ್ರಿಯಶಿಷ್ಯ ಆನಂದಗಿರಿಯೇ, ಹೇಗೆ ಸಣ್ಣ ಕನ್ನಡಿಯಲ್ಲಿ ವಿಸ್ತಾರವಾದ ಜಗತ್ತನ್ನು ಕಾಣಬಹುದೋ ಹಾಗೇ ಆತನ ವಾಕ್ಯದ ಸಾರವನ್ನು ತನ್ನ ಲಘುಸಂಗ್ರಹದಲ್ಲಿ ನೋಡಬಹುದು ಎಂದು ವ್ಯಾಖ್ಯಾನಿಸುತ್ತಾನೆ. ಮಾಧವನು ತನ್ನ ಕೃತಿಯನ್ನು ಲಘುಸಂಗ್ರಹವೆಂದು ಕರೆದಿರುವಾಗ ಪ್ರಾಚೀನಶಂಕರವಿಜಯ ವಿಸ್ತಾರವಾಗಿತ್ತೆಂದು ಊಹಿಸಬಹುದು. ಅದಕ್ಕೆ ವ್ಯಾಖ್ಯಾನವನ್ನು ಬರೆದಿರುವ ಅಚ್ಯುತರಾಯನು ತನ್ನ ’ಅದ್ವೈತರಾಜ್ಯಲಕ್ಷ್ಮಿ’ ಟೀಕೆಯಲ್ಲಿ ’ಬೃಹಚ್ಛಂಕರವಿಜಯ ಏವ ಆನಂದಗಿರಿವಿರಚಿತೇ’ - ಆನಂದಗಿರಿಗಳಿಂದ ವಿರಚಿತವಾದ ಬೃಹಚ್ಛಂಕರದಲ್ಲಿ ಎಂದು ಬರೆದಿರುವುದನ್ನು ನೋಡಿದರೆ ಮಾಧವೀಯವೇತ್ಯಾದಿಗಳಿಗಿಂತ ಆನಂದಗಿರೀಯವು ದೊಡ್ಡದೆಂದು ತಿಳಿಯುತ್ತದೆ. ಹಾಗಿದ್ದರೂ ಈ ಆನಂದಗಿರೀಯವನ್ನು ಕೃತಕವೆಂದು ಇತಿಹಾಸಕಾರರು ತಿರಸ್ಕರಿಸಿರಲು ಒಂದು ಕಾರಣವಿದೆ. ಅನಂತಾನಂದಗಿರೀಯವೆಂಬ ಇನ್ನೊಂದು ಶಂಕರವಿಜಯವಿದೆ. ಮಾಧವೀಯದ ವ್ಯಾಖ್ಯಾನಕಾರ ಧನಪತಿಸೂರಿಯು ತನ್ನ ವ್ಯಾಖ್ಯಾನದಲ್ಲಿ ಬಹಳಷ್ಟು ಕಡೆ ಅನಂತಾನಂದಗಿರೀಯದ ಶ್ಲೋಕಗಳನ್ನು ಉದ್ಧರಿಸಿದ್ದಾನೆ. ಆ ಶ್ಲೋಕಗಳಲ್ಲಿ ಕೆಲವು ಆನಂದಗಿರೀಯದಲ್ಲೂ ಇವೆ. ಆದರೆ ಧನಪತಿಸೂರಿ ಉದಾಹರಿಸಿರುವ ಸುಮಾರು ೬೦೦ ಶ್ಲೋಕಗಳು ಈಗಿನ ಆನಂದಗಿರೀಯದಲ್ಲಿ ಇಲ್ಲವೇ ಇಲ್ಲ. ಹಾಗಾಗಿ ಆನಂದಗಿರೀಯವನ್ನು ಹೊರತುಪಡಿಸಿದ ಅನಂತಾನಂದಗಿರೀಯವೆಂಬ ಕೃತಿ ಇದ್ದಿರಬೇಕು. ಆನಂದಗಿರಿಯು ಶಂಕರರ ಸಮಕಾಲೀನನೆಂಬುದಕ್ಕಾಗಲೀ, ಶಿಷ್ಯನೆಂಬುದಕ್ಕಾಗಲೀ ಐತಿಹಾಸಿಕ ಪ್ರಮಾಣವಿಲ್ಲವಾದರೂ ಅನಂತಾನಂದಗಿರಿ ಎಂಬ ಶಂಕರರ ಶಿಷ್ಯನನ್ನು ಮಾಧವ ಮತ್ತವನ ವ್ಯಾಖ್ಯಾನಕಾರರು ಮತ್ತೆ ಮತ್ತೆ ಉಲ್ಲೇಖಿಸಿರುವುದರಿಂದ ಅದೇ ತನ್ನ ಹೆಸರೆಂದು ತೋರಿಸಿಕೊಳ್ಳಲು ಈ ಕೃತ್ರಿಮ ಗ್ರಂಥಕರ್ತ ಪ್ರಯತ್ನಿಸಿರಬಹುದು. ಮೂಲ ಆನಂದಗಿರೀಯವು ಕಾಣೆಯಾಗಿರುವುದರಿಂದ ಅದೇ ಹೆಸರಿನ ಇನ್ನೊಂದು ಹೊತ್ತಿಗೆಯನ್ನು ಬರೆದಿರಬಹುದು. ಅದಕ್ಕೇ ಪ್ರಾಚೀನಶಂಕರವಿಜಯವೆಂದು ಹೆಸರಿಸಿರಬಹುದು. ಇದೇ ಕೃತಿ ಅತಿ ಹಳೆತದೆಂದುಕೊಂಡರೂ ಯಾರೂ ತನ್ನ ಗ್ರಂಥವನ್ನು ’ಪ್ರಾಚೀನ’ವೆಂದು ಕರೆದುಕೊಳ್ಳುವುದಿಲ್ಲವಲ್ಲ. ವಾಲ್ಮೀಕಿ ತನ್ನ ರಾಮಾಯಣವನ್ನು ಪ್ರಾಚೀನರಾಮಾಯಣ ಎಂದು ಕರೆದುಕೊಂಡಂತಾಯ್ತು.
ಚಿತ್ಸುಖಾಚಾರ್ಯರ ಬೃಹತ್ ಶಂಕರವಿಜಯವೆಂಬ ಒಂದು ಶಂಕರವಿಜಯವಿದೆಯೆಂಬ ಪ್ರತೀತಿ ಇದೆಯಾದರೂ ಅದನ್ನು ಸ್ವತಃ ಕಂಡವರು ಯಾರೂ ಇಲ್ಲ. ಚಿತ್ಸುಖರು ಶಂಕರರ ಸಹಪಾಠಿಗಳಾಗಿದ್ದರೆಂದೂ, ಶಂಕರರ ಜೀವನವನ್ನು ಕಣ್ಣಾರೆ ಕಂಡು ಶಂಕರವಿಜಯದಲ್ಲಿ ದಾಖಲಿಸಿದ್ದಾರೆಂದೂ, ಅವರ ಗ್ರಂಥವೇ ಅತ್ಯಂತ ಪ್ರಾಚೀನ ಮತ್ತು ದೊಡ್ಡದೆಂಬ ಪುಂಖಾನುಪುಂಖ ವಾದಗಳಿದ್ದರೂ ಯಾವೊಂದು ಶಂಕರವಿಜಯವೂ ಚಿತ್ಸುಖರೆಂಬ ಶಂಕರರ ಸಹಪಾಠಿಯನ್ನು ಹೆಸರಿಸುವುದಿಲ್ಲ ಅಥವಾ ಶಂಕರರ ಕಾಲದಲ್ಲೇ ಚಿತ್ಸುಖರ ಇರುವಿಕೆಯ  ಬಗ್ಗೆ ಐತಿಹಾಸಿಕ ಸಾಕ್ಷಿಗಳೂ ಇಲ್ಲ. ಅನಂತಾನಂದಗಿರೀಯದ ಹಳೆಯ ಕಲ್ಕತ್ತಾ ಹಸ್ತಪ್ರತಿಯಲ್ಲಿ ಶಂಕರರು ಚಿದಂಬರಂನಲ್ಲಿ ಹುಟ್ಟಿದ್ದೆಂದಿದ್ದರೆ, ಅದೇ ಗ್ರಂಥದ ಮದ್ರಾಸ್ ಪ್ರತಿಯಲ್ಲಿ ಜನ್ಮಸ್ಥಳ ಕಾಲಡಿಯೆಂದಿದೆ. ಕಲ್ಕತ್ತಾದ ಪ್ರತಿಯ ಪ್ರಕಾರ ಶಂಕರರು ಮಠಸ್ಥಾಪನೆ ಮಾಡಿದ್ದು ಶೃಂಗೇರಿಯಲ್ಲಾದರೆ, ಇದಾದ ಕೆಲ ಕಾಲದ ನಂತರ ಅಚ್ಚಾದ ಮದ್ರಾಸ್ ಪ್ರತಿಯಲ್ಲಿ ಮಠಸ್ಥಾಪನೆಯಾದ್ದು ಕಂಚಿಯಲ್ಲಿ.!
ಇವು ನಾಲ್ಕು ಶಂಕರವಿಜಯಗಳಲ್ಲದೇ ಕಂಚೀಪೀಠದ ಸಂಪ್ರದಾಯಕ್ಕನುಗುಣವಾಗಿ ಸರ್ವಜ್ಞಸದಾಶಿವಬೋಧರ ’ಪುಣ್ಯಶ್ಲೋಕಮಂಜರಿ’, ಸದಾಶಿವಬ್ರಹ್ಮೇಂದ್ರರ ’ಗುರುರತ್ನಮಾಲಿಕಾ’ ಮತ್ತು ಅದರ ಮೇಲೆ ಆತ್ಮಬೋಧರು ಬರೆದಿರುವ ’ಸುಷುಮಾ’ ವ್ಯಾಖ್ಯಾನ ಎಂಬು ಮೂರು ಗ್ರಂಥಗಳು ಬಹುಮಟ್ಟಿಗೆ ಪ್ರಾಮಾಣಿಕವೆಂದು ಎಣಿಸುತ್ತಾರೆ. ಆತ್ಮಬೋಧರು ಮಾಧವನಿಗಿಂತ ಈಚಿನವರಾದರೂ ಹಲ ಪ್ರಾಚೀನ ಗ್ರಂಥಗಳನ್ನು ತಮ್ಮ ಸುಷುಮಾವ್ಯಾಖ್ಯಾನದಲ್ಲಿ ಉದಾಹರಿಸಿದ್ದಾರೆ. ಜೊತೆಗೆ ಪ್ರಸ್ತುತ ಲಭ್ಯವಿಲ್ಲದ ಬೃಹಚ್ಛಂಕರವಿಜಯ, ಕೇರಳೀಯ ಶಂಕರವಿಜಯವೇತ್ಯಾದಿ ಗ್ರಂಥಗಳ ಶ್ಲೋಕಗಳೂ ಅದರಲ್ಲುದಾಹರಿತವಾಗಿವೆ.
ಕೇರಳೀಯಶಂಕರವಿಜಯವೆಂದು ಕೇರಳದಲ್ಲಿ ಹೆಸರಾದ ಗೋವಿಂದನಾಥಕೃತ ಶಂಕರಾಚಾರ್ಯಚರಿತ್ರೆಯೆಂಬ ಒಂದು ಗ್ರಂಥವಿದೆ. ಒಂದೇ ಸರ್ಗದಲ್ಲಿ ಸರ್ವಜ್ಞಪೀಠವನ್ನು ಕಾಶ್ಮೀರದಲ್ಲಿಯೂ ಕಾಂಚಿಯಲ್ಲಿಯೂ ಇತ್ತೆಂದು ಬರೆಯಲ್ಪಟ್ಟಿರುವ ಇದೂ ಕೂಡ ಹೆಚ್ಚಿನ ಇತಿಹಾಸಕಾರರಿಂದ ತಿರಸ್ಕರಿಸಲ್ಪಟ್ಟುದೇ. ಕೇರಳೀಯದ ಪ್ರಕಾರ ಶಂಕರರ ಸಮಾಧಿಯಿರುವುದು ಯಾವ ಶಂಕರವಿಜಯಗಳಲ್ಲಿಯೂ ಉಲ್ಲೇಖಿತವಾಗದ ತ್ರಿಚೂರಿನಲ್ಲಿ. ಮತ್ತು ಇದರಲ್ಲಿ ಶಂಕರರಿಂದ ಸ್ಥಾಪಿತ ಯಾವ ಮಠಗಳ ಉಲ್ಲೇಖವೂ ಇಲ್ಲ. ಪ್ರಾಯಶಃ ಇದು ಕೇರಳೀಯ ಆಚಾರಪದ್ಧತಿಗನುಗುಣವಾಗಿ ಶಂಕರರನ್ನು ಹೊಗಳಲು ರಚಿತಗೊಂಡ ಪುಸ್ತಕವಿರಬೇಕು.
ಮೇಲಿನ ಶಂಕರವಿಜಯಗಳಲ್ಲದೇ ಕೆಲವು ಪುರಾಣಗಳಲ್ಲೂ ಶಂಕರರ ಬಗೆಗಿನ ವಿವರಗಳಿವೆ. ಲಿಂಗಪುರಾಣ, ಕೂರ್ಮಪುರಾಣ, ವಾಯುಪುರಾಣ, ಭವಿಷ್ಯೋತ್ತರ, ಮಾರ್ಕಂಡೇಯ, ಸೌರಪುರಾಣ ಮತ್ತು ಶಿವರಹಸ್ಯಗಳಲ್ಲಿ ಆಚಾರ್ಯರ ವಿಷಯವನ್ನು ಪರಾಮರ್ಶಿಸಿರುವ ಭಾಗಗಳಿವೆ. ಸಾಧಾರಣವಾಗಿ ಪುರಾಣಗಳಲ್ಲಿ ಕಲಿಯುಗದಲ್ಲಿ ಹೀಗೆಲ್ಲ ನಡೆಯುವುದೆಂಬುದನ್ನು ದೇವತೆಗಳೋ ಅಥವಾ ಋಷಿಗಳೋ ಹೇಳಿದಂತೆ ಬರೆಯುವುದು ರೂಢಿ. ಪುರಾಣಗಳ ಐತಿಹಾಸಕಾಂಶಗಳೂ ಕಥಾನಕಗಳೂ ಬಹುಮುಖ್ಯವಾದರೂ ಆಯಾ ಮತದ ಅಭಿಮಾನಿಗಳು ತಮಗೆ ಬೇಕಾದವರನ್ನು ಹೊಗಳಲೋ, ಬೇಡದವರನ್ನು ತೆಗಳಲೋ ದೇವತಾವಾಕ್ಯಗಳು, ಋಷಿವಾಕ್ಯಗಳು ಎಂಬ ಭಾವಬರುವಂತೆ ತೋರಿಸಲು ಬೇರೆ ಬೇರೆ ಅತಿರಂಜಿತ ಕಥೆಗಳನ್ನು ರಚಿಸಿರುವುದರಿಂದ ಆಧುನಿಕ ವಿಮರ್ಶಕರು ಪುರಾಣಗಳಲ್ಲಿ ಶ್ರದ್ಧೆಯನ್ನು ಕಳೆದುಕೊಳ್ಳುವಂತಾಗಿದೆ. ಇದೇ ಕಾರಣಕ್ಕೇ ಏನೋ ಪುರಾಣಗಳು ಇಂತಿಷ್ಟೇ ಪ್ರಮಾಣವೆಂದು ಅಥವಾ ಪ್ರಕ್ಷಿಪ್ತವೆಂದು ನಿರ್ಣಯಿಸುವುದು ಕಷ್ಟಸಾಧ್ಯ. ಲೋಕಕಲ್ಯಾಣಕ್ಕಾಗಿ ಶಿವನು ಶಂಕರರಾಗಿ ಹುಟ್ಟುವೆನೆಂದು ಶಿವಪರ ಪುರಾಣಗಳಲ್ಲಿ ಹೇಳಿಕೊಂಡಿರುವಾಗ, ಅದೇ ಶಿವನು ಕಲಿಯುಗದಲ್ಲಿ ಜಗತ್ತನ್ನು ಕೆಡಿಸುವ ಕಾರಣದಿಂದ ಮಾಯಾವಾದವೆಂಬ ಅವೈದಿಕವಾದವನ್ನು ರಚಿಸುವೆನೆಂದು ಹೇಳಿಕೊಂಡಂತೆ ಅರ್ಥವಿರುವ ಪದ್ಮಪುರಾಣಗಳೂ ಇವೆ. ಆಚಾರ್ಯರನ್ನು ಹೊಗಳಿ ಬರೆದವರಿರುವಂತೆ ಅವರನ್ನು ತೆಗಳಿ ಬರೆದವರಿಗೇನೂ ಕಡಿಮೆಯಿಲ್ಲ. ಕೂಷ್ಮಾಂಡಶಂಕರವಿಜಯಗಳಂಥ ಕೆಲಸಕ್ಕೆ ಬಾರದ ಕುಗ್ರಂಥಗಳೂ ಉಂಟು. ಮತದ್ವೇಷವೂ ಅನ್ಯಮತನಿಂದೆಯೂ ಹೆಮ್ಮೆಗೆ ಕಾರಣವೆಂದು ಭಾವಿಸಿದ್ದ ಕಾಲದಲ್ಲಿ ಇಂಥ ಗ್ರಂಥಗಳೂ ಅವುಗಳಿಗೆ ಪ್ರತ್ಯುತ್ತರವಾಗಿ ಇನ್ನೊಂದಿಷ್ಟು ಗ್ರಂಥಗಳೂ ಬೇಕಾದಷ್ಟು ಕಾಣಸಿಗುತ್ತವೆ.(ಪಂಡಿತ ಜ್ವಾಲಾಪ್ರಸಾದ ಮಿಶ್ರ ಎಂಬವರು ಬರೆದ ಅಷ್ಟಾದಶ ಪುರಾಣದರ್ಪಣದಲ್ಲಿ ಇಂಥ ಭಿನ್ನಮತಗಳ ಶ್ಲೋಕಗಳನ್ನು ಸಂಖ್ಯಾಪ್ರಮಾಣದೊಂದಿಗೆ ಕೊಟ್ಟಿದ್ದಾರಂತೆ). ಮಣಿಮಂಜರಿ ಮತ್ತು ಅದಕ್ಕೆ ವಿರುದ್ಧವಾಗಿ ಬಂದ ಮಣಿಮಂಜರಿಬೇಧಿನಿ ಆ ಜಾತಿಗೆ ಸೇರುವವು. ಇರುವ ಶಂಕರವಿಜಯಗಳಲ್ಲಿ ಪ್ರಸಿದ್ಧವೂ, ಜನಮಾನಸದಲ್ಲಿ ಅನುರಾಗಪ್ರಾಪ್ತವೂ ಆಗಿರುವ ಮಾಧವೀಯವನ್ನೇ ಆಚಾರ್ಯರ ಚರಿತ್ರೆಗಾಗಿ ಹೆಚ್ಚಿನೆಲ್ಲ ವಿದ್ವಾಂಸರು, ಇತಿಹಾಸಕಾರರು ಹಾಗೂ ಲೇಖಕರು ಬಹಳಮಟ್ಟಿಗೆ ಆಧರಿಸಿರುವುದರಿಂದ ಮತ್ತು ಈಗ ಇರುವ ಶಂಕರರ ಕುರಿತಾದ ಕಥೆಗಳಿಗೆಲ್ಲ ಅದೇ ಬಹ್ವಂಶ ಮೂಲವಾಗಿರುವುದರಿಂದ ಮಾಧವೀಯವನ್ನೇ ಪ್ರಾಮಾಣ್ಯವೆಂದು ಗ್ರಹಿಸಬೇಕಾಗಿದೆ. ಅವೇ ಶಂಕರವಿಜಯಗಳ ಹಿನ್ನೆಲೆಯಲ್ಲಿ ಭಗವತ್ಪಾದರ ಜನ್ಮ ಮತ್ತು ಕಾಲದ ಕುರಿತಾದ ವಿವರಗಳನ್ನು ಮುಂದಿನ ಲೇಖನದಲ್ಲಿ ನೋಡೋಣ.

(ಹೆಚ್ಚಿನ ಮಾಹಿತಿಗಾಗಿ ಗಮನಿಸಿ: ಬೆಳ್ಳಾವೆ ಸೀತಾರಾಮಯ್ಯನವರ ಶಂಕರಚರಿತ್ರ ಕಾಲವಿಚಾರ ಮತ್ತು ಸಚ್ಚಿದಾನೇಂದ್ರಸರಸ್ವತಿಯವರ ಶಂಕರಭಗವತ್ಪಾದಸಾರಸರ್ವಸ್ವಮ್)

4 comments: