Pages

Friday, January 29, 2016

ಶ್ರೀಮಚ್ಛಂಕರಭಗವತ್ಪಾದ ಚರಿತ್ರ: ಕಾಲಪ್ರಕರಣ


       ಶ್ರೀಮಚ್ಛಂಕರ ಭಗವತ್ಪಾದರು ಕಾಲಾತೀತನಾದ ಶಿವನ ಅವತಾರವೆಂಬುವ ಪ್ರತೀತಿಯ ಕಾರಣಕ್ಕೋ ಏನೋ ಅವರ ಆವಿರ್ಭಾವಕಾಲವನ್ನು ಪ್ರಚಲಿತ ಶಾಂಕರಪೀಠಗಳ ಸಂಪ್ರದಾಯಸ್ಥರು ತಮಗೆ ಬೇಕಾದಂತೆ ಎಲ್ಲೆಲ್ಲೋ ಎಳೆದು ಬಿಸುಟಿದ್ದಾರೆ. ಯಾವುದೋ ಕಾಲದ ಇತಿಹಾಸಪುರುಷರನ್ನು ಇನ್ಯಾವುದೋ ಕಾಲಕ್ಕೆ ದರದರನೆ ಎಳೆತಂದು ಬೇಕುಬೇಕಾದ ಹಾಗೆ ಹುಟ್ಟಿಸುವುದು, ಸಾಯಿಸುವುದು ನಮ್ಮ ಇತಿಹಾಸಕಾರರಿಗೆಲ್ಲ ಕರತಲಾಮಕ. ಅದಕ್ಕೆ ಶಂಕರರೂ ಹೊರತಲ್ಲ. ಶ೦ಕರರ ಕಾಲಮಾನದ ವಿಚಾರದಲ್ಲಿ ವಾದ-ವಿವಾದಗಳು ವಿರಳವಾಗಿ ನಡೆದಿದ್ದರೂ ಅವುಗಳಲ್ಲಿ ಒಮ್ಮತಾಭಿಪ್ರಾಯವಿಲ್ಲದಿರುವುದ೦ತೂ ಸತ್ಯ.  ಲೋಕರೂಢಿಯೂ, ಕೆಲ ಇತಿಹಾಸದ ಪುಸ್ತಕಗಳೂ, ಭೈರಪ್ಪನವರ ’ಸಾರ್ಥ’ವೇ ಮು೦ತಾದ ಕಾದ೦ಬರಿಗಳೂ ಶ೦ಕರರನ್ನು ಕ್ರಿ.ಶ 8ನೇ ಶತಮಾನದಲ್ಲಿರುವ೦ತೆ ಚಿತ್ರಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲ ಐತಿಹಾಸಿಕ ದಾಖಲೆಗಳು, ಆದಿ ಶ೦ಕರರಿ೦ದ ಸ್ಥಾಪಿಸಲ್ಪಟ್ಟ ಕೆಲ ಮಠ, ದೇವಾಲಯಗಳು ಅವರ ಕಾಲವನ್ನು ಕ್ರಿ.ಪೂರ್ವದಷ್ಟು ಹಿ೦ದಕ್ಕೊಯ್ಯುತ್ತವೆ. ಕಾಲದ ನಿಷ್ಕರ್ಷೆಗೆ ಬರುವ ಮೊದಲು ಶಂಕರವಿಜಯಗಳನ್ನೇ ಗಮನಿಸೋಣ.
       ಚತುರಾಮ್ನಾಯಗಳಲ್ಲೊ೦ದಾದ ಶೃ೦ಗೇರಿ ಮಠವನ್ನು ಶ೦ಕರರು ಕ್ರಿ.ಶ. 8ನೇ ಶತಮಾನದಲ್ಲಿ ಸ್ಥಾಪಿಸಿದರೆ೦ಬುದು ಲೋಕರೂಢಿ. ಅವರೂ ಅದೇ ಕಾಲದವರೆಂದಾಯ್ತು. ಶೃಂಗೇರಿ ಮಠದಲ್ಲೇ ಅದಕ್ಕೇನಾದರೂ ದಾಖಲೆ ಸಿಗಬೇಕಾದರೆ ಅವರದ್ದೇ ಗುರುಪರಂಪರೆಗಳ ಪಟ್ಟಿ ನೋಡಬೇಕು. ಮಹಾದೇವ ರಾಜಾರಾಮ ಬೋಡಸ್‌ರ ’ಶಂಕರಾಚಾರ್ಯ ವ ತ್ಯಾಂಚಾ ಸಂಪ್ರದಾಯ’ ಪುಸ್ತಕದಲ್ಲಿ ಶೃಂಗೇರಿ ಸಂಪ್ರದಾಯದ ಗುರುಪರಂಪರೆಯ ನಾಲ್ಕು ಪಟ್ಟಿಗಳನ್ನು ಕೊಟ್ಟಿದ್ದಾರೆ!. ಮೊದಲನೇಯದು 8ನೇ ಜಗದ್ಗುರುಗಳಾದ ನರಸಿಂಹಭಾರತೀ ಸ್ವಾಮಿಗಳ ಮಂತ್ರಾಕ್ಷತೆಯೊಂದಿಗೆ 1879ರಲ್ಲಿ ಸಿದ್ಧಾಂತಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಬರೆದದ್ದು. ಎರಡನೇಯದು ಸೂರ್ಯನಾರಾಯಣರಾಯರು ಬರೆದ ವಿಜಯನಗರ ಇತಿಹಾಸದ್ದು. ಇದರ ಗುರುಪರಂಪರೆಯ ಪಟ್ಟಿ ಮೊದಲನೇಯದ್ದನ್ನೇ ಆಧರಿಸಿದ್ದು. ಮೂರನೇಯದು ಶ್ರೀಸಚ್ಚಿದಾನಂದಶಿವಾಭಿನವನೃಸಿಂಹಭಾರ್ತೀಸ್ವಾಮಿಗಳು ಮದ್ರಾಸಿನ ವಾಣಿವಿಲಾಸ ಪ್ರೆಸ್ಸಿನಲ್ಲಿ ಅಚ್ಚುಹಾಕಿಸಿದ ಕೃತಿ. ಅದು ಮೊದಲೆರಡನ್ನು ಹೋಲುವುದಾದರೂ ಸುರೇಶ್ವರಾಚಾರ್ಯರ ಬದಲು ವಿಶ್ವರೂಪರ ಹೆಸರು ಅಚ್ಚಾಗಿದೆ. ಇವುಗಳ ಪ್ರಕಾರ 14ನೇ ಈಶ್ವರ ಸಂವತ್ಸರದ ವೈಶಾಖ ಶುದ್ಧ ಆರ್ದ್ರಾ ನಕ್ಷತ್ರ ಮಿಥುನಲಗ್ನದಲ್ಲಿ ಆಚಾರ್ಯರ ಅವತಾರವೂ ವಿಕ್ರಮಶಕೆಯ 46ನೇ ಜ್ಯೇಷ್ಠಶುದ್ಧ ದ್ವಾದಶಿಯ ದಿನ ಕೈಲಾಸಗಮನವೆಂದೂ ಬರೆದಿದೆ. ಇದರ ಪ್ರಕಾರವೇ ಕ್ರಿ.ಪೂ 44ರಿಂದ ಕ್ರಿಪೂ 12ರವರೆಗೆ ಆಚಾರ್ಯರ ಕಾಲವಾಯ್ತು. ಇದೇ ಪಟ್ಟಿಯಲ್ಲಿ ಮೊದಲ ಪೀಠಾಧಿಪತಿಗಳಾದ ಸುರೇಶ್ವರಾಚಾರ್ಯರು ಕ್ರಿ.ಪೂ 28ರಿಂದ ಕ್ರಿ.ಶ 773ರವರೆಗೆ ಬರೋಬ್ಬರಿ 8೦೦ ವರ್ಷಗಳು ಪೀಠಾಧಿಪತಿಗಳಾಗಿದ್ದಾರು! ಅವರ ನಂತರ ಎರಡನೇ ಪೀಠಾಧಿಪತಿಗಳಾದ ನಿತ್ಯಬೋಧಘನಾಚಾರ್ಯರು ಪೀಠವೇರಿದ್ದು ಕ್ರಿ.ಶ 773ರಲ್ಲಿ. ಶೃಂಗೇರಿ ಪರಂಪರೆಯ ಪ್ರಕಾರವೇ ಆಚಾರ್ಯರ ಕಾಲ ಕ್ರಿ.ಪೂವೆಂದಾದಮೇಲೆ ಮಠಸ್ಥಾಪನೆ ಕ್ರಿ.ಶ 8ನೇ ಶತಮಾನದಲ್ಲಾಗಲು ಹೇಗೆ ಸಾಧ್ಯ? ಶೃಂಗೇರಿ ಅಂಗೀಕರಿಸಿದ ವಿಕ್ರಮಶಕೆಯು ಮಾಲವ ಶಕೆಯಲ್ಲವೆಂದೂ, ಅದು ಚಾಲುಕ್ಯ ವಿಕ್ರಮಶಕೆಯೆಂದೂ, ಸರ್ವಪ್ರಥಮ ವಿಕ್ರಮನು ಕ್ರಿ.ಶ 670ರಲ್ಲಿ ಸಿಂಹಾಸನಾರೋಹಣಗೈದುದರಿಂದ ಶಂಕರರ ಜನನ ಮತ್ತು ಕೈಲಾಸಗಮನವಾದುದು ಕ್ರಮವಾಗಿ ಕ್ರಿ.ಶ 684 ಹಾಗೂ ಕ್ರಿ.ಶ 716ರಲ್ಲೆಂದು ಇದಕ್ಕೆ ಸಮಾಧಾನವನ್ನು ಲೋಕಮಾನ್ಯ ತಿಲಕರು ನೀಡಿದ್ದಾರೆ.
       ಶಂಕರಾಚಾರ್ಯರು ಕ್ರಿಸ್ತನಿಗಿಂತ ಪೂರ್ವದವರೆಂಬುದು ಸರ್ವವಿದಿತ. ಅದಕ್ಕೆ ಬೇಕಾದಷ್ಟು ಇತಿಹಾಸದ ಪುರಾವೆಗಳಿವೆ. ಈ ಕಷ್ಟದಿಂದ ಪಾರಾಗಲು ಪ್ರಾಯಶಃ ಶೃಂಗೇರಿಯವರು ಸುರೇಶ್ವರಾಚಾರ್ಯರಿಗೆ 8೦೦ ವರ್ಷಗಳನ್ನು ಕೊಟ್ಟು ಅವರ ಸಮಾಧಿ ಕಾಲವನ್ನು ಕ್ರಿ.ಶ 8ನೇ ಶತಮಾನಕ್ಕೆ ಇಳಿಸಿದ್ದಾರೆ. ಶೃಂಗೇರಿ ಮಠವೇ ಹೀಗಾದರೆ ಇನ್ನು ಅದರ ಕಾಲುಮಠವಾದ ಶಂಕರರ ಏಕೈಕ ಅವಿಚ್ಛಿನ್ನ ಪರಂಪರೆಯೆಂದು ಹೇಳಿಕೊಳ್ಳುವ ರಾಮಚಂದ್ರಾಪುರಮಠದ ಕಾಲ ಅದಕ್ಕಿಂತ ಹಿಂದಿನದಂತೂ ಅಲ್ಲ. ಸ್ವರ್ಣವಲ್ಲಿ ಮಠವೂ ಅಷ್ಟೇ. ಶಂಕರರಿಂದ ಕಾಶಿಯಲ್ಲಿ ಸ್ಥಾಪಿತವಾಗಿ ಪ್ರಯಾಗವೇತ್ಯಾದಿ ಜಾಗಗಳಲ್ಲಿ  ಸ್ಥಳಾಂತರಗೊಂಡು ಈಗ ಶಿರಸಿ ಸಮೀಪದ ಸೋಂದೆಯಲ್ಲಿದೆ ಎಂದು ಮಠದ ಇತಿಹಾಸ ಹೇಳುತ್ತದೆ. ಆದರೆ ಇದು ಮೂಲತಃ ಹೊನ್ನಾವರ ತಾಲೂಕಿನ ಚಂದಾವರದ ಹತ್ತಿರದ ಹೊನ್ನೆಹಳ್ಳದಲ್ಲಿ ಚಂದಾವರದ ರಾಮಕ್ಷತ್ರಿಯ ಸಮಾಜದ ತುಂಡರಸ ಚಂದ್ರಸೇನನ ಕಾಲದಲ್ಲಿ ಶೃಂಗೇರಿ ಮಠದವರಿಂದ ಸ್ಥಾಪಿತವಾದ ಕಾಲುಮಠ.  ಗೋಮಾಂತಕರ ದಾಳಿಯ ನಂತರ ಅದು ಅಲ್ಲಿಂದ ಕಡತೋಕೆಗೆ ಹೋಯಿತು. ಮುಂದೆ ಸರ್ವಜ್ಞೇಂದ್ರ ಸರಸ್ವತಿಯವರ ಕಾಲದಲ್ಲಿ ಸೋದೆ ಅರಸರ ಕೋರಿಕೆಯ ಮೇರೆಗೆ ಅಲ್ಲಿಂದ ಸೋದೆಗೆ ಸ್ಥಳಾಂತರವಾಯಿತು. ಹೊನ್ನೆಹಳ್ಳಿ ಸ್ವರ್ಣವಲ್ಲಿಯಾಯಿತು. ಆದ್ದರಿಂದ ಅವೆರಡೂ ಮಠಗಳ ಇತಿಹಾಸವನ್ನು ಶಂಕರರ ಕಾಲಮಾನ ನಿಷ್ಕರ್ಷೆಗೆ ಬಳಸಲು ಬರುವುದಿಲ್ಲ. ಶೃಂಗೇರಿಯ ಪಟ್ಟಿಗಳನ್ನೂ ಬದಿಗಿಟ್ಟು ಶಂಕರವಿಜಯಗಳನ್ನೇ ಗಮನಿಸೋಣ.
ಕಂಚಿಕಾಮಕೋಟಿ ಪೀಠದ ಸಂಪ್ರದಾಯದಂತೆ ಆತ್ಮಬೋಧರು ಉದಾಹರಿಸಿರುವ ಪ್ರಾಚೀನಶಂಕರವಿಜಯದಲ್ಲಿ
ತಿಷ್ಯೇ ಪ್ರಯಾತ್ಯನಲಶೇವಧಿಬಾಣನೇತ್ರೇ
ಯೋ ನನ್ದನೇ ದಿನಮಣಾವುದಗಧ್ವಭಾಜಿ |
ರಾಧೇದಿತೇರುಡುನಿ ನಿರ್ಗತಮಸ್ತಲಗ್ನೆ
ಪ್ಯಾಹೂತವಾನ್ ಶುವಗುರುಃ ಸ ಚ ಶಂಕರೇತಿ ||

ಅನಲ=3, ಸೇವಧಿ=9, ಬಾಣ=5, ನೇತ್ರ=2 . ಕಲಿಪ್ರಾರಂಭವಾದ 2593ನೇ ಸಂವತ್ಸರವಾದ ನಂದನದ ಉತ್ತರಾಯಣ ವೈಶಾಖ ಶುದ್ಧ ಪಂಚಮಿ ಪುನರ್ವಸು ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ಶಿವಗುರುವಿಗೆ ಹುಟ್ಟಿದನು.
ಕಲಿಯುಗ ಪ್ರಾರಂಭವಾದದ್ದು ಕ್ರಿ.ಪೂ 3102ರಲ್ಲೆಂದು ಸಿದ್ಧಪಟ್ಟಿದೆ. ಅ೦ದರೆ ಶ೦ಕರರ ಜನನವಾದದ್ದು ಕ್ರಿ.ಪೂ 3102- ಕ್ರಿ.ಪೂ 2593= ಕ್ರಿ.ಪೂ 509ರಲ್ಲಿ.
ವ್ಯಾಸಾಚಲೀಯದಲ್ಲಿ
ಅಬ್ದೇ ಕಲೇರನಲವರ್ಷಶರಾಕ್ಷಿಸಂಖ್ಯೇ
ಶ್ರೀನಂದನೇ ದಿನಮಣಾವುದಗಧ್ವಭಾಜಿ |
ರಾಧೇಽದಿಪಞ್ಚಮಿತಿಥಾವಸಿತೇತರಾಯಾಮ್
ವಾರೇ ರವೇರದಿತಿಭೇ ಶುಭಯೋಗಯುಕ್ತೇ ||
ಲಗ್ನೇ ಶುಭೇ ಶುಭಯುತೇ ಸುಷುವೇ ಕುಮಾರಂ
ಶ್ರೀಪಾರ್ವತೀವ ಸುಖಿನೀ ಶುಭವೀಕ್ಷಿತೇ ಚ |
ಜಾಯಾ ಸತೀ ಶಿವಗುರೋರ್ನಿಜತುಙ್ಗಸಂಸ್ಥೇ
ಸೂರ್ಯೇ ಕುಜೇ ರವಿಸುತೇ ಚ ಗುರೌ ಚ ಕೇಂದ್ರೇ ||

ಮೊದಲ ಭಾಗವನ್ನು ಗಮನಿಸಿದರೆ ಇದು ಪ್ರಾಚೀನಶಂಕರ ವಿಜಯದಿಂದ ತೆಗೆದುಕೊಂಡಿರಬಹುದಾದ ಸಾಧ್ಯತೆಗಳಿವೆ. ಎರಡನೇ ಶ್ಲೋಕ ಮಾಧವೀಯದಲ್ಲಿಯೂ ಇದೆ. ಯುಧಿಷ್ಟಿರ ಶಕದ 2631ನೇ ವರ್ಷ ನಂದನ ಸಂವತ್ಸರ ವೈಶಾಖ ಶುದ್ಧ ಭಾನುವಾರ ಪುನರ್ವಸು ನಕ್ಷತ್ರ ಅಭಿಜಿನ್ಮುಹೂರ್ತದಲ್ಲಿ ಕರ್ಕಾಟಕ ಲಗ್ನ ರವಿಕುಜಗುರುಶನಿಗಳು ಉಚ್ಛಸ್ಥರಾಗಿ ಕೇಂದ್ರದಲ್ಲಿರಲು ಶುಕ್ರನು ಉಚ್ಛಸ್ಥಾನದಲ್ಲಿದ್ದು ಬುಧನು ರವಿಯೊಡನೆ ಸೇರಿದ ಶುಭಮುಹೂರ್ತದಲ್ಲಿ ಆರ್ಯಾಂಬೆ ಮಗನನ್ನು ಪಡೆದಳು.
ಇದೇ ಗ್ರಂಥದಲ್ಲಿ ಆಚಾರ್ಯರ ದೇಹಾಂತದ ವಿವರಗಳಿವೆ.
ವರ್ಷೇ ಕಲೇಃ ಶರವಿಲೋಚನಶಾಸ್ತ್ರನೇತ್ರೇ
ರಕ್ತಾಕ್ಷಿನಾಮ್ನಿ ವೃಷಶುಕ್ಲಮುಕುನ್ದನಿಥ್ಯಾಮ್ |
ಗಚ್ಛನ್ ಸ ಜಾತು ಸವಿಧೇ ಪರದೇವತಾಯಾಃ
ತ್ಯಕ್ತುಂ ಸಮೃಚ್ಛದಥ ಭೌತಿಕಮಾತ್ಮದೇಹಮ್ ||

-ಕಲಿ 2625ನೇ ರಕ್ತಾಕ್ಷಿ ಸಂವತ್ಸರದ ವೈಶಾಖ ಶುದ್ಧದ್ವಾದಶೀ ದಿನ ಪರದೇವತೆಯ ಸಮೀಪಕ್ಕೆ ಹೋಗಲು ಭೌತಿಕ ದೇಹವನ್ನು ಬಿಡಲಿಚ್ಛಿಸಿದರು. ಕಲಿ 2625ನೇ ವರ್ಷವೆಂದರೆ ಅದು ಕ್ರಿ.ಪೂ 477 ಆಯಿತು.
ಇದಕ್ಕನುಗುಣವಾಗಿ ಚಿತ್ಸುಖರ ಪ್ರಾಚೀನ ಶಂಕರವಿಜಯದ ಆತ್ಮಬೋಧರ ವ್ಯಾಖ್ಯಾನದಲ್ಲಿ
ಕಲ್ಯಬ್ದೈಶ್ಚ ಶರೇಕ್ಷಣಾಧ್ವನಯನೈಃ ಸತ್ಕಾಮಕೋಟಿಪ್ರಥೇ
ಪೀಠೇ ನ್ಯಸ್ಯ ಸುರೇಶ್ವರಂ ಸಮವಿತುಂ ಸರ್ವಜ್ಞಸಂಜ್ಞಂ ಮುನಿಮ್ |
ಕಾಮಾಕ್ಷ್ಯಾಃ ಸವಿಧೇ ಸ ಜಾತು ನಿವಿಶನ್ನುನ್ಮುಕ್ತಲೋಕಸ್ಪೃಹೋ
ದೇಹಂ ಸ್ವಂ ವ್ಯಪಹಾಯ ದೇಹ್ಯಸುಗಮಂ ಧಾಮ ಪ್ರಪೇದೇ ಪರಮ್ ||

ಎಂದಿದೆ.
ಬೃಹಚ್ಛಂಕರ ವಿಜಯವನ್ನು ಗಮನಿಸೋಣ.
ವಹ್ನ್ಯದ್ದ್ವಶಾಸ್ತ್ರನಯನಾಙ್ಕ ಯುಧಿಷ್ಠಿರಾಬ್ಧೇ
ದ್ವಾತ್ರಿಂಶತಂ ಹಿ ಶರದೋ ಧರಣೀಂ ವಿಭೂಷ್ಯ
ಶ್ರೀಶಂಕರೇಂದ್ರಗುರುರಾಟ್ಭ್ರತರಾಜಸೇನಃ
ಸಂ ಶಿಷ್ಯ ಧರ್ಮಮಖಿಲಂ ಶಿವತಾಂ ಪ್ರಪೇದೇ ||

ಯುಧಿಷ್ಟಿರಶಕದ 2663ರಂದು ಮೂವತ್ತೆರಡು ವರ್ಷ ಭೂಮಿಯನ್ನಲಂಕರಿಸಿದ ಮೇಲೆ ರಾಜಸೇನನಿಂದ ಸೇವೆಗೊಂಡ ಶ್ರೀಶಂಕರೇಂದ್ರ ಗುರುರಾಜರು ಶಿವತ್ವವನ್ನು ಹೊಂದಿದರು. ಇದರಲ್ಲಿರುವ ರಾಜಸೇನ ಯಾರೆಂಬುದು ಗೊಂದಲವಾದರೂ ಯುಧಿಷ್ಟಿರಶಕದ 2663ನೇ ವರ್ಷ ಕ್ರಿ.ಪೂ 477ಕ್ಕೆ ಸರಿಯಾಗಿ ಹೊಂದುತ್ತದೆ.
       ದ್ವಾರಕಾಮಠದ ಶಾಸನದಲ್ಲಿ ಯುಧಿಷ್ಟಿರಶಕದ 2631ನೇ ವೈಶಾಖ ಶುದ್ಧ ಪಂಚಮಿಯಂದು ಅವತರಿಸಿ 2663ನೇ ಕಾರ್ತ್ತೀಕ ಹುಣ್ಣಿಮೆಯಂದು ಬ್ರಹ್ಮೀಭೂತರಾದರು ಎಂದು ಇದೆಯಂತೆ. ಅದೂ ಕೂಡ ಕ್ರಿ.ಪೂ 508 ಮತ್ತು ಕ್ರಿ.ಪೂ 477ನ್ನೇ ಸೂಚಿಸುತ್ತದೆ.
ಇನ್ನು ಶಂಕರರ ಜನ್ಮಕಾಲ ವೈಶಾಖ ಶುದ್ಧ ಪಂಚಮಿ ಎನ್ನುವವರಂತೆ ದಶಮಿ ಎನ್ನುವವರೂ ಇದ್ದಾರೆ. ನೀಲಕಂಠಭಟ್ಟನ ಶಂಕರಮಂದಾರಸೌರಭದಲ್ಲಿ
ಸಂವತ್ಸರೇ ವಿಭವನಾಮ್ನಿ ಶುಭೇ ಮುಹೂರ್ತೇ
ರಾಧೇ ಸಿತೇ ಶಿವಗುರೋರ್ಗೃಹಿಣೀ ಧಶಮ್ಯಾಮ್ ||

ವಿಭವ ಸಂವತ್ಸರದ ವೈಶಾಖ ಶುದ್ಧ ದಶಮಿಯ ದಿನ ಶಿವಗುರುವಿನ ಪತ್ನಿ ಶಂಕರನನ್ನು ಹಡೆದಳು(ವಿಭವ ಸಂವತ್ಸರವೆಂದು ಹೇಳಿರುವುದನ್ನು ಆಸಕ್ತರು ಗಮನಿಸಬೇಕು!). ಇದಕ್ಕನುಗುಣವಾಗಿ ಶಂಕರಜಯಂತಿಯನ್ನು ದಶಮಿಯ ದಿನ ಆಚರಿಸುವವರೂ ಇದ್ದಾರೆ. ಎಲ್ಲ ಶಂಕರವಿಜಯಗಳು ಮತ್ತು ಮಠಗಳ ಸಂಪ್ರದಾಯಗಳನ್ನು ಹೊಂದಿಸಿಕೊಂಡು ಹೋಗುವುದಂತೂ ಸಾಧ್ಯವಿಲ್ಲ. ಕ್ರಿ.ಪೂ 5ನೇ ಶತಮಾನದಿಂದ ಹಿಡಿದು ಕ್ರಿ.ಶ 8ನೇ ಶತಮಾನದವರೆಗೆ ತಮಗೆ ತೋಚಿದ ಕಾಲಗಳನ್ನು ಎಲ್ಲರೂ ಬರೆದಿದ್ದಾರೆ. ಹಾಗೆ ಬರೆದವರಲ್ಲಿ ಒಬ್ಬರೂ ಶಂಕರರ ಕಾಲದವರಲ್ಲ. ಬರೆದುದಕ್ಕೆ ಏನು ಆಧಾರವೆಂಬುದು ಸ್ಪಷ್ಟವಿಲ್ಲ. ವೈಶಾಖ ಶುದ್ಧ ಪಂಚಮಿಯನ್ನು ಶಂಕರಜಯಂತಿಯೆಂದು ಆಚರಿಸಲಾಗುತ್ತಿದೆಯಾದರೂ ಅದಕ್ಕೂ ಸಾಧಾರವಿಲ್ಲ. ’ಶಂಕರ’ ಎಂಬ ಶಬ್ದದ ಅಕ್ಷರಗಳ ಅಂಕೆಗಳನ್ನು ಹಿಂದುಮುಂದಾಗಿ ಎಣಿಸಿದರೆ 5,1,2 ಬರುವುದರಿಂದ ವೈಶಾಖ ಶುದ್ಧ ಪಂಚಮಿಯೆಂದು ತರ್ಕಿಸಲಾಯ್ತೇ? ಶಂಕರರೇ ಹೇಳಬೇಕು!
ಇದಲ್ಲದೇ ಜಿನವಿಜಯದಲ್ಲಿ ಶಂಕರರ ಉಲ್ಲೇಖವಿದೆಯಂತೆ( ಈ ಹೆಸರಿನ ಪುಸ್ತಕ ನನಗಂತೂ ಸಿಕ್ಕಿಲ್ಲ)
ಋಷಿರ್ಬಾಣಸ್ತಥಾ ಭೂಮಿರ್ಮರ್ತ್ಯಾಕ್ಷೋ ವಾಮಮೇಳನಾತ್ |
ಏಕತ್ವೇನ ಲಭೇದಙ್ಕೋ ರಕ್ತಾಕ್ಷಸ್ತದ್ಧಿ ವತ್ಸರಃ ||

ರಶಿ=7, ಬಾನ=5, ಭೂಮಿ=1, ಮರ್ತ್ಯಕ್ಷವು=2. ಜೈನ ಕ್ಯಾಲೆ೦ಡರಿನ ಪ್ರಕಾರ ಶ೦ಕರರ ಭೌತಿಕ ಶರೀರದ ಮರಣ 2157ನೇ ಯುಧಿಷ್ಟೀರ ಶಕದ೦ದು ಸ೦ಭವಿಸಿತು. ಜೈನರ ಯುಧಿಷ್ಟಿರ ಶಕೆಗೂ ಹಿ೦ದುಗಳ ಯುಧಿಷ್ಟಿರ ಶಕೆಗೂ ಇರುವ ವ್ಯತ್ಯಾಸ 467 ವರ್ಷಗಳು. ಹಿ೦ದುಗಳ ಯುಧಿಷ್ಟಿರ ಶಕೆಯು ಕಲಿಯುಗದ ಮೊದಲ ವರ್ಷದಿ೦ದ ಪ್ರಾರ೦ಭವಾದರೆ ಜೈನರ ಯುಧಿಷ್ಟಿರ ಶಕವು 468ನೇ ಕಲಿ ವರ್ಷದಿ೦ದ ಪ್ರಾರ೦ಭವಾಗುತ್ತದೆ.
ಅರ್ಥಾತ್ ಶ೦ಕರರ ಮರಣ ಸ೦ಭವಿಸಿದ್ದು 2157+468=2625ನೇ ಕಲಿ ವರ್ಷದಲ್ಲಿ ಅಥವಾ 3102-2625=477 ಕ್ರಿ.ಪೂ.ದಲ್ಲಿ
ನೇಪಾಳವನ್ನು ಕ್ರಿ.ಪೂ 547 ರಿ೦ದ 486ರವರೆಗೆ ಆಳಿದವನು ಸೂರ್ಯವ೦ಶದ 18ನೇ ರಾಜ ವ್ರಶದೇವ ವರ್ಮ. ನೇಪಾಳರಾಜವ೦ಶಾವಳಿಯಾದ ಕಲ್ಹಣನ ರಾಜತರ೦ಗಿಣಿಯಲ್ಲಿ ಉಲ್ಲೇಖಿಸಿದ೦ತೆ ಕ್ರಿ.ಪೂ 487(ಕಲಿ ವರ್ಷ 2614)ರಲ್ಲಿ ದಕ್ಷಿಣದಿ೦ದ ಬ೦ದ ಆದಿ ಶ೦ಕರಾಚಾರ್ಯರು ಬೌದ್ಧರನ್ನು ವಾದದಲ್ಲಿ ಸೋಲಿಸಿ ಬುದ್ಧರ ನ೦ಬಿಕೆಯನ್ನು ನಾಶ ಮಾಡಿದರು.
ಶಂಕರರು ಕ್ರಿ.ಪೂರ್ವ 5ನೇ ಶತಮಾನದವರೆಂದು ಆಧಾರಗಳಿರುವಾಗ 8೦೦ ವರ್ಷಗಳ ಶೃಂಗೇರಿ ಮಠದ ಇತಿಹಾಸ ಮಾತ್ರ ಮಾಯವಾಗಿರುವುದು ಹೇಗೆ?
ಮಹಾನುಭಾವ ಸಂಪ್ರದಾಯದಲ್ಲಿ ದರ್ಶನಪ್ರಕಾಶವೆಂಬ ಗ್ರಂಥವೊಂದಿದೆ. ಅದರಲ್ಲಿರುವ ಒಂದು ಶ್ಲೋಕವನ್ನು ಗಮನಿಸಿ.
ಯುಗ್ಮಪಯೋಧಿರಸಾಮಿತಶಾಕೇ ರೌದ್ರಕವತ್ಸರ ಊರ್ಜಕಮಾಸೇ |
ವಾಸರ ಈಜ್ಯ ಉತಾಚಲ ಮಾನೇ ಕೃಷ್ಣತಿಥೌ ದಿವಸೇ ಶುಭಯೋಗೇ |
ಶಂಕರ ಲೋಕಮಗಾನ್ನಿಜದೇಹಂ ಹೇಮಗಿರೌ ಪ್ರವಿಹಾಯ ಹಠೇನ ||

- ಇಲ್ಲಿ ಶಂಕರರ ಮೃತ್ಯುಕಾಲ 642ನೇ ಶಕೆ(ಕ್ರಿ.ಶ  72೦) ಎಂದಿದೆ. ಆದರೆ ಹಠಯೋಗದಿಂದ ಹೇಮಗಿರಿಯಲ್ಲಿ ದೇಹವನ್ನು ಬಿಟ್ಟರು ಎಂದು ಹೇಳಿರುವುದರಿಂದ ಇದು ಯಾವ ಶಂಕರ ಕುರಿತಾದದ್ದೆಂದು ವಿಮರ್ಶಕರೇ ಊಹಿಸಬೇಕು. ಕಂಚಿಪೀಠದಲ್ಲಿ ಕೃಪಾಶಂಕರ, ಮೂಕ ಶಂಕರ, ಅಭಿನವಶಂಕರ ಎಂಬಿತ್ಯಾದಿ ಹೆಸರಿನ ಹಲವು ಯತಿಗಳು ಆಗಿಹೋಗಿರುವುದರಿಂದ ಅವರ ಚರಿತ್ರೆಗಳು ಆದ್ಯಶಂಕರರೊಡನೆ ಸೇರಿ ಹೋಗಿರಬಹುದೇ?!
ಕೇರಳೀಯ ಶಂಕರವಿಜಯದಲ್ಲಿ ಚೇರಾಮನ್ ಪೆರುಮಾಳನ ಕಾಲದಲ್ಲಿ ಶಂಕರರ ಜನನವಾಯ್ತೆಂದಿದೆ(ಪೆರುಮಾಳನ ಕಥೆಗಾಗಿ ಇಲ್ಲಿ ನೋಡಿ). ಆತ ಕ್ರಿ.ಶ ಏಳನೇ ಶತಮಾನದವನು. ಒಂದೇ ಸರ್ಗದಲ್ಲಿ ಸರ್ವಜ್ಞಪೀಠವನ್ನು ಕಾಶ್ಮೀರದಲ್ಲಿಯೂ ಕಾಂಚಿಯಲ್ಲಿಯೂ ಇತ್ತೆಂದು ಬರೆಯಲ್ಪಟ್ಟಿರುವ ಕೇರಳೀಯವು ಇತಿಹಾಸಕಾರರಿಂದ ತಿರಸ್ಕೃತವಾಗಿರುವುದರಿಂದ ಅದನ್ನು ಆಧಾರಯೋಗ್ಯವೆಂದು ಪರಿಗಣಿಸುವಂತಿಲ್ಲ.
       ಕಂಚಿಮಠ ಸಂಪ್ರದಾಯದ ಪ್ರಕಾರ ಶಂಕರರು ಜನಿಸಿದ್ದು ಕ್ರಿ.ಪೂ 508ರಲ್ಲಿ ಮತ್ತು ಸಿದ್ಧಿ ಹೊಂದಿದ್ದು ಕ್ರಿ.ಪೂ 476ರಲ್ಲಿ. ಕ್ರಿ.ಪೂ 406ರವರೆಗೆ ಸುರೇಶ್ವರಾಚಾರ್ಯರು ಕಂಚಿಯ ಮೊದಲ ಪೀಠಾಧಿಪತಿಗಳಾಗಿದ್ದರು. ಆತ್ಮಬೋಧರು ತಮ್ಮ ಸುಷುಮಾ ಗ್ರಂಥದಲ್ಲಿ ಸುರೇಶ್ವರರು ಅಪರಮಹಂಸರಾಗಿದ್ದರಿಂದ ಅವರ ಬದಲು ನಂತರ ಪೀಠವೇರಿದ್ದ ಸರ್ವಜ್ಞಾತ್ಮರನ್ನು ಮೊದಲ ಪೀಠಾಧಿಪತಿಯೆಂದಿದ್ದಾರೆ. ಅದೇನೇ ಇದ್ದರೂ ಶೃಂಗೇರಿಯಲ್ಲಿ ಮೊದಲ ಪೀಠಾಧಿಪತಿಗಳಾಗಿದ್ದ ಸುರೇಶ್ವರರೇ ಕಂಚಿಯಲ್ಲೂ ಪೀಠವೇರಿದ್ದಾರೆ. ಅದೇ ದ್ವಾರಕಾ ಪೀಠದಿಂದ 1957ರಲ್ಲಿ ಪ್ರಕಾಶಿತವಾದ ಗುರುಪರಂಪರೆಯ ಪಟ್ಟಿಯನ್ನೂ ಬಲದೇವ ಉಪಾಧ್ಯಾಯರ ದ್ವಾರಕಾ ಪರಂಪರೆಯ ಪಟ್ಟಿಯನ್ನೂ ನೋಡಿದರೆ ಅಲ್ಲಿನ ಮೊದಲ ಪೀಠಾಧಿಪತಿಗಳೂ ಸುರೇಶ್ವರಾಚಾರ್ಯರೇ. ಅವರಿಗೆ ಯುಧಿಷ್ಟಿರ ಶಕ 2649ರ ಮಾಘ ಶುದ್ಧ ಸಪ್ತಮಿಯ ದಿನ ಶಾರದಾಪೀಠದ ಅಧ್ಯಕ್ಷರಾಗಿ ಅಭಿಷೇಕವಾಯಿತೆಂದು ಪರಂಪರೆಯಲ್ಲಿದೆ. ಮಹಾದೇವ ರಾಜಾರಾಮ ಬೋಡಸ್‌ರು ಮೊದಲನೇಯ ಆಚಾರ್ಯರು ಹಸ್ತಾಮಲಕರೆನ್ನುತ್ತಾರೆ. ದ್ವಾರಕಾ ಮಠದಲ್ಲಿ ಕ್ರಿ.ಪೂ 477ರಲ್ಲಿ ಸುಧನ್ವ ರಾಜನಿಂದ ಬರೆಸಲ್ಪಟ್ಟ(!!!) ತಾಮ್ರಶಾಸನವೊಂದಿದೆಯಂತೆ. ಸುಧನ್ವ ಎಂಬ ರಾಜ ಕೇರಳ ದೇಶದವನೆಂದು ಕೆಲ ಶಂಕರವಿಜಯಗಳು ಹೇಳಿದರೆ, ಚಿತ್ಸುಖರ ಬೃಹತ್ ಶಂಕರ ವಿಜಯ ಮತ್ತು ಆನಂದಗಿರಿಯ ಪ್ರಾಚೀನ ಶಂಕರವಿಜಯಗಳು ಸುಧನ್ವ ದ್ವಾರಕೆಯನ್ನಾಳಿದ್ದನೆಂದಿವೆ. ಮಹಾಮಹೋಪಾಧ್ಯಾಯ ಜೆ.ಎನ್ ದ್ವಿವೇದಿ ಮತ್ತು ಬೋಡಸ್‌ರ ಶಂಕರರ ಚರಿತ್ರೆಗಳಲ್ಲಿಯೂ ಸುರೇಶ್ವರರನ್ನೇ ದ್ವಾರಕಾ ಮಠದ ಮೊದಲ ಪೀಠಾಧಿಪತಿಗಳನ್ನಾಗಿಸಿದೆ.
        ಮಠಾಮ್ನಾಯಗಳಲ್ಲಿ ದ್ವಾರಕೆ ’ಭದ್ರಕಾಲೀ’ಪೀಠವೆಂದಿದ್ದರೂ ಈ  ಪೀಠಕ್ಕೆ ’ಶಾರದಾ ಪೀಠ’ವೆಂದು ಅವರ ಪರಂಪರೆ ಕರೆದಿರುವುದು ವಿಚಾರಣೀಯ. ಶಾರದಾ ಪ್ರತಿಷ್ಟೆಯನ್ನು ಯುಧಿಷ್ಟಿರ ಶಕ 2648ರಲ್ಲೇ ಮಾಡಲಾಯಿತೆಂದು ದ್ವಾರಕಾ ಮಠದ ಸಂಪ್ರದಾಯ ಹೇಳುತ್ತದೆ. ಆದರೆ ಇಲ್ಲಿ ಭದ್ರಕಾಲಿ ಮತ್ತು ಸಿದ್ಧೇಶ್ವರರಿಗೇ ಹೆಚ್ಚು ಪ್ರಾಶಸ್ತ್ಯ. ಮಠಾಮ್ನಾಯಶಾಸನದಲ್ಲಿ ’ಕಾಲಿಕಾಪೀಠಶಾಸನೇ’ ಎಂದಿದ್ದು ದ್ವಾರಕೆಯ ಮಹಾಶಾಸನದಲ್ಲಿ ಮಾತ್ರ ’ಶಾರದಾಪೀಠಸ್ಕೃತಾಃ’ ಎಂದಾಗಿದೆ. ’ದ್ವಾರಕಾ ಶ್ರೀಶಾರದಾಪೀಠಗುರುಪರಂಪರೆ’ಯಲ್ಲಿ ಯುಧಿಷ್ಟಿರ ಶಕ 2648ರಲ್ಲಿ ಕಾರ್ತ್ತಿಕಮಾಸದ ಕೃಷ್ಣಪಕ್ಷದಂದು ಮಂದನರ ಪತ್ನಿ ಭಾರತಿದೇವಿಯ ಜೊತೆಗಿನ ವಾದದ ನಂತರ ಆಕಾಶಮಾರ್ಗದಿಂದ ತನ್ನ ಲೋಕಕ್ಕೆ ಹೋಗುತ್ತಿದ್ದ ಆಕೆಯನ್ನು ಚಿಂತಾಮಣಿ ಮಂತ್ರದಿಂದ ಆಕರ್ಷಣೆ ಮಾಡಿ ದ್ವಾರಕೆಯಲ್ಲಿ ಶಾರದೆಯಾಗಿ ಸ್ಥಾಪಿಸಿದರು ಎಂದಿದೆ. ಶೃಂಗೇರಿಯದ್ದೂ ಕೂಡ ಇದೇ ಕಥೆ. ಕಂಚಿಯಲ್ಲಿ ಕಾಮಾಕ್ಷಿಗೆ ಹೆಚ್ಚಿನ ಪ್ರಾಶಸ್ತ್ಯವಿದ್ದರೂ ಕಂಚಿಯವರೂ ತಮ್ಮದು ಶಾರದಾ ಪೀಠವೆಂದು ಕರೆದುಕೊಳ್ಳುತ್ತಾರೆ. ಶೃಂಗೇರಿಯವರೂ ಕೂಡ. ಇದರ ಗುಟ್ಟೇನೋ ತಿಳಿದಿಲ್ಲ.
       ದ್ವಾರಕೆ ಮತ್ತು ಕಾಂಚಿ ಇವೆರಡರ ಪರಂಪರೆಯಲ್ಲೂ ಶಂಕರಾಚಾರ್ಯರಿಗೆ ಹೆಚ್ಚುಕಡಿಮೆ ಕ್ರಿ.ಪೂ ೫ನೇ ಶತಮಾನದ ಕಾಲವನ್ನೇ ಕೊಟ್ಟಿದ್ದಾರೆ. ಇವೆರಡರಲ್ಲೂ ಮೊದಮೊದಲ ಗುರುಗಳಿಗೆ ಹೆಚ್ಚಿನ ಕಾಲಾವಧಿಯನ್ನೂ ಇತ್ತೀಚಿನವರಿಗೆ ಸ್ವಲ್ಪ ಕಡಿಮೆ ಒಪ್ಪುವ ಕಾಲವನ್ನೂ ಬರೆದಿರುತ್ತಾರೆ. ಕಂಚಿಯಲ್ಲಿ 67 ಪೀಠಾಧ್ಯಕ್ಷರ ಪಟ್ಟಿಯಿದ್ದರೆ ದ್ವಾರಕೆಯಲ್ಲಿ ಸುಮಾರು 78 ಜನರ ಹೆಸರಿದೆ. ಇವೆರಡೂ ಮಠಗಳ ಪೀಠಾಧಿಪತಿಗಳ ಸಂಖ್ಯೆಯಲ್ಲಿ ಸಾಮ್ಯವಿದ್ದರೂ ಶೃಂಗೇರಿಯ ಪಟ್ಟಿಯಲ್ಲಿ 36 ಜನರ ಹೆಸರು ಮಾತ್ರವಿದೆ. ಮಾತ್ರವಲ್ಲ ಶೃಂಗೇರಿ ಮಠದವರು ಒಪ್ಪುವಂತೆ ಶಂಕರರ ಕಾಲಮಾನ ಕ್ರಿ.ಶ 8ನೇ ಶತಮಾನ. ಶೃಂಗೇರಿ, ರಾಮಚಂದ್ರಾಪುರ, ಕಂಚಿ ಮತ್ತು ದ್ವಾರಕೆ ಈ ನಾಲ್ಕೂ ಪೀಠಗಳೂ ತಮ್ಮ ತಮ್ಮ ಮೊದಲ ಪೀಠಾಧಿಪತಿಗಳನ್ನಾಗಿ ಸುರೇಶ್ವರಾಚಾರ್ಯರನ್ನೇ ಹೆಸರಿಸಿದೆ. ಮಂಡನ ಮಿಶ್ರರು ಸಂನ್ಯಾಸ ಸ್ವೀಕಾರದ ನಂತರ ಸುರೇಶ್ವರರೆಂದು ಹೆಸರಾದರು ಎಂಬುದು ಲೋಕವಿದಿತ. ಆದರೆ ಶೃಂಗೇರಿಪೀಠದ ಅನುಜ್ಞೆಯಂತೆ ರಚಿತವಾದ ಗುರುವಂಶಕಾವ್ಯದಲ್ಲಿ ಮಂಡನಸುರೇಶ್ವರಿಬ್ಬರನ್ನೂ ಬೇರೆಬೇರೆ ವ್ಯಕ್ತಿಗಳಾಗಿ ಪರಾಮರ್ಶಿಸಲಾಗಿದೆ.
ಈ ಒಗಟುಗಳನ್ನು ಒಡೆಯುವುದು ಹೇಗೆಂದು ಸಾಕ್ಷಾತ್ ಶಂಕರರೇ ಬಲ್ಲರು!!!!!!!

1 comment:

  1. ಶ್ರೇಷ್ಠ ಭಾರತೀಯನೊಬ್ಬನ ಕಾಲವೇ ನಮಗೆ ತಿಳಿಯಲಾರದು ಅಂದರೆ, ವ್ಯಥೆಯಾಗುತ್ತದೆ. ನೀವು ಸಾಕಷ್ಟು ವಿವರಗಳನ್ನು ನೀಡಿರುವಿರಿ. ಧನ್ಯವಾದಗಳು.

    ReplyDelete