Pages

Tuesday, May 17, 2016

ಪಂಜಾಬ್ ಡೈರಿ: ಬಲಿದಾನದ ನಾಡಲ್ಲಿ

        

        ಅಮೃತಸರಕ್ಕೆ ನಾನು ಅದೆಷ್ಟೋ ಬಾರಿ ಹೋದದ್ದಿದೆ. ಅಲ್ಲಿ ಕಾಲಿಟ್ಟ ಪ್ರತಿಬಾರಿಯೂ ಅನಿರ್ವಚನೀಯವಾದ ಒಂದು ರೋಮಾಂಚನವುಂಟಾಗುತ್ತದೆ. ಆ ಮಣ್ಣಿನ ಗುಣವೇ ಅಂಥದ್ದು. ಚಂಡೀಗಢ್ ನನಗಿನ್ನೊಂದು ಮನೆಯಿದ್ದಂತೆ. ಅಲ್ಲಿನ ಸ್ವರ್ಣಮಂದಿರ, ಜಲಿಯನ್ ವಾಲಾ ಬಾಘ್, ವಾಘಾ-ಅಟ್ಟಾರಿ..... ಇಡಿಯ ಪಂಜಾಬೇ ಒಂದು ಪುಣ್ಯಭೂಮಿ. ಅದೊಂದು ಬಲಿದಾನದ ನೆಲ. ಶತಶತಮಾನಗಳ ಕಾಲ ಕ್ರೌರ್ಯಕ್ಕೆ ಸಿಕ್ಕು ನಲುಗಿದ್ದರೂ ಶೌರ್ಯ, ಸೌಹಾರ್ದತೆ, ಶಾಂತಿಯನ್ನು ಜಗತ್ತಿಗೆ ಬೋಧಿಸಿದ ನಾಡದು. ಭಾರತದ ಮೇಲಿನ ವಿದೇಶಿ ಆಕ್ರಮಣಕಾರರಿಗೆಲ್ಲ ದಾರಿಯಾಗಿದ್ದು ಇದೇ ಪಂಜಾಬ್. ಗಝನಿಯಿಂದ ಔರಂಗಜೇಬನ ತನಕ ಮುಸ್ಲಿಮರ ಸಾಮ್ರಾಜ್ಯದಾಹಕ್ಕೆ, ಮಹಾತ್ಮಾ ಗಾಂಧಿಯಿಂದ ಇಂದಿರಾಗಾಂಧಿಯ ತನಕ ರಾಜಕಾರಣಿಗಳ ಅಧಿಕಾರದಾಹಕ್ಕೆ ಹೆಜ್ಜೆಹೆಜ್ಜೆಗೆ ಇಲ್ಲಿನ ನೆಲ, ಜನ, ಮನಗಳು ನುಚ್ಚುನೂರಾಗಿವೆ. ಅಷ್ಟಾಗಿಯೂ ಅವುಗಳನ್ನೆದುರಿಸಲು ಒಂದಕ್ಕೆ ನೂರಾಗಿ ಫಿನಿಕ್ಸಿನಂತೆ ಮತ್ತೆ ಪಂಜಾಬ್ ಮೇಲೆದ್ದು ಬಂದಿದೆ. ನಲವತ್ತೇಳರಲ್ಲಿ ದೇಶಕ್ಕೆ ದೇಶವೇ ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿದ್ದರೆ ತಾಯ್ನಾಡಿನ ವಿಭಜನೆಯ ಬರೆ ಬಿದ್ದದ್ದು ಪಂಜಾಬಿಗೆ. ವಿಭಜನೆ ಸೃಷ್ಟಿಸಿದ ಸಾಂಸ್ಕೃತಿಕ, ರಾಜಕೀಯ ಬಿಕ್ಕಟ್ಟು, ಜನಾಂಗೀಯ ಘರ್ಷಣೆ, ರಕ್ತಪಾತಗಳು ಅಮೃತಾ ಪ್ರೀತಂಳ ’ಪಿಂಜರ್’, ಭೀಷಮ್ ಸಾಹ್ನಿಯ ’ತಮಸ್’, ಸದಾತ್ ಹಸನ್ ಮಂಟೋರ ’ಖೋಲ್ ದೋ’ ಮತ್ತು ’ತೋಬಾ ಟೇಕ್ ಸಿಂಗ್’, ಕ್ರಿಶನ್ ಚಂದರ್ ಅವರ ’ಪೆಶಾವರ್ ಎಕ್ಸ್‌ಪ್ರೆಸ್’, ರಾಜೀಂದರ್ ಸಿಂಗ್ ಬೇಡಿಯ ’ಲಾಜವಂತಿ’ ಹೀಗೆ ಲೆಕ್ಕವಿಲ್ಲದಷ್ಟು ಪ್ರಸಿದ್ಧ ಕಥೆ-ಕಾದಂಬರಿಗಳಿಗೆ ವಸ್ತುವಾಗಿವೆ. ಸ್ವಾತಂತ್ರ್ಯ ಸಿಕ್ಕನಂತರವೂ ಪಂಜಾಬ್ ಭಾರೀ ಶಾಂತಿಯುತವೇನೂ ಆಗಿರಲಿಲ್ಲ. ಇಂದಿರಾಗಾಂಧಿ ಪವಿತ್ರ ಸ್ವರ್ಣಮಂದಿರದೊಳಗೇ ಸೇನೆ ನುಗ್ಗಿಸಿದಾಗ ೭೦೦ ಯೋಧರು, ೪೦೦ ಉಗ್ರಗಾಮಿಗಳು ಸೇರಿ ೩೦೦೦ ನಾಗರಿಕರು ಪ್ರಾಣ ಕಳೆದುಕೊಂಡರೆ ೮೪ರ ದೆಹಲಿಯ ಸಿಖ್ ಹತ್ಯಾಕಾಂಡದಲ್ಲಿ ಇನ್ನೂ ಕೆಲ ಸಾವಿರ ಸಿಖ್ಖರು ಕೊಲ್ಲಲ್ಪಟ್ಟರು.
ಪಂಜಾಬ್ ಪುರಾಣ ಕಾಲದಿಂದ ಇಂದಿನವರೆಗೂ ಬಹುಚರ್ಚಿತ ದೇಶ. ಪಂಜಾಬಿನ ಇತಿಹಾಸವನ್ನು ಗಮನಿಸುತ್ತ ಸಾಗಿದರೆ ಅದು ಹೋಗಿ ನಿಲ್ಲುವುದು ವೇದಕಾಲದಲ್ಲಿ. ಋಗ್ವೇದದಲ್ಲುಲ್ಲೇಖಿಸಲ್ಪಟ್ಟ ಸಪ್ತಸಿಂಧುಗಳೆಂದು ಹೆಸರಾದ ಶತದ್ರು(ಸಟ್ಲೇಜ್), ಪರೂಷ್ಣಿ(ರಾವಿ), ವಿತಸ್ತ(ಝಿಲಂ), ಅಸಿಕ್ನಿ(ಚಿನಾಬ್), ವಿಪಾಶ(ಬಿಯಾಸ್), ಸಿಂಧೂ, ಮತ್ತು ಬತ್ತಿಹೋದ ಸರಸ್ವತಿಗಳಲ್ಲಿ ಮೊದಲ ಐದು ನದಿಗಳಿಂದಲೇ ಪಂಜಾಬಿನ ಹೆಸರು ಉಧೃತವಾಗಿದ್ದು.
       ೧೯೫೦ರ ಸುಮಾರಿಗೆ ಅಮೇರಿಕದ ಸಂಶೋಧಕ ಹ್ಯಾರಿ ಫಿಕ್ಸ್ ದೆಹಲಿ ಮಾರ್ಕೇಟಿನಲ್ಲಿ ತಿರುಗುತ್ತಿದ್ದಾಗ ಗುಜರಿ ಅಂಗಡಿಯಲ್ಲಿ ಆತನಿಗೊಂದು ಹಳೆಯ ತಾಮ್ರದ ಮೂರ್ತಿ ಕಣ್ಣಿಗೆ ಬಿತ್ತು. ಕುತೂಹಲಗೊಂಡು ಅದನ್ನು ಆತ ಜಗತ್ಪ್ರಸಿದ್ಧ ಮೆಟಲರ್ಜಿಸ್ಟ್ ರಾಕ್ ಎಂಡರ್ಸನ್ನಿಗೆ ಕಳುಹಿಸಿಕೊಟ್ಟ. ಕ್ಯಾಲಿಫೋರ್ನಿಯಾ, ಸ್ವಿಜರ್ಲೆಂಡುಗಳ ವಿವಿಧ ಲ್ಯಾಬೋರೇಟರಿಗಳಲ್ಲಿ ಕಾರ್ಬನ್ ಡೇಟಿಂಗ್, ಸ್ಪೆಕ್ಟ್ರೋಗ್ರಾಫಿಚ್, ಎಕ್ಸ್-ರೇ ಪರೀಕ್ಷೆಗಳನ್ನು ಮಾಡಿ ಆ ಮೂರ್ತಿ ಕ್ರಿ.ಪೂ ೩೭೦೦ರಕ್ಕಿಂತ ಹಿಂದಿನದ್ದೆಂದು ವಿವಾದೀತವಾಗಿ ನಿರ್ಧರಿಸಲಾಯ್ತು. ಆ ಮೂರ್ತಿ ಋಗ್ವೇದದ ಏಳನೇ ಮಂಡಲದಲ್ಲಿ ವರ್ಣಿಸಿರುವ ವಸಿಷ್ಟನದ್ದು. ಇದರ ಕುರಿತು ’ಅನಾಲಿಸಿಸ್ ಆಫ್ ಇಂಡೋ ಯುರೋಪಿಯನ್ ವೇದಿಕ್ ಹೆಡ್’ ಎಂಬ ಪ್ರಬಂಧದಲ್ಲಿ ೧೯೯೦ರ ’ಜರ್ನಲ್ ಆಫ್ ಇಂಡೋ ಯುರೋಪಿಯನ್ ಸ್ಟಡೀಸ್’ ನಲ್ಲಿ ಹಿಕ್ಸ ಮತ್ತು ಎಂಡರ್ಸನ್ ಪ್ರಕಟಿಸಿದ್ದಾರೆ. ಋಗ್ವೇದದ  ಏಳನೇ ಮಂಡಲದ ದಶರಾಜ್ಞ ಯುದ್ಧದಲ್ಲಿ ವರ್ಣಿಸಿರುವಂತೆ ವಸಿಷ್ಟರ ಸಹಾಯದಿಂದ ಭರತನ ಹದಿನಾರನೇ ಪೀಳಿಗೆಯ ಸುದಾಸ ಹತ್ತು ಆರ್ಯ ರಾಜರನ್ನು ಪಂಜಾಬಿನ 
 ಹ್ಯಾರಿ ಫಿಕ್ಸಿಗೆ ಸಿಕ್ಕ ವಸಿಷ್ಟನ ಶಿರ
ರಾವಿ ನದಿಯ ದಡದಲ್ಲಿ ಸೋಲಿಸಿದ. ಹೀಗೆ ಸೋತ ರಾಜರು ಭಾರತದಿಂದ ಹೊರಗೆ ವಾಯುವ್ಯ ಭಾಗಕ್ಕೆ ಪಲಾಯನಗೈದು ಬೇರೆ ಬೇರೆ ಆರ್ಯಕುಲಗಳ ಬೆಳವಣಿಗೆಗೆ ಕಾರಣರಾದರು. ವೇದಗಳಲ್ಲಿ ಮಾಡಿದ ವರ್ಣನೆಗೆ ಸರಿಹೊಂದುವಂತ ಮೂರ್ತಿಯೊಂದು  ಕ್ರಿ.ಪೂ ೩೭೦೦ರ ಕಾಲದಲ್ಲೇ ಇತ್ತೆಂದಮೇಲೆ ವೇದಗಳು ರಚನೆಗೊಂಡಿದ್ದು, ಮತ್ತು ಆರ್ಯರ ವಾಸ ಅದೇ ಕಾಲಕ್ಕಿಂತ ಹಿಂದೇ ಇದ್ದಿರಬೇಕಲ್ಲ? ಆರ್ಯಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಹರಡಿದ ಕೀರ್ತಿ ಈ ಪಂಜಾಬಿನ ಮಣ್ಣಿಗಿದೆ.
ವಾಲ್ಮೀಕಿ ಆಶ್ರಮ, ಧೂನಾಸಾಹೇಬ್
        ಹತ್ತು ಸಾವಿರ ವರ್ಷಗಳ ಹಿಂದೆ ವೇದ ಕಾಲದ ಸಿಂಧೂ-ಸರಸ್ವತೀ ನಾಗರೀಕತೆಗಳ ತೊಟ್ಟಿಲೆನಿಸಿದ ಹರಪ್ಪಾ-ಮೊಹಂಜೋದಾರೋಗಳು ಬಾಳಿದ್ದು ಇದೇ ಜಾಗದಲ್ಲಿ. ಪಂಜಾಬಿಗಳ ಪ್ರಕಾರ ಕೌಸಲ್ಯೆಯ ಮೊದಲ ಹೆರಿಗೆಯಾಗಿದ್ದು ಅವಳ ತವರುಮನೆಯಲ್ಲಿ. ರಾಮ ಹುಟ್ಟಿದ್ದೂ ಅಲ್ಲೇ. ಕೌಸಲ್ಯೆಯ ತವರೂರು ಪಟಿಯಾಲದ ಸಮೀಪದ ’ಘುರಾಂ’. ರಾಮ ಹುಟ್ಟಿದ ಸ್ಥಳವೆಂದು ನಂಬಲ್ಪಡುವ ಇಲ್ಲಿ ಕೌಸಲ್ಯೆಗೆ ಒಂದು ಮಂದಿರವೂ ಇದೆ. ರಾಮಾಯಣದ ಬಹುಭಾಗ ನಡೆದಿದ್ದು ಪಂಜಾಬಿನ ಆಸುಪಾಸು. ಕೈಕಯಿಯ ಕೇಕಯ ರಾಜ್ಯವಿದ್ದುದು ರಾವಲ್ಪಿಂಡಿಯಲ್ಲಿ. ವಾಲ್ಮೀಕಿಯ ಆಶ್ರಮವಿರುವುದು ಅಮೃತಸರದ ಧೂನಾಸಾಹೇಬಿನಲ್ಲಿ. ಲವ-ಕುಶರ ಜನ್ಮವಾಗಿದ್ದೂ ಅಲ್ಲೇ. ಲವ ಸ್ಥಾಪನೆ ಮಾಡಿದ್ದ ಲವಪುರ ಲಾಹೋರ್ ಆಗಿಯೂ, ಕುಶನು ರಾಜ್ಯವಾಳಿದ್ದ ಕುಶಪುರಿ ಕಸೂರ್ ಆಗಿಯು ಇಂದು ಕರೆಯಲ್ಪಡುತ್ತಿದೆ. ಭರತನ ಮಕ್ಕಳಾದ ತಕ್ಷ ಮತ್ತು ಪುಷ್ಕಲರು ತಕ್ಷಶಿಲೆ ಮತ್ತು ಪೇಶಾವರದ ಬಳಿಯ ಪುಷ್ಕಲವತಿಯ ಸ್ಥಾಪಕರು. ಲವ ಮತ್ತು ಕುಶರ ಸಂತತಿಯಲ್ಲಿ ರಾಜ್ಯಕ್ಕಾಗಿ ಜಗಳವಾದಾಗ ಲವನ ಸಂತತಿಯವರು ಸೋತು ಕಾಶಿಗೆ ತೆರಳಿ ವೇದಾಭ್ಯಾಸ ನಿರತರಾದರಂತೆ. ನಾಲ್ಕು ವೇದಗಳಲ್ಲಿ ಪರಿಣಿತರಾದ್ದರಿಂದ ಅವರ ಹೆಸರು ವೇದಿ ಅಥವಾ ಬೇದಿ ಎಂದಾಯಿತು. ಗುರುನಾನಕರು ಇದೇ ಬೇದಿ ವಂಶದವರು. ಕುಶನ ಮಗ ಸೋಧಿರಾಯನ ವಂಶಜರು ಸೋಧಿ ಹೆಸರಿನಿಂದ ಪಂಜಾಬನ್ನಾಳಿದರು. ಮುಂದೆ ಸೋಧಿ ವಂಶದ ರಾಜನೊಬ್ಬ ಕಾಶಿಯಿಂದ ವೇದಿಗಳನ್ನು ಕರೆತಂದು ಅವರ ಪಾಂಡಿತ್ಯಕ್ಕೆ ಮೆಚ್ಚಿ ಅವರ ರಾಜ್ಯವನ್ನು ಹಿಂದಿರುಗಿಸಿದ. ನಾನಕರು ಲವನ ವೇದಿ ವಂಶಸ್ಥರಾದರೆ ಗುರು ರಾಮದಾಸರಿಂದ ಗೋವಿಂದಸಿಂಗರ ತನಕ ಹೆಚ್ಚಿನ ಸಿಖ್ಖರ ಗುರುಗಳೆಲ್ಲ ಕುಶನ ಸೋಧಿ ವಂಶಜರು.
ಅವೆಲ್ಲ ಪುರಾಣದ ಕತೆಯಾಯಿತು.
       ಇತಿಹಾಸದ ಪುಸ್ತಕಗಳು ಹೇಳುವಂತೆ ಭಾರತದ ಮೇಲೆ ಇಸ್ಲಾಂನ ದಾಳಿ ಪ್ರಾರಂಭವಾದದ್ದು ಗಜನಿಯಿಂದ. ಆದರೆ ಅಂದಿಗೆ ಮುನ್ನೂರು ವರ್ಷಗಳಿಗಿಂತಲೂ ಹಿಂದೆಯೇ ಕ್ರಿ.ಶ ೬೩೭ರಲ್ಲಿ ಎರಡನೇ ಖಲೀಫಾ ಉಮರ್‌ನ ನೌಕಾದಳ ಮಹಾರಾಷ್ಟ್ರದ ಥಾನೆಯ ಮೇಲೆ ದಾಳಿ ಮಾಡಿತ್ತು. ಇಮ್ಮಡಿ ಪುಲಿಕೇಶಿಯ ಸೈನ್ಯ ಅರಬ್ಬೀ ದಾಳಿಕಾರರನ್ನು ತಿರುಗಿ ಹೋಗದಂತೆ ಕೊಚ್ಚಿಹಾಕಿತ್ತು. ಅದರಾಚೆ ಎರಡು, ಮೂರು ಮತ್ತು ನಾಲ್ಕನೇ ಖಲೀಫರ ಕಾಲದಲ್ಲಿ ಗುಜರಾತಿನ ಭರೂಚ್, ಸಿಂಧ್‌ನ ದೇವಳ ಹಾಗೂ ದಕ್ಷಿಣ ಸಿಂಧ್‌ನ ಮಕ್ರಾನ್, ಕೀಕಾನುಗಳ ಮೇಲಿನ ಆಕ್ರಮಣಗಳಾದಾಗಲೂ ಸಿಂಧಿಯರು ಅವರನ್ನು ಒದ್ದೋಡಿಸಿದ್ದರು. ನೌಕಾದಳದ ಆಕ್ರಮಣಗಳೆಲ್ಲ ವಿಫಲವಾಗುವುದರೊಂದಿಗೆ ಅರಬ್ಬರು ಸಮುದ್ರ ಮಾರ್ಗದ ಮೂಲಕ ಭಾರತವನ್ನು ಗೆಲ್ಲುವ ಆಸೆ ಕೈಬಿಟ್ಟರು. ಮುಂದೆ ಒಂಭತ್ತು ಖಲೀಫರು ವಿಶ್ವಪ್ರಯತ್ನ ಮಾಡಿದರೂ ಸಿಂಧ‌ನ ನೆಲದ ಒಂದಿಂಚೂ ಗೆಲ್ಲಲಾಗಲಿಲ್ಲ. ಕೊನೆಗೆ ಅರಬ್ಬರ ಆ ಆಸೆ ಕೈಗೂಡಿದ್ದು ಕ್ರಿ.ಶ ೭೧೨ರಂದು ಮಹಮ್ಮದ್ ಬಿನ್ ಕಾಸಿಂನ ಕಾಲದಲ್ಲಿ. ಸಿಂಧಿನ ರಾಜ ದಾಹಿರಸೇನನ ಆಶ್ರಯ ಬೇಡಿ ಅಲಾಫಿ ಎಂಬ ಅರಬ್ಬಿ ಬಂದ. ಗುಜರಾತಿಗೆ ಬಂದ ಪಾರ್ಸಿಗಳು ಹಾಲಲ್ಲಿ ಬೆರೆತ ಸಕ್ಕರೆಯಾದಂತೆ ಇವರೂ ಆಗಬಹುದೆಂದು ದಾಹಿರಸೇನ ಉದಾರಮನಸ್ಸಿನಿಂದ ಆಶ್ರಯವಿತ್ತ. ಅಲಾಫಿ ಸಕ್ಕರೆಯಾಗುವ ಬದಲು ವಿಷವಾದ. ಇವನ ದ್ರೋಹದಿಂದಲೇ ದಾಹಿರನ ರಾಜ್ಯ ಕಾಸಿಂನ ವಶವಾಯಿತು.
       ಅಲ್ಲಿಂದ ಶುರುವಾಯ್ತು ನೋಡಿ  ಭಾರತದ ಇತಿಹಾಸದ ಕರಾಳ ಅಧ್ಯಾಯಗಳು. ಮುಂದೆ ಬಂದ ಗಜನಿ ಮಹಮ್ಮದನ ಹದಿನೇಳು ’ದಂಡ’ಯಾತ್ರೆಗಳ ಕಥೆ ಎಲ್ಲರೂ ಓದಿದ್ದೇ. ಸೋಮನಾಥ, ಮಥುರಾದ ದೇವಾಲಯಗಳು ಇವನ ಆಕ್ರಮಣಕಾಲದಲ್ಲೇ ನಾಶವಾದವು. ಹೀಗಿದ್ದರೂ ಗಜನಿ ಒಬ್ಬ ಅಪ್ರತಿಮ ಯೋಧನೆಂದೂ, ಅವನೆದುರು ನಿಲ್ಲುವ ಭಾರತೀಯ ರಾಜರ್ಯಾರೂ ಇರಲಿಲ್ಲವೆಂದೂ, ಕಲಾಪೋಷಕನೆಂದೂ, ಸೆಕ್ಯುಲರ್ ಮರ್ಯಾದೆಗಳನ್ನು ಪಾಲಿಸಿದವನೆಂದೂ, ಭಾರತೀಯ ನಗರಗಳಿಗೆ ಸರಿಸಮಾನವಾಗಿ ಗಜನಿ ನಗರವನ್ನು ನಿರ್ಮಿಸಲು ಬಯಸಿದ್ದನೆಂದೂ, ಹಿಂದೂ ದೇವಾಲಯಗಳಲ್ಲಿ ಅಡಗಿದ್ದ ಅಪಾರ ಸಂಪತ್ತಿಗಾಗಿ ಮಾತ್ರ ಅವುಗಳನ್ನು ಒಡೆದನೆಂದೂ ಪಂಡಿತ್ ನೆಹರೂರಿಂದ ಹಿಡಿದು ಎಲ್ಲ ಇತಿಹಾಸಕಾರರು ಗಜನಿಗೆ ಭೇಷ್ ಭೇಷ್ ಎಂದಿದ್ದಾರೆ. ಪರದೇಶಿಗನೊಬ್ಬ ಬರೋಬ್ಬರಿ ಒಂದೂವರೆ ಡಜನ್ ಬಾರಿ ದಂಡೆತ್ತಿ ಬಂದು ಬೃಹದ್ದೇವಾಲಯಗಳನ್ನು ನೆಲಕ್ಕುರುಳಿಸಿ, ಲಕ್ಷಾಂತರ ನರಸಂಹಾರ ಮಾಡಿ, ಇಲ್ಲಿನ ಸಂಪತ್ತನ್ನೆಲ್ಲ ದೋಚಿಕೊಂಡು ಹೋಗುತ್ತಿದ್ದರೆ ತಡೆಯಲು ಶಕ್ತಿಯಿದ್ದ ಒಬ್ಬನೇ ಒಬ್ಬ ರಾಜ ಇಲ್ಲಿರಲಿಲ್ಲವೇ ಈ ನೆಲದಲ್ಲಿ? ಹದಿನೇಳು ದಂಡಯಾತ್ರೆಗಳ ಕಥೆ ಹೇಳುವ ಇತಿಹಾಸಕಾರರ್ಯಾರೂ ಒಂದು ಕಥೆ ಹೇಳುವುದಿಲ್ಲ.
       ಪಂಜಾಬಿನ ರಾಜನಾಗಿದ್ದ ಆನಂದಪಾಲ ಗಜನಿ ಮಹಮ್ಮದನಿಗೆ ಒಂದು ಪತ್ರ ಬರೆಯುತ್ತಾನೆ. ’ನಿನ್ನನ್ನು ನಾನು ಸೋಲಿಸಿದೆ. ಆ ಗೌರವ ನನ್ನನ್ನು ಬಿಟ್ಟು ಇನ್ನೊಬ್ಬನಿಗೆ ಸಿಗುವುದು ನನಗಿಷ್ಟವಿಲ್ಲ. ನಿನ್ನ ಮೇಲೆ ದಂಡೆತ್ತಿ ಯಾರೇ ಬಂದರೂ ಅವರನ್ನು ಸೋಲಿಸಲು ನಾನು ಸಹಾಯ ಮಾಡುತ್ತೇನೆ’, ಇದೇ ಪತ್ರವನ್ನುಲ್ಲೇಖಿಸಿ ಅಲ್ಬೆರೂನಿ ತನ್ನ ’ತಾರಿಖ್ ಉಲ್ ಹಿಂದ್‌’ನಲ್ಲಿ ಗಜನಿ ಮೊಹಮ್ಮದನನ್ನು ನೆಲಕ್ಕಚ್ಚುವಂತೆ ಸೋಲಿಸಿದ ಏಕೈಕ ಭಾರತೀಯ ರಾಜನೆಂದು ಆನಂದಪಾಲನನ್ನು ಬಾಯ್ತುಂಬ ಹೊಗಳಿದ್ದಾನೆ.
       ಈ ಆನಂದಪಾಲ ಬದುಕಿರುವವರೆಗೂ ಅರಬ್ಬಿಗಳು ಕಮಕ್ ಕಿಮಕ್ ಎನ್ನಲಿಲ್ಲ. ಅವನ ಮರಣಾನಂತರ ಮಗ ಜಯಪಾಲನ ಕಾಲದಲ್ಲೇ ಗಜನಿಯ ಹೆಚ್ಚಿನೆಲ್ಲ ಆಕ್ರಮಣಗಳು ನಡೆದಿದ್ದು. ಒಂದೇ ದಿನ ಐವತ್ತು ಸಾವಿರ ಹಿಂದೂಗಳನ್ನು ಕೊಂದ ಸುಲ್ತಾನ ಇಡೀ ಸೋಮನಾಥ ದೇವಾಲಯವನ್ನು ಲೂಟಿ ಹೊಡೆದದ್ದಲ್ಲದೇ ಶಿವಲಿಂಗವನ್ನು ಜಾಮಿ ಮಸೀದಿಯ ಮೆಟ್ಟಿಲಲ್ಲಿ ಬಳಸುವಂತೆ ಆಜ್ಞಾಪಿಸಿದ. ಮುಂದೆ ಪಂಜಾಬಿನ ಹಿಂದೂ ಮಹಾರಾಜ ರಣಜೀತ್ ಸಿಂಗ್ ಅಪ್ಘಾನಿಸ್ತಾನವನ್ನು ಗೆದ್ದು ಗಜನಿ ಕದ್ದೊಯ್ದ ಸೋಮನಾಥ ಮಂದಿರದ ದ್ವಾರಗಳನ್ನೂ, ಚಿನ್ನವನ್ನೂ ವಾಪಸ್ ತಂದ. ಸೋಮನಾಥ ಇನ್ನಿಲ್ಲದಂತೆ ವಿಧ್ವಂಸಗೊಂಡಿರುವುದರಿಂದ ಕೊನೆಗೆ ಈ ಚಿನ್ನವನ್ನು ಈಗ ಸ್ವರ್ಣಮಂದಿರವೆಂದು ಕರೆಯಲ್ಪಡುವ ಅಮೃತಸರದ ಹರಿಮಂದಿರವನ್ನು ಅಲಂಕರಿಸಿ ಸೋಮನಾಥನ ಬಾಗಿಲುಗಳನ್ನು ಅದಕ್ಕೆ ಅಳವಡಿಸಲಾಯಿತು. ಈ ಸ್ವರ್ಣಮಂದಿರದ ಇತಿಹಾಸ ಇನ್ನೂ ಕುತೂಹಲಕಾರಿ. ಇದು ಮೂಲತಃ ಕೃತಯುಗದಲ್ಲಿ ಸೂರ್ಯವಂಶದ ಇಕ್ಷ್ವಾಕು ಮಹಾರಾಜ ನಿರ್ಮಿಸಿದ್ದ ವಿಷ್ಣುಕುಂಡ ಅಥವಾ ಅಮೃತ ಸರೋವರ. ಇಲ್ಲಿ ಗುರು ರಾಮದಾಸರ ಕಾಲದಲ್ಲಿ ಚಿಕ್ಕ ವಿಷ್ಣುವಿನ ಮಂದಿರದ ನಿರ್ಮಾಣವಾಯಿತು. ಅವರ ತರುವಾಯ ಗುರು ಅರ್ಜುನದೇವರು ಅಮೃತ ಸರಸ್ಸನ್ನು ವಿಸ್ತರಿಸಿ ಅದರ ಮಧ್ಯದಲ್ಲಿ ದೊಡ್ಡದೊಂದು ಮಂದಿರವನ್ನು ನಿರ್ಮಿಸಿದರು. ಆಗ ಇದಕ್ಕಿದ್ದ ಹೆಸರು ಹರಿಮಂದಿರ ಸಾಹೇಬ್. ಅಲ್ಲೊಂದು ವಿಶೇಷವಿದೆ. ನಮ್ಮಲ್ಲಿ ಹೆಚ್ಚಿನ ದೇವಾಲಯಗಳು ನಿರ್ಮಾಣವಾಗುವುದು ಬೆಟ್ಟದ ಮೇಲೆ. ಜನ ಕಷ್ಟಪಟ್ಟು ಮೇಲೇರಿ ದರ್ಶನ ಪಡೆಯಲಿ ಎಂದಿರಬಹುದು. ಆದರೆ ಸ್ವರ್ಣಮಂದಿರವಿರುವುದು ತಗ್ಗಿನಲ್ಲಿ. ಮೆಟ್ಟಿಲಿಳಿದು ಕೆಳಗೆ ಹೋಗಿಯೇ ನೋಡಬೇಕು. ಎಷ್ಟೇ ಎತ್ತರದಲ್ಲಿದ್ದರೂ ನೀರು ತಗ್ಗಿನತ್ತ ಹರಿಯಬೇಕು. ನೀರಿನಂತೆ ಮನುಷ್ಯ ಎಷ್ಟು ದೊಡ್ಡವನಾದರೂ ತನ್ನ ಅಹಂಕಾರ ಬಿಟ್ಟು ಕೆಳಗಿಳಿದು ದೇವರತ್ತ ಬರಲಿ ಎಂಬುದು ಅದರ ಹಿಂದಿನ ಮರ್ಮವಂತೆ.  ಮುಸ್ಲಿಂ ಆಕ್ರಮಣಕಾರರು ಪಂಜಾಬಿನ ಮೇಲೆ ದಾಳಿ ಮಾಡಿದಷ್ಟೂ ಸಲ ಈ ಹರಿಮಂದಿರ ನಾಶವಾಗಿದೆ. ನಾದಿರ್ ಷಾ, ಅಹ್ಮದ್ ಅಲಿ ಅಬ್ದಾಲಿ, ಮೊಘಲ ಸುಲ್ತಾನರ ಕಾಲದಲ್ಲೆಲ್ಲ ಬಾರಿ ಬಾರಿ ಮಂದಿರ ನೆಲಸಮವಾದರೂ ಅಷ್ಟೇ ವೇಗವಾಗಿ ಮೊದಲಿಗಿಂತ ಸುಂದರವಾಗಿ, ಭವ್ಯವಾಗಿ ಪುನರ್ನಿರ್ಮಾಣಗೊಂಡು ತಲೆ ಎತ್ತಿನಿಂತಿದೆ. ಈಗಿರುವ ಭವ್ಯ ಕಟ್ಟಡ ತಲೆ ಎತ್ತಿದ್ದು ೧೮೦೩ರಲ್ಲಿ ರಣಜೀತ್ ಸಿಂಗನ ಕಾಲದಲ್ಲೇ. ಆತ ಸಾವಿರಾರು ಕೇ.ಜಿ ಚಿನ್ನವನ್ನು ಇದರ ನಿರ್ಮಾಣಕ್ಕೆ ಬಳಸಿದ್ದರಿಂದ ಹರಿಮಂದಿರ ಸ್ವರ್ಣಮಂದಿರವೆಂದು ಕರೆಯಲ್ಪಟ್ಟಿತು. ಇದೊಂದು ಅಪ್ಪಟ ಹಿಂದೂ ದೇವಾಲಯ. ಗುರುನಾನಕರು ಸಿಖ್ ಪಂಥದ ಸ್ಥಾಪಕರು, ಹಿಂದೂ, ಮುಸ್ಲಿಮರ ಭಾವೈಕ್ಯತೆಗಾಗಿ ದುಡಿದ ಮಹನೀಯರು, ಸಿಖ್ಖರು ಹಿಂದೂಗಳಲ್ಲ ಎಂದು ಇತಿಹಾಸಕಾರಾಗಲೀ ಸರ್ಕಾರಗಳಾಗಲೀ ಪುಸ್ತಕಗಳಲ್ಲಿ ಎಷ್ಟೇ ಪುಂಗಿ ಊದಿದರೂ (ಕನ್ನಡ ಪುಸ್ತಕ ಪ್ರಾಧಿಕಾರ ಜಾಗತಿಕ ಚಿಂತಕರ ಮಾಲೆಯಡಿ ೨೦೦೧ ರಲ್ಲಿ ಹೊರತಂದ ಗುರುನಾನಕ್ ಪುಸ್ತಕ ನೋಡಿ) ಅವರೊಬ್ಬ ಅಪ್ಪಟ ಹಿಂದೂ ವೈಷ್ಣವ ಸಂತ. ನಾನಕರು ಬಳಸುತ್ತಿದ್ದ ರುದ್ರಾಕ್ಷಿಮಾಲೆ, ಸೇಲಿ ಟೋಪಿ, ಪೂಜಿಸುತ್ತಿದ್ದ ಸಾಲಿಗ್ರಾಮ ಇಂದಿಗೂ ಕರ್ತಾರ್‌ಪುರ್ ಕೋಟೆಯಲ್ಲಿ ಸುರಕ್ಷಿತವಾಗಿವೆ. ’ತತ್ ಖಾಲ್ಸಾ’ ಸ್ಥಾಪನೆಯಾಗುವವರೆಗೂ ಬರೆಯಲ್ಪಟ್ಟ ನಾನಕರ ಚಿತ್ರಗಳಲ್ಲೆಲ್ಲ ಅವರನ್ನು ಜಪಮಾಲೆ,ಕಮಂಡಲ ಹಿಡಿದ, ಹಣೆಯಲ್ಲಿ ವೈಷ್ಣವರ ನಾಮ, ಭಕ್ತಿಪಂಥದ ಸೇಲಿ ಟೋಪಿ ಧರಿಸಿದವರಾಗಿಯೇ ಚಿತ್ರಿಸಲಾಗಿದೆ. ತತ್ ಖಾಲ್ಸಾದಂಥ ಸಂಘಟನೆಗಳು ಪ್ರವರ್ಧಮಾನಕ್ಕೆ ಬಂದಂತೆ ನಾಮ ಮರೆಯಾಯ್ತು, ಟೋಪಿ ಹೋಗಿ ಟರ್ಬನ್ ಬಂದಿತು. ತಾವು ಹಿಂದೂಗಳಲ್ಲ ಎಂದು ಒಪ್ಪಿಕೊಳ್ಳುವಂತೆ ಸಿಖ್ಖರನ್ನು ಬಲವಂತವಾಗಿ ಬ್ರೇನ್ ವಾಶ್ ಮಾಡಲಾಯ್ತು. ಹಿಂದೂ ಇಸ್ಲಾಂಗಳೆರಡನ್ನೂ ಸೇರಿಸಿ ’ಸಿಖ್’ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದರು ಎಂದು ಶಾಲೆಯ ಇತಿಹಾಸದ ಪುಸ್ತಕಗಳು ಒದರಿಕೊಂಡರೂ ಯಾವ ನಾನಕ ಪಂಥದ ಗುರುಗಳೂ ತಾವು ಅಹಿಂದೂಗಳೆಂದು ಹೇಳಿಕೊಂಡಿಲ್ಲ. ನಾನಕರಿಗೆ ವೈಷ್ಣವ ದೀಕ್ಷೆ ನೀಡಿದ್ದು ಬಂಗಾಳದ ಭಕ್ತಿ ಪಂಥದ ಸರ್ವೋಚ್ಚ ಸಂತರಲ್ಲೊಬ್ಬರಾದ ಪ್ರಭು ನಿತ್ಯಾನಂದರು. ಪುರಿಯಲ್ಲಿ ನಾನಕ ಮತ್ತು ಚೈತನ್ಯ ಮಹಾಪ್ರಭುಗಳಿಬ್ಬರೂ ಭೇಟಿಯಾಗಿ ಜಗನ್ನಾಥನನ್ನು ಕೀರ್ತಿಸಿದ ಬಗ್ಗೆ ಚೈತನ್ಯರ ಶಿಷ್ಯ ಬರೆದ ಚೈತನ್ಯ ಭಾಗವತದಲ್ಲಿ ಉಲ್ಲೇಖವಿದೆ. ಶ್ರೀಲಂಕಾಕ್ಕೆ ಭೇಟಿ ನೀಡಿದಾಗ ಅಲ್ಲಿನ ಶೈವ ರಾಜ ಸಿಯೋನಾಥ ನಾನಕರನ್ನು ’ನಾನಕಾಚಾರ್ಯ’ರೆಂದು ಕರೆದು ಬರೆಸಿದ ಶಾಸನ ಲಭ್ಯವಿದೆ. ಇಷ್ಟಿದ್ದರೂ ನಾನಕರನ್ನು ಸೂಫಿ ಸಂತನ ಪದವಿಗಿಳಿಸುವ ಕೆಲಸವಿನ್ನೂ ನಿಂತಿಲ್ಲ. ಹಾಗೆ ಮಾಡುತ್ತಿರುವವರ್ಯಾರೂ ಗುರುಗ್ರಂಥಸಾಹೇಬ ಓದಿಲ್ಲ.
गुरमुखि नादं गुरमुखि वेदं गुरमुखि रहिआ समाई ॥
गुरु ईसरु गुरु गोरखु बरमा गुरु पारबती माई ॥
ಗುರುವೇ ನಾದ, ಗುರುವೇ ವೇದ, ಗುರು ಈಶ್ವರ, ಗುರು ಶಿವ-ವಿಷ್ಣು, ಗುರುವೇ ಪಾರ್ವತಿ ಲಕ್ಷ್ಮಿ.
 ಹಿಂದೂ ಧರ್ಮದಿಂದ ಸಿಖ್ಖರನ್ನು ಬೇರ್ಪಡಿಸಿ ಅವರನ್ನು ಮೂರ್ಖರನ್ನಾಗಿಸುವಲ್ಲಿ ಬ್ರಿಟಿಷರ ಡಿವೈಡ್ ಎಂಡ್ ರೂಲ್ ತುಂಬ ಅಚ್ಚುಕಟ್ಟಾಗಿ ಕೆಲಸ ಮಾಡಿದೆ. ೧೯೦೫ರಲ್ಲಿ ಕ್ರಿಶ್ಚಿಯನ್ ಮಿಶನರಿಯ ’ಮ್ಯಾಕ್ಸ್ ಅರ್ಥರ್ ಮೆಕಾಲ್ಲಿಫ್‌’ ಎಂಬ ಇತಿಹಾಸಕಾರನಿಂದ ಬ್ರೇನ್ ವಾಶ್‌ಗೊಳಪಟ್ಟ ’ತತ್ ಖಾಲ್ಸಾ ಸಿಂಗ್ ಸಭಾ’ ಸ್ವರ್ಣಮಂದಿರದೊಳಗಿದ್ದ ವಿಷ್ಣು ಮತ್ತು ಶಿವನ  ಮೂರ್ತಿಗಳನ್ನು ಹೊರಕ್ಕೆಸೆಯಿತು. ಈ ಮಹಾಶಯ ಬರೆದ ಸಿಖ್ ಇತಿಹಾಸದ ಗ್ರಂಥಗಳೇ ಇಂದಿನವರಿಗೆ ಪೂಜ್ಯ ಗ್ರಂಥ. ಸಿಖ್ಖರ ಬಗ್ಗೆ ಇರುವ ಇತಿಹಾಸವನ್ನೆಲ್ಲ ಮೂಲೆಗೆ ಸರಿಸಿ ಹೊಸ ಸೃಷ್ಟಿಯನ್ನೇ ಮಾಡಿದ ಮೆಕಾಲ್ಲಿಫ್ ಯಾವ ಮ್ಯಾಕ್ಸ್ ಮುಲ್ಲರಿಗೂ ಕಡಿಮೆಯಿಲ್ಲದಷ್ಟು ಪ್ರತಿಭಾವಂತ. ಇವನಿಂದ ಪ್ರೇರೇಪಿತಗೊಂಡ ಕಾಹನ್ ಸಿಂಗ್ ನಭಾ ರಚಿಸಿದ ’ಹಮ್ ಹಿಂದೂ ನಹೀ’ ಖಾಲ್ಸಾಗಳಿಗೆ ಅಧಿಕೃತ ಇತಿಹಾಸ. ಸಿಖ್ಖರ ದಾರಿ ತಪ್ಪಿಸಲು ನಾನಕದೇವರ ಜನ್ಮವೃತ್ತಾಂತ ’ಜನಮ್‌ಸಾಖಿ’ಯ ಬೇರೆ ಬೇರೆ ವರ್ಷನ್ನುಗಳು ಹುಟ್ಟಿಕೊಂಡವು. ಓಂಕಾರ ಇಕ್‌ಓನ್ಕಾರವಾಯ್ತು. ನಾನಕರು ಸೂಫಿಗಳಾಗಿದ್ದರೆಂದೂ, ಸ್ವರ್ಣಮಂದಿರವನ್ನು ನಿರ್ಮಿಸಲು ಪ್ರೇರೇಪಿಸಿದ್ದು ’ಮಿಯಾನ್ ಮೀರ್’ ಎಂಬ ಸೂಫಿ ಸಂತರೆಂಬ ಹೊಸ ಕತೆ ಶುರುವಾಯ್ತು. ’ಹರಿಮಂದಿರ’ವು ’ದರ್ಬಾರ್ ಸಾಹೇಬ್’ ಆಗಿಯೂ, ನಾನಕರ ’ಶ್ರೀಆದಿಗ್ರಂಥಜಿ’ಯು ’ಗುರು ಗ್ರಂಥ್ ಸಾಹೇಬ್’ ಆಗಿಯೂ ನಾಮಾಂತರಗೊಂಡವು. ಇವತ್ತಿಗೂ ಖಾಲ್ಸಾದಿಂದ ಪ್ರಭಾವಿತರಾದ ಸಿಖ್ಖರ್ಯಾರೂ ತಾವು ಹಿಂದೂಗಳೆಂದು ಒಪ್ಪಲು ತಯಾರಿಲ್ಲ. ಪಾಪ, ಹೀಗೆನ್ನುವವರಿಗ್ಯಾರೂ ಅವರ ಇತಿಹಾಸವೇ ಗೊತ್ತಿಲ್ಲ. 
ನಾನಕರ ಸೇಲಿ ಟೋಪಿ, ತಿಲಕ, ಜಪಮಾಲೆ ಗಮನಿಸಿ
ನಾನಕರು ಬಳಸುತ್ತಿದ್ದ ಸಾಲಿಗ್ರಾಮ, ಜಪಮಾಲೆ

ಕ್ರಿ.ಶ ೧೬೭೫ ಜುಲೈ,
        ದೇವಸ್ಥಾನಗಳನ್ನು ಬೀಳಿಸಿಯಾಯ್ತು, ವಿದ್ಯಾಸಂಸ್ಥೆಗಳನ್ನು ಕೆಡವಿಯಾಯ್ತು, ಹಿಂದೂಗಳಾಗಿ ಬದುಕುವುದಕ್ಕೂ ತೆರಿಗೆ ಕಟ್ಟುವ ಪರಿಸ್ಥಿತಿ. ಹಣೆಯಲ್ಲಿ ತಿಲಕ, ಭುಜದ ಮೇಲೆ ಜನಿವಾರ ಕಂಡಕೂಡಲೆ ಅಂಥವರನ್ನು ಕತ್ತರಿಸಿ ಹಾಕುವಂತೆ ಔರಂಗಜೇಬ ಆಪ್ಪಣೆ ಹೊರಡಿಸಿದ್ದ. ಕಾಶ್ಮೀರವೊಂದರಲ್ಲೇ ದಿನಕ್ಕೆ ಒಂದು ಮಣಭಾರದ ಜನಿವರಾಗಳ ರಾಶಿ ಬೀಳುತ್ತಿತ್ತಂತೆ. ಇನ್ನು ಮೊಘಲರ ಆಳ್ವಿಕೆಯಲ್ಲಿ ಬದುಕಲು ಸಾಧ್ಯವೇ ಇಲ್ಲವೆಂಬಷ್ಟು ಹಿಂಸೆ ಅತಿಯಾದಾಗ ಕಾಶ್ಮೀರಿ ಪಂಡಿತರ ಗುಂಪೊಂದು ಸಿಖ್ ಗುರು ತೇಜಬಹದ್ದೂರರ ಶರಣು ಬಂತು. ಕಾಶ್ಮೀರಿ ಬ್ರಾಹ್ಮಣರಿಗೆ ಸಿಖ್ ಮತದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಆದಿಗ್ರಂಥದ ಮೂರು ಭಾಗಗಳಾದ ಗುರ್ಬಾನಿ, ಭಟ್ಟಬಾನಿ, ಭಗತ್‌ವಾನಿಗಳಲ್ಲಿ ’ಭಟ್ಟವಾಣಿ’ಯನ್ನು ರಚಿಸಿದ್ದು ಕಾಶ್ಮೀರಿ ಬ್ರಾಹ್ಮಣರೇ. ಆದಿಗ್ರಂಥದ ೩೬ ರಚನಕಾರರಲ್ಲಿ ೧೯ ಜನ ಬ್ರಾಹ್ಮಣರು. ಹೀಗಿರುವಾಗ ಶರಣು ಬಂದವರ ಕೈಬಿಡಲು ತೇಜಬಹದ್ದೂರರಿಗೆ ಮನಸ್ಸಾಗಲಿಲ್ಲ. ಇದೇ ಔರಂಗಜೇಬನ ಅಜ್ಜ ಜಹಾಂಗೀರ್ ಹಿಂದೂ ಮತದ್ವೇಷದ ಕಾರಣದಿಂದ ಗುರು ಅರ್ಜುನದೇವರನ್ನು ರಾವಿ ನಡಿದಡದಲ್ಲಿ ಕೊತಕೊತ ಕುದಿಯುತ್ತಿದ್ದ ಮರಳು ತುಂಬಿದ ಹಂಡೆಯಲ್ಲಿ ಕೂರಿಸಿ ಕ್ರೂರವಾಗಿ ಹತ್ಯೆಗೈದಿದ್ದ. ಆದರೂ ತೇಜಬಹದ್ದೂರರು ಹೆದರಲಿಲ್ಲ. ೧೬೭೫ ಜುಲೈ ೮ರಂದು ಆನಂದಪುರದಲ್ಲಿ ’ಸಿಖ್ ಸಂಗತ್’ನ್ನು ಸಮಾವೇಶಗೊಳಿಸಿ ತಮ್ಮ ಮಗ ಗೋವಿಂದನನ್ನು ಉತ್ತರಾಧಿಕಾರಿಯನ್ನಾಗಿಸಿ ಮೂರು ಶಿಷ್ಯರೊಂದಿಗೆ ದೆಹಲಿಗೆ ಪ್ರಯಾಣಿಸಿದರು. ತನ್ನನ್ನು ಮತಾಂತರಗೊಳಿಸಿದರೆ ಇಡೀ ಹಿಂದೂ ಸಮುದಾಯವೇ ಇಸ್ಲಾಂ ಸ್ವೀಕರಿಸುವುದಾಗಿ ಜೇಬನಿಗೆ ಸಂದೇಶ ಕಳುಹಿಸಿದರು. ಹಿಂದೂಗಳಲ್ಲಿ ಬಂಡಾಯವನ್ನು ಪ್ರೇರೇಪಿಸುತ್ತಿದ್ದಾನೆಂದು ಆರೋಪಿಸಿ ಸಟ್ಲೇಝ್ ನದಿಯನ್ನು ದಾಟುತ್ತಿದ್ದಂತೆ ರೂಪಾರ್‌ನಲ್ಲಿ ದಾರಿಮಧ್ಯದಲ್ಲೇ ತೇಜಬಹದ್ದೂರರನ್ನು ಬಂಧಿಸಲಾಯ್ತು. ಮೂರು ತಿಂಗಳು ಸೆರೆಯಲ್ಲಿ ಚಿತ್ರಹಿಂಸೆ ನೀಡಿದರೂ, ಅವರ ಅನುಯಾಯಿಗಳನ್ನೆಲ್ಲ ಚಿತ್ರಹಿಂಸೆ ಕೊಟ್ಟು ಕೊಂದರೂ ಆ ಸಾಧು ಮತಾಂತರಕ್ಕೆ ಒಪ್ಪಲಿಲ್ಲ. ಅವರ ಅನುಯಾಯಿ ಭಾಯಿ ಮತಿದಾಸನನ್ನು ತಲೆಯಿಂದ ಕಾಲಿನವರೆಗೆ ಗರಗಸದಿಂದ ಸೀಳಿ ಜರಾಸಂಧನಂತೆ ಕತ್ತರಿಸಲಾಯ್ತು, ಭಾಯಿ ದಯಾಳ ದಾಸನನ್ನು ಕುದಿವ ನೀರಲ್ಲಿ ಮುಳುಗಿಸಿಲಾಯ್ತು. ಸತಿದಾಸನನ್ನು ಹತ್ತಿಯ ರಾಶಿಯಲ್ಲಿ ಕೂರಿಸಿ ಬೆಂಕಿ ಹಚ್ಚಿದರು. ತೇಜಬಹದ್ದೂರರ ಮನಸ್ಸು ಒಂದಿಂಚೂ ವಿಚಲಿತವಾಗಲಿಲ್ಲ. ಕೊನೆಗೆ ಜೈಲಿನಿಂದ ರಾಣಿಯ ಅಂತಃಪುರದತ್ತ ನೋಡುತ್ತಿದ್ದ ಎಂಬಂಥ ತಲೆಬುಡವಿಲ್ಲದ ಆರೋಪಗಳನ್ನೆಲ್ಲ ಹೊರಿಸಿ ನವೆಂಬರ್ ೧೧ರಂದು ಚಾಂದನೀ ಚೌಕದಲ್ಲಿ ಎಲ್ಲರೆದುರು ಗುರುದೇವರ ತಲೆ ಕಡಿದರು. ತೇಜಬಹದ್ದೂರರ ತಲೆಯನ್ನು ಆನೆಯ ಮೇಲಿರಿಸಿ ದೆಹಲಿಯ ಬಾಜಾರುಗಳಲ್ಲಿ ಮೆರವಣಿಗೆ ಮಾಡಿಸಿ ಸಾರ್ವಜನಿಕ ಪ್ರದರ್ಶನಕ್ಕಿಡಲಾಯಿತು. ಆ ಬರ್ಬರ ಕ್ರೌರ್ಯವನ್ನು ನೋಡಿ ದೆಹಲಿಗರ ಉಸಿರಡಗಿಹೋಯಿತು. ಸೊಲ್ಲೆತ್ತುವ ಧೈರ್ಯವಿರುವವರೊಬ್ಬನೂ ಇರಲಿಲ್ಲ. ಲಕ್ಷಾಂತರ ಅನುಯಾಯಿಗಳಿರುವ ಗುರುಗಳಿಗೇ ಈ ಗತಿಯಾದರೆ ಸಾಮಾನ್ಯರ ಪಾಡೇನು! ಔರಂಗಜೇಬ ಎಲ್ಲಿ ತಮ್ಮನ್ನೇನಾದರೂ ಮಾಡಿಬಿಟ್ಟಾನೆಂಬ ಹೆದರಿಕೆಯಿಂದ ಕತ್ತರಿಸಿ ಬಿದ್ದಿದ್ದ ದೇಹದ ಹತ್ತಿರ ಹೋಗುವ ಸಾಹಸವನ್ನೂ ಯಾರೊಬ್ಬರೂ ಮಾಡಲಿಲ್ಲ. ಆದರೆ ಶಿಷ್ಯರು ಸುಮ್ಮನಿರುತ್ತಾರೆಯೇ!  ಭಾಯಿ ಜೈತಾ ಎಂಬ ಶಿಷ್ಯನೊಬ್ಬ ಸಮಯಕಾದು ರಾತ್ರೋರಾತ್ರಿ ತೇಜಬಹದ್ದೂರರ ತಲೆಯನ್ನು ಜೋಳಿಗೆಯಲ್ಲಿ ಹಾಕಿಕೊಂಡು ಮಾರುವೇಷದಲ್ಲಿ ಆನಂದಪುರ್ ಸಾಹಿಬ್‌ಗೆ ಪ್ರಯಾಣ ಬೆಳೆಸಿದ. ಇನ್ನೊಬ್ಬ ಶಿಷ್ಯ ಲಖಿ ಷಾ ಬಂಜಾರಾ ಅದೇ ರಾತ್ರಿ ತೇಜಬಹದ್ದೂರರ ಮುಂಡವನ್ನು ಮನೆಗೆ ಹೊತ್ತು ತಂದಿಟ್ಟುಕೊಂಡ. ರಾತ್ರಿ ಕಳೆದು ಬೆಳಗಾದರೆ ಮುಘಲ್ ಸೈನಿಕರು ಕಳೆದು ಹೋದ ದೇಹವನ್ನು ಹುಡುಕಿಕೊಂಡು ಬರುತ್ತಿದ್ದರು. ಆಧ್ಯಾತ್ಮಗುರುವೊಬ್ಬನ ದೇಹವನ್ನು ದಫನ ಮಾಡದೇ ಹಾಗೆ ಬಿಡಲು ಅವನಿಗೆ ಮನಸ್ಸಾಗಲಿಲ್ಲ. ಲಖಿ ಷಾ ಗುರುವಿನ ಮುಂಡವನ್ನು ತಬ್ಬಿಕೊಂಡು ತನ್ನ ಮನೆಗೇ ಬೆಂಕಿಹಚ್ಚಿಕೊಂಡು ಬೂದಿಯಾದ. ೧೭೮೩ರಲ್ಲಿ ದೆಹಲಿಯನ್ನಾಕ್ರಮಿಸಿ ಮುಘಲರನ್ನು ಬಗ್ಗುಬಡಿದ ಸಿಖ್ಖರ ಮಿಲಿಟರಿ ನಾಯಕ ’ಬಾಘಲ್ ಸಿಂಘ್’ ತೇಜಬಹದ್ದೂರರನ್ನು ಹತ್ಯೆಗೈದ ಅದೇ ಸ್ಥಳದಲ್ಲಿ ಸ್ಮಾರಕವಾಗಿ ಗುರುದ್ವಾರ ’ಶೀಷ್(ಶೀಷ್ = ತಲೆ) ಗಂಜ್ ಸಾಹೇಬ’ನ್ನೂ, ದೇಹವನ್ನು ದಹನಮಾಡಿದ ಮನೆಯಿದ್ದ ಜಾಗದಲ್ಲಿ ಗುರುದ್ವಾರ ’ರಕಬ್ ಗಂಜ್ ಸಾಹೇಬ್‌’ನ್ನೂ ನಿರ್ಮಿಸಿದ. ದೆಹಲಿಯ ಅತ್ಯಂತ ಹಳೆಯ ಗುರುದ್ವಾರಗಳಲ್ಲೊಂದಿವು. ಇಂಥ ತೇಜಬಹದ್ದೂರರನ್ನು ದಾರಿಹೋಕರ ದರೋಡೆಕೋರನೆಂದು, ಔರಂಗಜೇಬನನ್ನು ಹಿಂದೂದ್ವೇಷವಿಲ್ಲದ ಸೆಕ್ಯುಲರ್ ಮನುಷ್ಯನೆಂದು ಜುದಾನಾಥ್ ಸರ್ಕಾರ್ ಸೇರಿ ಬಹಳಷ್ಟು ಮಾರ್ಕ್ಸಿಸ್ಟ್ ಬ್ರಹ್ಮರು ಚಿತ್ರಿಸಿದ್ದಾರೆ. ಗುರು ಗ್ರಂಥ ಸಾಹೇಬದ ಭಟ್ಟ ವಾಹಿಗಳಲ್ಲಿ, ಭಟ್ಟ ವಾಣಿಗಳಲ್ಲಿ. ಗುರು ಕಿಯಾಂ ಸಖಿಯಾಂಗಳಂಥ ಪ್ರಾಮಾಣಿಕ ಸಿಖ್ ಗ್ರಂಥಗಳಲ್ಲಿ ತೇಜಬಹದ್ದೂರರ ಅಮರಗಾಥೆಯ ಸವಿಸ್ತಾರ ಚಿತ್ರಣವಿಲ್ಲದಿದ್ದರೆ ಇಷ್ಟೊತ್ತಿಗಾಗಲೇ ಮಾರ್ಕ್ಸಿಸ್ಟ್ ಇತಿಹಾಸಕಾರರು ಸಿಖ್ ಗುರುಗಳನ್ನು ಹುರಿದು ಮುಕ್ಕಿ ಬಿಡುತ್ತಿದ್ದರೇನೋ. 
ರಕಬ್ ಗಂಜ್ ಸಾಹೇಬ್‌,
ಶೀಷ್ ಗಂಜ್ ಸಾಹೇಬ, ಚಾಂದನೀ ಚೌಕ್
        ತೇಜಬಹದ್ದೂರರ ಬಲಿದಾನ ಪಂಜಾಬ್ ಸೇರಿ ಇಡೀ ಉತ್ತರ ಭಾರತದಲ್ಲಿ ಮೊಘಲರ ವಿರುದ್ಧ ಹೋರಾಡಲು ದೊಡ್ಡ ರಾಜಕೀಯ ಚೈತನ್ಯವೊಂದನ್ನು ಹುಟ್ಟುಹಾಕಲು ಕಾರಣವಾಯ್ತು. ಒಂಭತ್ತನೇ ವರ್ಷಕ್ಕೆ ಪೀಠವೇರಿದ ಗುರು ಗೋವಿಂದ ಸಿಂಗರು ತನ್ನ ಹತ್ತೊಂಭತ್ತನೇ ವರ್ಷಕ್ಕೆ ಬಲಿಷ್ಟ ಸೇನೆಯನ್ನು ಕಟ್ಟಿಕೊಂಡು ಆನಂದಪುರವನ್ನು ರಾಜಧಾನಿಯನ್ನಾಗಿಸಿಕೊಂಡು ಸಿಖ್ ಸಾಮ್ರಾಜ್ಯವನ್ನು ಸ್ವತಂತ್ರವಾಗಿ ಆಳಲಾರಂಭಿಸಿದರು. ಅಲ್ಲಿಯವರೆಗೂ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿದ್ದ ಸಿಖ್ಖರು ಕತ್ತಿ ಹಿಡಿದು ಹೋರಾಟಗಾರರಾದರು. ಮತಾಂಧತೆಗೆ ಪ್ರತಿ ಮತಾಂಧತೆಯ ರೋಶದಲ್ಲಿ ಸಿಖ್ಖರ ಸೇನಾಬಲ ಸುಮಾರು ಒಂದು ಲಕ್ಷದಷ್ಟಾಯಿತು. ಎರಡೇ ವರ್ಷದಲ್ಲಿ ಆನಂದಗಢ್, ಕೇಶಗಢ್, ಲೋಹಗಢ್ ಮತ್ತು ಫತೇಗಢ್‌ಗಳಲ್ಲಿ ಕೋಟೆಗಳ ನಿರ್ಮಾಣವಾಯಿತು. ಪಂಜಾಬ್ ಪ್ರಾಂತ್ಯದ ರಾಜ ಭೀಮಚಂದ್, ಪಂಜಾಬ್ ಮತ್ತು ಕಾಶ್ಮೀರ ಪ್ರಾಂತ್ಯದ ಮರಿಕಿರಿ ರಾಜರುಗಳೆಲ್ಲ ಒಟ್ಟಾಗಿ ಒಂದೇ ಸಾರಿ ಸಿಖ್ಖರ ಮೇಲೆ ಮುಗಿಬಿದ್ದರೂ ಭಂಗಾನಿ ಎಂಬ ಸ್ಥಳದಲ್ಲಿ ನಡೆದ ಐತಿಹಾಸಿಕ ಯುದ್ಧದಲ್ಲಿ ಗೋವಿಂದ ಸಿಂಗರು ಘನವಿಜಯ ಸಾಧಿಸುವುದರೊಂದಿಗೆ ಅವರ ಕೀರ್ತಿ ಭಾರತದಾದ್ಯಂತ ಹಬ್ಬಿತು. ಆಗವರಿಗೆ ಬರೀ ಹತ್ತೊಂಬತ್ತು ವರ್ಷ. ಸೋತ ವೈರಿಗಳು ದೆಹಲಿ ಬಾದಷಾ ಔರಂಗಜೇಬನಿಗೆ ದೂರಿತ್ತರು. ಪಂಜಾಬಿನ ಕಡೆಯಿಂದ ಕಪ್ಪ ಸರಿಯಾಗಿ ಬರುತ್ತಿಲ್ಲವೆಂಬ ನೆವ ಮುಂದಿಟ್ಟುಕೊಂಡು ದಿಲ್ಲಿ ಸುಲ್ತಾನರು ಪಂಜಾಬ್ ಪ್ರಾಂತ್ಯದ ಮೇಲೆ ಯುದ್ಧ ಸಾರಿದರು. ನಾದೌನ್‌ನಲ್ಲಿ ನಡೆದ ಯುದ್ಧದಲ್ಲಿ ಮುಘಲರ ಸೇನಾಪತಿ ಅಲಿಫ್‌ಖಾನನೂ ಪರಾಭಗೊಂಡ. ಗುರುಗೋವಿಂದ ಸಿಂಗರು ರಚಿಸಿದ ಅವನ ಜೀವನಕಥೆ ’ಬಿಚಿತ್ರ ನಾಟಕ’ದಲ್ಲಿ ಈ ಎಲ್ಲ ಯುದ್ಧಗಳ ವಿವರಣೆಯಿದೆ. ಸೂರ್ಯವಂಶದ ವರ್ಣನೆಯಿಂದ ಶುರುವಾಗಿ ರಾಮ, ಲವ-ಕುಶರ ಸ್ತುತಿ, ಹತ್ತು ಗುರುಗಳ ವರ್ಣನೆ, ಗೋವಿಂದರ ಜೀವನಗಾಥೆಗಳ ಸಂಗ್ರಹ ಈ ಬೃಜ್ ಭಾಷೆಯ ಬಿಚಿತ್ರ ನಾಟಕದಲ್ಲಿದೆ.
       ೧೬೯೯ರ ಬೈಸಾಕಿ ಹಬ್ಬದ ದಿನ ಕೇಶ್‌ಗಢ್‌ನಲ್ಲಿ ನಡೆದ ದೊಡ್ಡ ದರ್ಬಾರಿನಲ್ಲಿ ಖಾಲ್ಸಾವನ್ನು ಸ್ಥಾಪನೆ ಮಾಡಿ ಪಂಚಪ್ಯಾರೆಗಳಿಗೆ ದೀಕ್ಷೆ ನೀಡುವುದರೊಂದಿಗೆ ಸಿಖ್ಖರು ಪ್ರಚಂಡವಾದ ಮತಾಭಿಮಾನದಿಂದ ಪಂಥದ ರಕ್ಷಣೆಗೆ ಆಯುಧಗಳನ್ನು ಧರಿಸಿ ವೀರಭದ್ರರಂತೆ ವಿಜೃಂಭಿಸಿದರು. ಜಾತಿಮತವನ್ನು ಮೀರಿ ಎಲ್ಲರೂ ’ಸಿಂಹ(ಸಿಂಗ್)’ಗಳಾದರು. ಸರ್ವಸಮಾನತೆಯ ಹೊಸ ಹಾದಿ ಸಮಾಜದ ಎಲ್ಲ ವರ್ಗಗಳನ್ನೂ ಬಹುವಾಗಿ ಆಕರ್ಷಿಸಿತು. ಮೊದಲೇ ಪೂರ್ವದಲ್ಲಿ ರಜಪೂತರು, ದಕ್ಷಿಣದಲ್ಲಿ ಮರಾಠರ ಪೆಟ್ಟಿಗೆ ಕಂಗಾಲಾಗಿದ್ದ ಔರಂಗಜೇಬ ಉತ್ತರದಲ್ಲಿ ಸಿಖ್ಖರ ಪ್ರಾಬಲ್ಯದಿಂದ ತತ್ತರಿಸಿಹೋದ. ಹೇಳಿಕೇಳಿ ಆವ ಔರಂಗಜೇಬ. ಕುಯುಕ್ತಿಯಲ್ಲಿ ಇಡೀ ಇತಿಹಾಸದಲ್ಲಿ ಅವನನ್ನು ಮೀರಿಸಿದವರಿಲ್ಲ. ಹಿಂದೆ ಗೋವಿಂದಸಿಂಗರಿಂದ ಉಪಕ್ರತರಾದ ಅರಸರೆಲ್ಲ ಅವರ ವಿರುದ್ಧ ತಿರುಗಿ ಬೀಳುವಂತೆ ಮಾಡಿದ. ಇನ್ನೊಂದು ಕಡೆ ಗವರ್ನರ್ ವಾಜಿರ್ ಖಾನ್ ಭಾರೀ ಸೈನ್ಯದೊಂದಿಗೆ ಕಣಕ್ಕಿಳಿದ. ಹಾಗೆ ನಡೆದ ನಾಲ್ಕೂ ದಂಡಯಾತ್ರೆಗಳಲ್ಲೂ ಮುಘಲರ ಕೈಲಿ ಸಿಖ್ಖರನ್ನು ಗೆಲ್ಲಲಾಗಲಿಲ್ಲ. ಕೊನೆಗೆ ಜೇಬ ಒಂದು ಪತ್ರ ಕಳುಹಿಸಿದ. ಆನಂದಪುರವನ್ನು ಬಿಟ್ಟುಹೋದರೆ ಕುರಾನಿನ ಆಣೆಯಾಗಿ ಯಾರಿಗೂ ತೊಂದರೆ ಕೊಡುವುದಿಲ್ಲವೆಂದು. ಈ ಮಾತನ್ನು ನಂಬಿ ಗೋವಿಂದ ಸಿಂಗರು ತಮ್ಮವರೊಡನೆ ಆನಂದಪುರವನ್ನು ತೊರೆದರೆ ಮರುರಾತ್ರಿಯೇ ಮುಘಲರ ಬಣ್ಣ ಬದಲಾಯ್ತು. ಜೇಬನ ಸೈನಿಕರು ಕೋಟೆಯನ್ನು ಬಿಟ್ಟು ಬಯಲಿಗೆ ಬಂದ ಜನರ ಮೇಲೆ ಮುಗಿಬಿದ್ದು ಬೇಟೆಯಾಡಿದರು. ಸಿರ್ಸಾ ನದಿದಡದಲ್ಲಿ ನಡೆದ ಸಂಗ್ರಾಮದಲ್ಲಿ ಗುರುಗೋವಿಂದರ ಹೆಚ್ಚಿನ ಅನುಚರರೆಲ್ಲ ಒಂದೇ ಪ್ರಾಣ ಕಳೆದುಕೊಂಡರು ಇಲ್ಲವೇ ಮೊಘಲರ ಕೈಲಿ ಸಿಕ್ಕಿಬಿದ್ದರು. ಹಾಗೆ ಸಿಕ್ಕಿಬಿದ್ದವರಲ್ಲಿ ಗುರುಗೋವಿಂದರ ತಾಯಿ ಮಾತಾ ಗುಜ್ರಿ ಮತ್ತು ಇಬ್ಬರು ಕಿರಿಯ ಮಕ್ಕಳು ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಸೇರಿದ್ದರು. ಮತಾಂತರಕ್ಕೆ ಒಪ್ಪದ ಎಂಟು ವರ್ಷದ ಇಬ್ಬರು ಮಕ್ಕಳ ತಲೆಗಳನ್ನು ಕತ್ತರಿಸಿ ಕೆಡವಿದ ವಾಜಿರ್ ಖಾನ್. ಇನ್ನಿಬ್ಬರು ಮಕ್ಕಳಾದ ಅಜಿತ್ ಸಿಂಗ್ ಮತ್ತು ಜುಝಾರ್ ಸಿಂಗ್ ರೋಪಾರಿನ ಸಮೀಪ ನಡೆದ ಯುದ್ಧದಲ್ಲಿ ವೀರಮರಣವನ್ನಪ್ಪಿದ್ದರು. ಅಂದಿನ ಯುದ್ಧದಲ್ಲಿ ಜೀವಸಹಿತ ಉಳಿದು ಬಚಾವಾದವರು ಗುರುಗೋವಿಂದಸಿಂಗರ ಜೊತೆ ಐದು ಜನ ಮಾತ್ರ. ಅವರೆಲ್ಲ ಚಮಕೂರಿನ ಕೋಟೆಯಲ್ಲಿ ಆಶ್ರಯ ಪಡೆದರು. ಹಿಂದೆ ಬಿದ್ದ ಮುಘಲ್ ಪಡೆಗಳಿಂದ ತಪ್ಪಿಸಿಕೊಳ್ಳಲು ಸಂಗತ್ ಸಿಂಗ್ ಎಂಬ ಅನುಚರನೊಬ್ಬ ಗುರುಗೋವಿಂದರಂತೆ ವೇಷ ಧರಿಸಿದ. ಚಮಕೂರಿನ ಮೇಲೆ ದಾಳಿಮಾಡಿದ ಮುಘಲ್ ಸೈನ್ಯ ಗೋವಿಂದರೆಂಬ ಕಲ್ಪನೆಯಲ್ಲಿ ಸಂಗತ್ ಸಿಂಗ ಮತ್ತು ಸಂಗಡಿಗರನ್ನು ಕೊಂದು ಕೇಕೆ ಹಾಕಿತು. ಇದರ ಮಧ್ಯೆ ನಬಿ ಖಾನ್ ಮತ್ತು ಘನಿ ಖಾನ್ ಎಂಬಿಬ್ಬರು ಪಠಾಣರ ಜೊತೆ ಸೇರಿ ಆಲಂಗಿರ್‌ನ ಜಮೀನ್ದಾರನ ಸಹಾಯದಿಂದ ಸೂಫಿ ವೇಶ ಧರಿಸಿ ಗುರು ಗೋವಿಂದರು ರಾಯಕೋಟಕ್ಕೆ ಸ್ಥಳಾಂತರಗೊಂಡಾಗಿತ್ತು. ತನ್ನ ಅಪ್ರತಿಮ ನೆನಪಿನ ಶಕ್ತಿಯಿಂದಲೇ ಕಳೆದು ಹೋದ ’ಆದಿಗ್ರಂಥ’ವನ್ನು ಗುರುಗ್ರಂಥಸಾಹೇಬ ಹೆಸರಿನಲ್ಲಿ ಪುನರ್ರಚಿಸಿದರು. ಮಚ್ಛೀವಾರಾದ ಅರಣ್ಯಗಳಲ್ಲಿ ತಂಗಿದ್ದಾದ ಔರಂಗಜೇಬನ ಪರಮತದ್ವೇಷವನ್ನು ಖಂಡಿಸಿ ರ್ಶಿಯನ್ ಭಾಷೆಯ ಕಾವ್ಯಶೈಲಿಯಲ್ಲಿ ’ಜಾಫರ್ ನಾಮಾ’ ಎಂಬ  ದೀರ್ಘಪತ್ರವನ್ನು ಬರೆದರು. ಹಿಂದೆ ಬೇರೆಬೇರೆ ಕಾರಣಕ್ಕೆ ಇವರನ್ನು ತೊರೆದು ಹೋಗಿದ್ದ ನಲವತ್ತು ಸಿಖ್ ಪ್ರಮುಖರು ಗುರುಗಳ ದೀರ್ಘಕಾಲದ ಸಹವರ್ತಿ ಮಾಯಿ ಭಾಗೋ ಎಂಬ ಮಹಿಳೆಯ ನೇತೃತ್ವದಲ್ಲಿ ಪುನಃ ಗೋವಿಂದಸಿಂಗರನ್ನು ಖಿರ್ದಾನಾ ಎಂಬ ಸ್ಥಳದಲ್ಲಿ ಕೂಡಿಕೊಂಡರು. ಇದರ ವಾಸನೆ ಹಿಡಿದು ಬಂದ ಮೊಘಲ್ ಸೈನ್ಯದೊಂದಿಗೆ ಅಂತಿಮ ಯುದ್ಧ ನಡೆದದ್ದು ಅಲ್ಲಿಯೇ. ನಲವತ್ತೊಂದು ಮಂದಿಯ ಶೌರ್ಯದೆದುರು ಇಡೀ ಮೊಘಲ್ ಸೈನ್ಯ ನುಚ್ಚುನೂರಾಯಿತು. ಯುದ್ಧದಲ್ಲಿ ಮುಕ್ತಿಪಡೆದ ಸಿಖ್ ಯೋಧರ ಸ್ಮರಣಾರ್ಥ ಆ ಸ್ಥಳ ಮುಕ್ತಸರ್ ಎಂದು ಗೋವಿಂದಸಿಂಗರಿಂದ ನಾಮಕರಣಗೊಂಡಿತು. ಮುಕ್ತಸರ್‌ನ ಕದನದಲ್ಲಿ ಮಡಿದ ಹುತಾತ್ಮ ಯೋಧರ ನೆನಪಿನಲ್ಲಿ ಪ್ರತಿವರ್ಷ ಡಿಸೆಂಬರಿನಲ್ಲಿ ನಡೆಯುವ ’ಮಾಘಿ ಮೇಳ’ ಪಂಜಾಬಿನಲ್ಲಿ ನಡೆಯುವ ಅತಿದೊಡ್ಡ ಸಿಖ್ಖರ ಸಮಾವೇಶ ಮತ್ತು ಭಾರತದ ಅತಿದೊಡ್ಡ ಮೇಳಗಳಲ್ಲೊಂದು. ಗುರುಗೋವಿಂದಸಿಂಗರ ಜೊತೆ ಮುಕ್ತಸರ್ ಯುದ್ಧದ ನೇತೃತ್ವ ವಹಿಸಿದ್ದ ಮಾಯಿ ಭಾಗೋ ಮುಂದೆ ಪುರುಷವೇಷದಲ್ಲಿ ಅವರ ಅಂಗರಕ್ಷಕಳಾಗಿದ್ದಳಂತೆ. ೧೭೦೮ರಲ್ಲಿ ನಾಂದೇಡದಲ್ಲಿ ಗೋವಿಂದಸಿಂಗರ ದೇಹಾಂತ್ಯವಾದ ನಂತರ ಮಾಯಿ ಭಾಗೋ ಕರ್ನಾಟಕದ ಬೀದರಿನಲ್ಲಿ ನೆಲೆಸಿ ತಪಸ್ಸನ್ನಾಚರಿಸಿ ಅಲ್ಲೇ ದೇಹತ್ಯಾಗ ಮಾಡಿದಳು. ಇನ್ನೊಂದು ವಿಶೇಷವೆಂದರೆ ಮೊತ್ತಮೊದಲು ಗುರುಗೋವಿಂದಸಿಂಗರಿಂದ ಖಾಲ್ಸಾ ದೀಕ್ಷೆ ಪಡೆದ ಪಂಚ್‌ಪ್ಯಾರೆಗಳಲ್ಲೊಬ್ಬನಾದ ’ಸಾಹಿಬ್ ಸಿಂಗ್’ ಇದೇ ಬೀದರಿನ ಅಚ್ಚಕನ್ನಡಿಗ. ಹಿಂದೊಮ್ಮೆ ನಾನಕರು ಶಿಷ್ಯ ಮರ್ದಾನಾನ ಸಂಗಡ ಬೀದರ್‌ಗೆ ಬಂದಿದ್ದಾಗ ಇಲ್ಲಿನ ಜನ ಕುಡಿಯುವ ನೀರಿಲ್ಲದೇ ಪರಿತಪಿಸುತ್ತಿದ್ದರಂತೆ. ಇದನ್ನು ಕಂಡ ನಾನಕರು ತಮ್ಮ ಪಾದುಕೆಯನ್ನು ಕಲ್ಲೊಂದಕ್ಕೆ ಬಡಿದಾಗ ಕಲ್ಲು ಸೀಳಿ ಜಲಧಾರೆಯೊಂದು ಉಕ್ಕಿ ಹರಿಯಿತು. ಈ ನಾನಕ ಝೀರಾ(ಝರಿ)ಯನ್ನು ಬೀದರಿನಲ್ಲಿ ನಾನಕರ ನೆನಪಿನಲ್ಲಿ ಕಟ್ಟಿದ ನಾನಕ ಝೀರಾ ಸಾಹೇಭ್ ಗುರುದ್ವಾರದ ಪಕ್ಕ ಇಂದಿಗೂ ನೋಡಬಹುದು.
        ಗುರು ಗೋವಿಂದ ಸಿಂಗರ ಪ್ರಯತ್ನ ವ್ಯರ್ಥವಾಗಲಿಲ್ಲ. ಖಾಲ್ಸಾ ರಾಜ್ಯ ಸ್ಥಾಪನೆಯ ಕನಸು ಅವರ ಜೀವಸಮಾಧಿಯ ಹದಿನೆಂಟು ತಿಂಗಳಿಗೇ ಅವರ ಮಿತ್ರ ವೈಷ್ಣವ ಬೈರಾಗಿ ’ಬಂದಾ ಸಿಂಗ್ ಬಹದ್ದೂರ್’ನ ನೇತೃತ್ವದಲ್ಲಿ ಸಾಕಾರಗೊಂಡಿತು. ೧೭೧೦ರಲ್ಲಿ ವಜೀರ್ ಖಾನನ ನಂತರ ಪೂರ್ವದ ಸಟ್ಲೇಜಿನಿಂದ ಪಶ್ಚಿಮದ ಯಮುನೆಯವರೆಗೆ  ಸಿರ್ಹಿಂದ್ ರಾಜ್ಯ ಖಾಲ್ಸಾಗಳ ವಶವಾಗಿ ಮುಂದಿನ ನೂರು ವರ್ಷಗಳ ಕಾಲ ಸಿಖ್ಖರ ಕೀರ್ತಿ ಪತಾಕೆ ಹಾರಾಡಿತು.ಅದು ಇನ್ನೊಂದು ಮಹಾದ್ಭುತ.
ಹೋಶಿಯಾರಪುರದ ಬೈರಾಗಿ ಮಂದಿರದಲ್ಲಿನ ಪಂಚಪ್ಯಾರೆಗಳ ವರ್ಣಚಿತ್ರ
1 comment:

  1. ಸಿಖ್ ಇತಿಹಾಸವು ಭಾರತದ ಸ್ವಾಭಿಮಾನದ ಇತಿಹಾಸವಾಗಿದೆ. ಅನೇಕ ವಿವರಣೆಗಳನ್ನಿತ್ತ ನಿಮಗೆ ಧನ್ಯವಾದಗಳು.

    ReplyDelete