Pages

Tuesday, May 24, 2016

ಶ್ರೀಮಚ್ಛಂಕರಭಗವತ್ಪಾದ ಚರಿತ್ರ: ಜನ್ಮ ಪ್ರಕರಣ


       ಆಚಾರ್ಯ ಶಂಕರರ ಚರಿತ್ರವಿಮರ್ಶೆಗೆ ಶಂಕರ ವಿಜಯಗಳಿಗಿಂತ ಅವರದೇ ಗ್ರಂಥಗಳ ಅಂತರಂಗಪರೀಕ್ಷೆ ಮುಖ್ಯ. ಆದರೆ ದುರದೃಷ್ಟವೆಂದರೆ ಶಂಕರರ ನಿಶ್ಚಿತ ಗ್ರಂಥಗಳು ಯಾವವು ಎಂದು ನಿಶ್ಚಯಿಸುವುದೇ ದೊಡ್ಡ ಕಷ್ಟವಾಗಿದೆ. ಶೈಲಿಯನ್ನು ಗಮನಿಸಿದರೆ ಬ್ರಹ್ಮಸೂತ್ರಗಳಿಗೆ ವ್ಯಾಖ್ಯಾನ ಬರೆದ ಶಂಕರರೇ ಸೌಂದರ್ಯಲಹರಿಯನ್ನು ಬರೆದರೆಂಬುವುದನ್ನು ನಂಬುವುದು ಕಷ್ಟವೆಂದೇ ಕೆಲ ವಿದ್ವಾಂಸರ ಅಭಿಮತ. ಯಾರ್ಯಾರೋ ಬರೆದ ಗ್ರಂಥಗಳು, ಸ್ತೋತ್ರಗಳೆಲ್ಲ ಇಂದು ಶಂಕರರ ಹೆಸರಿನಲ್ಲಿ ಪ್ರಚಲಿತದಲ್ಲಿವೆ. ಆದರೆ ಪ್ರಸ್ಥಾನತ್ರಯ ಭಾಷ್ಯಗಳು ನಿಸ್ಸಂಶಯವಾಗಿ ಆಚಾರ್ಯಕೃತವೆಂಬುದು ಬಹುಜನರ ನಂಬಿಕೆ. ಇಲ್ಲಿಯೂ ಕೂಡ ತೊಡಕಿಲ್ಲದೇ ಇಲ್ಲ. ಆಚಾರ್ಯರಿಂದ ರಚಿತವಾದ ಸಾಹಿತ್ಯಗಳಲ್ಲಿ ಸೂತ್ರಭಾಷ್ಯಗಳಿಗೇ ಅಗ್ರಸ್ಥಾನ. ನೈಷ್ಕರ್ಮಸಿದ್ಧಿಯನ್ನು ಬರೆದ ಸುರೇಶ್ವರಾಚಾರ್ಯರು ’ಶ್ರೀಮಚ್ಛಂಕರಪಾದಯುಗಲಂ ಸಂಸೇವ್ಯ’ ಈ ಗ್ರಂಥವನ್ನು ಬರೆದುರುವೆನೆಂದು ಬಾಯಿಬಿಟ್ಟು ಹೇಳಿಕೊಂಡಿರುವರಾದರೂ ಸೂತ್ರಭಾಷ್ಯದ ಯಾವ ವಾಕ್ಯವನ್ನೂ ಅಲ್ಲಿ ಅವತರಿಸಿಲ್ಲ. ’ತಸ್ಮೈ ಶಂಕರಭಾನವೇ’ ಎಂದು ಗುರುಗಳನ್ನು ಕೊಂಡಾಡಿರುವ ಬ್ರಹದಾರಣ್ಯವಾರ್ತಿಕದಲ್ಲಿಯೂ ಸೂತ್ರಭಾಷ್ಯದ ಪರಾಮರ್ಶವಿಲ್ಲ. ಸೂತ್ರಭಾಷ್ಯ ಮತ್ತು ಬ್ರಹದಾರಣ್ಯಕಭಾಷ್ಯಗಳನ್ನು ಒಬ್ಬರೇ ಶಂಕರಾಚಾರ್ಯರು ಬರೆದಿರುವರೆಂದು ತೋರಿಸಲು ಈಗಿನ ಶೋಧಕರಿಗೆ ದೃಷ್ಟವಾದ ಆಧಾರವಿಲ್ಲ. ಬ್ರಹದಾರಣ್ಯಕಭಾಷ್ಯದ ಶೈಲಿಗೂ ಸೂತ್ರಭಾಷ್ಯದ ಶೈಲಿಗೂ ವ್ಯತ್ಯಾಸಗಳಿವೆಯೆಂಬ ವ್ಯಾಖ್ಯಾನವೂ ಇದೆ. ಅದು ಮಾತ್ರವಲ್ಲ.
ಅತಸ್ತದ್ವಶಾತ್ಸ್ವಭಾವತಃ ಸರ್ವಗತಾನಾಮನನ್ತಾಮಪಿ ಪ್ರಾಣಾನಾಂ ಕರ್ಮಜ್ಞಾನವಾಸನಾರೂಪೇಣೈವ ದೇಹಾರಮ್ಭವಶಾತ್ ಪ್ರಾಣಾನಾಂ ವೃತ್ತಿಃ ಸಂಕುಚತಿ ವಿಕಸತಿ ಚ’ (ಬೃ. ೪-೪-೩) - ಸ್ವಭಾವದಿಂದ ಸರ್ವಗತವಾಗಿರುವ ಅನಂತವಾದ ಪ್ರಾಣಗಳಿಗೆ ಕರ್ಮಜ್ಞಾನವಾಸನೆಗಳಿಗೆ ತಕ್ಕಂತೆ ದೇಹಾಂತರವಾಗುವಾಗ ವೃತ್ತಿಯು ಸಂಕೋಚವಿಕಾಸಗಳನ್ನು ಪಡೆಯುತ್ತದೆ ಎಂದು ಹೇಳಿರುವ ಮತವನ್ನು ಸೂತ್ರಭಾಷ್ಯದಲ್ಲಿ ’ಏವಂ ಶ್ರುತ್ಯುತ್ಕೇ ದೇಹಾನ್ತರಪ್ರತಿಪತ್ತಿ ಪ್ರಕಾರೇ ಸತಿ ಯಾಃ ಪುರುಷಮತಿಪ್ರಭವಾಃ ಕಲ್ಪನಾಃ ವ್ಯಾಪಿನಾಂ ಕರಣಾನಾಮಾತ್ಮನಶ್ಚ ದೇಹಾನ್ತರಪ್ರತಿಪತ್ತೌ ಕರ್ಮವಶಾದ್  ವೃತ್ತಿಲಾಭಸ್ತತ್ರ ಭವತಿ, ಇತ್ಯೇವಮಾದ್ಯಾಃ ಸರ್ವಾ ಏವಾನಾದರ್ತವ್ಯಾಃ ಶ್ರುತಿವಿರೋಧಾತ್’(ಸೂತ್ರಭಾಷ್ಯ ೩-೧-೩) ಎಂದು ಖಂಡಿಸಲಾಗಿದೆ.
       ಬೃಹದಾರಣ್ಯಕದಲ್ಲಿ ’ಪುತ್ತಿಕಾದಿಶರೀರೇಷು ಗೋತ್ವಾದಿವತ್ ಕಾರ್ತ್ಸೈನ ಪರಿಸಮಾಪ್ತ ಇತಿ ಸಮತ್ವಂ ಪ್ರಾಣಸ್ಯ | ನ ಪುನಃ ಶರೀರಪರಿಮಾಣೇನೈವ ಅಮೂರ್ತತ್ವಾತ್ಸರ್ವಗತತ್ವಾಚ್ಛಃ....ತ ಏತೇ ಸರ್ವ ಏವ ಸಮಾಃ ಸರ್ವೇ ಅನನ್ತಾಃ ಇತಿ ಶ್ರುತೇಃ ’ ಪುತ್ತಿಕಾದಿಪ್ರಾಣಿಗಳ ಶರೀರದಲ್ಲಿ ಗೋತ್ವವೇ ಮುಂತಾದವುಗಳಿಗೆ ಸಂಪೂರ್ಣವಾಗಿ ತುಂಬಿಕೊಂಡಿರುತ್ತಾನೆಂಬುದೇ ಪ್ರಾಣನ ಸಮತ್ವವು, ಇಷ್ಟೇ ಹೊರತೂ ಶರೀರದ ಪರಮಾಣವೇ ಸರ್ವಗತನೂ ಆಗಿರುತ್ತಾನೆ...ಇವರೆಲ್ಲರೂ ಸಮರು, ಎಲ್ಲರೂ ಅನಂತರು’ ಎಂಬ ಶ್ರುತಿ ಇದಕ್ಕೆ ಪ್ರಮಾಣವು ಎಂದು ಸೂತ್ರಭಾಷ್ಯದಲ್ಲಿ ಖಂಡಿಸಿರುವ ಈ ಪಕ್ಷವನ್ನೇ ಅವಲಂಬಿಸಿ ’ಸರ್ವಗತಸ್ಯ ತು ಶರೀರಪರಿಮಾಣವೃತ್ತಿಲಾಭೋ ನ ವಿರುಧ್ಯತೇ’ ಸರ್ವಗತನಾದರೂ ಶರೀರಪರಿಮಾಣಕ್ಕೆ ತಕ್ಕಂತೆ ವೃತ್ತಿಲಾಭವಾಗುವುದೇನೂ ವಿರುದ್ಧವಲ್ಲ ಎನ್ನಲಾಗಿದೆ. ಈ ರೀತಿ ಎರಡರಲ್ಲಿ ಯಾವುದನ್ನು ತೆಗೆದುಕೊಳ್ಳಬೇಕೆನ್ನುವ ಬಗ್ಗೆ ವೇದಾಂತಿಗಳಲ್ಲಿ ಮತಭೇದವು ಮೊದಲಿನಿಂದಲೂ ಇತ್ತೆಂದು ಅವುಗಳಲ್ಲಿ ಒಂದನ್ನು ಬ್ರಹದಾರಣ್ಯಕಭಾಷ್ಯವೂ ಇನ್ನೊಂದನ್ನು ಸೂತ್ರಭಾಷ್ಯವೂ ಸ್ವೀಕರಿಸುವವೆಂದು ’ನ ವಿರುಧ್ಯತೇ’(ಬೃ) ’ಅದೋಷಃ’(ಸೂ) ಎಂಬ ಮಾತುಗಳಿಂದ ಸೂಚಿತವಾಗಿವೆಯೆಂದು ವಿಮರ್ಶಕರು ಒಪ್ಪಬೇಕಾಗುತ್ತದೆ. ಇದನ್ನೇ ಆಧರಿಸಿ ಎರಡೂ ಭಾಷ್ಯಗಳಿಗೂ ಕರ್ತೃರು ಒಬ್ಬರೇ ಶಂಕರಾಚಾರ್ಯರಲ್ಲ ಎಂದು ವಾದಿಸುವವರಿಗೂ ಅವಕಾಶವಿದೆ. ಬೃಹದಾರಣ್ಯದ ಭಾಷ್ಯಕಾರರು ತಮ್ಮ ಗುರುಗಳೆಂದು ಸುರೇಶ್ವರರೇ ಅದರ ಮೇಲಿನ ವಾರ್ತಿಕೆಯಲ್ಲಿ ಹೇಳಿರುವುದರಿಂದ ಅದು ಆಚಾರ್ಯ ಶಂಕರರ ರಚನೆಯೇ. ಇನ್ನು ಸೂತ್ರಭಾಷ್ಯದಲ್ಲಿ ದಿಙ್ನಾಗನ ಕಾರಿಕೆಯ ಉಲ್ಲೇಖವಿದೆ. ಆತ ವಸುಬಂಧುವಿನ ಶಿಷ್ಯ. ವಸುಬಂಧು ಕ್ರಿ.ಶ ೫ನೇ ಶತಮಾನದವ. ಹಾಗಾಗಿ ಸೂತ್ರಭಾಷ್ಯದ ಕಾಲ ಅದಕ್ಕೂ ಹಿಂದಿನದಲ್ಲ. ಸೂತ್ರಭಾಷ್ಯದಲ್ಲಿ ’ಬುಧ್ಧಿಬೋಧ್ಯಂ ತ್ರಯಾದನ್ಯತ್ ಸಂಸ್ಕೃತಂ ಕ್ಷಣಿಕಂ ಚ’ ಪ್ರತಿಸಂಖ್ಯಾನಿರೋಧ, ಅಪ್ರತಿಸಂಖ್ಯಾನಿರೋಧ, ಆಕಾಶ ಈ ಮೂರನ್ನು ಬಿಟ್ಟರೆ ಉಳಿದವೆಲ್ಲ ಕಾರ್ಯವೂ ಕ್ಷಣಿಕವೂ ಆಗಿದೆ ಎಂಬ ವಾಕ್ಯದ ಮೂಲ ಗುಣಮತಿಯ ಅಭಿಧರ್ಮಕೋಶವ್ಯಾಖ್ಯಾನದ್ದು. ಗುಣಮತಿಯ ಕಾಲ ಏಳನೇ ಶತಮಾನದ ಮಧ್ಯಭಾಗ. ಹಾಗಾಗಿ ಸೂತ್ರಭಾಷ್ಯ ಅದಕ್ಕೂ ನಂತರದ್ದಾಯಿತು. ಪಂಚಪಾದಿಕೆ ಎಂಬ ಖಂಡವ್ಯಾಖ್ಯಾನವನ್ನು ಬಿಟ್ಟರೆ ವಾಚಸ್ಪತಿಮಿಶ್ರನ ಭಾಮತೀವ್ಯಾಖ್ಯಾನವೇ ಸೂತ್ರಭಾಷ್ಯಕ್ಕೆ ಪೂರ್ಣವಾಗಿ ಬರೆದದ್ದೆಂದು ನಮಗೆ ಸಿಕ್ಕಿರುವ ಅತ್ಯಂತ ಪ್ರಾಚೀನ ವ್ಯಾಖ್ಯಾನ. ಇದನ್ನು ಬರೆದದ್ದು ವಿಕ್ರಮಶಕ ೯೦೬ನೇ ವರ್ಷದಲ್ಲಿ ಎಂಬು ವಾಚಸ್ಪತಿಮಿಶ್ರನೇ ಹೇಳಿಕೊಂಡಿದ್ದಾನೆ. ಜೊತೆಗೆ ವಾಚಸ್ಪತಿ ಮಿಶ್ರನು ಭಾಮತಿಯಲ್ಲಿ ಭಾಸ್ಕರಾಚಾರ್ಯರು ಶಂಕರಭಾಷ್ಯದ ಮೇಲೆ ಎತ್ತಿರುವ ಆಕ್ಷೇಪಗಳಿಗೆ ಸಮಾಧಾನವನ್ನು ಬರೆದಿದ್ದಾನೆ. ಭಾಮತಿಯ ಕೊನೆಯಲ್ಲಿ ’ಮಹನೀಯಕೀರ್ತೌ ಶ್ರೀಮನೃಗೇಕಾಽರಿ ಮಾಯಾನಿಬಂಧಃ’ ನೃಗನೆಂಬ ರಾಜನ ಕಾಲದಲ್ಲಿ ತಾನಿದ್ದುದಾಗಿ ಹೇಳಿಕೊಂಡಿರುವುದರಿಂದ ಅವನ ಕಾಲ ಕ್ರಿ.ಶ ೯ನೇ ಶತಮಾನದ ಮದ್ಯಭಾಗವಾಯಿತು. ಈ ನೃಗನು ಈಗಿನ ಬಿಹಾರ ಮತ್ತು ನೇಪಾಳ ಭಾಗವನ್ನಾಳಿದ ಅಚ್ಚಕನ್ನಡಿಗ ನಾನ್ಯದೇವನಿಗಿಂತ ಪೂರ್ವದಲ್ಲಿ ಸುಮಾರು ಕ್ರಿ.ಶ ೯೬೨ರಲ್ಲಿ ಮಿಥಿಲೆಯಲ್ಲಿದ್ದವನು. ಆದ್ದರಿಂದ ಸೂತ್ರಭಾಷ್ಯವು ಅದಕ್ಕಿಂತ ಮೊದಲು ಕ್ರಿ.ಶ ೭ ಅಥವಾ ೮ನೇ ಶತಮಾನದಲ್ಲಿ ಬಂದಿದ್ದಾಗಿರಬೇಕು.
       ಇಲ್ಲಿ ಇನ್ನೂ ಒಂದು ತೊಡಕಿದೆ. ಸೂತ್ರಭಾಷ್ಯದಲ್ಲಿ ಸ್ರುಘ್ನ, ಮಥುರಾ ಮತ್ತು ಪಾಟಲೀಪುತ್ರಗಳ ಪರಾಮರ್ಶೆಯಿದೆ. ಅಂದರೆ ಅವು ಆಚಾರ್ಯರ ಕಾಲದಲ್ಲಿ ಇದ್ದವೆಂದು ತಿಳಿಯಬೇಕಾಯಿತು. ಆದರೆ ಪಾಟಲೀಪುತ್ರವು ಕ್ರಿ.ಶ ೭೫೬ರಲ್ಲಿ ನದಿಯ ಪ್ರವಾಹದಲ್ಲಿ ಮುಳುಗಿ ಹೋಯಿತೆಂದು ಇತಿಹಾಸಕಾರರ ಅಭಿಮತ. ಹಾಗಾದರೆ ಆಚಾರ್ಯರ ಕಾಲ ಅದಕ್ಕೂ ಮೊದಲಾಯಿತು. ಇದೇ ಭಾಷ್ಯದಲ್ಲಿ ಪೂರ್ಣವರ್ಮನೆಂಬ ರಾಜನ ವಿಮರ್ಶೆಯಿದೆ. ಹ್ಯೂಯಾನ್ಸಾಂಗ್ ೬೩೭-೩೮ರಲ್ಲಿ ಮಗಧದ ಪೂರ್ಣವರ್ಮನ ಕುರಿತು ಬರೆದಿದ್ದಾನೆ.  ಅವನ ಕಾಲಕ್ಕೆ ಪೂರ್ಣವರ್ಮನ ಆಳ್ವಿಕೆ ಮುಗಿದಿರಬೇಕು. ಹಾಗಾಗಿ ಆಚಾರ್ಯರೂ ಅದೇ ಕಾಲದವರಾಗಬೇಕಾಯಿತು.
        ಆಚಾರ್ಯರು ಕ್ರಿ.ಪೂದವರೆಂಬುದಕ್ಕೆ ಬಹಳಷ್ಟು ದಾಖಲೆಗಳನ್ನು ನಾವು ಹಿಂದಿನ ಮಾಲಿಕೆಯಲ್ಲಿ ನೋಡಿದ್ದೇವೆ. ಹಾಗಿದ್ದಲ್ಲಿ ಸೂತ್ರಭಾಷ್ಯದ ಕಾಲಕ್ಕೂ ಆಚಾರ್ಯರ ಕಾಲಕ್ಕೂ ಹೊಂದಿಕೆಯಾಗದಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲವಾಗಿಸುತ್ತದೆಯೇ ಹೊರತೂ ಇನ್ನೇನಿಲ್ಲ.
       ಶಂಕರರ ಕಾಲದ ಕುರಿತಾಗಿ ಇರುವಷ್ಟು ಗೊಂದಲಗಳು ಅವರ ಹುಟ್ಟಿದ ಸ್ಥಳ ಮತ್ತು ತಂದೆತಾಯಿಯರ ಬಗ್ಗೆ ಇಲ್ಲವೆನ್ನುವುದು ಸಂತೋಷ. ಎಲ್ಲ ಶಂಕರವಿಜಯಗಳೂ ಕೇರಳದ ’ಕಾಲಟಿ’ ಅಥವಾ ಶಶಲ ಎಂಬ ಸ್ಥಳದಲ್ಲೇ ಶಂಕರರ ಜನನವಾಯಿತೆಂದು ಒಪ್ಪುತ್ತವೆ. ಕಾಲಟಿಯೇ ಶಂಕರರ ಜನ್ಮಸ್ಥಳವೆಂಬ ಪ್ರತೀತಿ ಮೊದಲಿನಿಂದಲೂ ಇತ್ತಾದರೂ ಅದು ಹೊರಜಗತ್ತಿಗೆ ತೆರೆದುಕೊಂಡಿದ್ದು ೧೯೧೦ ರಲ್ಲಿ. ೧೮೬೬ರಿಂದ ೧೯೧೨ರವರೆಗೆ ಶೃಂಗೇರಿಯ ೩೩ನೇ ಜಗದ್ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಗುರುಗಳ ಸಮಯದಲ್ಲಿ ಕಾಲಗರ್ಭದಲ್ಲಿ ಹೆಸರೊಂದನ್ನು ಮಾತ್ರ ಉಳಿಸಿ ಕಳೆದುಹೋಗಿದ್ದ ಕಾಲಡಿ ಪುನಃಶ್ಚೇತನಗೊಂಡಿದ್ದು. ಶೃಂಗೇರಿಯವರು ಶಂಕರ ಸ್ಥಳವನ್ನು ಕಂಡುಹಿಡಿಯಲು ಬಂದಾಗ ಕಾಡಿನ ಮಧ್ಯೆ ಚಿಕ್ಕ ಗುಡಿ ಕಾಣಿಸಿತು. ವಿಚಾರಿಸಲಾಗಿ ಈ ಸ್ಥಳವೇ ಶಂಕರರ ಮನೆಯೆಂದೂ, ಆ ಮನೆಯ ಆವರಣದಲ್ಲಿದ್ದ ಅಶೋಕ ವೃಕ್ಷ ಅವರ ತಾಯಿಯ ದಹನಸ್ಥಳವೆಂದೂ ಆಕೆಯ ಅಂತ್ಯಕ್ರಿಯೆಗೆ ಸಹಾಯಮಾಡಿದ ತಮ್ಮ ಪೂರ್ವಜರಿಗೆ ಆ ಸ್ಥಳವನ್ನು ದಾನಕೊಟ್ಟು ಅಲ್ಲಿ ಪೂಜೆಮಾಡಿಕೊಂಡಿರಬೇಕೆಂದು ಹೇಳಿದರೆಂದೂ ಅಲ್ಲಿಯ ಅರ್ಚಕರು ನುಡಿದರು. ಮುಂದೆ ಸರ್ಕಾರದ ಸಹಾಯದಿಂದ ಆಚಾರ್ಯರ ಜನ್ಮಸ್ಥಳವನ್ನು ಅಭಿವೃದ್ಧಿಗೊಳಿಸಿದ ಸಕಲ ಶ್ರೇಯಗಳೂ ಶೃಂಗೇರಿ ಮಠಕ್ಕೆ ಸಲ್ಲಬೇಕು. ಶೃಂಗೇರಿ ಪೀಠದಿಂದ ಅಲ್ಲಿ ಶಂಕರ ಮತ್ತು ಶಾರದೆಯರಿಗೆ ಎರಡು ಮಂದಿರಗಳು ನಿರ್ಮಾಣವಾದವು. ಜನವಾರ್ತೆಯಂತೆ ಶಂಕರರು ಮನೆಯ ಒಳಗೆ ತಾಯಿಯ ದೇಹವನ್ನು ತುಂಡುಮಾಡಿ ಚಿತೆಯಲ್ಲಿ ಹಾಕಿದರಂತೆ. ಬ್ರಾಹ್ಮಣರು ಬಹಿಷ್ಕಾರ ಹಾಕಿದ್ದರಿಂದ ಚಿತೆಗೆ ಬೇಕಾದ ಅಡಿಕೆಪಟ್ಟೆ, ಬಾಳೆಪಟ್ಟೆಗಳನ್ನು ಒದಗಿಸಿದವರು ಸೀದಾ ಅಥವಾ ನಂಬ್ಯಾದಿಗಳಂತೆ. ಇಂದಿಗೂ ನಂಬೂದಿರಿ ಬ್ರಾಹ್ಮಣರಿಗೆ ಪ್ರತ್ಯೇಕ ದಹನಸ್ಥಳವಿಲ್ಲ. ತಮ್ಮ ಮನೆಯ ಹಿಂಭಾಗದಲ್ಲೋ ಅಥವಾ ಆವರಣದಲ್ಲೋ ಕೆಲವೊಂದು ಬಾಳೆಪಟ್ಟೆಗಳನ್ನು ಶಾಸ್ತ್ರವಾಗಿ ಹಾಕಿ ದಹನಕ್ರಿಯೆ ಮಾಡುತ್ತಾರೆ. ನಂಬಿಯಾದಿಗಳು ಬಂದು ಬಾಳೆಪಟ್ಟೆ ಕೊಡುವವರೆಗೂ ಕಾದಿರಬೇಕು. ಅವರಿಲ್ಲದೇ ನಂಬೂದಿರಿಗಳಲ್ಲಿ ಪಿತೃಕರ್ಮ ನಡೆಯುವುದೇ ಇಲ್ಲ. ಪರಂಪರೆಯ ಅನುಸಾರವಾಗಿ ಈಗಲೂ ಬ್ರಾಹ್ಮಣರು ಮೃತದೇಹಕ್ಕೆ ಕತ್ತಿಯಿಂದ ಅಲ್ಲಲ್ಲಿ ಮುಟ್ಟಿಸುತ್ತಾರೆ. ನಂಬೂದಿರಿಗಳು ಋಕ್-ಯಜುಃ-ಸಾಮವೇದಗಳಲ್ಲಿ ಪಾರಂಗತರಾದರೂ ಅವರಲ್ಲಿ ಹೆಚ್ಚು ಮಂತ್ರಗಳಿಲ್ಲ. ಕೈಕರಣಗಳಿಗೇ ಹೆಚ್ಚು ಪ್ರಾಧಾನ್ಯ. ಇವರ ಗುರುಮಠವಿರುವುದು ತ್ರಿಶೂರಿನಲ್ಲಿ. ಶಂಕರರ ವಿದ್ಯಾಭ್ಯಾಸ ನಡೆದದ್ದೂ ಅಲ್ಲಿಯೇ ಅಂತೆ.
        ಶಂಕರರು ಯಜುರ್ವೇದಿಗಳು. ಮನೆತನದ ಹೆಸರು ’ಕೈಪಳ್ಳಿ ಇಲ್ಲಂ’. ಇಲ್ಲಿ ’ಕಾಪಳ್ಳಿ ಇಲ್ಲಂ’ ಮತ್ತು ’ತಲೆಯಾತ್ತ ಇಲ್ಲಂ’ ಎಂದು ಎರಡು ಮನೆಗಳಿವೆ. ಶಂಕರರ ತಾಯಿಯ ಅವಸಾನಕಾಲದಲ್ಲಿ ತಲೆಯಕಡೆ ಒಬ್ಬ, ಕಾಲಕಡೆ ಒಬ್ಬ ನಿಂತಿದ್ದರಿಂದ ಅವರ ಮನೆಗಳಿಗೆ ಆ ಹೆಸರು ಬಂದಿದೆಯಂತೆ. ಶಂಕರರ ತಾಯಿ ’ಪಾಲುಪನೈ ಇಲ್ಲಂ’ ಅಥವಾ ’ಪಜುರಪನೈ ಇಲ್ಲಂ’ ಎಂಬ ನಂಬೂದಿರಿ ಕುಟುಂಬದವಳೆಂದು ಆ ಕುಲದವರರೆಂದು ಹೇಳಿಕೊಳ್ಳುವವರು ಈಗಲೂ ತ್ರಿಶೂರಿನಲ್ಲಿದ್ದಾರೆ.  ಕಾಲಡಿಗೆ ಸಮೀಪದಲ್ಲೇ ಪೊನ್ನರ್ ಎಂಬ ಊರಿದೆ. ಇಲ್ಲಿ ಬಾಲಶಂಕರರು ಭಿಕ್ಷೆಗೆ ಹೋದಾಗ ನೆಲ್ಲಿಕಾಯಿ ಹಾಕಿದ ಮನೆಯಿದೆ. ಕನಕಧಾರಾ ಸ್ತೋತ್ರಮಾಡಿ ಈ ಮನೆಯೆದುರು ಹೊನ್ನಿನ ನೆಲ್ಲಿಕಾಯಿಯ ಮಳೆಸುರಿಸಿದರೆಂದು ಪ್ರತೀತಿ. ಇಂದಿಗೂ ಈ ಮನೆ ’ಸ್ವರ್ಣತ್ತಿಲ್ಲಂ’ ಎಂದು ಕರೆಯಲ್ಪಡುತ್ತಿದೆ.
       ಶಂಕರರ ಜನ್ಮಸಂದರ್ಭವನ್ನು ಸ್ವಲ್ಪ ಗಮನಿಸೋಣ. ಬೇರೆಲ್ಲ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಹೆಚ್ಚಿನ ಶಂಕರವಿಜಯಗಳ ಐಕ್ಯಮತ್ಯವಿರುವುದು ಶಂಕರರ ಹುಟ್ಟು, ಸ್ಥಳ ಮತ್ತು ಮಾತಾಪಿತೃರ ಕುರಿತಾಗಿಯೇ. ಮಾಧವೀಯದಲ್ಲಿ, ಚಿದ್ವಿಲಾಸೀಯದಲ್ಲಿ, ಆನಂದಗಿರೀಯದಲ್ಲಿ ಮತ್ತು ಆತ್ಮಬೋಧರ ಪ್ರಾಚೀನಶಂಕರವಿಜಯಗಳ ಪ್ರಕಾರ ಭೂಲೋಕದಲ್ಲಿ ಬೌದ್ಧರ ಕಾರಣದಿಂದ ಜನ ವರ್ಣಾಶ್ರಮ ಧರ್ಮಗಳನ್ನು ಬಿಟ್ಟು ಅನಾಚಾರಗಳನ್ನವಲಂಬಿಸಿದ್ದಾರೆ. ಧರ್ಮವನ್ನು ಸ್ಥಾಪನೆಮಾಡಿ ಎಲ್ಲರನ್ನೂ ಉದ್ಧಾರಮಾಡಬೇಕೆಂದು ದೇವತೆಗಳು ಶಿವನನ್ನು ಪ್ರಾರ್ಥಿಸಲಾಗಿ ಬ್ರಹ್ಮನು ಮಂಡನನಾಗಿ, ವಾಯುವು ಹಸ್ತಾಮಲಕನಾಗಿ, ಅಗ್ನಿಯು ಉದಂಕನಾಗಿ, ಬೃಹಸ್ಪತಿಯು ಆನಂದಗಿರಿಯಾಗಿ, ಗುಹನು ಭಟ್ಟನಾಗಿ, ವರುಣನು ಚಿತ್ಸುಖನಾಗಿ, ಯಮನು ವಿಶ್ವರೂಪನಾಗಿ ಹೀಗೆ ಬೇರೆ ಬೇರೆ ದೇವತೆಗಳು ಬೇರೆಬೇರೆ ರೂಪದಲ್ಲಿ ಅವತರಿಸಿ ವೈದಿಕಮಾರ್ಗವನ್ನು ಖಂಡನೆಗಳಿಂದಲೂ ಮಂಡನೆಗಳಿಂದಲೂ ಪ್ರಖ್ಯಾತಗೊಳಿಸಲು ಸಾಕ್ಷಾತ್ ಶಿವನೇ ’ಶಂಕರ’ನಾಗಿ ಕೇರಳದ ಪೂರ್ಣಾನದಿ ದಡದಲ್ಲಿ ಅವತರಿಸಿದನಂತೆ. ವಿದ್ಯಾರಣ್ಯರ ಮಾಧವೀಯದಲ್ಲಿ ರಾಜಶೇಖರನೆಂಬ ಅರಸು ಕನಸಿನಲ್ಲಾದ ಈಶ್ವರನ ಪ್ರೇರಣೆಯಂತೆ ವೃಷಭಾದ್ರಿಯಲ್ಲಿ ಒಂದು ದೇವಾಲಯವನ್ನು ಕಟ್ಟಿಸಿದನೆಂದೂ ಅದರ ಸಮೀಪದ ಕಾಲಡಿಯಲ್ಲಿ ವಿದ್ಯಾಧಿರಾಜನೆಂಬ ಪಂಡಿತನಿಗೆ ಶಿವಗುರುವೆಂಬ ಮಗನಿದ್ದನೆಂದೂ ಹೇಳಿದೆ. ಕೇರಳದಲ್ಲಿ ರಾಜಶೇಖರನೆಂಬ ಅರಸನಿದ್ದನೋ ಅಥವಾ ಇದು ರಾಜಶ್ರೇಷ್ಟನೆಂಬ ಅರ್ಥದಲ್ಲಿ ಪ್ರಯೋಗಿಸಿದ ಅನ್ವರ್ಥನಾಮವೋ ಗೊತ್ತಿಲ್ಲ. ಶಂಕರರ ಅಜ್ಜನ ಹೆಸರು ವಿದ್ಯಾಧಿರಾಜ. ಇದೂ ಶ್ರೇಷ್ಟಪಂಡಿತನೆಂಬರ್ಥದ ಅನ್ವರ್ಥನಾಮವೇ. ಪ್ರಾಚೀನಶಂಕರವಿಜಯದಲ್ಲಿ
ಈಶೋಽಷ್ಯಭೂತ್ಸಮದವಿದ್ವದಭೇದ್ಯದರ್ಪ
ಸರ್ಪಾಹಿತುಣ್ದಿಕವಿದಗ್ಧಸಹಸ್ರಸೇವ್ಯೇ |
ವಿದ್ಯಾಧಿಪತ್ಯಪರನ್ನಾಮ್ನಿ ಕುಲೇ ಶಿವಾಖ್ಯಾ
ದಾರ್ಯಾಪತೇ ರವಿಸಹಸ್ರರುಚಿಃ ಕುಮಾರಃ ||
(ದಾರ್ಯಾಸತೀ ಎಂಬ ಪಾಠಾಂತರವೂ ಇದೆ)
ಅಹಂಕಾರದಿಂದ ಮದಿಸಿದ ವಿದ್ವಾಂಸರೆಂಬ ಸರ್ಪಗಳಿಗೆ ಹಾವಾಡಿಗನಂತಿರುವ ವಿದ್ಯಾಧಿಪತಿಯೆಂಬ ಕುಲದಲ್ಲಿ ಶಿವಗುರುವೆಂಬ ಆರ್ಯಾಪತಿಯಿಂದ ಸಾವಿರ ಸೂರ್ಯರ ಪ್ರಕಾಶವುಳ್ಳ ಕುಮಾರನು ಹುಟ್ಟಿದನು.
        ಈ ಶ್ಲೋಕ ಸ್ವಲ್ಪಮಟ್ಟಿಗೆ ವಿಶೇಷವಾದುದು. ಶಂಕರರ ತಂದೆಯ ಹೆಸರು ಶಿವಗುರು. ಇದಕ್ಕೆ ಶಿವನ ತಂದೆ ಎಂಬರ್ಥವೂ ಇದೆ. ಇವನ ಹೆಂಡತಿ ಆರ್ಯಾಸತೀ. ಮಾಧವೀಯದಲ್ಲೇ ಇನ್ನೊಂದು ಕಡೆ ಜಾಯಾಸತೀ ಎಂದೂ ಕರೆಯಲಾಗಿದೆ. ಡಿಂಡಿಮವ್ಯಾಖ್ಯಾನದಲ್ಲೂ ’ಶಿವಗುರೋಭಾರ್ಯಾ ಸತೀ’ ಎಂದಿದೆ. ಸದಾನಂದೀಯದಲ್ಲೂ ’ಸಾ ಸತೀ ಸುಷುವೇ’ ಎಂದೇ ಇದೆ. ’ಆರ್ಯಾ’ ’ಸತಿ’ ಎಂಬುದು ಆಕೆಯ ಹೆಸರು. ಇದಕ್ಕೂ ಕೂಡ ಪೂಜ್ಯಳು, ಸಾಧ್ವಿ ಎಂಬ ಅನ್ವರ್ಥನಾಮಗಳನ್ನು ಕಲ್ಪಿಸಬಹುದು. ಅಂತೂ ಶಂಕರರ ತಂದೆ, ತಾಯಿ, ಅಜ್ಜನಿಗೆ ಈಗ ಪ್ರಖ್ಯಾತವಾಗಿರುವ ಶಿವಗುರು, ಅರ್ಯಾ, ವಿದ್ಯಾಧಿರಾಜ ಎಂಬ ಹೆಸರುಗಳು ಅಂಕಿತನಾಮಗಳೋ ಅಥವಾ ಕವಿಕಲ್ಪಿತ ಅನ್ವರ್ಥನಾಮಗಳೋ ಹೇಳಲು ಬರುವಂತಿಲ್ಲ.
        ಶಂಕರರ ಜನ್ಮವೃತ್ತಾಂತದ ಕುರಿತು ಮಾಧವೀಯ, ವ್ಯಾಸಾಚಲೀಯ ಮತ್ತು ಚಿದ್ವಿಲಾಸೀಯಗಳಲ್ಲಿ ಸುಮಾರಿಗೆ ಒಂದೇ ತೆರನಾದ ಕಥೆಗಳಿವೆ. ಶಿವಗುರುವಿಗೆ ಬಹಳ ವರ್ಷಗಳ ಕಾಲ ಪುತ್ರಸಂತತಿಯಾಗಲಿಲ್ಲವೆಂದು ವೃಷಭಾಚಲನನ್ನು ಪೂಜಿಸಿದಾಗ ಸ್ವಪ್ನದಲ್ಲಿ ವಿಪ್ರವೇಷದಲ್ಲಿ ಕಾಣಿಸಿಕೊಂಡ ಶಿವನು ಕೇಳಿದ ವರವನ್ನು ನೆರವೇರಿಸಿಕೊಡುವುದಾಗಿ ಹೇಳಿದನಂತೆ. ಶಿವಗುರುವು ತಾನು ಪುತ್ರೇಚ್ಛೇಯಿಂದ ತಪಸ್ಸು ಮಾಡುತ್ತಿದ್ದೇನೆಂದು  ಹೇಳಿದನು. ಆಗ ಶಿವನು ’ದೇವೋಽಪ್ಯಪೃಚ್ಛದಥ ತಂ ದ್ವಜ ವಿದ್ಧಿ ಸತ್ಯಂ ಸರ್ವಜ್ಞ ಮೇವಮಪಿ ಸರ್ವಗುಣೋಪಪನ್ನಮ್ | ಪುತ್ರಂ ದದಾಮ್ಯಥ ಬಹೂನ್ ಪರೀತಕಾಂಸ್ತೆ ಭೂರ್ಯಾಯುಷಸ್ತನುಗುಣಾನವದಿದ್ದ್ವಿಜೇಶಃ’ ಸರ್ವಜ್ಞನಾದ ಸರ್ವಗುಣೋಪೇತನಾದ ಅಲ್ಪಾಯುವಿನ ಒಬ್ಬನೇ ಮಗನು ಬೇಕೋ ಅಥವಾ ಅದಕ್ಕೆ ವಿಪರೀತವಾದ ದೀರ್ಘಾಯುವಿನ ಸ್ವಲ್ಪಗುಣಗಳುಳ್ಳ ಬಹಳ ಪುತ್ರರು ಬೇಕೋ? ಎನ್ನಲು ಶಿವಗುರುವು ಸರ್ವಜ್ಞನಾದ ಒಬ್ಬನೇ ಮಗನನ್ನು ಕೇಳಿಕೊಂಡನಂತೆ. ಹೀಗೆ ಹುಟ್ಟಿದ ಮಗುವೇ ಶಂಕರ. ನೋಡಿದವರಿಗೆ ಸುಖವಾಗುತ್ತದೆಂಬ ಕಾರಣದಿಂದ(ಶಂ ಕರೋತಿ ಇತಿ ಶಂಕರಃ) ಅಥವಾ ಶಂಕರನ ಪ್ರಸಾದದಿಂದ ಹುಟ್ಟಿದವನೆಂಬ ಕಾರಣಕ್ಕೆ ತಂದೆಯು ಮಗುವಿಗೆ ಶಂಕರನೆಂಬ ಹೆಸರಿಟ್ಟ. ಬೃಹಚ್ಛಂಕರವಿಜಯದ ಶಂಕರಪ್ರಾದುರ್ಭಾವ ಪ್ರಕರಣವೂ ಇದೇ ಕಥೆಯನ್ನು ಹೊಂದಿರುವುದರಿಂದ ಈ ಕೃತಿಗಳೆಲ್ಲ ಪರಸ್ಪರ ನಿಕಟಸಂಬಂಧವನ್ನು ಹೊಂದಿರಬೇಕು. ಆಚಾರ್ಯರು ಕೇರಳದ ಕಾಲಡಿಯಲ್ಲಿ ಶಿವಗುರು-ಆರ್ಯಾ ದಂಪತಿಗೆ ಹುಟ್ಟಿದರೆಂಬ ವಿಷಯಕ್ಕೆ ಎಲ್ಲಾ ವಿಜಯಗಳಿಗೂ ಸಮ್ಮತಿಯಿದ್ದರೆ ಅನಂತಾನಂದಗಿರೀಯದ ಕಥೆಯೇ ಬೇರೆ. ಅದರ ಪ್ರಕಾರ ಸರ್ವಜ್ಞನೆಂಬ ಬ್ರಾಹ್ಮಣ ಕಾಮಾಕ್ಷಿಯೆಂಬ ಪತ್ನಿಯೊಡಗೂಡಿ ಚಿರಕಾಲ ಚಿದಂಬರಂನ ಆಕಾಶಲಿಂಗವನ್ನು ಧ್ಯಾನಮಾಡಿದ ಫಲವಾಗಿ ವಿಶಿಷ್ಟಾ ಎಂಬ ಮಗಳನ್ನು ಪಡೆದರು. ಅವಳಿಗೆ ಎಂಟು ವರ್ಷಕ್ಕೆ ವಿಶ್ವಜಿತು ಎಂಬವನ ಜೊತೆ ಮದುವೆಯಾದರೂ ಕೆಲವೇ ಕಾಲದಲ್ಲಿ ಅವಳ ಗಂಡ ಅವಳನ್ನು ಬಿಟ್ಟು ತಪಸ್ಸುಮಾಡಲು ಅರಣ್ಯಕ್ಕೆ ಹೋದನು. ಅಲ್ಲಿಂದ ಮುಂದೆ ಆಕೆ ಚಿದಂಬರೇಶ್ವರನನ್ನೇ ಆರಾಧಿಸುತ್ತಿದ್ದಳು. ಒಂದು ದಿನ ಚಿದಂಬರನಿಂದ ಹೊರಟ ಬೆಳಕೊಂದು ಆಕೆಯ ಮುಖವನ್ನು ಹೊಕ್ಕಿದ್ದನ್ನು ಕಂಡು ಅಲ್ಲಿ ಬಂದಿದ್ದ ಜನರು ವಿಸ್ಮಿತರಾದರು. ಅದಾದ ಬಳಿಕ ಪಾರ್ವತಿಯಂತೆ ಮಹಾತೇಜಸ್ವಿನಿಯಾದ ಆಕೆ ಗರ್ಭವತಿಯಾದಳು. ಬ್ರಾಹ್ಮಣರು ಚಿದಂಬರನನ್ನೇ ಯಜಮಾನನನ್ನಾಗಿ ಮಾಡಿಕೊಂಡು ಮೂರನೇ ತಿಂಗಳಿಂದಲೂ ಆಕೆಗೆ ವೇದೋಕ್ತ ಸಂಸ್ಕಾರ ಮಾಡಿದರು. ಹತ್ತನೇ ತಿಂಗಳಲ್ಲಿ ವಿಶಿಷ್ಟೆಯ ಗರ್ಭದಿಂದ ಮಹಾದೇವನು ಶಂಕರನೆಂಬ ನಾಮದಿಂದ ಜನಿಸಿದನು. ಇದನ್ನು ಬರೆದ ಅನಂತಾನಂದಗಿರಿ ತನ್ನನ್ನು ಶಂಕರರ ಸಾಕ್ಷಾತ್ ಶಿಷ್ಯನೆಂದು ಕರೆದುಕೊಂಡಿದ್ದಾನೆ. ಆದರೂ ಶಂಕರರ ತಂದೆತಾಯಿಯನ್ನು ಬೇರೆ ಹೆಸರಿನಿಂದ ಕರೆಯುವ ಧೈರ್ಯ ಹೇಗೆ ಮಾಡಿದನೆಂಬುದೇ ಆಶ್ಚರ್ಯ. ಇದಲ್ಲದೇ ಶಂಕರರು ಪುರುಷನ ಹಂಗಿಲ್ಲದೇ ಶಿವನ ತೇಜಸ್ಸು ವಿಶಿಷ್ಟೆಯ ಮುಖ ಪ್ರವೇಶಿಸಿದ ಕಾರಣ ಹುಟ್ಟಿದರೆಂಬ ಕಥೆ ಅತ್ಯಂತ ಅಸ್ವಾಭಾವಿಕವಾದದ್ದು. ಆಚಾರ್ಯರ ಜನ್ಮಸ್ಥಳ ಕಾಲಡಿ ಎಂದು ಮಿಕ್ಕವರು ಹೇಳುವಾಗ ಈತ ಮಾತ್ರ ಚಿದಂಬರಂ ಎನ್ನುತ್ತಿರುವುದು ನೋಡಿದರೆ ಆತನ ಶ್ರದ್ಧೆ ಪೂರ್ತಿ ಶಂಕರರ ಮೇಲಿರದೇ ಚಿದಂಬರದಲ್ಲಿತ್ತು ಎನ್ನುವುದು ಸ್ಪಷ್ಟ. ಮುಂದೆ ಶಂಕರರು ದೇಹತ್ಯಾಗದ ಕಾಲದಲ್ಲಿ ಸುರೇಶ್ವರಾಚಾರ್ಯರ ಮೂಲಕ ಮೋಕ್ಷಲಿಂಗವನ್ನು ಚಿದಂಬರಕ್ಕೆ ಕಳುಹಿಸಿಕೊಟ್ಟರೆನ್ನುವುದೂ ಇದರದ್ದೇ ಮುಂದುವರೆದ ಭಾಗ. ಹಾಗೆಂದು ಈ ಕಥೆ ಪೂರ್ತಿ ಅತಾರ್ಕಿಕವಲ್ಲ. ಕಾಶ್ಮೀರದ ರಾಜ ಜಯಾಪೀಡನ ಆಸ್ಥಾನಕವಿಯಾದ ವಾಕ್ಪತಿಮಿಶ್ರ ತನ್ನ ಶಂಕರೇಂದ್ರವಿಲಾಸದಲ್ಲಿ ಇಂಥಹುದೇ ಕಥೆಯನ್ನು ಬರೆದಿದ್ದಾನೆ. ಆದರೆ ಅದು ಆದಿಶಂಕರರ ಕುರಿತಾಗಿರದೇ ಕಾಂಚೀಪೀಠದ ೩೬ನೇ ಪೀಠಾಧಿಪತಿಗಳಾದ ಅಭಿನವ ಶಂಕರರ ಬಗ್ಗೆಯಾಗಿದೆ. ವಿಶ್ವಜಿತ್ತು ಸ್ವರ್ಗಸ್ಥನಾಗಲು ಅವನ ಹೆಂಡತಿ ಸಹಗಮನಕ್ಕೆ ಮುಂದಾದಳು. ಆ ಸಮಯ ಆಕೆಯಲ್ಲಿ ಗರ್ಭಿಣಿಯ ಚಿಹ್ನೆಯನ್ನು ಕಂಡು ಅವಳ ಸಂಬಂಧಿಗಳು ಅದನ್ನು ತಡೆದರು. ಆದರೆ ಆಕೆ ಗರ್ಭಿಣಿಯಾಗಿ ಮೂರು ವರ್ಷಗಳ ನಂತರ ಪ್ರಸವವಾಯಿತು. ಜನಾಪವಾದಕ್ಕಂಜಿ ಆ ಮಗುವನ್ನು ಆಕೆ ಕಾಡಿನಲ್ಲಿ ಬಿಟ್ಟುಬಂದಳಂತೆ. ಅಲ್ಲಿ ವ್ಯಾಘ್ರಪಾದಮುನಿಗಳ ಪತ್ನಿಯಾದ ಹೆಣ್ಣು ಹುಲಿಯೊಂದು ಅದನ್ನು ಪೋಷಿಸಿತು. ಐದು ವರ್ಷಕ್ಕೆ ಋಷಿಯೇ ಉಪನಯನವನ್ನು ನೆರವೇರಿಸಿ ವೇದಪಾಠವನ್ನೂ ಮಾಡಿದರು. ಕಂಚೀಮಠದ ವಿದ್ಯಾಘನರು ಚಿದಂಬರದಲ್ಲಿದ್ದಾಗ ಶಿವನು ಅವರಿಗೆ ಸ್ವಪ್ನದರ್ಶನವಿತ್ತು ಶಂಕರರ ಮಹಿಮೆಯನ್ನು ತಿಳಿಸಿದನಂತೆ. ಅದರಿಂದಲೇ ವಿದ್ಯಾಘನರು ಅಭಿನವ ಶಂಕರರೆಂಬ ಹೆಸರಿನಿಂದ ಅವರ ಪೀಠಾರೋಹಣವನ್ನು ನೆರವೇರಿಸಿದರು.
ಹಾಯನೇಽಥ ವಿಭವೇ ವೃಷಮಾಸೇ ಶುಕ್ಲಪಕ್ಷದಶಮೀದಿನಮಧ್ಯೆ |
ಶೇವಧಿದ್ವಿಪದಿಶಾನಲವರ್ಷೇ ತಿಷ್ಯ ಏನಮುದಸೋಷ್ಟ ವಿಶಿಷ್ಟಾ ||

ಕಲಿಯ ೩೮೮೯ನೇ ವಿಭವಸಂವತ್ಸರದ(ಕ್ರಿ.ಶ ೭೮೮) ವೃಷಭಮಾಸದ ದಶಮಿಯಂದು ವಿಶಿಷ್ಟಾದೇವಿಯನ್ನು ಈತನನ್ನು ಹಡೆದಳು. ಇದೇ ರೀತಿಯ ಶ್ಲೋಕಗಳು ಅಭಿನವ ಶಂಕರರ ಬಗ್ಗೆ ಆತ್ಮಬೋಧರ ಗುರುರತ್ನಮಾಲಿಕೆಯಲ್ಲೂ ಇದೆ. ಈ ಕಥೆಯನ್ನೆಲ್ಲ ಎಷ್ಟರಮಟ್ಟಿಗೆ ನಂಬಬಹುದೆಂಬುದು ವಿಮರ್ಶಕರಿಗೆ ಬಿಟ್ಟ ವಿಚಾರ.
        ಕೂಷ್ಮಾಂಡಶಂಕರವಿಜಯವೆಂಬ ಹೆಸರಿನ ಒಂದು ಕುಗ್ರಂಥವುಂಟು. ಅನಂತಾನಂದಗಿರೀಯಕ್ಕಿಂತ ಅದ್ಭುತಕತೆಯನ್ನು ಕಟ್ಟಬೇಕೆಂಬ ಮಹದಭಿಲಾಶೆ ಇದರ ಲೇಖಕನಿಗಿರಬೇಕು. ಇದರ ಪ್ರಕಾರ ಕೇರಳದೇಶದಲ್ಲಿ ಚೂರ್ಣಾ ನದಿಯ ದಡದಲ್ಲಿ ಪದ್ಮನಾಭನ ಮಂದಿರವಿದೆ. ಅಲ್ಲಿ ಕಾಲಟಿಯೆಂಬ ಕ್ಷೇತ್ರವೂ ಇದೆ. ಈ ಕಾಲಟಿಯಲ್ಲಿ ವಿಧವೆ ನೆಟ್ಟ ಕುಂಬಳಬಳ್ಳಿಯಲ್ಲಿ ಶಿವನ ಅನುಗ್ರಹದಿಂದ ಕುಂಬಳಕಾಯೊಂದು ಬಿಟ್ಟು ಅದು ತೊಟ್ಟು ಕಳಚಿ ಬಿದ್ದಾಗ ಅದರಲ್ಲಿ ಮಗುವೊಂದು ಇತ್ತಂತೆ. ಶಂಕರರು ಅಯೋನಿಜರೆಂದು ತೋರಿಸಲು ಲೇಖಕ ಇಷ್ಟೆಲ್ಲ ಸರ್ಕಸ್ ಮಾಡಬೇಕಾಯ್ತು. ಜೊತೆಗೆ ಆತನಿಗೆ ಚೂರ್ಣಾ ನದಿದಡದ ಮೇಲೆ ಪದ್ಮನಾಭ ದೇವಾಲಯವಿದೆ ಎನ್ನುವಷ್ಟು ಭಯಂಕರ ಭೂಗೋಳ ಜ್ಞಾನವಿದೆ. ಕಾಲಡಿ ಎಂಬ ಹೆಸರನ್ನು ಎಲ್ಲೋ ಕೇಳಿ ತನ್ನ ಕುಗ್ರಂಥದಲ್ಲೂ ತಂದು ಸೇರಿಸಿದ್ದಾನೆ. ಶಂಕರರ ಜನ್ಮಸ್ಥಳಕ್ಕೆ ಕಾಲಡಿಯೆಂದು ಹೆಸರು ಬರಲೂ ಒಂದು ಕಾರಣವಿದೆ.
        ಆರ್ಯಾಂಬೆ ವೃದ್ಧಾಪ್ಯದ ಕಾರಣದಿಂದ ಪೂಣಾ ನದಿಯವರೆಗೆ ಹೋಗಲಾರದೇ ಇದ್ದಾಗ ಬಾಲಶಂಕರರು ತಮ್ಮ ತಪೋಶಕ್ತಿಯಿಂದ ನದಿಯನ್ನು ಸ್ತುತಿಸಿದರಂತೆ. ಇದರಿಂದ ಸಂತುಷ್ಟಳಾದ ನದಿಯು ತನ್ನ ಪಥವನ್ನು ಬಿಟ್ಟು ಆಚಾರ್ಯರ ಮನೆಯವರೆಗೆ ಬಂದು ಅವರ ಕಾಲಡಿಗೇ ಹರಿದಿದ್ದರಿಂದ ಆ ಸ್ಥಳ ಕಾಲಡಿ ಎಂದು ಹೆಸರಾಯ್ತು. ಈ ನದಿಯನ್ನು ಕೇರಳದವರು ಈಗಲೂ ಅಂಬಾನದೀ ಎನ್ನುತ್ತಾರೆ. ’ಅಂಬಾರ್ಥಂ ಯದಿಯಂ ನೀತಾ ತಟನೀ ಸದ್ಮ ಸಂನಿಧಮ್, ಅಮ್ಬಾ ತರಙ್ಗಣೀತ್ಯೇವ ಕಥ್ಯತೇಽದ್ಯಾಪಿ ಸಾ ಖಲು’ ಎಂಬ ಶ್ಲೋಕವೊಂದು ಚಿದ್ವಿಲಾಸೀಯದಲ್ಲಿದೆ. ಜೊತೆಗೆ ಆಚಾರ್ಯರು ನದಿಯನ್ನು ಸ್ತುತಿಸಿದ ’ಮಹಾಪಗಾಸ್ತವ’ ಎಂಬ ಸ್ತೋತ್ರವೊಂದು ಇರುವುದಾಗಿ ಸಂಕ್ಷೇಪಶಂಕರದಿಗ್ವಿಜಯದಲ್ಲಿ ಉಲ್ಲೇಖಿಸಲಾಗಿದೆ. ಆ ಸ್ತೋತ್ರ ಈಗ ಲಭ್ಯವಿದೆಯೋ ಇಲ್ಲವೋ ತಿಳಿದಿಲ್ಲ. ’ಚೂರ್ಣೀಮನ್ತಿಕಮಾನಿನಾಯ ಜನನೀಧಾಮ್ನಃ ಸ್ವರಾಜಃ ಪ್ರಭೋ’ ಎಂದು ಪ್ರಾಚೀನಶಂಕರವಿಜಯದಲ್ಲೂ ಹೇಳಲಾಗಿದೆ. ಹೀಗೆ ನದಿಯನ್ನು ತಿರುಗಿಸಿದ ಕಥೆ ಹಿಂದಿನಿಂದಲೂ ಇದೆಯೆಂದಾಯ್ತು. 
ಶಂಕರ ಜನ್ಮಸ್ಥಾನ, ಕಾಲಡಿ
ಕಂಚಿ ಮಠದ ಶಂಕರಕೀರ್ತಿ ಸ್ಥಂಭ, ಕಾಲಡಿ

ಶಂಕರರ ಆರಾಧ್ಯದೈವ ಶ್ರೀಕೃಷ್ಣನ ಮಂದಿರ, ಕಾಲಡಿ

        ಕೂಷ್ಮಾಂಡ ಶಂಕರವಿಜಯವನ್ನೇ ನೆಪಮಾಡಿಕೊಂಡು ತ್ರಿವಿಕ್ರಮ ಪಂಡಿತನೆಂಬ ಮಧ್ವಾಚಾರ್ಯರ ಶಿಷ್ಯರ ಮಗನಾದ ನಾರಾಯಣಪಂಡಿತನು ಮಧ್ವವಿಜಯ, ಮಣಿಮಂಜರಿ ಎಂಬೆರಡು ಗ್ರಂಥಗಳಲ್ಲಿ ಶಂಕರರ ವಿಷಯದ ಅಪಪ್ರಚಾರವನ್ನು ಪ್ರಯತ್ನಪೂರ್ವಕವಾಗಿ ತಂದು ತುರುಕಿದ್ದಾನೆ.
ಯೋ ಭೂರಿವೈರೋ ಮಣಿಮಾನ್ ಮೃತಃ ಪ್ರಾಗ್ |
ವಾಗ್ಮೀ ಬುಭೂಷುಃ ಪರಿತೋಷಿತೇಶಃ |
ಸ ಸಂಕರಾಖ್ಯೋಙ್ಘ್ರತಲೇಷು ಜಜ್ಞೇ |
ಸ್ಪೃಧಾ ಪರೇಪ್ಯಾಸುರಿಹಾಸುತೇಂದ್ರಾಃ ||

’ಹಿಂದೆ ಭೀಮನಿಂದ ಹತನಾದ ಮಣಿಮಂತನೆಂಬ ದೈತ್ಯನು ಈಶ್ವರನನ್ನು ಸಂತೋಷಗೊಳಿಸಿ ಕಾಲಡಿಯಲ್ಲಿ ಸಂಕರನೆಂಬ ಹೆಸರಿನಿಂದ ಹುಟ್ಟಿದನು,’ ಶಂಕರ ಎಂಬ ಹೆಸರನ್ನು ’ಸಂಕರ’ ಎಂದು ಬರೆದಿರುವುದು ವಿಧವಾಪುತ್ರತ್ವವನ್ನು ತಿಳಿಸುವುದಕ್ಕೇ ಎಂಬುದು ಇದರಿಂದ ಸ್ಪಷ್ಟ.
ತಮೇವ ಸಮಯಂ ದೈತ್ಯೋ ಮಣಿಮಾನಪ್ಯಜಾಯತ |
ಮನೋರಥೇನ ಮಹತಾ ಬ್ರಾಹ್ಮಣ್ಯಾಂ ಜಾರತಃ ಖಲಾತ್ |
ಉತ್ಪನ್ನಃ ಸಂಕರಾತ್ಮಾಯಂ ಸರ್ವಕರ್ಮಬಹಿಷ್ಕೃತಃ |
ಇತ್ಯುಕ್ತಃ ಸ್ವಜನೈರ್ಮಾತಾ ಸಂಕರೇತ್ಯಾಜುಹಾವ ತಮ್ ||

ಅದೇ ಕಾಲದಲ್ಲಿ ಮಣಿಮಂತನೆಂಬ ದೈತ್ಯನೂ ಬ್ರಾಹ್ಮಣಿಯಲ್ಲಿ ದುಷ್ಟನಾದ ಜಾರನಿಂದ ಹುಟ್ಟಿದನು. ಸಂಕರಾತ್ಮನಾಗಿ ಹುಟ್ಟಿದ ಇವನು ಸರ್ವಕರ್ಮಬಹಿಷ್ಕೃತನೆಂದು ನೆಂಟರು ಹೇಳಿದ್ದರಿಂದ ತಾಯಿ ಅವನಿಗೆ ಸಂಕರ ಎಂದು ಹೆಸರಿಟ್ಟಳು.
        ತಾನು ಜಾರೆಯೆಂದು ಯಾವಾಗಲೂ ನೆನೆಪಿಗೆ ಬರುವಂತೆ ತಾಯಿ ಮಗನಿಗೆ ಸಂಕರನೆಂದು ಹೆಸರಿಟ್ಟಳು ಎಂದು ನಾರಾಯಣ ಪಂಡಿತ ಹೇಳುವುದು ನೋಡಿದರೆ ಎಲ್ಲಿಂದ ನಗಬೇಕೆಂಬುದೇ ಅರ್ಥವಾಗುತ್ತಿಲ್ಲ. ಇದೇ ಮಣಿಮಂಜರಿಯಲ್ಲಿ ಶಂಕರರು ತಾಮಸಾಹಾರಗಳನ್ನು ತಿನ್ನುತ್ತಿದ್ದರೆಂದೂ, ಬೊಡ್ಡು ಬುದ್ಧಿಯವರಾಗಿದ್ದರೆಂದೂ, ಗೋವಿಂದ ಭಗವತ್ಪಾದರ ಗುರುಗಳಾದ ಗೌಡಪಾದರು ಪ್ರಚ್ಛನ್ನಬೌದ್ಧರೆಂದೂ ಬಗೆಬಗೆಯ ಕತೆಗಳನ್ನು ಕವಿ ಹೆಣೆದಿದ್ದಾನೆ. ಬಕ್ಕಸ್ವಾಮಿ ಎಂಬ ಬೌದ್ಧನೊಬ್ಬ ಗೌಡಪಾದರನ್ನು ಹೇಗೋ ಮೋಸದಿಂದ ಸಂನ್ಯಾಸವನ್ನು ಕೊಟ್ಟು ’ಶೂನ್ಯವೇ ಬ್ರಹ್ಮ’ ಎಂದು ಧ್ಯಾನಮಾಡುವಂತೆ ಉಪದೇಶಿಸಿದನಂತೆ. ಮುಂದೆ ಗೋವಿಂದಭಗವತ್ಪಾದರೂ, ಅವರ ಶಿಷ್ಯರಾದ ಶಂಕರರೂ ಈ ಮತವನ್ನೇ ವೈದಿಕಮತವೆಂದು ಬೋಧಿಸಿದ್ದಲ್ಲದೇ ಸಂನ್ಯಾಸಿಗಳನ್ನು ಹಿಂಸಿಸಿ ಬಲಾತ್ಕಾರದಿಂದ ಅವರನ್ನು ಅದ್ವೈತಕ್ಕೆ ಮತಾಂತರಿಸುತ್ತಿದ್ದರಂತೆ(ಎರಡೂ ಒಂದೇ ಆದಮೇಲೆ ಮತಾಂತರಿಸುವುದ್ಯಾಕೋ!).  ಅದ್ವೈತಿಗಳು ಹೇಳುವ ನಿರ್ವಿಶೇಷಬ್ರಹ್ಮವೂ ಬೌದ್ಧರ ಶೂನ್ಯವೂ ಒಂದೇ ಎಂಬ ಈ ಘನಪಂಡಿತನ ಪಾಂಡಿತ್ಯಕ್ಕೆ ಎಷ್ಟು ಅಡ್ಡಬಿದ್ದರೂ ಸಾಲದು. ಶಾಂಕರವೇದಾಂತಪ್ರಕ್ರಿಯೆಯನ್ನು ಅರಿತುಕೊಳ್ಳಲಾಗದೇ ನಮ್ಮದೇ ಮತಾಂಧರು ಎಂಥೆಂಥ ಕಲ್ಪನೆಗಳನ್ನು ಮನಃಪೂರ್ವಕವಾಗಿ ಹುಟ್ಟಿಸಿ ಅಪಪ್ರಚಾರ ಮಾಡುತ್ತಿದ್ದಾರೆಂಬುದನ್ನು ನೋಡಿದರೇ ಆಶ್ಚರ್ಯವಾಗುತ್ತದೆ.

3 comments:

  1. ಶೃಂಗೇರಿಯ ಗುರುಗಳು ಭಗವತ್ಪಾದರ ಜನ್ಮಸ್ಥಾನವನ್ನು ಅಭಿವೃದ್ಧಿಗೊಳಿಸಿ, ಭಕ್ತರ ಮೇಲೆ ದೊಡ್ಡ ಉಪಕಾರವನ್ನು ಮಾಡಿದ್ದಾರೆ. ಅವರಿಗೆ ನಮ್ಮೆಲ್ಲರ ಕೃತಜ್ಞತೆಗಳು ಸಲ್ಲಬೇಕು. ಶಂಕರರ ಕಾಲವನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಾಗದಿದ್ದರೂ, ವಾಸ್ತವತೆಗೆ ಅತ್ಯಂತ ಹತ್ತಿರದ ಕಾಲ ಯಾವದಿರಬಹುದು?

    ReplyDelete
  2. ಧನ್ಯವಾದಗಳು. ಪ್ರಾಯಶಃ ಕ್ರಿಸ್ತಪೂರ್ವವೇ ಇರಬೇಕು.

    ReplyDelete
  3. ಕೌತುಕಮಯ ಮಾಹಿತಿ

    ReplyDelete