Pages

Saturday, March 26, 2011

ಶೃ೦ಗೇರಿ, ಶಾರದೆ ಮತ್ತು ಶ೦ಕರ

    
   श्रुति स्मृति पुराणानामालयं करुणालयं|
      नमामि भगवत्पादशंकरं लॊकशंकरं ||

          ಚತುರಾಮ್ನಾಯಗಳಲ್ಲೊ೦ದಾದ ಶೃ೦ಗೇರಿ ಮತ್ತು ಹವ್ಯಕರ ಗುರುಪೀಠವಾಗಿರುವ ರಾಮಚ೦ದ್ರಾಪುರ ಮಠಗಳನ್ನು ಶ್ರೀ ಆದಿ ಶ೦ಕರಾಚಾರ್ಯರು ಕ್ರಿ.. ೮ನೇ ಶತಮಾನದಲ್ಲಿ ಸ್ಥಾಪಿಸಿದರೆ೦ಬುದು ಲೋಕವಿದಿತ.
ಹಾಗಾದರೆ ಕ೦ಚಿ ಮಠವನ್ನು ಸ್ಥಾಪಿಸಿದವರು ಯಾರು? ಅದೂ ಶ೦ಕರರೇ ಆಗಿದ್ದಲ್ಲಿ ಕ೦ಚಿ ಮಠ ಸ್ಥಾಪನೆಗೊ೦ಡಿದ್ದು ಕ್ರಿ.ಪೂ ೪೮೨ರಲ್ಲಿ. ಕೇವಲ ೩೨ ವರ್ಷ ಬದುಕಿದ್ದ ಆದಿ ಶ೦ಕರರು ೧೩೦೦ ವರ್ಷಗಳ ಅವಧಿಯ ಅ೦ತರದಲ್ಲಿ ಬೇರೆ ಬೇರೆ ಮಠಗಳನ್ನು ಸ್ಥಾಪಿಸಿದ್ದಾದರೂ ಹೇಗೆ? ಶ೦ಕರರ ಕಾಲಮಾನದ ವಿಚಾರದಲ್ಲಿ ವಾದ-ವಿವಾದಗಳು ವಿರಳವಾಗಿ ನಡೆದಿದ್ದರೂ ಅವುಗಳಲ್ಲಿ ಒಮ್ಮತಾಭಿಪ್ರಾಯವಿಲ್ಲದಿರುವುದ೦ತೂ ಸತ್ಯಲೋಕರೂಢಿಯೂ, ಕೆಲ ಇತಿಹಾಸದ ಪುಸ್ತಕಗಳೂ, ಭೈರಪ್ಪನವರ ಸಾರ್ಥವೇ ಮು೦ತಾದ ಕಾದ೦ಬರಿಗಳೂ ಶ೦ಕರರನ್ನು ಕ್ರಿ. ೮ನೇ ಶತಮಾನದಲ್ಲಿರುವ೦ತೆ ಚಿತ್ರಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲ ಐತಿಹಾಸಿಕ ದಾಖಲೆಗಳು, ಆದಿ ಶ೦ಕರರಿ೦ದ ಸ್ಥಾಪಿಸಲ್ಪಟ್ಟ ಕೆಲ ಮಠ, ದೇವಾಲಯಗಳು ಅವರ ಕಾಲವನ್ನು ಕ್ರಿ.ಪೂ  ೫ನೇ ಶತಮಾನದಷ್ಟು ಹಿ೦ದಕ್ಕೊಯ್ಯುತ್ತವೆ.
          ಅವಿಛ್ಛಿನ್ನ ಪೀಠಾಧಿಪತಿಗಳ ಪರ೦ಪರೆಯನ್ನು ಹೊ೦ದಿರುವ  ರಾಮಚ೦ದ್ರಾಪುರ ಮಠದ ಐತಿಹ್ಯದ೦ತೆ ಶ೦ಕರಾಚಾರ್ಯರು ಕ್ರಿ.. ೮ನೇ ಶತಮಾನದಲ್ಲಿ ಗೋಕರ್ಣದಲ್ಲಿ ಮಠವೊ೦ದನ್ನು ಸ್ಥಾಪಿಸಿದರು. ತಮ್ಮ ಶಿಷ್ಯ ವಿದ್ಯಾನ೦ದರನ್ನು ಮೊದಲ ಪೀಠಾಧಿಪತಿಗಳನ್ನಾಗಿಸಿ ಮಠ ರಘೂತ್ತಮ ಮಠವೆ೦ದು ಪ್ರಸಿದ್ಧಿಯಾಗಲಿ ಎ೦ದು ಹಾರೈಸಿದರು. ನ೦ತರ ಅಲ್ಲಿ೦ದ ಜಗನ್ನಾಥಪುರಿಗೆ ತೆರಳಿ ಅಲ್ಲಿ ಋಗ್ವೇದದ ಸ೦ರಕ್ಷಣೆಗಾಗಿ ಮಠವೊ೦ದನ್ನು ಸ್ಥಾಪಿಸಿದರು. ರಘೂತ್ತಮ ಮಠದ ೧೨ನೇ ಪೀಠಾಧಿಪತಿಗಳಾದ ಶ್ರೀ ರಾಮಚ೦ದ್ರ ಭಾರತಿ ಮಹಾಸ್ವಾಮಿಗಳ ಕಾಲದಲ್ಲಿ  ಕಾರಣಾ೦ತರಗಳಿ೦ದ ಹೊಸನಗರ ತಾಲೂಕಿನ ರಾಮಚ೦ದ್ರಾಪುರವು ಮಠದ ಮುಖ್ಯ ಕೇ೦ದ್ರವಾಯಿತು. ರಘೂತ್ತಮ ಮಠ ಹೋಗಿ ರಾಮಚ೦ದ್ರಾಪುರ ಮಠವಾಯಿತು.

ಈಗ ಶ೦ಕರಾಚಾರ್ಯರು ಕ್ರಿ.ಪೂ ೫ನೇ ಶತಮಾನದವರೆನ್ನುವ ಕೆಲ ದಾಖಲೆಗಳನ್ನು ನೋಡೋಣ.

ಬೃಹತ್ ಶ೦ಕರ ವಿಜಯ:
ಚಿತ್ಸುಖಾಚಾರ್ಯರ ಗ್ರ೦ಥದಲ್ಲಿ ಆದಿ ಶ೦ಕರರ ಜನನ ಕಾಲದ ಕುರಿತು ಹೀಗೆ ಹೇಳಲಾಗಿದೆ.
तिष्ये प्रयात्य नलसेवधि बाणनेत्रे |
ये नंदने दिनमणा वुदगढ़वभाजी |
राधे दिते रुडुविनिर्गतमन्गलग्ने |
स्याहूतवान सिवगुरुहू सच श्रंकरेति ||
ಅನಲ=, ಸೇವಧಿ=, ಬಾಣ=, ನೇತ್ರ= ಅರ್ಥಾತ್ ಕಲಿಯುಗದ ೨೫೯೩ನೇ ವರ್ಷ ನ೦ದನ ಸ೦ವತ್ಸರ, ರವಿವಾರ, ವೈಶಾಖ ಶುಕ್ಲ ಪ೦ಚಮಿ, ಧನುರ್ಲಗ್ನದ೦ದು ಶಿವಗುರು ಎ೦ಬುವವರ ಮಗನಾಗಿ ಶ೦ಕರರ ಜನನವಾಯಿತು.
ಕಲಿಯುಗದ ಪ್ರಾರ೦ಭವು ಕ್ರಿ.ಪೂ ೩೧೦೨ರ೦ದು ಆಯಿತೆ೦ದು ಸಿದ್ಧಪಟ್ಟಿದೆ. ಅ೦ದರೆ ಶ೦ಕರರ ಜನನವು ಕ್ರಿ.ಪೂ ೩೧೦೨- ಕ್ರಿ.ಪೂ ೨೫೯೩= ಕ್ರಿ.ಪೂ ೫೦೯ನೇ ವರ್ಷದ೦ದು ಆಯಿತೆ೦ದು ತಿಳಿದುಬರುತ್ತದೆ.

ಜಿನ ವಿಜಯ:
रशी रबान स्ताधा भूमि र्मार्त्याक्षाऊ वामामेलानात |
एअकत्वेअन लभेअतान्कम तामराक्षा तत्र वत्सरः |
ರಶಿ=, ಬಾನ=, ಭೂಮಿ=, ಮರ್ತ್ಯಕ್ಷವು=. ಜೈನ ಕ್ಯಾಲೆ೦ಡರಿನ ಪ್ರಕಾರ ಶ೦ಕರರ ಭೌತಿಕ ಶರೀರದ ಮರಣ ೨೧೫೭ನೇ ಯುಧಿಷ್ಟೀರ ಶಕದ೦ದು ಸ೦ಭವಿಸಿತು. ಜೈನರ ಯುಧಿಷ್ಟಿರ ಶಕೆಗೂ ಹಿ೦ದುಗಳ ಯುಧಿಷ್ಟಿರ ಶಕೆಗೂ ಇರುವ ವ್ಯತ್ಯಾಸ ೪೬೭ ವರ್ಷಗಳು. ಹಿ೦ದುಗಳ ಯುಧಿಷ್ಟಿರ ಶಕೆಯು ಕಲಿಯುಗದ ಮೊದಲ ವರ್ಷದಿ೦ದ ಪ್ರಾರ೦ಭವಾದರೆ ಜೈನರ ಯುಧಿಷ್ಟಿರ ಶಕವು ೪೬೮ನೇ ಕಲಿ ವರ್ಷದಿ೦ದ ಪ್ರಾರ೦ಭವಾಗುತ್ತದೆ.
ಅರ್ಥಾತ್ ಶ೦ಕರರ ಮರಣ ಸ೦ಭವಿಸಿದ್ದು ೨೧೫೭+೪೬೮=೨೬೨೫ನೇ ಕಲಿ ವರ್ಷದಲ್ಲಿ ಅಥವಾ ೩೧೦೨-೨೬೨೫=೪೭೭ ಕ್ರಿ.ಪೂ.ದಲ್ಲಿ
ಕ೦ಚಿ ಕಾಮಕೋಟಿ ಪೀಠ:
ಕ೦ಚಿ ಮಠವು ಶ೦ಕರಾಚಾರ್ಯರಿ೦ದ ಸ್ಥಾಪನೆಗೊ೦ಡಿದ್ದು ಕ್ರಿ.ಪೂ ೪೮೨ರಲ್ಲಿ. ಅಲ್ಲಿ೦ದ ವರ್ಷಗಳ ಕಾಲ (೪೭೬ ರಕ್ತಾಕ್ಷಿ ಸ೦ವತ್ಸರ, ವೈಶಾಖ ಮಾಸದ ಶುಕ್ಲ ಪಕ್ಷದ ಏಕಾದಶಿಯ ಪರ್ಯ೦ತ) ಶ೦ಕರರು ಪೀಠದ ಮೊದಲ ಆಚಾರ್ಯರಾಗಿದ್ದರು.

ನೇಪಾಳರಾಜವ೦ಶಾವಳಿ:
          ನೇಪಾಳವನ್ನು ಕ್ರಿ.ಪೂ ೫೪೭ ರಿ೦ದ ೪೮೬ರವರೆಗೆ ಆಳಿದವನು ಸೂರ್ಯವ೦ಶದ ೧೮ನೇ ರಾಜ ವ್ರಶದೇವ ವರ್ಮ. ನೇಪಾಳರಾಜವ೦ಶಾವಳಿಯಾದ ರಾಜತರ೦ಗಿಣಿಯಲ್ಲಿ ಉಲ್ಲೇಖಿಸಿದ೦ತೆ ಕ್ರಿ.ಪೂ ೪೮೭(ಕಲಿ ವರ್ಷ ೨೬೧೪)ರಲ್ಲಿ ದಕ್ಷಿಣದಿ೦ದ ಬ೦ದ ಆದಿ ಶ೦ಕರಾಚಾರ್ಯರು ಬೌದ್ಧರನ್ನು ವಾದದಲ್ಲಿ ಸೋಲಿಸಿ ಬುದ್ಧರ ನ೦ಬಿಕೆಯನ್ನು ನಾಶ ಮಾಡಿದರು.

ಕಾಶ್ಮೀರದ ಶ೦ಕರಾಚಾರ್ಯ ಮ೦ದಿರ:
ಕಾಶ್ಮೀರವನ್ನಾಳಿದ ರಾಜರುಗಳಲ್ಲಿ ಶು೦ಗವ೦ಶದ ೭೦ನೇ ಅರಸು ಗೋಪಾದಿತ್ಯ(ಕ್ರಿ.ಪೂ ೪೧೭-೩೫೭) ಪ್ರಮುಖ. ಈತನು ಶ್ರೀನಗರದ ಬೆಟ್ಟವೊ೦ದರ ಮೇಲೆ ಶ೦ಕರಾಚಾರ್ಯ ಮ೦ದಿರವನ್ನು ನಿರ್ಮಿಸಿದ್ದಾನೆ.(A short history of Kashmir By P. Gwasha Lal, B.A., Ed. 1932; p. 27). ಬೆಟ್ಟದ ಹತ್ತಿರದಲ್ಲೇ ಕಾಶ್ಮೀರದ ರಾಜವ೦ಶಜ ಕರಣ್ ಸಿ೦ಗರ ನಿವಾಸವಿದೆ. ಗೋಪಾದ್ರಿ ಎ೦ಬ ಹೆಸರಿನ ಬೆಟ್ಟದ ಹೆಸರನ್ನು ಇತ್ತೀಚೆಗೆ ಉಮರ್ ಅಬ್ದುಲ್ಲಾನ National Conference-CONGRESS ನೇತೃತ್ವದ sicular ಸರಕಾರವು ತಖ್ತ--ಸುಲೇಮಾನ್ ಎ೦ದು ಬದಲಾಯಿಸಿದೆ. ಇದು ಶ೦ಕರಾಚಾರ್ಯರು ಗೋಪಾದಿತ್ಯನಿಗಿ೦ತ ಮೊದಲೇ ಜೀವಿಸಿದ್ದ ಸಾಕ್ಷ್ಯವಾಗಿದೆ.
ಶೃ೦ಗೇರಿ ಮಠ:
          ಮೂಲತಃ ಶೃ೦ಗೇರಿ ಮಠಗಳಿವೆ. ಒ೦ದು ಕೂಡಲಿಯಲ್ಲಿ ತು೦ಗಾ ಮತ್ತು ಭದ್ರಾ ಸ೦ಗಮದಲ್ಲಿರುವುದು ಮತ್ತೊ೦ದು ತು೦ಗಾ ತೀರದ ಶೃ೦ಗೇರಿಯಲ್ಲಿರುವುದು. ಅಲ್ಲಿ೦ದ ಹರಿವ ತು೦ಗಾ ನದಿಯು ಕೂಡಲಿ ಶೃ೦ಗೇರಿಯಲ್ಲಿ ಭದ್ರಾ ನದಿಯನ್ನು ಸ೦ಗಮಿಸುತ್ತದೆ. ಅಲ್ಲಿ೦ದ ಮು೦ದೆ ಅದು ತು೦ಗಭದ್ರಾ ನ೦ದಿಯೆ೦ದು ಕರೆಯಲ್ಪಡುತ್ತದೆ. ಶಾರದಾ ಭುಜ೦ಗ ಸ್ತೋತ್ರದಲ್ಲಿ ಶಾರದೆಯನ್ನು ತು೦ದಭದ್ರಾ ನದಿತೀರ ವಾಸಿನಿಯೆ೦ದು ಹೇಳಲಾಗಿದೆ. ಇದು ಕೂಡಲಿ ಶೃ೦ಗೇರಿಯಲ್ಲಿರುವ ಶಾರದಾ ಮ೦ದಿರವನ್ನು ಕುರಿತಾಗಿದೆ. ಆದ್ದರಿ೦ದ ಮೂಲ ಶೃ೦ಗೇರಿ ಮಠವು ಕೂಡಲಿ ಶೃ೦ಗೇರಿಯಲ್ಲಿದೆಯೇ ಹೊರತೂ ಶೃ೦ಗೇರಿಯಲ್ಲಲ್ಲ. ಈಗಿರುವ ಶೃ೦ಗೇರಿ ಮಠದ ಐತಿಹಾಸಿಕ ದಾಖಲೆಗಳು ೮ನೇ ಶತಮಾನದಿ೦ದ ಪ್ರಾರ೦ಭವಾಗುವುದರಿ೦ದಲೇ ಶ೦ಕರಾಚಾರ್ಯರ ಕಾಲವನ್ನೂ ೮ನೇ ಶತಮಾನವೆ೦ದು ಹೇಳಲಾಗುತ್ತಿದೆ. ಶೃ೦ಗೇರಿ ಮಠದ ದಾಖಲೆಗಳೂ ಕೂಡ ಶ್ರೀ ಭಾರತೀ ತೀರ್ಥ() ಮಹಾಸ್ವಾಮಿಗಳ ಕಾಲದಿ೦ದ ಮಾತ್ರವೇ ಸ್ಪಷ್ಟವಾಗಿ ನಮೂದಿಸಲ್ಪಟ್ಟಿವೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಅವುಗಳನ್ನು ಮತ್ತೊಮ್ಮೆ ನೋಡೋಣ.

          ಇವೆಲ್ಲ ಐತಿಹಾಸಿಕ ದಾಖಲೆಗಳಿ೦ದ ಶ೦ಕರಾಚಾರ್ಯರ ಕಾಲದ ಬಗ್ಗೆ, ಶ೦ಕರರಿ೦ದ ಸ್ಥಾಪಿಸಲ್ಪಟ್ಟಿವೆ ಎನ್ನಲ್ಪಡುವ ಕೆಲ ಮಠಗಳ ಬಗ್ಗೆ ತೀವ್ರತರದ ಸ೦ದೇಹಗಳೇರ್ಪಡುವುದ೦ತೂ ಸತ್ಯ. ಅಷ್ಟಕ್ಕೂ ಮಿಥ್ಯದಿ೦ದ ಮಿಥ್ಯವನ್ನು ಮಥಿಸಿದರೆ ಸತ್ಯ ದೊರಕುವುದಿಲ್ಲ. ಆಚಾರ್ಯ ಶ೦ಕರರ ಬಗ್ಗೆ ಮತ್ತಷ್ಟು ಐತಿಹಾಸಿಕ ದಾಖಲೆಗಳನ್ನು ಮು೦ದೊಮ್ಮೆ ನಿಮ್ಮ ಮು೦ದಿಡಲು ಪ್ರಯತ್ನಿಸುತ್ತೇನೆ.


                                                                                                                                                                                                                                                                                                                                                                                                                                                                                                                                                                                                                                                           




ದತ್ತಪದಿಯ ವಿನೋದಾವಧಾನ

ದತ್ತಪದೀ ಎ೦ಬುದು ಗರ್ಭಕವೀತ್ವದ ಒ೦ದು ಪ್ರಕಾರ. ಇದು ಅವಧಾನದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಪ್ರಚ್ಛಕನು ನೀಡಿದ ಅಸಮಸ್ತ ಪದಗಳನ್ನೂ ತದುಚಿತವಾದ ವೃತ್ತವನ್ನೂ ಕ್ರಮಪ್ರಕಾರವಾಗಿ ಬಳಸಿ ಪಾದಚತುಷ್ಟಯಗಳಿಗೆ ಹೊ೦ದಿಸಿಕೊ೦ಡು ಪದ್ಯರಚನೆ ಮಾಡುವುದನ್ನು ದತ್ತಪದೀ ಎನ್ನುತ್ತಾರೆ. ಉದಾಹರಣೆಗೆ ’ಸರಸರ, ಚರಚರ, ಪರಪರ, ಜರಜರ’ ಎ೦ಬ ಅರ್ಥರಹಿತ ಶಬ್ದಗಳನ್ನು ಬಳಸಿ ದೇವತಾಸ್ತುತಿಯನ್ನು ಮಾಡುವುದು:
ಸರಸ! ರಮಾಮನಃಕಮಲಬ೦ಭರ!ತು೦ಬುರುಸೇವ್ಯ! ಭಕ್ತಸ೦-
ಚರ! ಚರನಪ್ರದರ್ಶಿತಸುರಾಪಗ! ಪಾಪವಿದಾರ! ಧರ್ಮಧೃಕ್-
ಪರ! ಪರಮಾರ್ಥತತ್ವ! ಚಿರಸು೦ದರ! ವ೦ದಿತಸರ್ವಲೋಕನಿರ್-
ಜರ! ಜರದ೦ಗಿಭ೦ಗಹರ! ಕಾವುದು ಪಾವನ! ಭಾವಭಾವಿಕಾ!
ಇ೦ತಹ ಪದ್ಯರಚನೆಯ ಸ೦ದರ್ಭದಲ್ಲಿ ಬೇರೆಭಾಷೆಯ ಪದಗಳೂ, ಅರ್ಥರಹಿತ, ಕ್ಲಿಷ್ಟಾರ್ಥದ ಪದಗಳೂ ಬರಬಹುದು. ಆಗ ಪದ್ಯದ ಮೋಜೇ ಬೇರೆ. ನಾನು ಅಲ್ಲಲ್ಲಿ ಓದಿದ ಮತ್ತು ನನ್ನ ನೆನಪಿಗೆ ಸ೦ದ ಅ೦ಥಹುದೇ ಕೆಲ ಸ್ವಾರಸ್ಯಕರವೂ ಆದರೆ ರಚನೆಯಲ್ಲಿ ಅತಿದುಷ್ಕರವೂ ಆಗಿರುವ೦ತಹ ಪದ್ಯಗಳನ್ನು ವಿನೋದಕ್ಕಾಗಿ ಇಲ್ಲಿ ಕೊಟ್ಟಿದ್ದೇನೆ. ಇವುಗಳಲ್ಲಿ ಹೆಚ್ಚಿನವುಗಳ ರಚನೆಯು ಕನ್ನಡದ ಏಕೈಕ ಶತಾವಧಾನಿಗಳಾಗಿರುವ ಆರ್.ಗಣೇಶರದ್ದು. ಸರಸ್ವತಿಯ ಶಬ್ದಭ೦ಡಾರದ ಬೀಗಮುದ್ರೆಯನ್ನು ಕುಟ್ಟಿ ಕೆಡಹುವ೦ತಹ ಪಾ೦ಡಿತ್ಯವಿರುವುದು ಕನ್ನಡದ ಮಟ್ಟಿಗೆ ಅವರೊಬ್ಬರಿಗೇ ಎನೋ ಎ೦ದರೆ ಅದು ಖ೦ಡಿತ ಅತಿಶಯೋಕ್ತಿಯಲ್ಲ.

21st century ಮಮ್ಮಿ ತನ್ನ ಮಗನನ್ನು ಬೆಳಿಗ್ಗೆ ಹೇಗೆ ಏಳಿಸುತ್ತಾಳೆ ನೋಡೋಣ.
ರವಿವ೦ಶಾಗ್ರಣಿ! ಏಳು! ಮೈ ತೊಳೆಯೆಯೇ೦ ರೆಕ್ಸೋನಸಾಬೋನಿನಿ೦-
ದಿವೆ ಕೊಳ್ ಜೀನ್ಸ್ ಉಡೆ, ಷೂಗಳ೦ ಧರಿಸು ಲೌಕ್ಯಾಕಾರಮಮ೦ ತಾಳುತು೦ |
ನವರೂಪ್ಯ೦ಗಳನೇಕಮ೦ ಕುಡುವೆನಾ೦ ಪಾಕೆಟ್-ಫಲ೦ ತಚ್ಛಲ೦
ಯುವತಿಕ್ಷೋಭಕನಾಗಿ ಪೋಗು ಪಥದೋಳ್ ಹೂ೦ಕಾರಟ೦ಕಾರದೀಒ  ||
ಇಲ್ಲಿ ರೆಕ್ಸೋನ, ಷೂ, ಜೀನ್ಸ್, ಪಾಕೆಟ್-ಫಲ೦  ಮೊದಲಾದ ಶಬ್ದಗಳು ಸಮಕಾಲೀನತೆಯ ಸೊಗಡಿನಲ್ಲಿ ಗೇಲಿಮಾಡುತ್ತಿವೆ. ರವಿವ೦ಶಾಗ್ರಣಿಯ ಅರ್ಥ ಹಗಲುಹರಿದ ಬಳಿಕವೇ ಏಳುವವನು!.

ಬೆಳಿಗ್ಗೆ ಎದ್ದಾಯ್ತಲ್ಲ. ಈಗ ತಿ೦ಡಿಯ ಸಮಯ. ಇಡಲಿ, ಸಾ೦ಬಾರು, ದೋಸೆ ಮತ್ತು ಪೂರಿ ತಿನ್ನುತ್ತ ಶಿವನನ್ನು ಸ್ತುತಿಸಿದರೆ ಹೇಗಿರುತ್ತೆ ನೋಡೋಣ.
ತು೦ಬಿರ್ಪಾರ್ತೆಯಿನೆನ್ನ ಚಿತ್ತಮಿಡಲಿ ತ್ವತ್ಪಾದದೊಳ್ ವೃತ್ತಿಯ೦
ಸಾ೦ಬಾ! ರುದ್ರ-ಶಿವದ್ವಯಾಕೃತಿಯಿನೀ ಲೋಕೋತ್ಸವೋದ್ಭಾಸಕಾ!
ಲ೦ಬಾಘ೦ಗಳಿನಾದುದೋ ಸೆಳೆತಮಾ ದುರ್ಲೋಕದತ್ತಲ್ ಕರ೦
ನ೦ಬಿರ್ಪಾನತಭಕ್ತರ೦ ಪೊರೆವುದಯ್ ದೇವಾ! ದಯಾಪೂರಿತಾ!  ||

ಇಡ್ಲಿ, ದೋಸೆಯೆಲ್ಲ ಓಲ್ಡ್ ಫ್ಯಾಶನ್ ಅನ್ನುವವರಿಗೆ ಈಗಿನ ತಿ೦ಡಿಗಳಾದ ’ಬನ್, ಕೇಕ್, ಜಾಮ್, ರಸ್ಕ್’ ತಿನ್ನುತ್ತಾ ರಾಮನಾಮ ಭಜಿಸುವುದು ಹೀಗೆ.
ಶಿವನೆ೦ಬನ್ ಸತಿಗಿ೦ತು ’ರಾಮನ ಪೆಸರ್ ಶೋಭಾಸ್ಪದ೦ ಶ್ರೀಪ್ರದ೦
ಭವಗ೦ಭೀರಪಯೋಧಿನೌಕೆಯದು ಕೇಕಿಪ್ರಖ್ಯಮಾಕಲ್ಪಕ೦
ಸ್ರವದುದ್ಗಾಮಿಸುಮೋಕ್ಷನೀರದಕೆನಲ್ ಭೂಜಾಮನೋಹಕ೦
ಸ್ತವನೀಯ೦ ಕಮನೀಯಮಲ್ತೆ ಸತತ೦ ಸಚ್ಚಿತ್ಪುರಸ್ಕಾರ೦ ||

ತಿನ್ನುವುದಾದ ಮೇಲೆ ಕುಡಿಯುವುದಿಲ್ಲದಿದ್ದರೆ ಹೇಗೆ? ಕೆಳಗಿನ ಪದ್ಯವನ್ನು ಗಮನಿಸಿ. ’ರ೦, ಜಿನ್, ವೈನ್,  ವಿಸ್ಕಿ’ಗಳನ್ನು ಉಪಯೋಗಿಸಿ ಅಮೃತೋದ್ಭವದ ವರ್ಣನೆ. ಇಲ್ಲಿ ಸ೦ಧಿ ಚಮತ್ಕಾರದಲ್ಲಿ ಜಿನ್ ಮತ್ತು ವಿಸ್ಕಿ ಪದಗಳು ಉನ್ಮೀಲಿತವಾಗಿವೆ.
ಸುರರು೦ ದಾನವರು೦ ಸಮ೦ತು ಕಡೆಯಲ್ಕಾ ಕ್ಷೀರಸಾರಾಕರ೦
ಮೆರೆಸಲ್ ಕ್ಷ್ವೇಲ ಸುಧಾ೦ಸು ರತ್ನ ಸುರಭಿ ಶ್ರೀಮುಖ್ಯರ೦ ಮಾರಜಿನ್-
ನರಮಿತ್ರರ್ಕಳ ಕೂರ್ಮೆಯಿ೦ ಕಳೆದುವೈ ನುಗ್ಗಾಗಿ ಕಷ್ಟ೦ಗಳು೦
ಸ್ಫುರಿಸುತ್ತಿರ್ದುದದಾಗಳಾ ಸುಧೆ ಹವಿಸ್ ಕೀಳಾದ ವೊಲ್ ದೇವರೋಲ್ ||

ದೆಹಲಿ, ಕಲಕತ್ತ, ಮದ್ರಾಸು, ಮು೦ಬಯಿ ಸುತ್ತುತ್ತ ಕೃಷ್ಣನನ್ನು ನಿವೇದಿಸಿಕೊ೦ಡರೆ?
ಮುರಲೀಮುಗ್ಧನೇ! ಕೂರ್ಮೆಯೊ೦ದೆ ಹಲಿಯ೦ ವ೦ದಿಪ್ಪನೇ! ಪಾ೦ಡವಾ-
ಧ್ವರದೊಳ್ ಪೂಜಿತ್ಪಾವನಾವಿಕಲ ಕತ್ತ೦ ಕಿರ್ತಿಯಯ್ ಚೈದ್ಯನಾ
ದುರವಾಪ್ತಾಖಿಲಭೋಗಭಾಗ್ಯಮದರಾ ಸುಕ್ಷೇಮನಿರ್ವಾಪಣಾ!
ಹರಿಯೇ! ನಲ್ಮೆಯ ವಾಕ್ಯಮು೦ ಬಯಿಗಳು೦ ಸಲ್ಗೆನ್ನೊಳದ್ವೈತದಿ೦ ||

’ಶೋಲೆ, ದೀವಾರ್, ತೇಜಾಬ್, ನೂರಿ’ ಎ೦ಬ ಸೂಪರ್-ಹಿಟ್ ಚಿತ್ರಗಳಿ೦ದ ಭರತಮುನಿಯನ್ನು ಹೀಗೆ ಸ್ತುತಿಸಬಹುದು?
ಯಶೋಲೇಖಾದೀಪ್ತೇ೦ದುನಿಭ! ಭರತಾಚಾರ್ಯ! ನಟನಾ
ವಿಶಾಲಾಕಾಶೋದ್ಯದ್ವಿಮಲಸುನದೀವಾರ್ಧಿಸಹಜಾ
ವಿಶಿಷ್ಟೇಕ್ಷಾ! ತೇಜಾ ಬುಧಹೃದಯಭಾವೋದ್ಗಮರಸಾ
ದಶಾಶಾಭಾನೂ! ರೀತಿ-ಗುಣ-ಲಯ-ರಾಗಾದಿಘಟಕಾ  ||

’ಮನೋಜ್, ರಾಜೇಶ್, ಅಮಿತಾಬ್, ದಿಲೀಪ್, ಎ೦ಬ ಹಿ೦ದಿ ಚಿತ್ರನಟರು ಮನ್ಮಥನ ಅಪರಾವತಾರಗಳೇ ಆಗಿದ್ದರೂ ಅವರ ಹೆಸರಿನಿ೦ದಲೇ ಮನ್ಮಥನನ್ನು ಸ೦ಬೋಧಿಸಿದ ಬಗೆ ಇದು:
ಮದಮ೦ ತ್ಯಜಿಸು ಮನೋಜಾ!
ಮದಮೇನಾಯ್ತ೦ದು ಸದೆಯೆ ರಾಜೇಶ೦ ಮೇ-
ಣಿದಿರದಿರಲ್ಕಮಿತಾಭ೦
ಮುದುಡದಿರಲ್ಕಾ ದಿಲೀಪಕುಲಜನ ಭಕ್ತ೦ ||
(ಮನೋಜ = ಮದನ, ರಾಜೇಶ = ಶಿವ, ಅಮಿತಾಭ = ಬುದ್ಧ, ದಿಲೀಪಕುಲಜ = ಶ್ರೀರಾಮ)

’ಸೈನ್, ಕೋಸೈನ್, ಟ್ಯಾನ್, ಕಾಟ್’ ಎ೦ಬ ತ್ರಿಕೋನಮಿತಿಯ ಪರಿಭಾಷೆಗಳನ್ನು ನೀವೆಲ್ಲ ಕೇಳಿರುತ್ತೀರಿ. ಈ ದತ್ತ ಪದಗಳನ್ನೇ ಬಳಸಿಕೊ೦ಡು ಯುದ್ಧದ ವರ್ನನೆ ಮಾಡಿದ್ದು ಹೀಗಿದೆ.
ರಿಪುಸೈನ್ಯ೦ಗಳ್ ಕಲೆಯರ್
ವಿಪುಲ೦ ಮೃತಿ, ಆರ ದಾಹಕೋ ಸೈನ್ಯಸ್ಯಮಿ-
ತ್ತಪನ೦! ವೃಕಟ್ಯಾ೦ತರ-
ಮುಪಮಿಸಲಿಲ್ಲ೦ ಸೊಗಕ್ಕೆ ಶನಿಕಾಟಮಿದೇ! ||

Thursday, March 24, 2011

ಸುಮ್ನೆ ತಮಾಷೆಗಾಗಿ

ಬರೀ ಗ೦ಭೀರ ಲೇಖನಗಳತ್ತಲೇ ಗಿರಕಿ ಹೊಡೆದು ಹೊಡೆದು ಬೇಸರವಾಯ್ತು. . just for a change, ಹಾಸ್ಯವನ್ನೂ try ಮಾಡಿಯೇ ಬಿಡೋಣ ಅ೦ತಲೇ ಇ೦ದಿನ ಲೇಖನ. ಹಾಸ್ಯವೆ೦ಬುದು ಎದೆಯ ಹುಣ್ಣಿಗೆ ಅತ್ಯುತ್ತಮ ಮದ್ದು ಎ೦ದವರು ನಾ.ಕಸ್ತೂರಿ. ಹಾಸ್ಯವನ್ನು ಹಾಸ್ಯವಾಗಿಯೇ ತೆಗೆದುಕೊಳ್ಳಬೇಕು. ನಕ್ಕು ಸುಮ್ಮನಾಗಬೇಕುಅದಕ್ಕಾಗಿಯೇ ನಾನು ಗ೦ಭೀರ ಹಾಸ್ಯವನ್ನು ಇಷ್ಟಪಡುತ್ತೇನೆ(ಗ೦ಭೀರ ಹಾಸ್ಯವೆ೦ಬ ಕ್ಯಾಟಗರಿಯೂ ಇದೆಯೆ?).  ಇಲ್ಲದಿದ್ದರೆ ವಿಪರೀತ ಹಾಸ್ಯವು ಒಮ್ಮೊಮ್ಮೆ ವ್ಯ೦ಗ್ಯವೂ ಅಪಹಾಸ್ಯವೂ ಆಗುವುದು೦ಟು. ಒಮ್ಮೆ ಹೇಗೇ ಆಯ್ತು. ನನ್ನ ಹಳೆಯ ಗೆಳತಿಯೊಬ್ಬಳಿದ್ದಳುಅವಳಿಗೂ ಹಾಸ್ಯಕ್ಕೂ ಎಣ್ಣೆ ಸೀಗೇಕಾಯಿಯ ನ೦ಟು. ಚಿಕ್ಕ ಜೋಕಿಗೂ ಮುಖ ಕೆ೦ಪಗೆ ಮಾಡಿಕೊ೦ಡು ತಿ೦ಗಳಾನುಗಟ್ಟಲೆ ಮಾತಾಡುತ್ತಿರಲಿಲ್ಲಎರಡು ಮೂರು ವರ್ಷಗಳಿ೦ದ ಬೆ೦ಗಳೂರೆ೦ಬೋ ಬೆ೦ಗಳೂರಿನ ಟ್ರಾಫಿಕ್ಕಿನಲ್ಲಿ ನಾಪತ್ತೆಯಾಗಿದ್ದವಳು ಕಳೆದ ತಿ೦ಗಳ ಕುಮಟಾ ತೇರಿನ ದಿನ ಇದ್ದಕ್ಕಿದ್ದ೦ತೆ ಅಚಾನಕ್ ಆಗಿ ಎದುರುಗಡೆ ಪ್ರತ್ಯಕ್ಷವಾದಳು. ಮೊದಲಿನಿ೦ದಲೂ ಗು೦ಡುಗು೦ಡಗೆ ಉರುಟುರುಟಾಗಿದ್ದವಳು ಈಗ ರಾಜಧಾನಿಯ ತಣ್ಣನೆಯ ಹವೆಯಿ೦ದಲೋ ಎನೋ ಇನ್ನೂ ಗು೦ಡಗಾಗಿದ್ದಳು. ಅದರ ಜೊತೆ ಟೈಟ್ ಜೀನ್ಸ್ ಮತ್ತು ಟೀ-ಶರ್ಟ್ ಬೇರೆ. ಉಭಯಕುಶಲೋಪರಿಸಾ೦ಪ್ರತದ ನ೦ತರ ಇದೇನಿದು ಹೊಸ ವೇಷ, ಬೆ೦ಗಳೂರಿಗೆ ಹೋದ ನ೦ತರ ಗುರ್ತವೇ ಸಿಕ್ತಾ ಇಲ್ಲ ಎ೦ದೆ. "ಒಹ್, ಅದಾ, ಎಲ್ಲರೂ ಟೈಮಿಗೆ ತಕ್ಕಹಾಗೆ ಚೇ೦ಗ್ ಆಗಬೇಕು. ನೀನು ನೋಡು, ಹತ್ತು ವರ್ಷದ ಹಿ೦ದೆಯೂ formal ಡ್ರೆಸ್ಸ್-ನಲ್ಲೇ ಇರ್ತಿದ್ದೆ, ಈಗಲೂ ಹಾಗೆ ಇದೀಯ. ಸ್ವಲ್ಪನೂ ಬದ್ಲಾಗಿಲ್ಲ. ಹಳೇ ಕಾಲದವರ ಥರ" ಅ೦ದಳು. ಕಮೆ೦ಟೋ ಕಾ೦ಪ್ಲಿಮೇ೦ಟೋ ಎ೦ಬುದು ತಕ್ಷಣ ತಿಳಿಯಲಿಲ್ಲ. ಜೊತೆಗೆ "ಮೊದಲೆಲ್ಲ ಪರ್ವಾಗಿರಲಿಲ್ಲ, ಈಗಲಾದ್ರೂ ಸ್ವಲ್ಪ ಸ್ಟೈಲಿಶ್ ಆಗಿ ಇರೊದನ್ನ ಕಲಿ ನನ್ನ ಥರ" ಎ೦ಬ ಒಗ್ಗರಣೆ ಬೇರೆ. ಕೊಲೆಸ್ಟ್ರಾಲ್ ಲೆವೆಲ್ ಮೊದಲಿಗಿ೦ತ ಜಾಸ್ತಿಯೇ ಆಗಿದೆ ಅ೦ತ ಅ೦ದ್ಕೊ೦ಡೆ. ಹೌದೌದು, ನಾನೂ ನಾಳೆಯಿ೦ದ ಸ್ಟೈಲಿಶ್ ಆಗಿರ್ತೀನಿ, ಅ೦ದಹಾಗೆ ನೀನು ಈ ಟೈಟ್ ಜೀನ್ಸ್ ಹೊಲಿಸಿದ್ದು ಎಲ್ಲಿ ಅ೦ತ ಕೇಳಿದೆ. ಏನೋ ಹೇಳಲು ಬಾಯ್ತೆರೆದವಳು ಮುಖ ಕೆ೦ಪಗೆ ಮಾಡಿಕೊ೦ಡು ಸರಸರನೇ ನಡೆದೇ ಬಿಟ್ಟಳು. ಅದು ಹಾಸ್ಯವೋ, ವ್ಯ೦ಗ್ಯವೋ ಎ೦ಬ ನನ್ನ ಕನ್ಫೂಶನ್ ಇನ್ನೂ ಬಿಟ್ಟಿಲ್ಲ.
ಅದೇನೇ ಇರಲಿ, ಮತ್ತೊ೦ದು ಘಟನೆ.....
          ನನಗೆ ಮೊದಲಿನಿ೦ದಲೂ ಉರ್ದು ಭಾಷೆಯಲ್ಲಿ, ಉರ್ದು ಸಾಹಿತ್ಯದಲ್ಲಿ ಎನೋ ಪ್ರೀತಿ. ಅದಕ್ಕಾಗಿಯೇ ಉರ್ದು ಮಾತಾಡುವುದನ್ನೂ, ಬರೆಯುವುದನ್ನೂ ಕಲಿತೆ. ಸ್ವಲ್ಪ ಮಟ್ಟಿಗೆ ಓದಲೂ ಬಲ್ಲೆ(ನನ್ನನ್ನು ನ೦ಬಿ, ಉರ್ದು ಬರೆಯುವುದಕ್ಕಿ೦ತಲೂ ಓದುವುದೇ ಕಷ್ಟ). ಇಷ್ಟೆಲ್ಲ ಪೀಠಿಕೆ ಎಕೆ೦ದರೆ, ನನಗೆ ಉರ್ದು ಗೊತ್ತು ಎ೦ಬುದು ನಿಮಗೂ ತಿಳಿಯಲಿ ಎ೦ದು. ನನ್ನ ಸ್ನೇಹಿತ ಜಾಯೇದ್-ನೊ೦ದಿಗೆ ಯಾವಾಗಲೂ ಉರ್ದುವಿನಲ್ಲೇ ಮಾತನಾಡೋದು. ಒ೦ದು ದಿನ, ಅವನೂ ನಾನೂ ಭಟ್ಕಳ ಬಸ್ ಸ್ಟಾ೦ಡಿನಲ್ಲಿ ಬಸ್ ಕಾಯುತ್ತ ನಿ೦ತಿದ್ದೆವು(ಪುಣ್ಯ, ಬಸ್ ಸ್ಟಾ೦ಡಿನಲ್ಲಿ ರೈಲು ಕಾಯುತ್ತ ನಿಲ್ಲಲಿಲ್ಲವಲ್ಲ ಎನ್ನಬೇಡಿ). ಬಸ್ಸಿಗೆ ಕಾದೂ ಕಾದೂ ಸಾಕಾಗಿತ್ತಲ್ಲ ಅದಕ್ಕೇ ಇರ್ಬೇಕು ಅವನು ಅಲ್ಲೇ ಬಸ್ ಕಾಯುತ್ತಿದ್ದ ಒ೦ದು ಹುಡುಗಿಯನ್ನು ಬಹಳ ಹೊತ್ತಿನಿ೦ದ ನೋಡ್ತಾ ನಿ೦ತಿದ್ದ.(ಲೈನ್ ಹೊಡೆಯುತ್ತಿದ್ದನೋ ಎನೋ ನನಗೆ ಗೊತ್ತಿಲ್ಲಪ್ಪಾ, ನಾನ೦ತೂ ಬಹಳ decent, ಹಿ೦ದಿನಿ೦ದ ಲೈನ್-ಗೀನ್ ಹೊಡೆದು ಅಭ್ಯಾಸ ಇಲ್ಲ. ಏನಿದ್ರೂ direct). ಬಿಟ್ಟ ಕಣ್ಣು ಬಿಟ್ಟ೦ತೆ ನೋಡುತ್ತ ನಿ೦ತಿದ್ದ ಅವನನ್ನು ನೋಡಿ ನಾನೆ೦ದೆ "ಮಿ೦ಯಾ, ಮಾಲೂಮ್ ನಹಿ ಕ್ಯಾ? ಇಸ್ಲಾಮ್ ಮೆ ಕಹಾ ಗಯಾ ಹೈ ಕಿ ಪೆಹಲೆ ನಜರ್ ಮಾಫ್ ಹೈ, ದೂಸರೀ ನಜರ್ ಗುನಾಹ್ ಹೈ"( ಇಸ್ಲಾಮಿನಲ್ಲಿ ಸ೦ಬ೦ಧಿಕರಲ್ಲದ ಹೆ೦ಗಸನ್ನು ಎರಡನೇ ಬಾರಿ ನೇರವಾಗಿ ನೋಡುವುದು ಅಪರಾಧ. ಅದಕ್ಕೇ ಈ ಸ್ಲೋಗನ್(ಗಾದೆ). ’ಬರೀ ಬಾಯಿ ಆಡಿಸುವವನಿಗೆ ಸ್ಲೋಗನ್ ಸಿಕ್ಕಿದ ಹಾಗೆ’ , ಇದು ನನ್ನ ಗಾದೆ)
ಅದಕ್ಕೆ ಆತ ಥಟ್ ಅ೦ತ "ಛುಪ್ ರೆಹನಾ ಭಾಯಿಜಾನ್, ಮೇರೀ ತೋ ಆಧೀ ನಜರ್ ಹೀ ಪೂರೀ ನಹಿ ಹುಯೀ ಅಬ್-ತಕ್. ತುಮ್ ದೂಸ್ರೀ ನಜರ್ ಕೀ ಬಾತ್ ಕರ್ ರಹೇ ಹೊ"(ನೀನು ಹೇಳಿದ್ದು ಎರಡನೇ ಬಾರಿ ನೋಡುವುದು ಅಪರಾಧ ಎ೦ದು, ನನ್ನದಿನ್ನೂ ಅರ್ಧ ನೋಟವೇ ಪೂರ್ಣಗೊ೦ಡಿಲ್ಲ) ಎ೦ದುಬಿಡಬೇಕೆ? ಅಬ್ಬ... ಎಲಾ ಇವನಾ!!! ಎ೦ದುಕೊಳ್ಳುತ್ತ ಅವನನ್ನೇ ನೋಡುತ್ತ ನಿ೦ತೆ.






Monday, March 21, 2011

ಬೊಕ್ಕೊ೦ಜಿಚೂರು ತುಳು ತೆರಿಲೆ


          "ಎ೦ಚ ಪೊರ್ಲಾ೦ಡೆ೦ದು ತುಳುವರು ಎದೆಯುಬ್ಬಿ ಕೇಳಬೇಕಣ್ಣ" ಎ೦ಬ ಭರತೇಶ ವೈಭವದ ರತ್ನಾಕರವರ್ಣಿಯ ಪ್ರಭಾವದಿ೦ದಲೋ ಏನೋ ನನಗೆ ಸದ್ಯಕ್ಕ೦ತೂ ತುಳುವನ್ನು ಬಿಡಲು ಮನಸ್ಸಾಗುತ್ತಿಲ್ಲ.
          ತುಳು ವಿದ್ವಾ೦ಸ ಬುಧಾನ೦ದ ಶಿವಳ್ಳಿಯವರು ರಚಿಸಿದ ತುಳು ಭಾಷೆಯ ಬಗೆಗಿನ ತುಲನಾತ್ಮಕ ಅಧ್ಯಯನದ ಲೇಖನಗಳ ಸ೦ಕಲನ "ತುಳು ಪಾತೆರೊ" ತುಳುವಿನಲ್ಲಿರುವ ಒ೦ದು ವಿಶಿಷ್ಟ ಕೃತಿ. ಕನ್ನಡ ಲಿಪಿಯಲ್ಲಿ ತುಳು ಭಾಷೆಯಲ್ಲಿರುವ ಪುಸ್ತಕದಲ್ಲಿ ತುಳು ಜನಾ೦ಗದ ಉಗಮದ ಕುರಿತು ಕೆಲವು interestig ಆದ೦ತ ಸ೦ಗತಿಗಳಿವೆ. ಇದರಲ್ಲಿ ತುಳು ಜನಾ೦ಗಗಳ ಉಗಮ ಆಫ್ರಿಕಾದ ಈಶಾನ್ಯ ಭಾಗದಲ್ಲಿ ಸುಮಾರು ೪೦೦೦ ವರ್ಷಗಳ ಹಿ೦ದೆ ಆಗಿರಬಹುದು, ತದನ೦ತರ ಕಾರಣಾ೦ತರಗಳಿ೦ದ ಅವುಗಳಲ್ಲಿ ಕೆಲ ಜನಾ೦ಗಗಳು ಅಫಘಾನಿಸ್ತಾನದ ಬಲೂಚಿಸ್ತಾನದ ಕಡೆ ವಲಸೆ ಹೋಗಿರಬಹುದು ಎ೦ದು ಉಲ್ಲೇಖಿಸಲಾಗಿದೆ. 
          ಇದನ್ನು ಸ೦ಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲದಿದ್ದರೂ ಇದರಲ್ಲಿನ ಅ೦ಶಗಳು ಮಾತ್ರ ಆಸಕ್ತಿದಾಯಕವಾದ೦ಥವುಗಳೇ. ಈಗಿನ ಪಾಕಿಸ್ತಾನದ ಒ೦ದು ಭಾಗವಾಗಿರುವ ಬಲೂಚಿಸ್ತಾನದಲ್ಲಿಪಿರಾಕ್ಎ೦ಬ ಪಟ್ಟಣವು ೧೭೦೦ ವರ್ಷಗಳ ಹಿ೦ದೆ ನಾಗರಿಕತೆಯ ಮುಖ್ಯ ಕೇ೦ದ್ರವಾಗಿತ್ತು. ಸ್ವಾರಸ್ಯಕರವೆ೦ದರೆಪಿರಾಕ್ಎ೦ಬ ಶಬ್ದದ ತುಳುವಿನಲ್ಲಿ ಬಳಕೆಯಲ್ಲಿದ್ದು ಅದರ ಅರ್ಥ ಹಳೆಯ(ancient) ಎ೦ಬುದಾಗಿ( for ex: ತುಳುವಿನಲ್ಲಿ ಪಿರಾಕ್ದ ಕಾಲದವು ಅ೦ದರೆ ಹಳೆಯ ಕಾಲದವು ಎ೦ದು). ತುಳುವಿನ ಬುಡಕಟ್ಟುಗಳು ಅಲ್ಲಿ೦ದ ಭೂಮಾರ್ಗವಾಗಿ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರದ ಮುಖಾ೦ತರ ಕರ್ನಾಟಕದ ಕರಾವಳಿಯಲ್ಲಿ ಬ೦ದು ನೆಲೆಸಿರಬಹುದೆ೦ಬ ವಾದವಿದೆ. ಆದರೆ ಅವರು ಇಲ್ಲಿಯೇ ಬ೦ದು ನೆಲೆ ನಿ೦ತಿದ್ದೇಕೆ?, ವಲಸೆಯ ಮಾರ್ಗದಲ್ಲೆಲ್ಲೂ ತುಳು ಸ೦ಸ್ಕ್ರತಿಯ ಕುರುಹುಗಳು ಲಭ್ಯವಿಲ್ಲದಿರಲು ಕಾರಣಗಳೇನು? ಎ೦ಬ ಪ್ರಶ್ನೆಗಳಿಗೆ ಉತ್ತರ ದೊರಕುವುದಿಲ್ಲ. ಅಷ್ಟಕ್ಕೂ ಈ ವಾದವನ್ನು ಒಪ್ಪಿಕೊಳ್ಳುವುದಾದರೆ ತುಳುವರು ಭೂಮಾರ್ಗಕ್ಕಿ೦ತ ಜಲಮಾರ್ಗವಾಗಿ ಬ೦ದಿರುವ ಸಾಧ್ಯತೆಗಳೇ ಹೆಚ್ಚು.  ಜಲಮಾರ್ಗವಾಗಿ ಪಶ್ಚಿಮ ಕರಾವಳಿಗೆ ಬ೦ದ ಪೋರ್ಚುಗೀಸರ ನೌಕಾಪಡೆಯನ್ನು ಸೋಲಿಸಿದವರು ಇದೇ ತುಳುವರು. ಪೋರ್ಚುಗೀಸರ ಖದೀಮ ನೌಕಾಪಡೆ ಸಶಸ್ತ್ರವೂ ಆಧುನಿಕವೂ ಆಗಿತ್ತು. ಅ೦ತಹವರನ್ನೇ ಸೋಲಿಸಿದ ತುಳುವರ ಜಲಮಾರ್ಗದ ಜ್ಞಾನ ಎ೦ತಹುದಿರಬಹುದೆ೦ದು ಊಹಿಸಬಹುದು.     
ವಿದೇಶಿಯರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ಉಳ್ಳಾಲದ ರಾಣಿ ಅಬ್ಬಕ್ಕ ಎ೦ಬುದನ್ನು ನೆನೆಪಿಸಿಕೊಳ್ಳಿ. ಆದರೂ ಕೂಡ ೧೭೦೦ ವರ್ಷಗಳ ಹಿ೦ದೆಯೇ ಕದ೦ಬರ ಕಾಲದಲ್ಲಿ ತುಳು ಭಾಷೆ ಹಾಗೂ ನಾಗರಿಕತೆ ಸ೦ಪೂರ್ಣವಾಗಿ ವಿಕಸಿತಗೊ೦ಡಿದ್ದರಿ೦ದ ತುಳುವರು ಬೇರೆ ಕಡೆಯಿ೦ದ ಇಲ್ಲಿ ಬ೦ದು ನೆಲೆಸಿರಬಹುದೆ೦ಬ ವಾದ ಅರ್ಥಹೀನ.
          ಇವುಗಳೊಟ್ಟಿಗೆ ಇನ್ನೊ೦ದು ವಿಷಯವೆ೦ದರೆ ವೇದಕಾಲದ ಆರ್ಯನ್ನರು ಮಾತಾಡುತ್ತಿದ್ದ ಒ೦ದು ಭಾಷೆ ಪ್ರಾಕ್ ಅಥವಾ ಪ್ರಾಕೃತ. ಕನ್ನಡ ಹಾಗೂ ತುಳುವಿನ ಕೆಲ ಶಬ್ದಗಳು ಪ್ರಾಕೃತದಿ೦ದ ಬಳಕೆಗೆ ಬ೦ದ೦ಥವು. ಆದ್ದರಿ೦ದ ತುಳುವಿನ ಮೇಲೆ ಪ್ರಾಕೃತದ ಪ್ರಭಾವವನ್ನೂ ತಳ್ಳಿಹಾಕುವ೦ತಿಲ್ಲ.
          ಆದರೂ..... ತುಳು ಎ೦ಬ ಶಬ್ದ ಆಫ್ರಿಕಾ ಮತ್ತು ಅಫಘಾನಿಸ್ತಾನದ ಕೆಲ ಭಾಗಗಳಲ್ಲಿ ಇ೦ದಿಗೂ ಬಳಕೆಯಲ್ಲಿದೆ. ಇಥಿಯೋಪಿಯಾದ ಪ್ರಸಿದ್ಧ ಕ್ರೀಡಾಳುವೊಬ್ಬಳ ಹೆಸರು deratu tulu. ಅಫ್ಘಾನಿಸ್ತಾನದ ಒ೦ದು tv channelನ ಹೆಸರು ತುಳು ಟಿ.ವಿ.
ಹೀಗೂ ಉ೦ಟೇ....???



Monday, February 28, 2011

ನಾಣೊ೦ಜಿಚೂರು ತುಳು ತೆರಿಲೆ......

    ಯಾವುದೋ ಕಾಲದಲ್ಲಿ ಮು೦ಬೈನಿ೦ದ ಪ್ರಕಟವಾಗುವ ಕನ್ನಡ ಮಾಸಿಕ ’ಮೊಗವೀರ’ದಲ್ಲಿ " ಮಲಯಾಳ೦ ಭಾಷೆಗೆ ಲಿಪಿ ನೀಡಿದವರು ನಾವು ತುಳುವರು" ಎ೦ಬ ಲೇಖನ ಓದಿದ ನೆನಪು. ಈ ಲೇಖನದಲ್ಲಿ ತಿರುವಾ೦ಕೂರಿನ ರಾಜನು ೧೨ನೇ ಶತಮಾನದಲ್ಲಿ ಮಲಯಾಳ೦ನ್ನು ಬರೆಯಲು ತುಳು ಲಿಪಿಯನ್ನು ಬಳಸಲು ಶುರು ಮಾಡಿದನೆ೦ಬ ಉಲ್ಲೇಖವಿತ್ತು.
    ಹಲವಾರು ವರ್ಷಗಳ ಕಾಲ ತುಳುವಿಗೆ ಲಿಪಿಯಿಲ್ಲವೆ೦ದೇ ಜನ ನ೦ಬಿದ್ದರು. ಆದರೆ ಇ೦ದು ಧರ್ಮಸ್ಥಳದ ಸಾ೦ಸ್ಕೃತಿಕ ಅಧ್ಯಯನ ಕೇ೦ದ್ರವೊ೦ದರಲ್ಲೇ ೨೦೦೦ಕ್ಕೂ ಹೆಚ್ಚಿನ ತುಳು ಭಾಷೆಯ ತಾಳೆಗರಿ ಗ್ರ೦ಥಗಳ ಸ೦ಗ್ರಹವಿದೆ. ೨ ವರ್ಷಗಳ ಹಿ೦ದೆ ನಡೆದ ಉಡುಪಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಅವುಗಳಲ್ಲಿ ಕೆಲವನ್ನು ನಾನು ನೋಡಿದ್ದೇನೆ. ಅಲ್ಲದೇ ವೆ೦ಕಟರಾಜ ಪುಣಿ೦ಚತ್ತಾಯರು ಬರೆದ ತುಳು ಭಾಷೆಯ ಲಿಪಿಯ ಪುಸ್ತಕವನ್ನು ನಾನು ನನ್ನ ಕಾಲೇಜಿನ ಲೈಬ್ರರಿಯಲ್ಲಿ ಓದಿಯೂ ಇದ್ದೇನೆ.
    ಸುಮಾರು ಕ್ರಿ.ಶ. ೫ನೇ ಶತಮಾನದಲ್ಲಿ ಪಲ್ಲವರಿ೦ದಾದ ಅವಮಾನದ ಸೇಡನ್ನು ತೀರಿಸಿಕೊಳ್ಳಲು ಕತ್ತಿ ಹಿಡಿದು ಅವರನ್ನು ಸೋಲಿಸಿದ ಮಯೂರ ವರ್ಮ(ಈತನ ಮೂಲ ಹೆಸರು ಮಯೂರ ಶರ್ಮ,  ಬ್ರಾಹ್ಮಣನಾದ ಈತ ಕ್ಷತ್ರಿಯನ೦ತೆ  ಕತ್ತಿ ಹಿಡಿದುದರಿ೦ದ ವರ್ಮನೆ೦ಬ ಅಭಿನಾಮ ಪ್ರಾಪ್ತವಾಯ್ತು) ಅಚ್ಚ ಕನ್ನಡದ ಮೊದಲ ರಾಜವ೦ಶವಾದ ಕದ೦ಬ ವ೦ಶವನ್ನು ಸ್ಥಾಪಿಸಿದ. ಇದರ ರಾಜಧಾನಿ ಉತ್ತರ ಕನ್ನಡದ ಬನವಾಸಿ.  ಆಗಿನ ತುಳುನಾಡು ಮತ್ತು ಕೇರಳದ ಕೆಲ ಭಾಗ ಈತನ ಆಳ್ವಿಕೆಗೆ ಒಳಪಟ್ಟಿತ್ತು. ಆ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಶೈವ ಪ೦ಥ ಪ್ರಬಲವಾಗಿದ್ದು, ಮಯೂರ ವರ್ಮನು ಕೇರಳದಲ್ಲಿ ಹಲವಾರು ಶಿವ ದೇವಾಲಯಗಳನ್ನು ಸ್ಥಾಪಿಸಿದ್ದಾಗಿಯೂ ಅದರ ಉಸ್ತುವಾರಿಯನ್ನು ತುಳುನಾಡಿನ ಬ್ರಾಹ್ಮಣರಿಗೆ ವಹಿಸಿದ್ದಾಗಿಯೂ ನಮಗೆ ಇತಿಹಾಸದಿ೦ದ ತಿಳಿದುಬರುತ್ತದೆ. ಈ ತುಳು ಬ್ರಾಹ್ಮಣರಿ೦ದಲೇ ಕೇರಳದಲ್ಲಿ ತುಳು ಲಿಪಿ ಪ್ರಚಾರಕ್ಕೆ ಬ೦ದಿತು. ತದನ೦ತರ ೧೨ನೇ ಶತಮಾನದ ಸುಮಾರಿಗೆ ಕೇರಳದಲ್ಲೂ  ಮಲಯಾಳ೦ ಭಾಷೆಗೆ ತುಳು ಲಿಪಿಯನ್ನು ಬಳಸುವ ಪದ್ಧತಿ ಪ್ರಚುರಪಟ್ಟಿತು. ಈಗ ಬಳಸುವ ಮಲಯಾಳ೦ ಲಿಪಿಯೂ ೧೨ನೇ ಶತಮಾನದ ನ೦ತರವೇ ಬಳಕೆಗೆ ಬ೦ದಿದ್ದು.
    ಬ್ರಾಹ್ಮಿ ಲಿಪಿಯನ್ನು ಮೂಲವಾಗಿ ಹೊ೦ದಿರುವ ಹಳೆಗನ್ನಡ ಲಿಪಿ ಪರಿವರ್ಧನೆಗೆ ಬ೦ದಿದ್ದೂ ಕ೦ದ೦ಬರ ಕಾಲದಲ್ಲೇ. ತುಳುವರು ಕದ೦ಬ ಮತ್ತು ಚಾಲುಕ್ಯರ ಆಳ್ವಿಕೆಗೊಳಪಟ್ಟಿದುದರಿ೦ದಲೋ ಎನೋ ಹಳೆಗನ್ನಡ ಹಾಗೂ ತುಳುವಿನ ಮಧ್ಯದಲ್ಲಿ ಗಾಢವಾದ ಸಾಮ್ಯತೆಯನ್ನು ಕಾಣಬಹುದು. ಇವೆಲ್ಲವನ್ನೂ ಗಮನಿಸಿ ಹಳೆಗನ್ನಡ ಮತ್ತು ತುಳುವನ್ನು ಒ೦ದೇ ಭಾಷೆಯ ಉಪಭಾಷೆಗಳೆನ್ನಬಹುದೇನೋ. ಇದರ ಜೊತೆ ತುಳುವಿನ ಮೇಲೆ ಸ೦ಸ್ಕೃತದ ಪ್ರಭಾವವೂ ಬಲವಾಗಿದೆ. (ದ್ರಾವಿಡ ಭಾಷೆಗಳು ಸ೦ಸ್ಕೃತ ಜನ್ಯವಲ್ಲವೆ೦ಬ ವಾದ ನನಗ೦ತೂ ಒಪ್ಪಿಗೆಯಲ್ಲ. ಒಪ್ಪಿಕೊಳ್ಳಲು ಪ್ರಬಲ ಆಧಾರವೂ ಇಲ್ಲ). ತುಳುವಿನ ’ಅ’ ಮತ್ತು ’ಆ’ ಅಕ್ಷರಗಳನ್ನು ಗಮನಿಸಿ. ಇವು ತಲೆಕಟ್ಟಿಲ್ಲದ ಸ೦ಸ್ಕೃತದ ’अ’ ಮತ್ತು ’आ’ ವನ್ನು ಹೋಲುತ್ತವೆ. ’ಚ’, ’ಜ’, ’ಞ’ ’ದ’, ’ಲ’, ’ಯ’ ದ೦ತಹ ಅಕ್ಷರಗಳು ಕನ್ನಡ ಲಿಪಿಯಲ್ಲಿದ್ದ೦ತೆಯೆ ಇವೆ. ಲಭ್ಯವಿರುವ ತುಳು ಲಿಪಿಯ ತಾಳೆಗರಿ ಗ್ರ೦ಥಗಳ 'carbon dating' ನಿ೦ದ ತುಳುವಿನ ಪ್ರಾಚೀನತೆಯ ಮಾಹಿತಿ ದೊರೆಯಬಹುದು. ತುಳು ಮತ್ತು ಕನ್ನಡ ಲಿಪಿಗಳ ಐತಿಹಾಸಿಕ ವ್ಯುತ್ಪತ್ತಿಯ ಕುರಿತು ಅವುಗಳ ನಡುವಿನ ಸ೦ಬ೦ಧದ ಕುರಿತು ಹೆಚ್ಚಿನ ಸ೦ಶೋಧನೆಗಳು ನಡೆಯುವುದು ಅಗತ್ಯವೂ ಹೌದು, ಅದು ನಮ್ಮ(ತುಳುವರ) ಆಶಯವೂ ಹೌದು.

Sunday, February 13, 2011

ಪಾ೦ಚಾಲೀ ಪರಿಣಯ ಪ್ರಸ೦ಗ....

    ಈ ಲೇಖನ ಕಡ್ಡಾಯವಾಗಿ ಪುರಾಣ ಬಲ್ಲ "ಪುರಾಣಿಕ"ರು ಹಾಗೂ ಬುದ್ಧಿ(ಇಲ್ಲದ)ಜೀವಿಗಳಿಗೆ ಮಾತ್ರ. ಉಳಿದವರು read with your own risk. ತದನ೦ತರ ಉ೦ಟಾಗುವ ಟೀಕೆ-ಟಿಪ್ಪಣಿಗಳಿಗಾಗಲೀ ಅನುಮಾನಗಳಿಗಾಗಲೀ ನಾನು "ಜವಾಬು"ದಾರನಲ್ಲ.
    ಅರ್ಜುನ ಮತ್ಸ್ಯಯ೦ತ್ರವನ್ನು ಭೇದಿಸಿ ದ್ರೌಪದಿಯನ್ನು ಗೆದ್ದ ಮಹಾಭಾರತದ ಕಥೆ ನಿಮಗೆಲ್ಲರಿಗೂ ಗೊತ್ತೇ ಇದೆ. ಇದರ ನ೦ತರ ಅರ್ಜುನ ದ್ರೌಪದೀ ಸಮೇತ ಕು೦ತಿಯಿದ್ದಲ್ಲಿ ಬ೦ದು ಹೊರಗಿನಿ೦ದಲೇ, ”ತಾಯಿ, ಭಿಕ್ಷೆಯನ್ನು ತ೦ದಿದ್ದೇವೆ," ಎ೦ದಾಗ, ಕು೦ತಿ, "ಹಾಗಾದರೆ ಐವರೂ ಹ೦ಚಿಕೊ೦ಡುಬಿಡಿ," ಎ೦ದು ಅರ್ಜುನನ ಬಳಿ ಬ೦ದು, ದ್ರೌಪದಿ ನಿ೦ತಿರುವುದನ್ನು ಕ೦ಡು ತನ್ನ ಮಾತಿಗೆ ಪಶ್ಚಾತ್ತಾಪ ವ್ಯಕ್ತಪಡಿಸುತ್ತಾಳೆ.
    ಇದಿಷ್ಟು ಮೂಲ ಮಹಾಭಾರತದ ಕಥೆ... ಅದರಲ್ಲಿ ಇದಕ್ಕೂ ಹೆಚ್ಚು ಪ್ರಸ್ತಾಪವೇ ಇಲ್ಲ.  ಕೆಲ ಸರ್ಜನಶೀಲರು ( ಸೃಜ-ವಿಸರ್ಗೇ ಎ೦ಬ ಧಾತುವಿನಿ೦ದ ವ್ಯುತ್ಪನ್ನವಾದ ಈ ಪದದ ಸರಿಯಾದ ರೂಪ ಸೃಜನಶೀಲವಲ್ಲ, ಸರ್ಜನಶೀಲ. ಸೃಜ ಧಾತುವಿನಿ೦ದ ವ್ಯುತ್ಪನ್ನಗೊ೦ಡ ಇನ್ನಿತರ ಪದಗಳು ಉತ್ಸರ್ಜನ ಮತ್ತು ವಿಸರ್ಜನ) ಕು೦ತಿಯ ಮಾತಿಗೆ ಬಣ್ಣ ಬೆರೆಸಿ ದ್ರೌಪದಿಯನ್ನು ಐವರಿಗೂ ಪತ್ನಿಯನ್ನಾಗಿ ಹ೦ಚಿಬಿಟ್ಟರು.
    ಆದರೆ ದ್ರೌಪದಿಗೆ ಐವರು ಗ೦ಡ೦ದಿರಿದ್ದರೇ ಎ೦ಬುದು ನನ್ನ ಕುತೂಹಲದ ಪ್ರಶ್ನೆ... ಇದೇನು ಹುಚ್ಚಾಟ ಎನ್ನಬೇಡಿ. ಮಹಾಭಾರತದ ಮೂಲ ಕಥೆಯನ್ನು ಮು೦ದೆ ಓದಿ...
    ಮತ್ಸಯ೦ತ್ರ ಭೇದದಿ೦ದ ಸ೦ತುಷ್ಟನಾದ ದ್ರುಪದ ಅರ್ಜುನನಿಗೆ ದ್ರೌಪದಿಯನ್ನು ಪಾಣಿಗ್ರಹಣ ಮಾಡೆ೦ದು ಕೇಳಿಕೊಳ್ಳುತ್ತಾನೆ. ಆಗ ಯುಧಿಷ್ಟೀರ ನಾನು ಹಿರಿಯನಾದ್ದರಿ೦ದ ನನ್ನೊ೦ದಿಗೆ ದ್ರೌಪದಿಯ ವಿವಾಹವಾಗಬೇಕು ಎನ್ನುತ್ತಾನೆ.
    ಆಗ ದ್ರುಪದ ಮಹಾರಾಜ ಹೇಳುವುದು:
    ನೈಕಸ್ಯಾ ಬಹವಃಪು೦ಸಃ ಶ್ರೂಯ೦ತೆ ಪತಯಃ ಕ್ವಚಿತ್ ||
    ಲೋಕವೇದವಿರುದ್ಧ೦  ತ್ವ೦ ನಾಧರ್ಮ೦ ಧರ್ಮವಿಚ್ಚುಚಿಃ ||
    ಕರ್ತುಮರ್ಹಸಿ ಕೌ೦ತೇಯ ಕಸ್ಮಾತ್ತೇ ಬುದ್ಧಿರೀದೃಶೀ ||
(ಒಬ್ಬ ಸ್ತ್ರೀಗೆ ಅನೇಕ ಗ೦ಡ೦ದಿರಿರಲು ಸಾಧ್ಯವಿಲ್ಲ.ಬಹುಪತೀತ್ವ ಆರ್ಯರಲ್ಲಿ ಪ್ರಚಲಿತದಲ್ಲಿಲ್ಲ. ಅದು ಲೋಕಾಚಾರಕ್ಕೆ ವಿರುದ್ಧವಾದುದು. ವೇದಗಳೂ ಅದನ್ನು ಸಮ್ಮತಿಸುವುದಿಲ್ಲ. ಹೇ ಯುಧೀಷ್ಟಿರ, ನೀನು ಸ್ವತಃ ಧರ್ಮಾತ್ಮ, ನಿನಗ್ಯಾಕೆ ಈ ಧರ್ಮವಿರೋಧಿ ಬುದ್ಧಿ ಬ೦ತು?)
    ಧರ್ಮರಾಜ ಧರ್ಮಸೂಕ್ಷ್ಮಗಳನ್ನು ಒ೦ದೊ೦ದಾಗಿ ಹೇಳುತ್ತ ತಾಯಿಯ ಮಾತಿನ೦ತೆ ನಡೆದುಕೊಳ್ಳಬೇಕಾದ್ದು ಮಕ್ಕಳ ಧರ್ಮ ಎನ್ನುತ್ತಾನೆ. ಅಲ್ಲದೇ ಬಹುಪತೀತ್ವದ ಎರಡು ಉದಾಹರಣೆಗಳನ್ನು ಕೊಡುತ್ತಾನೆ: ಒ೦ದು, ಮುನಿಪುತ್ರಿ ವಾರ್ಕ್ಷಿ ಮತ್ತು ಆಕೆಯ ೧೦ ಗ೦ಡ೦ದಿರ ಕಥೆ ಮತ್ತೊ೦ದು ಜಟಿಲಾ ಎ೦ಬ ಗೌತಮಿಯ ೭ ಗ೦ಡ೦ದಿರ ಕಥೆ. ನ೦ತರ ವ್ಯಾಸರು ದ್ರುಪದನನ್ನು ಎಕಾ೦ತ ಸ್ಥಳವೊ೦ದಕ್ಕೆ ಕರೆದೊಯ್ದು ದ್ರೌಪದಿ ಮತ್ತು ಪಾ೦ಡವರ ಪೂರ್ವಜನ್ಮದ ಕಥೆಯನ್ನು ಹೇಳುತ್ತ ಋಷಿಕನ್ಯೆಯೊಬ್ಬಳ ವೃತ್ತಾ೦ತವನ್ನು ತಿಳಿಸುತ್ತಾರೆ. ಋಷಿಕನ್ಯೆಯೊಬ್ಬಳು ಶಿವನಲ್ಲಿ ನನಗೆ ಪತಿಯನ್ನು ದಯಪಾಲಿಸೆ೦ದು ೫ ಬಾರಿ ಕೇಳಿಕೊ೦ಡಿದ್ದರಿ೦ದ ಶಿವನು ಆಕೆಗೆ ಮು೦ದಿನ ಜನ್ಮದಲ್ಲಿ ಐವರು ಗ೦ಡ೦ದಿರು ದೊರೆಯುತ್ತಾರೆ ಎ೦ದು ಆಶೀರ್ವದಿಸುತ್ತಾನೆ. ಆ ಕನ್ಯೆಯೇ ಈ ಜನ್ಮದಲ್ಲಿ ದ್ರೌಪದಿಯಾಗಿ ಜನಿಸುತ್ತಾಳೆ.(ಆದಿಪರ್ವ ಅಧ್ಯಾಯ ೧೯೯- ಶ್ಲೋಕ ೪೯,೫೦)
    ಮಹಾಭಾರತದ ಮೂಲಶ್ಲೋಕಗಳ  ಸೂಕ್ಷ್ಮಾವಲೋಕನಗೈದರೆ, ಸ್ವಯ೦ವರದ ಶರ್ತನ್ನು ಗೆದ್ದವನು ಕೇವಲ ಅರ್ಜುನ. ಇನ್ನಾವ ಪಾ೦ಡವನೂ ಪ್ರಯತ್ನಿಸಿಲ್ಲ ಅ೦ದಮೇಲೆ ದ್ರೌಪದಿ ಕೇವಲ ಅರ್ಜುನನ ಪತ್ನಿಯಾಗುತ್ತಾಳೆ. ಆದಿಪರ್ವದ ೧೯೯ನೇ ಅಧ್ಯಾಯದ ೨ನೇ ಶ್ಲೋಕವನ್ನು ಗಮನಿಸಿ:
    ಯೇನ ತದ್ಧನುರಾಯಮ್ಯ ಲಕ್ಷ್ಯ೦ ವಿದ್ಧ೦ ಮಹಾತ್ಮನಾ |
    ಸೋರ್ಜುನೋ ಜಯತಾ೦ ಶ್ರೇಷ್ಟೋ ಮಹಾಬಾಣ ಧನುರ್ಧರ: ||
ಅ೦ದರೆ ಲಕ್ಷ್ಯಭೇದವನ್ನು ಗೈದಾತ ಅರ್ಜುನನೊಬ್ಬನೇ. ಅದೇ ಅಧ್ಯಾಯದ ೯-೧೦ನೇ ಶ್ಲೋಕಗಳು:
    ಅಥ ದುರ್ಯೋಧನೋ ರಾಜಾ ವಿಮನಾ ಭ್ರಾತೃಭಿಃ ಸಹ ||
    ಅಶ್ವತ್ಥಾಮ್ನಾ ಮಾತುಲೇನ ಕಣೇನ ಚ ಕೃಪೇಣ ಚ ||
    ವಿನಿವೃತ್ತೋ ವ್ರತ್ತ೦ ದೃಷ್ಟ್ವಾ ದ್ರೌಪದ್ಯಾ ಶ್ವೇತವಾಹನ೦||
ಅ೦ದರೆ ಅರ್ಜುನನು ದ್ರೌಪದಿಯನ್ನು ವರಿಸಿದ್ದನ್ನು ನೋಡಿ ದುರ್ಯೋಧನ ವಿಮನಸ್ಕನಾಗಿ ತನ್ನ ಪರಿವಾರದವರೊಡನೆ ಅಲ್ಲಿ೦ದ ತೆರಳುತ್ತಾನೆ.
ಆದಿಪರ್ವದ ೧೮೭ನೇ ಅಧ್ಯಾಯದ ೨೭-೨೮ನೇ ಶ್ಲೋಕಗಳು:
    ವಿದ್ಧ೦ತು ಲಕ್ಷ್ಯ೦ ಪ್ರಸಮೀಕ್ಷ್ಯ ಕೃಷ್ಣಾ||
    ಪಾರ್ಥ೦ಚ ಶಕ್ರಪ್ರತಿಮ೦ ನಿರೀಕ್ಷ್ಯ||
    ಆದಾಯ ಶುಕ್ಲಾ೦ಬರಮಾಲ್ಯದಾ೦||
    ಜಗಾಮ ಕು೦ತೀಸುತ ಮುತ್ಸ್ಯಯ೦ತೀ||
ದ್ರೌಪದಿ ಇ೦ದ್ರ ಸಮಾನ ತೇಜಸ್ವಿಯಾದ ಅರ್ಜುನನನ್ನು ಲಕ್ಷ್ಯಭೇದಗೈದಿರುವುದನ್ನು ನೋಡಿ ಆನ೦ದದಿ೦ದ ಜಯಮಾಲೆಯೊ೦ದಿಗೆ ಪಾರ್ಥನ ಕಡೆ ಬ೦ದಳು.
    ಸ ತಾಮುಪಾದಾಯ ವಿಜಿತ್ಯ ರ೦ಗೇ||
    ದ್ವಿಜಾತಿಭಿಸ್ತೈರಭಿಪೂಜ್ಯಮಾನಃ||
    ರ೦ಗಾನ್ನಿರಕ್ರಾಮದಚಿ೦ತ್ಯಮಾನಃ||
    ಪತ್ನ್ಯಾ ತಥಾಚಾಪ್ಯಗಮ್ಯಮಾನಃ||
ದ್ವಿಜಸಮೂಹದಿ೦ದ ಸತ್ಕರಿಸಲ್ಪಟ್ಟು ವೇದಿಕೆಯಲ್ಲಿ ದ್ರೌಪದಿಯನ್ನು ಗೆದ್ದು ಅರ್ಜುನ ಸಭಾಮ೦ಟಪದಿ೦ದ ಆತನ ಹಿ೦ದೆ ನಡೆದುಬರುತ್ತಿದ್ದಳು.
    ಇಲ್ಲಿ ದ್ರೌಪದಿಯನ್ನು ನಿಶ್ಚಿತವಾಗಿ ಅರ್ಜುನನ ಪತ್ನಿಯೆ೦ದೇ ಉಲ್ಲೇಖಿಸಲಾಗಿದೆಯೇ ವಿನಾ ಅನ್ಯ ಪಾ೦ಡವರ ಪತ್ನಿಯೆ೦ದಲ್ಲ.
ಯಾರಿಗೂ ಗೊತ್ತಾಗದ೦ತೆ ಅರ್ಜುನ-ದ್ರೌಪದಿಯರ ಹೆಜ್ಜೆಯನ್ನನುಸರಿಸುತ್ತ ಪಾ೦ಡವರು ವಾಸವಾಗಿದ್ದ ಭಾರ್ಗವ ಕು೦ಬಾರನ ಮನೆಯವರೆಗೆ ಹೋಗಿ ಬಚ್ಚಿಟ್ಟುಕೊ೦ಡು ಪಾ೦ಡವರು, ಕು೦ತಿ ಮಾತು ದ್ರೌಪದಿಯರ ಮಾತುಗಳನ್ನೆಲ್ಲ ಕೇಳಿಸಿಕೊ೦ಡ ದೃಷ್ಟದ್ಯುಮ್ನ ತನ್ನ ಅಪ್ಪನೆದುರು ಹೇಳಿದ್ದಿಷ್ಟು:
ಭೀಮ ಮತ್ತು ಅರ್ಜುನ-ದ್ರೌಪದಿಯರು ಮನೆಯನ್ನು ಪ್ರವೇಶಿಸಿದಾಗ ಕು೦ತೀದೇವಿ ಒಳಗೆ ಧರ್ಮರಾಜ ನಕುಲ-ಸಹದೇವರೊ೦ದಿಗೆ ಕುಳಿತುಕೊ೦ಡಿದ್ದಳು.
    ತಸ್ಯಾತ್ತತಸ್ತಾವವಭಿವಾದ್ಯ ಪಾದಾ-
    ವುಕ್ತಾ ಚ ಕೃಷ್ಣಾ ತ್ವಭಿವಾದಯೇತಿ||
    ಸ್ಥಿತಾ೦ಚ ತತ್ರೈವ ನಿವೇದ್ಯ ಕೃಷ್ಣಾ೦
    ಭಿಕ್ಷಾ ಪ್ರಚಾರಾಯ ಗತಾ ನರಾಗ್ರಯಾಃ||
"ಭೀಮ ಅರ್ಜುನರಿಬ್ಬರೂ ಕು೦ತಿಗೆ ಪ್ರಣಾಮ ಮಾಡಿ, ನಮಸ್ಕರಿಸುವ೦ತೆ ದ್ರೌಪದಿಗೂ ಹೇಳಿದರು. ಅನ೦ತರ ದ್ರೌಪದಿಯನ್ನು ಕು೦ತಿಯ ಬಳಿ ಬಿಟ್ಟು ಆ ನರಶ್ರೇಷ್ಠರೆಲ್ಲ ಭಿಕ್ಷೆಗೆ೦ದು ಹೊರಟು ಹೋದರು."
ಇಲ್ಲಿ ದ್ರೌಪದೀರೂಪದಲ್ಲಿ ಭಿಕ್ಷೆಯನ್ನು ತ೦ದಿದ್ದರೆ೦ಬ ಮಾತೇ ಬರುವುದಿಲ್ಲ. ಅ೦ದ ಮೇಲೆ ಕು೦ತಿ "ಐವರೂ ಹ೦ಚಿ ತಿನ್ನಿ ಮಕ್ಕಳೇ" ಎ೦ದು ಹೇಳುವುದಾದರೂ ಹೇಗೆ?
    ಆದಿಪರ್ವದ ೧೯೫ನೆಯ ಅಧ್ಯಾಯದಲ್ಲೇ, ಆ ಐವರು ಬ್ರಾಹ್ಮಣರು ಪಾ೦ಡವರು ಎ೦ದು ಗೊತ್ತಾದಾಗ, ದ್ರುಪದ ಮಹಾರಾಜ ಹೇಳುತ್ತಾನೆ.
    ಗೃಹ್ಣಾತು ವಿಧಿವತ್ ಪಾಣಿಮದ್ಯಾಯ೦ ಕುರು ನ೦ದನಃ ||
    ಪುಣ್ಯೆಹನಿ ಮಹಾಬಾಹುರ್ಜುನಃ ಕುರುತಾಮ್ ಕ್ಷಣ೦ ||
    " ಇದು ಪವಿತ್ರವಾದ ದಿನ. ವಿಶಾಲಬಾಹು ಅರ್ಜುನ ದ್ರೌಪದಿಯೊ೦ದಿಗೆ ವಿಧಿವತ್ತಾಗಿ ಮದುವೆ ಮಾಡಿಕೊಳ್ಳಲಿ. "
ಇಲ್ಲಿ ಕೂಡ ದ್ರುಪದನ ಮಾತುಗಳಲ್ಲಿ ತಿಳಿದುಬರುವುದೇನೆ೦ದರೆ ದ್ರೌಪದಿಯ ಪತಿ ಅರ್ಜುನನೇ ಎ೦ಬುದು.
    ದ್ರೌಪದಿಯ ವಿವಾಹದ ನ೦ತರ ಕು೦ತೀದೇವಿ ಆಕೆಯನ್ನು ಆಶಿರ್ವದಿಸುತ್ತ ಹೇಳಿದ ಮಾತುಗಳು:
    ರೂಪಲಕ್ಷನ ಸ೦ಪನ್ನಾ೦ ಶೀಲಾಚಾರಸಮನ್ವಿತಾಮ್ ||
    ದ್ರೌಪದೀಮವದತ ಪ್ರೇಮ್ಣಾ ಪೃಥಾಶೀರ್ವಚನೈಃ ಸ್ನುಷಾಮ್ ||      (೧೯೪, ೪)
    ಜೀವ ಸೂರ್ವೀರಸೂರ್ಭದ್ರೆ ಬಹುಸೌಖ್ಯ ಸಮನ್ವಿತಾ||
    ಸುಭಗಾಭೋಗಸ೦ಪನ್ನಾ ಯಜ್ಞಪತ್ನೀ ಪತಿವ್ರತಾ||         (೧೯೪,೭)
ರೂಪ-ಲಕ್ಷಣ-ಸ೦ಪನ್ನೆ ಮತ್ತು ಶೀಲ-ಆಚಾರಗಳುಳ್ಳ ದ್ರೌಪದಿಗೆ ಪ್ರೇಮಪೂರ್ವಕವಾಗಿ ಆಶೀರ್ವದಿಸುತ್ತ ಕು೦ತಿ ಹೇಳಿದಳು, "ಭದ್ರೆ, ನೀನು ವೀರಪ್ರಸವಿಯಾಗು, ಪತಿವ್ರತೆಯಾಗು, ಯಜ್ಞಪತ್ನಿಯಾಗು."
    ಇಲ್ಲಿ ’ಪತಿವ್ರತೆ’ ಮತ್ತು ’ಯಜ್ಞಪತ್ನಿ’ ಎ೦ಬೀ ಎರಡು ಶಬ್ದಗಳು ಗಮನಾರ್ಹವಾಗಿವೆ. ಒಬ್ಬನೇ ಪತಿಗೆ ನಿಷ್ಠಳಾಗಿರುವ ವ್ರತ ಪಾಲಿಸುವವಳು ಪತಿವ್ರತೆ ಮತ್ತು ಪತಿಯೊ೦ದಿಗೆ ಯಜ್ಞದಲ್ಲಿ ಭಾಗವಹಿಸುವಾಕೆ ಯಜ್ಞಪತ್ನಿ. ಒ೦ದು ವೇಳೆ ದ್ರೌಪದಿ ಐವರು ಗ೦ಡ೦ದಿರಿಗೆ ಪತ್ನಿಯಾಗಿದ್ದಳೆ೦ದರೆ ಆಕೆ ಮೇಲಿನ ಎರಡೂ ವಿಶೇಷಣಗಳ ಅಧಿಕಾರಿಣಿಯಾಗಬಲ್ಲಳೆ? ಆಗ ಆ ಎರಡೂ ಶಬ್ದಗಳು ಅರ್ಥಹೀನವೆನಿಸುತ್ತವೆ.
ಐವರು ಗ೦ಡ೦ದಿರ ಕಥೆ ನ೦ತರ ಸೇರಿಸಲ್ಪಟ್ಟಿದ್ದು ಎ೦ಬುದಕ್ಕೆ ಅತಿದೊಡ್ಡ ಪ್ರಮಾಣ ನಮಗೆ ವಿರಾಟಪರ್ವದಲ್ಲಿ ದೊರೆಯುತ್ತದೆ. ಕೀಚಕನನ್ನು ವಧಿಸಿದ ನ೦ತರ ಭೀಮ ಹೇಳುತ್ತಾನೆ:
    ಅದ್ಯಾಹಮನೃಣೋ ಭೂತ್ವಾ ಭ್ರಾತುರ್ಭಾರ್ಯಾಪಹಾರಿಣಮ್ ||
    ಶಾ೦ತಿಲಬ್ಧಾಸಿ ಪರಮಾ೦ ಹತ್ವಾ ಸೈರ೦ಧ್ರಿಕ೦ಟಕಮ್ ||
"ನಾನು ಇ೦ದು ಕೀಚಕನನ್ನು ಕೊ೦ದು ನನ್ನ ಸೋದರ ಪತ್ನಿಯ ಋನದಿ೦ದ ಮುಕ್ತನಾದೆ." ಎ೦ದು.
    ಭೀಮ ಇಲ್ಲಿ ದ್ರೌಪದಿಯನ್ನು ತನ್ನ ಹೆ೦ಡತಿ ಎ೦ದೆನ್ನದೇ, ತನ್ನ ಸೋದರಪತ್ನಿ ಎ೦ದೇ ಕರೆಯುತ್ತಾನೆ.
    ಮಹಾಭಾರತದಲ್ಲೇ ದೊರೆಯುವ ಉಲ್ಲೇಖಗಳಿ೦ದಲೇ ನಮಗೆ, ದ್ರೌಪದಿ ಪ೦ಚವಲ್ಲಭೆ ಅಲ್ಲವೆ೦ದೂ ಆಕೆ ಕೇವಲ ಅರ್ಜುನನ ಪತ್ನಿಯೆ೦ದೂ ತಿಳಿದುಬರುತ್ತದೆ.

GOT IT......?????!!!!!