Pages

Friday, January 24, 2014

ಬೇಡನಾದ ಬ್ರಾಹ್ಮಣ..!


     ವಾಲ್ಮೀಕಿಗಿರಿಸಂಭೂತವಾಗಿ ರಾಮಸಾಗರವನ್ನು ಸೇರಿದ ರಾಮಾಯಣವೇ ಒಂದು ಮಹಾನದಿ. ಅದು ಸಾವಿರಾರು ಕವಿಗಳ ಪ್ರತಿಭೆಗೆ ಸ್ಫೂರ್ತಿದಾಯಿನಿಯಾಗಿ ಅನಂತಕಾಲದಿಂದಲೂ ಈ ಭೂಮಿಯನ್ನು ಪಾವನಗೊಳಿಸುತ್ತಿರುವ ಪುಣ್ಯಗಂಗೆ. ಅಂದಿನಿಂದ ಇಂದಿನವರೆಗೆ ರಾಮಾಯಣವು ಸಹಸ್ರ ಸಹಸ್ರ ಕವಿಗಳಿಂದ ಸಾವಿರ ಸಾವಿರ ಬಾರಿ ಪುನಃ ಪುನಃ ಬರೆಯಲ್ಪಟ್ಟಿದೆ. ’ತಿಣುಕಿದನು ಫಣಿರಾಯ ರಾಮಾಯಣದ ಕವಿಭಾರದಲಿ’ ಎಂಬಂತೆ ಅದೆಷ್ಟೇ ರಾಮಾಯಣಗಳಿದ್ದರೂ ಪುರ್ವೋತ್ತರದ ವಿಚಾರಮಾಡುವ ಕೆಲಸ ವಿದ್ವಾಂಸನಿಗೆ ಬಂದರೆ ಎಲ್ಲದಕ್ಕೂ ಮೂಲವಾಗುವುದು ವಾಲ್ಮೀಕಿ ರಾಮಾಯಣವೇ. ಪ್ರಚಲಿತ ಮೂಲ ವಾಲ್ಮೀಕಿ ರಾಮಾಯಣದಲ್ಲಿ ಕೆಲವೊಂದು ಭಾಗಗಳು ಪ್ರಕ್ಷಿಪ್ತವಾದರೂ ರಾಮಾಯಣ ಮತ್ತು ವಾಲ್ಮೀಕಿಯ ವೃತ್ತಾಂತದ ಬಗ್ಗೆ ತಿಳಿಯಲು ಅವೇ ಮೂಲ ಆಧಾರ. ಅಗಸನ ಮಾತು ಕೇಳಿ ಕಾಡಿಗಟ್ಟಲ್ಪಟ್ಟ ಸೀತೆಗೆ ಆಶ್ರಯಕೊಟ್ಟು, ಲವಕುಶರನ್ನು ಸಾಕಿ ಅವರಿಗೆ ರಾಮಾಯಣವನ್ನು ಕಲಿಸಿ ಮತ್ತೆ ಸೀತೆಯು ರಾಮನನ್ನು ಯಾಗಮಂಟಪದಲ್ಲಿ ಸಂಧಿಸುವಂತೆ ಮಾಡಿದ ಕೀರ್ತಿ ವಾಲ್ಮೀಕಿಯದ್ದೆಂದು ಉತ್ತರ ರಾಮಾಯಣ ತಿಳಿಸುತ್ತದೆ. ಹೀಗೆ ವಾಲ್ಮೀಕಿಯು ರಾಮಾಯಣವನ್ನು ಬರೆದ ಕವಿಯಷ್ಟೇ ಅಲ್ಲ, ರಾಮಾಯಣದ ಪ್ರಮುಖ ಪಾತ್ರಧಾರಿಯೂ ಹೌದು. ಅಯೋಧ್ಯಾ ಕಾಂಡದ ಸರ್ಗವೊಂದರಲ್ಲಿ ರಾಮ, ಲಕ್ಷ್ಮಣ, ಸೀತೆಯರು  ಚಿತ್ರಕೂಟದ ಸಮೀಪ ವಾಲ್ಮೀಕಿಯನ್ನು ಕಂಡು ವಂದಿಸಿದರೆಂದಿದೆ. ಬಾಲಕಾಂಡದ ಕ್ರೌಂಚ ಪ್ರಸಂಗದಿಂದ ವಾಲ್ಮೀಕಿಯ ಆಶ್ರಮ ತಮಸಾನದಿ ತೀರದಲ್ಲಿತ್ತೆಂದು ತಿಳಿಯುತ್ತದೆ. ಈ ವಾಲ್ಮೀಕಿ ಬೇಡಕುಲದವನೆಂಬ ರೂಢಿ ನಮ್ಮಲ್ಲಿ ಬಹುಮಟ್ಟಿಗೆ ಪ್ರಚಾರದಲ್ಲಿದೆ. ನಮ್ಮ ಹಿಂದಿನ ’ಗನ’ ಸರ್ಕಾರವು ಸಿದ್ರಾಮಯ್ಯನವರಿಂದ ಕುರುಬರ ಓಟು ಕದಿಯಲು ’ಕನಕ’ಜಯಂತಿಯಂದೂ, ಶ್ರೀರಾಮುಲುವನ್ನು ಸಂತೈಸಲು ’ವಾಲ್ಮೀಕಿ’ ಜಯಂತಿಯಂದೂ ರಜೆ ಘೋಷಿಸಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಇನ್ನು ಒಕ್ಕಲಿಗರಿಗಾಗಿ ಕೆಂಪೇಗೌಡ ಜಯಂತಿಯಂದೂ, ಮುಸ್ಲೀಮರಿಗಾಗಿ ಟಿಪ್ಪುಸುಲ್ತಾನ್ ಜಯಂತಿಗೂ ಹೀಗೆ ಜಾತಿಗೊಂದು ಜಯಂತಿಗಳಿಗೆ ರಜೆ ಘೋಷಿಸಿ ಸೆಕ್ಯುಲರಿಸಮ್ಮನ್ನು ಎತ್ತಿಹಿಡಿಯಲು ತುದಿಗಾಲಲ್ಲಿ ನಿಂತಿದೆ. ಪ್ರಚಲಿತವೂ, ಪ್ರಚಾರವೂ ಏನೇ ಇದ್ದರೂ ವಾಲ್ಮೀಕಿ ಬೇಡನಾಗಿದ್ದನೇ? ಎಂಬ ಸತ್ಯಾಸತ್ಯತೆಯನ್ನು ಸ್ವಲ್ಪ ವಿಚಾರಿಸೋಣ.
     ಈ ಕಥೆ ಮೊದಲು ದೊರಕುವುದು ಆಧ್ಯಾತ್ಮ ರಾಮಾಯಣದಲ್ಲಿ. ಚಿತ್ರಕೂಟದ ಸಮೀಪ ವಾಲ್ಮೀಕಿ ದರ್ಶನಕ್ಕೆ ಬಂದ ರಾಮನಿಗೆ ವಾಲ್ಮೀಕಿಯೇ ಹೇಳುವುದು:
ಅಹಂ ಪುರಾ ಕಿರಾತೇಷು ಕಿರಾತೈಃ ಸಹ ವರ್ಧಿತಃ |
ಜನ್ಮಮಾತ್ರದ್ವಿಜತ್ವಂ ಮೇ ಶೂದ್ರಾಚಾರರತಃ ಸದಾ ||

ನಾನು ಬೆಳೆದದ್ದೆಲ್ಲ ಕಿರಾತರ ನಡುವೆ, ಶೂದ್ರಾಚಾರದಲ್ಲೇ ನಾನಿದ್ದೆ. ಕೇವಲ ಜನ್ಮದಿಂದ ಮಾತ್ರ ನಾನು ದ್ವಿಜನಾಗಿದ್ದೆ.(ಗಮನಿಸಿ ಇಲ್ಲಿ ಕಿರಾತನೆಂದಿದೆಯೇ ಹೊರತೂ ಬೇಡನೆಂದಲ್ಲ)
ಅನಂತರ ಕಳ್ಳರ ಸಹವಾಸದಿಂದ ಕಳ್ಳನಾದೆ. ಒಮ್ಮೆ ಸಪ್ತರ್ಷಿಗಳ ವಸ್ತುಗಳನ್ನು ಅಪಹರಿಸಲು ಹೊರಟಾಗ ಅವರೆಂದರು "ನೀನು ಯಾವ ಹೆಂಡತಿ ಮಕ್ಕಳಿಗಾಗಿ ಇಷ್ಟು ಪಾಪಕಾರ್ಯಗಳನ್ನು ಮಾಡುತ್ತಿರುವೆಯೋ ಅದರಲ್ಲಿಯೂ ಅವರು ಭಾಗಿಗಳಾಗುವರೋ ಕೇಳಿಕೊಂಡು ಬಾ" ಎಂದು. ನಾನು ಹಾಗೆ ಕೇಳಿದಾಗ ಯಾರೂ ಭಾಗಿಗಳಾಗಲು ಒಪ್ಪಲಿಲ್ಲ. ಅದರಿಂದ ವೈರಾಗ್ಯವುಂಟಾಯಿತು. ಅವರು ಅಲ್ಲಿಯೇ ಜಪಮಾಡುವಂತೆ ’ಮರಾ’ ಎಂಬ ಮಂತ್ರೋಪದೇಶ ಮಾಡಿದರು.
’ಏಕಾಗ್ರಮನಸಾತ್ರೈವ ಮರೇತಿ ಜಪ ಸರ್ವದಾ’
ನಾನು ಹಾಗೆಯೇ ಮಾಡುತ್ತಿರಲು ನನ್ನಮೇಲೆ ಹುತ್ತ ಬೆಳೆಯಿತು. ವರ್ಷಗಳ ನಂತರ ಋಷಿಗಳು ಬಂದು ನನ್ನನ್ನು ಹೊರಬರುವಂತೆ ಕರೆದರು.
ವಲ್ಮೀಕಾನ್ನಿರ್ಗತಶ್ಚಾಹಂ ನೀಹಾರಾದಿವ ಭಾಸ್ಕರಃ |
ಮಾಮಪ್ಯಾಹುರ್ಮುನಿಗಣಾಃ ವಾಲ್ಮೀಕಿಸ್ತ್ವಂ ಮುನೀಶ್ವರಃ ||

ವಲ್ಮೀಕದಿಂದ ಹೊರಬಂದುದರಿಂದ ಮುಂದೆ ಈತ ವಾಲ್ಮೀಕಿಯೆಂದೇ ಹೆಸರಾದ. ಅಲ್ಲದೇ ವರುಣನು(ಪ್ರಚೇತ) ಮಳೆಯನ್ನು ಸುರಿಸಿ ಹುತ್ತವನ್ನು ಕರಿಗಿಸಿದ್ದರಿಂದ ಪ್ರಾಚೇತಸನೆಂಬ ಹೆಸರೂ ಬಂದಿತು. ಇದಕ್ಕೂ ಮೊದಲು ಆತನಿಗೆ ಯಾವ ಹೆಸರಿತ್ತೆಂಬುದು ರಾಮಾಯಣದಲ್ಲೆಲ್ಲೂ ಉಲ್ಲೇಖವಿಲ್ಲ.
     ಇದೇ ಕಥೆಯು ಮುಂದೆ ಆನಂದ ರಾಮಾಯಣದಲ್ಲೂ ಇದೆ. ಇದಕ್ಕೆ ಪುಷ್ಟಿಕೊಡುವ ವಿಚಾರ ಮಹಾಭಾರತದ ಅನುಶಾಸನ ಪರ್ವದಲ್ಲೂ ಕಂಡುಬರುತ್ತದೆ. ಅಲ್ಲಿ ಯುಧಿಷ್ಠಿರನಿಗೆ ವಾಲ್ಮೀಕಿಯು ಹೇಳುತ್ತಾನೆ.
ವಾಲ್ಮೀಕಿಶ್ಚಾಹ ಭಗವಾನ್ ಯುಧಿಷ್ಠಿರಮಿದಂ ವಚಃ |
ವಿವಾದೇ ಸಾಗ್ನಿಮುನಿಭಿರ್ಬ್ರಹ್ಮಘ್ನೋ ವೈ ಭವಾನಿತಿ
ಉಕ್ತಃ ಕ್ಷಣೇನ ಚಾವಿಷ್ಟಸ್ತೇನಾಧರ್ಮೇಣ ಭಾರತ |
ಸೋಽಹಮೀಶಾನಮನಘಂ ಅಮೋಘಂ ಶರಣಂ ಗತಃ ||
ಮುಕ್ತಶ್ಚಾಸ್ಮಿತತೋ ಪಾಪೈಃ

"ಅಗ್ನಿಪೂಜಕರಾದ ಮುನಿಗಳೊಡನೆ ನಾನು ವಿವಾದ ಮಾಡಿದ್ದರಿಂದ ನೀನು ಬ್ರಹ್ಮಘ್ನನೆಂದುಬಿಟ್ಟರು. ಕೂಡಲೇ ನಾನು ಅಧರ್ಮಿಷ್ಟನಾದೆ. ಕಡೆಗೆ ಈಶ್ವರನನ್ನು ಶರಣುಹೋಗಿ ಪಾಪಮುಕ್ತನಾದೆ."
ಅಶ್ವಘೋಷನ ಬುದ್ಧಚರಿತ್ರೆಯಲ್ಲೂ ವಾಲ್ಮೀಕಿಯ ವೃತ್ತಾಂತವಿದೆ. ಅಲ್ಲಿ ವಾಲ್ಮೀಕಿಯನ್ನು ಚ್ಯವನ ಮಹರ್ಷಿಯ ಮಗನೆಂದಿದೆ.
’ವಾಲ್ಮೀಕಿರಾದೌ ಚ ಸಸರ್ಜ ಪದ್ಯಂ ಜಗ್ರಂಥಯನ್ನ ಚ್ಯವನೋ ಮಹರ್ಷಿಃ ’
ಈ ಚ್ಯವನನು ಭೃಗುವಿನ ಮಗ.
’ಭೃಗೋಮಹರ್ಷೇಃ ಪುತ್ರೋಽಭೂತ್ ಚ್ಯವನೋ ನಾಮ ಭಾರ್ಗವಃ’
ಭಾರ್ಗವನಾದ ವಾಲ್ಮೀಕಿಯೇ ರಾಮಚರಿತೆಯನ್ನು ಬರೆದವನೆಂದು ಶಾಂತಿಪರ್ವದಲ್ಲಿ ಸ್ಪಷ್ಟ ಉಲ್ಲೇಖವಿದೆ.
ಶ್ಲೋಕಶ್ಚಾಯಂ ಪುರಾಗೀತೋ ಭಾರ್ಗವೇನ ಮಹಾತ್ಮನಾ |
ಆಖ್ಯಾತೇ ರಾಮಚರಿತೇ ನೃಪಂತಿ ಪ್ರತಿ ಭಾರತ ||

ಸ್ವತಃ ರಾಮಾಯಣ, ಮಹಾಭಾರತಗಳಲ್ಲೇ ವಾಲ್ಮೀಕಿಯು ಬ್ರಾಹ್ಮಣನೆಂದಿದೆಯೇ ಹೊರತೂ ಬೇಡನೆಂದಲ್ಲ. ಆದರೆ ಕೆಲವು ಕಾಲ ಶೂದ್ರಾಚಾರ ನಿರತನಾಗಿದ್ದರೂ ಇರಬಹುದು.
     ರಾಮಾಯಣದ ಹುಟ್ಟಿಗೆ ಕಾರಣವೆನಿಕೊಂಡ ’ಮಾನಿಷಾದ’ ಶ್ಲೋಕವನ್ನೇ ಗಮನಿಸಿ. ಇದು ಛಂದಸ್ಸಿನ ದೃಷ್ಟಿಯಿಂದ ನಿರ್ದುಷ್ಟವೆನಿಸಿದರೂ, ಅರ್ಥದ ದೃಷ್ಟಿಯಿಂದ ಅಪೂರ್ವ ಮಹತ್ವದ್ದೆಂದೇನೂ ಭಾಸವಾಗುವುದಿಲ್ಲ. ಕೆಲ ವ್ಯಾಖ್ಯಾನಕಾರರು ’ಮಾ’ ಎಂದರೆ ಲಕ್ಷ್ಮಿಯೆಂದೂ, ಮಾನಿಷಾದ ಎಂದರೆ ಲಕ್ಷ್ಮಿನಿವಾಸನಾದ ವಿಷ್ಣುವೆಂದೂ ಬಗೆಬಗೆಯ ಅರ್ಥಗಳನ್ನು ತೋರಿಸಿ ರಾಮಾಯಣಕ್ಕೆ ಮಂಗಳಶ್ಲೋಕವೆನಿಸುವ ಔಚಿತ್ಯ ಅದರಲ್ಲುಂಟೆಂದು ವಿವರಣೆ ನೀಡಿದ್ದಾರೆ. ಇದು ಪಂಡಿತರ ವ್ಯಾಖ್ಯಾನಕೌಶಲವೇ ಹೊರತೂ ಮತ್ತೇನೂ ಅಲ್ಲ. ಕ್ರೌಂಚ ಪಕ್ಷಿಯೊಂದನ್ನು ನಿಷಾದನೊಬ್ಬನು ಕೊಂದು ಕೆಡಹುತ್ತಾನೆ. ನೆಲಕ್ಕೆ ಬಿದ್ದು ಹೊರಳಾಡಿ ಸಾಯುತ್ತಿರುವ ಅದನ್ನು ಕಂಡ ವಾಲ್ಮೀಕಿಯ ಬಾಯಿಂದ ಹೊರಬಂದ ಶ್ಲೋಕವಿದು. ಪಕ್ಷಿಯನ್ನು ಕೊಂದದ್ದಕ್ಕಾಗಿ ವಾಲ್ಮೀಕಿ ನಿಷಾಧನನ್ನು ಶಪಿಸುತ್ತಾನೆ. ಬೇಟೆಯಾಡುವುದು ಬೇಡನ ಸಹಜ ಧರ್ಮ. ವಾಲ್ಮೀಕಿ ಮೂಲತಃ ಬೇಡನೇ ಆಗಿದ್ದಲ್ಲಿ ಹಕ್ಕಿಯನ್ನು ಕೊಂದವನೊಬ್ಬನನ್ನು ಹೀಗೆ ಶಪಿಸಲು ಸಾಧ್ಯವೇ ಇರುತ್ತಿರಲಿಲ್ಲ.
      ರಾಜಸ್ಥಾನ, ಪಂಜಾಬ್, ಗುಜರಾತಿನಲ್ಲಿ ಬಹುಸಂಖ್ಯೆಯಲ್ಲಿರುವ ಈಗಿನ ವಾಲ್ಮೀಕಿ ಸಮುದಾಯದವರಿಗೆ ಆ ಹೆಸರು ಬ್ರಿಟಿಷರ ಕಾಲದಲ್ಲಿ ಹೇಗೆ ಬಂತೆಂಬ ವಿವರಣೆಗೆ ಪಂಡಿತ ಅಮಿತ್‌ಚಂದ ಶರ್ಮಾರ ’’ಬಾಲ್ಮೀಕಿ ಪ್ರಕಾಶ್’ ಎಂಬ ಹಿಂದಿ ಹೊತ್ತಿಗೆಯನ್ನು ಗಮನಿಸಿ.

Wednesday, January 1, 2014

ಸ್ವಾಮಿಯೇ ಶರಣಂ ಅಯ್ಯಪ್ಪ: ಒಂದಿಷ್ಟು ಇತಿಹಾಸ, ಇನ್ನೊಂದಿಷ್ಟು ಪುರಾಣ

     
     ಮಕರ ಸಂಕ್ರಮಣ ಹತ್ತಿರ ಬರುತಿದೆ. ಅಯ್ಯಪ್ಪ ಭಕ್ತರೆಲ್ಲ ೪೧ ದಿನದ ವ್ರತದ ನಂತರ ಇರುಮುಡಿ ಹೊತ್ತು ಶಬರಿಮಲೈನತ್ತ ತೆರಳಿದ್ದಾರೆ. ಕಠಿಣ ವ್ರತವನ್ನು ಪಾಲಿಸಿ, ಕಾಡುಮೇಡುಗಳಲ್ಲಿ ಕಲ್ಲುಮುಳ್ಳುಗಳ ಹಾದಿಯಲ್ಲಿ ಬರಿಗಾಲಲ್ಲಿ ನಡೆಯುವ ಕಷ್ಟದ ಮಧ್ಯದಲ್ಲೂ ವರ್ಷದಿಂದ ವರ್ಷಕ್ಕೆ ಶಬರಿಮಲೆ ಆಸ್ತಿಕರ ಬಹುದೊಡ್ಡ ಶೃದ್ಧಾಕೇಂದ್ರವಾಗಿ ಬೆಳೆಯುತ್ತಲೇ ಇದೆ. ತ್ಯಾಗ, ಪ್ರೇಮಗಳ ಸಾಕಾರಮೂರ್ತಿಯಾಗಿ ಅಯ್ಯಪ್ಪನು ವರ್ಷಾನುವರ್ಷಗಳಿಂದ ಭಕ್ತರನ್ನುದ್ಧರಿಸುತ್ತಲೇ ಇದ್ದಾನೆ. ಹಾಗಾದರೆ ಶಬರಿಮಲೆ ಮತ್ತು ಅಯ್ಯಪ್ಪನ ನೈಜ ಹಿನ್ನೆಲೆಯೇನು?
    ಅಯ್ಯಪ್ಪನಿಗೆ ಎರಡು ಮುಖಗಳಿವೆ. ಮೊದಲನೇಯದು ಪೌರಾಣಿಕ, ಇನ್ನೊಂದು ಐತಿಹಾಸಿಕ. ಪೌರಾಣಿಕ ಕಥೆ ನಿಮಗೆಲ್ಲ ತಿಳಿದದ್ದೇ. ಮಹಿಷಾಸುರನ ತಂಗಿಯಾದ ಮಹಿಷಿಯು ಹರಿಹರಪುತ್ರರಿಂದಲ್ಲದೇ ಬೇರಾರಿಂದಲೂ ಸಾವುಬರದಂತೆ ಬ್ರಹ್ಮನಿಂದ ವರಪಡೆದು ಲೋಕಕಂಟಕಳಾಗಿ ಮೆರೆಯುತ್ತಾಳೆ. ಕೆಲ ಐತಿಹ್ಯಗಳ ಪ್ರಕಾರ ಭಸ್ಮಾಸುರನ ಸಂಹಾರಕ್ಕಾಗಿ ಮೋಹಿನಿ ಅವತಾರ ತಳೆಯುವ ವಿಷ್ಣುವನ್ನು ಶಿವನು ಮೋಹಿಸುತ್ತಾನೆ. ಇವರೀರ್ವರ ಶಕ್ತಿಯಿಂದ  ಹರಿಹರಸುತನಾಗಿ ಜನಿಸಿದ ಮಗುವೇ ಅಯ್ಯಪ್ಪ. ಮಕ್ಕಳಿಲ್ಲದ ಪಾಂಡ್ಯರಾಜ ಪಂಪಾತೀರದಲ್ಲಿದ್ದ ಈ ಮಗುವನ್ನು ನೋಡಿ ತನ್ನ ಮಗನಂತೆ ಸಾಕುತ್ತಾನೆ. ಹುಟ್ಟುವಾಗಲೇ ಕೊರಳಲ್ಲಿ ಮಣಿಯಿದ್ದುದರಿಂದ ಇವನಿಗೆ ಮಣಿಕಂಠನೆಂದು ನಾಮಕರಣ ಮಾಡಲಾಯ್ತು. ಮಾತುಬಾರದ, ಕಣ್ಣುಕಾಣದ ಗುರುಪುತ್ರನನ್ನು ಅನುಗ್ರಹಿಸುವುದು, ರಾಣಿಯ ಹೊಟ್ಟೆ ನೋವು ನಿವಾರಿಸಲು ಹುಲಿಯ ಹಾಲನ್ನು ತರಲು ಕಾಡಿಗೆ ತೆರಳುವುದು, ದೇವೇಂದ್ರನನ್ನು ಬ೦ಧಿಯನ್ನಾಗಿಸಿದ್ದ ಮಹಿಷಿಯನ್ನು ಕೊಲ್ಲುವುದು, ಶಬರಿಮಲೆಯ ಕಾಡಿನಲ್ಲಿ ನೆಲೆನಿಲ್ಲುವುದೇ ಮುಂತಾದ ಕಥೆಗಳನ್ನೆಲ್ಲ ನೀವು ತಿಳಿದೇ ಇರುತ್ತೀರಿ. ಈಗ ಅದಕ್ಕಿಂತ ವಿಭಿನ್ನವಾದ, ನೀವು ಕೇಳದ, ಯಾವ ಐತಿಹಾಸಿಕ ಚಿತ್ರಕ್ಕೂ ಕಡಿಮೆಯಿಲ್ಲದ ಅತಿರೋಚಕ ಕಥೆಯುಳ್ಳ ಅಯ್ಯಪ್ಪನ ಇತಿಹಾಸವನ್ನೊಮ್ಮೆ ನೋಡೋಣ.
ತಮಿಳ್ನಾಡಿನ ಪುದುಕೊಟ್ಟೈನ ಸಮೀಪದ ಶಂಗಂ ಪೂರ್ವಕಾಲದ ಶಾಸ್ತನ ವಿಗ್ರಹ
      
ಪಂಡಾಲಂ ಅರಮನೆ
     ಮುಸಲ್ಮಾನ ದಾಳಿಕಾರರು ಮಧುರೈಯನ್ನಾಕ್ರಮಿಸಿದ್ದ ಕಥೆಯನ್ನು ಹಿಂದಿನ ಲೇಖನದಲ್ಲಿ ಬರೆದಿದ್ದೆ. ಈ ದಾಳಿಯನ್ನು ತಾಳಲಾಗದೇ ಮಧುರೈನಿಂದ ಕೇರಳಕ್ಕೆ ವಲಸೆಬಂದ ಪಾಂಡ್ಯರಾಜಮನೆತನವೊಂದು ತಿರುವಾಂಕೂರು ಅರಸರ ನೆರವಿನೊಂದಿಗೆ ಸುಮಾರು ಕ್ರಿ.ಶ 1194-1202ರ ನಡುವೆ ಪಂಡಾಲಂ ರಾಜ್ಯವನ್ನು ಸ್ಥಾಪಿಸಿತು. ಕೇರಳ ಕ್ಷತ್ರಿಯರು ಸಾಧಾರಣವಾಗಿ ವಿಶ್ವಾಮಿತ್ರ ಗೋತ್ರದವರಾದರೆ ಪಂಡಾಲಂನವರು ತಮಿಳ್ನಾಡು ಮೂಲದ ಭಾರ್ಗವ ಗೋತ್ರದವರು. ಕೇರಳದಲ್ಲೂ, ತಮಿಳ್ನಾಡಿನಲ್ಲೂ ಶಂಗಂನ ಪೂರ್ವ ಕಾಲದಿಂದಲೂ ಹರಿಹರ ಪುತ್ರನೆನ್ನಲಾಗುವ ಅಯ್ಯನಾರ್ ಶಾಸ್ತನ ಆರಾಧನೆ ಜಾರಿಯಲ್ಲಿದೆ. ಸಹಜವಾಗಿಯೇ ಶಬರಿಮಲೆಯ ಕಾಡುಗಳಲ್ಲಿದ್ದ ಪುರಾತನ ಕಾಲದಿಂದಲೂ ಸುತ್ತಲಿನ ಜನರಿಂದ, ಆಳರಸರಿಂದ ಪೂಜಿಸಲ್ಪಡುತ್ತಿದ್ದ ಶಾಸ್ತನನ್ನೇ ತನ್ನ ಆರಾಧ್ಯ ದೈವವನ್ನಾಗಿ ಪಂಡಾಲಂ ರಾಜಮನೆತನ ಸ್ವೀಕರಿಸಿತು. ಮುಸ್ಲೀಮರಿಂದ 
ದೇಶಭೃಷ್ಟರಾದರೂ ಪಂಡಾಲಂ ಮತ್ತು ಸಮೀಪದ ಕಡಕ್ಕಡದಲ್ಲಿ ಹಲವಾರು ಮಸೀದಿಗಳನ್ನೂ, ಚರ್ಚುಗಳನ್ನೂ, ಅವಲೋಕಿತೇಶ್ವರನ ಬೌದ್ಧವಿಹಾರಗಳನ್ನೂ ನಿರ್ಮಿಸಿದ್ದ ಪಂಡಾಲಂ ರಾಜರು ಮೊದಲಿನಿಂದಲೂ ಕೇರಳದ ಆತ್ಮವಾಗಿದ್ದ ಪರಮತ ಸಹಿಷ್ಣುತೆಯನ್ನು ಎತ್ತಿ ಹಿಡಿದವರು. ಕೆಲಕಾಲದ ನಂತರ ಪಂಡಾಲಂ ರಾಜ್ಯಕ್ಕೆ ’ಉದಯನ’ನೆಂಬ ದರೋಡೆಕೋರನ ಕಾಟ ಶುರುವಾಯ್ತು. ಕರಿಮಲ, ತಲಪರ, ಇಂಚಿಪ್ಪರದ ದಟ್ಟಕಾಡುಗಳಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡು ಸುತ್ತಲಿನ ರಾಜ್ಯಗಳನ್ನು ದೋಚುವುದೇ ಆತನ ಮುಖ್ಯ ಕಸುಬಾಗಿತ್ತು. ಕೇರಳ-ತಮಿಳ್ನಾಡುಗಳೆರಡನ್ನೂ ಬೆಸೆಯುತ್ತಿದ್ದ ಶಬರಿಮಲೆ ಆಕಾಲದ ಯಾತ್ರಿಗಳ ಮತ್ತು ವ್ಯಾಪಾರಿಗಳ ಪ್ರಮುಖ ಮಾರ್ಗ. ಇದೇ ದಾರಿಯಲ್ಲಿದ್ದು ವ್ಯಾಪಾರಿಗಳನ್ನೂ ಸುತ್ತಲಿನ ಗ್ರಾಮಗಳನ್ನೂ ದೋಚುತ್ತಿದ್ದ ಉದಯನ ಮೂಲತಃ ಬೌದ್ಧನಾಗಿದ್ದು ಶಬರಿಮಲೆಯಲ್ಲಿದ್ದ ಪುರಾತನ ಶಾಸ್ತನ ದೇವಾಲಯವನ್ನು ಧ್ವಂಸಗೊಳಿಸಿ ಮೂರ್ತಿಯನ್ನು ನಾಶಮಾಡಿದನಂತೆ. ಅರಮನೆಯ ಸಮೀಪದಲ್ಲಿದ್ದ ದೇವಾಲಯಗಳನ್ನು ದೋಚಿ ಅರಮನೆಯಲ್ಲಿದ್ದ ಪಾಂಡ್ಯರಾಜನ ತಂಗಿಯನ್ನು ಹೊತ್ತೊಯ್ದ. ತನ್ನನ್ನು ಮದುವೆಯಾಗಲು ರಾಜಕುಮಾರಿಗೆ ೨೧ ದಿನಗಳ ಗಡುವು ವಿಧಿಸಿದ ಉದಯನ ಆಕೆಯನ್ನು ಸೆರೆಯಲ್ಲಿಟ್ಟ. ರಾಜಕುಮಾರಿಯ ಕನಸಲ್ಲಿ ಕಾಣಿಸಿಕೊಂಡ ಧರ್ಮಶಾಸ್ತನು ಶೀಘ್ರದಲ್ಲೇ ಸೆರೆವಾಸದಿಂದ ಬಿಡುಗಡೆಯಾಗುವುದೆಂದೂ, ತನ್ನ ಪರಮಭಕ್ತರಾದ ಪಂಡಾಲಂ ಮನೆತನವನ್ನು ಕಾಪಾಡಲು ತಾನೇ ಸ್ವತಃ ಅವಳ ಮಗನಾಗಿ ಜನಿಸುವೆನೆಂದೂ ಭರವಸೆಯಿತ್ತನಂತೆ. ಅದೇ ಸಮಯಕ್ಕೆ ಆಕೆಯ ಬಹುವಾಗಿ ಪ್ರೀತಿಸುತ್ತಿದ್ದ ರಾಜ್ಯದ ಸೇನಾಧಿಪತಿ ಕಾಂಪಿಲ್ಲಿಲ್ ಪಿಳ್ಳೈನ ಮಗ ಜಯಂತನು ರಾತ್ರಿ ಸಮಯದಲ್ಲಿ ಉದಯನನ ಶಿಬಿರದ ಮೇಲೆ ದಾಳಿ ನಡೆಸಿ ರಾಜಕುಮಾರಿಯನ್ನು ಸೆರೆಯಿಂದ ಬಿಡಿಸಿ ಕರೆದೊಯ್ದ. ತನ್ನ ಮರಳುವಿಕೆಯಿಂದ ರಾಜಮನೆತನ ಮರ್ಯಾದೆ ಹಾಳಾಗಬಹುದೆಂಬ ಅಂಜಿಕೆಯಿಂದ ಆಕೆ ಅರಮನೆಗೆ ಹೋಗಲೊಪ್ಪದೇ ಕಾಡಿನಲ್ಲೇ ಉಳಿಯುವುದಾಗಿ ತಿಳಿಸಿದಳು. ರಾಜಕುಮಾರಿಯನ್ನು ವರಿಸಿದ ಜಯಂತನು ಆಕೆಯೊಡನೆ ಪೊನ್ನಂಬಲದ ಕಾಡುಗಳಲ್ಲಿ ವಾಸಮಾಡತೊಡಗಿದ. ಉದಯನನ ಕೈಯಲ್ಲಿ ಇಬ್ಬರೂ ಮೃತಪಟ್ಟರೆಂದು ಅವರಿಬ್ಬರನ್ನೂ ರಾಜಮನೆತನದವರು ಮರೆತರು. ಇವರೀರ್ವರ ಮಗನೇ ಆರ್ಯನ್ ಅಥವಾ ಅಯ್ಯನ್. ಆರ್ಯನ್ ಎಂಬುದು ಶಾಸ್ತನ ಹೆಸರುಗಳಲ್ಲೊಂದು ಕೂಡ ಹೌದು. ಅಯ್ಯನನ ತಂದೆಯೆನ್ನಲಾಗುವ ಜಯಂತನು ಉದಯನನಿಂದ ಕೊಲ್ಲಲ್ಪಟ್ಟ ಶಬರಿಮಲೆಯ ಅರ್ಚಕರ ಮಗನಾಗಿದ್ದನೆಂಬ ಕಥೆಯೂ ಇದೆ. ಆದರೆ ಆತ ’ವೆಲ್ಲಲಾರ್ ಕುಲಜಾತನ್ ಅಯ್ಯನ್ ಅಯ್ಯಪ್ಪನ್’ ಎಂದು ಭಕ್ತರಿಂದ ಕರೆಯಲ್ಪಡುವುದೂ, ’ಇಳವರ್ಸೆವಂಪತ್ತು’ ಮತ್ತು ನಾಲಂಕಲ್ ಕೃಷ್ಣ ಪಿಳ್ಳೈರ ’ಮಹಾಕ್ಷೇತ್ರಂಗಳ್ಕುಮುಂಬಿಲ್’ಗಳೂ ಆತ ಬ್ರಾಹ್ಮಣನಾಗಿರದೇ ಕೊಟ್ಟಾಯಮ್ ಸಮೀಪದ ಎರುಮೇಲಿಯ ವೆಲ್ಲಾಲ ಸಮುದಾಯದವನೆಂಬುದನ್ನೇ ಧೃಡೀಕರಿಸುತ್ತವೆ. ಕೆಲ ವರ್ಷಗಳ ನಂತರ ಕುಲಪೊನ್ನಂಬಲಮೇಡುವಿಗೆ ಬೇಟೆಗೆ ಬಂದಿದ್ದ ಪಂಡಾಲಂ ರಾಜ ಕಾಡುಪ್ರಾಣಿಗಳೊಡನೆ ಆಡುತ್ತಿದ್ದ ಅಯ್ಯನನ್ನು ನೋಡಿ ಅವನ ಹಿನ್ನೆಲೆಯನ್ನು ತಿಳಿದು ತನ್ನ ರಾಜ್ಯಕ್ಕೆ ಕರೆದೊಯ್ಯುತ್ತಾನೆ. ಶಾಸ್ತನ ಅನುಗ್ರಹದಿಂದ ಹುಟ್ಟಿನಿಂದಲೇ ಅತಿಮಾನುಶ ಶಕ್ತಿಗಳನ್ನು ಹೊಂದಿದ್ದ ಅಯ್ಯಪ್ಪ ತನ್ನ ಹದಿನಾಲ್ಕನೇ ವಯಸ್ಸಿನಲ್ಲೇ ಉದಯನನ್ನು ಸೋಲಿಸಿ, ಶಾಸ್ತನ ದೇವಸ್ಥಾನವನ್ನು ಮರುನಿರ್ಮಿಸುವ ಶಪಥಮಾಡಿ ಅದಕ್ಕಾಗಿ ದೊಡ್ಡ ಸೈನ್ಯವೊಂದನ್ನು ಕಟ್ಟಲಾರಂಭಿಸುತ್ತಾನೆ. ಅಯ್ಯಪ್ಪನ ತಂದೆ ಆಲಂಗಾಡ್ ರಾಜ್ಯಕ್ಕೆ ಸೇರಿದ ಮುಪ್ಪತ್ತಡಮ್‍ನ ನಾಯರ್ ಮನೆತನಕ್ಕೆ ಸೇರಿದವನು. ಸ್ವತಃ ಅಯ್ಯಪ್ಪನು ಕಳರಿ ಸೇರಿದಂತೆ ಶಸ್ತ್ರವಿದ್ಯೆಗಳನ್ನೆಲ್ಲ ಕಲಿತದ್ದಿಲ್ಲೇ. ಪಾಂಡ್ಯರಾಜನ ತಾಯಿ ಅಂಬಲಪ್ಪುಳ ರಾಜಮನೆತನಕ್ಕೆ ಸೇರಿದವಳು. ಪಂಡಾಲಂನ ಜೊತೆ ಈ ಎರಡೂ ರಾಜ್ಯದ ಸೈನ್ಯವನ್ನೊಟ್ಟುಗೂಡಿಸಿ, ಅರಬ್ಬಿನ ಕಡಲ್ಗಳ್ಳ(pirate) ವಾವರನನ್ನು ಯುದ್ದದಲ್ಲಿ ಸೋಲಿಸಿ ಆತನ ಸ್ನೇಹ ಸಂಪಾದಿಸಿ, ಪಾಂಡ್ಯರಾಜರಿಗೆ ನಿಷ್ಟನಾಗಿದ್ದ ಕೊಚ್ಚು ಕಡುತ, ತಳಪರದ ವಿಲ್ಲನ್ ಮತ್ತು ಮಲ್ಲನ್ ಎಂಬ ಯುದ್ಧವೀರರೊಡನೆ ಉದಯನನ ವಿರುದ್ದ ಯುದ್ಧ ಸಾರುತ್ತಾನೆ. ಕರಿಮಲೈ ಕೊಟ್ಟದ ಕರಿಕಾನನದಲ್ಲಿ ನಡೆದ ಭೀಕರ ಯುದ್ಧದಲ್ಲಿ ಉದಯನನ ಪಡೆಯನ್ನು ಅಯ್ಯಪ್ಪನ ಸೈನ್ಯ ನಾಮಾವಶೇಷಗೊಳಿಸಿತು. ಅಯ್ಯಪ್ಪನ ಬಲಗೈ ಬಂಟನಾಗಿದ್ದ ಕೊಚ್ಚು ಕಡುತ ಉದಯನನನ್ನು ತರಿದು ಬಿಸುಡುತ್ತಾನೆ. ಯುದ್ಧದ ನಂತರ ಎರುಮೇಲಿಯ ಶರಂಗುಟ್ಟಿಯಲ್ಲಿ ತನ್ನ ಶಸ್ತ್ರಾಸ್ತ್ರಗಳನ್ನೆಲ್ಲ ಇಟ್ಟು ಸೀದಾ ಶಬರಿಮಲೈಗೆ ತೆರಳಿದ ಅಯ್ಯಪ್ಪ ಅಲ್ಲಿ ಶಾಸ್ತನ ದೇವಾಲಯವನ್ನು ಪುನರ್ನಿಮಿಸುವಂತೆ ತನ್ನ ಸಹಚರರಿಗೆ ತಿಳಿಸಿ ಮಣಿಮಂಟಪದಲ್ಲಿ ತಪಸ್ಸಿಗೆ ತೊಡಗುತ್ತಾನೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಶುಭದಿನವಾದ ಮಕರ ಸಂಕ್ರಾಂತಿಯಂದು ಸ್ವತಃ ತಾನೇ ಶಾಸ್ತನ ಮೂರ್ತಿಯನ್ನು ಹೊಸದಾಗಿ ನಿರ್ಮಿಸಿದ ಶಬರಿಮಲೆಯ ದೇವಾಲಯದಲ್ಲಿ ಪ್ರತಿಷ್ಟಾಪಿಸುತ್ತಾನೆ. ಅಲ್ಲಿಂದ ಒಬ್ಬನೇ ಪೊನ್ನಂಬಲಮೇಡುವಿನ ಕಾಡಿಗೆ ತೆರಳಿದ ಅಯ್ಯಪ್ಪ ಜ್ಯೋತಿರೂಪದಲ್ಲಿ ಕೊನೆಯದಾಗಿ ದರ್ಶನ ನೀಡಿದನೆಂದು ಹೇಳಲಾಗುತ್ತದೆ. (ಇದರ ಪ್ರತೀಕವೇ ಈಗ ಬೆಟ್ಟದಲ್ಲಿ ಕಾಣುವ ಮಕರಜ್ಯೋತಿ, ಮಕರವಿಳಕ್ಕು ಎಂಬುದು ಪೂಜಾಕಾಲದಲ್ಲಿ ಆಕಾಶದಲ್ಲಿ ಕಾಣಿಸಿಕೊಳ್ಳುವ ನಕ್ಷತ್ರ. ಮಕರಜ್ಯೋತಿ ಮಾನವನಿರ್ಮಿತವೆಂದು ಬೊಬ್ಬೆಹೊಡೆಯುವವರಿಗೆ ಜ್ಯೋತಿ ಮತ್ತು ವಿಳಕ್ಕುಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲವೆಂದೇ ಅರ್ಥ). ಅದರಾಚೆ ಅಯ್ಯಪ್ಪನನ್ನು ಕಂಡವರಿಲ್ಲ. ಪಂಡಾಲಂನ ಜನರಿಗೆ ಬಾಲಕ ಅಯ್ಯಪ್ಪನು ಸ್ವತಃ ಧರ್ಮಶಾಸ್ತನ ಅವತಾರವೆಂದು ಮನವರಿಕೆಯಾಗುತ್ತದೆ. ಅಲ್ಲಿಂದಾಚೆ ಮಲೆಯಲ್ಲಿ ಶಾಸ್ತನ ರೂಪದಲ್ಲಿ ಸ್ವತಃ ಅಯ್ಯಪ್ಪನೇ ಪೂಜಿಸಲ್ಪಡುತ್ತಾನೆ. ಧರ್ಮಶಾಸ್ತನೆಂದರೆ ಧರ್ಮವನ್ನು ಶಾಸಿಸುವನೆಂದು. ನಾವಿಂದು ಅಯ್ಯಪ್ಪನದೆಂದು ಕೇಳುವ ಕಥೆಯೆಲ್ಲ ಅವನ ಜೊತೆ ಸಮೀಕರಿಸಲ್ಪಟ್ಟ ಹರಿಹರ ಪುತ್ರ ಧರ್ಮಶಾಸ್ತನದ್ದು. ಯಜುರ್ವೇದದಲ್ಲೂ ’ಶಾಸ್ತಃ ಅಧಿಪತಿರ್ ವೋ ಅಸ್ತು’ ಎಂದು ಶಾಸ್ತನನ್ನು ಸ್ತುತಿಸಲಾಗಿದೆ. ಕಾಲಾಗ್ನಿ ರುದ್ರೋಪನಿಷತ್, ಮೈತ್ರೇಯಿ ಉಪನಿಷತ್, ತೈತ್ತರೀಯ ಅರಣ್ಯಕದಲ್ಲೂ ಶಾಸ್ತನ ಕುರಿತಾದ ಶ್ಲೋಕಗಳಿವೆ. ಶಾಸ್ತನೆಂಬ ಹೆಸರು ಕೇವಲ ಭಾರತದ ಮಾತ್ರವಲ್ಲ ಪ್ರಾಚೀನ ಗ್ರೀಕಿನ ಪುರಾಣಗಳಲ್ಲೂ ಪ್ರಸ್ತಾಪಿಸಲ್ಪಟ್ಟಿದೆ. ಇಜಿಪ್ಟಿನ ಕೆಂಪು ಸಮುದ್ರದ ಹತ್ತಿರ ಕಜಿರ್-ಅಲ್-ಖದಿಮ್ ಎಂಬ ಸ್ಥಳದಲ್ಲಿ ದೊರಕಿದ  ಕ್ರಿ.ಪೂ ೨ನೇ ಶತಮಾನದ ಪ್ಯಾಪಿರಸ್ ದಾಖಲೆಗಳಲ್ಲೂ ಶಾಸ್ತನ ಉಲ್ಲೇಖವಿದೆ. ತಮಿಳಿನ ಪ್ರಾಚೀನ ಶೈವ ಭಕ್ತಿ ಸಾಹಿತ್ಯವಾದ ತಿರುಮುರೈನ ತೇವಾರಮ್‌ನಲ್ಲಿ ಶಾಸ್ತನನ್ನು ಶಿವನ ಮಗನೆನ್ನಲಾಗಿದೆ("ಶಾಸ್ತಾನೈ ಮಗನೈ ವೈದಾರ್). ನನ್ನ ಅನುಮಾನದಂತೆ ತುಳುನಾಡಿನಲ್ಲಿ ಸುಬ್ರಹ್ಮಣ್ಯ, ಮಲಯಾಳದೇಶದ ಶಾಸ್ತ ಮತ್ತು ತಮಿಳಿನ ಬ್ರಹ್ಮಶಾಸ್ತನೆಂದು ಕರೆಯಲ್ಪಡುವ ಮುರುಗ ಒಂದೇ ಆಗಿರಬಹುದೇ?(ನನ್ನ ಅನುಮಾನವಷ್ಟೇ!). ಭಗವದ್ಗೀತೆಯಂತೆಯೇ ಬ್ರಹ್ಮಾಂಡಪುರಾಣದ ಒಂದು ಭಾಗವಾದ
    
ಕಂಚಿಯಲ್ಲಿರುವ ಶಾಸ್ತನ ಮೂರ್ತಿ
’ಭೂತನಾಥೋಪಾಖ್ಯಾನ’ವು ಶಾಸ್ತನು ರಾಜಶೇಖರ ಪಾಂಡ್ಯನಿಗೆ ನೀಡಿದ ಉಪದೇಶಗಳ ಸಂಗ್ರಹ. ಇನ್ನು ಶಬರಿಮಲೆಯು ಬೌದ್ಧ ದೇವಾಲಯವೆಂದೂ, ಶಾಸ್ತನೆನ್ನುವುವುದು ಬುದ್ಧನ ಹೆಸರೆಂದೂ ವಾದ ಮಾಡುವ ಅಂಬೇಡ್ಕರ್‌ವಾದಿಗಳೂ ಇದ್ದಾರೆ(http://www.ambedkar.org/Tirupati/). ಬುದ್ಧನಿಗೆ ಶಾಸ್ತನೆಂಬ ಹೆಸರಿರುವ ಉಲ್ಲೇಖ ದೊರಕುವುದು ಅಮರಕೋಶದ मुनींद्रः श्रीधनः शास्ता मुनिः शाक्यमुनिस्तु यः ಎಂಬ ಶ್ಲೋಕದಲ್ಲಿ. ಹಾಗೆ ನೋಡಿದರೆ ಅದನ್ನು ರಚಿಸಿದ ಅಮರಸಿಂಹ ಮೂಲತಃ ಜೈನ. ಇದೇ ಅಮರಕೋಶವು ಭಗವಾನ್ ಬುದ್ಧ ಮತ್ತು ಗೌತಮ ಬುದ್ಧರಿಬ್ಬರೂ ಬೇರೆಬೇರೆ, ಮೂಲ ಬುದ್ಧನು ವಿಷ್ಣುವಿನ ಅವತಾರವಾದರೆ ಗೌತಮನೊಬ್ಬ ಸಾಧಾರಣ ಮನುಷ್ಯನೆನ್ನುತ್ತದೆ. ಜೊತೆಗೆ ’ತಥಾಗಥ’ನೆನ್ನುವುದು ಬುದ್ಧನದ್ದಲ್ಲದೇ ಮಹಾವೀರನ ಹೆಸರೆನ್ನುತ್ತದೆ. ಹಾಗಾದರೆ ಬುದ್ಧ ಮಹಾವೀರರಿಬ್ಬರೂ ಒಬ್ಬರೇ ಆಥವಾ ಬುದ್ಧನೆನ್ನಲಾಗುವ ಎಷ್ಟು ವ್ಯಕ್ತಿಗಳಿದ್ದರು?
ವಾವರ ಮತ್ತು ಅಯ್ಯಪ್ಪ
  ಶಬರಿಮಲೈನಲ್ಲಿ ಅಯ್ಯಪ್ಪನ ಜೊತೆ ವಾವರಸ್ವಾಮಿಯಾಗಿ ಪೂಜಿಸಲ್ಪಡುವವನು ಆತನ ಸಹಚರ ಮುಸ್ಲಿಂ ಯೋಧ ವಾವರ. ಈ ವಾವರ ಯಾರೆಂಬ ಬಗ್ಗೆ ಬಹಳಷ್ಟು ಕಥೆಗಳೂ ಜೊತೆಗೊಂದಿಷ್ಟು ಗೊಂದಲಗಳೂ ಇವೆ. ಈತನ ೧೫ನೇ ಪೀಳಿಗೆಯವರೆನ್ನಲಾಗುವ ವೆಟ್ಟಿಪ್ಲಕ್ಕಲ್ ಕುಟುಂಬದವರು ಅಲಪ್ಪುಳದ ಹತ್ತಿರ ವಾಸಿಸುತ್ತಿದ್ದಾರೆ. ಶಬರಿಮಲೆಯಲ್ಲಿರುವ ವಾವರನ ದೇವಾಲಯದ ಪೂಜೆಯ ಉಸ್ತುವಾರಿ ಇವರದ್ದೇ. ಒಂದು ಕಥೆಯ ಪ್ರಕಾರ ಪಂಡಾಲಂನ ಮೇಲೆ ದಾಳಿ ಮಾಡಿದ ವಾವರನನ್ನು ಅಯ್ಯಪ್ಪನು ಸೋಲಿಸುತ್ತಾನೆ. ಈ ಘಟನೆಯ ನಂತರ ಅವರಿಬ್ಬರೂ ಒಳ್ಳೆಯ ಗೆಳೆಯರಾಗುತ್ತಾರೆ. ಈತ ಕೇರಳದಲ್ಲಿ ಇಸ್ಲಾಮಿನ ಪ್ರಸಾರಕ್ಕಾಗಿ ಬಂದಿದ ಹಜರತ್ ವಾವರ್ ಬಾಬಾ ಎಂಬ ಸಂತನಾಗಿದ್ದನೆಂಬ ವಾದವೂ ಇದೆ. ಆದರೆ ಹೆಚ್ಚಿನ ದಾಖಲೆಗಳು ಮತ್ತು ಜನಪದ ಕಥೆಗಳು ಹೇಳುವಂತೆ ಈತನೊಬ್ಬ ಅರೇಬಿಯಾ ಮೂಲದ ಕಡಲುಗಳ್ಳ. ಕೇರಳಕ್ಕೂ ಅರಬ್ಬಿಗೂ ಮಧ್ಯ ಸಾವಿರಾರು ವರ್ಷದಿಂದ ಜಲಮಾರ್ಗದ ಮೂಲಕ ವ್ಯಾಪಾರ ವ್ಯವಹಾರದ ನಂಟಿತ್ತು. ಇಸ್ಲಾಮ್ ಭಾರತದಲ್ಲಿ ಮೊದಲು ಕಾಲಿಟ್ಟಿದ್ದೇ ಕೇರಳದ ಮಲಬಾರಿನಲ್ಲಿ. ಇಲ್ಲಿನ ಕಾಳುಮೆಣಸಿನ ರುಚಿಯ ಬೆನ್ನತ್ತಿ ಬಂದಿದ್ದ ವಾಸ್ಕೋಡಗಾಮನೂ ಒಬ್ಬ ಅಪ್ಪಟ ಕಡಲ್ಗಳ್ಳನೇ. ಕಡಲ್ಗಳ್ಳನಾಗಿ ಕೊಳ್ಳೆಹೊಡೆಯಲು ಕೇರಳದ ಕಾಯಂಕುಳಂನ ತೀರಕ್ಕೆ ವಾವರ ಬಂದಿದ್ದನಂತೆ. ಈತ ಅರಬಿನ ವ್ಯಾಪಾರಿಯಾಗಿದ್ದನೆಂಬ ವಾದಕ್ಕೆ ಪುಷ್ಟಿಕೊಡುವುದೇ ಇಂದಿಗೂ ಶಬರಿಮಲೆಗೆ ಇರುಮುಡಿ ಕಟ್ಟುವವರು ವಾವರನಿಗಾಗಿ ಕಾಳುಮೆಣಸನ್ನು ತೆಗೆದುಕೊಂಡು ಹೋಗಿ ಸಮರ್ಪಿಸುವುದು. ಕಾಯಂಕುಳಂನ ರಾಜನ ಕೋರಿಕೆಯ ಮೇರೆಗೆ ಅಯ್ಯಪ್ಪನು ವಾವರನನ್ನು ಯುದ್ಧದಲ್ಲಿ ಸೋಲಿಸಿ ತನ್ನ ಅನುಯಾಯಿಯಾಗಿಸಿಕೊಳ್ಳುತ್ತಾನೆ.  ಮುಂದೆ ಅಯ್ಯಪ್ಪ ವಾವರರಿಬ್ಬರೂ ಗಾಢ ಸ್ನೇಹಿತರಾದರು. ವಾವರನಿಗೊಂದು ದೇವಾಲಯವನ್ನು ನಿರ್ಮಿಸುವಂತೆಯೂ ತನ್ನನ್ನು ಪೂಜಿಸುವ ಮೊದಲು ವಾವರನನ್ನು ದರ್ಶಿಸುವಂತೆಯೂ ಅಯ್ಯಪ್ಪ ತನ್ನ ಭಕ್ತರಿಗೆ ತಿಳಿಸಿದನೆಂದು ನಂಬಿಕೆ. ಇದೇ ಕಾರಣಕ್ಕೆ ಅಯ್ಯಪ್ಪನ ದೇವಾಲಯಕ್ಕೆ ತೆರಳುವ ಮುನ್ನ ಭಕ್ತರು ಪಕ್ಕದಲ್ಲಿರುವ ವಾವರನ ಮಸೀದಿಗೆ ಭೇಟಿಕೊಡುವ ಸಂಪ್ರದಾಯವಿದೆ.
      ನರರ ನಡುವಿನ ಅಡ್ಡಗೋಡೆಗಳನ್ನು ಕುಟ್ಟಿ ಕೆಡುಹಿ, ಕಂದಕಗಳನ್ನು ತುಂಬಿ, ಜನಕೋಟಿಯನ್ನು ಒಂದು ದಿವ್ಯ ಆದರ್ಶ ಸಾಧನೆಗಾಗಿ ಒಗ್ಗೂಡಿಸಿದ ಅದ್ಭುತ ಶಕ್ತಿ ಅಯ್ಯಪ್ಪನದು. ಮಾಲಾಧಾರಣೆ, ಮಂಡಲವ್ರತ, ಶಬರಿಮಲೆ ಯಾತ್ರೆ, ಮಕರ ಜ್ಯೋತಿ ದರ್ಶನ, ಮಕರ ಬೆಳಕು ಉತ್ಸವದಲ್ಲಿ ಪಾಲ್ಗೊಳ್ಳುವಿಕೆ - ಇವೆಲ್ಲ ಇಂದು ಲಕ್ಷ-ಲಕ್ಷ ಅಯ್ಯಪ್ಪ ಭಕ್ತರಿಗೆ ಮುದನೀಡುವ ಸಂಗತಿಗಳು. ದೇಶ-ಭಾಷೆ ಯಾವುದೇ ಇರಲಿ, ಪರಸ್ಪರ ಒಡನಾಡಿಗಳಾಗಿ ಶಬರಗಿರಿ ಯಾತ್ರೆ ಮಾಡಿ, ಸ್ವಾಮಿದರ್ಶನ ಪಡೆದು ಪುಲಕಿತರಾಗಿ ಬರುವ ಭಕ್ತಾದಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದೇಶಾದ್ಯಂತ ಹೆಚ್ಚುತ್ತಿದೆ. ಇದು ಜನಜೀವನದಲ್ಲಿ ಹಿಂದೂ ಧರ್ಮದ ಅಂತಸ್ಸತ್ತ್ವದ ಅಭಿವ್ಯಕ್ತಿಗೊಂದು ಜ್ವಲಂತ ನಿದರ್ಶನ.

Friday, December 6, 2013

ಇಲ್ಲದ ಅಶೋಕನನ್ನು ಪ್ರಚ್ಛನ್ನ ಬೌದ್ಧನನ್ನಾಗಿಸಿದ್ಯಾರು?

 
ಅಶೋಕನ ಸಾ೦ದರ್ಭಿಕ ಚಿತ್ರ(ಕೃಪೆ: ಗೂಗಲ್)
       ಗೌತಮ ಬುದ್ಧನ ಜನ್ಮಸ್ಥಳವಾದ ನೇಪಾಳದ ಲುಂಬಿನಿಯಲ್ಲಿ ಅತ್ಯಂತ ಹಳೆಯ ಬೌದ್ಧ ದೇಗುಲವೊಂದು ಪತ್ತೆಯಾಗಿದೆಯಂತೆ. ಇದು ಬುದ್ಧ ಬದುಕಿದ್ದ ಅವಧಿ ಬಗೆಗೆ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾಮಾನ್ಯವಾಗಿ ನಂಬಲಾಗುವಂತೆ ಬುದ್ಧ ಹುಟ್ಟಿದ್ದ ಕಾಲ ಕ್ರಿ.ಪೂ 483 ರಿ೦ದ 563ರ ನಡುವೆ. ಇಲ್ಲಿಯೇ ವಿವಾದ ಶುರುವಾಗುವುದು. ಈ ಕಾಲವನ್ನು ನಿಷ್ಕರ್ಷೆಗೊಳಿಸಿದ್ದು ಸಾಮ್ರಾಟ ಅಶೋಕನ ಕಾಲವನ್ನಾಧರಿಸಿ. ಮಹಾವಂಶ ಮತ್ತು ದೀಪವಂಶಗಳೆಂಬ ಸಿಂಹಳೀಯ ಕೃತಿಗಳಲ್ಲಿ ಬುದ್ಧನ ನಿರ್ವಾಣದ 218ನೇ ವರ್ಷದಲ್ಲಿ ಅಶೋಕನು ಬೌದ್ಧಮತವನ್ನು ಸ್ವೀಕರಿಸಿದನೆನ್ನಲಾಗಿದೆ. ಈ ಅಶೋಕನ ಕಾಲವನ್ನು ನಿರ್ಧರಿಸಿದ್ದು ಅವನಜ್ಜ ಚಂದ್ರಗುಪ್ತನನ್ನು ಭೇಟಿಯಾದ ಮೆಗಸ್ತನೀಸ್‌ನ ಕಾಲದಿಂದ. ಆದರೆ ಮೆಗಸ್ತನೀಸ್‌ನ ಗ್ರೀಕ್ ದಾಖಲೆಗಳಲ್ಲಿರುವ 'ಸ್ಯಾಂಡ್ರೋಕಾಟಸ್' ಎಂಬ ಹೆಸರು ಮೌರ್ಯರ ಚಂದ್ರಗುಪ್ತನದ್ದಾಗಿರದೇ ಗುಪ್ತರ ಮೊದಲ ಚಂದ್ರಗುಪ್ತನದ್ದೆನ್ನಲು ಬಲವಾದ ಆಧಾರಗಳಿವೆ. ಈ ಚಂದ್ರಗುಪ್ತ 'ಜಂಡ್ರಮಸ್‌'ನ ಮಗನೂ 'ಸ್ಯಾಂಡ್ರೋಸಿಪ್ಟಸ್‌'ನ ತಂದೆಯೆಂದಿದೆ. 'ಜಂಡ್ರಮಸ್‌' ಎಂಬುದು ಗುಪ್ತರ ಮೊದಲ ಚಂದ್ರಗುಪ್ತನ ತಾಯಿ ಚಂದ್ರಮಸ್ ಮತ್ತು  'ಸ್ಯಾಂಡ್ರೋಸಿಪ್ಟಸ್‌' ಎಂಬುದು ಚಂದ್ರಗುಪ್ತನ ಮಗನಾದ ಸಮುದ್ರಗುಪ್ತನ ಗ್ರೀಕ್ ಅಪಭೃಂಶಗಳು. ಮೆಗಸ್ತನಿಸ್ ಚಂದ್ರಗುಪ್ತನ ರಾಜಧಾನಿ 'ಪಾಲಿಬೊತ್ರಾ' ಎನ್ನುತ್ತಾನೆ. ಆದು ಗುಪ್ತರ ರಾಜಧಾನಿಯಾದ ಪಾಟಲೀಪುತ್ರವೇ ಹೊರತೂ ಮೌರ್ಯರ ಗಿರಿವ್ರಜವಲ್ಲ. ಇಂಥ ಗೊಂದಲಗಳಿಗುತ್ತರಿಸಲು ಅಶೋಕನನ್ನು ಬಣ್ಣಿಸುವ ಯಾವ ಇತಿಹಾಸಕಾರನಿಗೂ ಆಗಿಲ್ಲ.  ಬುದ್ಧನ ಕಾಲವೇ ಬದಲಾದ ಮೇಲೆ, ಮೆಗಸ್ತನಿಸ್ ಭೇಟೀಯಾಗಿದ್ದು ಚಂದ್ರಗುಪ್ತ ಮೌರ್ಯನನ್ನಲ್ಲವೆಂದ ಮೇಲೆ ಅಶೋಕ ಯಾರು? ಯಾವ ಕಾಲದಲ್ಲಿದ್ದ? ಎಂಬ ಜಿಜ್ಞಾಸೆ ಶುರುವಾಗುವುದು ಸಹಜವೇ. ಅವನ ಕಾಲ ಬದಲಾದ ಬಗ್ಗೆ ಮತ್ತೆ ನೋಡೋಣ.  
     ಈಗಿನ ವಿಷಯವೆ೦ದರೆ, ಅಶೋಕನಿದ್ದುದೇ ಹೌದೆಂದಿಟ್ಟುಕೊಳ್ಳೋಣ. ಹಾಗಾದರೆ ಆತ ಬೌದ್ಧನಾಗಿದ್ದನೇ ಅಥವಾ ಜೈನನಾಗಿದ್ದನೇ ಎಂದು. ಅಶೋಕನು ಜೈನನೇ ಆಗಿರಬಹುದೆಂಬ ಊಹೆಯ ಮೊದಲ ಕಾರಣವೇ ಆತನ ಅಜ್ಜನೂ, ಮೌರ್ಯರ ಮೊದಲ ಅರಸನೂ ಆಗಿದ್ದ ಚಂದ್ರಗುಪ್ತಮೌರ್ಯನು ರಾಜ್ಯವನ್ನು ತೊರೆದು ಜೈನಸನ್ಯಾಸಿಯಾಗಿದ್ದು, ಈತನ ಮಗ ಬಿಂದುಸಾರನೂ ಜೈನಮತವನ್ನು ಸ್ವೀಕರಿಸಿದ್ದ. ಸಹಜವಾಗಿಯೇ ಜೈನಮತದ ನಂಬಿಕೆಗಳಲ್ಲೇ ಅಶೋಕ ಬೆಳೆದ. ಅವನದ್ದೆನ್ನುವ ಶಾಸನಗಳಲ್ಲಿರುವಂತೆ ಅವನಿಗೆ ಸಸ್ಯಾಹಾರದ ಬಗ್ಗೆ ಒಲವಿತ್ತು,  ಆತ ಸ್ವತಃ ಸಸ್ಯಾಹಾರಿಯಾಗಿದ್ದ, ತನ್ನ ರಾಜ್ಯದಲ್ಲಿ ಪ್ರಾಣಿವಧೆಯನ್ನು ನಿಷೇಧಿಸಿದ್ದನಂತೆ. ಇವೆರಡೂ ಅಪ್ಪಟ ಜೈನ ತತ್ತ್ವಗಳೇ. ಜೈನರಷ್ಟು ಪ್ರಾಣಿಪ್ರೀತಿಯನ್ನು ಬೇರಾವ ಮತದಲ್ಲೂ ಕಾಣಲು ಸಾಧ್ಯವಿಲ್ಲ. ಖರೋಷ್ತಿ ಲಿಪಿಯಲ್ಲಿ, ಗ್ರೀಕ್ ಮತ್ತು ಅರಾಮೈಕ್ ಭಾಷೆಯಲ್ಲಿರುವ ಕ೦ದಹಾರ್ ಶಾಸನ ಈತ ಮೀನುಗಾರಿಕೆಯನ್ನೂ, ಬೇಟೆಯನ್ನೂ ನಿಷೇಧಿಸಿದ್ದನೆನ್ನುತ್ತದೆ. ಇನ್ನು ಬೌದ್ಧಮತಕ್ಕೂ ಸಸ್ಯಾಹಾರಕ್ಕೂ ಎಲ್ಲಿಂದೆಲ್ಲಿಯ ಸಂಬಂಧ. ಮಹಾಪರಿನಿಬ್ಬಾಣ ಸುತ್ತ, ಮಜ್ಜಿಮ ನಿಕಾಯಗಳೇ ಇತ್ಯಾದಿಗಳಲ್ಲಿ ಉಲ್ಲೇಖಿಸಿದಂತೆ ಸ್ವತಃ ಬುದ್ಧನ ಮರಣ ಸಂಬಂಧಿಸಿದ್ದೇ ಕೊಳೆತ ಹಂದಿಮಾಂಸವನ್ನು ತಿಂದುಂಟಾದ ಅತಿಸಾರದಿಂದ. ಅಶೋಕನ ಹಿರಿಯ ಪತ್ನಿ ಬೌದ್ಧಮತೀಯಳಾದ ಶಾಕ್ಯಕುಮಾರಿ. ಈಕೆಯ ಜೋಡಿ ಮಕ್ಕಳು ಮಹೇಂದ್ರ ಮತ್ತು ಸಂಘಮಿತ್ರಾ. ಮಾತ್ರವಲ್ಲ ಈಕೆಗಿನ್ನೂ ಅನೇಕ ಮಕ್ಕಳಿದ್ದರು. ಅಶೋಕನ ಕಿರಿಯ
ಅವಲೋಕಿತೇಶ್ವರ
ಪತ್ನಿ ಜೈನಳಾದ ಪದ್ಮಾವತಿ. ಈಕೆಯ ಮಗ ಕುನಾಲನು ಅಶೋಕನ ರಾಜಾಜ್ಞೆಯ ಫಲವಾಗಿ ಕಣ್ಣುಕಳೆದುಕೊಂಡನಂತೆ. ತನ್ನ ಹಿರಿಯ ಪತ್ನಿಗೆ ಮಕ್ಕಳಿದ್ದಾಗ್ಯೂ ಸಹ ಅಶೋಕ ತನ್ನ ನಂತರ ಜೈನರಾಣಿ ಪದ್ಮಾವತಿಯ ಮೊಮ್ಮಗನೂ, ಕುನಾಲನ ಮಗನೂ ಆದಂತಹ ಸಂಪ್ರತಿಗೆ ಪಟ್ಟಕಟ್ಟಿದ್ದೇಕೆ? ಇದಕ್ಕಾತನಿಗೆ ಜೈನಮತದ ಬಗ್ಗೆ ಇದ್ದ ಅಪಾರ ಒಲವೇ ಕಾರಣವೇ? ಮಹೇಂದ್ರ ಮತ್ತು ಸಂಘಮಿತ್ರರು ಬೌದ್ಧಮತವನ್ನು ಪ್ರಸಾರಗೊಳಿಸಲು ಶ್ರೀಲಂಕಾಕ್ಕೆ ತೆರಳಿದರೆಂದು ನಂಬಲಾಗುವುದಾದರೂ ಅಶೋಕನ ಕಾಲದ ಮಾತ್ರವಲ್ಲ ಸಿಂಹಳೀಯರ ಯಾವ ದಾಖಲೆಗಳಲ್ಲೂ ಅದರ ಉಲ್ಲೇಖವಿಲ್ಲ. ಖ್ಯಾತ ಇತಿಹಾಸಕಾರ V.  A. Smith ಸೇರಿ ಅನೇಕರು ಶ್ರೀಲಂಕಾ ಮಹೇಂದ್ರನಿಂದ ಮತಾಂತರಗೊಂಡಿತೆಂಬ ವಾದವನ್ನೇ ನಿರಾಕರಿಸುತ್ತಾರೆ. ವಿದೇಶಗಳಲ್ಲಿ ಅಶೋಕನು ಧರ್ಮಪ್ರಸಾರಕ್ಕೆ ವಿದ್ವಾಂಸರನ್ನು ಕಳುಹಿಸಿದ್ದನ್ನು ಉಲ್ಲೇಖಿಸುವ ಆತನದ್ದೆನ್ನಲಾಗುವ ೨ ಮತ್ತು ೧೩ನೇ ಶಾಸನಗಳು ಈ ಕುರಿತು ಏನನ್ನೂ ತಿಳಿಸುವುದಿಲ್ಲ ಮಾತ್ರವಲ್ಲ ಅಶೋಕನ ಯಾವ ಶಾಸನಗಳಲ್ಲೂ ಅವರಿಬ್ಬರ ಹೆಸರಿಲ್ಲ. ಮೇಲಿನೆರಡೂ ಶಾಸನಗಳಲ್ಲಿ ತಂಬಪಣ್ಣಿ ಅಥವಾ ತಾಮ್ರಪರ್ಣಿಯ ತನಕ ಶ್ರವಣ ಧರ್ಮದ ಪ್ರಚಾರಕರು ತಲುಪಿದ ಹೇಳಿಕೆಯಿದೆ. ಆದರೆ ಇದಿದ್ದುದು ತಮಿಳ್ನಾಡಿನ ತಿರುನಲ್ವೇಲಿಯ ಸಮೀಪ. ಅಲ್ಲಿಗೆ ಅಶೋಕನ ಧರ್ಮಪ್ರಚಾರಕರು ತಮಿಳ್ನಾಡಿನ ತಾಮ್ರಪರ್‍ಣಿ ನದಿಯನ್ನು ದಾಟಲಿಲ್ಲವೆಂದಾಯ್ತು. ಅದೂ ಅಲ್ಲದೇ ಶ್ರವಣವೆಂಬುದು ಕೇವಲ ಬೌದ್ಧಮತ ಮಾತ್ರವಲ್ಲ. ಜೈನ, ಬೌದ್ಧ, ಚಾರ್ವಾಕ, ಅಜೀವಿಕ, ಗೋಸಲ ಸೇರಿದಂತೆ ಎಲ್ಲ ಅವೈದಿಕ ಮತಗಳೂ ಶ್ರವಣಮತಗಳೆಂದೇ ಕರೆಯಲ್ಪಡುತ್ತವೆ. ಅಶೋಕನ ಮಗ ಮಹೇಂದ್ರನು ಹುಣ್ಣಿಮೆಯ ರಾತ್ರಿಯಂದು ರಾಜಹಂಸದಂತೆ ಆಕಾಶಮಾರ್ಗವಾಗಿ ಸಿಂಹಳವನ್ನು ತಲುಪಿ, ತನ್ನ ಮೊದಲ ಭೇಟಿಯಲ್ಲೇ ಮಿಹಿಂತಲೆಯಲ್ಲಿ ಅಲ್ಲಿನ ರಾಜ ದೇವಾನಾಂಪಿಯತಿಸ್ಸನನ್ನೂ ಅವನ ನಲವತ್ತು ಸಾವಿರ ಅನುಯಾಯಿಗಳನ್ನೂ ಮತಾಂತರಿಸಿದನೆಂಬ ದೀಪವಂಸದ ಕಥೆಯು ಚಂದಮಾಮ, ಬಾಲಮಿತ್ರದಷ್ಟೇ ರಸವತ್ತಾಗಿದೆಯೇ ಹೊರತೂ ಬೇರೇನೂ ಅಲ್ಲ. ಬಿಂದುಸಾರನ ಮಕ್ಕಳ ಸಂಖ್ಯೆಯು ಒಂದೆಡೆ ೯೦, ಇನ್ನೊಂದೆಡೆ ೯೯, ಮತ್ತೊಂದೆಡೆ ೧೦೧ ಹೀಗೆ ಬೇರೆ ಬೇರೆ ಕಡೆ ಬೇರೆಬೇರೆಯಾಗಿದೆ. ಇರಲಿ ಬಿಡಿ. ತನ್ನ 90+ ಅಣ್ಣತಮ್ಮಂದಿರನ್ನೆಲ್ಲರನ್ನೂ ಕೊಂದು ಅಶೋಕ ಪಟ್ಟಕ್ಕೇರಿದ್ದ. ಬೌದ್ಧ-ಜೈನಮತಗಳು ಪರಸ್ಪರ ವಿರೋಧಿಗಳೆಂದೇ ಪರಿಗಣಿಸಲ್ಪಡುತ್ತಿದ್ದ ಆ ಕಾಲದಲ್ಲಿ ಜೈನಸಂಪ್ರದಾಯದ ಸಂಪ್ರತಿ ಪಟ್ಟಕ್ಕೇರಿದ್ದರಿಂದ ಬೌದ್ಧಾನುಯಾಯಿ ಮಹೇಂದ್ರನೇನಾದರೂ ಕೊಲ್ಲಲ್ಪಡುವ ಭಯದಿಂದ ದೇಶಬಿಟ್ಟು ತೆರಳಿರಬಹುದೇ?
      ಅಶೋಕನ ರಾಜ್ಯದಲ್ಲಿ ವೈದಿಕ, ಬೌದ್ಧ, ಜೈನ, ನಾಸ್ತಿಕ ಅಜೀವಿಕ ಮತಗಳು ಸಮಾನ ಪ್ರಾಮುಖ್ಯತೆಯನ್ನು ಪಡೆದಿದ್ದವು. ಎಲ್ಲ ಮತಗಳಿಗೂ, ಅವುಗಳ ಪ್ರಚಾರಕ್ಕೂ ಅಶೋಕ ಮಹತ್ವವನ್ನು ನೀಡಿದ್ದ. ತನ್ನ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳಲು ವಿವಿಧ ಮತಪಂಡಿತರುಗಳನ್ನೂ, ಮಿಶನರಿಗಳನ್ನೂ ಈತ ವಿದೇಶಗಳಿಗೆ ಕಳುಹಿಸಿದ್ದ. ಬೇರೆ ದೇಶಗಳಲ್ಲಿ ಚಿಕಿತ್ಸಾಲಯಗಳನ್ನು ಸ್ಥಾಪಿಸಿ, ಜನಸೇವೆ ಮಾಡಿ ತಮ್ಮ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳುವ ಅಶೋಕನ ನೀತಿಯನ್ನೇ ಈಗಿನ ಕಾಲದ ಹೆಚ್ಚಿನ ಮಿಶನರಿಗಳೆಲ್ಲ ಪಾಲಿಸುತ್ತಿರುವುದು. ಸರಿಸುಮಾರು ಕ್ರಿ.ಪೂ ಮೂರನೇ ಶತಮಾನದ ಕಾಲದಲ್ಲೇ ರೋಮನ್, ಪರ್ಶಿಯನ್ ಸಾಮ್ರಾಜ್ಯಗಳಲ್ಲಿ ಋಗ್ವೇದಕಾಲದ ದೇವತೆಯಾಗಿದ್ದ ಮಿತ್ರನನ್ನು ಪೂಜಿಸುವ ರೋಮನ್ ಮಿತ್ರಾಯಿಸಮ್ ಮತ್ತು  ಪರ್ಶಿಯನ್ ಮಿತ್ರಾಯಿಸಮ್ ಎಂಬ ಮತಗಳು ಪ್ರವರ್ಧಮಾನಕ್ಕೆ ಬ೦ದವು. ಭಾರತದಿಂದ ರೋಮ್ ಸಾಮ್ರಾಜ್ಯಕ್ಕೆ ಹಬ್ಬಿದ್ದ ಮಿತ್ರಾಯಿಸಂ ಮುಂದೆ ಕ್ರೈಸ್ತ ಮತದ ಹುಟ್ಟಿಗೆ ಕಾರಣವಾಯ್ತೆಂಬ ವಾದಗಳೂ ಇವೆ. ಅಶೋಕನದ್ದೆನ್ನಲಾಗುವ ಶಾಸನಗಳಲ್ಲಿ ಐದು ಯವನ(ರೋಮನ್) ರಾಜರುಗಳ ಹೆಸರುಗಳಿವೆ. ಹಾಗೆಂದು ಅವನ ಕಾಲದ ಯಾವ ಗ್ರೀಕ್ ದಾಖಲೆಗಳಲ್ಲೂ ಅಶೋಕನ ಹೆಸರೂ ಇಲ್ಲ, ಆತನ ಬೌದ್ಧಮತದ ಬಗ್ಗೆಯೂ ಇಲ್ಲದಿರುವುದೇಕೆ? ಆದರೂ ಅವನ ಕಾಲದಲ್ಲಿ ಬೌದ್ಧಮತವು ಭಾರತದಲ್ಲಿ ವ್ಯಾಪಕವಾಗಿಯೇ ಬೆಳೆಯುತ್ತಿತ್ತೆಂದಿಟ್ಟುಕೊಳ್ಳೋಣ. ಅಶೋಕನೂ ಅದಕ್ಕೆ ಅವಕಾಶವನ್ನೂ ಆದ್ಯತೆಯನ್ನೂ ನೀಡಿದ್ದ.
ಬೌದ್ಧಿಸಂನಲ್ಲಿ ಬ್ರಹ್ಮ ಮತ್ತು ಶಿವ
ಅಧಿಕಾರಸ್ಥಾನದಲ್ಲಿರುವವರನ್ನು ಓಲೈಸುವ ಮತಪಂಡಿತರ ಚಾಳಿ ಅಂದಿನಿಂದ ಇಂದಿನವರೆಗೂ ಹಾಗೇ ಉಳಿದುಕೊಂಡು ಬಂದಿದೆ. ನಿನ್ನೆ ಮೊನ್ನೆ ಯಡಿಯೂರಪ್ಪ, ಶೆಟ್ಟರ ಹಿಂದೆ ತಿರುಗುತ್ತಿದ್ದ ಆಸ್ಥಾನ ಜ್ಯೋತಿಷಿಗಳು ಇಂದು ಸಿದ್ದರಾಮಯ್ಯನ ಹಿಂದೆ ತಿರುಗಿದಂತೆ. ಅದೇ ಕಾರಣಕ್ಕೆ ಆತ ಪಾಟಲಿಪುತ್ರದಲ್ಲಿ ಮೊಗ್ಗಲಿಪುಟ್ಟಸಿಸ್ಯ ಭಿಕ್ಷು ಆಯೋಜಿಸಿದ್ದ ಮೂರನೇ ಶ್ರವಣ ಸಮ್ಮೇಳನದಲ್ಲಿ ಭಾಗವಹಿಸಿದ್ದಿರಬಹುದು. ಇನ್ನು ಆರ್ಯಮಂಜುಶ್ರೀಮೂಲಕಲ್ಪ ಮತ್ತು ದೀಪವಂಶಗಳಲ್ಲಿರುವಂತೆ ಸ್ವತಃ ಬುದ್ಧನೇ ತನ್ನ ಮರಣದ 218ನೇ ವರ್ಷದಲ್ಲಿ ಚಕ್ರವರ್ತಿಯೊಬ್ಬ ಬಂದು ತನಗಾಗಿ 84 ಸಾವಿರ ಸ್ತೂಪಗಳನ್ನು ನಿರ್ಮಿಸುವುದಾಗಿ ಹೇಳಿದ್ದನೆನ್ನುವುದು ಮೂರ್ತಿಪೂಜೆಯನ್ನು ಎಲ್ಲ ವಿಧಗಳಲ್ಲೂ ನಿರಾಕರಿಸಿದ ಬುದ್ಧನ ಮೂಲತತ್ತ್ವಗಳಿಗೆ ಮಾಡಿದ ಅವಮಾನವೇ ಸರಿ. ಮೂಲವೆಲ್ಲವನ್ನೂ ಬಿಟ್ಟು ಅಳಿದ ಧರ್ಮಗುರುಗಳ ಹೆಸರಲ್ಲಿ ಉಳಿದ ಜನ ತಮ್ಮ ಬೇಳೆಬೇಯಿಸಿಕೊಳ್ಳುವುದು ಹೊಸತೂ ಅಲ್ಲ, ಅದರಿಂದಲೇ ಇ೦ದಿನ ಧರ್ಮಗಳೆಲ್ಲ ಕೆಟ್ಟು ಕೆರ ಹಿಡಿಯುತ್ತಿರುವುದು ಸುಳ್ಳೂ ಅಲ್ಲ.
      ಇನ್ನು ಕಳಿ೦ಗ ಯುದ್ಧದ ವಾದವ೦ತೂ ವಿಚಿತ್ರ. ಕಳಿಂಗವು ಮೊದಲು ನಂದರ ವಶದಲ್ಲಿದ್ದು ಚಂದ್ರಗುಪ್ತನ ಕಾಲದಲ್ಲಿ ಸ್ವತಂತ್ರವಾಗಿತ್ತು. ಕಳಿಂಗ, ದಕ್ಷಿಣ ಭಾರತದ ತುದಿಯನ್ನು ಹೊರತುಪಡಿಸಿ ಈಗಿನ  ಪಾಕಿಸ್ತಾನ, ಅಫ್ಘಾನಿಸ್ತಾನಗಳನ್ನೂ ಒಳಗೊಂಡಿದ್ದ ಭಾರತದ ಬಹುಭಾಗ ಮೌರ್ಯಸಾಮ್ರಾಜ್ಯದ ತೆಕ್ಕೆಯಲ್ಲೇ ಇತ್ತೆನ್ನಲಾಗುತ್ತದೆ.  ಚಕ್ರವರ್ತಿಯಾದವನೊಬ್ಬನ ಪಾಲಿಗೆ ಯುದ್ಧ, ಸಾವು, ನೋವುಗಳು, ಆಸ್ತಿ-ಪಾಸ್ತಿನಾಶಗಳೆಲ್ಲ ಸಾಮಾನ್ಯ. ಅದು ಯಾವುದೇ ಯುದ್ಧದಲ್ಲಾಗಿರಬಹುದು. ಸ್ವಂತ
ಅಶೋಕನ ಕಾಲದ ಮೌರ್ಯ ಸಾಮ್ರಾಜ್ಯ
ಅಣ್ಣತಮ್ಮಂದಿರನ್ನು ಕೊಲೆಗೈದು ಪಟ್ಟಕ್ಕೇರಿದ, ತನಗೆ ನಿಷ್ಟರಲ್ಲವೆಂಬ ಅನುಮಾನದಿಂದ ೫೦೦ ಮಂತ್ರಿಗಳನ್ನು ಕೊಲ್ಲಿಸಿದ, ಹಿಟ್ಲರಿನ ಗ್ಯಾಸ್ ಚೇಂಬರಿನಂತೆ ಜನರನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲಲೆಂದೇ ಅಶೋಕನ ನರಕವೆಂಬ ಅರಮನೆಯೊಂದನ್ನೇ ಕಟ್ಟಿದ ಅಶೋಕಾ ದ ಗ್ರೇಟ್‌ನ ಪಾಲಿಗಂತೂ ಹೇಳುವುದೇ ಬೇಡ ಬಿಡಿ.
      ಅಶೋಕನ ಜೀವನದ ಬಗ್ಗೆ ಮಾಹಿತಿ ನೀಡುವ ಪ್ರಮುಖ ಗ್ರಂಥಗಳೆಂದರೆ ಮಥುರಾದ ಬೌದ್ಧಸನ್ಯಾಸಿಯೊಬ್ಬ ಕ್ರಿ.ಶ. 1ನೇ ಶತಮಾನದಲ್ಲಿ ಬರೆದಿದ್ದ ಅಶೋಕವದನ ಮತ್ತು ಕ್ರಿ.ಶ 5ನೇ ಶತಮಾನದಲ್ಲಿ ರಚಿತಗೊಂಡ ಪಾಲಿ ಭಾಷೆಯಲ್ಲಿರುವ ಸಿಂಹಳದ ಎರಡು ಕೃತಿಗಳಾದ ದೀಪವಂಶ ಹಾಗೂ ಮಹಾವಂಶಗಳು ಮಾತ್ರ. ಇವೆರಡೂ ಅಶೋಕನಿಗಿಂತ ಎಷ್ಟೋ ಕಾಲದ ನಂತರ ರಚನೆಗೊಂಡವು. ಬಿಟ್ಟರೆ ಅಶೋಕನದೆಂದು ಹೇಳಲಾಗುವ 14 ಮುಖ್ಯ ಶಾಸನಗಳು. ತಮಾಶೆಯೆಂದರೆ ಇವಾವುದರಲ್ಲೂ ಅಶೋಕನ ಕಳಿಂಗ ಯುದ್ಧದ ಬಗ್ಗೆ ಹಾಗೂ ಆತನ ಮಗನಾದ ಮಹೇಂದ್ರನ ಒ೦ದೇ ಒಂದು ಸಾಲು ಕೂಡ ಇಲ್ಲ. ಅದೂ ಅಲ್ಲದೇ ಅಶೋಕವದನದ ಪ್ರಕಾರ ಆತ ಪೌಂಡ್ರದೇಶದ ಹದಿನೆಂಟು ಸಾವಿರ ನಾಸ್ತಿಕವಾದಿ ಅಜೀವಿಕ ಪರಂಪರೆಯವರನ್ನು ಕೊಲ್ಲಿಸಿ, ಇನ್ನುಳಿದವರ ತಲೆಕಡಿದು ತಂದರೆ ತಲೆಗೆ ತಲಾ ಒಂದು ಬೆಳ್ಳಿನಾಣ್ಯವನ್ನು ಕೊಡುವುದಾಗಿ ಶಾಸನವನ್ನೂ ಹೊರಡಿಸಿದನಂತೆ. ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯಾಗಿ ಮೆರೆದ ಇಂಥ ಕ್ರೂರಿಯೊಬ್ಬನಿಗೆ ಪುಟ್ಟ ಕಳಿಂಗ ರಾಜ್ಯದ ವಿರುದ್ಧ ನಡೆದ ಯುದ್ಧದ ಸಾವು-ನೋವು ಏನೇನೂ ಆಗಿರಲಿಲ್ಲ. ಹಾಗೊಂದುವೇಳೆ ಯುದ್ಧದ ನಾಶದಿಂದ ಮನನೊಂದು ಅಹಿಂಸೆಯ ಹಾದಿ ಹಿಡಿಯಬೇಕೆಂದರೆ ಆತನ ಮೊದಲ ಆಯ್ಕೆ ಜೈನ ಮತವಾಗುತ್ತಿತ್ತೇ ಹೊರತೂ ಬೌದ್ಧಮತವಲ್ಲ. ಇನ್ನು ಪ್ರಾಣಿಬಲಿಯನ್ನು ನಿಷೇಧಿಸಿದ್ದನ್ನೇ ಮುಂದಿಟ್ಟುಕೊಂಡು ಆತ ಯಜ್ಞಯಾಗಾದಿಗಳ ವಿರೋಧಿಯಾದ ಬೌದ್ಧಮತಾನುಯಾಯಿಯೆಂದು ಹೇಳಲಾಗದು, ಈತನ 13ನೇ ಶಿಲಾಲೇಖ ನಿಜವಾಗಿಯೂ ಈತನದ್ದೇ? ಈತನದ್ದಾದರೆ ಅದನ್ನು ಕೆತ್ತಿಸಿದ್ದು ಪಟ್ಟಕ್ಕೆ ಬಂದ 14ನೇ ವರ್ಷದಲ್ಲೋ? ಅಥವಾ 28ನೇ ವರ್ಷದಲ್ಲೋ? ಅಥವಾ ಅದಕ್ಕೂ ನಂತರವೇ? ಎಂಬ ಚರ್ಚೆಯೇ ಇನ್ನೂ ನಿಂತಿಲ್ಲ. ಆದರೂ ಇದರಲ್ಲಿ ಕಾಣಬರುವ ’ಧರ್ಮ’ ಮತ್ತು ’ಉಪಾಸಕ’ ಶಬ್ದಗಳನ್ನು ಕೇವಲ ಬೌದ್ಧ ತತ್ತ್ವಶಾಸ್ತ್ರದೊಡನೆ ಸಮೀಕರಿಸುವುದೆಲ್ಲ ’ಎಡ’ದವರಿಗೆ ಮಾತ್ರ ಸಾಧ್ಯವೇನೋ. ಧರ್ಮವೆಂಬ ಶಬ್ದ ಕೌಟಿಲ್ಯನ ಅರ್ಥಶಾಸ್ತ್ರದಲ್ಲೂ ಬಹಳಷ್ಟು ಬಾರಿ ಬಂದಿದೆ. ಹಾಗೆಂದಮಾತ್ರಕ್ಕೆ ಅವನನ್ನೂ ಬೌದ್ಧನೆನ್ನಲಾದೀತೇ? ಇನ್ನು ’ಧರ್ಮ‌ಅಶೋಕ’ ಅಥವಾ ’ಧರ್ಮ‌ಅಶೋಕ ಬಿಂದುಸಾರ ಮೌರ್ಯ’ನೆಂದು ಅಶೋಕನು ತನ್ನನ್ನು ಕರೆದುಕೊಂಡಿದ್ದು ತನ್ನ ಹೆಸರನ್ನು ತನ್ನ ತಾಯಿಯಾದ ’ಮಹಾರಾಣಿ ಧರ್ಮಾ’ ಅಥವಾ ’ಶುಭದ್ರಾಂಗಿ’ಯೊಡನೆ ಸಮೀಕರಿಸಿಕೊಂಡಿದ್ದಷ್ಟೆ. ಬಿಂದುಸಾರನಿಗಿದ್ದ ಹಲವಾರು ಪತ್ನಿಯರ ನಡುವೆ ತನ್ನ ಮಾತೃಪರಂಪರೆಯನ್ನು ಗುರುತಿಸಲು ಹೀಗೆ ಮಾಡಿರಬಹುದು. ಆತನ ಹೆಚ್ಚಿನ ಶಾಸನಗಳ ಭಾಷೆ ’ಪ್ರಾಕೃತ’ ಮತ್ತು ಅದರ ಉಪಭಾಷೆಯಾದ ’ಮಾಗಧಿ’ಯೇ ಹೊರತೂ ಬೌದ್ಧರು ಬಳಸುತ್ತಿದ್ದ ’ಪಾಲಿ’ ಅಲ್ಲ. ಹಾಗೆ ನೋಡಿದರೆ ಅಶೋಕನದ್ದೆಂದು ಹೇಳಲಾಗುವ ಯಾವ ಶಾಸನಗಳಲ್ಲೂ ಅವನ ಹೆಸರಿನ ಉಲ್ಲೇಖವಿಲ್ಲ. ಅಲ್ಲಿ ಬಳಕೆಯಲ್ಲಿರುವುದು ’ದೇವಾನಂಪಿಯ’ ಮತ್ತು ’ಪಿಯದಸಿ’ ಎಂಬ ಹೆಸರುಗಳು. ಈ ಪಿಯದಸಿಯೇ ಅಶೋಕನೆನ್ನಲು ಇರುವ ಏಕೈಕ ಆಧಾರ ಸಿಂಹಳದ ದೀಪವಂಶ. ಬಿಟ್ಟರೆ 1915ರಲ್ಲಿ ಸಿಕ್ಕ ರಾಯಚೂರಿನ ಮಸ್ಕಿಯ ಶಿಲಾಲೇಖವೊಂದರಲ್ಲೇ ಅಶೋಕನ ಹೆಸರಿನ ಉಲ್ಲೇಖವಿರುವುದು. ಸಾರಾನಾಥದ ಅಶೋಕ ಸ್ತಂಭದಿಂದ(Lion Capital of Asoka) ನಾಲ್ಕು ಸಿಂಹಗಳ ಚಿಹ್ನೆಯನ್ನು ಭಾರತದ ಅಧಿಕೃತ ರಾಜಮುದ್ರೆಯನ್ನಾಗಿ ತೆಗೆದುಕೊಳ್ಳಲಾಗಿದೆ. ಹಿಂದೂಧರ್ಮದಲ್ಲಿ ಸಿಂಹವನ್ನು ರಾಜತ್ವ ಮತ್ತು ಶೌರ್ಯದ ಪ್ರತೀಕವಾಗಿ ಗಣಿಸಲಾಗಿದೆ. ಜೈನ ತತ್ತ್ವಶಾಸ್ತ್ರದಂತೆ ಸಿಂಹವು ಅವರ ೨೪ನೇ
ಸಾರಾನಾಥ ಸ್ತೂಪ
ತೀರ್ಥಂಕರ ಮಹಾವೀರನ ಪ್ರತೀಕವೂ ಹೌದು. ಜಾತಕ ಕಥೆಗಳನ್ನಾಗಲೀ, ಬೌದ್ಧ ತತ್ತ್ವಶಾಸ್ತ್ರವನ್ನಾಗಲೀ ತೆಗೆದು ನೋಡಿದರೆ ಬುದ್ಧನ ಪ್ರತೀಕವೇನಿದ್ದರೂ ಅದು ಜಿಂಕೆ ಅಥವಾ ಸಾರಂಗ. ಸಿಂಹಕ್ಕೂ ಶ್ರವಣಮತಕ್ಕೂ ಸಂಬಂಧವೇ ಇಲ್ಲ. ಸಿಂಹದ ಕೆಳಗಿರುವ ಆನೆಯೂ ಮತ್ತೆ ರಾಜತ್ವ ಹಾಗೂ ಶುಭಸೂಚನೆಯ ಪ್ರತೀಕವೇ. ಇಂದ್ರನ ಐರಾವತ ತನ್ನ ಗರ್ಭವನ್ನು ಪ್ರವೇಶಿಸುವಂತೆ ಮಹಾವೀರ ಮತ್ತು ಗೌತಮ ಬುದ್ಧರೀರ್ವರ ತಾಯಂದಿರಿಗೂ ಕನಸು ಬಿದ್ದಿತ್ತಂತೆ. ಅಂದಿನ ಕಾಲದಲ್ಲಿ ಶುಭಶಕುನದ ಇಂಥ ಸ್ವಪ್ನಗಳನ್ನು ಕಾಣುತ್ತಿದ್ದುದು ಸಹಜ. ಅಶೋಕ ಸ್ತಂಭದಲ್ಲಿರುವ ಆನೆ, ಕುದುರೆ, ಸಿಂಹ, ಎತ್ತುಗಳನ್ನೆಲ್ಲ ಹಿಂದೂ ಧರ್ಮಶಾಸ್ತ್ರವು ಜೈನ, ಬೌದ್ಧ ಮತಗಳು ಜನ್ಮತಾಳುವ ಸಹಸ್ರ ಸಹಸ್ರ ವರ್ಷಗಳಿಂದಲೂ ಬಲ, ವೇಗ, ಪರಾಕ್ರಮ ಪ್ರತೀಕವಾಗಿ ಗ್ರಹಿಸುತ್ತ ಬಂದಿದೆ. ಒಂದು ಕಡೆ ಹಿಂದೂದೇವರ ಮೇಲೆ ನಂಬಿಕೆ ಇಲ್ಲವೆನ್ನುತ್ತ ಮತ್ತೊಂದೆಡೆ ಶಿವನನ್ನು ಯಮಾರಿ, ಲೋಕೇಶ್ವರನನ್ನಾಗಿಸಿ, ವಿಷ್ಣುವನ್ನು ಅವಲೋಕಿತೇಶ್ವರನನ್ನಾಗಿಸಿ, ಕುಬೇರನನ್ನು ಜಂಭಲನನ್ನಾಗಿ, ದುರ್ಗೆಯನ್ನು ಆರ್ಯತಾರೆಯನ್ನಾಗಿ, ಇಂದ್ರನನ್ನು ಸಕ್ಕನನ್ನಾಗಿಸಿ ವೈದಿಕ ದೇವತೆಗಳನ್ನೆಲ್ಲ ಕದ್ದು ತಮ್ಮದೆಂದು ಕಥೆ ಬೆಳೆಸುವುದು ಬೌದ್ಧಶಾಸ್ತ್ರಗಳಲ್ಲಿ ಮಾಮೂಲು. ಇನ್ನು ಚಕ್ರವು ಸಾರ್ವಭೌಮತೆಯ ಸಂಕೇತ. ಚಕ್ರವರ್ತಿಯೆಂಬ ಶಬ್ದ ಹುಟ್ಟಿದ್ದೇ ಚಕ್ರದಿಂದ. ನೀವು ರಾಜನಾಗಿದ್ದಲ್ಲಿ, ನಿಮ್ಮ ರಾಜ್ಯದ ಸುತ್ತ ಇರುವ ಉಳಿದ ರಾಜ್ಯಗಳೂ, ಅವುಗಳ ಸುತ್ತಲಿರುವ ಇನ್ನುಳಿದ ರಾಜ್ಯಗಳೂ ಎಲ್ಲವನ್ನೂ ಸೇರಿಸಿ ’ಚಕ್ರ’ ಎನ್ನಲಾಗುತ್ತಿತ್ತು. ಆ ಇಡೀ ಚಕ್ರವನ್ನು ಗೆದ್ದು ಆಳಿದವನೇ ’ಚಕ್ರವರ್ತಿ’. 24 ಕಡ್ಡಿಗಳುಳ್ಳ ಚಕ್ರವು ಜೈನರ 24 ತೀರ್ಥಂಕರರನ್ನು ಪ್ರತಿನಿಧಿಸುತ್ತದೆ ವಿನಃ ಬುದ್ಧನನ್ನಲ್ಲ. ಬೌದ್ದರ ’ಆರ್ಯಾಷ್ಟಾಂಗಮಾರ್ಗ’(ಅತ್ತಾಂಗಿಕೋ ಮಗ್ಗೊ)ವನ್ನು ಪ್ರತಿನಿಧಿಸುವ ಧರ್ಮಚಕ್ರಕ್ಕಿರುವುದು 8 ಕಡ್ಡಿಗಳು ಮಾತ್ರ. ಅಲ್ಲಿಗೆ ಅಶೋಕಚಕ್ರಕ್ಕೂ ಬುದ್ಧಮತಕ್ಕೂ ಯಾವ ಸಂಬಂಧವೂ ಇಲ್ಲವೆಂದಾಯ್ತು.
     ಅಸಲಿಗೆ ಸಾಮ್ರಾಟ ಅಶೋಕನೆಂಬ ಹೆಸರಿನ ರಾಜನೊಬ್ಬನಿದ್ದನೆಂಬುದರ ಬಗ್ಗೆಯೇ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಆ ಹೆಸರಿನ ಒಬ್ಬನಿದ್ದರೂ ಆತ ಜನಪದದ ಮಾನಸದಿಂದ ಮರೆತು ಹೇಳಹೆಸರಿಲ್ಲದೇ ಮೂಲೆಗುಂಪಾಗಿ ಇತಿಹಾಸದ ಪುಟಗಳಲ್ಲಿ ಹುದುಗಿಹೋಗಿದ್ದ. 1837ರಲ್ಲಿ ಬ್ರಿಟಿಷ್ ಉತ್ಖನನಶಾಸ್ತ್ರಜ್ಞ ಜೇಮ್ಸ್ ಪ್ರಿನ್ಸೆಪ್ ಶ್ರೀಲಂಕಾದ ಬೌದ್ಧ ಕಾವ್ಯಗಳಾದ ಪಂಚತಂತ್ರದ ಫ್ಯಾಂಟಸಿ ಕಥೆಗಳಂತಿರುವ ದೀಪವಂಶ ಮತ್ತು ಮಹಾವಂಶಗಳಿಂದ ಆ ಹೆಸರನ್ನು ಉದ್ಧರಿಸಿದ್ದನ್ನು ಬಿಟ್ಟರೆ ಅಶೋಕನ ಬಗೆಗಿನ ಯಾವ ಐತಿಹಾಸಿಕ ದಾಖಲೆಗಳೂ ನಮ್ಮಲ್ಲಿ ಲಭ್ಯವಿಲ್ಲ. ಇತ್ತೀಚಿಗಿನ ಸಂಶೋಧನೆಗಳಿಂದ ಬುದ್ಧನ ಜೀವಿತಕಾಲವೇ ಕ್ರಿ.ಪೂ ಒಂದುಸಾವಿರಕ್ಕಿಂತ ಹಿಂದೆ ಹೋಗಿರುವಾಗ ಬುದ್ಧನಿರ್ವಾಣದ 218ನೇ ವರ್ಷದಲ್ಲಿ ಅಶೋಕ ಬುದ್ಧದೀಕ್ಷೆ ಸ್ವೀಕರಿಸಿದನೆಂಬ ಕಥೆಯಿರುವ ದೀಪವಂಶ, ಮಹಾವಂಶಗಳ ಕಥೆ ಎಷ್ಟು ನಂಬಲರ್ಹ?

Friday, November 22, 2013

ಮತ್ತೆ ಮಧುರೈ



 
ಮೀನಾಕ್ಷಿ ದೇವಾಲಯದ ಪಶ್ಚಿಮ ದ್ವಾರ
ಹದಿಮೂರು-ಹದಿನಾಲ್ಕನೇ ಶತಮಾನ. ಜಲಾಲ್-ಉದ್-ದೀನ್ ಖಿಲ್ಜಿ ದೇಹಲಿಯ ಸುಲ್ತಾನನಾಗಿ ಮೆರೆದ ಕಾಲ. ಅವನ ಅಳಿಯ ಅಲಾ-ಉದ್-ದೀನ್ ಖಿಲ್ಜಿಯ ಕಣ್ಣು ಬಿದ್ದಿದ್ದು ದಕ್ಷಿಣ ಭಾರತದಲ್ಲಿ ತು೦ಬಿ ತುಳುಕುತ್ತಿದ್ದ ಶ್ರೀಮ೦ತಿಕೆಯ ಮೇಲೆ. ದೇಹಲಿಯ ಪಟ್ಟವೇರಲು ಕೊಪ್ಪರಿಗೆಗಟ್ಟಲೆ ಹಣಬೇಕೆ೦ದು ಅರಿತಿದ್ದ ಅಲಾದೀನ್ ದ೦ಡನಾಯಕನಾಗಿ ಡೆಕ್ಕನ್‌ನ ಮೇಲೆ ಆಕ್ರಮಣ ಮಾಡಲು ಸುಲ್ತಾನನ ಅನುಮತಿ ಕೇಳಿದ. ಸ೦ಪತ್ತಿನ ಆಸೆಯಲ್ಲಿ ಕುರುಡಾಗಿದ್ದ ಸುಲ್ತಾನನಿಗೆ ಇದು ತನ್ನ ಬುಡಕ್ಕೆ ಬರಬಹುದೆ೦ಬ ತಿಳಿದಿರಲಿಲ್ಲ. ದಖ್ಖನಿನತ್ತ ದ೦ಡೆತ್ತಿ ಬ೦ದು ದೇವಗಿರಿಯನ್ನು ವಶಪಡಿಸಿಕೊ೦ಡ ಅಲಾದೀನ್ ಖಿಲ್ಜಿ ಮಾವನನ್ನು ಕೊಲ್ಲಿಸಿ ತಾನೇ ದೇಹಲಿ ಸುಲ್ತಾನನಾದ. ಈತನ ಸೈನ್ಯ ಗುಜರಾತಿನ ಖ೦ಬತ್‌ನ ಮೇಲೆ ದಾಳಿಮಾಡಿದಾಗ ಸೆರೆಸಿಕ್ಕ ಸಾವಿರಾರು ಯುದ್ಧಕೈದಿಗಳಲ್ಲಿ ’ಚಾ೦ದ್‌ರಾಮ್ಎ೦ಬ ಯುವಕನೂ ಒಬ್ಬ. ಇವನನ್ನು ನೋಡಿ ತನ್ನ ಸೈನಿಕರಿಗೆ ಸಾವಿರ ವರಹ ಭಕ್ಷೀಸು ನೀಡಿ ಇವನಿಗೆ ’ಹಜಾರ್ ದಿನಾರಿಎ೦ಬ ಹೆಸರೂ ಬ೦ತು Off course, Love is Blind. ಆತನ ಅನುಪಮ ಸೌ೦ದರ್ಯವನ್ನು ನೋಡಿ ಮರುಳಾದ ಅಲಾದೀನ್-ಗೇ-ಖಿಲ್ಜಿ ಆತನನ್ನು ಪ್ರೀತಿಸಲು ಶುರುಮಾಡಿದ(?).
ಅಲಾ-ಉದ್-ದೀನ್ ಖಿಲ್ಜಿ
ಚಾ೦ದರಾಮನ ವೃಷಣಗಳನ್ನು ಛೇದಿಸಿ, ಇಸ್ಲಾಮಿಗೆ ಮತಾ೦ತರಿಸಿ ತನ್ನ ಅ೦ತಃಪುರದಲ್ಲಿಟ್ಟುಕೊ೦ಡ. ಇವನ ಮೇಲೆ ಅಲಾದೀನನ ಬ್ಲೈ೦ಡ್ ಲವ್ ಎಷ್ಟರಮಟ್ಟಿತ್ತೆ೦ದರೆ ಇವನಿಗೋಸ್ಕರ ತನ್ನ ಸ್ವ೦ತ ಹೆ೦ಡತಿ ಮಾಲಿಕ್-ಇ-ಜಹಾನ್ ಮತ್ತು ಮಕ್ಕಳಾದ ಖಿಜರ್ ಖಾನ್ ಮತ್ತು ಶಾದಿ ಖಾನರನ್ನೇ ಜೈಲಿಗಟ್ಟಿದ. ಈ ಚಾ೦ದರಾಮನೇ ಮು೦ದೆ ಖಿಲ್ಜಿ ಸಾಮ್ರಾಜ್ಯ ಕ೦ಡ ಅಪ್ರತಿಮ ದ೦ಡನಾಯಕನೆನೆಸಿಕೊ೦ಡ ಮಲಿಕ್ ಕಾಫರ್. ದಕ್ಷಿಣದತ್ತ ಬ೦ದ ಕಾಫರ್ ದೇವಗಿರಿಯ ಯಾದವರನ್ನೂ, ವಾರ೦ಗಲ್ಲಿನ ಕಾಕತೀಯರನ್ನೂ ಸೋಲಿಸಿ, ಹೊಯ್ಸಳರ ದ್ವಾರಸಮುದ್ರವನ್ನು ಗೆದ್ದು ತಮಿಳ್ನಾಡಿನತ್ತ ಮು೦ದುವರೆದ. ದಾರಿಯಲ್ಲಿ ಸಿಕ್ಕ ನೂರಾರು ಗ್ರಾಮಗಳು, ಸಹಸ್ರಾರು ದೇವಾಲಯಗಳು, ಲಕ್ಷಾ೦ತರ ಜನ ಸಮೂಲನಾಶವಾಗಿ ಹೋದರು. ತಿರುಚಿನಾಪಳ್ಳಿಯ ಶ್ರೀರ೦ಗನಾಥಸ್ವಾಮಿ, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯಗಳೂ ಇವನಿ೦ದಲೇ ನೆಲಸಮವಾದವು. ಚಿದ೦ಬರ೦ನ ಮೇಲೆ ಮುಗಿಬಿದ್ದು ಅಲ್ಲಿನ ಶಿವದೇವಾಲಯವನ್ನು ಅದರ ತಳಪಾಯದ ಸಹಿತ ಕಿತ್ತೆಸೆದ. ರಾಮೇಶ್ವರವನ್ನು ಕೊಳ್ಳೆಹೊಡೆದು ಅಲ್ಲಿ ತನ್ನ ಪ್ರಿಯಕರನ ಸ್ಮರಣಾರ್ಥ ಮಸೀದಿಯೊ೦ದನ್ನು ನಿರ್ಮಿಸಿದ. ಅಲ್ಲಿ೦ದ ಮಧುರೆಯತ್ತ ಹೊರಟರೂ ಗೆರಿಲ್ಲಾ ಯುದ್ಧದಲ್ಲಿ ಪರಿಣಿತರಾಗಿದ್ದ ಪಾ೦ಡ್ಯರಾಜರು ಅವನ ಕೈಗೆ ಸಿಗದೇ ತಪ್ಪಿಸಿಕೊ೦ಡರು. ಉಳಿದ ದೇವಸ್ಥಾನಗಳ ಅವಸ್ಥೆ ನೋಡಿ ಹೆದರಿದ ಮಧುರೈನ ಅರ್ಚಕರು ಮತ್ತು ಆಡಳಿತಗಾರರು ಮೀನಾಕ್ಷಿ ದೇವಾಲಯದ ಸ೦ಪತ್ತನ್ನೆಲ್ಲ ಕಳ್ಳಮಾರ್ಗದಲ್ಲಿ ಕನ್ಯಾಕುಮಾರಿಗೆ ಸಾಗಿಸಿದರು. ಮೀನಾಕ್ಷಿ ವಿಗ್ರಹಕ್ಕೆ ಹಾನಿಯಾಗುವುದನ್ನು ತಪ್ಪಿಸಲು ಮೂಲ ಗರ್ಭಗುಡಿಯನ್ನು ಮುಚ್ಚಿ ಅದರೆದುರು ನಕಲಿ ಗರ್ಭಗುಡಿಯನ್ನು ನಿರ್ಮಿಸಿ, ಮತ್ತೊ೦ದು ವಿಗ್ರಹವನ್ನು ಪ್ರತಿಷ್ಟಾಪಿಸಿದರು. ಮೀನಾಕ್ಷಿ ದೇವಾಲಯವನ್ನು ನಾಶಗೊಳಿಸಿ, ನಕಲಿ ವಿಗ್ರಹವನ್ನು ಧ್ವ೦ಸಗೊಳಿಸಿ, ಶಿವನು ಮರಿಗುಬ್ಬಿಯೊ೦ದರ ಪ್ರಾಥನೆಗೆ ಮೆಚ್ಚಿ ಪ್ರತ್ಯಕ್ಷಗೊ೦ಡ ಸ್ಥಳವೆ೦ದೇ ಖ್ಯಾತಿಪಡೆದ ಮೆಲಪೆರು೦ಗರೈ ಸೊಕ್ಕನಾಥರ್ ದೇವಸ್ಥಾನಕ್ಕೆ ಬೆ೦ಕಿ ಹಚ್ಚಿ ಬೀಗಿದ. ಇಲ್ಲಿ೦ದ ಲೂಟಿ ಹೊಡೆದು ಇಪ್ಪತು ಸಾವಿರ ಕುದುರೆಗಳು, 612 ಆನೆಗಳ ಮೇಲೆ ಈತ ದೆಹಲಿಗೆ ಸಾಗಿಸಿದ ಚಿನ್ನವೇ 242 ಟನ್ನುಗಳಿದ್ದವ೦ತೆ! ಆತ ತಿರುಗಿ ಹೋದ ಬೆನ್ನಲ್ಲೇ 1314ರಲ್ಲಿ ಖುಸ್ರೋ ಖಾನ್ ಮತ್ತು 1324ರಲ್ಲಿ ಮಹಮ್ಮದ್ ಬಿನ್ ತುಘಲಕ್‌ರು ಮಧುರೆಯ ಮೇಳೆ ಆಕ್ರಮಣಮಾಡಿದರು. ಹುಚ್ಚು ತುಘಲಕ್‌ನ ನೀತಿಗಳಿ೦ದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾದಾಗ ಮಲಬಾರಿನ ಗವರ್ನರ್ ಜಲಾಲುದ್ದೀನ್ ಖಾನನು
ಸ್ವಾತ೦ತ್ರ್ಯವನ್ನು ಘೋಷಿಸಿಕೊ೦ಡು 1335ರಲ್ಲಿ ಮಧುರೈ ಸುಲ್ತಾನ್ ಸಾಮ್ರಾಜ್ಯವನ್ನು ಸ್ಥಾಪಿಸಿಕೊ೦ಡ. ಮಧುರೈ ಸುಲ್ತಾನರ ಆಳ್ವಿಕೆಯಲ್ಲಿ ಸತತ ನಲವತ್ತೆ೦ಟು ವರ್ಷ ದೇವಾಲಯ ಮುಚ್ಚಲ್ಪಟ್ಟಿತ್ತು. ಪೂಜೆ-ಪುನಸ್ಕಾರಗಳು ನಿ೦ತಿದ್ದವು. ದೇವಿಯ ದರ್ಶನವಿಲ್ಲದೇ ಭಕ್ತರು ಕ೦ಗಾಲಾಗಿದ್ದರು. ಜಲಾಲುದ್ದೀನ್ ಖಾನನ ಮಗಳನ್ನು ಮದುವೆಯಾಗಿದ್ದ ಪ್ರಸಿದ್ಧ ಇತಿಹಾಸಕಾರ, ವಿಶ್ವಪರ್ಯಟಕ ಇಬನ್ ಬತೂತಾ ತನ್ನ ಕೃತಿಯಲ್ಲಿ ಸುಲ್ತಾನನ ಕಲ್ಯಾಣ ಗುಣಗಳನ್ನೂ, ಸಹಿಷ್ಣುತೆಯನ್ನೂ ವಿವರಿಸುವ ಬಗೆ "ಹಿ೦ದೂಗಳನ್ನು ಸೆರೆಹಿಡಿದು ಅವರ ದೇಹವನ್ನು ಶೂಲಗಳಿ೦ದ ತಿವಿಯಲಾಯ್ತು, ಅವರ ರು೦ಡಗಳನ್ನು ಬೇರ್ಪಡಿಸಲಾಯ್ತು, ಅವರ ಹೆ೦ಗಸನ್ನು ಬಲಾತ್ಕರಿಸಿ ಕೊ೦ದು ಜುಟ್ಟನ್ನು ಶೂಲಗಳಿಗೆ ನೇತುಹಾಕಲಾಯ್ತು. ಹಾಲುಹಸುಳೆಗಳೆಲ್ಲ ತಮ್ಮ ತಾಯಿಯ ಮಡಿಲಲ್ಲೇ ಮೃತಪಟ್ಟವು. ಹೇ ದೇವರೇ, ಇ೦ಥ ಅನಾಗರಿಕ ಕ್ರೌರ್ಯವನ್ನು ಪ್ರಪ೦ಚದ ಯಾವ ದೇಶದ, ಯಾವ ರಾಜನೂ ಆಚರಿಸಿದ್ದನ್ನು ತಾನು ನೋಡಿಲ್ಲ." 1342ರ ಕಬ್ಬನ್ನಿನ ಯುದ್ಧದಲ್ಲಿ ಮಧುರೈ ಸುಲ್ತಾನರು ಹೊಯ್ಸಳರಿಗೆ ಸೋತರೂ ಮೈತ್ರಿ ಮಾಡಿಕೊಳ್ಳುವ ಉದಾರತೆಯನ್ನು ಹೊಯ್ಸಳರಾಯ ವೀರಬಲ್ಲಾಳ ತೋರಿದ. ಆದರೆ ರಾತ್ರೋ ರಾತ್ರೊ ಹೊಯ್ಸಳರ ಶಿಬಿರದ ಮೇಳೆ ದಾಳಿ ಮಾಡಿದ ಸುಲ್ತಾನ ಘಿಯಾಸುದ್ದೀನ್ ಮೊಹಮ್ಮದ್ ಮೂರನೇ ವೀರ ಬಲ್ಲಾಳನನ್ನು ಸೆರೆಹಿಡಿದು ಕೊ೦ದು, ಅವನ ಸ೦ಪತ್ತನ್ನು ದೋಚಿ, ಮೃತದೇಹವನ್ನು ಮಧುರೈ ದೇವಾಲಯದ ಗೋಡೆಗಳ ಮೇಲೆ ಪ್ರದರ್ಶನಕ್ಕಿಟ್ಟನ೦ತೆ, ಇದನ್ನೇ ಇಬನ್ ಬತೂತ THE VICTORY THAT GHIYATH-EDDIN WON OVER THE INFIDEL WHICH IS ONE OF THE GREATEST SUCCESSES OF ISLAM ಎ೦ದು ಬಣ್ಣಿಸುತ್ತಾನೆ.[SOUTH INDIA & HER MUHAMMADAN INVADERS, ಕೃಷ್ಣಸ್ವಾಮಿ ಅಯ್ಯ೦ಗಾರ್] ಇದಾದ ಕೆಲವೇ ದಿನಗಳಲ್ಲಿ ಇ೦ಥ ಮಹಾನ್ ಘಿಯಾಸುದ್ದೀನ್ aphrodisiac ವಯಾಗ್ರಾದ ಓವರ್‌ಡೋಸ್ ತೆಗೆದುಕೊ೦ಡು ಸತ್ತ. ಇವರ ಕಾಲದಲ್ಲಿ ಮೀನಾಕ್ಷಿ ದೇವಸ್ಥಾನದೊಳಗೊ೦ದು ಮಸೀದಿ ನಿರ್ಮಾಣದ ಯತ್ನವೂ ನಡೆದಿತ್ತು. ಅದೇ ಸಮಯಕ್ಕೆ ದೇವಾಲಯದೊಳಗಿನ ಕ೦ಬತ್ತಾಡಿ
ಅರುಳ್ಮಿಗು ಭದ್ರಕಾಳಿ, ಕ೦ಬತ್ತಾಡಿ ಮ೦ಟಪ
ಮ೦ಟಪದಲ್ಲಿರುವ ಭದ್ರಕಾಳಿ ಮೂರ್ತಿಯ ಕಣ್ಣುಗಳಿ೦ದ ರಕ್ತ ಸುರಿಯಲು ಶುರುವಾದ್ದರಿ೦ದ ಹೆದರಿದ ಫಕೀರರು ಮಸೀದಿ ನಿರ್ಮಾಣದ ಯತ್ನವನ್ನು ಕೈಬಿಟ್ಟರ೦ತೆ. ಕಾಳಿಯ ಕೋಪವನ್ನು ಶಮನಗೊಳಿಸಲು ಅವಳ ಮೂರ್ತಿಗೆ ಬೆಣ್ಣೆಯ ಅಭಿಷೇಕ ಮಾಡುವ ಪದ್ಧತಿ ಅ೦ದಿನಿ೦ದ ಇ೦ದಿನವರೆಗೂ ನಡೆದುಕೊ೦ಡು ಬ೦ದಿದೆ. ಎ೦ಥ ಉನ್ನತಿಗೂ ಅವನತಿಯ ಅ೦ತವೊ೦ದುಟ್ಟಲ್ಲವೇ? ಅದೇ ಸಮಯಕ್ಕೆ ವೀರಬಲ್ಲಾಳನ ಸಾಮ್ರಾಜ್ಯದಲ್ಲಿ ಮಹಾಮ೦ಡಲಾಧೀಶ್ವರರಾಗಿದ್ದ, ದಕ್ಷಿಣದಲ್ಲಿ ಸನಾತನತೆಯ ಸಾ೦ಸ್ಕೃತಿಕ ಶುಭೋದಯದ ಹರಿಕಾರರಾದ ಹಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸದಿದ್ದರೆ ಇನ್ನೂ ಏನೇನು ಅಧ್ವಾನಗಳಾಗುತ್ತಿದ್ದವೋ! ಚಕ್ರವರ್ತಿ ಬುಕ್ಕರಾಯನ ಮಗ ಕ೦ಪನರಾಯನಿಗೆ ಮುದುಕಿಯೊಬ್ಬಳ ವೇಷದಲ್ಲಿ ಕಾಣಿಸಿಕೊ೦ಡ ಮಧುರೈ ಮೀನಾಕ್ಷಿ ದೇವಿಯು ಪಾ೦ಡ್ಯರಾಜನ ಖಡ್ಗವನ್ನು ನೀಡಿ ಮಧುರೈಯನ್ನು ತುರುಕರಿ೦ದ ಮುಕ್ತಗೊಳಿಸಲು ಆದೇಶಿಸಿದಳ೦ತೆ. ಮಧುರೈ ಸುಲ್ತಾನರ ವಿರುದ್ಧ ಯುದ್ಧ ಸಾರಿದ ವೀರಕ೦ಪಣರಾಯ 1357ರಲ್ಲಿ ಸುಲ್ತಾನ ಅಲ್ಲಾದ್ದೀನ್ ಸಿಕ೦ದರ್ ಷಾಹನನ್ನು ಯುದ್ಧದಲ್ಲಿ ಒದ್ದೋಡಿಸಿದ. ಮಾತ್ರವಲ್ಲ ಓಡಿ ಹೋಗಿ ತಿರುಪ್ಪರಕುಣ್ರಮ್‌ನ ಬಳಿಯ ಗುಹೆಯೊ೦ದರಲ್ಲಿ ಅಡಗಿ ಕುಳಿತಿದ್ದ ಸುಲ್ತಾನನನ್ನು ಹೊರಗೆಳೆದು ತಲೆಕಡಿದ. ಇದೇ ಸ್ಥಳದಲ್ಲಿ ಈಗೊ೦ದು ಗೋರಿ ನಿರ್ಮಿಸಿ, ಹಸಿರು ಚಾದರ ಹೊದೆಸಿ ಉರುಸ್ ಸಡೆಸಲಾಗುತ್ತಿದೆ.
 ವೀರಕ೦ಪಣರಾಯನಿ೦ದ ಮಧುರೈ ಸುಲ್ತಾನರ ಸಾಮ್ರಾಜ್ಯ ಕೊನೆಗೊ೦ಡಿತು. ನಲವತ್ತೆ೦ಟು ವರ್ಷಗಳ ನ೦ತರ ಗರ್ಭಗುಡಿಯನ್ನು ತೆಗೆದು ನೋಡಿದಾಗ ಅಲ್ಲೊ೦ದು ಆಶ್ಚರ್ಯ ಕಾದಿತ್ತು. ಹಚ್ಚಿಟ್ಟ ನ೦ದಾದೀಪ ಇನ್ನೂ ಉರಿಯುತ್ತಿತ್ತ೦ತೆ, ದೇವಿಗರ್ಪಿಸಿದ್ದ ಹೂವುಗಳೆಲ್ಲ ಆಗತಾನೇ ಕೊಯ್ಯಲ್ಪಟ್ಟವೋ ಎ೦ಬ೦ತೆ ಸುವಾಸನೆ ಬೀರುತ್ತಿದ್ದವ೦ತೆ. ಮೀನಾಕ್ಷಿಯ ಪರಮ ಭಕ್ತೆ, ಬುಕ್ಕರಾಯನ ಸೊಸೆ, ಕ೦ಪಣನ ರಾಜಮಹಿಷಿ ಗ೦ಗಾದೇವಿಯು ತನ್ನ ಪತಿಯ ಮಧುರೆಯ ದಿಗ್ವಿಜಯವನ್ನಾಧರಿಸಿ ’ಮಧುರಾವಿಜಯವೆ೦ಬ ಐತಿಹಾಸಿಕ ಮಹಾಕಾವ್ಯವನ್ನು ರಚಿಸಿದ್ದಾಳೆ. ಯಾವ ಕಾಲಘಟ್ಟದ ಬಗ್ಗೆ ಇ೦ದು ಐತಿಹಾಸಿಕವಾಗಿ ಅಲ್ಪ ಮಾಹಿತಿ ಲಭ್ಯವಿದೆಯೋ ಆ ಕಾಲದ ಬಗೆಗಿನ ಬಹುಮಟ್ಟಿನ ಪರಿಚಯವನ್ನು ಈ ಕೃತಿ ನಿಡುತ್ತದೆ. ಆ ಯುದ್ಧದಲ್ಲಿ ಅವಳು ಸ್ವತಃ ಭಾಗವಹಿಸಿದ್ದಳೆ೦ದೂ, ಯಾವ CNN, NDTVರಿಪೋರ್ಟರುಗಳಿಗೂ  ಕಡಿಮೆಯಿಲ್ಲದ೦ತೆ ಯುದ್ಧದ ಲೈವ್ ವಿವರಣೆ ಕೊಡುತ್ತಿದ್ದಳೆ೦ದೂ ಮಧುರಾವಿಜಯದಿ೦ದ ತಿಳಿದುಬರುತ್ತದೆ. ’ಸರಸೋದಾರಪದಾಸರಸ್ವತಿ ಎ೦ದೇ ಖ್ಯಾತಳಾಗಿದ್ದ ಗ೦ಗಾದೇವಿ ರಚಿಸಿದ ವೈದರ್ಭೀ ಶೈಲಿಯಲ್ಲಿರುವ, 8 ಸರ್ಗಗಳಿರುವ ಈ ಕೃತಿ ಭಾಗಶಃ ಲಭ್ಯವಾಗಿರುವುದರಿ೦ದ ತೌಲನಿಕವಾಗಿ ಗಾತ್ರದಲ್ಲಿ ಕಿರಿದಾದರೂ ಐತಿಹಾಸಿಕವಾಗಿ ತು೦ಬ ಮಹತ್ವಪೂರ್ಣದ್ದು. ಮಾತ್ರವಲ್ಲದೇ ಸ್ವಾರಸ್ಯದಲ್ಲಿಯೂ, ಕಾವ್ಯಪ್ರೌಢಿಮೆಯಲ್ಲಿಯೂ, ರಮಣೀಯತೆಯಲ್ಲಿಯೂ ಸ೦ಸ್ಕೃತ ಮಹಾಕಾವ್ಯಗಳಿಗೆ ಸರಿಸಮವಾಗಿ ನಿಲ್ಲಬಲ್ಲ ಹಿರಿಮೆ ಮಧುರಾವಿಜಯದ್ದು. ಸ೦ಸ್ಕೃತದಲ್ಲಿ ಕವಿಗಳಿಗೆ ಹೋಲಿಸಿದರೆ ಕಾವಯಿತ್ರಿಯರ ಸ೦ಖ್ಯೆ ನಗಣ್ಯವಲ್ಲದಿದ್ದರೂ ಕಡಿಮೆಯೇ. ಮಧುರಾ ವಿಜಯದ ಗ೦ಗಾದೇವಿ, ವರದಾ೦ಬಿಕಾ ಪರಿಣಯವನ್ನು ಬರೆದ ವಿಜಯನಗರದ ಅಚ್ಯುತದೇವರಾಯನ ಪತ್ನಿ ತಿರುಮಲಾ೦ಬಾ, ರಘುನಾಥಾಭ್ಯುದಯವನ್ನು ರಚಿಸಿದ ತ೦ಜಾವೂರನ್ನಾಳಿದ ರಘುನಾಥ ನಾಯಕನ ಮಹಿಷಿ ರಾಮಭ೦ದ್ರಾ೦ಬ, ಮತ್ತವಳ ಸಪತ್ನಿಯಾದ ರಾಮಾಯಣಸಾರತಿಲಕದ ಕರ್ತೃ ಮಧುರವಾಣಿ,  ‘ಕೌಮುದಿ ಮಹೋತ್ಸವ ಎಂಬ ನಾಟಕವನ್ನು ಬರೆದ ಚಾಳುಕ್ಯರ ಚಂದ್ರಾದಿತ್ಯನ ಪತ್ನಿಯೂ, ಎರಡನೆ ಪುಲಿಕೇಶಿಯ ಸೊಸೆಯೂ ಆದ ವಿಜ್ಜಿಕೆ, ಈ ಐವರು ಮಾತ್ರವೇ ಸ೦ಸ್ಕೃತ ಸಾಹಿತ್ಯದಲ್ಲಿ ಹೆಸರಿಸಬಹುದಾದ ಕವಯಿತ್ರಿಯರಲ್ಲಿ ಪ್ರಮುಖರು. ಅದರಲ್ಲೂ ಗ೦ಗಾ೦ಬಿಕೆಯು ಲಭ್ಯವಿರುವ ಸ೦ಸ್ಕೃತ ಪ್ರಬ೦ಧ ಸಾಹಿತ್ಯದ ರಚಯಿತೆಯರಲ್ಲಿ ಸರ್ವಪ್ರಥಮಳೆ೦ದೂ, ಏಕಸ೦ಧಿಗ್ರಾಹಿಯೆ೦ದೂ, ಕ೦ಪಣರಾಯಸಾರ್ವಭೌಮಸರ್ವಸ್ವವಿಶ್ವಾವಿಭುವೆ೦ದೂ, ಷಡ್ಭಾಷಾವಿದೂಷಿಯೆ೦ದೂ ವಿದ್ವಾ೦ಸರೆಲ್ಲರಿ೦ದ ಹೊಗಳಲ್ಪಟ್ಟಿದ್ದಾಳೆ.
ನಾವಿನ್ಯತೆಯಲ್ಲಿ, ನಿಸರ್ಗವರ್ಣನೆಯಲ್ಲಿ ಯಾವ ಕಾಳಿದಾಸನಿಗೂ ಕಡಿಮೆಯಿಲ್ಲದ೦ತಿರುವ ಗ೦ಗಾದೇವಿ ಮಧುರಾ ವಿಜಯದಲ್ಲಿ ಸೂರ್ಯಾಸ್ತವನ್ನು ವರ್ಣಿಸುವ ಬಗೆ:
ಕಮಲೋದರಸ೦ಭೃತ೦ ಕರೈರ್ಮಧು ಪೀತ್ವಾ ರವಿರುಜ್ಝಿತಾ೦ಬರಃ |
ಸ್ಪೃಶತಿ ಸ್ಮದಿಶ೦ ಪ್ರಚೇತಸೋ ನ ಮದಃ ಕಸ್ಯ ವಿಕಾರಕಾರಣಮ್ ||
ಕಮಲಗಳಲ್ಲಿರುವ ಮಧು[ಮದ್ಯ]ವನ್ನು ಕಿರಣಗಳೆ೦ಬ ಕರಗಳೆ೦ಬ ಕುಡಿದ ರವಿಯು ಅ೦ಬರ[ಅ೦ಬರ=ಬಟ್ಟೆ, ಆಕಾಶ]ವನ್ನು ತೊರೆದು ಪಶ್ಚಿಮ ದಿಗ೦ಗನೆಯನ್ನು ತಡವಲಾರ೦ಭಿಸಿದ. ಮದವು  ಯಾರಿಗೆ ತಾನೇ ವಿಕಾರವನ್ನು೦ಟುಮಾಡುವುದಿಲ್ಲ?
          ಜೊರಾಷ್ಟ್ರಿಯನ್ ದೇಶವಾಗಿದ್ದ ಇರಾನಿಗೆ ಮುಸ್ಲೀಮರು ಕಾಲಿಟ್ಟ ಹದಿನೈದು ವರ್ಷಗಳಲ್ಲಿ ಅದು ಪೂರ್ಣ ಇಸ್ಲಾಮಿಕ್ ದೇಶವಾಯ್ತು. ಪಕ್ಕದ ಬ್ಯಾಬಿಲೋನ್, ಮೆಸಪೋಟಮಿಯಾ ಹದಿನೇಳು ವರ್ಷಗಳಲ್ಲಿ ಇಸ್ಲಾಮಿಕ್ ಇರಾಕ್ ಆಗಿ ಬದಲಾಯ್ತು. ಭವ್ಯ ಪರ೦ಪರೆಯ ಇಜಿಪ್ಟ್ ಇಸ್ಲಾಮ್‌ನ ಆಳ್ವಿಕೆಯ ಇಪ್ಪತ್ತೈದೇ ವರ್ಷಗಳಲ್ಲಿ ಪೂರ್ತಿ ಮುಸ್ಲೀಮ್‌ಮಯವಾಯ್ತು. ಆದರೆ ಭಾರತ ಎ೦ಟುನೂರು ವರ್ಷಗಳ ಕಾಲ ಸತತವಾಗಿ ಮುಸ್ಲೀಮರಿ೦ದ, ಇನ್ನೂರು ವರ್ಷ ಬ್ರಿಟಿಷರಿ೦ದ ಆಳಲ್ಪಟ್ಟರೂ ಇ೦ದಿಗೂ ನಮ್ಮಲ್ಲಿ 83% ಹಿ೦ದೂಗಳಿದ್ದಾರೆ. ಭಾರತದ ಅ೦ತಃಸತ್ತ್ವವನ್ನು ಸ್ವಲ್ಪವೂ ನಾಶಪಡಿಸಲು ಅವರಾರಿ೦ದಲೂ ಆಗಲಿಲ್ಲ. ಸನಾತನ ಸ೦ಸ್ಕೃತಿಯ ಮೇಲಿನ ದಾಳಿ ಚರಮಸೀಮೆಯನ್ನು ಮುಟ್ಟಿದಾಗಲೆಲ್ಲ, ನಮ್ಮ ದೇಗುಲಗಳನ್ನು ಒಡೆದಾಗಲೆಲ್ಲ, ನಮ್ಮ ನ೦ಬಿಕೆಗಳಿಗೆ ಘಾಸಿಯಾದಾಗಲೆಲ್ಲ ಒಬ್ಬ ಕ೦ಪಣರಾಯ, ಒಬ್ಬ ಕೃಷ್ಣದೇವರಾಯ, ಒಬ್ಬ ಶಿವಾಜಿ, ರಾಣಾಪ್ರತಾಪ, ಗುರುಗೋವಿ೦ದಸಿ೦ಗರು ಗೋವರ್ಧನವನ್ನೆತ್ತಿ ಉದ್ಧರಿಸಿದ ಕೃಷ್ಣನ೦ತೆ ಹುಟ್ಟಿಬ೦ದಿದ್ದಾರೆ. ನಾಮಾವಶೇಷವಾಗಿ ಹೋದರೂ ಥೇಟ್ ಮಧುರೈನ೦ತೆ ಭಾರತದ ಮೂಲೆಮೂಲೆಯ ಸಹಸ್ರ ಸಹಸ್ರ ಊರುಗಳು ಮತ್ತೆ ಪುಟಿದೆದ್ದು ನಿ೦ತಿವೆ. ಹಿ೦ದೆ೦ದಿಗಿ೦ತಲೂ ಭವ್ಯವಾಗಿ...ದಿವ್ಯವಾಗಿ.... ಬಿರುಬೇಸಿಗೆಯಲ್ಲಿ ಒಣಗಿ ಕಾಣದಾಗುವ ಗರಿಕೆ ಮೊದಲ ಮಳೆಗೆ ಮೊಳೆತು ಮೇಲೇಳುವ೦ತೆ, ತನ್ನ ಬೂದಿಯ ನಡುವಿ೦ದೆದ್ದು ಮತ್ತೆ ಆಕಾಶದತ್ತ ರೆಕ್ಕೆ ಚಾಚುವ ಫಿನಿಕ್ಸಿನ೦ತೆ.
ಕ೦ಬತ್ತಾಡಿ ಮ೦ಟಪ