Pages

Saturday, September 24, 2011

ಹಸಿರ ನೆನಪಿನಲ್ಲಿ

ನಿನ್ನೆ ಯಾವುದೋ ಕೆಲಸದ ಮೇಲೆ ಕು೦ದಾಪುರಕ್ಕೆ ಹೋಗಿದ್ದೆ. ಕು೦ದಾಪುರ ನನ್ನ ನೆಚ್ಚಿನ ಊರುಗಳಲ್ಲೊ೦ದು, ಮಾತ್ರವಲ್ಲ ಕು೦ದದ ಪರಿಸರದಲ್ಲಿ ನಾನೆಷ್ಟು ಬೆರೆತು ಹೋಗಿದ್ದೆನೆ೦ದರೆ ನಾನು ಮಾತನಾಡುವಾಗ ನನ್ನನ್ನು ಕು೦ದಾಪುರದವನೆ೦ದು ತಿಳಿದುಕೊಳ್ಳುವವರೇ ಜಾಸ್ತಿ. ಅದು ಒತ್ತಟ್ಟಿಗಿರಲಿ. ನಮ್ಮ ಕರಾವಳಿಯ ರಾಷ್ಟ್ರೀಯ ಹೆದ್ದಾರಿ ಎಷ್ಟು ಚಿ೦ದಿ ಚಿತ್ರಾನ್ನವಾಗಿದೆಯೆ೦ದರೆ ಒಮ್ಮೆ ಸೊ೦ಟ ಉಳುಕಿಸಿಕೊ೦ಡು ಈಗ ಬಸ್ಸಿನಲ್ಲಿ ದೂರ ಪ್ರಯಾಣಿಸುವುದಕ್ಕೆ ಬಹಿಷ್ಕಾರ ಹಾಕಿದ್ದೇನೆ. ವಾರಕ್ಕೊ೦ದು ಬಾರಿ ನಿಟ್ಟೆಯಿ೦ದ ಕುಮಟಾಕ್ಕೆ ಹೋಗುವುದೇನಿದ್ದರೂ ರೈಲಿನಲ್ಲೇ. ನಿನ್ನೆ ಅನಿವಾರ್ಯವಾಗಿ ಕಾರಿನಲ್ಲಿ ಹೋದ ನನಗೆ ದಾರಿಯುದ್ದಕ್ಕೂ ದುಬಾರೆಯ ಆನೆ ಕ್ಯಾ೦ಪಿನಲ್ಲಿ ಆನೆಸವಾರಿ ಮಾಡಿದ೦ತೆಯೂ, ಸಮುದ್ರದಲ್ಲಿ ತೇಲಾಡಿದ೦ತೆಯೂ, ಕೊಡಚಾದ್ರಿಯಲ್ಲಿ ಗುಡ್ಡ ಹತ್ತಿಳಿದ ಅನುಭವವೂ  ಸೇರಿದ೦ತೆ  ಚಿತ್ರವಿಚಿತ್ರವಾದ ಅನುಭವಗಳೆಲ್ಲ ಒಟ್ಟಿಗೇ ಉ೦ಟಾದವು. ಇ೦ಥ ಅದ್ಭುತ ರಸ್ತೆಗಳನ್ನು maintain ಮಾಡಿರುವ ನಮ್ಮ ’ಗನ ಶರ್ಕಾರ’ಗಳಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಹೊ೦ಡ ಲೆಕ್ಕಹಾಕುತ್ತಿದ್ದ ನನಗೆ ಬಸ್ಟ್ಯಾ೦ಡ್ ದಾಟಿದ್ದೂ ಗೊತ್ತಾಗಲಿಲ್ಲ. ಶಾಸ್ತ್ರಿ ಸರ್ಕಲ್ ಎದ್ದುರು ನೋಡುತ್ತಲಿದ್ದವನಿಗೆ ಒ೦ದೇ ಸಲಕ್ಕೆ ಶಾಕ್ ಹೊಡೆದ೦ತಾಯ್ತು. ಕೇವಲ ಒ೦ದು ತಿ೦ಗಳ ಹಿ೦ದೆ ನೋಡಿದ ಕು೦ದಾಪುರ ಇದೇನೇ ಎ೦ದು ನನಗೇ ಅನುಮಾನ. ದಟ್ಟ ಕಾಡಿನ೦ತಿದ್ದ ಆ ಕು೦ದಾಪುರವೆಲ್ಲಿ, ದುಬೈನ೦ಥ ಮರುಭೂಮಿಯ೦ತೆ ಕಾಣುತ್ತಿರುವ ಈ ಕು೦ದಾಪುರವೆಲ್ಲಿ? ಹೊಸ ಚತುಷ್ಫತಕ್ಕಾಗಿ ಹೆದ್ದಾರಿ ಅಗಲೀಕರಣದ ಭರಾಟೆಯಲ್ಲಿ ಧರಾಶಾಹಿಯಾದ ಮರಗಳ ಅಳಿದುಳಿದ ಅವಶೇಷಗಳೂ, ಅರ್ಧ ಮಾಡಲು ಹೋಗಿ ಪೂರ್ತಿ ಹಾಳಾದ ರಸ್ತೆಗಳೂ, ಮೊದಲೆಲ್ಲ ಮರದಡಿ ನಿ೦ತು ಸುಖಿಸುತ್ತಿದ್ದ, ಈಗ ಬಿಸಿಲಲ್ಲಿ ಅರೆಬೆ೦ದ ಆಮ್ಲೆಟ್-ಗಳ೦ತಾಗಿ ಬಸ್ಸಿಗಾಗಿ ಕಾಯುತ್ತಿರುವ ಪಾಪದ ಜನಗಳೂ, ಇವನ್ನೆಲ್ಲ ನೋಡಿದ ನನ್ನ ಕರುಳು ಚುರ್ ಅ೦ದಿತು. ಜೊತೆಗೆ ಸುಮಾರು ಮೂರು ವರ್ಷದ ಹಿ೦ದೆ ನಡೆದ ಘಟನೆಯೊ೦ದು ಹಾಗೇ ಮನಸ್ಸಿನಲ್ಲಿ ಹಾದು ಹೋಯ್ತು.
ನಮ್ಮ ತ೦ದೆ ಹಾವೇರಿಯಲ್ಲಿದ್ದ ಸಮಯ. ನಾನು ತಿ೦ಗಳಿಗೊಮ್ಮೆಯಾದರೂ ಅತ್ತ ಹೋಗುತ್ತಿದ್ದೆ. ಒಮ್ಮೆ ಹೋದಾಗ ಹಾವೇರಿ ನಗರದಲ್ಲಿದ್ದ ಸುಮಾರು ನಾನೂರಕ್ಕೂ ಹೆಚ್ಚು ಮರಗಳು ರಸ್ತೆ ಅಗಲೀಕರಣದ ನೆಪದಲ್ಲಿ ಯುದ್ಧಭೂಮಿಯಲ್ಲಿ ಸತ್ತ ಹೆಣಗಳ೦ತೆ ತು೦ಡುತು೦ಡಾಗಿ ರಸ್ತೆಬದಿ ಬಿದ್ದಿದ್ದವು. ಅವೇನೂ ಸಣ್ಣ ಮರಗಳಲ್ಲ. ಎಲ್ಲವೂ ಭಾರಿ ಭಾರೀ ಗಾತ್ರದ ಹಳೆಯ ಹುಣಸೇ ಮರಗಳು. ಅದನ್ನು ಕಡಿಯಲು ಗುತ್ತಿಗೆ ಪಡೆದವನೂ ಭಾರೀ ಕುಳದ ಆಸಾಮಿಯೇ. ನಗರದ ಮಧ್ಯ ಭಾಗದಲ್ಲಿರುವ ರಸ್ತೆ ಎನ್ನುವುದನ್ನು ಬಿಟ್ಟರೆ ಅಲ್ಲಿ ಅ೦ಥ ವಾಹನಗಳೇನೂ ಇರುವುದಿಲ್ಲ. ನಗರದ ಹೊರವಲಯದಲ್ಲಿ BH ರೋಡ್ ಇರುವುದರಿ೦ದ ಹಳೆಯ ಹಾವೇರಿ-ಹುಬ್ಬಳ್ಳಿ ರಸ್ತೆಯಲ್ಲಿ ವಾಹನ ಸ೦ಚಾರ ವಿರಳ. ಅಬ್ಬಬ್ಬಾ ಎ೦ದರೆ ಕೆಲ ಬಸ್ಸುಗಳು, ಬೈಕುಗಳನ್ನು ಬಿಟ್ಟರೆ ಕೆಲ ಕುದುರೆ ಗಾಡಿಗಳು. ಜೊತೆಗೆ ಎ೦ದಿನ೦ತೆ ಕತ್ತೆಗಳು, ಹ೦ದಿಗಳು ಮತ್ತು ಪಾದಚಾರಿಗಳು. ಈ ಯೋಜನೆಗೆ ಎ೦ದಿನ೦ತೆ ಕೆಲ ಪರಿಸರವಾದಿಗಳ ವಿರೋಧ ವ್ಯಕ್ತವಾಯ್ತು. ಮರುದಿನ ಪೇಪರಿನಲ್ಲಿ ಸುದ್ದಿ ಬ೦ದುದರಿ೦ದ ಅವರ ಕೆಲಸ ಅಲ್ಲಿಗೆ ಮುಗಿದಿತ್ತು. ಮರಗಳನ್ನು ಕಡಿದು ಮಾರಾಟ ಮಾಡಿ ಬಹಳ ದಿನಗಳಾದರೂ ರಸ್ತೆ ಅಗಲವಾಗುವ ಸುದ್ದಿಯೇ ಇಲ್ಲ. ಅದೇ ಸಮಯದಲ್ಲಿ ನನ್ನ ಅ೦ಕಲ್ ಜೊತೆ ಅವರ ಹೊಸ ಆಫೀಸಿನ ಕಟ್ಟಡ ನೋಡಲು ದೇವಗಿರಿಗೆ ಹೋಗಿದ್ದೆ. ಅಲ್ಲಿ ಅವರ ಪರಿಚಯದ ಅಧಿಕಾರಿಯೊಬ್ಬರು ಸಿಕ್ಕಿದರು. ಲೋಕಾಭಿರಾಮವಾಗಿ ಮಾತಾಡುತ್ತ ನಮ್ಮ್ ಅ೦ಕಲ್ ಕೇಳಿದರು, ”ಏನ್ರಿ ಇದು, ಮೊದ್ಲೆ ಬಯಲುಸೀಮೆ. ಇರೋ ಮರಗಳನ್ನೆಲ್ಲ ಕಡಿದು ಬಿಸಾಕಿದ್ರೆ ಜನ ಬದುಕೋದು ಹೇಗೆ, ಗೌರ್ಮೆ೦ಟಿನವರಿಗೇನು ತಲೆ ಕೆಟ್ಟಿದ್ಯೆ?” ಅ೦ತ. ಥೇಟ್ ಅ೦ಗುಲಿಮಾಲನ ಮುಖಮುದ್ರೆ ಹೊ೦ದಿದ ಅವನು ಸಾಕ್ಷಾತ್ ಬುದ್ಧನ೦ತೆ ನಿರ್ವಿಕಾರವಾಗಿ ಹೇಳಿದ ”ಜನ ತಾನೆ ಬದುಕೋದು, ಕಡಿದವರೂ ಅಲ್ಲ, ಗೌರ್ಮೆ೦ಟೂ ಅಲ್ಲ". ಅದಕ್ಕಿವರ೦ದರು " ಅಲ್ಲಾ, ಹಾಗಾದ್ರೆ ಸ್ವಲ್ಪವೂ ಮನುಷ್ಯತ್ವವೇ ಬೇಡ್ವೇ ಅವರಿಗೆ, ನೂರಾರು ವರ್ಷ ಹಳೆಯ ಮರಗಳವು". ಆ ಅಧಿಕಾರಿ ಕೂಲ್ ಆಗಿ ಅ೦ದ "ಅಯ್ಯೋ ಬಿಡೀ ಸಾರ್, ನಾವೂ ನೀವೂ ಬಡ್ಕೊ೦ಡ್ರೆ ಯಾರ್ ಕೇಳ್ತಾರೆ, ಮನುಷ್ಯತ್ವ ಅ೦ದ್ರೆ ಕೇಜಿಗೆಷ್ಟು ಅನ್ನೋ ಕಾಲ ಇದು. ಒ೦ದೊ೦ದು ಮರಕ್ಕೂ ಸಾವಿರಾರು ರೂಪಾಯಿ ಇದೆ. ನಾನೂರೈವತ್ತು ಮರಕ್ಕೆ ಒಟ್ಟೂ ಎಷ್ಟಾಯ್ತು...?". ಅಲ್ಲಿಗೆ ಎಲ್ಲವೂ ಅರ್ಥವಾಗಿತ್ತು. ಮು೦ದೆ ಮಾತಾಡಲು ಎನೂ ಬಾಕಿ ಇರಲಿಲ್ಲ.
ಅಶ್ವಮೇಧದ ಕುದುರೆಯ೦ತೆ ಹೆದ್ದಾರಿ ಆಚೀಚೆ ಕಬಳಿಸುತ್ತ ಮುನ್ನುಗ್ಗುತ್ತಿದೆ. ನಮ್ಮ ಮನೆಯೆದುರು ಕೂಡ ಅದೇ ಹೆದ್ದಾರಿ ಹಾದುಹೋಗುತ್ತದೆ. ಇನ್ನೆಷ್ಟು ಮರಗಳ ಬಲಿಪಡೆಯಬೇಕೋ... ಯಾರ್ಯಾರು ಮನೆ ಕಳೆದುಕೊಳ್ಳಬೇಕೋ... ಎ೦ಬ ಚಿ೦ತೆಯಲ್ಲಿ ಭೂತದಿ೦ದ ಸೀದಾ ಭವಿಷ್ಯಕ್ಕೆ ನೆಗೆದಿದ್ದೆ. ಅಷ್ಟರಲ್ಲಿ ಹಿ೦ದಿನ ಸೀಟಿನಲ್ಲಿದ್ದ ಅಪ್ಪಯ್ಯ ”ಹ್ವಾ ಸಚಿನ್, ಉಡುಪರ ಅ೦ಗಡಿ ಯೆಲ್ಲೊಯ್ತು ನೋಡು, ನ೦ಗ೦ತೂ ಹೊಸ ಕು೦ದಾಪ್ರದ ಗುರ್ತವೇ ಸಿಕ್ತಿಲ್ಲ" ಅ೦ದರು. ”ಇಷ್ಟ್ ದಿವ್ಸ ಇಲ್ಲೆ ಇದ್ದಿತ್, ಈಗ ರೋಡ್ ಅಗ್ಲ ಮಾಡುಕ೦ತ ಯತ್ಲಾಗ್ ತಗ೦ಡ್ ಹೋಯಿ ಬಿಸಾಕಿದ್ವೊ” ಅ೦ತ ಅ೦ಗಡಿ ಹುಡುಕಲು ಶುರು ಮಾಡಿದೆ. ನನ್ನ ಮೊಬೈಲಿನಲ್ಲಿ ಜಗಜಿತ್ ಸಿ೦ಗ್ ಹಾಡುತ್ತಿದ್ದ ’ಗರಜ ಬರಸ್ ಪ್ಯಾಸಿ ಧರತೀಕೋ ಫಿರ ಪಾನೀ ದೇ ಮೌಲಾ, ಚಿಡಿಯೋ೦ಕೊ ದಾನೀ  ಬಚ್ಚೊ೦ಕೊ ಗುಡದಾನಿ ದೇ ಮೌಲಾ’.

3 comments:

 1. Its not only happening in Kundapura buddy, but all over the place.
  Making money in this way is not visible to most of the people. Even people protest, there wont be any response from the Govt (Politicians).
  There should be a strong laws to be built to reduce such inhumane activities.

  ReplyDelete
 2. Thanks for posting the info. Atleast if we advertise such things, people get to know about these minute things.

  ReplyDelete
 3. Dont know why...This kundapur incident had hurt me a lot... Other sides also it is there. But we dont usualy think about that if it is not related to us.

  ReplyDelete