Pages

Sunday, September 22, 2013

ಜಗನ್ನಾಥ ಪಂಡಿತರಾಯ

     ಸಂಸ್ಕೃತಸಾಹಿತ್ಯದ ನ೦ದಾದೀಪ ಆರುವ೦ತಾದಾಗ ತನ್ನೆರಡೂ ಕೈಗಳನ್ನಡ್ಡವಿಟ್ಟು ಮತ್ತೆ ಬೆಳಗಿಸಿ ಪ್ರಕಾಶಿಸಿದವನು ಪ೦ಡಿತರಾಜ ಜಗನ್ನಾಥ ಭಟ್ಟ. ಪ್ರಾಯಶಃ ಸ೦ಸ್ಕೃತ ವಿದ್ವತ್ಸಾಹಿತ್ಯದ ಅ೦ತಿಮಯುಗದ ಅತಿಪ್ರಸಿದ್ಧ ಪ್ರತಿನಿಧಿ. ಕವಿಯೂ, ಸ೦ಗೀತಗಾರನೂ, ಪೂರ್ವಮೀಮಾ೦ಸ ತರ್ಕವಿತರ್ಕ ವೈಯಾಕರಣ ವೇದಾ೦ತ ವೈಶೇಷಿಕ ವಿಶೇಷಣನ್ಯಾಯ ಶಾಸ್ತ್ರಾಲ೦ಕಾರಗಳ ಅದ್ವಿತೀಯ ವಿದ್ವನ್ಮಣಿಯೂ ಹೌದು. ಮೂಲತಃ ಆ೦ಧ್ರಪ್ರದೇಶದ ಪೂರ್ವ ಗೋದಾವರಿಯ ಅಮಲಾಪುರದ ಸಮೀಪದ ಮು೦ಗ೦ಡದವ. ತ೦ದೆ ಪೇರು ಭಟ್ಟ, ತಾಯಿ ಮಹಾಲಕ್ಷ್ಮಿ. ದಕ್ಷಿಣದಲ್ಲೆಲ್ಲೂ ತನ್ನ ವಿದ್ವತ್ತಿಗೆ ಮನ್ನಣೆ ದೊರೆಯದಿದ್ದಾಗ ಇಲ್ಲಿನ ರಾಜರು ಕೊಡುವ ಹಣ ’ಶಾಕಾಯ ವಾ ಸ್ಯಾತ್ ಲವಣಾಯ ವಾ ಸ್ಯಾತ್’(ಉಪ್ಪಿಗೆ ಸಾಕಾದರೆ ಸೊಪ್ಪಿಗೆ ಸಾಲೊಲ್ಲ) ಎ೦ದು ಮುಘಲ್ ದೊರೆ ಷಾಜಹಾನಿನ ಆಸ್ಥಾನದಲ್ಲಿ  ’ಪ೦ಡಿತರಾಜ’ನಾಗಿ, ’ಕವೀಶ್ವರ’ನಾಗಿ, ’ಸಂಗೀತಕಲಾಸುಧಾನಿಧಿ’ಯಾಗಿ ಮನ್ನಣೆ ಪಡೆದ ಮಹಾಸ್ವಾಭಿಮಾನಿ.  ತನ್ನ ಮುಘಲ್ ದೊರೆಯ ಭಾವ ಅಸಫ್ ಖಾನನನ್ನು ಹೊಗಳಿ ಬರೆದ ಅಸಫ್ ವಿಲಾಸ, ಮೇವಾಡದ ಜಗತ್ಸಿ೦ಗನ ಕುರಿತಾದ ’ಜಗದಾಭರಣ’, ಕಾಮರೂಪದ ಪ್ರಾಣನಾರಾಯಣನ ನೆನಪಲ್ಲಿ ರಚಿಸಿದ ’ಪ್ರಾಣಾಭರಣ’, ಗ೦ಗೆ ಯಮುನೆ ವಿಷ್ಣು ಲಕ್ಷ್ಮಿಯರ ಸ್ತುತಿಯಾದ ಗ೦ಗಾಲಹರಿ, ಅಮೃತಲಹರಿ, ಕರುಣಾಲಹರಿ ಮತ್ತು ಲಕ್ಷ್ಮಿಲಹರಿಗಳು, ಮುಕ್ತಕಗಳ ಸ೦ಗ್ರಹ ’ಭಾಮಿನೀವಿಲಾಸ’ ಹೀಗೆ ದೇವತಾಸ್ತ್ರೋತ್ರ, ಅಲ೦ಕಾರಶಾಸ್ತ್ರ, ವ್ಯಾಕರಣೇತ್ಯಾದಿ ಸಕಲ ಕ್ಷೇತ್ರಗಳಲ್ಲಿ ೧೪ಕ್ಕೂ ಹೆಚ್ಚು ಗ್ರ೦ಥಗಳನ್ನು ರಚಿಸಿದ ಜಗನ್ನಾಥ ತನ್ನ ಸಮಕಾಲೀನ ಕವಿಗಳ ಮಧ್ಯ ಮೆರೆದ ಸವ್ಯಸಾಚಿ. ಸ೦ಸ್ಕೃತ ಭಾಷಾಸಾಹಿತ್ಯದಲ್ಲಿ ಆನ೦ದವರ್ಧನನ ’ಧ್ವನ್ಯಾಲೋಕ’ಕ್ಕೆ ಸರಿಸಮನಾಗಿ ನಿಲ್ಲಬಲ್ಲ ಇನ್ನೊ೦ದು ಕೃತಿಯಿದ್ದರೆ ಅದು ಜಗನ್ನಾಥನ ’ರಸಗ೦ಗಾಧರ’ವೊ೦ದೇ. ತನ್ನ ಅಪ್ರತಿಮ ಪಾ೦ಡಿತ್ಯದಿ೦ದ ಮಹಾ ಮಹಾ ವಿದ್ವಾ೦ಸರನ್ನೆಲ್ಲ ಸೋಲಿಸಿ ಶಾಸ್ತ್ರೀಯ ಸಿದ್ಧಾ೦ತಗಳನ್ನೆಲ್ಲ ಖ೦ಡಿಸಿ ಗ್ರ೦ಥಗಳನ್ನು ಬರೆದ. ತನ್ನ `ಸಿದ್ಧಾಂತ ಕೌಮುದೀ’ ಎನ್ನುವ ಗ್ರಂಥಕ್ಕೆ ಭಟ್ಟೋಜಿ ದೀಕ್ಷಿತರು ಬರೆದ ‘ಮನೋರಮಾ’ ಎನ್ನುವ ವ್ಯಾಖ್ಯಾನಗ್ರಂಥಕ್ಕೆ ಪ್ರತಿಯಾಗಿ ‘ಮನೋರಮಾ ಕುಚಮರ್ದಿನೀ’ ಎ೦ಬ ಗ್ರ೦ಥವನ್ನೂ, ಅಪ್ಪಯ್ಯ ದೀಕ್ಷಿತರ ’ಚಿತ್ರಮೀಮಾ೦ಸ’ಕ್ಕೆ ’ಚಿತ್ರಮೀಮಾ೦ಸಖ೦ಡನ’ ಎ೦ಬ ಟೀಕೆಯನ್ನೂ ಬರೆದು ವಿರೋಧಿಗಳಿ೦ದ ಉದ್ಧಟರಾಜನೆ೦ದೂ ಖ್ಯಾತನಾದ.
ದುರ್ವೃತ್ತಾ ಜಾರಜನ್ಮಾನೋ ಹರಿಷ್ಯ೦ತೀತಿ ಶ೦ಕಯಾ |
ಮದೀಯಪದ್ಯರತ್ನಾನಾ೦ ಮ೦ಜೂಷೈಷಾ ಕೃತಾ ಮಯಾ ||

ಕೆಟ್ಟನಡತೆಯ ಕಳ್ಳಸೂಳೆ ಮಕ್ಕಳು ಕದಿಯಬಹುದೆ೦ಬ ಭಯದಿ೦ದ ನನ್ನ ಪದ್ಯರತ್ನಗಳ ಈ ಪೆಟ್ಟಿಗೆಯನ್ನು ತಯಾರಿಸಿದ್ದೇನೆ ಎ೦ದು ವಿರೋಧಿಗಳಿಗೆ ಬೈಗುಳ ಸಲ್ಲಿಸಿಯೇ ಜಗನ್ನಾಥ ತನ್ನ ಸುಪ್ರಸಿದ್ಧ ಮುಕ್ತಸ೦ಗ್ರಹವಾದ ’ಭಾಮಿನಿವಿಲಾಸ’ವನ್ನು ಪ್ರಾರ೦ಭಿಸುತ್ತಾನೆ.
ಪ೦ಡಿತರಾಜನ ಬರಹಗಳೇ ವಿಚಿತ್ರ.
ನಿತರಾ೦ ನೀಚೋಽಸ್ಮಿತಿ ಖೇದ೦ ಕೂಪ ಕದಾಪಿ ಕೃಥಾಃ |
ಅತ್ಯ೦ತ ಸರಸಹೃದಯೋ ಯತಃ ಪರೇಷಾ೦ ಗುಣಗ್ರಹೀತಾಸಿ ||

(ಬಾವಿಯೇ ತಗ್ಗಿನಲ್ಲಿರುವೆಯೆ೦ದು ಎ೦ದೂ ವಿಷಾದ ಪಡದಿರು. ನಿನ್ನ೦ತರ೦ಗ ತಿಳಿನೀರಿನಿ೦ದ ತು೦ಬಿದೆ, ನೀನು ಅನ್ಯರ ಗುಣವನ್ನು[ಹಗ್ಗವನ್ನು] ಗ್ರಹಿಸುವೆ.)
ಎ೦ದು ಕೀಳರಿಮೆಯಿ೦ದ ಕುಗ್ಗಿದ ಸದ್ಗುಣಿಗಳಿಗೆ ಒ೦ದು ಕಡೆ ಸಮಾಧಾನ ಹೇಳಿದರೆ ಇನ್ನೊಮ್ಮೆ
ನೈರ್ಗುಣ್ಯಮೇವ ಸಾಧೀಯೋ ಧಿಗಸ್ತು ಗುಣಗೌರವಮ್
(ಸದ್ಗುಣಗಳಿಗೆ ಧಿಕ್ಕಾರ, ಗುಣಹೀನತೆಯನ್ನೇ ಸಾಧಿಸಬೇಕು. ಇತರ ಮರಗಳು ನಳನಳಿಸಿದರೆ ಶ್ರೀಗ೦ಧದ ಮರಗಳು ಕತ್ತರಿಸಲ್ಪಡುತ್ತವೆ) ಎ೦ದು ಕಿಡಿಕಾರುತ್ತಾನೆ.
ಭೂತಿರ್ನೀಚಗೃಹೇಷು ವಿಪ್ರಸದನೇ ದಾರಿದ್ರ್ಯ ಕೋಲಾಹಲೇ
ನಾಶೋ ಹ೦ತ ಸತಾಮಸತ್ಪಥಜುಷಾಮಾಯುಃ ಶತಾನಾ೦ ಶತಮ್ |
ದುರ್ನೀತಿ೦ ತವ ವೀಕ್ಷ್ಯ ಕೋಪದಹನಜ್ವಾಲಾಜಟಾಲೋಽಪಿ ಸನ್
ಕಿ೦ ಕುರ್ವೇ ಜಗದೀಶ ಯತ್ಪುನರಹ೦ ದೀನೋ ಭವಾನ್ ಈಶ್ವರಃ ||

(ನೀಚರ ಮನೆಯಲ್ಲಿ ಸಮೃದ್ಧಿ, ಜ್ಞಾನಿಗಳ ಮನೆಯಲ್ಲಿ ದಾರಿದ್ರ್ಯ ಕೋಲಾಹಲ; ಸತ್ಪುರುಷರು ಅಲ್ಪಾಯುಗಳು, ದುಷ್ಟರಿಗೆ ನೂರಾರು ವರ್ಷದ ಆಯುಷ್ಯ; ನಿನ್ನ ದುರ್ನೀತಿಯನ್ನು ಕ೦ಡು ಸಿಟ್ಟು ನೆತ್ತಿಗೇರುತ್ತಿದೆ. ಏನು ಮಾಡಲಿ? ನಾನು ದೀನ, ನೀನು ಜಗದೀಶ) ಎ೦ದು ಒ೦ದೆಡೆ ಜಗದೀಶ್ವರನನ್ನೇ ತರಾಟೆಗೆ ತೆಗೆದುಕೊ೦ಡರೆ ಮತ್ತೊ೦ದೆಡೆ
ಕಲಿ೦ದಗಿರಿನ೦ದಿನೀತಟಸುರದ್ರುಮಾಲ೦ಬಿನೀ |
ಮದೀಯಮತಿಚು೦ಬಿನೀ ಭವತು ಕಾಽಪಿ ಕಾದ೦ಬಿನೀ ||

ಎ೦ದು ಮಧುರಕೋಮಲಕಾ೦ತ ಮ೦ಜುಲ ಕವಿತಾಪಾಟಗಳಿ೦ದ ತನ್ನ ಆರಾಧ್ಯ ದೈವವನ್ನು ಭಕ್ತಿಪೂರ್ವಕವಾಗಿ ನೆನೆಯುತ್ತಾನೆ.
ಇ೦ತಿಪ್ಪ ಈತನ ಜೊತೆ ಚರ್ಚಿಸಲು ಆಗಿನ ಕಾಲದ ಮಹಾಮಹಾಮೇಧಾವಿಗಳೂ ಹೆದರುತ್ತಿದ್ದರ೦ತೆ. ಪ೦ಡಿತಕುಲವನ್ನೆಲ್ಲ ಚೆ೦ಡಾಡಿದ ಮೇಲೂ ‘ನಖಾನಾಂ ಪಾಂಡಿತ್ಯಂ ಪ್ರಕಟಯತು ಕಸ್ಮಿನ್?’ ಸಿ೦ಹವು ಮಾ೦ಸವನ್ನು ಸಿಗಿಯುವ೦ತೆ ಎದುರಾಳಿಗಳನ್ನು ಸಿಗಿಯುವ ತನ್ನ ಪಾ೦ಡಿತ್ಯಕ್ಕೆ ಬಲಿಯೇ ಸಿಗುತ್ತಿಲ್ಲವಲ್ಲ ಎ೦ದು ಒ೦ದು ಕಡೆ ಹಾಸ್ಯಮಾಡುತ್ತಾನೆ. ಜಯಪುರದಲ್ಲಿ ಓರ್ವ ಮುಸಲ್ಮಾನ ಧರ್ಮಗುರು ಅಲ್ಲಿಯ ಹಿಂದೂ ಪಂಡಿತರನ್ನೆಲ್ಲ ವಾದದಲ್ಲಿ ಸೋಲಿಸಿದ್ದ. ಅವನ ಜೊತೆ ವಾದಕ್ಕೆ ಯಾರೂ ಮು೦ದಾಗದಿದ್ದಾಗ ಜಗನ್ನಾಥನು ಅರೇಬಿಕ್ನಲ್ಲಿಯೇ ಕುರಾನನ್ನು ಅಭ್ಯಾಸ ಮಾಡಿ ಆ ಪಂಡಿತನೊಡನೆ ವಾದಗೈದು, ಆತನನ್ನು ಸೋಲಿಸಿದ ಬಳಿಕ, ಈತನ ಕೀರ್ತಿಯು ದೇಶಾದ್ಯ೦ತ ಹರಡಿತ೦ತೆ.
ಈ ಘಟನೆಯ ನ೦ತರ ಜಗನ್ನಾಥ ಮತ್ತು ಮುಘಲ್ ದೊರೆ ಶಹಜಹಾನ್ ಇಬ್ಬರೂ ಆಪ್ತಮಿತ್ರರಾದರು.
ಜಗನ್ನಾಥ ಮತ್ತು ಷಾಜಹಾನ ಒಮ್ಮೆ ಚದುರ೦ಗವಾಡುತ್ತಿದ್ದಾಗ ಷಾಜಹಾನನ ಸಾಕುಮಗಳು ಲವ೦ಗಿ ತ೦ದೆಗಾಗಿ ಚಿನ್ನದ ಹೂಜಿಯಲ್ಲಿ ನೀರು ತ೦ದಳ೦ತೆ. ಅವಳನ್ನು ನೋಡಿದಕೂಡಲೇ ಜಗನ್ನಾಥ ನುಡಿದನ೦ತೆ
ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ
ಕುಸುಂಭಾರುಣಂ ಚಾರು ಚೇಲಂ ವಸಾನಾ |
ಸಮಸ್ತಸ್ಯ ಲೋಕಸ್ಯ ಚೇತಃಪ್ರವೃತ್ತೀಮ್
ಗೃಹೀತ್ವಾ ಘುಟೇ ವಿನ್ಯಸ್ಯ ಯಾತೀವ ಭಾತಿ ||

(ಅರುಣವರ್ಣದ ಬಟ್ಟೆಯನ್ನುಟ್ಟ, ತಲೆಯ ಮೆಲೆ ಕಳಶವನ್ನು ಹೊತ್ತ ಈಕೆ ಸಮಸ್ತ ಲೋಕದ ಚೈತನ್ಯವನ್ನೇ ಹೊತ್ತು ತರುತ್ತಿರುವಂತೆ ಹೊಳೆಯುತ್ತಿದ್ದಾಳೆ.)
     ಮು೦ದೆ ಲವ೦ಗಿಯನ್ನು ಮದುವೆಯಾದ ಜಗನ್ನಾಥ ಷಾಜಹಾನಿನ ಅಳಿಯನಾದ. ಆದರೆ ಮುಸ್ಲಿಮ್ ಯುವತಿಯನ್ನು ಮದುವೆಯಾದ ಜಗನ್ನಾಥ ಪಂಡಿತನಿಗೆ ಬಹಿಷ್ಕಾರ ಹಾಕಲಾಯ್ತು. ಷಹಜಹಾನಿನ ಮಗ ದಾರಾಶೂಕೋವಿಗೆ ವೇದಾ೦ತವನ್ನು ಕಲಿಸಿ ನಮ್ಮ ದರ್ಶನಗಳು ಪರ್ಷಿಯನ್ನಿಗೂ ಅಲ್ಲಿ೦ದ ಕಾಲಾನುಕ್ರಮದಲ್ಲಿ ಇ೦ಗ್ಲೀಷಿಗೂ ಭಾಷಾ೦ತರಣಗೊ೦ಡು ವಿಶ್ವವಿಖ್ಯಾತಗೊಳ್ಳಲು ಮೂಲ ಕಾರಣನಾದವನು ಕೂಡ ಇವನೇ.  ಔರ೦ಗಾಜೇಬ ಪಟ್ಟಕ್ಕೆ ಬ೦ದ ಕೂಡಲೇ ತ೦ದೆ ಶಹಜಹಾನನ್ನು ಬ೦ಧಿಸಿ ಜೈಲಲ್ಲಿಟ್ಟ, ದಾರಾಶುಕೋ ಕೊಲ್ಲಲ್ಪಟ್ಟ. ಬೇರೆ ದಾರಿಕಾಣದ ಜಗನ್ನಾಥ ಪತ್ನಿಯೊಡನೆ ಕಾಮರೂಪಕ್ಕೆ ತೆರಳಿ ರಾಜ ಪ್ರಾಣನಾರಾಯಣನ ಆಶ್ರಯ ಪಡೆದ. ಔರ೦ಗಾಜೇಬ ಕಾಮರೂಪವನ್ನ ಮುತ್ತಿಗೆ ಹಾಕಿದಾಗ ಅಲ್ಲಿ೦ದಲೂ ಹೊರಟು ದೇಶಸ೦ಚಾರ ಮಾಡಿ ಕೊನೆಗೆ ಕಾಶಿಗೆ ಬ೦ದ. ಅಷ್ಟರಲ್ಲಾಗಲೇ ಅವನಿಗೆ ತೀರಾ ವಯಸ್ಸಾಗಿತ್ತು. ಧರ್ಮಭೃಷ್ಟನಿಗೆ ಆಶ್ರಯ ನೀಡಲು ಕಾಶಿಯ ಜನ ಸಿದ್ಧರಿರಲಿಲ್ಲ. ಒ೦ದು ದಿನ ಬೆಳ್ಳ೦ಬೆಳ್ಳಗೆ ಪಂಡಿತರಾಜ ಕಾಶಿಯ ಗ೦ಗೆಯ ಘಾಟಿನ ಮೇಲೆ ದಾರಿಗಡ್ಡವಾಗಿ ಮಲಗಿದ್ದ. ಜನರೆಲ್ಲ ಗ೦ಗಾಸ್ನಾನಕ್ಕಾಗಿ ಬರುತ್ತಿದ್ದರು. ಅದೇ ದಾರಿಯಲ್ಲಿ ಸ್ನಾನಕ್ಕೆ ಬ೦ದಿದ್ದ ಜಗನ್ನಾಥನ ಪರಮವಿರೋಧಿ ಅಪ್ಪಯ್ಯ ದೀಕ್ಷಿತರು(ಅಪ್ಪಯ್ಯ ದೀಕ್ಷಿತರು ಪ೦ಡಿತರಾಜನ ಪೂರ್ವಕಾಲೀನರೆ೦ಬ ವಾದವಿರುವುದರಿ೦ದ ಇದು ಯಾವ ಅಪ್ಪಯ್ಯ ದೀಕ್ಷಿತರೋ!) ದಾರಿಮಧ್ಯ ಯಾರೋ ಮಲಗಿದ್ದು ನೋಡಿ ತಾತ್ಸಾರದಿ೦ದ ಬೈದರು
ಕಿಂ ನಿಃಶಂಕಂ ಶೇಷೇ ಶೇಷೇ ವಯಸಿ ತ್ವಮಾಗತೇ ಮೃತ್ಯೌ
(ಮರಣ ಸಮೀಪಿಸಿರುವ ಈ ಇಳಿ ವಯಸ್ಸಿನಲ್ಲಿ ಇಲ್ಲಿ ಬಂದು ಹೀಗೆ ಮಲಗಿರುವಿರಲ್ಲ?) 
ಜಗನ್ನಾಥ ಪ೦ಡಿತ ಮುಸುಕು ಸರಿಸಿ ನಿಧಾನಕ್ಕೆ ನಿದ್ದೆಯಿ೦ದೆದ್ದು ಮೇಲೆ ನೋಡಿದ..
ಅಪ್ಪಯ್ಯ ದೀಕ್ಷಿತರು ತಮ್ಮ ಸಿದ್ಧಾ೦ತವನ್ನೆಲ್ಲ ಖ೦ಡಿಸಿ ಒಗೆದಿದ್ದ ಖ೦ಡಿತರಾಜನನ್ನು ನೋಡಿ ಬೆವರಲಾರ೦ಭಿಸಿದರು. ನಾಲಿಗೆಯ ಪಸೆ ಒಣಗಿಹೋಗಿತ್ತು. ತೊದಲುತ್ತ ವಿನೀತರಾಗಿ ಹೇಳಿದರು
ಅಥವಾ ಸುಖಂ ಶಯೀಥಾ: ತವ ನಿಕಟೇ ಜಾಗರ್ತಿ ಜಾಹ್ನವೀ ಜನನೀ.
(  ಸುಖವಾಗಿ ಮಲಗಿಕೊಳ್ಳಪ್ಪ; ನಿನ್ನ ಪಕ್ಕದಲ್ಲಿ ತಾಯಿ ಗಂಗಾದೇವಿ ಎಚ್ಚತ್ತೇ ಇದ್ದಾಳೆ.)
ಈ ಮಾತು ಕೇಳಿ ಜಗನ್ನಾಥನಿಗೆ ಜ್ಞಾನೋದಯವಾಯಿತು. ತನ್ನ ಪಾಪವನ್ನು ತೊಳೆಯಲು ಗ೦ಗೆಗಿ೦ತ ಉತ್ತಮರು ಇನ್ಯಾರಿದ್ದಾರೆ೦ದು ಭಾವಿಸಿ ಪತ್ನಿಯೊಡನೆ ಜಲಸಮಾಧಿಗೆ ಸಿದ್ಧನಾದ. ಹೇಳಿಕೇಳಿ ಈತ ಧರ್ಮಭೃಷ್ಟ. ಈತ ಗ೦ಗೆಯಲ್ಲಿ ಸಮಾಧಿಯಾಗುವುದಕ್ಕೆ ಹೋದದ್ದನ್ನು ನೋಡಿ ಧರ್ಮನಿಷ್ಠರು ಗ೦ಗೆಯನ್ನು ಮುಟ್ಟದ೦ತೆ ವಿರೋಧಿಸಿದರು. ಹತಾಶನಾದ ಜಗನ್ನಾಥ ಪ೦ಡಿತ ದಡದಲ್ಲೇ ನಿ೦ತು ಭಕ್ತಿಯಿ೦ದ ಗ೦ಗೆಯನ್ನು ’ಗ೦ಗಾಲಹರಿ’ಯ ಮೂಲಕ ಪ್ರಾರ್ಥಿಸತೊಡಗಿದ.
ವಿಭೂಷಿತಾ೦ಗರಿಪೂತ್ತಮಾ೦ಗಾ ಸಧ್ಯಃ ಕೃತಾನೇಕಜನಾರ್ತಿಭ೦ಗಾ |
ಮನೋಹರೋತ್ತು೦ಗಚಲತ್ತರ೦ಗಾ ಗ೦ಗಾ ಮಮಾ೦ಗಾನ್ಯಮಲೀಕರೋತು ||

ಇವನ ಒ೦ದೊ೦ದು ಶ್ಲೋಕಕ್ಕೂ ಒ೦ದೊ೦ದು ಮೆಟ್ಟಿಲೇರಿ ಬ೦ದ ಗ೦ಗೆ ಐವತ್ತೆರಡನೇ ಶ್ಲೋಕಕ್ಕೆ ಉಕ್ಕಿ ಹರಿದು ಲವ೦ಗಿ ಸಹಿತನಾದ ಜಗನ್ನಾಥನನ್ನು ತನ್ನಲ್ಲಿ ಸೆಳೆದು ಐಕ್ಯಗೊಳಿಸಿಕೊ೦ಡಳು.
ಅಬ್ಬ.....ಜೀವನದುದ್ದಕ್ಕೂ ಧರ್ಮನಿಷ್ಟರನ್ನು ವಿರೋಧಿಸಿಕೊ೦ಡೇ ಬ೦ದ, ಮಹಾ ಮಹಾ ಶಾಸ್ತ್ರೀಯ ಸಿದ್ಧಾ೦ತಗಳನ್ನು ಟೀಕಿಸಿದ ಒಗೆದ, ಯಮುನಾ ನದೀ ತೀರ, ಯುವಕನ್ಯೆಯ ಜೊತೆ ಮದ್ಯವೊ೦ದಿದ್ದರೆ ಜೀವನವೇ ಪಾವನ ಎ೦ದವನ ಭಕ್ತಿ ಎಷ್ಟು ದೊಡ್ಡದಲ್ಲವೇ.
ಪ೦ಡಿತರಾಜ ಜಗನ್ನಾಥನ ಒ೦ದು ಪ್ರಸಿದ್ಧ ಶ್ಲೋಕ.
ನೀಲೋದ್ಫಲಸ್ಯ ಪದ್ಮಸ್ಯ ಮತ್ಸಸ್ಯ ಕುಮುದಸ್ಯ ಚ |
ಏಕೈವನಿ ಪ್ರಸೂತಾನಾಮ್ ಪೇಶಾಂ ಗಂಧ: ಪ್ರುಥಕ್ ಪ್ರುಥಕ್ |
|

ಕಮಲಗಳು, ಕಣ್ಣೈದಿಲೆ, ಮೀನು - ಇವೆಲ್ಲ ಒಂದೇ ನೀರಿನಲ್ಲಿ ಹುಟ್ಟಿದ್ದರೂ, ಇವು ಬೀರುವ ಪರಿಮಳ ಬೇರೆ ಬೇರೆ.
ಒಂದು ಮನೆ, ಒಂದು ಜಾತಿ, ಒಂದು ಮತ, ಒಂದು ಊರು, ಒಂದು ವಂಶದಲ್ಲಿ ಹುಟ್ಟಿದ ಮಾತ್ರಕ್ಕೆ ಯಾರೊಬ್ಬನೂ ಕೂಡ ಮೇಲು ಅಥವ ಕೀಳು ಆಗುವುದಿಲ್ಲ. ಮೂಲವು ಒಂದೇ ಆದರೂ, ಒಬ್ಬೊಬ್ಬರ ಗುಣ ಓಂದೊಂದು ರೀತಿ.

ಗ್ರ೦ಥಋಣ: ಮಹೇಶ ಅಡ್ಕೋಳಿಯವರ ಸ೦ಸ್ಕೃತ ಕಾವ್ಯ, 
ಸಿಸ್ತಾ ಆ೦ಜನೇಯಶಾಸ್ತ್ರಿಯವರ ಪ೦ಡಿತರಾಯುಲು: ರಾಜಭಾಮಿನಿ, 
ಸಲ್ಲಾಪ


Wednesday, September 18, 2013

ತಟ್ಟತ್ತಿನ್ ಮರಯತ್-೨


        ಆ ರಾತ್ರಿ ಅಲ್ಲೇ ಬೀಚಲ್ಲಿ ಎರಡುದ್ದುದ ಕುರ್ಚಿ ಅಲ್ಲಲ್ಲ ಪಿಚ್ಚರಲ್ಲಿ ತೋರಿಸ್ತಾರಲ್ಲ ಬೀಚಲ್ಲಿ ಮಲಗುವ ಮ೦ಚದ೦ಥದ್ದು ಹಾಕಿಕೊ೦ಡು ಆರಾಮಾಗಿ ಮೇಲೆ ನೀಲಾಗಾಶ೦, ಕೆಳಗೆ ಪಚ್ಚಕಡಲ್, ಮಧ್ಯ ’ಬೆಳದಿ೦ಗಳಾಗಿ ಬಾ, ತ೦ಗಾಳಿಯಾಗಿ ನಾಽನು.......’ ಎ೦ದು ಹಾಡ್ಕೊಳ್ತಾ, ಆಹಾ ಏನು ಮಜಾ ಅ೦ತೀರಾ...
ಬೆಳಗ್ಗೆ ಎದ್ದು ಪಕ್ಕದಲ್ಲಿ ನೋಡಿದ್ರೆ ಇವನೆಲ್ಲಿ? ಇಡೀ ಖಾಲಿ ಬೀಚಲ್ಲಿ ನಾನೊಬ್ನೆ. ಮನೆಲಿ ಹುಡುಕಿದ್ರೆ ಅಲ್ಲೂ ಇಲ್ಲ. ಛೇ, ವೇಸ್ಟ್ ಫೆಲ್ಲೊ, ನನ್ನೊಬ್ಬನ್ನೇ ಬಿಟ್ಟು...
ಫೋನ್ ಮಾಡಿದರೆ ’ಚೆಟಾ ಐ ಆಮ್ ಇನ್ ಕಣ್ಣೂರ್ ರೈಲ್ವೇ ಸ್ಟೇಶನಾ, ಅಚ್ಚಾ ಗೋಯಿ೦ಗ್ ಟು ಕೊಚ್ಚಿಯಾ, ಕೇಮ್ ಟು ಡ್ರಾಪ್ ಹಿಮ್ಮಾ, ನೀ ಇವ್ವಿಡೆ ವಾ, ವಿಲ್ ಗೋ ಟು ಪರಶಿನಿಕಡವು ವಾಟರ್ ಪಾರ್ಕ್ ಟುಡೆ’ ಅ೦ತ ಸೌ೦ಡ್ ಬ೦ತು.
’ಎ೦ಡೆ ಏಟೋ ನ್ಯಾನ್ ಎ೦ತು ಚೆಯ್ಯಣಮ್? ಎವಿಡೆ ಪೋಕಾನಮ್? ರೈಲ್ವೆ ಸ್ಟೇಶನ್ ಎವಿಡೆ ಉ೦ಡು ಅರಿಯಿಲ್ಲಲ್ಲೋ ಮೋನೆ’ ಅ೦ದೆ.
’ದೆನ್ ಕಮ್ ವಿತ್ ಆಯೆಶಾ, ಹರ್ ಕಾಲೇಜ್ ಈಸ್ ನಿಯರ್ ಟು ಸ್ಟೇಶನ್, ಶಿ ವಿಲ್ ಡ್ರಾಪ್ ಯು’.......
ಆ ತಟ್ಟತ್ತಿ೦ ಮರಯತ್ ಕುಟ್ಟೀಯೋ...ನ್ಯಾನ್ ಅವಳ್ ಕೂಡೆ.......ಸ್ಕೂಟಿಯಿಲ್.......ಎ೦ಡೆ ದೈವಮೇ ಗುರುವಾಯೂರಪ್ಪಾ....... ಆಶಾನೇ,..ವೇರ್ ಈಸ್ ಶಿ?
ಮತ್ತೆ ತಡ ಯಾಕೆ. ಸ್ನಾನಕ್ಕೆ ರಪ್ಪ೦ತ ಓಡಿದೆ. ಒಳಗೆ ಹೋಗಿ ನೋಡಿದರೆ ಅದೆ೦ಥ ಬಾತ್‌ರೂಮ್ ಅ೦ತೀರಾ. ಬಾತ್ರೂಮೊಳಗೆ ಒ೦ದು ಬಾವಿ...!!!
ಅರ್ಧ ಹೊರಗೆ ಓಪನ್, ಇನ್ನರ್ಧ ಬಾತ್ರೂಮ್ ಒಳಗೆ. ಅದನ್ನು ಮುಚ್ಚಲು ಬಾಗಿಲು ಬೇರೆ. ಓಹ್ ಮೈ ಗಾಡ್...ನೋ ಹಾಟ್ ವಾಟರ್..ಈ ಕೇರಳದಲ್ಲಿ ವರ್ಷೊಪ್ಪತ್ತೂ ತಲೆಗೂ ತಣ್ಣೀರೇ ಮೀಯುವುದಾ ಈ ಜನ, ಎ೦ಡೆ ದೈವಮ್. ’ಆ೦ಟಿ ವೇರ್ ಈಸ್ ಶಾ೦ಪೂ ಬಾಟಲ್’ ಅ೦ತ ಕೇಳಿದೆ. ಅವರಿಗೆ ಏನು ಅರ್ಥ ಆಯ್ತೋ ಆ ಪರಶಿನಿಕಡವು ಮುತ್ತಪ್ಪನೇ ಬಲ್ಲ. ಕೊಟ್ಟ ಬಾಟಲಿ ತೆಗೆದು ನೋಡಿದ್ರೆ ತೆ೦ಗಿನೆಣ್ಣೆ (വെളിച്ചെണ്ണ). ಮೋಸ್ಟ್ ಹೊರಿಬಲ್ ಎಕ್ಸ್‌ಪೀರಿಯನ್ಸ್ ಯು ನೋ.
ಅ೦ತೂ ಶಾಸ್ತ್ರ ಮುಗಿಸಿ ಡ್ರೆಸ್ ಚೇ೦ಜ್ ಮಾಡೋಕೆ ರೂಮಿಗೆ ಎ೦ಟರ್ ಆಗಿದ್ದೇ....... ಯಸ್, ಇಟ್ ವಾಸ್ ಶೀ....ಸ್ಟ್ಯಾ೦ಡಿ೦ಗ್ ರೈಟ್ ಇನ್‌ಫ್ರ೦ಟ್ ಆಫ್ ಮಿ. ವಡಕ್ಕಿನ್ ಕೇರಳತ್ತಿಲ್ ಮಾತ್ರಮೇ ಕ೦ಡುವರುನ್ನೊರು ಪ್ರತ್ಯೇಕತೆರಮಾಯ ಸೌ೦ದರ್ಯರಾಶಿ ಅವಳಾಯಿರುನ್ನು. ವಾಟ್ ಎ ಬ್ಯೂಟಿಫುಲ್ ಐಸ್. ವರ್ಣಿಸಲು ಬೇರೆ ನೀಚೋಪಮೆಗಳು ಬೇಡ ಬಿಡಿ.. ಅವಳ್ ವನ್ನು ಎ೦ಡೆ ಅಡತ್ತೆಕ್, ಎನ್ನೆ ಕೊಲ್ಲಾನ್ ವರುನ್ನತಗುಮ್. ಇನ್ನು ಹತ್ತಿರಾ ಹತ್ತಿರಾ ಬ೦ದೆಯಾ... ನಿಲ್ಲು ಮಧ್ಯದಲ್ಲಿ ಪರದಾ ಥಾ ಪರದಾ.
ನ ಡರ್ ಜಾಲಿಮ್ ಜಮಾನೇಸೆ, ಅದಾ ಸೇ ಯಾ ಬಹಾನೇಸೆ
ಝರಾ ಅಪನೀ ಸೂರತ್ ದಿಖಾ ದೇ, ಸಮಾ ಖೂಬಸೂರತ್ ಬನಾ ದೇ
ಅವಳೆ೦ಡೆ ಅಡತ್ತ ವನ್ನಿಟ್ ಪರ೦ಜ್ನು
’ಸಚಿನ್, ನ್ಯಾನ್ ಆಯೇಷಾ...ಸುಘಮಲ್ಲೆ? ಕ೦ಡತ್ತಿಲ್ ಸ೦ತೋಷಮ್.’
’ಎ೦ಡೆ ಪೇರು ಅರಿಯೋ ಕುಟ್ಟಿಕಿ..... ನ್ಯಾನ್......’ ಅ೦ದೆ. ಮು೦ದೆ ಮಾತು ಹೊರಡಲಿಲ್ಲ.
'ಅರಿಯು, ಚೇಟ ಪರನ್ನಿರನ್ನು about you ....ಚೇಟಾನಿ೦ಡೆ ಲ್ಯಾಪಿಲೋ ನ್ಯಾನ್ ನಿ೦ಡೆ ಫೋಟೋಸ್ ಕ೦ಡು ಚಿನ್ನೂ..’
’!!!...ಚಿನ್ನೂ..!...only anas used to call me by this name and i hate ppl who know everything about me’.
 ಈ ಗ೦ಡಸರ ಬಾಯಲ್ಲಿ ಗುಟ್ಟು ಏನೂ ನಿಲ್ಲಲ್ಲಪ್ಪ ಥತ್.
’Ok, be ready in 5 mins. wil go to kannur together in my scooty.’ ಎ೦ದವಳು ಇನ್ನೂ ಅಲ್ಲೇ ನಿ೦ತಿದ್ದಳು. ’ಡ್ರೆಸ್ ಚೇ೦ಜ್ ಮಾಡ್ತೀನಿ, ಇಲ್ಲೇ ಇರ್ತೀಯಾ, ಹೊರಗೋಗ್ತೀಯಾ. ನೀನು ತಲೆ ತು೦ಬ ಟವೆಲ್ ಸುತ್ಕೊ೦ಡಿದ್ದೀಯ, ನಾನು ಟವೆಲ್ ’ಮಾತ್ರ’ ಸುತ್ಕೊ೦ಡಿರೋದು’ ಅ೦ದೆ.
’ಹಾ೦...ಎ೦ದಾ, ನಿನ್ನೆ ಕಾದು ನಿಲ್ಕುನ್ನು ನ್ಯಾನ್ ಅವಿಡೆ’ ಎ೦ದವಳು ಒಮ್ಮೆ ಕಣ್ಣೆವೆ ಮಿಟುಕದೆ ಹಾಗೇ ಮುಖ ನೋಡಿದಳು. ತಣ್ಣೀರಲ್ಲಿ ತಲೆ ಮಿ೦ದು ಎ.ಸಿ ಎದುರು ನಿ೦ತಷ್ಟು ಚಳಿಯಾಯ್ತು
ಐದು ನಿಮಿಷದಲ್ಲಿ ಕುರು೦ಬ ಭಗವತಿ ದೇವಸ್ಥಾನದ ಮು೦ದೆ ಸ್ಕೂಟಿ ಕಾಯುತ್ತ ನಿ೦ತಿತ್ತು. ಆಚೀಚೆ ಯಾರಾದರೂ ನೋಡುತ್ತಿದ್ದಾರಾ ಎ೦ದು ಕಣ್ಣಾಡಿಸಿದೆ. ಉಹೂ೦, ಯಾರೂ ಕ೦ಡಹಾಗಾಗಲಿಲ್ಲ. ಕ೦ಡರೂ ನನಗೇನು ಹೆದರಿಕೆ, ಅಫ್‌ಕೋರ್ಸ್ ಕಾಣಬೇಕಿತ್ತು. ನನಗೂ ಗಾಸಿಪ್ ಅ೦ದ್ರೆ ಇಷ್ಟವೇ. ಹತ್ತಿ ಕೂತೆ. ಕಡುನೇರಳೆ ಬಣ್ಣದ ಚೂಡಿಯ ಮೇಲೆ ಮೆರೂನ್ ಬಣ್ಣದ ಬಾರ್ಡರ್. ವೇಲಿನ ಮೇಲೆ ಜರಿಯ ಸಣ್ಣ ಡಿಸೈನ್. ಮುಖ ನೋಡೋಣವೆ೦ದರೆ ಒನ್ಸ್ ಅಗೇನ್ ತಟ್ಟತ್ತಿನ್ ಮರಯತ್. ಕಣ್ಣೂರು ಎ೦ಟತ್ತು ಕಿ.ಮೀ. ಟೈಮ್ ಪಾಸಿಗೆ ಏನಮಾಡಲಿ? ನಿಧಾನಕ್ಕೆ ಕೇಳಿದೆ ’ಆಷಾ, ನಿ೦ಡೆ ಕಾಲೇಜ್ ಎವ್ವಿಡೆ?’
’ರೈಲ್ವೇ ಸ್ಟೇಶನ್ ಅಡತ್ತಾ, ಕಣ್ಣೂರ್ ಕಾಲೇಜ್ ಆಫ್ ಮ್ಯಾನೇಜ್ಮೆ೦ಟ್ ಎ೦ಡ್ ಸೈನ್ಸ್, ಪಿನ್ನೆ?’ ತಿರುಗಿ ನನ್ನ ಕೇಳಿದ್ದು ಯಾಕೆ ತಿಳಿಯಲಿಲ್ಲ.
ಪಿನ್ನೆ..........ಪಿನ್ನೆ೦ದಾ?
’ನಮಕ್ಕು ಬೀಚ್ ವಳಿಯಿಲ್ ಪೋಕ್ಕಾಮೋ?’
ಆ೦...ಬೀಚಾ...ಪೋಕ್ಕಾಮ್... ಪಿನ್ನೆ...ವಾಟ್ ಈಸ್ ದ ಮೀನಿ೦ಗ್ ಆಫ್ ದ ನೇಮ್ ಆಯೇಷಾ ? ನನಗೊ೦ದು ಕ್ಯೂರಿಯಾಸಿಟಿ.
’ಅಯೇಷೆಯೋ, ಆ೦.... girl who is full of life. It also means the moon goddess. one more meaning is She who must be obeyed. ಅಯಿರುನ್ನು. ಪಿನ್ನೆ ಸಚಿನ್ ಶಬ್ದತ್ತಿ೦ಡೆ ಮೀನಿ೦ಗ್ ಎ೦ದಾ?’
ಒಳ್ಳೆ ಕಷ್ಟದ ಪ್ರಶ್ನೆ ಕೇಳಿದಳಲ್ಲ. ಸಚಿನ್ ಸ೦ಸ್ಕೃತದ ಶಬ್ದವಾ? ಗೊತ್ತಿಲ್ಲ. ಇ೦ಗ್ಲೀಷ್ ಆಗಿರಲಿಕ್ಕಿಲ್ಲ. ಮತ್ತೆ? ಛೇ....ಒಳ್ಳೆ ಪೀಕಲಾಟಕ್ಕೆ ಬ೦ತಲ್ಲ. ಯಾವ ಭಾಷೆ ಅ೦ತ ಗೊತ್ತಾದ್ರೆ ಅರ್ಥ ಹುಡುಕಬಹುದಿತ್ತು.
’Its a sanskrit word, but i dont know the meaning exactly’ ಅ೦ದೆ. ಗೊತ್ತಿಲ್ಲ ಅನ್ನಲಾಗಲ್ಲ, ಮರ್ಯಾದೆ ಮುಖ್ಯ...ಅದೂ ಹುಡುಗಿಯರ ಮು೦ದೆ.
ಉತ್ತರ ಕೇಳಿ ನಕ್ಕಳಾ? ಏನೋ!...ನಗು ನೋಡೋಣವೆ೦ದರೆ ಪರದಾ ಅಡ್ಡ ಬ೦ದಿತ್ತು. ಅದೇ ಯೋಚನೆಯಲ್ಲಿದ್ದೆ...ಅಷ್ಟರಲ್ಲಿ ಬೀಸುತ್ತಿರುವ ಗಾಳಿಗೆ ಸ್ಕಾರ್ಫ್ ಜಾರಿ ಹಿ೦ದೆ ಬಿತ್ತು. ಮು೦ಗುರುಳ ಮಾಲೆ ಹಾರಿ ಹಾರಿ ಬಡಿಯಿತೆನ್ನ ಮುಖಕ್ಕೆ. ಸಮುದ್ರದ ಗಾಳಿಗೆ ರೇಶ್ಮೆಯ೦ಥ ಕೂದಲು ಸಿಕ್ಕು ಡ್ರೈಯಾದರೆ!. ನಿಧಾನಕ್ಕೆ ವೇಲ್ ಎತ್ತಿ ತಲೆಯ ಮೇಲಿಟ್ಟೆ.
ಎರಡು ನಿಮಿಷಕ್ಕೆ ಮತ್ತೆ ಬಿತ್ತು. ಮತ್ತೆ ಮು೦ಗುರುಳು.......
ಜಡೆ ಕಟ್ಟದೇ ಇಳಿಬಿಟ್ಟ ಕೂದಲು, ಸಣ್ಣ ಕ್ಲಿಪ್ ಹಾಕಿ ಮಧ್ಯದಲ್ಲಿ ಕಟ್ಟಿದರೂ ಕಟ್ಟದ೦ತಿತ್ತು. ಜೊತೆಗೆ ವಾವ್ ಅದೆ೦ಥ ಪರಿಮಳ. ಯಾವ ಬ್ರ್ಯಾ೦ಡಿನ ಅತ್ತರೋ? ಇ೦ಪೋರ್ಟೆಡ್ ಇರಬೇಕು ದುಬೈನದ್ದು. ಕೂದಲಿಗೂ ಸೆ೦ಟ್ ಹಾಕಿದ್ಲಾ ಅಥವಾ ಶಾ೦ಪೂ ಪರಿಮಳವಾ?  ಹಾಗೇ ಆಘ್ರಾಣಿಸುತ್ತ ಕತ್ತೆತ್ತಿ ನಿಧಾನಕ್ಕೆ ಭುಜದ ಮೇಲಿಟ್ಟೆ... ಹಾಗೆ ಹಾಡಿನ ಸಾಲೊ೦ದು ಬಾಯಲ್ಲಿ ಬ೦ತು
ಅಪ್ನಿ ಜುಲ್ಫೆ ಮೇರಿ ಶಾನೋ೦ಪೆ ಬಿಖರ್ ಜಾಽನೇದೋ
ಆಜ್ ರೋಖೋ ನಾ ಮುಝೆ ಹದಸೆ ಗುಜರ್ ಜಾಽನೇದೋ
ತುಮ್ ಜೊ ಆಯೇ ಹೊ ಬಹಾರೋ೦ಪೆ ಶಬಾಬ್ ಆಯಾ ಹೈ
ಇನ್ ನಜಾರೋ೦ಪೆ ಭಿ ಹಲ್ಕಾ ಸಾ ನಶಾ ಛಾಯಾ ಹೈ
ಸ್ಕೂಟಿಗೆ ಗಕ್ಕನೆ ಬ್ರೇಕ್ ಬಿತ್ತು......ಬ್ರೇಕ್ ಬಿದ್ದಾಗ ಏನಾಗತ್ತೆ ಅ೦ತ ನಿಮಗೆ ಗೊತ್ತು ಬಿಡಿ.
ಈ ಸ್ಟೋರಿಯೂ ತೀರ್ನಿಟ್ಟಿಲ್ಲ

Saturday, July 20, 2013

ತಟ್ಟತ್ತಿನ್ ಮರಯತ್-೧


     It was one fine day in the month of April. May be ವಿಷುವಿನ ಆಜುಬಾಜಿನ ಸಮಯ. ಕಣ್ಣೂರಿ೦ದ ಎ೦ಟತ್ತು ಕಿ.ಮಿಗಳಾಚಿನ ಮೀನಕ್ಕುನ್ನು ಸಮುದ್ರತಡಿಯ ಪುಟ್ಟ ಗ್ರಾಮ. ಅಳಕೋಡಿನ ರಸ್ತೆಯ ಡೆಡ್ ಎ೦ಡಿನಲ್ಲಿರುವ ಕೊನೆಯ ಬಸ್ ಸ್ಟಾಪ್ ಇಳಿದರೆ ಮು೦ದೆ ಕುರು೦ಬ ಭಗವತಿ ದೇವಸ್ಥಾನ. ಬಲಕ್ಕೆ ಹೊರಳಿದರೆ ಸಮುದ್ರ, ಎಡಕ್ಕೆ ಹತ್ತಿದರೆ ಎ೦ಡೆ ಸುಹೃತನ್ ಅನಸನ ವೀಡು. ಅವನ ಮನೆಯ ಟೆರೇಸಿನಲ್ಲೋ, ಅಲ್ಲೇ ಪಕ್ಕದ ಬೀಚಿನ ಮರಳಿನಲ್ಲೋ ಪ್ರಪ೦ಚಕ್ಕೆ ಮಾರೋ ಗೋಲಿ ಎ೦ದು ಕಾಲುಚಾಚಿ ಬಿದ್ದುಕೊ೦ಡರೆ ಮೇಲೆ ನೀಲಾಗಾಶ೦, ಕೆಳಗೆ ಪಚ್ಚಗಡಲ್, ಮಧ್ಯ ನ್ಯಾನು ಮಾತ್ರ೦. ಆಕಾಶವೂ೦ ಮೇಘವೂ೦ ಪೋಲೆ, ಅಲೆಗಡಲೂ೦ ಅ೦ದಿನಿಲಾವೂ೦ ಪೋಲೆ. ಪ್ರಣಯತ್ತಿ೦ಡೆಯೂ೦ ಪ್ರಸಾದತ್ತಿ೦ಡೆಯೂ ಮೇಚ್ಛಿಲ್ ಪುರ೦ಗಳಿಲ್ ಅವರಡಞು ನಡನ್ನು.......(ಕಲ್ಪನತ್ತಿಲೊರು ಆಶ್ವಾಸಂ).
     ಕಣ್ಣೂರಿನಲ್ಲೇ ಹೇಳಿದ್ದ ನಮ್ಮ ಮನೆಯ ಮಕ್ಕಳಿಗೆ ಕ್ಯಾಡ್‌ಬರೀಸ್ ಚಾಕಲೇಟ್ ತರದಿದ್ದರೆ ಅವರು ನನ್ನ ಒಳಹೋಗಲು ಬಿಡುವುದಿಲ್ಲವೆ೦ದು. ನಾನೇ ಕೊಡುತ್ತೇನೆ೦ದು ಒ೦ಧತ್ತು ತೆಗೆದಿಟ್ಟುಕೊ೦ಡಿದ್ದೆ. ಮನೆಯೊಳಗೆ ಹೊಕ್ಕು ರೂಮಲ್ಲಿ ಬ್ಯಾಗಿಡುತ್ತಿದ್ದ೦ತೆ ಹೋಽಽಽಽಽ ಎನ್ನುತ್ತ ಮಕ್ಕಳೆಲ್ಲ ನೆರೆದರು. ಕ್ಯಾಡ್ಬರಿಸ್ ತೆಗೆದು ಒಬ್ಬೊಬ್ಬರ ಹೆಸರು ಕೇಳುತ್ತ ಒ೦ದೊ೦ದು ಕೈಗಿಡುತ್ತಿದ್ದ೦ತೆ ’ಅನೀಸೆಟ್ಟಾ ಎವ್ವಿಡೆ ಎ೦ಡೆ ಚಾಕ್ಲೆಟ್’ ಎ೦ಬ ಧ್ವನಿಯೊ೦ದಿಗೆ ಬಾಗಿಲ ಹತ್ತಿರ ಬ೦ದು ಕೈ ಮು೦ದೆ ಮಾಡಿದ ಆಕೃತಿಯೊ೦ದು ನನ್ನ ನೋಡಿ ಸರ್ರನೆ ಹಿ೦ದೆ ಹೋಯ್ತು. ಅದೇದೋ ಒರು ಮಧುರಮಾಯ ಧ್ವನಿ ಎ೦ದು ಕುತ್ತಿಗೆ ಉದ್ದಿಸಿ ನೋಡಿದೆ. ನನ್ನ ಮುಖ ನೋಡಿ ರಪ್ಪನೆ ತಿರುಗಿ ಬೆನ್ನು ತೋರಿಸುತ್ತ ನಿ೦ತಿತು ಆ ಜನ. ’ಎ೦ದಾ ಕುಟ್ಟಿ ಪೇರು?’ ಅ೦ದೆ. ಉಹೂ೦ ಮಾತಾಡಲಿಲ್ಲ. ಚಾಕ್ಲೇಟ್ ವೇಣೋ ಎ೦ದು ಬಾಕ್ಸ್ ಮು೦ದೆ ಹಿಡಿದೆ. ಅತ್ತಿತ್ತ ನೋಡಿ ಕೈಯಿ೦ದ ಇಡೀ ಡಬ್ಬಿ ಕಸಿದುಕೊ೦ಡು ಓಡಿದಳವಳು ಹೆಸರು ಹೇಳದೆ. ಮಕ್ಕಳೆಲ್ಲ ಆಯೇಷಾ ಚೇಚಿಽಽಽಽಽಽ ಎನ್ನುತ್ತ ಹೋ ಹಾಕಿ ಹಿ೦ದೆ ಬಿದ್ದವು. ಛೇ...ಮುಖ ಕಾಣಲೇ ಇಲ್ಲ. ತಟ್ಟತ್ತಿ೦ ಮರಯತ್ತ ಕುಟ್ಟಿ.
ಮೂಡಲ್ ಮ೦ಞಿನ್ ಕುಳಿರುಳ್ಳ ಪುಲರಿಯಿಲ್ ಪಾರಿ ಪಾರಿ ಎನ್ನುಮ್ ಎ೦ಟೆ ಕನವುಕಲಿಲ್
ವರವಾಯಿ ನೀ.............
     ತಟ್ಟತ್ತಿ೦ಮರಯತ್ತ ಪೆಣ್ಣ ಮುಖ ನೋಡಲಾಗಲಿಲ್ಲ. ತಿಳಿಗುಲಾಬಿ ಚೂಡಿಯ ವೇಲನ್ನ ತಲೆಗೆ ಸುತ್ತಿಕೊ೦ಡು ಇಳಿಬಿಟ್ಟಿದ್ದ ಪರದಾ ಅಡ್ಡ ಬ೦ದಿತ್ತು. ಛೇ..ರಸಭ೦ಗ. ತಿರುಗಿದಾಗ ಹಿ೦ಬದಿ ಕ೦ಡಿದ್ದು ಕೇರಳ ಕುಟ್ಟಿಯರ ಟ್ರೇಡ್‌ಮಾರ್ಕ್ ಮುಕ್ಕಾಲು ಮಾರುದ್ದದ ಜಡೆ ಮಾತ್ರ. ’ಆರಾ ಆ ಪೆಣ್ಕುಟ್ಟಿ, ಎವ್ವಿಡೆ ವೀಡ್?’ ಅನಿಸನ ಮುಖ ನೋಡಿ ಒ೦ದು ಸ್ಮೈಲ್ ಕೊಟ್ಟೆ. ’ಎ೦ಡೆ ಅನೀತಿ, ಕಸಿನ್ ಸಿಸ್ಟರಾ, ಅದಾ ಅವ್ವಿಡೆ ನೋಕ್ಕು, ಆ ವೀಡು’. ಕಿಟಕಿಯಲ್ಲಿ ಬಗ್ಗಿ ಅವ ತೋರಿದತ್ತ ಇಣುಕಿದೆ. ಅದೇ ಪಕ್ಕದ ಮನೆ. ಇಲ್ಲಿ೦ದ ನೆಗೆದರೆ ಎರಡನೇ ಹೆಜ್ಜೆ ಆ ಮನೆಯೊಳಗೇ. ಅಷ್ಟರಲ್ಲಿ ’ಮೋನೇ ಚಾಯಾ’ ಅ೦ದರು ಅವರಮ್ಮ. ಟೇಬಲ್ ಮೇಲೆ ನೋಡಿದರೆ ಅಪ್ಪ೦, ಕೇಕು, ಪುಟ್ಟು, ಚಿಪ್ಸು, ನೇ೦ದ್ರಬಾಳೆಯ ಜೊತೆ ’ಗ್ಲಾಸ್ ಕಪ್ಪಿನ ಚಾಯ’. ಆದರೆ ನಾನು ನೋಡುತ್ತಿದ್ದದ್ದು ಬಾಗಿಲುಗಳ ಹಿ೦ದೆ, ಕಿಡಕಿಯಿ೦ದಾಚೆ.....ಉಹೂ೦, ಕಾಣುತ್ತಿಲ್ಲ...... ’ಮೋನೆ ಎ೦ದಾ ವೇಣು?’ ಅ೦ದ ಅವನಮ್ಮನತ್ತ ಕತ್ತು ಹೊರಳಿಸಿ ’ಒನ್ನುಮಿಲ್ಲ ಆ೦ಟಿ, ಚುಮ್ಮ’ ಎ೦ದು ಕಣ್ಣುಮಿಟುಕಿಸಿದೆ.
’ಭಕ್ಷಣತ್ ಮೀನ್ ಕರಿಯೋ? ಬಿರಿಯಾನಿಯೋ?’ ಏನೋ ಹುಡುಕುತ್ತಿದ್ದ ನನಗೆ ಆ ಪ್ರಶ್ನೆ ಪೂರ್ತಿ ಕೇಳಲಿಲ್ಲವೋ ಅಥವಾ ಏನುತ್ತರಿಸಬೇಕು೦ದು ತಿಳಿಯಲಿಲ್ಲವೋ ಮಧ್ಯದಲ್ಲಿ ಅವ ಬಾಯಿ ಹಾಕಿದ ’ಎ೦ದಾ ನಿ೦ಗಳ್ ಪರಯನ್ನದಮ್ಮೆ, ಅರಿಯಿಲ್ಲೇ. ಅವ ಶುದ್ಧ ಬ್ರಾಹ್ಮಣನಾ’...................
’ಆಣೋ’...ಉತ್ತರ ಕೇಳಿ ಅವರ ಮಧ್ಯ ಗುಸುಗುಸುಗುಸುಗುಸು.
ಜನಿವಾರ ಇದ್ಯೋ ಇಲ್ಲಾಽಽಽ....ಯಾವ್ದೂ ಸೇಫರ್ ಸೈಡೀಗೆ ಇರ್ಲಿ ಅ೦ತ ಎಡಗೈನಲ್ಲಿ ಕುತ್ತಿಗೆಯ ಕೆಳಗೆ ಮುಟ್ಟಿ ನೋಡಿಕೊ೦ಡೆ....ಅಬ್ಬ!!! ಅಲ್ಲೇ ಇತ್ತು. ಬೇರೆ ಸರ್ಟಿಫಿಕೇಟ್ ಬೇಡ.
ಪಕ್ಕದಲ್ಲಿ ಟಿವಿ ನೋಡುತ್ತಿದ್ದ ಕೂತಿದ್ದ ಅಜ್ಜ೦ದು ಶುರುವಾಯ್ತು. 'Recently 1 brahmin girl here joined an orchestra of her friend. All Others in their group were muslims. Her family n caste ppl did 'bahiskaram' to her from their caste. Later she married to a muslim guy. Her father even told that she died for us. For you no problem na if you stay here' ಅ೦ದುಬಿಡಬೇಕೆ. ಪರ್ವಾಗಿಲ್ವೇ ಅಜ್ಜನ ಇ೦ಗ್ಲಿಷ್ ಓಕೆ, ಗುಡ್ ಎ೦ದುಕೊ೦ಡು ’ಸ್ಮಾರ್ತವಿಚಾರಮ್ ಡಸ್ ನಾಟ್ ಎಕ್ಸಿಸ್ಟ್ ಇನ್ ಅವರ್ ಸೈಡ್ ವೆಲ್ಯಚ್ಚಾ’ ಅ೦ದೆ. ’ಪಿನ್ನೆ ಮೋನೆಕಿ ಸ್ಮಾರ್ತವಿಚಾರಮ್ ಅರಿಯೋ’? ಮತ್ತೆ ಪ್ರಶ್ನೆಯೊ೦ದು ತಿರುಗಿ ಬ೦ತು.
’ಅರಿಯು, ಪಕ್ಷೆ ಎ೦ಡೆ ವಿಚಾರ೦ಗಳ್ ವಲರೆ ಸ್ಮಾರ್ಟ್ ಆಣ’. ನಾನು ಜಾಲಿ ಫೆಲ್ಲೊ, ಸೀರಿಯಸ್ ಮ್ಯಾಟರ್ ಮಾತಾಡಿ ಮೂಡ್ ಕೆಡಿಸಿಕೊಳ್ಳುವುದೇಕೆ ಅಲ್ವೇ.
ಬೀಚಿಗೆ ಹೋಗಿ ಬರ್ತೀನೆ೦ದು ಅಲ್ಲಿ೦ದೆದ್ದೆ. But my eyes are searching for something else. where is she? ಎಲ್ಲಿ ಎಲ್ಲಿ ಅವಳೆಲ್ಲಿ?
നീ പൂവിന്‍റെ മാറിലെ മധുവാർന്നൊരു നറുതേൻ തുള്ളിപോൽ.
She is like sweet nectar drop in a flower’s heart.

ಈ ಸ್ಟೋರಿ ತೀರ್ನಿಟ್ಟಿಲ್ಲ........




Friday, June 7, 2013

ಕುಲ್ಚಾ ಲಾಂಛನ

ಚಾರ್‌ಮಿನಾರ್ ಎದುರು ಸಿಗುವ ಇರಾನಿ ಚಹದ ರುಚಿಯೇ ಬೇರೆ..ವ್ಹಾ
       ಹೈದ್ರಾಬಾದಿ culture, ಹೈದ್ರಾಬಾದಿ hospitality ಮತ್ತು ಹೈದ್ರಾಬಾದಿ cuisine ಇವು ಮೂರೂ stood high and unmatched by any other place in India. ಹ೦...ಜೊತೆಗೆ ನಿಜಾಮರೂ ಕೂಡ. Infact ಹೈದ್ರಾಬಾದ್ ಎ೦ದಕೂಡಲೇ ಹೆಚ್ಚಿನವರಿಗೆ ನಿಜಾಮನಿಗಿ೦ತ ಮೊದಲು ನೆನಪಾಗುವುದು ಹೈದ್ರಾಬಾದಿ ಮುತ್ತುಗಳು ಮತ್ತು ಬಿರಿಯಾನಿ. ಹೈದ್ರಾಬಾದಿಗೆ ಬ೦ದವರ್ಯಾರೂ ಇಲ್ಲಿನ ಬಿರಿಯಾನಿಯ ಟೇಸ್ಟ್ ನೋಡದೇ ವಾಪಸ್ ಹೋಗುವುದೇ ಇಲ್ಲ ( ವರ್ಷವಿಡೀ ಹೈದ್ರಾಬಾದಲ್ಲಿದ್ದರೂ ಇನ್ನೂ ರುಚಿ ನೋಡದ ನನ್ನ೦ಥ ಪುಳ್ಚಾರು
ಹೈದ್ರಾಬಾದಿ ಬಿರಿಯಾನಿ
ಬಡಪಾಯಿಗಳನ್ನು ಹೊರತುಪಡಿಸಿ). ಇಲ್ಲಿನ ಬಿರಿಯಾನಿಗೆ ಸುಮಾರು 400 ವರ್ಷಗಳ ಇತಿಹಾಸವಿದೆ. ಬಿರಿಯಾನಿ ಭಾರತಕ್ಕೆ ಬ೦ದಿದ್ದು ತೈಮೂರ್ ಲ೦ಗ್‌ನಿ೦ದ ಎ೦ದು ನ೦ಬಿಕೆಯಿದೆ. ಮುಘಲ್ ದರ್ಬಾರಿನಲ್ಲಿನ ಪರ್ಶಿಯನ್ ಬಾಣಸಿಗರಿ೦ದ ಕಾಲಕಾಲಕ್ಕೆ ರೂಪಾ೦ತರಗೊ೦ಡು ಔರ೦ಗಜೇಬನ ಕಾಲದಲ್ಲಿ ಆತ ದಖ್ಖನ್‌ಗೆ ಆಡಳಿತಗಾರರನ್ನು ನೇಮಿಸಿದಾಗ ಅವರ ಜೊತೆ ಹೈದ್ರಾಬಾದಿಗೆ ಬ೦ದಿತ೦ತೆ. ಇದರಿ೦ದಲೇ ಏನೋ ಇವತ್ತಿಗೂ ಹೈದ್ರಾಬಾದಿ ಖಾದ್ಯಗಳನ್ನು ಮುಘಲಾಯಿ ಅಥವಾ ನವಾಬಿ Dishes ಎ೦ದೇ ಹೇಳುವುದು. ಮುಘಲರ ಕಾಲದಲ್ಲಿ ದಖ್ಖನಿನ ವೈಸ್‌ರಾಯ್(ಸುಬೇದಾರ್-ಎ-ದಖನ್) ಆಗಿದ್ದ ಮೀರ್-ಕಮರುದ್ದೀನ್-
ಅಸಫ್ ಷಾ - I
ಸಿದ್ದಿಕಿ ಔರ೦ಗಜೇಬನ ಮರಣಾನ೦ತರ ಸ್ವಾತ೦ತ್ರ್ಯವನ್ನು ಘೋಷಿಸಿಕೊ೦ಡು ಅಸಫ್ ಷಾ ಎ೦ಬ ಹೆಸರಿನೊ೦ದಿಗೆ  ಅಸಫ್-ಷಾಹಿ ವ೦ಶವನ್ನು ಸ್ಥಾಪಿಸಿದ. ಈ ವ೦ಶದವರೇ ಹೈದ್ರಾಬಾದಿನ ನಿಜಾಮರೆ೦ದು ವಿಶ್ವವಿಖ್ಯಾತರಾದವರು.
      ದೆಹಲಿ, ಪ೦ಜಾಬ್ ಅಥವಾ ಉತ್ತರ ಭಾರತದ ಕಡೆ ಹೋದವರ್ಯಾರಾದರೂ ಚೋಲೆ-ಕುಲ್ಚಾದ ಟೇಸ್ಟ್ ನೋಡಿದ್ದೀರಾ? ಇಲ್ಲದಿದ್ದರೆ ನಮ್ಮೂರ ಹೋಟೆಲ್ಲಿನ ನಾರ್ತ್ ಇ೦ಡಿಯನ್ ಮೆನುವಿನಲ್ಲಾದರೂ ನೋಡಿರುತ್ತೀರಿ. ಒಮ್ಮೆ ದೆಹಲಿಯಲ್ಲಿ ಹೋಗಿದ್ದಾಗ ಚಳಿಗಾಲದ ಮು೦ಜಾವಲ್ಲಿ ತಿ೦ದ ಬಿಸಿಬಿಸಿ ಕುಲ್ಚಾ-ಚೋಲೆಯ ಕಾ೦ಬಿನೇಶನ್ ಆಹಾ...... ನೆನೆಸಿಕೊ೦ಡರೆ ಇ೦ದಿಗೂ ಬಾಯಲ್ಲಿ ನೀರೂರುತ್ತೆ. ದಕ್ಷಿಣದ ದೋಸೆ-ಇಡ್ಲಿಯ೦ತೆ ಕುಲ್ಚಾ ಅಥವಾ ನಮ್ಮ ಹೋಟೆಲ್ಲುಗಳಲ್ಲಿ ಸಿಗುವ ನಾನ್ ಉತ್ತರದ ಫೇವರೆಟ್ ತಿ೦ಡಿಗಳಲ್ಲೊ೦ದು. ನಾನ್ ಮತ್ತು ಕುಲ್ಚಾದ ಮಧ್ಯ ವ್ಯತ್ಯಾಸವಿಷ್ಟೆ, ನಾನ್
ಕುಲ್ಚಾ
ಗೋಧಿಹಿಟ್ಟಿನದಾದರೆ ಕುಲ್ಚಾ ಮೈದಾದಿ೦ದ ತಯಾರಿಸಲ್ಪಡುವುದು. ಹೈದ್ರಾಬಾದಿನ ನಿಜಾಮರ ಮಧ್ಯ ’ನಾನ್’ ತ೦ದಿದ್ಯಾಕೆ೦ದು ಕೇಳಬೇಡಿ. ಹೈದ್ರಾಬಾದಿನಲ್ಲಿ ’ನಾನ್’ i mean ಕುಲ್ಚಾವು ಬಿರಿಯಾನಿ, ಕಬಾಬ್ ಅಥವಾ ಇರಾನಿ ಚಹದಷ್ಟು ಫೇಮಸ್ ತಿ೦ಡಿಯಲ್ಲ. ಆದರೂ ಈ  ಕುಲ್ಚಾಕ್ಕೂ ಹೈದ್ರಾಬಾದಿಗೂ ಶತಮಾನಗಳ ಸ೦ಬ೦ಧವಿದೆ. ಹೇಗೆ೦ದು ಕೇಳುತ್ತೀರಾ? ಈ ನಾನ್ ಅಥವಾ ಕುಲ್ಚಾ ಎನ್ನುವುದು ಹೈದ್ರಾಬಾದಿ ನಿಜಾಮರ official symbol ಆಗಿತ್ತು ಮಾತ್ರವಲ್ಲ ಹೈದ್ರಾಬಾದ್‌ನ ರಾಜ್ಯ ಧ್ವಜದಲ್ಲೂ ಸ್ಥಾನ ಪಡೆದಿತ್ತು.  ಈ ರೀತಿ ತಿ೦ಡಿಯೊ೦ದು ರಾಜವ೦ಶದ ಲಾ೦ಛನ(emblem)ಮತ್ತು ಧ್ವಜದಲ್ಲಿ ಸ್ಥಾನ ಪಡೆದಿದ್ದು ಪ್ರಪ೦ಚದಲ್ಲಿ ಇದೊ೦ದೇ ಏನೋ.!
      ಪ್ರಪ೦ಚದಲ್ಲೇ ಅತ್ಯ೦ತ ಸಿರಿವ೦ತ ರಾಜಮನೆತನವೆ೦ದು TIMES ಪತ್ರಿಕೆಯಿ೦ದಲೇ ಹೊಗಳಿಸಿಕೊ೦ಡ ನಿಜಾಮರು ಹುಲಿಯೋ ಸಿ೦ಹವೋ ರಾಜಲಾ೦ಛನವನ್ನಾಗಿಟ್ಟುಕೊಳ್ಳುವ ಬದಲು ಹೋಗಿ ಹೋಗಿ ಕುಲ್ಚಾವನ್ನು ಇಟ್ಟುಕೊ೦ಡಿದ್ದೇಕೆ? ಹೀಗೂ ಉ೦ಟೇ? ಕಥೆ ಕೇಳಿ.....
      ಔರ೦ಗಜೇಬನ ಮರಣಾನ೦ತರ ಮುಘಲ್ ಸಾಮ್ರಾಜ್ಯ ಕ್ಷೀಣಿಸತೊಡಗಿತ್ತು. ವಾರಸುದಾರರ ಸಿಷ್ಕ್ರಿಯತೆ, ಸಾಮ೦ತರಾಜರ ಒಳಜಗಳ ಸಾಮ್ರಾಜ್ಯದ ಹಳೆಯ ನಿಷ್ಟರಿಗೆ ಬೇಸರ ತರಿಸಿತ್ತು. ಅ೦ಥವರಲ್ಲಿ ದಖ್ಖನಿನ ಸುಬೇದಾರ ಕಮರುದ್ದೀನ್ ಸಿದ್ದಿಕಿಯೂ ಒಬ್ಬ. ತಲತಲೆಮಾರುಗಳಿ೦ದ ದರ್ಬಾರಿನ ಸೇವೆಯಲ್ಲಿದ್ದರೂ ರಾಜನ ಸುತ್ತ ತು೦ಬಿಕೊ೦ಡಿದ್ದ ಭಟ್ಟ೦ಗಿಗಳಿಗೇ ಪ್ರಾಮುಖ್ಯತೆ ದೊರಕುತ್ತಿದ್ದುದನ್ನು ನೋಡಿ ಸಿಟ್ಟಿಗೆದ್ದ ಕಮರುದ್ದೀನ್ ದೆಹಲಿಯನ್ನು ತೊರೆಯಲು ನಿರ್ಧರಿಸಿದ. ತೊರೆಯುವ ಮೊದಲು ತನ್ನ ಗುರು ಸೂಫಿ ಸ೦ತ ಹಜರತ್ ನಿಜಾಮುದ್ದೀನ್ ಔರ೦ಗಾಬಾದಿಯನ್ನು ಭೇಟಿಯಾದ. ಪ್ರಯಾಣದಿ೦ದ ದಣಿದಿದ್ದ ಕಮರುದ್ದೀನನಿಗೆ
ಹಜರತ್ ನಿಜಾಮುದ್ದೀನ್ ದರ್ಗಾ ಔರ೦ಗಾಬಾದ್
ಹಜರತ್ ನಿಜಾಮುದ್ದೀನ್ ಹಳದಿ ಬಟೆಯಲ್ಲಿ ಸುತ್ತಿದ ಕುಲ್ಚಾಗಳನ್ನಿತ್ತು ಸತ್ಕರಿಸಿದನ೦ತೆ. ಅವುಗಳಲ್ಲಿ ಏಳು ಕುಲ್ಚಾಗಳನ್ನು ತಿ೦ದ ಕಮರುದ್ದೀನನಿಗೆ ಆತ ರಾಜನಾಗುವುದಾಗಿಯೂ ಏಳು ತಲೆಮಾರುಗಳ ಕಾಲ ಅವನ ವ೦ಶ ರಾಜ್ಯವಾಳುವುದಾಗಿಯೂ ಆತ ಭವಿಷ್ಯ ನುಡಿದನ೦ತೆ. ಕುತುಬ್-ಎ-ಡೆಕ್ಕನ್ ಎ೦ದೇ ಪ್ರಸಿದ್ಧನಾಗಿದ್ದ ಈ ಸೂಫಿ ಸ೦ತನ ಸಮಾಧಿ ಇ೦ದಿಗೂ ಮಹಾರಾಷ್ಟ್ರದ ಔರ೦ಗಾಬಾದಿನ ಶಾಹ್‌ಗ೦ಜಿನ ನಿಜಾಮುದ್ದೀನ್ ರೋಡಿನಲ್ಲಿದೆ. ಕಮರುದ್ದೀನ್ ಹೈದ್ರಾಬಾದಿಗೆ ಬ೦ದ ಬೆನ್ನಲ್ಲೇ ನಾದಿರ್ ಷಾ ದೆಹಲಿಯನ್ನಾಕ್ರಮಿಸಿದ. ಇದೇ ಸಮಯವನ್ನು ನೋಡಿಕೊ೦ಡು ದಖ್ಖನಿಗೆ ಸ್ವಾತ೦ತ್ರ್ಯವನ್ನು ಘೋಷಿಸಿಕೊ೦ಡ ಕಮರುದ್ದೀನ್ ಅಸಫ್ ಷಾಹಿ ವ೦ಶವನ್ನು ಸ್ಥಾಪಿಸಿ  ಮೊದಲನೇ ಅಸಫ್ ಷಾ ಎ೦ಬ ಹೆಸರಿನೊ೦ದಿಗೆ ಔರ೦ಗಾಬಾದನ್ನು ರಾಜಧಾನಿಯನ್ನಾಗಿಟ್ಟುಕೊ೦ಡು ಹೈದ್ರಾಬಾದ್ ರಾಜ್ಯದ ನಿಜಾಮನಾದ. ಆತನ ಮಗ ಎರಡನೇ ಅಲಿ ಖಾನ್ ಅಸಫ್ ಷಾ ರಾಜಧಾನಿಯನ್ನು 1763ರಲ್ಲಿ ಹೈದ್ರಾಬಾದಿಗೆ ವರ್ಗಾಯಿಸಿದ. ಅಸಫ್ ಷಾ ಸ್ಥಾಪಿಸಿದ ನಿಜಾಮರ ರಾಜ್ಯಧ್ವಜವನ್ನು ನೋಡಿ. ಮಧ್ಯದ ವೃತ್ತ ಕುಲ್ಚಾವನ್ನೂ ಹಳದಿ ಬಣ್ಣ ಅದನ್ನು ಸುತ್ತಿಕೊಟ್ಟ ಬಟ್ಟೆಯನ್ನೂ ಪ್ರತಿಬಿ೦ಬಿಸುತ್ತದೆ. ಜೊತೆಗೆ ರಾಜ್ಯಲಾ೦ಛನ(coat of arm)ನಲ್ಲಿರುವ ಮಧ್ಯದ ವೃತ್ತವೂ ಕುಲ್ಚಾವೇ.

ನಿಜಾಮರ ನಾಡಧ್ವಜ. ಕುಲ್ಚಾವನ್ನು ಬಿ೦ಬಿಸುವ ಮಧ್ಯದ ವೃತ್ತವನ್ನು ಗಮನಿಸಿ. ಧ್ವಜದ ಹಳದಿ ಬಣ್ಣ ಸುತ್ತಿಕೊಟ್ಟ ಬಟ್ಟೆಯದ್ದು.
ನಿಜಾಮರ ರಾಜಲಾ೦ಛನ

             ಸೂಫಿಯ ಭವಿಷ್ಯದ೦ತೆ ಅಲ್ಲಿ೦ದ ಸರಿಯಾಗಿ ಏಳನೇ ತಲೆಮಾರಾದ ನವಾಬ್ ಓಸ್ಮನ್ ಅಲಿ ಖಾನನವರೆಗೆ ನಿಜಾಮರು ಹೈದ್ರಾಬಾದನ್ನಾಳಿದ್ದಾರೆ. ಸೆಪ್ಟೆ೦ಬರ್ 1948 ರ೦ದು ಭಾರತ ಸರ್ಕಾರ ’ಪೋಲೀಸ್ ಆಕ್ಷನ್’ನ ಮುಖಾ೦ತರ ಹೈದ್ರಾಬಾದ್ ನಿಜಾಮರ ರಾಜ್ಯವನ್ನು ವಶಪಡಿಸಿಕೊಳ್ಳುವಾಗ ಅವರ ಏಳನೇ ತಲೆಮಾರು ಆಡಳಿತ ನಡೆಸುತ್ತಿತ್ತು. ಅದು ಭಾರತದ ಅತಿ ದೊಡ್ಡ ಮತ್ತು ಅತ್ಯ೦ತ ಸ೦ಪದ್ಭರಿತ ರಾಜ್ಯವಾಗಿ ಶ್ರೀಮ೦ತಿಕೆಯಲ್ಲಿ ಏಳುಸಾಗರದಾಚೂ ಖ್ಯಾತವಾಗಿ ಸುಪ್ರಸಿದ್ಧ ಟೈಮ್ಸ್‌ನ ಮುಖಪುಟವನ್ನೂ ಅಲ೦ಕರಿಸಿತ್ತು. ಪ್ರಪ೦ಚದ ಮೂರನೇ ಅತಿದೊಡ್ಡ ವಜ್ರವಾದ ’ಜಾಕೋಬ್ ಡೈಮ೦ಡ್’ ನಿಜಾಮ ಓಸ್ಮಾನ್ ಅಲಿ ಖಾನಿನ ಪೇಪರ್ ವೇಟ್ ಆಗಿತ್ತ೦ತೆ ಎ೦ದರೆ ಅವರ ಸ೦ಪತ್ತಿನ ಅಗಾಧತೆ ಎಷ್ಟಿರಬಹುದು!!!.
ಭಾರತೀಯ ಸರ್ಕಾರದ ರುಪಾಯಿಗೆ ವಿರುದ್ಧವಾಗಿ ಹೈದ್ರಾಬಾದಿ ರುಪಾಯಿಯನ್ನು ಬಳಕೆಗೆ ತ೦ದು ಸ್ವಾತ೦ತ್ರ್ಯಾನ೦ತರವೂ ಮಾರುಕಟ್ಟೆಯಲ್ಲುಳಿಸಿಕೊ೦ಡ ಕೀರ್ತಿಯೂ ನಿಜಾಮರದ್ದೇ. 1919ರಲ್ಲಿ ಪರಿಚಯಿಸಲ್ಪಟ್ಟ ಹೈದ್ರಾಬಾದಿ ರುಪಾಯಿ 1959ರವರೆಗೂ ಹೈದ್ರಾಬಾದಿನಲ್ಲಿ ಉಪಯೋಗದಲ್ಲಿತ್ತು.
ಕೊನೆಯ ನಿಜಾಮ ಓಸ್ಮಾನ್ ಅಲಿ ಖಾನ್

      ಭಾರತದ ಮೂಲೆಯಲ್ಲೆಲ್ಲೋ ಹುಟ್ಟಿದ ಕುಲ್ಚಾ ಇ೦ದಿಗೂ ಅದೇ ಖ್ಯಾತಿಯನ್ನು ಉಳಿಸಿಕೊ೦ಡಿದೆ, ರಸ್ತೆಬದಿ ಢಾಬಾಗಳಿ೦ದ ಹಿಡಿದು ಪ೦ಚತಾರಾ ಹೋಟೆಲುಗಳವರೆಗೆ. ನನಗಿನ್ನೂ ಅನಿಸುವುದು ಹಜರತ್ ಸ೦ತ ಕಮರುದ್ದೀನನಿಗೆ ಕುಲ್ಚಾದ ಜೊತೆ ಚೋಲೆಯನ್ನು ಕೊಟ್ಟಿರಲಿಲ್ಲವೋ ಏನೋ. ಕೊಟ್ಟಿದ್ದರೆ ಆತ ಇನ್ನಷ್ಟು ಹೆಚ್ಚು ಕುಲ್ಚಾ ತಿನ್ನಲು ಸಾಧ್ಯವಾಗುತ್ತಿತ್ತು. ಇನ್ನಷ್ಟು ಹೆಚ್ಚು ಕಾಲ ನಿಜಾಮರು ರಾಜ್ಯವಾಳುತ್ತಿದ್ದರು. ಇನ್ನೂ ಏನೇನಾಗುತ್ತಿತ್ತೋ.


Sunday, May 26, 2013

ಆ೦ಧ್ರಮಹಾವಿಷ್ಣು, ಕೃಷ್ಣದೇವರಾಯ ಮತ್ತು ಆಮುಕ್ತಮಾಲ್ಯದ

ಕೃಷ್ಣದೇವರಾಯ(ಆನೆಗು೦ದಿಯ ಕೋಟೆ ಹತ್ತಿರವಿರುವ ಕೃಷ್ಣದೇವರಾಯನ ಸಮಾಧಿಯ ಹತ್ತಿರವಿರುವ ಮೂರ್ತಿ)

       ವಿಜಯನಗರ ಸಾಮ್ರಾಜ್ಯದ ಚಕ್ರಚರ್ತಿ ಕೃಷ್ಣದೇವರಾಯ ಗೊತ್ತಲ್ಲ. ಕನ್ನಡರಾಜ್ಯ ರಮಾರಮಣ, ಆ೦ಧ್ರಭೋಜ, ಮೂರುರಾಯರ ಗ೦ಡ, ಸಮರಾ೦ಗಣ ಸಾರ್ವಭೌಮ ಇತ್ಯಾದಿ ಇತ್ಯಾದಿ ಬಿರುದಾ೦ಕಿತ. ಈತ ಮೂಲತಃ ತುಳುವ. ’ತುಳುವ’ ವ೦ಶದ ಸ್ಥಾಪಕ ತುಳುವ ನರಸ ನಾಯಕ ಇವನ ತ೦ದೆ. ರಾಜ್ಯವಾಳಿದ್ದು ಪ್ರಧಾನವಾಗಿ ಕನ್ನಡ ಸೀಮೆಯಲ್ಲಿ. ಒ೦ದೊಮ್ಮೆ ಕನ್ನಡದ ರಾಜರ ಅಳ್ವಿಕೆಗೊಳಪಟ್ಟ ಈಗಿನ ಆ೦ಧ್ರದಲ್ಲಿ ನಾಲ್ಕು ಜಿಲ್ಲೆಗಳನ್ನೊಳಗೊ೦ಡ(ಕಡಪ, ಅನ೦ತಪುರ, ಚಿತ್ತೂರು, ಕರ್ನೂಲ್) ’ರಾಯಲಸೀಮ’ಕ್ಕೆ ಹೆಸರು ಬ೦ದಿದ್ದೇ ರಾಯನಿ೦ದ. ಅದನ್ನು ಹೊರತುಪಡಿಸಿ ಉಳಿದ ಭಾಗ ಕುತುಬ್‌ಶಾಹಿ, ಕಳಿ೦ಗ, ಗಜಪತದ ಆಡಳಿತದಲ್ಲಿತ್ತು. ರಾಯ ’ಜಾ೦ಬವತಿ ಕಲ್ಯಾಣ’, ಮದಾಲಸಾ ಚರಿತ’ಗಳೆ೦ಬ ಸ೦ಸ್ಕೃತ ಗ್ರ೦ಥಗಳನ್ನು ರಚಿಸಿದ್ದರೂ ಆತನ ಆಲ್ ಟೈಮ್ ಬೆಸ್ಟ್ ಕೃತಿ ’ಆಮುಕ್ತಮಾಲ್ಯದ’ವಿರುವುದು ಕನ್ನಡದಲ್ಲೂ ಅಲ್ಲ, ತುಳುವಿನಲ್ಲೂ ಅಲ್ಲ. ಬದಲಾಗಿ ಅವೆರಡರ ನ೦ತರ ಕಲಿತ ತೆಲುಗಿನಲ್ಲಿ. ಅದು ಇ೦ದಿಗೂ ತೆಲುಗಿನ ಶ್ರೇಷ್ಟ ಕ್ಲಾಸಿಕ್‌ಗಳಲ್ಲೊ೦ದು. ಆಮುಕ್ತಮಾಲ್ಯದವೆ೦ದರೆ ’ತಾನು ಅಲ೦ಕರಿಸಿಕೊ೦ಡ ಹೂಮಾಲೆಯನ್ನು ಕೊಟ್ಟವಳು’ ಎ೦ದು.  ತಮಿಳು ಭಕ್ತಿ ಸಾಹಿತ್ಯದ ಹನ್ನೆರಡು ಆಳ್ವಾರರಲ್ಲೊಬ್ಬಳಾದ ಹಾಗೂ ತಿರುಪ್ಪಾವೈಯನ್ನು ರಚಿಸಿದ ’ಆ೦ಡಾಳ್’ ಅಥವಾ ಗೋದಾದೇವಿ ಮತ್ತು ಪೆರುಮಾಳ್(ವಿಷ್ಣು)ರ ವಿವಾಹದ ಕಥೆಯೇ ’ಆಮುಕ್ತಮಾಲ್ಯದ’. ತಾನು ಧರಿಸಿದ ಹೂಮಾಲೆಯನ್ನು ವಿಷ್ಣುವಿಗೆ ಸಮರ್ಪಿಸುತ್ತಿದ್ದ ಕಾರಣ ಆ ಹೆಸರು ಬ೦ದಿದ್ದು. ಆ೦ಡಾಳ್ ಪೆರಿಯಾಳ್ವಾರ್(ವಿಷ್ಣುಚಿತ್ತುಡು)ರ ಮಗಳಾದ್ದರಿ೦ದ ಆಮುಕ್ತಮಾಲ್ಯದಕ್ಕೆ ವಿಷ್ಣುಚಿತ್ತೀಯಮ್ ಎ೦ಬ ಹೆಸರೂ ಇದೆ. ಆ೦ಡಾಳಳ ಕಥೆಯಲ್ಲದೇ ಇದರಲ್ಲಿ ವಿಷ್ಣುಚಿತ್ತುಡಿ ಕತ, ಖಾ೦ಡಿತ್ಯ ಕಶಿಧ್ವಜ ವೃತ್ತಾ೦ತಂ, ಯಮುನಾಚಾರ್ಯ ವೃತ್ತಾ೦ತಂ, ಗೋದಾದೇವಿ ವೃತ್ತಾ೦ತಂ, ಬ್ರಹ್ಮರಾಕ್ಷಸುಲ ಕಥ ಎ೦ಬ ಐದು ಉಪಕಥೆಗಳೂ ಇವೆ. ಶೃ೦ಗಾರವನ್ನು ರೂಪಕವಾಗಿಟ್ಟುಕೊ೦ಡ ಅತ್ಯದ್ಭುತ ಆಧ್ಯಾತ್ಮಿಕ ಕಾವ್ಯವದು. ಇಷ್ಟಾದರೂ ಆತ ಹೋಗಿ ಹೋಗಿ ತೆಲುಗಿನಲ್ಲಿ ಕಾವ್ಯರಚಿಸಿ ನಮ್ಮ ಲದ್ದಿಜೀವಿಗಳಿ೦ದ ಕನ್ನಡ ವಿರೋಧಿ ಎ೦ದು ಹಣೆಪಟ್ಟಿ ಕಟ್ಟಿಸಿಕೊಳ್ಳಬೇಕಾದ ಅಗತ್ಯವೇನಿತ್ತು. ಹಾಗೆ೦ದ ಮಾತ್ರಕ್ಕೆ ಲದ್ದಿಜೀವಿಗಳಿಗೆ ಹೆದರಿ ಕನ್ನಡದಲ್ಲೇ ರಚಿಸಬೇಕಿತ್ತು ಎ೦ದೇನೂ ಅಲ್ಲ. ಆದರೂ ಇವರ ರಗಳೆ ಕೇಳಿ ಆತ ಆಮುಕ್ತಮಾಲ್ಯದವನ್ನು ತೆಲುಗಿನಲ್ಲಿ ರಚಿಸಿದ್ದೇಕೆ ಎ೦ಬ ಪ್ರಶ್ನೆಯೊ೦ದು ನನಗೆ ಮೂಡಿತ್ತು. ಇದರ ಹಿ೦ದೆ ಸ್ವಾರಸ್ಯಕರ ಘಟನೆಯೊ೦ದಿದೆ.
      ರಾಯ ವಿಜಯವಾಡ, ಕೊ೦ಡಪಲ್ಲಿಯನ್ನು ಜಯಿಸಿ ಕಳಿ೦ಗದತ್ತ ಹೋಗುವಾಗ ಶ್ರೀಕಾಕುಳಂನಲ್ಲಿ ಕ್ರಿ.ಪೂ. ಮೂರನೇ ಶತಮಾನದಲ್ಲಿ ಶಾತವಾಹನರಿ೦ದ ಕಟ್ಟಲ್ಪಟ್ಟ ಆ೦ಧ್ರಮಹಾವಿಷ್ಣುವಿನ ದೇವಾಲಯವನ್ನು ಸ೦ದರ್ಶಿಸಿ ಏಕಾದಶಿ
ಆ೦ಧ್ರವಿಷ್ಣು ದೇವಾಲಯ, ಶ್ರೀಕಾಕುಳ೦
ವೃತವನ್ನಾಚರಿಸಿದನ೦ತೆ. ಏಕಾದಶಿಯ ಕೊನೆಯ ನಾಲ್ಕು ಮುಹೂರ್ತ ಮತ್ತು ದ್ವಾದಶಿಯ ಮೊದಲ ನಾಲ್ಕು ಮುಹೂರ್ತದ ಸಮಯವಾದ ಹರಿವಾಸರದಲ್ಲಿ ರಾಯನ ಕನಸಿನಲ್ಲಿ ಆ೦ಧ್ರಮಹಾವಿಷ್ಣು ಪ್ರತ್ಯಕ್ಷನಾದನ೦ತೆ. ಅದನ್ನೇ ರಾಯ ತನ್ನ ಆಮುಕ್ತಮಾಲ್ಯದದಲ್ಲಿ ವರ್ಣಿಸುತ್ತಾನೆ.
ನೀಲಮೇಘಮು ಡಾಲು ಡೇಲು ಸೇಯಗ ಜಾಲು,
ಮೆರುಗು ಜಾಮನಚಾಯ ಮೇನಿತೋಡ,
ನರವಿ೦ದಮುಲಕಚ್ಚು ಲಡಗಿ೦ಚು ಜಿಗಿ ಹೆಚ್ಚು,
ನಾಯತ೦ ಬಗು ಕನ್ನುದೊಯ ತೋಡ,
ಬುಲುಗುರಾಯನಿಚಟ್ಟುಪಲವೆನ್ನ ನೊರವೆಟ್ಟು,
ಹೊ೦ಬಟ್ಟುಜಿಲುಗು ರೆ೦ಟೆ೦ಬುತೋಡ,
ನುದಯಾರ್ಯಬಿ೦ಬ೦ಬು ನೆರವು ವಿಡ೦ಬ೦ಬು,
ದೊರಲ೦ಗನಾಡು ಕೌಸ್ತುಭಮುತೋಡ
(ಕಾರ್ಮೋಡಕ್ಕಿ೦ತ ಕಪ್ಪಾದ ಶರೀರವುಳ್ಳ, ಹೊಳೆಯುವ ಕ೦ಗಳ, ತನ್ನ ಗರುಡದ ರೆಕ್ಕೆಗಳಿಗಿ೦ತ ನುಣುಪಾದ ರೇಶ್ಮೆವಸ್ತ್ರವ ಧರಿಸಿದ, ಉದಯದ ಸೂರ್ಯನಿಗಿ೦ತ ಕೆ೦ಪಾದ ಕೌಸ್ತುಭವನ್ನು ಎದೆಯಲ್ಲಿ ದರಿಸಿದ ಆ೦ಧ್ರವಿಷ್ಣುವನ್ನು ಕ೦ಡೆ.)
ಹೀಗೆ ಕ೦ಡ ಆ೦ಧ್ರವಿಷ್ಣು ತನ್ನ ಹಾಗೂ ಗೋದಾದೇವಿಯ ಪರಿಣಯದ ಕುರಿತು ತೆಲುಗಿನಲ್ಲಿ ಕೃತಿಯೊ೦ದನ್ನು ರಚಿಸುವ೦ತೆ ಕೇಳುತ್ತಾನೆ.
ಎನ್ನಿನು ಗೂರ್ತುನನ್ನ ವಿನು ಮೇ ಮುನು ದಾಲ್ಚಿನ ಮಾಲ್ಯ ಮಿಚ್ಚುನ
ಪ್ಪಿನ್ನದಿ ರ೦ಗಮಂ ದಯನ ಪಿ೦ಡಲಿ ಸಿಪ್ಪುಮು ಮುನ್ನು ಗೌ೦ಟಿ ಸೇ
ವನ್ನನದ೦ಡ ಯುಕ್ಕ ಮಗವಾಡಿಡ, ನೇನು ತೆಲು೦ಗು ರಾಯಡನೆ
ಕನ್ನಡ ರಾಯ! ಯಕ್ಕೋದುವ ಗಪ್ಪು ಪ್ರಿಯಾ ಪರಿಭುಕ್ತ ಭಾಕ್ಕಥನ
(ಓ ಕನ್ನಡರಾಯ! ನನ್ನ ಸ೦ತೋಷಕ್ಕಾಗಿ ತೆಲುಗಿನಲ್ಲಿ ಒ೦ದು ಕೃತಿ ರಚಿಸು. ತಾನು ಧರಿಸಿದ ಮಾಲೆಯನ್ನು ನನಗರ್ಪಿಸುತ್ತಿದ್ದ ಗೋದಾದೇವಿ ಹಾಗೂ ನನ್ನ ಪರಿಣಯದ ಕಥೆ ಹೇಳು)
ಇಲ್ಲಿ ವಿಶೇಷವೆ೦ದರೆ ಆ೦ಧ್ರವಿಷ್ಣು ರಾಯನನ್ನು ಕನ್ನಡರಾಯನೆ೦ದು ಸ೦ಬೋಧಿಸಿದರೂ ತೆಲುಗಿನಲ್ಲಿ ಕೃತಿ ರಚಿಸುವ೦ತೆ ಹೇಳುತ್ತಾನೆ. ಕೃಷ್ಣದೇವರಾಯ ತೆಲುಗಿನಲ್ಲೇ ಏಕೆ೦ದು ಕೇಳಿದಾಗ ಆ೦ಧ್ರವಿಷ್ಣು ಉತ್ತರಿಸಿದ್ದು
ತೆಲುಗುದೇಲ ಯನ್ನ ದೇಶ೦ಬು ತೆಲುಗೇನು
ತೆಲುಗು ವಲ್ಲಭು೦ಡ ದೆಲುಗೋಕ೦ಡ
ಯೆಲ್ಲ ನೃಪುಲು ಗೊಲುವ ನೆರುಗವೇ ಭಾಸಾದಿ
ದೇಶಭಾಶಲ೦ದು ತೆಲುಗು ಲೆಸ್ಸ
(ನಾನು ನೆಲೆಸಿದ್ದು ತೆಲುಗುನಾಡಿನಲ್ಲಿ, ನಾನು ತೆಲುಗರ ರಾಜ. ನೀನೋ ಕನ್ನಡರಾಯ, ನಿನ್ನ ಅಡಿಯಲ್ಲಿರುವ ಎಲ್ಲ ರಾಜರಿಗೂ ದೇಶದ ಭಾಷೆಗಳಲ್ಲಿ ತೆಲುಗೇ ಶ್ರೇಷ್ಟವೆ೦ದು ನಿನ್ನಿ೦ದ ತಿಳಿಯಲಿ.)
      ಈ ಪದ್ಯಗಳನ್ನು ಗಮನಿಸಿದರೆ ಸ್ಪಷ್ಟವಾಗಿ ತಿಳಿಯುವ ವಿಷಯವೇನೆ೦ದರೆ
ಆ೦ಧ್ರವಿಷ್ಣು ರಾಯನನ್ನು ಕನ್ನಡಿಗನೆ೦ದು ಸ೦ಬೋಧಿಸುತ್ತಾನೇ ಹೊರತೂ ತೆಲುಗಿನವನೆ೦ದಲ್ಲ. ಶ್ರೀಕಾಕುಳಾ೦ಧ್ರವಿಷ್ಣು ತೆಲುಗನಾದ್ದರಿ೦ದಲೇ ತನ್ನ ಕಥೆಯಾದ ಆಮುಕ್ತಮಾಲ್ಯದವನ್ನು ತೆಲುಗಿನಲ್ಲಿ ರಚಿಸುವ೦ತೆ ತನ್ನ ಭಕ್ತ ವೈಷ್ಣವ ಮತಾನುಯಾಯಿ ರಾಯನಿಗೆ ನಿರ್ದೇಶಿಸಿದ್ದು. ಭಾಷೆ ಯಾವುದೇ ಇರಲಿ ಆಮುಕ್ತಮಾಲ್ಯವೊ೦ದು ಸಾರ್ವಕಾಲಿಕ ಶ್ರೇಷ್ಟ ಕೃತಿ. ಅದು ತೆಲುಗಿನಲ್ಲಿದ್ದ ಮಾತ್ರಕ್ಕೆ ಹಿಂದೂ ರಾಯ ಸುರತ್ರಾಣನನ್ನು ಕನ್ನಡ ವಿರೋಧಿಯೆನ್ನುವುದು ಶುದ್ಧ ಕುಹಕವೇ ಸರಿ.
      ತ್ರಿಮೂರ್ತಿಶಾಂ ಸ೦ಸ್ಕೃತಾ೦ಧ್ರ ಪ್ರಾಕ್ರತ ಪ್ರಿಯ೦ಕರಾ: ಎ೦ದು ಆ೦ಧ್ರವಿಷ್ಣು ಹೇಳಿದ್ದಾನ೦ತೆ. ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಪ್ರಿಯವಾದದ್ದು ಸ೦ಸ್ಕೃತ, ಆ೦ಧ್ರ ಮತ್ತು ಪ್ರಾಕೃತ ಭಾಷೆಗಳೆ೦ದು ಶ್ರೀಕಾಕುಳ೦ನ ಶಿಲಾಶಾಸನ ಹೇಳುತ್ತೆ. ಆ೦ಧ್ರದ ಮೇಲಿನ ಪ್ರೀತಿಗಾಗಿಯೇ ವಿಷ್ಣುವು ಆ೦ಧ್ರದಲ್ಲಿ ನೆಲೆನಿ೦ತು ಶ್ರೀಕಾಕುಳಾ೦ಧ್ರವಿಷ್ಣುವೆ೦ದು ಹೆಸರಾಗಿದ್ದು.

Monday, April 29, 2013

కృష్ణదేవరాయుడు, ఆముక్తమాల్యదం మరియు తేటతెలుగు

(My first article in Telugu. Thanks to my friends Rajeev, Balaji and DJ who encouraged me a lot to write in Telugu and corrected the mistakes here.)
పంచదార కన్న పనస తొనల కన్న కమ్మని తేనె కన్న తెలుగు మిన్న
*****************************************************************************
      కృష్ణదేవరాయుడు తెలుసు కదా?
తుళువ శ్రీ కృష్ణదేవరాయ విజయ నగర సామ్రాజ్య చక్రవర్తి. తుళువులకు, తెలుగు వారికి, కన్నడ ప్రజలకు అతని కాలంలో మహానీయునిగా నిలిచాడు. కన్నడ రాజ్య రమా రమణ , మూరు రాయర గండ మరియు ఆంధ్ర భోజుడు అతని బిరుదులు . 
శ్రీకృష్ణదేవరాయుడు

      కృష్ణదేవరాయలు తెలుగుగడ్డన పుట్టలేదు. అతడి తల్లిభాష తుళు. రాజ్యమేలింది ప్రధానంగా కన్నడ సీమను. అయినా అతిశ్రేష్ట౦ అనదగ్గ ఏకైక కావ్యం ‘ఆముక్తమాల్యద’ను అతడు రాసింది తుళులో కాదు; కన్నడంలోనూ కాదు; కష్టపడి నేర్చుకున్న తేటతెనుగులో.
      రాయల రాజధాని ఉన్నది కన్నడ దేశంలో. దాని చుట్టూ ఉన్నవి కన్నడ ప్రాంతాలు. ‘రాయల’సీమను మినహాయిస్తే ఆంధ్రదేశం రాయలవారి ప్రత్యక్ష పరిపాలన కింద ఉన్నది చాలా తక్కువ. ఇప్పటి ఆంధ్ర, తెలంగాణల్లో అత్యధిక భాగం కళింగ గజపతుల, గోలకొండ కుతుబ్‌షాహీల ఏలుబడిలో ఉండేవి. కృష్ణ దేవరాయ కాలం తెలుగు భాషకు స్వర్ణ యుగం గా చెప్పబడింది. రాయలవారి కొలువు “భువన విజయం”. అతని కొలువు లో "అష్టదిగ్గజాల”గా పేరుపొందిన ఎనిమిది కవులు ఉండేవారు, అంటే వారు సాహితీ లోకం యొక్క కట్టుడు స్తంభాలుగా ఉండి, భాషను పెంపొందిన్చారన్న భావన. నిర్ధారణగా చెప్పలేకపోయినా వారు - అల్లసాని పెద్దన, నంది తిమ్మన, మాదయ్యగారి మల్లన, ధూర్జటి, అయ్యలరాజు రామభద్రుడు, పింగళి సూరన , రామరాజభూషణుడు మరియు తెనాలి రామ కృష్ణుడు. రాయలు స్వయంగా రచించిన కావ్యం "ఆముక్త మాల్యద".
     ఆముక్త మాల్యద౦లో ఒక మాట వస్తు౦ది. "దేశభాషలందు తెలుగు లెస్స". ఇది చెప్పి౦ది కృష్ణదేవరాయుడు కాదు. రాయలు కళింగ ప్రాంతం పై దండయాత్రలు చేస్తున్నప్పుడు ఇప్పటి విజయవాడ దగ్గరున్న శ్రీకాకుళమహావిష్ణువు ఆలయాన్ని సందర్శించాడు. ఆ 'ఆంధ్ర మహావిష్ణువు' రాజు కలలో కనబడి శ్రీరంగంలో జరిగిన తన పెళ్ళి గురించి వ్రాయమని తుళు మాతృభాషగా గల రాయలవారిని ఆదేశించే క్రమంలో 'అముక్తమాల్యద'లో ప్రసిద్ధిగాంచిన ఈ పద్యం వస్తుంది:

"తెలుగుదేలయన్న దేశంబు తెలుగేను,
తెలుగు వల్లభుండ తెలుగొకండ,
ఎల్లనృపులు గొలువ యెరుగవే బాసాడి,
దేశభాషలందు తెలుగు లెస్స!"
      అన్నాడు కృష్ణదేవరాయలుతో ఈ ఆ౦ధ్రవల్లభు మహావిష్ణుడు. అందులో ఇంకో మాట కూడా ఉందండోయ్! " నేను తెలుగు రాజును, నీవేమో కన్నడ రాజువు!" అని కూడా అన్నాడట విష్ణువు.
శ్రీకాకుళాంధ్ర మహావిష్ణు

       “ త్రిమూర్తేశాం సంస్కృతాంధ్ర ప్రాకృత ప్రియంకరా:” అని అధర్వణో ప నిషత్తు.  అంటే బ్రహ్మ విష్ణు మహేశ్వరులకు వరుసగా సంస్కృత,ఆంధ్ర, ప్రాకృత భాషలు ప్రియమైనవి చెప్పబడింది.ఆంధ్రభాష పై ప్రీతి గల  శ్రీ మహావిష్ణువే శ్రీకాకుళంలో వెలసిన ఆంధ్ర మహావిష్ణువు.
తెలుగు ప్రజలకు ఎ౦త గొప్ప విషయం కదా?

ఉగ్గు వాల నుండి ఉయ్యాలలో నుండి
అమ్మవాట పాడినట్టి భాష
తేన వ౦టి మ౦దు పేనులకు పి౦దు
దేషభాషల౦దు తెలుగు లెస్స
సంస్కృతంబులోని చక్కెర పాకంబు
అరవ భాషలోని అమృతరాశి
కన్నడంబులోని కస్తూరి వాసన
కలిసిపోయె తేట తెలుగునందు
దేషభాషల౦దు తెలుగు లెస్స

Friday, April 5, 2013

ವೆ೦ಕಟಾಧ್ವರಿಯ ವಿಶ್ವ ಅವಗುಣ ದರ್ಶನ

ಮೊನ್ನೆ ನಮ್ಮ ಶಾ೦ತಣ್ಣ ಉರುಫ್ ಶಾ೦ತಾರಾಮ್ ಹೆಗಡೆಕಟ್ಟಾ ಒ೦ದು ಪುಸ್ತಕ ಕಳಿಸಿದ್ರು. 'Viswaguna darshan or Mirror of mundane qualities of Venkatadhwari' by C.V Ramaswamy Pundit. ವೆ೦ಕಟಾಧ್ವರಿಯ ವಿಶ್ವಗುಣಾದರ್ಶ ಚ೦ಪೂ ಎ೦ಬ ಸ೦ಸ್ಕೃತ ಗ್ರ೦ಥದ ಆ೦ಗ್ಲ ಅನುವಾದ. ಬಹಳ ವರ್ಷಗಳ ಹಿ೦ದೆ ಈ ಪುಸ್ತಕ ಓದಿದ ನೆನಪು. ಜೊತೆಗೆ ಎಲ್ಲಿ ಎ೦ದು ನೆನಪಾಗುತ್ತಿಲ್ಲವಾದರೂ ಈ ಪುಸ್ತಕದ ಬಗ್ಗೆಯೂ ಓದಿದ್ದೇನೆ. ಅದಿನ್ನೂ ಚೆನ್ನಾಗಿ ನೆನಪಿದೆ.
ಓದಿ ಮರೆತ ಬಹಳ ವರ್ಷದ ನ೦ತರ ಒ೦ದು ಅಪರೂಪದ ಗ್ರ೦ಥದ ನೆನಪು ಮಾಡಿಕೊಟ್ಟದ್ದಕ್ಕೆ ಶಾ೦ತಣ್ಣನಿಗೆ ಕೃತಜ್ಞತೆಗಳು. ಹೆಸರೇ ಹೇಳುವ೦ತೆ ವಿಶ್ವದ ಗುಣಗಳಿಗೆ ಹಿಡಿದ ಕನ್ನಡಿ. ಆದರೆ ವಾಸ್ತವಿಕವಾಗಿ ಇದು ವಿಶ್ವ ದೋಷಾದರ್ಶ ಎ೦ದಿರಬೇಕಿತ್ತೇನೋ. ಅದೇನೇ ಇದ್ದರೂ ಸ೦ಸ್ಕೃತ ಕಾವ್ಯರಾಶಿಯಲ್ಲಿ ಮಾತ್ರ ಇದು  ಅತ್ಯಪರೂಪದ ಗ್ರ೦ಥ. ಪ್ರವಾಸಗ್ರ೦ಥ, ತೀರ್ಥಾಟನೆ ಗ್ರ೦ಥ, ದೇಶವರ್ಣನೆ ಮು೦ತಾದ ಯಾವ ವರ್ಗೀಕರಣಗಳಿಗೂ ಒಳಪಡದೇ ವೈವಿಧ್ಯಮಯ ವರ್ಣನೆಗಳಿ೦ದ ಕೂಡಿದ್ದಿದು. ಕಥೆ ಇಷ್ಟೇ. ವಿಶ್ವಾವಸು ಮತ್ತು ಕೃಶಾನು ಎ೦ಬಿಬ್ಬರು ಗ೦ಧರ್ವರು ವಿಮಾನದಲ್ಲಿ ದೇಶಸ೦ಚಾರಕ್ಕೆ ಹೋಗುತ್ತಾರ೦ತೆ. ದಾರಿಯಲ್ಲಿ ಕ೦ಡ ವಿಷಯಗಳನ್ನು  ವಿಶ್ವಾವಸು ಹೊಗಳುತ್ತಾನೆ,  ಗೊಡ್ಡು ಹೊಗಳಿಕೆಗಳನ್ನೆಲ್ಲ ಕೃಶಾನು ಮೆಚ್ಚುವವನಲ್ಲ. ಎದುರಿಗಿರುವ ದೋಷಗಳನ್ನು ಕೆದಕಿ ತೆಗಳುತ್ತಾನೆ. ವಿಶ್ವಾವಸು ಅದಕ್ಕೆ ಸಮಾಧಾನ ಹೇಳುತ್ತಾನೆ. ಇಡೀ ಕಾವ್ಯವಿಡೀ ಇವರಿಬ್ಬರ ಸ೦ವಾದಗಳೇ.
ಇದನ್ನು ರಚಿಸಿದ ಕವಿ ಮೂಲತಃ ತಮಿಳ್ನಾಡಿನ ಕಾ೦ಚೀಪುರದ ಅಗ್ರಹಾರವೊ೦ದರವನು. ತಮಿಳನಾದರೂ ಬರೆದದ್ದು ಸ೦ಸ್ಕೃತದಲ್ಲಿ. ಐತಿಹಾಸಿಕವಾಗಿ ಇದು ಸುಮಾರು ೧೬೪೦ ರ ಆಸುಪಾಸಿನಲ್ಲಿ ರಚನೆಗೊ೦ಡಿದ್ದೇನೋ. ದಕ್ಷಿಣದಲ್ಲಿ ವಿಜಯನಗರ ಪತನವಾಗಿ ಮುಸ್ಲಿಮರ ಪ್ರಾಬಲ್ಯ ಜಾಸ್ತಿಯಾಗಿತ್ತು. ವೈದಿಕ ಕರ್ಮಾನುಷ್ಟಾನಗಳೆಲ್ಲ ಜೀರ್ಣವಾಗಿದ್ದವು. ಕಡು ಕರ್ಮಠ ವೈಷ್ಣವ ಮತದ ಪರಮ ಕರ್ಮಠ ವಡಗಲೆ ಪ೦ಥದ ಅನುಯಾಯಿಯಾದ ವೆ೦ಕಟಾಧ್ವರಿ ಸಹಜವಾಗಿ ಅವುಗಳಿ೦ದ ದುಖಿಃತನಾಗಿದ್ದ. ಆ ಸಿಟ್ಟನ್ನೆಲ್ಲ ಆತ ಕೃಶಾನುವಿನ ಬಾಯಿಯಿ೦ದ ಕಾರಿಕೊ೦ಡಿದ್ದಾನೆ.
ಸೂರ್ಯನನ್ನು ಆರೋಪಿಸಿ ಸ್ತುತಿನಿ೦ದೆಯೊಡನೆ ಇಲ್ಲಿ ಕಥೆ ಶುರುವಾಗುತ್ತದೆ. ’ಛಾ೦ದಸಜ್ಯೋತಿ’ ಅರ್ಥಾತ್ ವೇದಪ್ರತಿಪಾದ್ಯ ಬ್ರಹ್ಮರೂಪಿ ತೇಜಸ್ಸೆ೦ದು ಸೂರ್ಯನನ್ನು ವಿಶ್ವಾವಸು ಸ್ತುತಿಸಿದ್ದೇ ತಡ, ಯಾಕೆ ಲೋಕವನ್ನು ಶೋಷಿಸುವ ಕ್ರೂರನನ್ನು ದೇವರೆನ್ನುತ್ತೀಯ ಎ೦ದು ಕೃಶಾನು ತೆಗಳುತ್ತಾನೆ. ಇದರಿ೦ದ ಆತನಿಗೆ ಕುಷ್ಟರೋಗವು೦ಟಾಯ್ತೆ೦ದೂ ಸೂರ್ಯಾರಾಧನೆಯಿ೦ದ ಗುಣವಾಯ್ತೆ೦ದೂ ಒ೦ದು ಕಥೆಯಿದೆ.
ಗ೦ಧರ್ವದ್ವಯರು ಕರ್ನಾಟಕಕ್ಕೆ ಬ೦ದಾಗ ವೀರವೈಷ್ಣವ ಕೃಶಾನು ವೀರಶೈವರನ್ನು ಯಕ್ಕಾ ಮಕ್ಕಾ ಬಯ್ಯುತ್ತಾನೆ. ವೇದವೈದಿಕವಿದ್ವೇಷದೂಷಿತಾಃ, ಭಸ್ಮರೂಷಿತಾಃ, ಚ೦ದ್ರನ ಕಿರಣದಿ೦ದ ಅಭಿಷಕ್ತಗೊಳ್ಳಬೇಕಿದ್ದ ಶಿವನಿಗೆ ತಮ್ಮ ಕಾಲುತೊಳೆದ ನೀರನ್ನು ಅಭಿಷೇಕ ಮಾಡುವವರೆ೦ದು ಕರೆದು ಇ೦ಥವರಿದ್ದ ನಾಡು ನಿ೦ದ್ಯವಾಗುತ್ತದೆ೦ದು ಹೀಗೆಳೆಯುತ್ತಾನೆ.
ವಿಶ್ವಾವಸು ಅದಕ್ಕೆ ಸಮಾಧಾನ ಹೇಳುತ್ತ ಸದ್ಬ್ರಾಹ್ಮಣ ಪೂಜಿತರಾದ ಮಧ್ವಾಚಾರ್ಯರ೦ಥ ತಪಸ್ವಿಗಳು ಹುಟ್ಟಿದ ಪುಣ್ಯಭೂಮಿಯಿದು ಎ೦ದು ಕರ್ನಾಟಕವನ್ನು ಹೊಗಳುತ್ತಾನೆ.(ಮಧ್ವರು ವೈಷ್ಣವರು ತಾನೆ!) ಆದರೆ ಕೃಶಾನು ಕೇಳಬೇಕಲ್ಲ, ಆಗಿನ ಬ್ರಾಹ್ಮಣರ ಭೃಷ್ಟತೆಯ ಹೊಟ್ಟನ್ನೆಲ್ಲ ಹಾರಿಸಿಬಿಡುತ್ತಾನೆ. "ಇವರು ಪ್ರಾತಃಅಕಾಲ ಮಾಡಬೇಕಾದ ಸ೦ಧ್ಯಾವ೦ದನೆಯನ್ನು ಹೊತ್ತೇರಿದ ಮೇಲೆ ಆಚರಿಸುವವರು, ಅನ್ಯಮತದವರು ಗುಣವ೦ತರಿದ್ದರೂ ಮನ್ನಿಸದ ಶು೦ಠರು, ಇವರ ಸ್ವಾಮಿಗಳು ಶಿಖಾ ಯಜ್ಞೋಪವೀತ ಗಾಯತ್ರಿಗಳನ್ನು ತ್ಯಜಿಸಿ ಸ೦ನ್ಯಾಸಿಗಳಾಗಿ ವಿರಕ್ತ ವೇಷ ಹಾಕಿದರೂ ಶಾಸ್ತ್ರವಿರುದ್ಧವಾದ ಮೇನೆಯಲ್ಲಿ ಕೂರುವವರು. ಗ್ರಹಸ್ತರು ಬರಿಗಾಲಲ್ಲಿ ಚಲಿಸಿ ಮುರುಕು ಮನೆಯಲ್ಲಿ ವಾಸಿಸಿದರೆ ಸನ್ಯಾಸಿಗಳು ಮಠಗಳಲ್ಲಿ ಸುಖಜೀವನ ನಡೆಸುತ್ತಾರೆ. ವೇದಗಳನ್ನಲಕ್ಷಿಸಿ ಶಾಸ್ತ್ರವನ್ನೋದುತ್ತಾರೆ" etc etc.....ಕೊನೆಗೆ ಕನ್ನಡದವರ ಮೇಲೆ ಹೀಗೆ ತೀರ್ಪು ಕೊಡುತ್ತಾನೆ. "ಈ ದಡ್ಡರಿಗೆ ಹಿಟ್ಟು-ಬೂದಿ ಒ೦ದೇ. ಬೆಳದಿ೦ಗಳು-ಕತ್ತಲೆ, ಕೇಸರದ ಗಿಡ-ವಿಷವೃಕ್ಷ, ನಾಗರ-ಕೇರೆ ಹಾವಲ್ಲಿ, ತಾವರೆ-ಉಮ್ಮತ್ತ ಹೂವಲ್ಲಿ, ಕಾಗೆ-ಕೋಗಿಲೆಗಳಲ್ಲಿ, ಹಾಲ್ಗಡಲು-ಹಾಳುಬಾವಿಗಳಲ್ಲಿ ವ್ಯತ್ಯಾಸವೇ ಗೊತ್ತಿಲ್ಲದ ಮೂಢರ ನಾಡು."
ನಮ್ಮ ಜನಗಳ ಬಗ್ಗೆ ಒ೦ದು ಕಡೆ ಹೇಳುತ್ತಾನೆ
"ವೇದವ್ಯಾಸ೦ ಚ ಇಹ ದಶಯೋ ವೇದ ವೇದಾಕ್ಷರಾಣಿ
ಶ್ಲೋಕ೦ ತ್ವೇಕ೦ ಪರಿಪಠತಿ ಯಃ ಸ ಸ್ವಯ೦ ಜೀವ ಏವ
ಆಪಸ್ಥ೦ಬಃ ಸ ಕಿಲ ಕಲಯೇತ್ ಸಮ್ಯಗೌಪಾಸನ೦............."
(ವೇದದ ಹತ್ತಕ್ಷರ ಬ೦ದವನೇ ಇಲ್ಲಿ ವೇದವ್ಯಾಸ, ಒ೦ದು ಶ್ಲೋಕ ಬಲ್ಲವನು ಸಾಕ್ಷಾತ್ ಬ್ರಹಸ್ಪತಿ, ಸರಿಯಾಗಿ ಔಪಾಸನೆ ಮಾಡಲು ಬ೦ದವ ಆಪಸ್ತ೦ಭ ಮುನಿಯೆನಿಸುತ್ತಾನೆ)
ವಿಜಯನಗರದ ಪತನದ ನ೦ತರ ಆ೦ಧ್ರದಲ್ಲಿ ಮುಸ್ಲಿಮರ ಪ್ರಾಬಲ್ಯ ಜಾಸ್ತಿಯಾಗಿದ್ದನ್ನು ನೋಡಿ ವೆ೦ಕಟಾಧ್ವರಿ ಹೇಳುತ್ತಾನೆ. "ಗಾಳಿಗಿ೦ತ ವೇಗವಾಗಿ ಓಡುವ ಕುದುರೆಯನ್ನು ಏರಿ ಗುಡಿ ಗು೦ಡಾರಗಳನ್ನು ಧ್ವ೦ಸಮಾಡುತ್ತ ವೇದೋಕ್ತ ಕರ್ಮಗಳನ್ನು ನಾಶಮಾಡುವ ಪಣತೊಟ್ಟ ಭುವನಭಯ೦ಕರ ಯಮನರು ಇಲ್ಲಿ ಎಲ್ಲೆಲ್ಲೂ ಮೆರೆಯತೊಡಗಿದ್ದಾರೆ." ವೆ೦ಕಟಾಧ್ವರಿಗೆ ಪ್ರಿಯವಾದ ವೈದಿಕನಿಷ್ಠೆ ಆ೦ಧ್ರದಲ್ಲೂ ಕಾಣಿಸಿದ೦ತಿಲ್ಲ. ಹಳ್ಳಿಹಳ್ಳಿಗಳಲ್ಲೂ ಬ್ರಾಹ್ಮಣರು ತುರುಕರ ಪ್ರಭುಗಳ ಸ೦ಬಳದ ಕಾರಕೂನರಾಗಿದ್ದಾರೆ. ವೇದಾಧ್ಯಯನ ಮಾಡಿದ ಬ್ರಾಹ್ಮಣರು ಮರುಭೂಮಿಯ ತೊರೆಯ೦ತೆ, ಆದರೂ ಅವರು ಮ೦ದಿಯ ಮನೆಯ ಮುಸುರೆ ತಿಕ್ಕಿ ಜೀವನ ಮಾಡುತ್ತಿದ್ದಾರೆ೦ದು ಗೋಳಾಡುತ್ತಾನೆ. "ಬ೦ಗಾರದ ಮೈಬಣ್ಣ, ತಾಮ್ರ ಸದೃಶ ಮೆದು ತುಟಿ, ಹವಳ ಬಣ್ಣದ ಅ೦ಗೈ, ಅಮೃತದ೦ಥ ಮಾತು, ತಾವರೆಯ ಮುಖಗಳೊ೦ದಿಗೆ ಮನಸ್ಸನ್ನು ಮರುಳುಗೊಳಿಸದ ಅವಯವವಾವುದಾದರೂ ಆ೦ಧ್ರದ ಪ್ರಮದೆಯರಲ್ಲಿದೆಯೇ" ಎ೦ದೂ ಕೇಳುತ್ತಾನೆ. ಗುಜರಾತಿಗಳು ಎಷ್ಟೇ ವ್ಯವಹಾರ ನಿಪುಣರಾದರೂ ಆ೦ಧ್ರದ೦ತೆ ಬುದ್ಧಿವ೦ತರಲ್ಲ. ನಾರಿಯರನ್ನು ಓಲೈಸುವುದನ್ನು ಬಿಟ್ಟು ಹಣದ ಹಪಾಹಪಿಯಿ೦ದ ದೇಶಾ೦ತರ ಅಲೆಯುತ್ತ ತಮ್ಮ ತಾರುಣ್ಯವನ್ನು ಇಲ್ಲಿನ ತರುಣರು ವ್ಯರ್ಥಗೊಳಿಸಿಕೊಳ್ಳುತ್ತಾರೆ ಎ೦ಬ ಟೀಕೆ ಇ೦ದಿಗೂ ನಿಜವಲ್ವೇ?
ಮಹಾರಾಷ್ಟ್ರದ ಬ್ರಾಹ್ಮಣರನ್ನೂ ಅವ ಬಿಟ್ಟಿಲ್ಲ. ವ್ಯಾಪಾರದಲ್ಲಿ ಬಿದ್ದ ಇವರಿಗೆ ಆಚಾರದ ಅಭ್ಯಾಸವಿಲ್ಲ. ಊಟದ ಹೊತ್ತಾದರೂ ಸ್ನಾನ ನಾಸ್ತಿ. ಬ್ರಾಹ್ಮಣಿಕೆ ಬಿಟ್ಟು ಕುಲಕರ್ಣಿಕೆ ಮಾಡುತ್ತಾರೆ. ಹೊಟ್ಟೆಪಾಡಿಗಾಗಿ ತುರುಕ ರಾಜನ ಸೇವೆ ಮಾಡುತ್ತಾರೆ. ಆದರೂ ಹಗಲೆಲ್ಲ ಲೌಕಿಕದ ಮಾತಾಡುವ ಇವರಿಗೆ ಮ೦ತ್ರೋಚ್ಛಾರದ ಸಮಯದಲ್ಲಿ ಮೌನವೃತ, ಮದುವೆಯಲ್ಲಿ ಸ೦ಸ್ಕಾರಕ್ಕಿ೦ತ ಆಡ೦ಬರಕ್ಕೆ ಪ್ರಾಧಾನ್ಯ, ವೇದ ಕಲಿಯಬೇಕಾದ ಕಾಲದಲ್ಲಿ ಮ್ಲೇಚ್ಛ ಭಾಷೆ ಕಲಿಯುತ್ತಾರೆ ಇತ್ಯಾದಿ ಇತ್ಯಾದಿ. ಆದರೂ ಅವರ ಸಕಲಾಪರಾಧಗಳನ್ನೂ ಮನ್ನಿಸುವ೦ತೆ ’ಸೈನ್ಯಾಧಿಪತ್ಯದಿ೦ದ ಹಿಡಿದು ಗ್ರಾಮಾಧಿಕಾರತ್ವದವರೆಗೆ ಎಲ್ಲೆಲ್ಲೂ ಅವರೇ ತು೦ಬಿದ್ದಾರೆ. ಹೀಗೆ ಅಧಿಕಾರ ಸ್ಥಾನಗಳಲ್ಲಿ ತು೦ಬಿಕೊ೦ಡು ಹಿ೦ದೂಗಳನ್ನು ರಕ್ಷಿಸಿರದಿದ್ದರೆ ’ಭವದ್ಯೇವನ ವೇಷ್ಟಿತ೦ ಭುವನಮೇತದ್ ಬ್ರಾಹ್ಮಣ೦’ ತುರ್ಕರಿ೦ದ ಸುತ್ತುವರೆಯಲ್ಪಟ್ಟ ದೇಶ ಎ೦ದೋ ಅಬ್ರಾಹ್ಮಣವಾಗಿ ಬಿಡುತ್ತಿತ್ತು. ಇದೊ೦ದು ಪುಣ್ಯಕೃತಿಯಿ೦ದ ತಮ್ಮ ಸಕಲ ಪಾಪಗಳನ್ನೂ ತೊಳೆದುಕೊ೦ಡಿದ್ದಾರೆನ್ನುತ್ತಾನೆ.
ಆ೦ಧ್ರ,ಕರ್ನಾಟ, ಚೇರ,ಪಾ೦ಡ್ಯ,ಗುರ್ಜರ,ಕಾಶಿ ದೇಶಗಳನ್ನೆಲ್ಲ ಸುತ್ತಿದ ನ೦ತರ ವಿಶ್ವಾವಸು ಮತ್ತು ಕೃಶಾನು ಬರುವುದು ಮಲಯಾಳ ದೇಶಕ್ಕೆ.. ಇಲ್ಲಿನ ನಿಸರ್ಗ ಸೌ೦ದರ್ಯದ ಜೊತೆ ಬ್ರಾಹ್ಮಣರ ಶುದ್ಧಾಚಾರಕ್ಕೆ ಇಬ್ಬರೂ ಸರಿಫಿಕೇಟ್ ನೀಡುತ್ತಾರೆ. ದಕ್ಷಿಣದಲ್ಲಿ ಬ್ರಾಹ್ಮಣ್ಯದ ಲವಲೇಶವೆಲ್ಲಾದರೂ ಉಳಿದಿದ್ದರೆ ಅದು ಮಲಯಾಳದಲ್ಲ್ಲಿ ಮಾತ್ರವ೦ತೆ. ಆದರೂ ಇಲ್ಲಿನ ಮಡಿವ೦ತ ಬ್ರಾಹ್ಮಣರು ತ೦ಗಳು ತಿನ್ನುತ್ತಾರೆ೦ದು ಕೃಶಾನುವಿಗೆ ಪಾಪ ಬೇಸರ. ಯಾರಿಷ್ಟವಾದರೂ ಮಲಯಾಳದ ಮಹಿಳೆಯರ ಚಾಳಿ ಮಾತ್ರ ಇವನಿಗೆ ಹಿಡಿಸುವುದಿಲ್ಲ. ಈ ಹೆ೦ಗಸರು ಕುಪ್ಪಸ ಹಾಕಿಕೊಳ್ಳದೇ ಹಾಗೇ ಎಲ್ಲವನ್ನೂ ಬಯಲಿಗಿಟ್ಟು ಯಾಕೆ ತಿರುಗಬೇಕು(?)....!ಕಲಿಕಾಲ..ಅಬ್ಬ!
ಇದಕ್ಕೆ ವಿಶ್ವವಸುವಿನ ಉತ್ತರ ಕೇಳಿ...."ಕಾಮಭೋಗದ ಸಾಧನವಾದ್ದರಿ೦ದ ಎದೆಯನ್ನು ಮುಚ್ಚಿಟ್ಟುಕೊಳ್ಳಬೇಕೆನ್ನುವ ಕೂಗೆಬ್ಬಿಸುವ ನೀನು  ಅದರ ಇನ್ನೊ೦ದು ಸಾಧನವಾದ ತುಟಿಗಳನ್ನೂ ಮರೆಮಾಡಬೇಕೆ೦ದು ಯಾಕೆ ಹೇಳುವುದಿಲ್ಲ?" ಇಡೀ ಪುಸ್ತಕದಲ್ಲಿ ಕೃಶಾನು ಎದುರಾಡದೇ ಬಾಯಿಮುಚ್ಚಿಕೊ೦ಡಿದ್ದು ಇಲ್ಲಿ ಮಾತ್ರ. ನೀವೇನ೦ತೀರಿ?

Monday, April 1, 2013

ದ್ವೈತಾದ್ವೈತದ ಮ೦ಡೆಬಿಸಿ...


ಮೊನ್ನೆ ಒಬ್ಬರು ಹೊಸದಾಗಿ ಪರಿಚಯವಾದವರು ಸಿಕ್ಕಿದ್ರು. ಉಭಯಕುಶಲೋಪರಿ ಸಾ೦ಪ್ರತದ ನ೦ತರ ಮನೆ-ಮಠಗಳ ಬಗ್ಗೆಲ್ಲ ವಿಚಾರಿಸಿ
 ಕೇಳಿದರು ’ನೀವು ಹವ್ಯಕರು ಸ್ಮಾರ್ತರಲ್ಲವೇ?’
ನಾನ೦ದೆ ’ಹೌದು, ನೀವೂ ಸ್ಮಾರ್ತರಲ್ಲವೇ?’
 "ಅಲ್ಲ, ನಾವು ಸ್ಮಾರ್ತರಲ್ಲ ವೈಷ್ಣವರು. ನಿಮ್ಮದು ಅಡ್ಡನಾಮ, ನಮ್ಮದು ಉದ್ದನಾಮ....."ಅ೦ದ್ರಪ.
’ಓಹೋ, ನಾವೂ ಊರ್ಧ್ವಪು೦ಡ್ರ ಹಾಕ್ತೇವೆ ಬಿಡಿ. ನಾವೂ ವೈಷ್ಣವರಾದ೦ತಾಯ್ತು ಅಲ್ವೇ’ ಅ೦ದೆ.
 "ನೀವು ಸ್ಮಾರ್ತರಲ್ಲವೇ, ಊರ್ಧ್ವಪು೦ಡ್ರ ಹಾಕೋದು ಯಾಕೆ?..." ತಿರುಗಿ ಕೇಳಿತು ಆಸಾಮಿ.
"ಕಾಶಿಯ ತ೦ತ್ರಶಾಸ್ತ್ರಜ್ಞ ರಾಘವ ಭಟ್ಟ ’ವೇದಾಧಿಕಾರ ಸಿಧ್ಯರ್ಥ೦ ಸರ್ವೈರಪಿ ಊರ್ಧ್ವಪು೦ಡ್ರ ಧಾರಣ೦ ಕರ್ತವ್ಯಂ' ಅ೦ದಿದ್ದಾನೆ. ಉಪನಯನದ ದಿನ ಹಾಕೋದೇ ಊರ್ಧ್ವಪು೦ಡ್ರ. ಗೊತ್ತೇ?" ಅ೦ದೆ.
ಅವರಿಗೆ ಖುಷಿಯಾಯ್ತು.
ಮು೦ದುವರೆಸಿದೆ "ಸ್ಮೃತಿಯಾನುಸಾರ ಕರ್ಮಾಚರಣೆ ಮಾಡುವ ವೈದಿಕರಿಗೆಲ್ಲ ಸ್ಮಾರ್ತರೆನ್ನುತ್ತಾರೆ. ಸ೦ಸ್ಕೃತದಲ್ಲಿ ಪು೦ಡ್ರಕ್ಕೆ ನಾಮ ಎ೦ಬ ಹೆಸರೇ ಇಲ್ಲ. ದ್ವಾದಶ ನಾಮಗಳಿಗೆ ದ್ವಾದಶ ಪು೦ಡ್ರಗಳನ್ನು ಹಾಕುವುದರಿ೦ದ ಪು೦ಡ್ರಕ್ಕೆ ನಾಮ ಎ೦ಬ ಹೆಸರು ಬ೦ತು. ನೀವು ಮಾಧ್ವರಲ್ಲವೇ? ಹಾಗ೦ದ್ರೇನು?"
"ಹಾಗ೦ದ್ರೆ ದ್ವೈತಿಗಳು. ಆಚಾರ್ಯರು ಹೇಳಿದ್ದಾರೆ ’ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯ೦ ಜಗತ ತತ್ವತೋಬೇಧಃ ಹರೇರನುಚರಾಃ....’ ಅ೦ತೇನೇನೋ ಸ೦ಸ್ಕೃತ ಶುರುಮಾಡಿದ್ರು."
ನಾನು ಬಿಡಬೇಕಲ್ಲ, "ನೀವು ಹೇಳಿದ ಶ್ಲೋಕ ಹೇಳಿದ್ದು ವ್ಯಾಸತೀರ್ಥರು. ’ಹರಿಃ ಪರತರಃ ಸತ್ಯ೦ ಜಗತ’ ಅ೦ದವ್ರು ರಾಮಾನುಜರು. ’ಮುಕ್ತಿರ್ನೈಜಸುಖಾನುಭೂತಿಃ ಅಮಲಾಭಕ್ತಿಶ್ಚತತ್ಸಾಧನಮ್’ ಇದೂ ರಾಮಾನುಜಾಚಾರ್ಯರು ಹೇಳಿದ್ದೇ. ಮಧ್ವರು ಹೇಳಿದ್ದು ತತ್ತ್ವವಾದವಲ್ವೇ." ನ೦ಗೂ ಸ್ಯಾನ್‍ಸ್ಕ್ರಿತ್ ಬರತ್ತೆ ಅ೦ತ ತೋರಿಸ್ಕೋಬೇಕಲ್ಲ.
"ಹಾಗ೦ದ್ರೇನು.....?"
’ಮಾಧ್ವರು ನೀವು. ನಿಮ್ಗೆ ಗೊತ್ತಿರ್ಬೇಕು. ಮಧ್ವರ ಒರಿಜಿನಲ್ ಹೆಸ್ರು ವಾಸುದೇವ. ಅವ್ರಿಗೆ ಮಧ್ವ ಹೆಸ್ರು ಯಾಕ್ ಬ೦ತು?’ ಅ೦ತ ಒ೦ದು ಕ್ವಶ್ಚನ್ ಬಿಟ್ಟೆ.
 "ಅವರಪ್ಪನ ಹೆಸ್ರು ಮಧ್ಯಗೇಹ ಭಟ್ಟ. ಅದ್ಕೇ ಇರ್ಬಹುದು ಅಲ್ವೇ?" ಅವ್ರದ್ದೂ ತಿರುಗಿ ಕ್ವಶ್ಚನ್ ಮಾರ್ಕೇ.
ನಾನ್ ಬಿಡ್ತೀನಾ ’ಎ೦ಟನೇ ಕ್ಲಾಸ್ ಹಿಸ್ಟರಿ ಬುಕ್ಕಲ್ಲಿರೋ ಆನ್ಸರ್ ಬೇಡ. ಒರಿಜಿನಲ್ ರೀಸನ್ ಬೇಕು’ ಅ೦ದೆ.
......!!!!!!!!!!!
"ನಡಿಲ್ಲಾಯ ಅವರ ಮನೆ ಹೆಸ್ರು, ಅಪ್ಪನ ಹೆಸ್ರಲ್ಲ. ನಡು=ಮಧ್ಯ, ಇಲ್ಲಾಯ=ಮನೆಯವ. ತೆ೦ಕಿಲ್ಲಾಯ=ದಕ್ಷಿಣದ ದಿಕ್ಕಿನ ಮನೆಯವ, ಕಕ್ಕಿಲಾಯ=ಮಾವಿನ ಮರ ಇರುವ ಮನೆಯವ."
’ಓಹ್ ಯು ಆರ್ ರೈಟ್. ಅವರ್ ಫ್ಯಾಮಿಲಿ ನೇಮ್ ಈಸ್ ಪೆರ್ಮುತ್ತಾಯ ವಿಚ್ ಕೇಮ್ ಫ್ರಾಮ್ ಪೆರ್ಮುತ್ತುಗ ಟ್ರಿ.......’ ಅ೦ದ್ರು.
’ಆ೦ಡ್ ಇಟ್ ಈಸ್ ನಾಟ್ ಯುವರ್ ಡ್ಯಾಡ್ಸ್ ನೇಮ್ ಕರೆಕ್ಟಾ?’ ಅ೦ತ ಐ ಆಸ್ಕಡು.
 "ಯಸ್ ಯಸ್ ಮು೦ದುವರ್ಸಿ..."
’ಅವರ ಆಶ್ರಮನಾಮ ಪೂರ್ಣಪ್ರಜ್ಞ. ಪೀಠಾರೋಹಣ ನಾಮ ಆನ೦ದತೀರ್ಥ.’ ಅ೦ತ ಶುರುಮಾಡೋದ್ರೊಳ್ಗೆ
 "ಯಸ್ ಆಯ್ ನೋ ದಿಸ್. ವಾಟ್ ಈಸ್ ಸ್ಪೆಶಲ್ ಇನ್ ದಿಸ್?".......ಅ೦ತ ಮಧ್ಯ ಬಾಯಿ ಹಾಕಿದ್ರು.
’ಡೋ೦ಟ್ ಟಾಕ್ ಇನ್ ಬಿಟ್ವೀನ್ ಐ ಸೇ.  ಹಾಗಾದ್ರೆ ಆ ಹೆಸ್ರಿನ ಅರ್ಥ ಹೇಳಿ.’
ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್..................................!!!
’ಮಧ್ವ ಆಧವೇ ಗುಹಾ ಸ೦ತ೦ ಮಾತರಿಷ್ವಾ ಮಧಾಯತಿ, ಗುಹೆಯಲ್ಲಿ ಗೂಢವಾಗಿರುವ ಭಗವ೦ತನ ಮಹಿಮೆಯನ್ನ ಮಥನ ಮಾಡಿ ಮಧ್ವ ಜಗತ್ತಿಗೆ ಕೊಡ್ತಾನೆ ಅ೦ತ ವೇದಗಳು ಹೇಳಿವೆ.
ಮಧು=ಆನ೦ದ, ವಾ=ಶಾಸ್ತ್ರ. ವೇದಗಳ ಆನ೦ದವನ್ನ ಕೊಡುವವನು ಅ೦ತ. ಆ ಹೆಸ್ರನ್ನ ಅವ್ರೇ ಇಟ್ಕೊ೦ಡಿದ್ದು. ಯಾರೂ ಇಟ್ಟದ್ದಲ್ಲ." ಎ೦ದು ಪ್ರಶ್ನಾರ್ಥಕವಾಗಿ ಅವರ ಮುಖ ಕ೦ಡೆ.
ಯಾಕ್ ಆ ಹೆಸ್ರು ಇಟ್ಕೊ೦ಡ್ರು?......ತಿರುಗಿ ಪ್ರಶ್ನೆಯೇ ನನ್ನೆಡೆ ಬ೦ತು.
’ದಶಪ್ರಮತಿ೦ ಜನಯ೦ತೀ೦ ಯೋಷಣಃ" -ಇಡೀ ವೇದಗಳಲ್ಲಿ ಒ೦ದೇ ಕಡೆ ವಾಯುಸೂಕ್ತದಲ್ಲಿ ದಶಪ್ರಮತಿ ಅನ್ನೋ ಶಬ್ದ ಬಳಸಲ್ಪಟ್ಟಿದೆ. ಯೋಷಣಃ- ವೇದಮಾತೆಯರು. ತು೦ಬಿತುಳುಕುವ ಪೂರ್ಣಪ್ರಜ್ಞೆಯನ್ನು ವೇದಮಾತೆಯನ್ನು ಹೆತ್ತರು ಅ೦ತ ಅರ್ಥ. ಅವರ ಪೀಠಾರೋಹಣ ನಾಮ ಆನ೦ದತೀರ್ಥ. ತೀರ್ಥ=ವೇದ. ಅದೂ ವೇದದ ಆನ೦ದವನ್ನು ಕೊಡುವವನು ಅ೦ತಾನೇ. ಆನ೦ದತೀರ್ಥ, ಪೂರ್ಣಪ್ರಜ್ಞ, ಮಧ್ವ ಇದೆಲ್ಲ ಒ೦ದೇ ಅರ್ಥ ಕೊಡುವ ಶಬ್ದಗಳು.’
’ಎ೦ಚಿನ ಸಾವ್ ಯಾ, ಮ೦ಡೆಬೆಚ್ಚ.....’ ಎ೦ದು ತಲೆ ಕೆರೆದುಕೊಳ್ಳತೊಡಗಿದರು.

* * * * * * * * * * * * * * * * * * * * * * * * * * * * * * * * * * * * * * * * * * * * *

ಈ ಶ೦ಕರರ ಅಹ೦ ಬ್ರಹ್ಮಾಸ್ಮಿ ತು೦ಬ ದಿನಗಳಿ೦ದ ನನ್ನ ತಲೆ ತಿನ್ನುತ್ತಿತ್ತು. ಅದು ಶ೦ಕರರು ಮೊದಲು ಹೇಳಿದ್ದೇನಲ್ಲ. ಬೃಹದಾರಣ್ಯಕೋಪನಿಷತ್ತಿನಲ್ಲೆಲ್ಲೋ ಬರುವ ವಾಕ್ಯವದು. ಸಾಧಾರಣವಾಗಿ  ಅವರೇ ಹೇಳಿದ್ದೆ೦ದು ತಿಳಿದುಕೊಳ್ಳುವ ತತ್ತ್ವಮಸಿ, ಪ್ರಜ್ಞಾನ೦ ಬ್ರಹ್ಮ ಕೂಡ ಉಪನಿಷದ್ವಾಕ್ಯಗಳೇ. ಹಾಗೆ ನೋಡಿದರೆ ಅದ್ವೈತ ಮತ ಶ೦ಕರರಿ೦ದ ಸ್ಥಾಪಿಸಲ್ಪಟ್ಟದ್ದಲ್ಲ. ಅವರ ಗುರುಗಳಾದ ಗೌಡಪಾದಾಚಾರ್ಯರೂ ಅದ್ವೈತಿಗಳೇ ಆಗಿದ್ದರು. infact ಅದ್ವೈತವೆನ್ನುವುದು ಮತವೂ ಅಲ್ಲ. ಅದೊ೦ದು ತತ್ತ್ವ. ಅ೦ತೆ ದ್ವೈತವೂ ಕೂಡ. ಅದನ್ನು ಸ್ಥಾಪಿಸಿದವರೂ ಮಧ್ವರಲ್ಲ.
ಹಾಗಾದರೆ ಅಹ೦ ಬ್ರಹ್ಮಾಸ್ಮಿ ಎ೦ದರೇನು. ಅದಕ್ಕೂ ಮೊದಲು ಅಹ೦ ಅ೦ದರೇನು?
ಅಹ೦ ಎ೦ದರೆ ’ನಾನು.....’ ಸರಿ.
ಆದರೆ ನಾನೇ ಯಾಕೆ?
’ಹ೦’ ಎ೦ದರೆ ಬಿಡಬೇಕಾದ್ದು. ಯಾವುದನ್ನು ಬಿಟ್ಟು ದೂರ ಹೋಗಲಿಕ್ಕಾಗುವುದಿಲ್ಲವೋ ಅದು ’ಅಹ೦’.
ನಾನು ನನಗೆ ಯಾಕೆ ’ಅಹ೦’?
ಮನೆ, ಮಠ, ಆಸ್ತಿ-ಪಾಸ್ತಿ ಯಾವುದನ್ನು ಬಿಟ್ಟರೂ ನಾನು ನನ್ನನ್ನು ಬಿಟ್ಟು ಹೋಗಲಾಗುವುದಿಲ್ಲವಲ್ಲ. ಅದಕ್ಕೇ ನಾನು ನನಗೆ ’ಅಹ೦’.
ego?
ಅದನ್ನೂ ಸುಲಭಕ್ಕೆ ಬಿಡಲಾಗುವುದಿಲ್ಲ ಏನು ಮಾಡಿದರೂ. ಅದಕ್ಕೇ ಅದೂ ಒ೦ದು ಥರದ ’ಅಹ೦’.
ಇದು ವ್ಯಷ್ಟಿಯಾಯಿತು. ಸಮಷ್ಟಿಯಲ್ಲಿ ಯಾರನ್ನು ಬಿಟ್ಟು ಇಡೀ ಜಗತ್ತು ಇರಲು ಸಾಧ್ಯವಿಲ್ಲವೋ ಅದು ಎಲ್ಲರಿಗೂ ’ಅಹ೦’. ಅಣುರೇಣುತೃಣಕಾಷ್ಟಗಳಲ್ಲಿ ಕೂತು ಪ್ರಪ೦ಚವನ್ನು ನಡೆಸುತ್ತಿರುವವನು ಭಗವ೦ತ. ಪ್ರಪ೦ಚಕ್ಕೆ ಅವನೇ ಅಹ೦. ನನ್ನನ್ನು ಬಿಟ್ಟು ಯಾವುದೂ ಇಲ್ಲ ಎ೦ದು ಗೀತೆಯಲ್ಲಿ ಭಗವ೦ತನೇ ಹೇಳಿದ್ದಾನಲ್ಲ. ಝೆ೦ಡಾವೆಸ್ತಾದಲ್ಲಿ ದೇವರು ತನ್ನ ಹೆಸರನ್ನ ಅಸ್ಮಿ ಅ೦ದಿದ್ದಾನೆ, ಬೈಬಲ್ಲಲ್ಲಿ ’ಐ ಆಮ್’ ಅ೦ದಿದ್ದಾನೆ. ಹಾಗಾದ್ರೆ ’ಅಹ೦ ಬ್ರಹ್ಮಾಸ್ಮಿ’ ಎ೦ದು ಮನುಷ್ಯ ಹೇಳಿದ್ದಾ  ಅಥವಾ ದೇವರು ಹೇಳಿದ್ದಾ?
ಆಧ್ಯಾತ್ಮ ಅ೦ದ್ರೆ ಮ೦ಡೆಬಿಸಿಯಾ.....?

Friday, March 15, 2013

ಶಂಕರಾಭರಣಮು....


     ಎ೦ಭತ್ತರ ದಶಕದ ಆರ೦ಭಕಾಲ. ಹಿಪ್ಪಿ ಕಲ್ಚರ್ ಆರ೦ಭವಾಗಿ ಕೆಲ ಸಮಯ ಕಳೆದಿತ್ತಷ್ಟೆ. ಭಾರತೀಯ ಶಾಸ್ತ್ರೀಯ ಸ೦ಗೀತ allmost ಮ್ಯೂಟ್ ಆದ ಸ್ಥಿತಿಯಲ್ಲಿತ್ತು. ರಾಕ್-ಪಾಪ್‍ ಕ್ರೇಝಿನ ಹೊಸ ಅಲೆಯಲ್ಲಿ ಯುವಕರು ಮುಳುಗೇಳುತ್ತಿದ್ದರು. ಕರ್ನಾಟಕ ಸ೦ಗೀತದ ಕ್ಲಿಷ್ಟ ಸ್ವರ-ರಾಗಗಳ ನೋಟುಗಳೆಲ್ಲ ಔಟ್‍ಡೇಟೆಡ್ ಆಗಿದ್ದವು. ಸ೦ಗೀತ ವಿದ್ವಾ೦ಸರನ್ನೆಲ್ಲ ಯುವಪೀಳಿಗೆ ಜೋಕರುಗಳ ಥರ ಕಾಣುತ್ತಿತ್ತು. massive ಲೆವೆಲ್ಲಿನಲ್ಲಿ ಕಛೇರಿಗಳನ್ನೆಲ್ಲ ಕೇಳುವವರೇ ಇರಲಿಲ್ಲ. ಗೆಜ್ಜೆ-ತ೦ಬೂರಿಗಳೆಲ್ಲ ಧೂಳು ಹೊದ್ದು ಕುಳಿತಿದ್ದವು.
          ಅದೇ ಸಮಯದಲ್ಲಿ ಅದೊ೦ದು ಚಿತ್ರ ಬ೦ತು ನೋಡಿ. ಅಪ್ಪಟ ಶುದ್ಧ ಶಾಸ್ತ್ರೀಯ ಸ೦ಗೀತಮಯ ಭಾರತೀಯ ಗುರು-ಶಿಷ್ಯ ಪರ೦ಪರೆಯದ್ದು. ಅದೂ ಕೂಡ ಮೊದಲಿನಿ೦ದಲೂ ಹೀರೋಯಿಸ೦ನ ಮಾಸ್ ಚಿತ್ರಗಳೇ ಓಡುತ್ತಿದ್ದ ತೆಲುಗಿನಲ್ಲಿ. 143 ನಿಮಿಷದ ಆ ಚಿತ್ರ ಹೈದ್ರಾಬಾದಿನ ಒ೦ದೇ ಒ೦ದು ಚಿತ್ರಮ೦ದಿರದಲ್ಲಿ ಖಾಲಿ ಸೀಟುಗಳ ಸ್ವಾಗತದೊ೦ದಿಗೆ ತೆರೆ ಕ೦ಡಿತ್ತು. ಆಗೆಲ್ಲ ಈಗಿನ೦ತೆ ಸಿನೆಮಾದ ಪ್ರಚಾರಕ್ಕೆ ಇ೦ಟರ್ನೆಟ್ಟಾಗಲೀ, ಟಿ.ವಿ ಚಾನುಲ್ಲುಗಳಾಗಲೀ ಇರಲಿಲ್ಲ. ಚಿತ್ರದ ಬಗ್ಗೆ ಒಬ್ಬರ ಬಾಯಿ೦ದ ಇನ್ನೊಬ್ಬರಿಗೆ ಹಬ್ಬಿಯೇ ಪ್ರಚಾರ ಪಡೆಯಬೇಕಿತ್ತ್ತು. ದಿನಕಳೆದ೦ತೆ ಚಿತ್ರ ಇಷ್ಟು ಪ್ರಸಿದ್ಧವಾಯ್ತೆ೦ದರೆ ಇಡೀ ದಕ್ಷಿಣ ಭಾರತದ ಉದ್ದಗಲಕ್ಕೂ ರಾತ್ರೋರಾತ್ರಿ ಸಂಗೀತ ಶಾಲೆಗಳಲ್ಲಿ ಭರ್ತಿಭರ್ತಿ ಅಡ್ಮಿಷನ್‌ಗಳಾಗಿ ಹೋಗಿದ್ದವು! ವೆಸ್ಟರ್ನ್‌ ಮ್ಯೂಸಿಕ್ಕಿನ ಹುಚ್ಚು ಹತ್ತಿಸಿಕೊಂಡಿದ್ದ ಕಾಲೇಜು ಹೀರೋ-ಹೀರೋಯಿನ್‌ಗಳೂ ಸಾ-ಪಾ-ಸಾ ಕಲಿಯಲಾರಂಭಿಸಿಬಿಟ್ಟಿದ್ದರು. ಭಾಷೆ ಅರಿಯದಿದ್ದರೂ ಕಣ್ಣು ಬಿಡುತ್ತಿದ್ದ ಗಾಯಕರೆಲ್ಲ ಮಾನಸ ಸ೦ಚರರೇ ಹಾಡಿ ಫೇಮಸ್ ಆಗಿಹೋದರು. ಮಲಯಾಳ೦, ತಮಿಳಿಗೆ ಚಿತ್ರ ಡಬ್ ಆದರೂ ಬರಿಯ ಮಾತನ್ನಷ್ಟೇ ಡಬ್ ಮಾಡಿ ಹಾಡುಗಳನ್ನೆಲ್ಲ ಮೂಲಭಾಷೆಯಲ್ಲೇ ಇರಿಸಿಕೊ೦ಡವು. ಆ ಹಾಡುಗಳನ್ನು ಕೇಳಲೇ ಜನ ಥೇಟರಿನ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದರು.


     ಅದು ಮತ್ತಾವ ಚಿತ್ರವೂ ಅಲ್ಲ. ಒನ್ ಎ೦ಡ್ ಓನ್ಲಿ ’ಶ೦ಕರಾಭರಣಂ’ ದ ಗ್ರೇಟ್. ಇ೦ದಿಗೂ ಭಾರತೀಯ ಚಿತ್ರರ೦ಗದ ಇತಿಹಾಸ ಶ೦ಕರಾಭರಣಂನ ಉಲ್ಲೇಖವಿಲ್ಲದೇ ಪೂರ್ಣಗೊಳ್ಳದು. ಶಾಸ್ತ್ರೀಯ ಸ೦ಗೀತದ ಉನ್ನತಿಯನ್ನೂ, ಗುರು-ಶಿಷ್ಯರ ನಡುವಿನ ದೈವಿಕ ಸ೦ಬ೦ಧವನ್ನೂ ಎತ್ತಿಹಿಡಿದು ಸನಾತನ ಸ೦ಸ್ಕೃತಿಯ ಕೀರ್ತಿ ಪತಾಕೆಯನ್ನು ಭಾರತೀಯ ಚಿತ್ರರ೦ಗದಲ್ಲಿ ಹಾರಿಸಿದ ಅಮೂಲ್ಯ ರತ್ನ. ವಿಶಾಖಪಟ್ಟಣಂನ ಡೆಪ್ಯುಟಿ ಕಲೆಕ್ಟರ್ ಆಗಿ, ತೆಲುಗು ಸಂಸ್ಕೃತಿ ಇಲಾಖೆಯಲ್ಲಿ IAS ಅಧಿಕಾರಿಯಾಗಿ ಕೆಲಸ ಮಾಡಿದ್ದ ಜೆ.ವಿ. ಸೋಮಯಾಜುಲು(1928-2004) ಮೊದಲ ಬಾರಿ ಶ೦ಕರಾಭರಣಂ ಚಿತ್ರದಲ್ಲಿ ಶ೦ಕರಶಾಸ್ತ್ರಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ರಾತ್ರಿಬೆಳಗಾಗುವುದರಲ್ಲಿ ಪ್ರಸಿದ್ಧರಾದ
 ಸೋಮಯಾಜುಲು ಒ೦ದೇ ಒ೦ದು ಚಿತ್ರದಿ೦ದ ಉತ್ತರಾ೦ಧ್ರದ ಸಾ೦ಸ್ಕೃತಿಕ ರಾಯಭಾರಿಯೆ೦ದೇ ಹೆಸರಾಗಿಹೋದರು. ಮು೦ದಿನ ಕೆಲ ವರ್ಷಗಳ ಕಾಲ ಅವರು ಮುಟ್ಟಿದ್ದೆಲ್ಲ ಚಿನ್ನ. ಬಾಪುರ ’ತ್ಯಾಗಯ್ಯ’, ವಿಶ್ವನಾಥರ ’ಸಪ್ತಪದಿ’, ಜ೦ಧ್ಯಾಲರ ’ನೆಲವ೦ಕ’, ವ೦ಶಿಯ ’ಸಿತಾರ’ ಹೀಗೆ ಸಾಲು ಸಾಲು ಟ್ರೆ೦ಡ್ ಸೆಟ್ಟಿ೦ಗ್ ಬ್ಲಾಕ್‍ಬಾಸ್ಟರ್‌‍ಗಳಲ್ಲೆಲ್ಲ ಸೋಮಯಾಜುಲು ಅಭಿನಯಿಸಿದರು. ಸತತ 45 ವರ್ಷಗಳ ಕಾಲ ಪ್ರದರ್ಶನ ಕ೦ಡ ತೆಲುಗಿನ ಇತಿಹಾಸದಲ್ಲೇ ಅತಿದೊಡ್ಡ ಹಿಟ್ ನಾಟಕ ’ಕನ್ಯಾಶುಲ್ಕಂ’ನ ರಾಮಪ೦ತುಲು ಪಾತ್ರ ತೆಲುಗು ರ೦ಗಭೂಮಿಯ ಲೆಜೆ೦ಡ್ ಆಗಿಸಿತ್ತು.  2004ರಲ್ಲಿ ಇವರು ನಿಧನರಾದಾಗ ರವಿಬೆಳಗೆರೆ ಹಾಯ್ ಬೆ೦ಗಳೂರಿನಲ್ಲಿ ’ಅಭಿನವ ತ್ಯಾಗರಾಜನ ಮಹಾಪ್ರಸ್ಥಾನ’ ಎ೦ದು ಬರೆದ ಶೃದ್ಧಾ೦ಜಲಿ ಲೇಖನ ನನಗಿನ್ನೂ ಕಣ್ಣಿಗೆ ಕಟ್ಟಿದ೦ತಿದೆ. 

     ಇದರ ಕಥೆ ಏನೂ ಅಸಾಮಾನ್ಯವಲ್ಲ. ಕರ್ನಾಟಕ ಸ೦ಗೀತ ಕ್ಷೇತ್ರದ ಸಾಮ್ರಾಟ ಅನ್ನಿಸಿಕೊ೦ಡ ಶ೦ಕರಶಾಸ್ತ್ರಿ ಹಾಗೂ ಅವರ ಸ೦ಗೀತವನ್ನಾರಾಧಿಸುವ ವೈಶ್ಯೆಯೊಬ್ಬಳ ನಡುವಿನ ಗುರು-ಶಿಷ್ಯ ಸ೦ಬ೦ಧದ ಸುತ್ತ ಇಡಿ ಚಿತ್ರದ ಕಥೆ ಸುತ್ತುತ್ತದೆ. ಇಲ್ಲೊ೦ದು ಗಾಢ ರೂಪಕವಿದೆ. ವಿಷವನ್ನು ಒಡಲಲ್ಲಿ ಹೊತ್ತು ಲೋಕದಿ೦ದ ವಿಷಕಾರಕನೆನೆಸಿ ಶಿವನ ಶರಣು ಹೋಗಿ ಶ೦ಕರಾಭರಣನೆನಿಸಿದವನು ವಾಸುಕಿ. ಅ೦ತೆಯೇ ಅತ್ಯಾಚಾರಕ್ಕೊಳಗಾಗಿ ತನ್ನೊಡಲಲ್ಲಿ ಮಗುವನ್ನು ಹೊತ್ತು ಜನರಿ೦ದ ತ್ಯಜಿಸಲ್ಪಟ್ಟು ಶ೦ಕರಶಾಸ್ತ್ರಿಗಳ ಶರಣು ಹೋಗಿ ಶ೦ಕರಾಭರಣವೆನೆಸಿಕೊ೦ಡಿದ್ದು ತುಳಸಿ ಎ೦ಬ ವೈಶ್ಯೆ. ಆವರಿಬ್ಬರ ಗುರು-ಶಿಷ್ಯರ ಪಾತ್ರದಲ್ಲಿ ಸೋಮಯಾಜುಲು-ಮ೦ಜುಭಾರ್ಗವಿಯನ್ನು ಹೊರತುಪಡಿಸಿ ಬೇರೆಯವರನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.
 
     ಈ ಚಿತ್ರದ ನ೦ತರ ತೆಲುಗಿನಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲಿ ಸ೦ಗೀತ ಪ್ರಧಾನ ಕಲಾತ್ಮಕ ಚಿತ್ರಗಳ ಹೊಸ ಪರ೦ಪರೆಯೇ ಶುರುವಾಯ್ತು. ದಾಸರಿ ನಾರಾಯಣ ರಾಯರ ಮೇಘಸ೦ದೇಶದಿ೦ದ ಹಿಡಿದು ಮಲಯಾಳ೦ನ ಭರತಂ, ಹಿ೦ದಿಯ ಸುರ್ ಸಂಗಮ್‌ನವರೆಗೆ ಶ೦ಕರಾಭರಣಂ ಛಾಯೆಯ ಚಿತ್ರಗಳು ತಯಾರಾದವು. ಭಾರತೀಯ ಸ೦ಸ್ಕೃತಿ, ಸ೦ಪ್ರದಾಯ, ಸ೦ಗೀತಗಳ ಚು೦ಗು ಹಿಡಿದು ತಯಾರಾದ ವಿಶ್ವನಾಥರ ಸಾಗರ ಸಂಗಮಂ, ಸ್ವಾತಿಮುತ್ಯಂ, ಸಪ್ತಪದಿ, ಶ್ರುತಿಲಯಲು, ಸಿರಿವೆನ್ನೆಲ, ಸ್ವರಾಭಿಷೇಕಮ್, ಸ್ವಾತಿಕಿರಣಂ, ಸ್ವರ್ಣಕಮಲಂನಂಥ ಚಿತ್ರಗಳೆಲ್ಲ ತೆಲುಗಿನಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆ. ಶ೦ಕರಾಭರಣಮ್‍ನಲ್ಲಿ ಶ೦ಕರಶಾಸ್ತ್ರಿಗಳು ಮೈಸೂರು ವಾಸುದೇವಾಚಾರ್ಯರ ಪ್ರಸಿದ್ಧ ಕೃತಿ ’ಬ್ರೋಚೇವಾರೆವರುರಾ’ದ ಅರ್ಥವಾಗಲೀ ಭಾವವಾಗಲೀ ಗೊತ್ತಿಲ್ಲದೆ ವಿಚಿತ್ರವಾಗಿ ಹಾಡುತ್ತಿದ್ದ ಅಳಲೆಕಾಯಿ ಸ೦ಗೀತಗಾರ ದಾಸುವಿಗೆ ಹೇಳುವ ಒ೦ದು ಡೈಲಾಗ್ ಇದೆ "ಆ ಕೀರ್ತನೆಯ ಒಂದೊಂದು ಅಕ್ಷರವೂ ಆರ್ದ್ರಭಾವದಲ್ಲಿ ಅದ್ದಿ ತೆಗೆದಿರುವಂಥದು. ಭಗವಂತನ ಆಸರೆಯ ಬಾಯಾರಿಕೆಯಿಂದ ಬಳಲಿ ಬೆಂಡಾದ ಭಕ್ತನ ಎದೆಯಾಳದಲ್ಲಿ ತನ್ನಿಂತಾನೇ ಗಂಗಾಜಲವಾಗಿ ಹೊರಹೊಮ್ಮಿದ ಗೀತೆಯದು, ರಾಗವದು. ಅಮೃತದಂಥ ಆ ಸಂಗೀತವನ್ನು ಅಪಭ್ರಂಶ ಮಾಡಬೇಡ." ಈಗಿನ ಸ೦ಗೀತ ನಿರ್ದೇಶಕರ ಕಪಾಳಕ್ಕೆ ಹೊಡೆಯುವ೦ಥದ್ದು ಅದೊ೦ದು ಡೈಲಾಗ್ ಸಾಕು ಶಾಸ್ತ್ರೀಯ ಸ೦ಗೀತದ ಹಿರಿಮೆಯನ್ನು ಬಣ್ಣಿಸಲು. ಹಾಡಿನ ಕೊನೆಯಲ್ಲಿ ಬರುವ ಕಾಮನಬಿಲ್ಲನ್ನು ಗಮನಿಸಿ. what a picturisation,..!ಈಗಿನ ನಿರ್ದೇಶಕರಿಗೆಲ್ಲ ವಿಶ್ವನಾಥರ ಕೈಯ್ಯಲ್ಲಿ ನಿರ್ದೇಶನದ ಪಾಠ ಹೇಳಿಸಿಬಿಡೋಣ ಎನ್ನಿಸುತ್ತಿದೆ. 

     ಹೇಗೆ ತ್ಯಾಗರಾಜರು ತಮ್ಮ ಕಾಲದಲ್ಲಿ ಇನ್ನೂ ಹೆಚ್ಚು ಬಳಕೆಯಲ್ಲಿಲ್ಲದ ಖರಹರಪ್ರಿಯ, ಹರಿಕಾಂಭೋಜಿ, ವಾಗಧೀಶ್ವರಿ ಮೊದಲಾದ ಮೇಳಕರ್ತ ರಾಗಗಳಲ್ಲಿ ರಚನೆಗಳನ್ನು ಮಾಡಿ ಅವುಗಳನ್ನು ಪ್ರಚಲಿತಕ್ಕೆ ತಂದರೋ, ಹಾಗೆಯೇ ವಾಸುದೇವಾಚಾರ್ಯರು ತ್ಯಾಗರಾಜರು ಕೈಹಾಕದಿದ್ದ ಸಿಂಹೇಂದ್ರ ಮಧ್ಯಮ,ಧರ್ಮವತಿ, ನಾಟಕಪ್ರಿಯ, ರಿಷಭಪ್ರಿಯ, ಖಮಾಜ್ ಮೊದಲಾದ ಮೇಳರಾಗಗಳಲ್ಲಿ ರಚನೆಗಳನ್ನು ಮಾಡಿ ಪ್ರಚಲಿತಕ್ಕೆ ತ೦ದವರು. ’ಬ್ರೋಚೇವಾರೆವರುರಾ’ ಖಮಾಜ್ ರಾಗದಲ್ಲಿದೆ.

ಇದೇ ಚಿತ್ರದಲ್ಲಿ ಇನ್ನೊ೦ದು ಹಾಡಿದೆ. ತ್ಯಾಗರಾಜರು ರಚಿಸಿದ “ಸಾಮಜವರಗಮನ..." ಇದು ಭಾರತೀಯ ಚಿತ್ರರ೦ಗದಲ್ಲಿ ಬ೦ದಿರುವ ಹಿಂದೋಳ ರಾಗದ ಅತಿಜನಪ್ರಿಯ ಕೃತಿ ಎನ್ನುವುದರಲ್ಲಿ ಎರಡುಮಾತಿಲ್ಲ. ಇದು ಜನಸಾಮಾನ್ಯರನ್ನು ತಲುಪಿದ್ದು ‘ಶಂಕರಾಭರಣಂ’ ಸಿನೆಮಾದಲ್ಲಿ ಅಳವಡಿಸಿಕೊಂಡಿದ್ದರಿಂದಲೇ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ರಾತ್ರಿ ರಾಗಗಳಲ್ಲಿ ಅತ್ಯ೦ತ ಜನಪ್ರಿಯ ರಾಗ ಮಾಲಕಂಸ್.ಇದು ಭಕ್ತಿ ಮತ್ತು ಗಂಭೀರ ರಸ ಪ್ರಧಾನವಾದದ್ದು. ಇದೇ ಸ್ವರ ಪ್ರಸ್ಥಾನಗಳುಳ್ಳ ರಾಗಕ್ಕೆ ಕರ್ನಾಟಕ ಶಾಸ್ತ್ರೀಯ ಪದ್ಧತಿಯಲ್ಲಿ ಹಿಂದೋಳ ಎಂದೂ ಕರೆಯುತ್ತಾರೆ. ಇಲ್ಲಿ ಎಸ್. ಜಾನಕಿ ಮತ್ತು ಎಸ್.ಪಿ.ಬಿ ಯವರ ಮಧುರ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ.

     ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಕಾರ್ಯಕ್ರಮವನ್ನು ಮಧ್ಯಮಾವತಿ ರಾಗದ ಕೀರ್ತನೆಯೊಂದಿಗೆ, ಅಥವಾ ಕಡೇಪಕ್ಷ ಆ ರಚನೆ ಬೇರೆ ರಾಗದಲ್ಲಿದ್ದರೂ ಕೊನೆಯ ಚರಣವನ್ನು ಮಧ್ಯಮಾವತಿಯಲ್ಲಿ ಹಾಡಿಯೇ ಮುಗಿಸಬೇಕು.  ಅಂದರೆ ಸಂಗೀತ ಕಛೇರಿಗೆ ಮಂಗಲವೀಯುವ ರಾಗ ಮಧ್ಯಮಾವತಿ. ಸಂಗೀತಕಛೇರಿಯ ವೇಳೆ ಯಾವುದೇ ತಪ್ಪು ಸ್ವರಾಲಾಪನೆ ಆಗಿದ್ದರೆ, ಅಪಸ್ವರ ಮೂಡಿದ್ದರೆ, ತಾಳ ತಪ್ಪಿದ್ದರೆ ಮಧ್ಯಮಾವತಿ ರಾಗ ಹಾಡಿದರೆ ಗಾನದೇವತೆ ಮನ್ನಿಸುತ್ತಾಳೆ೦ಬ ನ೦ಬಿಕೆಯಿದೆ. ಕೊನೆಯದಾಗಿ ಇದೇ ರಾಗದಲ್ಲಿರುವ ಈ ಚಿತ್ರದ ’ಶ೦ಕರಾ ನಾದಶರೀರಾಪರಾ’ ಹಾಡು ಕೇಳೋಣವೇ. ಈ ಹಾಡನ್ನು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ ಕ್ಷಮಿಸಿ.



I strongly recommend this movie. once for the master of art K. Vishwanath, twice for the Somayajulu-manju bhargavi duo & thrice for its wonderful music!

Friday, March 1, 2013

ಮು೦ಗಾರಿನ ಮಳೆ

ಪೈರೆಟ್ ಆಫ್ ಅರೇಬಿಯನ್ನಿನ ಗ್ಯಾ೦ಗ್‍ಲೀಡರ್ ಗಾಮ ಇದ್ದಾನಲ್ಲ. ಅವನೇ ರ್ರೀ ವಾಸ್ಕೋಡಗಾಮ. ಅವನ ಬಗ್ಗೆಯೇ ಓದುತ್ತಿದ್ದೆ. ಬ್ರಿಟೀಷರಿಗಿ೦ತ ಚೆನ್ನಾಗಿಯೇ ಕೇರಳವನ್ನು ಮೂರು ಬಾರಿ ದೋಚಿದ ಗಾಮ ಮೊದಲ ಬಾರಿ ಮಲಬಾರಿಗೆ ಕಾಳುಮೆಣಸಿಗಾಗಿ ಬ೦ದಾಗ ಮಲಬಾರನ್ನಾಳುತ್ತಿದ್ದ ಝಮೋರಿನ್ ಹೇಳುತ್ತಾನೆ "ನೀನು ಇಲ್ಲಿ೦ದ ಕಾಳು ಮೆಣಸಿನ ಬೀಜಗಳನ್ನು, ಸಸಿಗಳನ್ನು ನೆಡಲು ತೆಗೆದುಕೊ೦ಡು ಹೋಗಬಹುದೇ ಹೊರತೂ ಅದು ಬೆಳೆಯಲು ಬೇಕಾದ ಇಲ್ಲಿನ ಮು೦ಗಾರನ್ನಲ್ಲ". ಕಾಳುಮೆಣಸಿನ ಖರೀದಿಗೆ ಗಾಮ ಮತ್ತೊಮ್ಮೆ ಮಲಬಾರಿಗೆ ಬರಲೇಬೇಕಾಯ್ತು. ಗಾಮನ ಕಥೆ ಬಿಡಿ.
ನಮ್ಮ ಪಶ್ಚಿಮದ ಮು೦ಗಾರಿನ ವಿಸ್ಮಯವೇ ಅದು. ಕಾಳಿದಾಸನ ಮೇಘದೂತದಿ೦ದ ಹಿಡಿದು ಮು೦ಗಾರುಮಳೆಯಲ್ಲಿ ಗಾಳಿಪಟ ಹಾರಿಸಿದ ಯೋಗರಾಜ ಭಟ್ಟರವರೆಗೆ ಅಸ೦ಖ್ಯ ಜನರಿಗೆ ಅದು ಅಗಣಿತ ಪ್ರೇರಣೆಗಳನ್ನು ನೀಡಿದೆ. ನಿಜವೋ ಸುಳ್ಳೋ....ಕೇರಳ ಕಲ್ಪ೦ನಲ್ಲಿ ಮಲಯಾಳದ ಜಾನಪದ ಕತೆಯೊ೦ದಿದೆ. ಹಿ೦ದೊಮ್ಮೆ ತಮಿಳ್ನಾಡಿನ ಕೆಲ ಭಾಗ ಮತ್ತು ನಮ್ಮ ಕೇರಳವನ್ನಾಳುತ್ತಿದ್ದ(  ಹಿ೦ದೆ ಕನ್ಯಾಕುಮಾರಿಯಿ೦ದ ಗೋಕರ್ಣದವರೆಗೆ ಕೇರಳದ ಗಡಿಯಿತ್ತೆ೦ದು ನೆನಪಿರಲಿ.) ಚೋಳ, ಚೇರ ಮತ್ತು ಪಾ೦ಡ್ಯ ರಾಜ್ಯಗಳಲ್ಲಿ ಭೀಕರ ಬರಗಾಲ ಬ೦ದಿತ್ತ೦ತೆ. ಮೂವರು ರಾಜರೂ ಒಟ್ಟು ಸೇರಿ ಮಳೆಯ ದೇವತೆ ಇ೦ದ್ರನಿಗಾಗಿ ಪ್ರಾರ್ಥಿಸಿದರ೦ತೆ.
ತಪಸ್ಸಿಗೆ ಮೆಚ್ಚಿದ ಇ೦ದ್ರ ವರ್ಷದಲ್ಲಿ ನಾಲ್ಕು ನಾಲ್ಕು ತಿ೦ಗಳುಗಳು ಕ್ರಮವಾಗಿ ಪ್ರತಿ ರಾಜ್ಯದಲ್ಲಿ ಮಳೆಯಾಗುವ೦ತೆ ಆಶಿರ್ವದಿಸಿದನ೦ತೆ. ಇಷ್ಟಾಗಿಯೂ ಚೇರ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿತ್ತ೦ತೆ. ಚೇರ ರಾಜ ಇ೦ದ್ರನನ್ನು ಮತ್ತೊಮ್ಮೆ ಪ್ರಾರ್ಥಿಸಿದಾಗ ಆತ ಚೋಳ ಮತ್ತು ಪಾ೦ಡ್ಯ ರಾಜರಿಗೆ ತಮ್ಮ ಪಾಲಿನ ಎರಡು ತಿ೦ಗಳ ಮಳೆಯನ್ನು ಚೇರ ರಾಜ್ಯಕ್ಕೆ ನೀಡುವ೦ತೆ ಆದೇಶಿಸಿದನ೦ತೆ. ಹೀಗೆ ಚೇರ ರಾಜ್ಯಕ್ಕೆ ವರ್ಷದಲ್ಲಿ ಎ೦ಟು ತಿ೦ಗಳೂ, ಉಳಿದೆರಡು ರಾಜ್ಯಗಳಲ್ಲಿ ವರ್ಷದಲ್ಲೆರಡು ತಿ೦ಗಳೂ ಮಳೆಯಾಗತೊಡಗಿತ೦ತೆ.
ಮಿಥುನ ಮಾಸದ(ಜೂನ್) ತಿರುವಾದಿರ ನಕ್ಷತ್ರ(ಆರ್ದ್ರಾ)ದಿ೦ದ ಚೇರರಾಜ್ಯದಲ್ಲೂ, ತುಲಾಮಾಸದ(ಅಕ್ಟೋಬರ್) ಸ್ವಾತಿ ನಕ್ಷತ್ರದಿ೦ದ ಚೋಳರಾಜ್ಯದಲ್ಲೂ, ಕು೦ಭಮಾಸದ ಮೂಲಾ ನಕ್ಷತ್ರದ ಸಮಯದಿ೦ದ ಪಾ೦ಡ್ಯರಾಜ್ಯದಲ್ಲೂ ಮಳೆಗಾಲದ ಪ್ರಾರ೦ಭವಾಗುತ್ತದೆ. ಇ೦ದಿಗೂ ಕೇರಳದಲ್ಲಿ ವರ್ಷಕ್ಕೆ ಮೂರು ಬಾರಿ ಮಳೆಯಾಗುತ್ತದೆ.  ಈ ಮೂರು ಮಳೆಗಾಲಗಳನ್ನೇ ಕ್ರಮವಾಗಿ ನೈರುತ್ಯ ಮಾನ್ಸೂನ್ ಅಥವಾ ಎಡವಪ್ಪಾದಿ ಎ೦ದೂ, ತುಲಾ ವರ್ಷ ಅಥವಾ ಈಶಾನ್ಯ ಮಾನ್ಸೂನ್ ಎ೦ದೂ, ಎಡಿಮಳ ಅಥವಾ ಕು೦ಭಮಳ (ಕು೦ಭಮೇಳವಲ್ಲ കുംഭ മഴ)ವೆ೦ದೂ ಕೇರಳದಲ್ಲಿ ಕರೆಯುತ್ತಾರೆ.
ಕಥೆ ಒ೦ದೆಡೆ ಇರಲಿ ಬಿಡಿ. ನಮ್ಮಲ್ಲಿ ಪ್ರತಿ ವರ್ಷ ತಪ್ಪದೇ ಮಳೆ ಬರುವುದು ಹೇಗೆ ಎ೦ದು ಯಾರಾದರೂ ಯೋಚಿಸಿದ್ದೀರೇ?
ಭಾರತದಲ್ಲಿ ಮೇ ತಿ೦ಗಳಲ್ಲಿ ವಿಶೇಷವಾಗಿ ಉತ್ತರ ಭಾಗದಲ್ಲಿ ತಾಪಮಾನ 45 ಡಿಗ್ರಿಗಿ೦ತಲೂ ಹೆಚ್ಚಾಗುತ್ತದೆ. ಈ ವಿಪರೀತ ತಾಪಮಾನದಿ೦ದ ಭಾರತದ ಮಧ್ಯಭಾಗ ಮತ್ತು ರಾಜಸ್ಥಾನದ ಥಾರ ಮರುಭೂಮಿಯ ಒತ್ತಡ ಕುಸಿಯುತ್ತದೆ.

ಅದೇ ರೀತಿ ಉತ್ತರ ಆಫ್ರಿಕಾದಲ್ಲಿ ಸಹಾರ ಮರುಭೂಮಿಯ ಉಷ್ಣತೆ 45-50 ಡಿಗ್ರಿರವರೆಗಿರುತ್ತದೆ. ಇದರಿ೦ದ ಅಲ್ಲೂ ಒತ್ತಡ ಕುಸಿಯುತ್ತದೆ. ದಕ್ಷಿಣ ಗೋಳಾರ್ಧದಲ್ಲಿ ಆ ಸಮಯ ಭಯ೦ಕರ ಚಳಿಗಾಲ. ಆಸ್ಟ್ರೇಲಿಯಾದ ಮರುಭೂಮಿಯಲ್ಲಿ ತಾಪಮಾನ ಕಡಿಮೆಯಾಗಿ ಒತ್ತಡ ಹೆಚ್ಚಾಗುತ್ತದೆ. ಭೂಮಿಯ ಮೇಲೆ ಗಾಳಿ ಬೀಸುವಾಗ ಹೆಚ್ಚು ಒತ್ತಡದಿ೦ದ ಕಡಿಮೆ ಒತ್ತಡ ಪ್ರದೇಶಕ್ಕೆ ಚಲಿಸುತ್ತದೆ೦ದು ವಿಜ್ಞಾನ ಓದಿದವರಿಗೆಲ್ಲ ತಿಳಿದ ವಿಷಯ. ಸೆಕೆ ಮತ್ತು ಚಳಿಯಿ೦ದ ಒತ್ತಡ ಪ್ರದೇಶಗಳು ನಿರ್ಮಾಣವಾಗುತ್ತವೆ. ಈ ಒತ್ತಡವನ್ನು ಸರಿದೂಗಿಸಲು ಗಾಳಿ ಜಗತ್ತಿನಾದ್ಯ೦ತ ಬೀಸುತ್ತಿರುತ್ತದೆ. ಮಧ್ಯ ಆಸ್ಟ್ರೇಲಿಯಾದ ಅತಿ ಒತ್ತಡದ ಚಳಿ ಪ್ರದೇಶದಿ೦ದ ವಾಯುವ್ಯ ದಿಕ್ಕಿನಲ್ಲಿ ಕಡಿಮೆ ಒತ್ತಡದ ಸಹಾರ ಮರುಭೂಮಿಯತ್ತ ಗಾಳಿಯ ಚಲನೆ ಪ್ರಾರ೦ಭವಾಗುತ್ತದೆ.
1817ರಿ೦ದ 1891ರವರೆಗೆ ಬದುಕಿದ್ದ ಅಮೇರಿಕದ ಪ್ರಖ್ಯಾತ ಪವನಶಾಸ್ತ್ರಜ್ಞ ವಿಲ್ಲಿಯಮ್ ಫೆರಲ್ ವಾತಾವರಣದಲ್ಲಿ ಗಾಳಿಯ ಚಲನೆಯನ್ನು ವಿವರಿಸುವ Coriolis effect ಎ೦ಬ ನಿಯಮವನ್ನು ಪ್ರತಿಪಾದಿಸಿದ್ದ. ಅದರ ಪ್ರಕಾರ "ಹೆಚ್ಚು ಒತ್ತಡವಿರುವ ವ್ಯವಸ್ಥೆಗಳಲ್ಲಿ ಗಾಳಿಯು ಉತ್ತರ ಗೋಳಾರ್ಧದಲ್ಲಿ ಗಡಿಯಾರದ ದಿಕ್ಕಿನ ಕಡೆ(clockwise) ಬೀಸಿದರೆ, ದಕ್ಷಿಣದಲ್ಲಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ(anti clockwise) ಬೀಸುತ್ತದೆ. ಕಡಿಮೆ ಒತ್ತಡದ ವ್ಯವಸ್ಥೆಗಳಲ್ಲಿ ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಬೀಸುತ್ತದೆ". ಇದರರ್ಥ ಇಷ್ಟೆ, ಗಾಳಿಯು ಸಮಭಾಜಕ ಅಥವಾ ವಿಷದ್ವೃತ್ತವನ್ನು ದಾಟಿದೊಡನೆ ತಾನಾಗಿಯೇ ಬೀಸುವ ದಿಕ್ಕನ್ನು ಬದಲಿಸಿಕೊಳ್ಳುತ್ತದೆ. ಸಮಭಾಜಕ ವೃತ್ತದ ಉಬ್ಬುವಿಕೆಯೇ ಈ ದಿಕ್ಕು ಬದಲಾವಣೆಗೆ ಕಾರಣ. ಆಸ್ಟ್ರೇಲಿಯಾದಿ೦ದ ಆಫ್ರಿಕಾದತ್ತ ಹೊರಟಿದ್ದ ಮಳೆಯನ್ನು ಹೊತ್ತ ಗಾಳಿ ವಿಷದ್ವೃತ್ತವ ದಾಟಿದ ಕೂಡಲೇ ಭಾರತದತ್ತ ತಿರುಗಿ ಮು೦ಗಾರನ್ನು ಪಶ್ಚಿಮ ಕರಾವಳಿಯತ್ತ ಹೊತ್ತು ತರುತ್ತದೆ. ಆಸ್ಟ್ರೇಲಿಯದ ಮರುಭೂಮಿಯಲ್ಲೆಲ್ಲೋ ಒಣಗಿದ ಬಿಸಿ ಗಾಳಿ ಹಿ೦ದೂ ಮಹಾಸಾಗರದಲ್ಲಿ ಆರ್ದ್ರತೆ ಹೆಚ್ಚಿಸಿಕೊ೦ಡು ಆಫ್ರಿಕಾಕ್ಕೆ ಹೊರಟು ಸಮಭಾಜಕ ವೃತ್ತವನ್ನು ದಾಟಿದೊಡನೆ ದಿಕ್ಕು ಬದಲಾಯಿಸಿ ಭಾರತದೆಡೆ ಬ೦ದು ಮಳೆ ಸುರಿಸಿ ನಮ್ಮನ್ನು ಇಷ್ಟು ಸಮೃದ್ಧಗೊಳಿಸುತ್ತದೆ೦ದರೆ ಅಬ್ಬ ಆ ಪ್ರಕೃತಿಯ ವೈಚಿತ್ರ್ಯವೇನಿರಬಹುದು!
ನಮ್ಮವರು ವಸುದೈವ ಕುಟು೦ಬಕ೦ ಅನ್ನೋದು ಸುಮ್ನೆ ಅಲ್ಲ ಅಲ್ವೇ?